Sunday 27 September 2020

ಶರದ ಋತುವಿನ ಶನಿವಾರ

ಶುಕ್ರವಾರವಿಡೀ ಬಿಟ್ಟು ಬಿಡದೆ ಸುರಿದಿದ್ದ ಮಳೆ ವಾರಾಂತ್ಯದಲ್ಲಿ  ಸ್ವಲ್ಪ ಬಿಡುವು ನೀಡಿತ್ತು. ಎರಡು ವಾರದಿಂದಲೇ ಸಣ್ಣ ಚಾರಣವೊಂದನ್ನು ಮಾಡೋಣವೆಂದು ತಯಾರಿ ಮಾಡಿಕೊಳ್ಳುತ್ತಿದ್ದ ನಮಗೆ  ಮಳೆರಾಯನ ಗೈರುಹಾಜರಿ ಹುರುಪನ್ನೇ ನೀಡಿತ್ತು. ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ, ಮುಂಬರಲಿರುವ ಚಳಿಗಾಲದ ಆಗಮನವನ್ನು ಸ್ವಾಗತಿಸಲೋ ಎಂಬಂತೆ ಎಲ್ಲ ಗಿಡಮರಗಳು ಬಣ್ಣ ಬಣ್ಣದ ಎಲೆಗಳನ್ನು ಹೊತ್ತು ನಿಂತಿರುತ್ತವೆ. ಆ ಬಣ್ಣಗಳ ಜಾತ್ರೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಕಾಡು ದಾರಿಯಲ್ಲಿ ನಡೆಯುತ್ತಾ, ಆ ಹಸಿರ ಸಿರಿಯ ನಡುವೆ ಕಣ್ಣರಳಿಸುತ್ತಾ, ಗೆಳೆಯರ ಮಾತುಗಳಿಗೆ ಕಿವಿಯಾಗುತ್ತಾ, ಎಲ್ಲೋ ಕುಳಿತು ತಣ್ಣಗೆ ಬೀಸೋ ಗಾಳಿಯ ನಡುವೆ ಕಾಫಿ ಕುಡಿಯುತ್ತಾ ಕಳೆಯುವ ಸಮಯವಿದೆಯಲ್ಲ ಅದಂತೂ ಸ್ವರ್ಗ ಸದೃಶ. ಇಂತಹ ಅನುಭವಕ್ಕೆ ಸಾಕ್ಷಿಯಾಗಲೆಂದೇ  ಶ್ರೀಗಂಧ ಕನ್ನಡ ಬಳಗದ ವತಿಯಿಂದ ಡೆಲ್ಶ್ಯುನ್ ಸರೋವರದ ಸುತ್ತ ಚಾರಣ ಮಾಡೋಣವೆಂದು ನಿರ್ಧರಿಸಿದ್ದೆವು. 

ಪಚ್ಚೆ ಪರ್ಣಶೋಭಿತ!!

ಶನಿವಾರ ( ೨೬-೦೯-೨೦೨೦) ಮಧ್ಯಾಹ್ನ ೧:೩೦ ರ  ಸುಮಾರಿಗೆ ಹದಿನೈದು ಜನರ ನಮ್ಮ ಕನ್ನಡಿಗರ ಗುಂಪೊಂದು ಸ್ಪೊನ್ ತೊರ್ಯೆತ್ ನಿಂದ ಹೊರಟು ಅನಾಲಿಸ್ ವಾಗೇನ್ ತಲುಪುವ ಕಾಡು ದಾರಿಯಲ್ಲಿದ್ದೆವು. ಕೆಲ ದಿನಗಳಿಂದ ಆಗಾಗ ಸುರಿಯುತ್ತಿದ್ದ ಮಳೆ ದಾರಿಯಲ್ಲೆಲ್ಲ ಹಸಿರ ಹರಡಿತ್ತು. ನೀರಿನ ತೊರಗಳು ಜುಳುಜುಳು ನಿನಾದವನ್ನು ನುಡಿಸುತ್ತಾ ಹರಿಯುತ್ತಿದ್ದವು. ಶರದೃತುರಾಜ ಆಗಲೇ ಬಂದಾಗಿದೆ ಎಂಬುದನ್ನು ಕೂಗಿ ಹೇಳುವಂತೆ ಎಲೆಗಳೆಲ್ಲ ಹಳದಿ, ಕೇಸರಿ ಬಣ್ಣಕ್ಕೆ ತಿರುಗಿದ್ದವು. ಕೆಂಪು, ಅರಿಶಿಣ, ಕೆನೆ ಹಾಲು ಬಣ್ಣದ ಅಣಬೆಗಳು ಅಲ್ಲಲ್ಲಿ ತಲೆಯೆತ್ತಿ ನಿಂತಿದ್ದವು. ಸಣ್ಣ ಸಣ್ಣ ಕೆರೆಗಳಲ್ಲಿ ನೀರ ಹಕ್ಕಿಗಳು ಈಜಾಡುತ್ತಿದ್ದವು. 

ಹೀಗಿತ್ತು ನಾವು ನಡೆದ ದಾರಿ...


ವರ್ಣವೈಭವ !

ನೋಡಲು ವರ್ಣರಂಜಿತ ವಾಗಿದ್ದರೂ ವಿಷಪೂರಿತ ಅಣಬೆ 

ಮುಂದೆ  ಗಾಳಿಯ ಹೊಡೆತಕ್ಕೆ ಮರವೊಂದು  ಬುಡ ಮೇಲಾಗಿ ಬಿದ್ದಿತ್ತು. ಅದರ ಪಕ್ಕದಲ್ಲಿ ನಿಂತು ಎಲ್ಲರೂ ಫೋಟೋ ತೆಗೆಸಿಕೊಂಡೆವು. ದಾರಿಯಲ್ಲಿ ಸೈಕಲ್ ಸವಾರರು, ತಮ್ಮ ನಾಯಿಗಳೊಂದಿಗೆ ವಿಹಾರಕ್ಕೆ ಬಂದವರು, ಚಿಕ್ಕ ಮಕ್ಕಳನ್ನು ಕರೆತಂದ ತಂದೆ ತಾಯಿಗಳು, ಬೆವರಿಳಿಸುತ್ತಾ, ಏದುಸಿರು ಬಿಡುತ್ತಾ ಓಡುತ್ತಿದ್ದ ಓಟಗಾರರು ಎದುರಾದರು. ನಾವು ಅವರನ್ನೆಲ್ಲ ದಾಟಿಕೊಂಡು ನಿಧಾನವಾಗಿ ಲಿಲ್ಲಾ ಡೆಲ್ಶ್ಯುನ್  ಸರೋವರವನ್ನು ತಲುಪಿದೆವು. ಆ ತಿಳಿನೀರ ಕೆರೆಯ ದಡದಲ್ಲಿ ಕುಳಿತು ಚಂದನ್ ತಂದಿದ್ದ ಆಪಲ್ ಕೇಕ್ ಅನ್ನು ಬಾಯಿ ಚಪ್ಪರಿಸಿಕೊಂಡು ತಿಂದೆವು. ಆ ನೀರವ ವಾತಾವರಣದಲ್ಲಿ ಅರ್ಪಿತಾಳ ಸೊಗಸಾದ ಗಾಯನ ಕಾಫಿಗೆ ಬೆರೆಸಿದ ಸಕ್ಕರೆಯಷ್ಟೇ ಹಿತವಾಗಿತ್ತು. ದೂರದಲ್ಲೆಲ್ಲೋ ಹಾಯಿದೋಣಿಯ ಮೇಲೆ ಕುಳಿತಿದ್ದವರನ್ನು ಕಂಡ ನನ್ನ ಮನ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎಂಬ ಹಾಡನ್ನು ಗುನುಗಿತ್ತು.

ನೆಲಕ್ಕಚ್ಚಿದ ಮರದ ಎದುರು ನಾವು!

ಹೊಟ್ಟೆ ಪಾಡು -ಹಾಡು

ಸಂಜೆ ಸಮೀಪಿಸುತ್ತಿತ್ತು. ನಾವು ನಮ್ಮ ಹೊಟ್ಟೆ ತುಂಬಿಸಿಕೊಂಡು ನಿಧಾನವಾಗಿ ಚಾರಣದ ಕೊನೆಯ ಹಂತವನ್ನು ಕ್ರಮಿಸಿದೆವು. ಕೊನೆಯಲ್ಲಿ ಎಲ್ಲರೂ ಒಂದು ಸುಂದರ ಸಂಜೆಯನ್ನು ಜೊತೆಯಾಗಿ ಕಳೆದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಇಂತಹ ಯೋಜನೆಗಳಿಗೆ ಮುಂದೆಯೂ ಜೊತೆಯಾಗುವ ಇಚ್ಛೆ ಹಲವರಿಗಿತ್ತು. ಕೊನೆಯಬಾರಿ ನಮ್ಮ ಗುಂಪಿನ ಛಾಯಾಚಿತ್ರವೊಂದನ್ನು ತೆಗೆದುಕೊಂಡು ಮನೆಯ ದಾರಿ ಹಿಡಿದೆವು. ಶನಿವಾರದ ಅಪರಾಹ್ನವೊಂದನ್ನು ಖುಷಿ ಖುಷಿಯಾಗಿ ಕಳೆದ ಸಾರ್ಥಕತೆಯ ಭಾವ ನನ್ನ ಮನ ತುಂಬಿತ್ತು.