ಗೆಳೆಯಾ ,
ಕಾಣದಷ್ಟು ದೂರದಲ್ಲಿರುವ, ಕರೆದರೂ ಬಾರದ,ಕಾಯುತ್ತಿದ್ದರೂ ಕನಿಕರಿಸದ ನಿನಗೆ..
ಕಾಡುತ್ತಿದೆ ನಿನ್ನ ನೆನಪು.ಮಳೆಗಾಲ ಪ್ರಾರಂಭವಾಗಿದೆ.ನೆನೆಯಲು ಆಸೆಯಾದರೂ ನೀನಿಲ್ಲವೆಂದು ಸುಮ್ಮನಾಗಿದ್ದೇನೆ. ಇಂದು ಬರುವೆ,ನಾಳೆ ಬರುವೆ ಎಂದು ನೀನು ನಡೆದು ಹೋದ ದಾರಿಯನ್ನೇ ನೋಡುತ್ತಿದ್ದೇನೆ. ಆದರೆ ಅದರ ಸೂಚನೆಯೇ ಕಾಣುತ್ತಿಲ್ಲವಲ್ಲ ಗೆಳೆಯ.!ಸೂರ್ಯ ದಿನಕ್ಕೊಮ್ಮೆ ಬರುವ.ಪೌರ್ಣಮಿ ತಿಂಗಳಿಗೊಮ್ಮೆ. ಸ್ವಾತಿ ಮಳೆ ವರ್ಷಕ್ಕೊಮ್ಮೆ. ಆದರೆ ನೀನು ವರ್ಷವೇ ಕಳೆದರೂ ಬರಲಿಲ್ಲ...
ನೀನಿಲ್ಲದೇ ನನಗೇನಿದೆ ಅನ್ನೋ ಹಾಡು ನೆನಪಾಗುತ್ತದೆ. ಕೇಳಲು ಮತ್ತೆ ನೀನಿಲ್ಲ ಇಲ್ಲಿ.ನಿನ್ನೊಂದಿಗೆ ಕಳೆದ ಗಳಿಗೆಗಳ ನೆನಪುಗಳನ್ನು ಚಿತ್ರಗಳಾಗಿ ಮೂಡಿಸಿ ಬಣ್ಣಗಳಿಂದ ನವೀಕರಿಸುವಾಸೆ. ಆದರೆ ಅಂತಹ ಗಳಿಗೆಯೊಂದೂ ನೆನಪಾಗುತ್ತಿಲ್ಲ. ಜೊತೆಗೆ ತೆಗೆದ ಒಂದು ಭಾವಚಿತ್ರವೂ ಇಲ್ಲ, ಪುಸ್ತಕದೊಳಗೆ ಅಡಗಿಸೋಣವೆಂದರೆ. ಕೈ ಹಿಡಿದು ನಡೆದ ಮಧುರ ಅನುಭೂತಿಯೂ ಇಲ್ಲ ಸ್ಮರಿಸೋಣವೆಂದರೆ.whatsapp ಸ್ಟೇಟಸ್ ಬದಲಾಯಿಸಿದ್ದೇನೆ.ನಿನಗೋ ಅದು ಕಾಣದು.. ಒಂಟಿಯೆಂಬ ಭಾವನೆ ಬಹಳವಾಗಿ ಕಾಡುತ್ತದೆ. ಒಮ್ಮೊಮ್ಮೆ ನೀನು ನನ್ನ ಕಲ್ಪನೆಯೇನೋ ಎಂದೆನಿಸುತ್ತದೆ.
ಆದರೇನು..!! ನಿನ್ನ ನವಿರಾದ ನೆನಪುಗಳಿವೆ. ನೀನೆಷ್ಟು ನೆನಪಾಗುವೆ ಎಂದು ಗೊತ್ತೇ ನಿನಗೆ.? ಬಿರಿದ ದುಂಡು ಮಲ್ಲಿಗೆ ಮುಡಿಯೇರಿ ಸೂಸಿದ ಸುವಾಸನೆಯಲ್ಲಿ ನಿನ್ನ ನೆನಪಿತ್ತು. ಮಳೆಗಾಲದ ಸಾಯಂಕಾಲದಲ್ಲಿ ಕೈಯಲ್ಲಿ ಹಿಡಿದು ಕುಳಿತ coffee ಯ ಘಮದಲ್ಲಿ ನಿನ್ನ ನೆನಪಿತ್ತು. ದೂರದಲ್ಲೆಲ್ಲೋ ಕಾಣುವ ನೀಲಿ ಬೆಟ್ಟ, ಅದರ ನೆತ್ತಿಯಲ್ಲಿನ ಪುಟ್ಟ ದೇವಸ್ಥಾನ ನಿನ್ನ ನೆನಪು ತಂದಿತ್ತು. ಒಬ್ಬಳೇ ಕುಳಿತಾಗ ಪಕ್ಕದಲ್ಲಿದ್ದ ಖಾಲಿ ಜಾಗವೂ ನಿನ್ನ ನೆನಪನ್ನೇ ಹೊತ್ತು ಬಂದಿತ್ತು. ಕಾದ ನೆಲದ ಮೇಲೆ ಬಿದ್ದ ಹನಿ ತಂದ ಮೂಗರಳಿಸುವ ಪರಿಮಳದಲ್ಲಿ ಕೂಡ ಇದ್ದದ್ದು ನಿನ್ನದೇ ನೆನಪು ಗೊತ್ತೇ ಗೆಳೆಯ.ಎಷ್ಟೊಂದು ನೆನಪುಗಳು. ಅವುಗಳನ್ನೆಲ್ಲ ನನ್ನ ದಿನಚರಿಯ ಪುಟ ಪುಟ ಗಳಲ್ಲಿ ಬರೆದಿಡುತ್ತಿದ್ದೇನೆ.ನೀನು ಮರಳಿ ಬಂದ ದಿನ ನಿನ್ನ ಕೈಗಿರಿಸುತ್ತೇನೆ ಅದನ್ನು..
ನೀನಿರುವೆಯೆಂದು ನೆನಪಿಸಲು ನೀನಿತ್ತ ಹಸಿರು ಹರಳಿನ ಕಿವಿಯೋಲೆಯಿದೆ. ತಿಂದು ಮುಗಿಸಿದ chocolate ನ wrapper ಇದೆ. ನೀನು ಬಿಡಿಸಿ ಕಳಿಸಿದ ನನ್ನ ಚಿತ್ರವಿದೆ.ಅರ್ಥವಿಲ್ಲದೆ ಆಗುವ ಜಗಳಗಳಲ್ಲಿ ಅಸಹಾಯಕತೆಯಿದೆ.ಬರುವ ಕಣ್ಣೀರನ್ನು ಒರೆಸಲು ಮಾತ್ರ ನೀನಿಲ್ಲ.ಆಗ ನಿಜವಾಗಿಯೂ ಅನಿಸುತ್ತದೆ,ಯಾವುದಿದ್ದರೂ ನೀನಿಲ್ಲವಲ್ಲ..!ನೀನಿಲ್ಲದೆ ನಿಜವಾಗಿಯೂ ಏನೂ ಇಲ್ಲ..ಕಳೆದ ದಿನಗಳ ಮೆಲುಕು ಹಾಕುತ್ತ, ಬರುವ ದಿನಗಳನ್ನು ನಿನ್ನೊಂದಿಗೆ ಕಳೆಯುವ ಹಾರೈಕೆಯಲ್ಲಿ
ಪ್ರೀತಿಯಿಂದ...
ನಿನ್ನ ಗೆಳತಿ.
