Friday 29 November 2013

ದೆವ್ವದ ನೆರಳು..

ಕೋಣಂದೂರಿನ ಸಮೀಪದಲ್ಲಿ ಇರುವ ಪುಟ್ಟದೊಂದು ಹಳ್ಳಿ ಕೊಡೆಕೊಪ್ಪ. ಎಣಿಸಿದರೆ ಏಳು ಮನೆಗಳಿಗಿಂತ ಹೆಚ್ಚು ಇರಲಾರದು.ನವನಾಗರೀಕತೆ ಅಲ್ಲಿ ತನ್ನ ಪ್ರಭಾವವನ್ನು ಇನ್ನೂ ಅಷ್ಟಾಗಿ ಬೀರಿಲ್ಲ. ಅಲ್ಲಿರುವ ಮನೆಗಳಲ್ಲಿ ಒಂದು, ನನ್ನ ಅಜ್ಜನ ಮನೆ.ನನ್ನ ಬಾಲ್ಯದ ಕೆಲ ಸುಂದರ ಕ್ಷಣಗಳು ಅಲ್ಲಿ ಕಳೆದವುಗಳಾಗಿವೆ.

ನನ್ನ ಅಜ್ಜನ ಮನೆ 
ನನಗೊಬ್ಬಳು ಬಾಲ್ಯ ಸ್ನೇಹಿತೆ.ಹೆಸರು ರಶ್ಮಿ.ದಿನವೂ ಸಂಪಿಗೆ,ನೇರಳೆ,ಬೆಮ್ಮಾರಲು ಹೀಗೇ ಹಣ್ಣುಗಳಿಗೋಸ್ಕರ ಜೊತೆಯಾಗಿ ಕಾಡು ಮೇಡು ಅಲೆಯುವುದು ನಮ್ಮ ಕಾಯಕವಾಗಿತ್ತು. ಇನ್ನೂ ಸಮಯ ಸಿಕ್ಕರೆ ಹರಟೆಯಲ್ಲಿ ಮುಳುಗುತ್ತಿದ್ದೆವು.ನಮ್ಮಿಬ್ಬರಿಗೂ ದೆವ್ವದ ಕಥೆಗಳನ್ನು ಹೇಳುವುದು ಕೇಳುವುದೆಂದರೆ ಎಲ್ಲಿಲ್ಲದ ಉತ್ಸಾಹ.ಶಾಲೆಯಲ್ಲಿ ಕೇಳಿದ ಎಷ್ಟೋ ಕಥೆಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದೆವು.ನನಗೆ ದೆವ್ವ ಮತ್ತು ಭೂತಗಳ ಮದ್ಯೆ ಇರುವ ವ್ಯತ್ಯಾಸ ಇವತ್ತಿಗೂ ಗೊತ್ತಿಲ್ಲ. ದೆವ್ವ ಎಂದರೆ ತುಂಬಾ ಶಕ್ತಿಶಾಲಿ. ಭೂತ ಎಂದರೆ ಸ್ವಲ್ಪ ದುರ್ಬಲ ಎಂಬ ಅನಿಸಿಕೆ ನನ್ನದು.
   
ಬೇಸಿಗೆ ರಜೆಯ ಒಂದು ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಹೊರಟೆವು. ಹತ್ತಿರದಲ್ಲೇ ಒಂದು ಸಿದ್ದಿ ವಿನಾಯಕನ ದೇವಸ್ಥಾನ. ನಾವು ಯಾವಾಗಲೂ ಆ ದೇವಸ್ಥಾನದ ಮುಂದೆ ಇರುವ ಮೆಟ್ಟಿಲುಗಳ ಮೇಲೆ ಕುಳಿತು ದೆವ್ವಗಳ ಅಸ್ತಿತ್ವದ ಕುರಿತು ಚರ್ಚಿಸುತ್ತಿದ್ದೆವು ಏಕೆಂದರೆ ದೆವ್ವ,ಭೂತಗಳಿಗೆ ದೇವರ ಭಯವಿರುತ್ತದೆ (ನಮಗೆ ಅವುಗಳ ಭಯ!!) ಎಂಬುದು ನಮ್ಮ ಬಲವಾದ ನಂಬಿಕೆ.ಅವಳು ಹೇಳಿದ ಒಂದು ಕಥೆ ನನ್ನ ನೆನಪಿನಲ್ಲಿ ಹಸಿರಾಗಿದೆ.ಅವಳ ಸ್ನೇಹಿತೆಯ ಮನೆಯ ಬಳಿ  ಒಂದು ದೆವ್ವ ಯಾವಾಗಲೂ ದೀಪವೊಂದನ್ನು ಹಿಡಿದುಕೊಂಡು ಮರವೊಂದರ ಸುತ್ತ ಸುತ್ತುತ್ತಿರುತ್ತದೆಯಂತೆ.ಅದರ ಗೆಜ್ಜೆಯ ಶಬ್ದ ರಾತ್ರಿಯೆಲ್ಲ ಕೇಳುತ್ತಿರುತ್ತದೆಯಂತೆ (ಹೆಣ್ಣು ದೆವ್ವವೇ ಆಗಿರಬೇಕು.?).ಇದು ಆ ಕಥೆಯ ತಿರುಳು .ಅದರ ಸತ್ಯಾಸತ್ಯತೆ ಪರೀಕ್ಷಿಸುವಷ್ಟು ವ್ಯವಧಾನವಾಗಲಿ,ಪಕ್ವತೆಯಾಗಲಿ ನಮಗೆ  ಇರಲಿಲ್ಲ.ಅವಳು ಹೇಳಿದ ಕಥೆಗೆ ಬದಲಾಗಿ ನಾನು ಒಂದು ಕಥೆ ಹೇಳಬೇಕಲ್ಲವೇ! ಹೀಗೆ ಏನೋ ಒಂದು ಹೇಳಿ ಮುಗಿಸಿದ್ದೆ. 

ಸೂರ್ಯ ಅಸ್ತಮಿಸತೊಡಗಿದ್ದ.ಕತ್ತಲಾಗುತ್ತಾ ಬಂದಿತ್ತು.ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಹಾಗೆ ಕುಳಿತಿರುವಾಗ, ಘಲ್ ಘಲ್ ಎನ್ನುವ ಗೆಜ್ಜೆ ನಿನಾದ ಕೇಳಿಬಂತು.ದೆವ್ವವೇ ಬರುತ್ತಿದೆ ಎಂದು ಖಚಿತವಾಗಿ ಇಬ್ಬರೂ ಭಯದಿಂದ ಅಂಟಿಕೊಂಡು ಕುಳಿತೆವು.ಮೊದಲು ದೂರದಲ್ಲೆಲ್ಲೋ ಕೇಳುತ್ತಿದ್ದ ಶಬ್ದ ಬರುಬರುತ್ತಾ ಸಮೀಪಿಸತೊಡಗಿತು. ಜೊತೆಗೇ ನೆರಳೂ ಕಂಡುಬಂತು.ಕೊನೆಗೂ ನೆರಳು ನಾವಿದ್ದ ಜಾಗಕ್ಕೇ ಬಂತು!. ಅದನ್ನು ನೋಡಿ ನಾನು ಭಯದಿಂದ ಕೂಗಿಕೊಂಡೆ.ಮೈ ಬೆವರಿತ್ತು.
    
ನೋಡಿದರೆ ಅದು ಬೇರೆ ಯಾರೂ ಅಲ್ಲ,ದೇವರಿಗೆ ಸಾಯಂಕಾಲ ದೀಪ ಹಚ್ಚಲು ಬಂದಿದ್ದ ಸವಿತ ಅಕ್ಕ.ಅವಳು "ಎಂತ ಆಯ್ತ್ರೇ ನಿಮ್ಮಿಬ್ರಿಗೆ? ಎಂತಕ್ಕೆ ಕೂಗಿದ್ದು?" ಅಂತ ಕೇಳಿದಳು. "ಏನಿಲ್ಲಕ್ಕ,ಎಂತದೋ ನೋಡಿ ಹೆದ್ರಿಬಿಟ್ವಿ.ನೀನ್ ದೀಪ ಹಚ್ಚಕ್ಕೆ ಬಂದಿದ್ದ ?" ಅಂತ ಕೇಳಿದ್ವಿ.ಅವಳು ದೀಪ ಹಚ್ಚಿದ ಮೇಲೆ ದೇವರಿಗೆ ನಮಸ್ಕರಿಸಿ,ದೆವ್ವ ನಮಗೇನೂ ತೊಂದರೆ ಮಾಡದೇ ಇರಲಿ ಎಂದು ಬೇಡಿಕೊಂಡು ಮನೆಯ ದಾರಿ ಹಿಡಿದೆವು,ನಡೆದ ಘಟನೆಯನ್ನು ಮೆಲುಕು ಹಾಕುತ್ತಾ... 
  
(ಸವಿತ ಅಕ್ಕನ ಕ್ಷಮೆ ಕೋರಿ..)
ಸುಚೇತ 

Thursday 28 November 2013

ಮೊದಲ ನೆನಪು..

ಏನೇನೋ ಕನಸುಗಳು . ಅವನ್ನೆಲ್ಲ ಬದಿಗೊತ್ತಿ ನಿದ್ರೆಯಿಂದ ಹೊರಬಂದೆ. ಆಗಲೇ ಗಂಟೆ ೪:೩೦ ಆಗಿತ್ತು. ಏಳಲೇಬೇಕಾ ಎಂದು ಮನಸು ಕೇಳಿದ ಪ್ರಶ್ನೆಗೆ ಸಮಾಧಾನ ಹೇಳಿ ಎದ್ದು ಕುಳಿತೆ. ತಣ್ಣಗಿನ ಗಾಳಿ ಬೀಸುತ್ತಿತ್ತು. ಸಣ್ಣಗೆ ಕೊರೆಯುವ ಚಳಿ. ಪ್ರಶಾಂತವಾಗಿತ್ತು ಕೊಠಡಿ.ಹಾಗೇ  ಒಂದಿಷ್ಟು ಕೊಳಲು ವಾದನಗಳನ್ನು ಕೇಳುತ್ತಾ  ಕುಳಿತೆ.ಯಾಕೋ ಮುಂಜಾನೆಯ ಸೂರ್ಯೋದಯವನ್ನು ನೋಡುತ್ತಾ  ಭೈರವಿ ರಾಗವನ್ನೋ , ಶಂಕರಾಭರಣವನ್ನೋ ಕೇಳಬೇಕು ಎಂದೆನಿಸಿತು. ಜೊತೆಗೇ ಬಂತು ಬಾಲ್ಯದ ನೆನಪುಗಳು.
                               

ತೀರ್ಥಹಳ್ಳಿಯ ಚಳಿ ಹೇಗಿರುತ್ತಿತ್ತು ಅಂತ ಮನಸು ನೆನಪಿಸಿತು.ಅಡಿಕೆ ತೋಟಗಳು,ಸುತ್ತುವರಿದ ಕಾಡುಗಳ  ಮಧ್ಯದಲ್ಲಿ ಇರುವ ಒಂದೊಂದು ಮನೆಗಳು.ನಮ್ಮ ಮನೆಯೂ ಇದಕ್ಕೆ ಹೊರತಲ್ಲ. ಚಳಿಗಾಲವೆಂದರೆ ಅಡಿಕೆ ಕೊಯಿಲು.ಅಡಿಕೆ ಕೊಯಿಲು ಎಂದರೆ ಚಳಿಗಾಲ ಏಕೆಂದರೆ ಆ ಸಮಯದಲ್ಲಿ ಮನೆ ಮುಂದೆ ಚಪ್ಪರ ಹಾಕುವುದು ,ಅಡಿಕೆ ಕೊನೆ ತೆಗೆಯುವುದು,ಅಡಿಕೆ ಸುಲಿಯುವುದು,ಬೇಯಿಸಿ ಒಣಗಿಸುವುದು ಹೀಗೆ ಬೇರೆ ಆಲೋಚಿಸಲು ಸಮಯವಿಲ್ಲದಷ್ಟು ಕೆಲಸವಿರುತ್ತದೆ.ತೀರ್ಥಹಳ್ಳಿಯವರ ಮಾತಿನಲ್ಲೇ ಹೇಳುವುದಾದರೆ "ನಂಗ್  ಪುರುಸತ್ತೇ ಇಲ್ಲ ಮರ್ರೆ ಅಡಿಕೆ ಕುಯ್ಲು"  ಎಂಬುದು ಯಾವಾಗಲು ಕೇಳಿಬರುವ ಮಾತು.ಅಡಿಕೆ ಕೊನೆ ತೆಗೆದ ಮೊದಮೊದಲ ದಿನಗಳಲ್ಲಿ  ಸಂಭ್ರಮ. ಅಡಿಕೆ ಮನೆಗೆ ಬಂದ ತಕ್ಷಣ ಚಿಕ್ಕ ಮಕ್ಕಳೆಲ್ಲ ಕತ್ತಿ ಹಿಡಿದು ಅಡಿಕೆ ಸುಲಿಯಲು ಕುಳಿತುಕೊಳ್ಳುತ್ತಿದ್ದೆವು.ಕೊಳಗ (ಸುಲಿದ ಅಡಿಕೆ ಅಳೆಯುವ ಪಾತ್ರೆ ) ತುಂಬಿಸುವ ಪ್ರಯತ್ನದಲ್ಲಿ ನಾವು. 

ಕೈಗೆ ಗಾಯ ಮಾಡಿಕೊಂಡ ಎಷ್ಟೋ ದಿನಗಳು ನೆನಪಿವೆ. ಹಾಗೆ ಕೈ ನೋಡಿಕೊಂಡೆ . ಕೈಯಲ್ಲಿ ೨-೩ ಕಲೆಗಳು ನಿನ್ನ ನೆನಪುಗಳನ್ನು ಹಸಿಯಾಗಿರಿಸಲು ನಾವಿದ್ದೇವೆ ಎಂದು ಹೇಳುವಂತೆ ಕಂಡುಬಂದವು.ಅದರಲ್ಲಿ ಒಂದು ಬಲಗೈ ಕಿರುಬೆರಳ ಕಲೆ. ಹಾಗೆ ನೆನಪಾಯಿತು ಅವತ್ತು ಬೆಳಿಗ್ಗೆ ಅಪ್ಪ ಬೇಡ ಎಂದು ಹೇಳಿದ್ದರೂ  ಉತ್ಸಾಹದಲ್ಲಿ ಕತ್ತಿ ಹಿಡಿದು ಅಡಿಕೆ ಸುಲಿಯಲು ಕುಳಿತಿದ್ದೆ. ಅಡಿಕೆ ಕಾಯಿಗಳ ಮೇಲೆ ಇಬ್ಬನಿಯ ಹನಿಗಳು ಕೈ ಜಾರುವಂತೆ ಮಾಡಿದವು. ಬೆರಳು ಅಡಿಕೆಯ ಜಾಗದಲ್ಲಿತ್ತು. ಗಾಯ ದೊಡ್ಡದಾಗಿತ್ತು. ರಕ್ತದ ಹನಿಗಳು ಕೆಳಗೆ ಬಿದ್ದವು. ಅಪ್ಪ ಅಲ್ಲೇ ಬಾವಿಯ ಹತ್ತಿರ ಇದ್ದರು . ನಂಗೆ ಅಳು ಬಂತು .ರಕ್ತ ಬರುತ್ತಿತ್ತು ಅಂತ ಅಲ್ಲ ಆದರೆ ಅಪ್ಪ ಬೈತಾರೆ ಅಂತ. ಭಯದಿಂದ ಅವರ ಹತ್ತಿರ ಹೋಗಿ ತೋರಿಸಿದೆ. ನನ್ನ ಅಳು ನೋಡಿ ಪಾಪ ಅನಿಸಿರಬೇಕು, ಏನೂ ಹೇಳಲಿಲ್ಲ. ಔಷಧ ಹಚ್ಚಿ ಬಟ್ಟೆ ಕಟ್ಟಿದರು. ಅಮ್ಮನ ಹತ್ತಿರ ಹೋಗಿ ಅತ್ತೆ. ಅಮ್ಮ ಸಮಾಧಾನ ಮಾಡಿ ಊಟ ಮಾಡಿಸಿದರು. 

ಇವತ್ತು ಬೆಳಿಗ್ಗೆ ಎದ್ದು ಕುಳಿತವಳಿಗೆ ಇಷ್ಟೆಲ್ಲಾ ನೆನಪಾಗಿತ್ತು. ನಮ್ಮಮ್ಮ ಒಂದು ಹಾಡು ಹೇಳಿಕೊಟ್ಟಿದ್ದರು . ಅದು ನನಗೆ ನೆನಪಿಲ್ಲ. ಅದರ ಸಾರಾಂಶವಿಷ್ಟೇ ,
                              ಬೆಳಿಗ್ಗೆ  ಎದ್ದೆ. ಚಳಿಯಾಗುತ್ತಿತ್ತು. 
                              ಅಪ್ಪನ ಅಂಗಿ ಹಾಕಿಕೊಂಡೆ. ಕಡಿಮೆಯಾಗಲಿಲ್ಲ. 
                              ಅಮ್ಮನ ಸೀರೆ ಸುತ್ತಿಕೊಂಡರೂ  ಕಡಿಮೆ ಆಗಲಿಲ್ಲ. 
                              ಆಮೇಲೆ ಅಮ್ಮ ಮಾಡಿದ ಕಾಫಿ ಕುಡಿದೆ. 
                              ಚಳಿರಾಯ ಓಡಿಹೋದ. 
ನೆನಸಿಕೊಂಡಾಕ್ಷಣ ಒಂದು ಮುಗುಳ್ನಗು ಹಾದು ಹೋಯಿತು.ಜೊತೆಗೆ ಅಮ್ಮನ  ನೆನಪಾಯ್ತು.ಅಷ್ಟರಲ್ಲಿ ಚಳಿರಾಯ ತನ್ನ ಪ್ರತಾಪವನ್ನು ತೋರಿಸತೊಡಗಿದ್ದ.ಕಾಫಿ ಇಲ್ಲದಿದ್ದರೇನಂತೆ ಟೀ ಕುಡಿಯೋಣವೆಂದು ಹೊರಟೆ.