Wednesday 30 March 2016

ಶಿರಸಿಯನ್ನರಸಿ -ಭಾಗ ೨

ವಿಭೂತಿ ಜಲಪಾತ

ಹಸೆಹಳ್ಳ ನೋಡಿ ನಂತರ ಹೋದದ್ದು ಯಾಣದ ಸಮೀಪವಿರುವ ಇರುವ ವಿಭೂತಿ ಜಲಪಾತ. ಚಿರಪರಿಚಿತವಿದು. ಹಾಗೆಂದೇ ಅಲ್ಲಿಗೆ ಹೋಗುವ ಮೊದಲು ಜನ ತುಂಬಿರುತ್ತಾರೆ ಅಂದುಕೊಂಡಿದ್ದೆ.ನಡೆದು ಸಾಗುವ ದಾರಿ ಹೆಚ್ಚಿರಲಿಲ್ಲ. ಕೆಲವು ನಿಮಿಷಗಳ ದಾರಿ ಸಾಗಿದ ಮೇಲೆ ವಿಭೂತಿ ಜಲಪಾತದ ಎದುರ ನಿಂತಿದ್ದೆವು. ನಮ್ಮಣ್ಣ ಬಿಟ್ಟು ಬೇರೆ ಯಾರೂ ಇರಲಿಲ್ಲ ಆದರೆ ಎಲ್ಲೆಡೆ ಗಾಜಿನ ಒಡೆದ ಬಾಟಲಿಗಳ ಚೂರು, ಪ್ಲಾಸ್ಟಿಕ್ ಚೀಲಗಳು, ಕಾಗದದ ಚೂರುಗಳು ಕಾಣುತ್ತಿದ್ದವು.

ವಿಭೂತಿ ಜಲಪಾತ 

ವಿನಾಯಕ ಜಲಪಾತದಡಿಯಲ್ಲಿ .. 
ಅಲ್ಲಿನ ಗಲೀಜು ನೋಡಿಯೇ ನನಗೆ ಬೇಜಾರಾಗಿತ್ತು . ನೀರಲ್ಲಿ ಆಟವಾಡುವ ಮನಸ್ಸು ಇರಲಿಲ್ಲ . ನನ್ನ ಗೆಳೆಯರೆಲ್ಲ ಪಕ್ಕದಲ್ಲಿದ್ದ ಬಂಡೆಯ ಮೇಲೆ ಹತ್ತಿ ನೀರು ಬೀಳುವ ಜಾಗಕ್ಕೆ ಹೋಗಿ ನಿಂತರು. ಅಲ್ಲಿ ಎಷ್ಟು ಜಾರುತ್ತಿತ್ತು ಎಂದರೆ ನನ್ನ ಕಾಲು ಸಣ್ಣಗೆ ನಡುಗುತಿತ್ತು . ಭಯವಾಗಿ ನಾನು ದೂರದಲ್ಲೇ ಉಳಿದೆ. ಸುತ್ತ ಮುತ್ತ ಒಮ್ಮೆ ತಿರುಗಿ, ಮುಂದೆ ಹರಿದ ಹೊಳೆಯನ್ನು ನೋಡುತ್ತಾ ಕುಳಿತೆ. ಸಂಜೆಯ ಸಮಯವಾಗುತಿತ್ತು. ಮೇಲಿಂದ ಕೆಳಗೆ ಇಳಿಯುವಾಗ ಹರ್ಷ ಜಾರಿ ಬಿದ್ದ. ಬಿದ್ದದ್ದು ಬಂಡೆಯ ಮೇಲೆ. ಅದನ್ನು ನೋಡಿ ಎಷ್ಟು ಗಾಬರಿ ಆಯಿತು ಎಂದರೆ ಈಗಲೂ ಆ ದೃಶ್ಯ ಕಣ್ಣಿಗೆ ಕಟ್ಟಿದಂತೆ ಇದೆ . ಅದೃಷ್ಟವಶಾತ್ ಏನು ಆಗಿರಲಿಲ್ಲ. ಅಲ್ಲಿಂದ ಹೊರಟು  ವಿನಾಯಕನ ಮನೆ ತಲುಪಬೇಕಿತ್ತು ನಾವು. 
ಸೂರ್ಯಾಸ್ತ 
ಸೂರ್ಯ ಅಸ್ತಮಿಸಲು ತನ್ನ ತಯಾರಿ ಮಾಡಿಕೊಳ್ಳುತ್ತಿದ್ದ. ಯಾವುದೋ ಘಾಟಿಯ ಮದ್ಯದಲ್ಲಿ ನಿಂತು ಸೂರ್ಯಾಸ್ತ ನೋಡಿದೆವು. ಶಿರಸಿ ತಲುಪುವಾಗ ರಾತ್ರಿ ಆಗಿತ್ತು. ಅಲ್ಲಿಂದ ಬಿಸಿಲುಕೊಪ್ಪಕ್ಕೆ ಇನ್ನೊಂದು ಬಸ್. ನಂಗೆ ತುಂಬಾ ನಿದ್ರೆ ಬರುತಿತ್ತು. ವಿನಾಯಕನ ಮನೆ ತಲುಪುವಾಗ ೧೦ ಗಂಟೆಯ ಸುಮಾರು. ಎಲ್ಲರ ಜೊತೆ ಮಾತನಾಡುತ್ತಾ ಉಟವಾಯಿತು. ನಾನು ಬೆಚ್ಚಗೆ ಮಲಗಿ ನಿದ್ರೆ ಮಾಡಿದೆ. ಹೊರಗಿಂದ ಅಡಿಕೆ ಒಲೆಯ ಮುಂದೆ ಚಳಿ ಕಾಯಿಸುತ್ತಾ ಎಲ್ಲರೂ  ಮಾತನಾಡುತ್ತಿದ್ದದ್ದು ಕೇಳಿಸುತ್ತಿತ್ತು. 

Tuesday 29 March 2016

ಶಿರಸಿಯನ್ನರಸಿ- ಭಾಗ ೧

ಹಸೆಹಳ್ಳ ಜಲಪಾತ 

ಜನವರಿ ೨೦೧೫ರ ಶುಕ್ರವಾರ. ಗೆಳೆಯರೆಲ್ಲ ವಿನಾಯಕನ ಮನೆಗೆ ಹೋಗುವುದೆಂದು ನಿರ್ಧಾರವಾಗಿತ್ತು. ಕೊನೆಯಲ್ಲಿ ಗಳಿಗೆಯಲ್ಲಿ ಹೊರಟಿದ್ದು ಮಾತ್ರ ನಾನು,ಶ್ರೀಹರ್ಷ ,ತೇಜಸ್ ಮತ್ತೆ ವಿನಾಯಕ.ನನ್ನದು ಮೊದಲ ಬಾರಿಯ ಶಿರಸಿ ಪ್ರಯಾಣವಾಗಿತ್ತು.ಶಿರಸಿ ತಲುಪಿದಾಗ ಮರುದಿನ ಬೆಳಗ್ಗೆ ಸುಮಾರು ೭:೩೦. ಅಲ್ಲಿಂದ ಹತ್ತಿರದಲ್ಲೇ ಇದ್ದ ಹೋಟೆಲ್ ಒಂದರಲ್ಲಿ ತಿಂಡಿ ತಿಂದು ಹಸೆಹಳ್ಳ ಜಲಪಾತ ನೋಡಲು, ಮೊದಲೇ ಹೇಳಿ ಕರೆಯಿಸಿಕೊಂಡಿದ್ದ ವಾಹನದಲ್ಲಿ (Omni)  ಹೊರಟೆವು. 

ಆ ಜಲಪಾತ ಹೇಗಿರಬಹುದೆಂಬ ಕಲ್ಪನೆಯೂ ಇರಲಿಲ್ಲ ನನಗೆ. ಯಾರಿಗೂ ಇರಲಿಲ್ಲವೇನೋ. ಶಿರಸಿಯಿಂದ ಹೋರಾಟ ನಾವು ಸೇರಿದ್ದು ಹವ್ಯಕರೊಬ್ಬರ ಮನೆಗೆ. ನಾವು ಬರುವ ಮೊದಲೇ ಆ ಮನೆಯ ಗೇಟಿನ ಬಳಿ ಕಾಯುತ್ತ ನಿಂತಿದ್ದ ಮಹಿಳೆಯೊಬ್ಬರು ನಮ್ಮನ್ನು ಆದರದಿಂದ ಉಪಚರಿಸಿದರು.  ಅವರ ತೋಟದಂಚಿನಲ್ಲಿ ಇದ್ದದ್ದು ಈ ಜಲಪಾತ.ಸ್ವಲ್ಪ ಹೊತ್ತಿನಲ್ಲೇ ಅದು ನಮ್ಮ ಮುಂದೆ ತೆರೆದುಕೊಳ್ಳಲಿತ್ತು. ನಾವು ಆ ಅದ್ಭುತವನ್ನು ಕಣ್ಣು ತುಂಬಿಕೊಳ್ಳಲಿದ್ದೆವು.



ತೋಟ ಇಳಿದು ಜಲಪಾತ ಸಮೀಪಿಸಿದಾಗ,ಕಂಡ ದೃಶ್ಯ ನಯನಮನೋಹರವಾಗಿ ಕಾಣುತ್ತಿತ್ತು. ಅದೊಂದು ಅವರ್ಣನೀಯ ದೃಶ್ಯ. ನಾವು ಹೋಗಿದ್ದು ಜನವರಿ ಸಮಯ. ಮಳೆಗಾಲದ ರೌದ್ರತೆ ಇರಲಿಲ್ಲ. ಮೂರು ಮಜಲುಗಳಲ್ಲಿ ಎತ್ತರದಿಂದ ಬೀಳುತ್ತಿದ್ದ ಹಸೆಹಳ್ಳಕ್ಕೆ, ಸುತ್ತಲೂ ಕವಿದಿದ್ದ ಹಸಿರು, ನಿರ್ಜನತೆ ಹಾಗೂ ನಿಶ್ಯಬ್ದತೆ ಇನ್ನಷ್ಟು ಶೋಭೆ ನೀಡಿತ್ತು.ಅಲ್ಲಿ ಇದ್ದದ್ದು ನಾವು ಮತ್ತೆ ನಮ್ಮೊಡನೆ ಆ ಜಲಧಾರೆ  ಮಾತ್ರ. 
ಜಲಪಾತದ ದೂರ ದೃಶ್ಯ
ಈಜು ಬರದ ಕಾರಣ ನಾನು ಹೆಚ್ಚೇನೂ ನೀರಿನಲ್ಲಿ ಆಟವಾಡಲಿಲ್ಲ. ಅಲ್ಲೊಂದು ಸುಂದರ ರೆಪ್ಪೆ ಚಿಟ್ಟೆ (ಡ್ರ್ಯಾಗನ್ ಫ್ಲೈ)   ಇತ್ತು.ಹಸಿರು ಬಣ್ಣಕ್ಕಿದ್ದ ಅದು ನೋಡುತ್ತಿದ್ದಂತೆ ನೀಲಿ ಬಣ್ಣಕ್ಕೆ ತಿರುಗಿತು. ಹಸಿರಿನಿಂದ ನೀಲಿಗೆ , ನೀಲಿಯಿಂದ ಹಸಿರಿಗೆ ಬಣ್ಣ ಬದಲಿಸುತ್ತಿದ್ದ ಅದನ್ನು ನೋಡಿ ರೆಪ್ಪೆ ಚಿಟ್ಟೆ ಲೋಕದ ಊಸರವಳ್ಳಿ ಎಂದು ಕರೆದಿದ್ದ ತೇಜಸ್.
ರೆಪ್ಪೆ ಚಿಟ್ಟೆ (ಡ್ರ್ಯಾಗನ್ ಫ್ಲೈ )
ಇಲ್ಲೂ ಒಂದಷ್ಟು ಛಾಯಾಚಿತ್ರಗಳ ಸೆರೆ ಹಿಡಿದು , ಮದ್ಯಾಹ್ನ ಊಟದ ಹೊತ್ತಿಗೆ ಆ ತೋಟದ ಮನೆಗೆ ಹಿಂದಿರುಗಿದೆವು.ಅಲ್ಲೇ ನಮ್ಮ ಊಟವಾಯಿತು. ಅವರಿಗೆ ಧನ್ಯವಾದದ ಜೊತೆ ವಿದಾಯ ಹೇಳಿ ನಮ್ಮ ಪ್ರಯಾಣ ಮುಂದುವರಿಸಿದೆವು. 

Wednesday 2 March 2016

ಮಲೆನಾಡಿಗೆ ಬಾ...

ಬೆಂಗಳೂರಿನಲ್ಲಿ ಕುಳಿತುಕೊಂಡು ತೀರ್ಥಹಳ್ಳಿಯ ಮಳೆಗಾಲ ನೆನಪಿಸಿಕೊಳ್ಳುತ್ತಿದ್ದೇನೆ.ಯಾವತ್ತೂ ನೆನಪುಗಳ ನಡುವೆ ಕಳೆದುಹೋಗುವುದು ಅದೆಷ್ಟು ಚಂದ. ಮೊನ್ನೆ ಮೊನ್ನೆ ಮನೆಗೆ ಹೋಗಿ ಬಂದಿದ್ದೆ. ಅಲ್ಲಿ ಬಿಟ್ಟು ಬಿಡದೆ ಸುರಿಯುವ ಮಳೆ. ಇಲ್ಲಿಗೆ ವಾಪಸಾದ ಮೇಲೆ ಇಲ್ಲಿ ಮಳೆಯೇ ಇಲ್ಲ. ಆಗೊಮ್ಮೆ ಈಗೊಮ್ಮೆ ಇದು ಮಳೆಗಾಲ ಎಂದು ನೆನಪಿಸಲು ಭರ್ರ್ ಎಂದು ಸುರಿದು ಸುಮ್ಮನಾಗುತ್ತಾನೆ ಮಳೆರಾಯ.ಆದರೆ ನಮ್ಮ ಮಲೆನಾಡಿನಲ್ಲಿ ಹಾಗಲ್ಲ.ಅಲ್ಲಿಯ ಬದುಕು ಮಳೆಯೊಂದಿಗೆ ಬೆರೆತಿದೆ. ಮಲೆನಾಡನ್ನು ಮಳೆನಾಡು ಎಂದರೂ ತಪ್ಪಾಗಲಾರದು. ಕುವೆಂಪು ಕಥೆಗಳಲ್ಲಿ ಬರುವ ಮಳೆಗಾಲದ ವರ್ಣನೆ ಓದುವಾಗ ಮೈ ನವಿರೇಳುತ್ತದೆ. ಸಹ್ಯಾದ್ರಿ ಪರ್ವತಗಳ ಸಾಲು,ನಿತ್ಯ ಹರಿದ್ವರ್ಣ ಕಾಡುಗಳು,ಜಲಪಾತಗಳು..ಏನಿಲ್ಲ ಮಲೆನಾಡಿನಲ್ಲಿ!! ಅದಕ್ಕೇ ಏನೋ ಕುವೆಂಪು "ಮಲೆನಾಡಿಗೆ ಬಾ ನಾನಿಹೆನಿಲ್ಲಿ " ಎಂದು ಕರೆದದ್ದು. ಆದರೂ ಇತ್ತೀಚಿನ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಿ ಮಳೆ ಕಡಿಮೆಯಾಗಿರುವುದು ವಿಪರ್ಯಾಸ.

ಏಪ್ರಿಲ್, ಮೇ ತಿಂಗಳು ಬಂತೆಂದರೆ ಬೇಸಿಗೆ ಕಾಲ.ಸುಡು ಬಿಸಿಲು.ಆ ಬಿಸಿಲಿನ ಝಳಕ್ಕೆ ಬಾವಿ,ಕೆರೆಗಳೆಲ್ಲ ಬತ್ತಿ ಮಳೆರಾಯನಿಗೆ ಕಾಯುವ ಸಮಯ. ಈಗ ನೆನಪಿಸಿಕೊಂಡರೆ ಬೇಸಿಗೆ ಅಸಹನೀಯ ಎನಿಸುತ್ತದೆ. ಆದರೆ ಆಗ ಬೇಸಿಗೆ ರಜೆಯ ಸಮಯ.ಮೇ ತಿಂಗಳಲ್ಲಿ ಆಗಾಗ  ಗುಡುಗು ಬಿಸಿಲಿನ ಸಹಿತ ಮಳೆಯಾಗುತ್ತದೆ.ಭೂಮಿಯೆಲ್ಲಾ ತಂಪು ತಂಪು. ಅಲ್ಲಲ್ಲಿ ಹೂವುಗಳರಳಿ  ನಿಲ್ಲುತ್ತವೆ. ನಮ್ಮ ಮನೆಯ ಸುತ್ತಲೂ ಇದ್ದ ಮೈಸೂರು ಮಲ್ಲಿಗೆಯ ಬಳ್ಳಿಗಳು ಒಂದೆರಡು ಮಳೆಯಾದರೆ ಸಾಕು  ಮೈತುಂಬಿ ಮೊಗ್ಗಾಗುತ್ತವೆ. ಆಮೇಲೆ ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದಂತೆ ಎಲೆಗಳೇ ಕಾಣದಷ್ಟು ಹೂವುಗಳು.ಅತ್ತ ಸುಳಿದರೆ ಸಾಕು ಘಮ್ಮೆನುವ ಸುವಾಸನೆ.ಅವುಗಳನ್ನು ಕಟ್ಟಿ ಮುಡಿಯುವುದೊಂದು ಸಂಭ್ರಮ.

ಮುಂದೆ ಬರುವುದು ಮಳೆಗಾಲ ಎಂದು ಘೋಶಿಸುವುದಕ್ಕೇನೋ ಮುಂಗಾರು ಮಳೆಯಾಗುವುದು.ಮಳೆಗಾಲಕ್ಕೆ ಎಲ್ಲರ ತಯಾರಿಯೂ ಭರ್ಜರಿಯಾಗೇ ಇರುತ್ತದೆ.ಹಲಸಿನ ಹಪ್ಪಳ ಮಾಡಿಟ್ಟುಕೊಳ್ಳುವುದು,ಗೇರು ಬೀಜ ಸಂಗ್ರಹಿಸಿಟ್ಟುಕೊಳ್ಳುವುದು,ಒಲೆ ಉರಿ ಹಾಕುವುದಕ್ಕೆ ಬೇಕಾದ ಕಟ್ಟಿಗೆ, ಹಾಳೆ,ತೆಂಗಿನ ಗರಿ,ಗರಟ ಎಲ್ಲವನ್ನು ಕೂಡಿಟ್ಟುಕೊಳ್ಳುವುದು ಹೀಗೆ ಸಾಗುತ್ತದೆ ಮಳೆಯ ಸ್ವಾಗತಿಸುವ ಪರಿ.ಬೇಸಿಗೆಯಲ್ಲಿ ಯಾರಿಗಾದರೂ ಎಂತ ಕೆಲಸ ಅಂತ ಕೇಳಿ ನೋಡಿ ! ಕಟ್ಟಿಗೆ ಕಡಿಯುವುದು,ದರಗು ಗುಡಿಸುವುದು ಇಲ್ಲ ಹಪ್ಪಳ ಮಾಡ್ತಿದೀವಿ ಅಂತನೋ ಹೀಗೆ ಏನಾದ್ರೂ ಇರತ್ತೆ ಅವರ ಉತ್ತರ.

ಜೂನ್ ನಿಂದ ಸೆಪ್ಟೆಂಬರ್ ವರೆಗೂ ಬಿಟ್ಟೂ ಬಿಡದೆ ಸುರಿಯುವ ಮಳೆಯದು.ಇವತ್ತಿಗೂ ಮಳೆಗಾಲ ಎಂದರೆ ಅನಿರ್ವಚನೀಯ ಆನಂದ. ಪ್ರತಿ ಮಳೆಗಾಲವೂ ನನ್ನ ನೆನಪಿನ ಬುತ್ತಿಗೆ  ತನ್ನ ಕೊಡುಗೆಯನ್ನು ನೀಡುತ್ತಲೇ ಬರುತ್ತಿವೆ. ಮಳೆಯ ಮೊದಲ ಹನಿಗಳು ಭೂಮಿಗೆ ತಾಕಿದಾಗ ಬರುವ ಸುವಾಸನೆಯನ್ನು ಹಿಡಿದಿಟ್ಟುಕೊಳ್ಳುವ ಹಾಗಿದ್ದರೆ ಎಂದು ಎಷ್ಟೋ ಬಾರಿ ಅನಿಸಿದ್ದಿದೆ. ಆಮೇಲೆ ಹರಿದ್ವರ್ಣ ಪರ್ಣ ಗಳ ಮೆರವಣಿಗೆ. ಅಲ್ಲಲ್ಲಿ ಸಣ್ಣ ಸಣ್ಣ ಜಲಧಾರೆಗಳು. ಬೇಸಿಗೆಯಲ್ಲಿ ಉಸಿರೇ ಇಲ್ಲದೆ ಮಲಗುವ ಇವು ಮಳೆಗಾಲದಲ್ಲಿ ಮೈದುಂಬಿದಾಗ  ನೋಡಲು ಸೊಗಸು.

ಜೂನ್  ಬಂದರೆ ಮಳೆಗಾಲ ಜೊತೆಗೆ ನಮಗೆ ಶಾಲೆ ಪ್ರಾರಂಭ.ಮಳೆಗಾಲದಲ್ಲಿ ಶಾಲೆಗೆ ಹೋಗುವುದು ದೊಡ್ಡ ಪಡಿಪಾಟಲು ನಮಗೆ. ಸಾಹಸಗಾಥೆಯದು. ಪಾಚಿ ಕಟ್ಟಿ ಜಾರುವ ದಾರಿಯಲ್ಲಿ ಎದ್ದು ಬಿದ್ದು ನಡೆಯುತ್ತಾ ,ಬಿಳಿ ಬಣ್ಣದ ಕಾಲುಚೀಲಗಳನ್ನು ಕೆಂಪಗೆ ಮಾಡಿಕೊಂಡು ದಾರಿಯಲ್ಲಿ  ಸಿಗುವ ಏಡಿ, ಹಾವುಗಳಿಂದ ತಪ್ಪಿಸಿಕೊಂಡು ಮುನ್ನಡೆಯುತ್ತಿದ್ದೆವು.ನಾವು  ಹೆದರುತ್ತಿದ್ದುದು ಇಂಬಳಗಳಿಗೆ.ಈ ರಕ್ತ ದಾಹಿಗಳ ಕಾಟ ತಡೆಯುವಂತಿರಲಿಲ್ಲ.ಛತ್ರಿ, ಹೊಸ ಪುಸ್ತಕಗಳು, ಒಮ್ಮೊಮ್ಮೆ ಹೊಸ ಸಮವಸ್ತ್ರ ಎಲ್ಲ ಜೋಡಿಸಿಕೊಂಡು ಶಾಲೆಗೆ ಹೊರಟರೆ ಯಾಕಾದರೂ ಈ ಮಳೆ ಬರುತ್ತದೆಯೋ ಎನ್ನಬೇಕು. ಬಟ್ಟೆ ಎಲ್ಲ ಒದ್ದೆ. ಹೊಸ ಪುಸ್ತಕಗಳೂ ಅಷ್ಟೇ ನೀರಲ್ಲಿ ಅದ್ದಿ ತೆಗೆದಂತೆ. ಸ್ಲೇಟಿನಲ್ಲಿ ಬರೆದಿದ್ದ ಮನೆಕೆಲಸ ಎಷ್ಟೋ ಬಾರಿ ಒರೆಸಿ ಹೋಗಿರುತ್ತಿತ್ತು.ಅದಕ್ಕೊಂದು ಬೈಗುಳ ತಿಂದು ಒಂದು ಮೂಲೆಯಲ್ಲಿ ನಡುಗುತ್ತ ಕುಳಿತು ಪಾಠ ಕೇಳುವುದು. ಬಟ್ಟೆ ಒಣಗಿತು ಎನ್ನುವಷ್ಟರಲ್ಲಿ ಸಾಯಂಕಾಲ ಆಗಿರುತ್ತಿತ್ತು. ಮತ್ತೆ ಮನೆಗೆ ಹೋಗುವಷ್ಟರಲ್ಲಿ ಬಟ್ಟೆ ನೆನೆದಿರುತಿತ್ತು. ಮನೆಗೆ ಹೋದಮೇಲೆಯಾದರೂ ಬೆಚ್ಚಗಿನ ವಸ್ತ್ರ ಸಿಗುವುದೆಂಬ ಖಾತ್ರಿ ಇಲ್ಲ. ಬಿಸಿಲೇ ಇಲ್ಲದೆ ಬಟ್ಟೆ ಒಣಗುವ ಮಾತೆಲ್ಲಿ?ಒಲೆ ಮೇಲೆ ಇಟ್ಟುಕೊಂಡು ಒಂದೊಂದು ಸಲ ಒಣಗಿಸಿಕೊಳ್ಳುತ್ತಿದ್ದೆವು. ಆದರೆ ಹೇಗಿದ್ದರೂ ಮತ್ತೆ ಮಳೆಗೆ ಇಳಿಯುವುದು ನಿಜವೇ.

ಗುಡ್ಡ,ತೋಟಗಳನ್ನು ದಾಟಿ ಮುನ್ನಡೆಯುವಾಗ ಮಧ್ಯದಲ್ಲಿ ಸಣ್ಣ ಸಣ್ಣ ಹಳ್ಳಗಳು ಅಥವಾ ಸಣ್ಣಗೆ ನೀರು ಹರಿಯುವ ದಾರಿ. ಮಳೆಗಾಲದಲ್ಲಿ  ತುಂಬಿ, ಸಂಭ್ರಮದಿಂದ ಹರಿಯುವ ಅವುಗಳ ಆರ್ಭಟ ನೋಡಬೇಕು. ಕಾಲು ಜಾರಿ ಹಳ್ಳದಲ್ಲಿ ಬಿದ್ದರೆ ಮೇಲೆ ಬರುವುದು ಕಷ್ಟ.ಅದೊಂದು ಮಹಾಯಾನ.ನಾನು ಎಷ್ಟೋ ಸಾರಿ ಬಿದ್ದಿದ್ದೆನಾದರೂ ಅವೆಲ್ಲ ಬೇಸಿಗೆಯಲ್ಲಿ. ಒಂದು ಕೈಯಲ್ಲಿ ಛತ್ರಿ,ಇನ್ನೊಂದು ಕೈಯಲ್ಲಿ ಊಟದ ಡಬ್ಬಿ,ನೀರಿನ ಬಾಟಲಿ,ಜೊತೆಗೆ ಶಾಲೆಯ ಬ್ಯಾಗ್ ಬೆನ್ನಿನಲ್ಲಿ  ಹೊತ್ತುಕೊಂಡು, ಇಂಬಳಗಳಿಂದ ಕಾಪಾಡಿಕೊಳ್ಳುತ್ತ ಮುನ್ನಡೆಯುವ ಕಾರ್ಯ ಹೇಳುವಷ್ಟು ಸುಲಭವಾಗಿರಲಿಲ್ಲ.

ಇದೆಲ್ಲ ಮಲೆನಾಡಿಗರಿಗೆ ಸಿಗುವ ಅಪರೂಪದ ಅನುಭವ. ನಮ್ಮ ತೀರ್ಥಹಳ್ಳಿಯ ಜೀವನದಿ ತುಂಗೆ. ಗಂಗಾ ಸ್ನಾನ ತುಂಗಾ ಪಾನ ಎನ್ನುವ ನಾಣ್ನುಡಿಯಂತೆ ಅದರ ನೀರು ಕುಡಿಯಲು ಸವಿ . ತುಂಗೆಯ ತಟದಲ್ಲಿ ರಾಮೇಶ್ವರ ದೇವಸ್ಥಾನ. ನದಿಯ ಮದ್ಯದಲ್ಲಿ ರಾಮನಕೊಂಡ ಇದೆ. ಪರಶುರಾಮ ತನ್ನ ತಾಯಿ ರೇಣುಕೆಯ ತಲೆ ಕತ್ತರಿಸಿದ ಮೇಲೆ ತನ್ನ ಕೊಡಲಿಗೆ ಅಂಟಿದ ರಕ್ತದ ಕಲೆಯನ್ನು ಎಲ್ಲಿ ತೊಳೆದರೂ ಹೋಗಲಿಲ್ಲವಂತೆ. ತುಂಗಾ ನದಿಯಲ್ಲಿ ತೊಳೆದಾಗ ಅಂಟಿದ ರಕ್ತದ ಕಲೆ ಮಾಯವಾಯಿತೆಂದು ಪ್ರತೀತಿ ಇದೆ. ಈ ಜಾಗವೇ ರಾಮನಕೊಂಡ.ಎಳ್ಳಮವಾಸ್ಯೆಯ ಸಮಯದಲ್ಲಿ ಇಲ್ಲಿ ಭಕ್ತಾದಿಗಳು ಸ್ನಾನ ಮಾಡುತ್ತಾರೆ.ರಾಮನಕೊಂಡದ ಪಕ್ಕದ ಒಂದು ಬಂಡೆಯ ಮೇಲೆ ಇರುವುದು ರಾಮ ಮಂಟಪ. ಇದು ಪೂರ್ತಿಯಾಗಿ ಮುಳುಗಿದಾಗ ನೆರೆ ಬಂದಿದೆ ಎಂದರ್ಥ. ೮೪ ಅಡಿಗಿಂತಲೂ ಹೆಚ್ಚು ನೀರು ಇರುತ್ತದೆ ನದಿಯಲ್ಲಿ ಆಗ. 

ಮಳೆಗಾಲದ ಪ್ರತಿದಿನವೂ ನಮ್ಮದು ಒಂದೇ ಬೇಡಿಕೆ, ರಾಮ ಮಂಟಪ ಮುಳುಗಲಿ ಎಂದು. ಅದು ಮುಳುಗಿದಾಗ ಎಲ್ಲ ಕಡೆ ರಸ್ತೆಯಲ್ಲಿ ನೀರು. ಆಗ ನಮಗೆ ಶಾಲೆಗೆ ಹೆಚ್ಹು ಕಡಿಮೆ ಮೂರು ದಿನಗಳ ರಜೆ ದೊರಕುತ್ತಿತ್ತು. ಬೇರೆ ಬೇರೆ ಹಳ್ಳಿಗಳಿಂದ ತೀರ್ಥಹಳ್ಳಿ ತಲುಪಲು ಬಸ್ ವ್ಯವಸ್ತೆ ಇರುತ್ತಿರಲಿಲ್ಲ. ಶಿವಮೊಗ್ಗೆ ಯಿಂದ ತೀರ್ಥಹಳ್ಳಿಗೆ, ಆಗುಂಬೆಯಿಂದ ತೀರ್ಥಹಳ್ಳಿಗೆ ಬರುವ ಬಸ್ ಗಳೆಲ್ಲವೂ ಸ್ಟಾಪ್. ದ್ವೀಪದಂತಾಗುತ್ತಿತ್ತು ನಮ್ಮೂರು. ಅಂತೂ ಬೆಚ್ಚಗೆ ಮನೆಯಲ್ಲಿರುತ್ತಿದ್ದೆವು. ಆಗ ನಾ. ಡಿಸೋಜ ಅವರ ಆನೆ ಬಂತೊಂದಾನೆ ಎನ್ನುವ ಮಕ್ಕಳ ಕಾದಂಬರಿ ಓದುತ್ತಿದ್ದೆ. ಅದರಲ್ಲಿ ಮಳೆ ಹೆಚ್ಚಾಗಿ ಶಾಲೆಯಲ್ಲೆಲ್ಲ ನೀರು ಬಂದು ರಜೆ ಘೋಷಿಸುತ್ತಾರೆ. ತುಂಗೆಯಲ್ಲಿ ನೀರು ಎಷ್ಟಿದೆ ಅಂತ ಮಕ್ಕಳು ನೋಡೋಕೆ ಹೋಗುವುದು ಮೊದಲಾದ ಸನ್ನಿವೇಶಗಳು ಬರುತ್ತದೆ. ನಮ್ಮ ಶಾಲೆಯಲ್ಲೂ ಮಳೆ ಹೆಚ್ಚಾದಾಗ ಸಭಾಭವನ ಕಾಲು ಮುಚ್ಚುವಷ್ಟು ನೀರಿನಿಂದ ತುಂಬಿರುತ್ತಿತ್ತು. ನಾವೂ ತುಂಗೆಯ ಸೆಳವು ಎಷ್ಟಿದೆ ಅಂತ ನೋಡೋಕೆ ಹೋಗುತ್ತಿದ್ದೆವು. ಬೆಳಗ್ಗೆ ಎದ್ದು ರೇಡಿಯೋ ಹಾಕಿಕೊಂಡು ,ಶೃಂಗೇರಿ ತೀರ್ಥಹಳ್ಳಿ ಸುತ್ತ ಮುತ್ತ ಭಾರಿ ಮಳೆಯಾಗುತ್ತಿದ್ದು ಶಾಲಾ ಕಾಲೇಜು ಗಳಿಗೆ ರಜೆ ಘೋಷಿಸಲಾಗಿದೆ ಎಂಬ ಸುದ್ದಿ ಬಿತ್ತರಿಸುವರೇನೋ ಎಂದು  ಕಾಯುತ್ತಿದ್ದೆವು. 

ಜೋರಾಗಿ ಸುರಿಯುವ ಮಳೆ ಹೊರಗೆ, ಬೆಚ್ಚಗೆ  ಓಲೆ ಮುಂದೆ ಕೂತು ಗೇರು ಬೀಜ ಸುಟ್ಟುಕೊಂಡು ತಿನ್ನುವ ಸಂಭ್ರಮ, ಹಲಸಿನ ಕಾಯಿ ಹಪ್ಪಳ ಜೊತೆಗೆ ತುರಿದ ತೆಂಗಿನ ಕಾಯಿಯ ಹೂವು , ಪತ್ರೊಡೆ, ಕಳಲೆ ಪಲ್ಯ ಆಹಾ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತಿದೆ. ಮುಂದಿನ ಮಳೆಗಾಲಕ್ಕಾಗಿ ಕಾಯುತ್ತಿದ್ದೇನೆ..



ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ..