Tuesday 5 April 2016

ಮರೆತ ದಾರಿಯ ಹುಡುಕುತ್ತಾ ...

ಮುಂಜಾನೆಯ ಸೂರ್ಯೋದಯವನ್ನು ನಿಂತು ಆಸ್ವಾದಿಸುವಷ್ಟೂ ಸಮಯದ ಅಭಾವ ನಮಗೆ. ಬೇಗ ಕೆಲಸಕ್ಕೆ ಹೊರಟರೆ ಆಯಿತು. ತಡವಾದಷ್ಟೂ ವಾಹನಗಳ ಸಂದಣಿ ಹೆಚ್ಚಾಗುತ್ತದೆ.ಹದಿನೈದು ನಿಮಿಷದಲ್ಲಿ ತಲುಪಬಹುದಾದ ದಾರಿಯನ್ನು ಕ್ರಮಿಸಲು ಎರಡು ಗಂಟೆಯಾದರೂ ಆದೀತು. ಹೀಗೆಂದುಕೊಂಡೇ ಪ್ರತಿದಿನವೂ ಗಡಿಬಿಡಿಯಲ್ಲಿ ಹೊರಡುವುದು ಅಭ್ಯಾಸವಾಗಿದೆ.ನಾನು ಆದಷ್ಟು ಬೇಗ ಹೊರಟು, ಒಂದು ಕಿಟಕಿ ಪಕ್ಕದ ಜಾಗ ಹಿಡಿದು ಕೂತರೆ ಸಾಕೆಂದುಕೊಂಡೇ ದಿನವೂ ಬಸ್ ಹತ್ತಿರುತ್ತೇನೆ.ಹಾಗೆ ಕೂತ ಮರುಕ್ಷಣವೇ ನೆನಪುಗಳು ಧಾಳಿ ಇಡಲು ಪ್ರಾರಂಭಿಸುತ್ತವೆ. ಕಿಟಕಿಗೆ ಆನಿಸಿ ಕುಳಿತು ರಸ್ತೆಯಲ್ಲಿನ ಕಾರುಗಳು, ಬಸ್ ,ಹೊಗೆ ,ಧೂಳು, ರಸ್ತೆ ದಾಟಲು ಪರದಾಡುವ ಜನರು ಇವೆಲ್ಲವುಗಳನ್ನು ನೋಡುವಾಗ  ನಡುವೆ ನನಗೆ ನೆನಪಾಗುವುದು ನನ್ನೂರು. 

ನನ್ನೂರು ಮಲೆನಾಡು.ತೀರ್ಥಹಳ್ಳಿಯ ಸಮೀಪದ ಒಂದು ಹಳ್ಳಿ. ವಿದ್ಯಾಭ್ಯಾಸಕ್ಕಾಗಿ ತೀರ್ಥಹಳ್ಳಿಗೆ ಹೋಗಬೇಕಿತ್ತು.ಬಸ್ಸಿನ ವ್ಯವಸ್ಥೆ ಸರಿಯಾಗಿ ಇರಲಿಲ್ಲದ ಕಾರಣ ಒಂದು ಆಟೋ ದಲ್ಲಿ ನಮ್ಮನ್ನು ಶಾಲೆಗೆ ಕಳಿಸುವ ಏರ್ಪಾಡು ಮಾಡಿದ್ದರು. ಆದರೂ ನಮಗೆ ನಡೆಯುವುದು ತಪ್ಪಿರಲಿಲ್ಲ. ಮೊದಲು ಸಾಲು ಸಾಲು ಅಡಿಕೆ ತೋಟಗಳು, ಚಿಕ್ಕ ಹಳ್ಳಗಳು ,ಅದನ್ನು ದಾಟಲು ಸಾರ.ಅಲ್ಲಲ್ಲಿ ಕಾಣುವ ಏಡಿಗಳನ್ನು,ಚಿಕ್ಕ ಹಾವುಗಳನ್ನು ನೋಡುತ್ತಾ  , ಹೆದರಿದರೂ ಪಕ್ಕದಲ್ಲಿದ್ದವರಿಗೆ ನಾವು ಕಂಡ ಅದ್ಭುತವನ್ನು ತೋರಿಸುತ್ತಾ ಮೆಲ್ಲಮೆಲ್ಲಗೆ ಅಡ್ಡಡ್ಡವಾಗಿ ಸಾರದ ಮೇಲೆ ಹೆಜ್ಜೆ ಇಡುತ್ತಾ,ಅಪರೂಪಕ್ಕೊಮ್ಮೆ ಕಾಣುವ ನವಿಲು,ಮೊಲಗಳ ನೋಡಿ ಖುಷಿ ಪಡುತ್ತಾ ತೋಟ ದಾಟುತ್ತಿದ್ದೆವು. ಬೇಸಿಗೆಯ ಕಥೆ ಇದಾದರೆ ಮಳೆಗಾಲದಲ್ಲಿ, ಮೇಲಿಂದ ದಬ ದಬ ಬೀಳುವ ಮಳೆಯಿಂದ ತಪ್ಪಿಸಿಕೊಂಡು ಹೋಗುವುದರೊಳಗೆ ಸಾಕೆನಿಸಿರುತ್ತಿತ್ತು. ಒದ್ದೆಯಾದ ಬಟ್ಟೆ, ಹೊರಲಾಗದಷ್ಟು ಭಾರದ ಶಾಲೆಯ ಚೀಲ, ಹಾವಸೆಗಳಿಂದ ಹಸುರಾದ ನೆಲ,ಅಲ್ಲೆಲ್ಲೋ ಜಾರಿ ಬಿದ್ದು ಯಾರಾದರು ನೋಡಿದರೆ ಅತ್ತು ಕಣ್ಣೀರು ತಂದುಕೊಂಡು ಸಮಾಧಾನ ಮಾಡಿಸಿಕೊಂಡು, ಯಾರೂ ಇರದಿದ್ದರೆ ಲಂಗ ಜಾಡಿಸಿಕೊಂಡು ಎನೂ ಆಗಿಲ್ಲವೆಂದು ನಮಗೆ ನಾವೇ ಸಾಂತ್ವನ ಹೇಳಿಕೊಂಡು ಮುನ್ನಡೆದಿದ್ದ ದಿನಗಳವು.ತೋಟ ದಾಟಿದರೆ ಗೇರು ಗುಡ್ಡ. ಗೇರು ಗುಡ್ಡದಲ್ಲಿ ಇನ್ನೊಂದಷ್ಟು ಕಾರುಭಾರು.ಹಾರಿದ ಹಕ್ಕಿಯ ಹಿಂದೆ ಗೂಡು ಹುಡುಕುತ್ತಾ ಹಿಂಬಾಲಿಸುತ್ತಿದ್ದೆವು.ಮರದ ತುಂಬೆಲ್ಲ ನೀಲಿ ಮಣಿಗಳಂತೆ ಜೊಂಪಾಗಿ ಬೆಳೆದ ನೇರಳೆ ಹಣ್ಣಿನ ಭಾರಕ್ಕೆ ತೂಗಿ ತೊನೆಯುತ್ತಿರುವ ರೆಂಬೆಗಳನ್ನು ಎಳೆದು ಹಣ್ಣು ಉದುರಿಸಿ ಬಾಯಿ ನೀಲಿ  ಮಾಡಿಕೊಳ್ಳುತ್ತಿದ್ದೆವು.ಗುಡ್ಡ ಹತ್ತಿಳಿದರೆ ಮತ್ತೆ ಸಿಗುವ ಅಡಿಕೆ ತೋಟ, ದೂರದಲ್ಲೊಂದು ಒಂಟಿ ಮನೆ ಇವೆಲ್ಲವನ್ನು  ದಾಟಿ ಸಾಗುವಷ್ಟರಲ್ಲಿ ತಡವಾಗಿ ಆಟೋದಲ್ಲಿ ನಮಗಾಗಿ ಕಾಯುತ್ತಿದ್ದ ಎಲ್ಲರೂ ನಮ್ಮನ್ನು ಬೈಯ್ಯುವಂತಾಗುತ್ತಿತ್ತು. ಬಸ್ ನಿಲ್ದಾಣಕ್ಕೆ ಹೋಗಲು ಸಹ ಅದೇ ದಾರಿಯಾಗಿತ್ತು. ಎಲ್ಲರೂ ಅದೇ ದಾರಿಯನ್ನು ಬಳಸುತ್ತಿದ್ದರು ಕೂಡ.




ವರ್ಷಗಳು ಕಳೆದಂತೆ ನಗರೀಕರಣದ ಪ್ರಭಾವ ಎಲ್ಲ ಕಡೆಯೂ ಪಸರಿಸತೊಡಗಿತು.ನಾವೆಲ್ಲ ಊರು ಬಿಟ್ಟು ಹೊರಗೆ ಬಂದು ಬೆಂಗಳೂರು ಸೇರಿಕೊಂಡೆವು. ಹಳ್ಳಿಗಳಲ್ಲಿ ಚಿಮಣಿ ದೀಪದ ಬದಲು ವಿದ್ಯುತ್ ದೀಪ ಬಂತು.ಹಿಂದೆ ಬರುತ್ತಿದ್ದ ಪತ್ರಗಳು ಮಾಯವಾದವು. ನಾವು ಕ್ಷೇಮ,ನೀವು ಕ್ಷೇಮವೇ ಎಂಬ ಮೊದಲ ಸಾಲುಗಳಿಗೆ ಬದಲಾಗಿ ದೂರವಾಣಿಯಲ್ಲಿ ಹಲೋ ಹೇಗಿದ್ದೀರ ಎನ್ನುವ ಮೊದಲ ಮಾತೇ ಅಪ್ಯಾಯವೆನಿಸತೊಡಗಿತು.ಎತ್ತಿನ ಗಾಡಿ ,ಸೈಕಲ್ ಗಳೆಲ್ಲ ಮಾಯವಾಗಿ ಮೋಟಾರ್ ಬೈಕ್  ಗಳು ಬಂದವು. ಊರಿಗೆ ಕಾಲು ದಾರಿ ಇರುವಂತೆಯೇ ಅಗಲವಾದ ಮತ್ತೊಂದು ರಸ್ತೆಯೂ ಆಯಿತು.ದೊಡ್ಡ ರಾಜಮಾರ್ಗವಿರುವಾಗ ಈ ಕಾಲುದಾರಿಯಲ್ಲಿ ನಡೆಯುವುದೆಂತು ಎಂದುಕೊಂಡರು ಎಲ್ಲರೂ. ಅಡಿಕೆ ಬೆಲೆ ಜಾಸ್ತಿ ಆದದ್ದೇ ಹೆಳೆ ಎಲ್ಲರ ಮನೆಗೊಂದು ದ್ವಿಚಕ್ರ ವಾಹನ ಬಂದೇ ಬಿಟ್ಟಿತು.ಆಗ ಗುಡು ಗುಡು ಸದ್ದು ಮಾಡುತ್ತಾ ಹೊಗೆಯುಗುಳುತ್ತಾ ಓಡುತ್ತಿದ್ದ ವಾಹನಗಳನ್ನು ನೋಡುವುದೇ ಮೋಜೆನಿಸಿತ್ತು.


ಈಗ ಎಲ್ಲರ ಮನೆಯಲ್ಲೂ ಸ್ವಂತ ವಾಹನವಿರುವವುದರಿಂದ ಯಾರೂ ಬಸ್ ನಿಲ್ದಾಣದವರೆಗೆ ನಡೆಯುವುದಿಲ್ಲ. ಬರುವ ಒಂದೇ ಬಸ್ಸಿಗಾಗಿ ಕಾಯುತ್ತಾ ಅದು ಬಾರದಿದ್ದಾಗ ದಾರಿಯಲ್ಲಿ ಸುಳಿದವರ ಬಳಿ "ಬಸ್ ಹೋಯ್ತಾ ಅವಾಗಿಂದ ಕಾಯ್ತಾ ಇದೀನಿ" ಅಂತ ಕೇಳುವ ಪ್ರಮೇಯವೂ  ಇಲ್ಲ. ಅಷ್ಟೊಂದು ವ್ಯವಧಾನವೂ ಇಲ್ಲ. ನಾವು ಶಾಲೆಗೆ ಹೋಗುತ್ತಿದ್ದ ಆ ದಾರಿಯಲ್ಲಿ ಗಿಡಗಳು,ಮುಳ್ಳುಪೊದೆಗಳು ಬೆಳೆದಿವೆ.ಮನುಷ್ಯರ ಸುಳಿವಿಲ್ಲದೇ ಕಾಲುದಾರಿಯಲ್ಲಿ ಹುಲ್ಲು ಚಿಗುರಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಸಿಗ್ನಲ್ ಇರುವ ದಾರಿಯನ್ನು ಬಿಟ್ಟು ಬೇರೆಡೆಯಿಂದ ಸಾಗುವಾಗ ಮನಸ್ಸು ಹೋಲಿಕೆಯನ್ನು ಹುಡುಕುತ್ತದೆ.ತೋಟಗಳಿಗೆ ನೀರು ಬಿಟ್ಟಾಗ ಚಿಲುಮೆಯಂತೆ ಹಾರುವ ನೀರಿನ ಹನಿಗಳಿಂದ ತಪ್ಪಿಸಿಕೊಳ್ಳಲು ನಾವು ಬೇರೆ ದಾರಿ ಹುಡುಕಿದ್ದು ನೆನಪಾಗುತ್ತಿದೆ.ಅಲ್ಲೀಗ ಗೊಂಚಲು ಗೊಂಚಲಾಗಿ ತುಂಬಿ ನಿಂತ ನೇರಳೆ ಹಣ್ಣು ಕೆಳಗೆ ಬಿದ್ದು ನೆಲವೆಲ್ಲಾ ನೀಲಿಯಾಗಿರಬಹುದೇನೋ.!ಯಾವುದೋ ಚಿಕ್ಕ ಪೊದೆಯಲ್ಲಿ ಸೂರಕ್ಕಿಯ ಗೂಡು ತೂಗುತ್ತಿರಬಹುದೆನೋ.!ಕುಣಿದ ನವಿಲ ಗರಿಯುದುರಿ ಆ ದಾರಿಯಲ್ಲೇ ಹೆಕ್ಕುವರಿಲ್ಲದೆ ಬಿದ್ದಿರಬಹುದೇನೋ.!ಇವತ್ತು ಮತ್ತೆ ಕಿಟಕಿಯ ಬದಿಗೆ ಜಾಗ ಸಿಕ್ಕಿದೆ.ಸಿಗ್ನಲ್ ಕೆಂಪು ದೀಪ ತೋರಿಸುತ್ತಿದೆ. ನೆನಪುಗಳು ನವಿರಾಗಿ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಿವೆ. ಮತ್ತೀಗ ನಾನು ಕಳೆದುಹೋದ ನೆನಪುಗಳೊಳಗಿಳಿದು ಆ ಮರೆತ ದಾರಿಯನ್ನು ಹುಡುಕುತ್ತಿದ್ದೇನೆ... 

Saturday 2 April 2016

ಶಿರಸಿಯನ್ನರಸಿ- ಭಾಗ ೪

ಸುಂದರ ಜಲಪಾತಗಳ ಸಿರಿಯ ಸವಿಯಲು ಶಿರಸಿಯನ್ನರಸಿ ಹೊರಟಿದ್ದೆವು ನಾವು. ಎರಡು ದಿನಗಳ ನಮ್ಮ ಪಯಣ ಮೂರು ದಿನಗಳಿಗೆ ಮುಂದುವರೆದಿತ್ತು. ಅಲ್ಲಿಂದ ಬರಲು ಮನಸ್ಸಿಲ್ಲದೆ ಮೂರು ದಿನಗಳು ಅಲ್ಲೇ ಅಲೆಮಾರಿಗಳಂತೆ ಅಲೆದದ್ದಾಯಿತು.ರಾತ್ರಿಯ ಕಪ್ಪಾದ ಆಕಾಶದಲ್ಲಿ ಹೊಳೆಯುವ ಹಾಲುಹಾದಿಯ (Milky Way) ಹಿಂಬಾಲಿಸಿ ನಕ್ಷತ್ರಗಳ ಹೆಸರು ಹುಡುಕುವ ಹರಸಾಹಸ ಮಾಡಿದ್ದಾಗಿತ್ತು. ಅದೇ ರಾತ್ರಿ ಕುಳಿತುಕೊಂಡು ನಾಳೆ ಎಲ್ಲಿಗೆ ಹೋಗುವುದು ಎಂದು ತಲೆ ಕೆಡಿಸಿ ಕೊಂಡಿದ್ದೆವು. ಎಲ್ಲೋ ಕಳೆದು ಹೋದ ಜಲಪಾತಗಳ ಹುಡುಕುತ್ತಾ ನಾವೂ ಕಳೆದು ಹೋಗುವ ಆಸೆ ಇದ್ದರೂ ಅಷ್ಟೆಲ್ಲಾ ಯೋಚನೆ ಮಾಡಲು ಹೋಗದೆ ಹತ್ತಿರದಲ್ಲಿದ್ದ ಒಂದು  ಜಲಪಾತಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. 

ಕಾಲು ಹಾದಿ 
ಬೆಳ್ಳಂಬೆಳಗ್ಗೆ ನಮ್ಮನ್ನು ಹೊತ್ತೊಯ್ದಿದ್ದ ಗಾಡಿ ಜಲಪಾತದ ಸಮೀಪದವರೆಗೂ ಕರೆದೊಯ್ದಿತ್ತು. ಅಲ್ಲಿಂದ ಹೆಚ್ಚೇನೂ ಅಲ್ಲದ ಹತ್ತು ನಿಮಿಷಗಳ ಕಾಲ್ನಡಿಗೆಯ ಪ್ರಯಾಣ. ಉಬ್ಬು ತಗ್ಗುಗಳ ಕಾಲುದಾರಿ. ಮಳೆಕಾಡಿನ ಹಸಿರಿನ ಸಿಂಚನ. ಅಪರೂಪಕ್ಕೊಮ್ಮೆ ಕೇಳಿ ಬರುತ್ತಿದ್ದ ಹಕ್ಕಿಗಳ ಉಲಿ ಬಿಟ್ಟರೆ ನಿಶ್ಯಬ್ದ ಆವರಿಸಿತ್ತು. ಮುನ್ನಡೆದಂತೆ  ಆ ನೀರವತೆಯ ಭೇದಿಸಿ  ಬರುವ ಜಲಪಾತದ ಧುಮ್ಮಿಕ್ಕುವ ಶಬ್ದ . ಅದರ ಜಾಡಿನಲ್ಲಿ ಮುನ್ನಡೆದೆವು. ಅದನ್ನು ಸಮೀಪಿಸಿದಾಗ ಸ್ವಲ್ಪ ಸ್ವಲ್ಪವಾಗಿ ತೆರೆದುಕೊಳ್ಳತೊಡಗಿತು

 ಜಲಪಾತದ ಇಣುಕುನೋಟ 
ಜಲಪಾತಗಳ ಬಗ್ಗೆ ವರ್ಣನೆ ಮಾಡುವುದು ಕಷ್ಟ.ಪ್ರತಿಯೊಂದು ಜಲಪಾತವೂ ವಿಭಿನ್ನವಾಗಿದ್ದರೂ ವರ್ಣಿಸಲು ಮಾತ್ರ ಪದಗಳೇ ಸಿಗವು. ಪ್ರತಿಬಾರಿಯೂ ಮೇಲಿಂದ ಕೆಳಗಿಳಿಯುವ ಆ ಜಲಧಾರೆಯ ಎದುರು ನಿಂತಾಗ ಮಾತು ಮೂಕವಾಗುತ್ತದೆ. ಅದರ ಧೀಮಂತಿಕೆಗೆ ತಲೆದೂಗುತ್ತದೆ. ಜನವರಿ ಸಮಯದಲ್ಲಿ ನಾವು ಹೋಗಿದ್ದರಿಂದ ನೀರಿಗಿಳಿಯಲು ಸಾಧ್ಯವಾಗಿತ್ತು. ಇದನ್ನು ಕೆಳಗಿಂದ ನೋಡುವುದಲ್ಲದೆ ಮೇಲಿನಿಂದಲೂ ನೋಡಬಹುದಾಗಿತ್ತು.ಪಾಚಿ ಕಟ್ಟಿದ ಕಲ್ಲುಗಳ ಮೇಲೆ ನಿಧಾನವಾಗಿ ಹೆಜ್ಜೆ ಹಾಕುತ್ತ ನೀರಿಗಿಳಿದೆವು. ತಣ್ಣನೆಯ ನೀರಿನಲ್ಲಿ ಕಾಲಹರಣ ಮಾಡಿ ಆದ ಮೇಲೆ ಅಲ್ಲೇ ಇದ್ದ ಕಲ್ಲು ಬಂಡೆಗಳ ಮೇಲೆ ಕುಳಿತೆ ನಾನು.
ಜಲಪಾತದ ಮೇಲ್ಭಾಗ
ಪಾಚಿ ಕಟ್ಟಿದ್ದ ಕಲ್ಲುಗಳು
 ಪೂರ್ಣ ನೋಟ 


ಯಾವುದೋ ಬಂಡೆಯ ಮೇಲೆ ಹತ್ತಿ ಜಲಪಾತದ ಫೋಟೋ ತೆಗೆದಿದ್ದ ಹರ್ಷ.ಅದರಲ್ಲೊಂದು ಕಾಮನಬಿಲ್ಲು.ನನಗಿನ್ನೂ ಆ ಛಾಯಾಚಿತ್ರ ಕೊಟ್ಟಿಲ್ಲ ಅವನು. ಹೆಚ್ಚು ಹೊತ್ತೇನೂ ಅಲ್ಲಿ ಇರದೆ ಅಲ್ಲಿಂದ ಹೊರಟು ಯಾವುದೋ ಹತ್ತಿರದ ಹೋಟೆಲ್ ನಲ್ಲಿ ಊಟ ಮಾಡಿದೆವು. ಮುಂದೇನು ಮಾಡುವುದು ಎಂದು ಯೋಚಿಸುತ್ತಿದ್ದಾಗ ವಿನಾಯಕ ನವೋದಯ ಶಾಲೆಯ ಬಳಿ ಹೋಗಿ ಬರೋಣ ಅಂತ ಸಲಹೆ ಕೊಟ್ಟ. ಅಲ್ಲಿ ಅಣೆಕಟ್ಟಿನಿಂದ ನಿಂತ ನೀರಿದೆ. ಸೂರ್ಯ ಮುಳುಗುವುದು ನೋಡಲು ಚನ್ನಾಗಿ ಇರುತ್ತದೆ ಎಂದ. ಸರಿ ಹೇಗಿದ್ದರೂ ಬಸ್ ರಾತ್ರಿಗೆ ಇದ್ದುದರಿಂದ ನವೋದಯ ಶಾಲೆಗೆ ಹೊರಟೆವು .

ಶಾಲೆಯ ಒಳಗೆ ಹೋಗಿ ನೋಡುವ ಇಚ್ಛೆ ಯಾರಿಗೂ ಇರಲಿಲ್ಲ ಆದರೆ ನಮಗೆ ಆ ಹಿನ್ನೀರಿನ ಬಳಿ ಹೋಗಲೂ ಅಲ್ಲಿದ್ದ ಜನ ಬಿಡಲಿಲ್ಲ. ನಾವು ಕೊನೆಗೆ ಹಕ್ಕಿಗಳನ್ನ ನೋಡೋಕೆ ಬಂದವರು,ಹಕ್ಕಿಗಳ ಬಗ್ಗೆ  ಪ್ರಾಜೆಕ್ಟ್ ಮಾಡ್ತಾ ಇದೀವಿ ಅಂತ ಕ್ಯಾಮೆರಾ, tripod ಎಲ್ಲ ತೋರಿಸಿ ಅಲ್ಲಿಗೆ ಹೋಗಲು ಪರವಾನಗಿ ಪಡೆದುಕೊಂಡೆವು.ಹೋದದ್ದೇನೋ ಅಲ್ಲಿ ಗದ್ದೆ ಬಯಲಲ್ಲಿ ಕುಳಿತು ಕಾಲ ಕಳೆಯಲು. ನನಗೆ ಹಕ್ಕಿಗಳ ಬಗ್ಗೆ ಸ್ವಲ್ಪ ಆಸ್ಥೆ ಇತ್ತಾದರೂ ಪಕ್ಷಿವೀಕ್ಷಣೆ ಅಂತ ಯಾವತ್ತೂ ಮಾಡಿರಲಿಲ್ಲ. ದುರ್ಬೀನು ಇರಲಿಲ್ಲ. ಒಂದು ಹಕ್ಕಿಗಳ ಪುಸ್ತಕ ಸಹ ಇರಲಿಲ್ಲ. ಅಲ್ಲಿ ಗದ್ದೆಗೆ ಹೋಗಿ ನೋಡಿದರೆ ನೂರಾರು ಹಕ್ಕಿಗಳು. Plum Headed Parakeet, Black Shouldered Kite, River terns, Malabar pied Horn bills,Spotted Dove,Myna birds ಹೀಗೆ ಎಷ್ಟೊಂದು ಹಕ್ಕಿಗಳು. ಹೆಚ್ಚಿನವು ನಮಗೆ ಯಾವುದೆಂದೇ ತಿಳಿಯಲಿಲ್ಲ. ಅವತ್ತು ಎಲ್ಲರಿಗು ಅನ್ನಿಸಿತ್ತು ಪಕ್ಷಿ ವೀಕ್ಷಣೆ ಮಾಡಬೇಕು ಅಂತ. ಹರ್ಷ ಅಂತು ಬೇಜಾರು ಮಾಡ್ಕೊಂಡಿದ್ದ.ಅವನ ಕ್ಯಾಮೆರಾ ಲೆನ್ಸ್ ಪಕ್ಷಿಗಳ ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದಂತಿರಲಿಲ್ಲ. "ಥೋ ನಂಗೆ ಬೆಜಾರಾಗ್ತಿದೆ ಕಣ್ರೋ.. ನಾಳೆ ಬೆಂಗಳೂರಿಗೆ ಹೋದ ತಕ್ಷಣ ಹೊಸ ಲೆನ್ಸ್ ತಗೊಳ್ತೀನಿ" ಅಂತ ಹೇಳ್ತಾನೆ ಇದ್ದ.
   ಹರ್ಷ: ಸಕತ್ತಾಗ್ ಬಂದಿದೆ ಕಣ್ರೋ sunset ಫೋಟೋ !!
   ತೇಜಸ್ : ತೋರಿಸು ತೋರಿಸು (ಮನಸಲ್ಲಿ ಇದಕ್ಕಿಂತ ಚನ್ನಾಗಿ ಬರತ್ತೆ ನನ್ ಕ್ಯಾಮೆರಾ ದಲ್ಲಿ !)
   ವಿನಾಯಕ : ನನ್ನ ಫೋನ್ ಅಲ್ಲಿ ತೆಗ್ದಿರೋ ಫೋಟೋ ಯಾರಿಗೇನು ಕಮ್ಮಿ ಇಲ್ಲ !!

 
ಸೂರ್ಯಾಸ್ತ
ಸಾಯಂಕಾಲವಾಯಿತು.ನೀರಲ್ಲಿ ಬಣ್ಣಗಳ ಪ್ರತಿಫಲನ. ಎಲ್ಲ ಹಕ್ಕಿಗಳಿಗೆ ಗೂಡು ಸೇರುವ ತವಕ. ರವಿ ಮುಳುಗಿದ. ಹೊತ್ತು ಮುಳುಗಿ ಕತ್ತಲಾದ  ಮೇಲೆ ನಾವೂ ಊರು ಸೇರಬೇಕ್ಕೆನುವ ಯೋಚನೆ ಬಂದಿದ್ದು. ಅಯ್ಯೋ ಹೋಗಬೇಕಲ್ಲ ಬೆಂಗಳೂರಿಗೆ ಅಂತ ಬೇಜಾರು ಮಾಡ್ಕೊಂಡೇ ಎಲ್ಲರೂ ಅಲ್ಲಿಂದ ಹೊರಟೆವು. ಬರುವಾಗ ಮಾತ್ರ ಹೊಸದೊಂದು ಹವ್ಯಾಸ ನಮ್ಮೊಳಗೆ ಮೊಳಕೆಯೊಡೆದಿತ್ತು. ಬೆಂಗಳೂರಿಗೆ ಬಂದ ತಕ್ಷಣ ಪಕ್ಷಿಗಳ ಬಗ್ಗೆ ಇರುವ ಸಲೀಂ ಅಲಿ ಅವರ "the book of Indian birds" ಎನ್ನುವ ಪುಸ್ತಕ ಕೊಂಡುಕೊಂಡೆ  ನಾನು. ವಿನಾಯಕ ದುರ್ಬೀನು ತೆಗೆದುಕೊಂಡ. ಹರ್ಷ ಮಾತ್ರ ಲೆನ್ಸ್ ಕೊಂಡುಕೊಳ್ಳಲೇ ಇಲ್ಲ. ಕೊನೆಗೆ ಅವನ ಮದುವೆಗೆ ಎಲ್ಲರೂ ಸೇರಿ ಲೆನ್ಸ್ ಅನ್ನೇ ಉಡುಗೊರೆಯಾಗಿ ಕೊಟ್ಟಿದ್ದು ಹಳೆಯ ವಿಷಯ.

Friday 1 April 2016

ಶಿರಸಿಯನ್ನರಸಿ - ಭಾಗ ೩

ಸಾತೊಡ್ಡಿ, ಮಾಗೋಡು ಜಲಪಾತ

ಚಾರ್ಮಾಡಿ ಚಾರಣಕ್ಕೆ ಹೋಗಿದ್ದಾಗ ಹರ್ಷನ ಹತ್ತಿರ ಕೇಳಿದ್ದೆ ಈ ಸಲ ಒಂದೂ ಜಲಪಾತಕ್ಕೆ ಕರೆದುಕೊಂಡು ಹೋಗಿಲ್ಲ ನೀನು ಅಂತ. ಅದನ್ನ ನೆನಪಿಟ್ಟುಕೊಂಡವನಂತೆ ಶಿರಸಿಗೆ ಹೋದಾಗ ಸಾಲು ಸಾಲು ಜಲಪಾತಗಳಿಗೇ ಕರೆದೊಯ್ದಿದ್ದ. ಹಸೆಹಳ್ಳ, ವಿಭೂತಿ ಆದಮೇಲೆ ಮರುದಿನ ಹೋಗಿದ್ದು ಸಾತೊಡ್ಡಿ ಮತ್ತೆ ಮಾಗೋಡಿಗೆ. ಕೊನೆಯಲ್ಲಿ ಜೇನುಕಲ್ಲು ಗುಡ್ಡದ ಸೂರ್ಯಾಸ್ತ.

ಸಾತೊಡ್ಡಿ ಜಲಪಾತ ತುಂಬಾ ಎತ್ತರವಾದದ್ದೇನೂ ಅಲ್ಲ.ಆದರೂ ಅಷ್ಟೊಂದು ಜನ ಬರಲು ಕಾರಣ ಅದರ ಸೌಂದರ್ಯ ಎಂದರೆ ಅತಿಶಯೋಕ್ತಿ ಆಗಲಾರದೇನೋ. ಎಷ್ಟೊಂದು ಚಲನಚಿತ್ರಗಳಲ್ಲಿ ಸಹ ಇದನ್ನು ನೋಡಬಹುದು. ಮಳೆಗಾಲದಲ್ಲಿ ಹತ್ತಿರ ಹೋಗುವುದು ಕಷ್ಟ. ಬೇಸಿಗೆಯಲ್ಲಿ ಮಾತ್ರ ಕಲ್ಲು ಬಂಡೆಗಳ ಸಹಾಯದಿಂದ ಜಲಪಾತವನ್ನು ತೀರ ಸಮೀಪಿಸಬಹುದು.ನಾವು ಹೋದಾಗ ಜನ ತುಂಬಿಕೊಂಡಿದ್ದರು. ಹೆಚ್ಚಾಗಿ ಯಾರೂ ಇಲ್ಲದೆ ಇರುವಂತಹಲ್ಲಿ ಹೋಗುತ್ತಿದ್ದ ನಮಗೆ ಅಷ್ಟೊಂದು  ಜನರನ್ನು ನೋಡಿ ಇಲ್ಲಿಂದ ಬೇಗ ಹೋಗೋಣವೆನಿಸಿತ್ತು.ನಾನು ಒಂದು  ಬಂಡೆಯ ಮೇಲೆ ಕುಳಿತು ಏನೋ ಬರೆಯುತ್ತಿದ್ದಾಗ ನನ್ನ ಲೇಖನಿ ನೀರಿನಲ್ಲಿ ಬಿದ್ದು ಬಿಟ್ಟಿತು.ಆಗ ಅಲ್ಲಿಗೆ ಬಂದ ಹರ್ಷ  ನಾನು ಬರೆದದ್ದನ್ನು ದೊಡ್ಡ  ದನಿಯಲ್ಲಿ ಓದಲು ಪ್ರಾರಂಭಿಸಿದ. ಸುಮಾರು ಹೊತ್ತಿನ ಅದೇ ಅವರೆಲ್ಲರಿಗೆ  ನಗೆಯ ವಸ್ತುವಾಗಿತ್ತು.  ಬಂದ ನೆನಪಿಗೆಂದು ಒಂದಷ್ಟು ಫೋಟೋ  ತೆಗೆದುಕೊಂಡು ಅಲ್ಲಿಂದ ಹೊರಟೆವು. 

ಜಲಪಾತದ ಒಂದು ನೋಟ 
ಸ್ಫಟಿಕ ಶುಭ್ರ ನೀರು 
                         
ತೇಜಸ್ ಮತ್ತವನ tripod
ವಿನಾಯಕನ ಮನೆಯಿಂದ ಊಟ ಕಟ್ಟಿಕೊಂಡು  ಬಂದಿದ್ದೆವು. ಸಾತೊಡ್ಡಿಯಿಂದ ವಾಪಾಸು ಬರುವಾಗ ದಾರಿಯಲ್ಲೆಲ್ಲೋ ಒಂದು ಬಸ್ ನಿಲ್ದಾಣ. ಹೆಗ್ಗಡೆ ಮನೆ ಅಂತೇನೋ ಬರೆದಿದ್ದ ನೆನಪು. ಅಲ್ಲಿ ಕುಳಿತು ಚನ್ನಾಗಿ ತಿಂದೆವು. ಜೊತೆಯಲ್ಲಿ ಪುನರ್ಪುಳಿ ಹಣ್ಣಿನ ರಸ ಬೇರೆ ಇತ್ತು. ಎಲ್ಲ ಮುಗಿಸಿ ಹೊರಡುವಾಗ ತಿಂದಿದ್ದು ಹೆಚ್ಚಾಗಿ ಕಣ್ಣು ಎಳೆಯುತ್ತಿತ್ತು ನನಗೆ. ಹೆಚ್ಚು ಹೊತ್ತೇನೂ ಮಲಗುವ ಅವಕಾಶ ಇರಲಿಲ್ಲ. ಸ್ವಲ್ಪ ಹೊತ್ತಲ್ಲೇ ಮಾಗೋಡು ಜಲಪಾತ ಬಂದೇ ಬಿಟ್ಟಿತ್ತು. ಮೆಟ್ಟಿಲುಗಳನ್ನೇರಿ ಹೋದರೆ ಸಾಕು, ದೂರದಿಂದ ಮಾಗೋಡು ಜಲಪಾತ ವೀಕ್ಷಿಸಬಹುದು.ಎಲ್ಲ ಕಡೆಯಿಂದಲೂ ಸುತ್ತುವರಿದ ಅಭೇದ್ಯ ಬಂಡೆಗಳು. ಅವುಗಳ ಮಧ್ಯದಲ್ಲಿ ಮೇಲಿಂದ ಜಾರುತ್ತಿರುವ ನೀರು. ಹತ್ತಿರ ಹೋಗಬೇಕಾದರೆ ಒಂದೇ ದಾರಿ, ನದಿಯಲ್ಲೇ ಬರಬೇಕು. ನಮ್ಮ ಗೆಳೆಯರಿಗೆಲ್ಲ  ಉತ್ಸಾಹ ಬಂದು "ಇದೊಂದು ಮಾಡಲೇಬೇಕು ಕಣ್ರೋ. ನದೀಲ್ಲಿ ಬಂದ್ರೆ ಜಲಪಾತ ಕಾಣತ್ತೆ. ಈ ಸಲ ಬೇಸಿಗೆ ಬರ್ಲಿ" ಅಂತೆಲ್ಲ ಅಲ್ಲೇ ನಿಂತು ನದಿಯ ಆಳ ಅಗಲ ಲೆಕ್ಕ ಹಾಕಲು ಶುರು ಮಾಡಿದರು.ನಾನು ಅವರ ಮಾತಿಗೆ ಮೂಕ ಪ್ರೇಕ್ಷಕಿ. 

ಮಾಗೋಡು ಜಲಪಾತ 
ಅಲ್ಲಿಂದ ಜೇನುಕಲ್ಲು ಗುಡ್ಡದ ಸೂರ್ಯಾಸ್ತ. ಅಲ್ಲೊಂದು ಆರಾಮಾಗಿ ಕುಳಿತುಕೊಂಡು ಸೂರ್ಯಾಸ್ತ ವೀಕ್ಷಿಸಲು ಅನುವಾಗುವಂತೆ ಮಾಡಿರುವ ಗೋಪುರ.ಚಾರ್ಮಾಡಿ ಹತ್ತಿರ ಜೇನುಕಲ್ಲು ಗುಡ್ಡ ಅಂತ ಕೇಳಿದ್ದು ನೆನಪಿತ್ತು. ಎಷ್ಟೊಂದು ಜೇನುಕಲ್ಲು ಗುಡ್ಡಗಳಿವೆ ಅಂತ ಯೋಚನೆ ಮಾಡ್ತಾ ಇದ್ದೆ ನಾನು. ಇನ್ನೂ ಸೂರ್ಯ ಮುಳುಗಲು ಸಮಯವಿತ್ತಾದ್ದರಿಂದ ಹರಟೆಯಲ್ಲಿ ಮುಳುಗಿದೆವು.ಶಿವಗಂಗಾ ಜಲಪಾತಕ್ಕೆ ನದಿ ದಡದಲ್ಲಿ ನಡೆದು ಎರಡು ದಿನಗಳ ಚಾರಣ ಮಾಡಿದ್ದು ನೆನಪಿಸಿಕೊಳ್ಳುತ್ತಾ, ಇಲ್ಲಿಂದಲೇ ಪ್ರಾರಂಭಿಸಿದ್ದು ನಮ್ಮ ಪ್ರಯಾಣ ಎಂದ ವಿನಾಯಕ. 


ಸೂರ್ಯ ಅಸ್ತಮಿಸಲು ತೊಡಗಿದ. ಹಸಿರಾಗಿ ಕಾಣುತ್ತಿದ್ದ ಬೆಟ್ಟಗಳೆಲ್ಲ ಕಪ್ಪಾಗತೊಡಗಿದವು. ಹರಿಯುತ್ತಿದ್ದ ಬೇಡ್ತಿ ನದಿ ಸೂರ್ಯನ ಬೆಳಕನ್ನು ಪೃಥಃಕ್ಕರಿಸುತ್ತ  ಬೆಂಕಿಯ ಬಣ್ಣದಲ್ಲಿ ಹೊಳೆಯುತ್ತಿತ್ತು.ನೀಲಾಕಾಶದಲ್ಲಂತೂ ಬಣ್ಣಗಳ ಜಾತ್ರೆ. ಎರಡು ಬೆಟ್ಟಗಳ ಮದ್ಯಕ್ಕೆ ಇಳಿಯತೊಡಗಿದ ನೇಸರನನ್ನು ಕಣ್ಣು ಮತ್ತು ಕ್ಯಾಮೆರಾ ಎರಡು ತುಂಬಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಚೆಂಡಿನಷ್ಟಿದ್ದ ಸೂರ್ಯ ಕಿತ್ತಳೆಯಷ್ಟಾಗಿ ಮತ್ತೆ ಅದರರ್ಧದಷ್ಟಾಗಿ, ಆಮೇಲೆ ಚುಕ್ಕೆಯಷ್ಟಾಗಿ ಕೊನೆಗೊಮ್ಮೆ ಕಣ್ಣಿಂದ ಮರೆಯಾಗಿ,ಆಕಾಶವೇ ಖಾಲಿಯಾಯಿತು. ಅಂದು ಮಾತನ್ನೂ ಮರೆತು ಅಭೂತಪೂರ್ವ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದೆವು ನಾವು. 



ಮಲೆಯ ಮಧ್ಯದಲಿ ಮರೆಯಾಗುವ ಮುನ್ನ
ಸಂದ್ಯಾರಾಗ
 ಇನ್ನೊಂದು ವಿಷಯ ಹೇಳಲು ಮರೆತಿದ್ದೆ ನಾನು. ಎರಡು ದಿನಗಳಿಗೆಂದು ಸಿರ್ಸಿ ಗೆ ಹೋಗಿದ್ದ ನಾವು ಇನ್ನೂ  ಒಂದು ದಿನ ಅಲ್ಲೇ ಉಳಿಯುವ ಯೋಚನೆ ಮಾಡಿದೆವು. ನನಗೆ ಹೇಗಿದ್ದರೂ ಕಾಲೇಜಿಗೆ ರಜ ಇತ್ತು. ಯಾವ ತೊಂದರೆಯೂ ಇರಲಿಲ್ಲ. ಹರ್ಷ ಸೋಮವಾರ ಬೆಳಿಗ್ಗೆ ಅವನ ಮ್ಯಾನೇಜರ್ ಗೆ ಕರೆಮಾಡಿ  ನಾನು ಊರಿಂದ ಬರುವಾಗ ಬಸ್ ಕೆಟ್ಟು ಹೋಗಿದೆ. ಏನು ಮಾಡಿದರೂ  ಬರುವುದು ಸಾಯಂಕಾಲ ಆಗುತ್ತದೆ ಎಂದ. ಅವರು ಉದಾರ  ಮನಸ್ಸಿನಿಂದ ಇವನ ರಜೆಯನ್ನು ಮಂಜೂರು ಮಾಡಿದರು. ವಿನಾಯಕ ಕರೆ ಮಾಡಲೇ ಇಲ್ಲ. ಆಮೇಲೆ ಏನು ಕಾರಣ ಕೊಟ್ಟ ಎಂದು ತಿಳಿಯಲಿಲ್ಲ. ತೇಜಸ್ ಮಾತ್ರ ನಾನು ಹೋಗ್ಬೇಕು, ನನ್ನ ಪ್ರಾಜೆಕ್ಟ್ ಮುಗಿದಿಲ್ಲ ಅಂತ ಗೋಳಾಡುತ್ತಿದ್ದ. ಆಮೇಲೆ ಒಂದು ಮೇಲ್ ಬರೆದು ಸುಮ್ಮನಾದ. ಅಂತೂ ಶಿರಸಿಯಲ್ಲಿ ಇನ್ನೂ ಒಂದು ದಿನ ಉಳಿಯಲು ಎಲ್ಲರಿಂದಲೂ  ಒಪ್ಪಿಗೆಯ ಮುದ್ರೆ ಬಿದ್ದಿತ್ತು. 

ಅವತ್ತು ಮಂಚಿಕೇರಿಯಲ್ಲಿರುವ ವಿನಾಯಕನ ಅಕ್ಕನ ಮನೆಗೆ ಹೋಗಿದ್ದೆವು.ಅಲ್ಲಿಂದ ಮನೆಗೆ ಬರುವಾಗ ರಾತ್ರಿ ೧೦ ದಾಟಿತ್ತು. ಊಟ ಮಾಡಿ ಹೊರಗೆ ಬಂದರೆ ಆಕಾಶದ ತುಂಬಾ ಕಿಕ್ಕಿರಿದ ಚಿಕ್ಕೆಗಳು. ಚಂದ್ರನಿರದ ರಾತ್ರಿ.ಎಷ್ಟೋ ನಕ್ಷತ್ರ ಪುಂಜಗಳ ಹೆಸರುಗಳನ್ನು ತಿಳಿಸಿದ ತೇಜಸ್.ಆಕಾಶ ಗಂಗೆಯು ಹರಿದ ದಾರಿಯನ್ನೂ ತೋರಿಸಿದ.ಮಧ್ಯರಾತ್ರಿಯ ವರೆಗೂ ನಕ್ಷತ್ರಗಳನ್ನು ನೋಡುತ್ತಾ ಕಳೆದೆವು.ಅಂದು ಎಷ್ಟೇ ಪ್ರಯತ್ನಿಸಿದರೂ ಒರಿಯನ್ ಪುಂಜ ಬಿಟ್ಟು ಬೇರೆ ಯಾವ ನಕ್ಷತ್ರಗಳೂ ಕ್ಯಾಮರಾಕ್ಕೆ ಸೆರೆಸಿಗಲಿಲ್ಲ.