Monday 12 May 2014

ಅರಮನೆ ತೋಟದಲ್ಲಿ..

ಇಂಜಿನಿಯರಿಂಗ್ ಮುಗಿಸಿಕೊಂಡು ಯಾವ ಯೋಚನೇನೂ ಇಲ್ದೆ ,ಎನೂ ಕೆಲಸ ಇಲ್ದೆ  ಮನೆಯಲ್ಲಿ ಕೂತಿದ್ದೆ. ಮಳೆಗಾಲದ ದಿನಗಳವು.ಅಮ್ಮ ಹಾಸ್ಟೆಲ್ ನಿಂದ ಬಂದ ಮೊದಲೆರಡು ದಿನಗಳು ಚನ್ನಾಗಿ ನೋಡಿಕೊಂಡರು (ಯಾವ ಕೆಲಸವನ್ನೂ ಹೇಳದೆ..!!). ಆಮೇಲೆ ಅಡಿಗೆ ಕಲಿ,ಹೊಸ್ಲಿಗೆ ರಂಗೋಲಿ ಹಾಕು,ನಂಗೆ ಕೆಲಸ ಮಾಡ್ಕೊಡು ಅಂತೆಲ್ಲ  ಹೇಳೋಕೆ ಶುರು ಮಾಡಿದ್ರು.ಹೇಳಿದ ಕೆಲಸ ಮಾಡಿಲ್ಲ ಅಂದ್ರೆ "ಅಯ್ಯೋ ನಾನು ನಿನ್ನ ಒಳ್ಳೇದಕ್ಕೆ ಹೇಳೋದು. ನಾಳೆ ಮದ್ವೆ ಆದ್ಮೇಲೆ ಇದೆಲ್ಲ ಕೆಲಸ ಮಾಡಬೇಕಲ್ವ?.ಎಲ್ಲ ಕೆಲಸ ಕಲ್ತಿರ್ಬೇಕು ಹೆಣ್ಣುಮಕ್ಕಳು. ಇಲ್ಲಾಂದ್ರೆ ನಿಮ್ಮಮ್ಮ ಇದೇ ಕಲ್ಸಿದ್ದ ಅಂತ ನಂಗೆ ಬೈತಾರೆ"  ಅಂತ ರಗಳೆ ಶುರು ಮಾಡ್ತಿದ್ರು. ಇನ್ನೇನು ಬೇಜಾರಾಗಿ ವಿರಕ್ತಿ ಹುಟ್ಟಬೇಕು ಜೀವನದಲ್ಲಿ,ಅಷ್ಟರಲ್ಲಿ  ಚಿಕ್ಕಮ್ಮ ಫೋನ್ ಮಾಡಿ "ಮನೇಲಿ ಒಬ್ಳೆ ಕೂತ್ಕೊಂಡು ಏನ್ಮಾಡ್ತಿ.?ಬಾ ನಮ್ಮನೆಗೆ. ಎಲ್ಲ ಕಡೆ ಸುತ್ತಬಹುದು" ಅಂತ ಕರೆದರು. ವೈದ್ಯ ಹೇಳಿದ್ದು ಹಾಲು ಅನ್ನ ,ರೋಗಿ ಬಯಸಿದ್ದು ಹಾಲು ಅನ್ನ ಅನ್ನೋ ಹಾಗೆ ನಂಗು ಅದೇ ಬೇಕಾಗಿತ್ತು. ತಕ್ಷಣ ಹೊರಟೆ ಅವರೂರ ಕಡೆಗೆ.

ಮಳೆಗಾಲದಲ್ಲಿ ಮಲೆಕಾಡು  ಹೇಗಿರುತ್ತದೆ ಎಂದರೆ ಯಾರೋ ಆಗಷ್ಟೇ ರಂಗೋಲಿ ಬಿಡಿಸಿ ಬೇರೆ ಬಣ್ಣ ಹಾಕಲು ಮರೆತು ಬರೀ ಹಸಿರನ್ನೇ ಚೆಲ್ಲಿದ್ದಾರೇನೋ  ಎನ್ನಿಸುತ್ತದೆ.ಧೋ ಎಂದು ಸುರಿಯುವ ಮಳೆ.ಕೆಸರು ತುಂಬಿಕೊಂಡ ಮಣ್ಣಿನ ರಸ್ತೆಗಳು. ಆ ಸಮಯದಲ್ಲಿ ಹಕ್ಕಿಗಳೂ ಕೂಡ ಗೂಡು ಸೇರಿ ಬೆಚ್ಚಗೆ ಮುದುಡಿ ಮಲಗಿರುತ್ತವೆ. ಬೇಸಿಗೆಯಲ್ಲಿ ಉಸಿರೇ ಇಲ್ಲದೆ ಮಲಗಿರುವ ಹೊಳೆ,ಹಳ್ಳಗಳು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ.ಆ ಕೆಂಪು ನೀರನ್ನೂ,ಅದರ ರಭಸವನ್ನೂ ನೋಡಬೇಕು ಆಗ.. ನಮ್ಮೂರಿನ ಈ ಹಳ್ಳ ಕೊಳ್ಳಗಳು ನೀರನ್ನೆಲ್ಲ ಹೊತ್ತೊಯ್ದು ಸುರಿಯುವುದು ತುಂಗೆಗೆ. ತನ್ನ ಇಕ್ಕೆಲಗಳನ್ನು ವಿಸ್ತರಿಸಿಕೊಳ್ಳುತ್ತಾ ಗಂಭೀರೆಯಾಗುತ್ತಾಳೆ, ಮಂದಗಮನೆಯಾಗುತ್ತಾಳೆ ನಮ್ಮ ತುಂಗೆ.                                             
                            
 ಹರಿಹರಪುರದಲ್ಲಿ ತುಂಗೆ..
ಚಿಕ್ಕಮ್ಮನ ಮನೆ ಇದ್ದದ್ದು ಶೃಂಗೇರಿಗೆ ಸಮೀಪದ ಬಿಳುವಿನಕೊಡಿಗೆಯಲ್ಲಿ. ಮಲೆನಾಡಿನ ಸೆರಗಿನಲ್ಲಿ ಇರುವ ಒಂದು ಪುಟ್ಟ ಹಳ್ಳಿ ಅದು.ಅವತ್ತು ಅವರ ಮನೆಯ ಹತ್ತಿರ ಇರುವ ಬಸ್ ಸ್ಟಾಪ್ ನಲ್ಲಿ ಇಳಿದಾಗ ಸೂರ್ಯನಾಗಲೇ ಅಸ್ತಮಿಸಿದ್ದ. ಮಳೆ ಮಾತ್ರ ಒಂದೇ ಸಮನೆ ಸುರಿಯುತ್ತಿತ್ತು. ನನ್ನನ್ನು ಕರೆದೊಯ್ಯಲು ಬಂದಿದ್ದ  ತಮ್ಮ,ತಂಗಿ  ಕಾಯುತ್ತಾ ನಿಂತಿದ್ದರು.ಕತ್ತಲು ಆಗಲೇ ನಿಧಾನವಾಗಿ ಪಸರಿಸತೊಡಗಿತ್ತು.ದಾರಿ ಕಾಣದಿದ್ದರೂ,ಅಭ್ಯಾಸ ಬಲದಿಂದ ಅವರಿಬ್ಬರು ಮುಂದೆ ನಡೆಯುತ್ತಿದ್ದರು.ಅವರ ಹಿಂದೆ ನಾನು ಇಂಬಳಗಳಿಗೆ ಹೆದರಿ ಹೆದರಿ ಹೆಜ್ಜೆ ಇಡುತ್ತಿದ್ದೆ. ಮನೆಗೆ ಬಂದ  ತಕ್ಷಣ ಮೊದಲು ಮಾಡಿದ ಕೆಲಸವೆಂದರೆ  ಕಾಲಿನಲ್ಲಿ ಇಂಬಳಗಳಿಗಾಗಿ ಹುಡುಕಿದ್ದು. ಸಧ್ಯ ಒಂದೂ ಸಿಗಲಿಲ್ಲ.ಅವರ ಮನೆಯಲ್ಲಿ ಚಿಕ್ಕಮ್ಮ,ಚಿಕ್ಕಪ್ಪ,ಅಜ್ಜ,ದೊಡ್ಡಮ್ಮ ಎಲ್ಲರೂ ಆದರದಿಂದ ಬರಮಾಡಿಕೊಂಡರು. ಪ್ರಯಾಣದ ಆಯಾಸ,ಸುಸ್ತು  ಊಟವಾದ ತಕ್ಷಣ ನಿದ್ರೆಗೆ ಶರಣಾಗುವಂತೆ ಮಾಡಿತ್ತು. 

ಅಲ್ಲಿದ್ದ ಅಜ್ಜ ..
ಅಲ್ಲಿ ಸುತ್ತ ಮುತ್ತ ತಿರುಗಾಡಲು ಹೋಗುವುದೆಂದು ಮೊದಲೇ  ತೀರ್ಮಾನವಾಗಿತ್ತಲ್ಲ.! ಮರುದಿನ ಬೆಳಿಗ್ಗೆ  ಶೃಂಗೇರಿ ದೇವಸ್ಥಾನ, ಮದ್ಯಾಹ್ನ ಹರಿಹರಪುರದ ಮಠ, ತೂಗುಸೇತುವೆ ಹಾಗೂ ಅಲ್ಲಿಯ ಗುರುಕುಲವನ್ನು ನೋಡಿಕೊಂಡು ಬಂದಿದ್ದೆವು.ಅದರ ಮಾರನೇ ದಿನ, ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ  ಸಿರಿಮನೆ ಜಲಪಾತಕ್ಕೆ ನಮ್ಮ ಪಯಣ. ಕಿಗ್ಗದ ಋಷ್ಯಶೃಂಗ ದೇವಾಲಯದ ಒಳಹೊಕ್ಕು, ನಮಸ್ಕರಿಸಿ ಸಿರಿಮನೆ ಜಲಪಾತದತ್ತ ನಮ್ಮ ಚಾರಣ ಪ್ರಾರಂಭಿಸಿದೆವು. "ಇಲ್ಲೆಲ್ಲಾ ನಕ್ಸಲೈಟ್ಸ್ ಇರ್ತಾರೆ ಕಣೆ" ಅಂತ ಹೆದರಿಸಿದ್ದ  ನನ್ನ ತಮ್ಮ. ಆದರೆ ಯಾರೂ ಕಣ್ಣಿಗೆ ಬೀಳಲಿಲ್ಲ. ಸುಮಾರು  ೫ ಕಿ.ಮೀ ದೂರವನ್ನು ಕಾಲುನಡಿಗೆಯಲ್ಲಿ ಕ್ರಮಿಸಿ ಜಲಪಾತವನ್ನು ತಲುಪಿದ್ದು ಅವಿಸ್ಮರಣೀಯ ಅನುಭವ. ಜಲಪಾತ ಸಮೀಪಿಸಿದಾಗ ಅದರ ಭೋರ್ಗರೆತ ಕೇಳಿ ಭಯವಾದದ್ದು ನಿಜವಾದರೂ, ಹತ್ತಿರದಿಂದ ನೋಡಿದಾಗ ಮಾತ್ರ ಮನಸ್ಸು ಮೂಕವಾಗಿತ್ತು.                      
     
ಮೈದುಂಬಿರುವ ಜಲಧಾರೆ
ಮೂರನೇ ದಿನ ಚಿಕ್ಕಮ್ಮನ ಹಿಂದೆ ಅಡಿಗೆ ಮನೆ ಸೇರಿಕೊಂಡು ಬಿಟ್ಟಿದ್ದೆ. ಆಗ ಚಿಕ್ಕಮ್ಮ ಅರಮನೆತೋಟಕ್ಕೆ ಹೋಗಿ ಬನ್ನಿ. ಹಾಗೇ ಕಮ್ಮರಡಿಯ ಬೆಣ್ಣೆ ಗುಡ್ಡ ನೋಡಿಕೊಂಡು,ದೇವಸ್ಥಾನಕ್ಕೆ ಹೋಗಿ ಬನ್ನಿ ಅಂದರು.ನನಗೆ ಅರಮನೆ ತೋಟದಲ್ಲಿ ಏನಿದೆ ಅಂತ ಗೊತ್ತಿರಲಿಲ್ಲ.ಅದು ಆ ಮನೆಯಲ್ಲಿದ್ದ ದೊಡ್ಡಮ್ಮನ ತಂಗಿಯ ಮನೆ. ಇಷ್ಟೇ ಆಗಿದ್ದಿದ್ದರೆ ಬರೆಯಲು ಏನೂ ಇರುತ್ತಿರಲಿಲ್ಲ.ಆದರೆ ಅವರ ಮನೆ ಇನ್ನೂರು ವರುಷಗಳಿಗಿಂತ ಹಳೆಯದು.ಅದನ್ನು ಯಾವ ಕಾಲದಲ್ಲಿ ಕಟ್ಟಿದರು ಎಂಬ ಮಾಹಿತಿ ಮನೆಯವರಿಗೂ ತಿಳಿದಿರಲಿಲ್ಲ. ಅವರ ಅಜ್ಜನ ಅಜ್ಜ ಕಟ್ಟಿಸಿದ ಮನೆ ಇರಬಹುದು ಎಂಬುದು ಅವರ ಹೇಳಿಕೆ. ಅದನ್ನೊಂದು ನೋಡೇ ಬಿಡುವ ಎಂದು ಅರಮನೆ ತೋಟಕ್ಕೆ ಹೊರಟೆವು. 

ಮನೆಯ ಮುಂಬಾಗ
ತೀರ್ಥಹಳ್ಳಿಯ ಸುತ್ತಮುತ್ತ ಇಂತಹ ಮನೆಗಳು ಕೆಲವಾರು ಇವೆ. ಆದರೆ ಅವುಗಳಲ್ಲಿ ಹೆಚ್ಚಿನ ಮನೆಗಳಿಗೆ ಹೆಂಚು ಹೊದೆಸಲಾಗಿದೆ. ಈ ಮನೆ ಮಾತ್ರ ಇನ್ನೂ ಸೋಗೆ ಗರಿಗಳಿಂದ ಮುಚ್ಚಲ್ಪಟ್ಟಿತ್ತು.ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಮನೆಯ ಎಲ್ಲ ಸದಸ್ಯರೂ ಬಂದು ಮಾಡು ಬಿಚ್ಚಿ ಸೋಗೆ ಹೊದೆಸುತ್ತಾರಂತೆ. ಹೀಗೆ ದೀಪಾವಳಿ, ಗೌರಿ ಹಬ್ಬಗಳು ಬಂದಾಗ ಮಾತ್ರ ಮನೆ ತುಂಬಾ ಜನಗಳು. ಉಳಿದ ಸಮಯದಲ್ಲಿ ಇರುವವರು ಇಬ್ಬರೇ.!!

ಮುಂಚೆಕಡೆಯಲ್ಲಿ ನಾನು
ಅಲ್ಲಿಗೆ ಹೋಗುವಷ್ಟರಲ್ಲಿ ಹೆಚ್ಚು ಕಡಿಮೆ ಊಟದ ಸಮಯವಾಗಿತ್ತು.ಕೆಲವೊಂದು ಛಾಯಚಿತ್ರಗಳನ್ನು ತೆಗೆದುಕೊಂಡೆ.ಊಟ ಆದ ಮೇಲೆ, ಮನೆಯವರು ತುಂಬಾ ಆಸ್ಥೆಯಿಂದ ಇಡೀ ಮನೆಯನ್ನು ತೋರಿಸಿದರು. ಮುಂಚೆಕಡೆ, ನಡುಮನೆ, ಕಡಿಮಾಡು, ಉಪ್ಪರಿಗೆ, ಅಡಿಗೆ ಮನೆ, ದೇವರಕೋಣೆ ಹೀಗೆ ಇಡೀ ಮನೆ ಸುತ್ತಿದ್ದಾಯ್ತು. ಹೆಚ್ಚಿನ ಕೋಣೆಗಳಲ್ಲಿ ಗವ್ ಎನ್ನುವ ಕತ್ತಲೆ ಹಾಗೂ ನಿಶ್ಯಬ್ದ. ದಪ್ಪ ದಪ್ಪದ ಮಣ್ಣಿನ ಗೋಡೆಗಳು.ಬೃಹತ್ ಗಾತ್ರದ ಕಂಬಗಳು.ಸಣ್ಣ ಸಣ್ಣ ಕಿಟಕಿಗಳು,ಹೊಗೆ ಅಟ್ಟ (ಹೊಗೆ ಅಟ್ಟ ಎಂದರೆ  ಹಿಂದೆಲ್ಲ ಕಟ್ಟಿಗೆ ಒಲೆಗಳು ಇದ್ದ ಕಾರಣ ಹೊಗೆ ಮನೆಯಿಂದ ಹೊರಗೆ ಹೋಗಲು ಬಿಟ್ಟಿರುತ್ತಿದ್ದ ಸ್ವಲ್ಪ ಜಾಗ ), ಪಣತ (ಭತ್ತ ಶೇಖರಿಸುವ ಗೂಡು), ಹಳೆಯ ಗಡಿಯಾರ, ಶಂಖ, ಸಂದೂಕ  ಹೀಗೆ ಎಷ್ಟೋ ನಮಗೆ ತಿಳಿಯದ ವಸ್ತುಗಳು.!! ಅವನ್ನೆಲ್ಲ ನೋಡಿ ಖುಷಿ ಆಗಿತ್ತು. ಬಂದಿದ್ದು ವ್ಯರ್ಥವಾಗಲಿಲ್ಲವಲ್ಲ ಎಂದು ಸಮಾಧಾನವೂ ಆಯಿತು.                                       
                     
ಚಿಕ್ಕ ಕಿಟಕಿ
                   
ಹಳೆಯ ಗಡಿಯಾರ
ಇಡೀ ಮನೆ ನೋಡುವಷ್ಟರಲ್ಲಿ ಸುಮಾರು ಒಂದು ಗಂಟೆಗಿಂತ ಹೆಚ್ಚೇ ಆಗಿತ್ತು. ಆಮೇಲೆ ಆ ಮನೆಯ ಆಂಟಿ, ಅವರೇ ಮಾಡಿದ ಗೆಜ್ಜೆ ವಸ್ತ್ರಗಳನ್ನು ತೋರಿಸಿದರು.ಇನ್ನು ಹೊರಡೋಣವೆಂದು ನಾವು ಮಾತನಾಡಿಕೊಂಡೆವು. ಆಗ ಆ ಮನೆಯವರು ಹೇಳಿದರು "ನೀವು ಇನ್ನೊಂದ್ಸಲ ಬರೋವಷ್ಟ್ರಲ್ಲಿ ಈ ಮನೆ ಇರತ್ತೋ ಇಲ್ವೋ ಗೊತ್ತಿಲ್ಲ.! ಕಮ್ಮರಡಿ ಹತ್ರ ಒಂದು ಮನೆ ಕಟ್ಟಿಸ್ತಾ  ಇದೀವಿ. ಈ ಮನೆಯನ್ನ ಕೆಡವಿ ಉಪಯೋಗಕ್ಕೆ ಬರುವ ವಸ್ತುಗಳನ್ನೆಲ್ಲ ತೆಗೆದುಕೊಳ್ತೀವಿ" ಅಂತ. ನನಗೆ ಬೇಜಾರಾಯಿತು. ಅಯ್ಯೋ ಪುರಾತನ ಕಾಲದಿಂದ ಬಂದಿದ್ದು. ನಮ್ಮಂತಹವರು ನೋಡಬೇಕಾದ ಮನೆ. ಯಾಕೆ ಇದನ್ನು ಉಳಿಸಿಕೊಳ್ಳಲಾರರು ಎಂದುಕೊಂಡೆ. ಆಮೇಲೆ ಮತ್ತೆ ಯೋಚಿಸಿದಾಗ, ಅವರಿಗೇನು ಹುಟ್ಟಿ ಬೆಳೆದ ಮನೆಯ ಮೇಲೆ ಅಭಿಮಾನ ಇರುವುದಿಲ್ಲವೇ.! ಒಂದು ಕಾಲದಲ್ಲಿ ಜನ ನಿಬಿಡವಾಗಿದ್ದ ಮನೆಯಲ್ಲಿ ಇವತ್ತು ಇರುವುದು ಇಬ್ಬರೇ.ಮಕ್ಕಳೂ ಬೆಂಗಳೂರು ಸೇರಿ ಸುಮಾರು ವರ್ಷಗಳೇ ಕಳೆದಿವೆ.ಇನ್ನು ಅಲ್ಲಿ ಬಂದು ಇರುವವರು ಯಾರು.? ಯಾವುದೂ ಶಾಶ್ವತವಲ್ಲ. ಎಲ್ಲವೂ ಒಂದು ದಿನ ಈ ಭೂಮಿಯ ಬಿಟ್ಟು ತೆರಳಬೇಕಲ್ಲವೇ.? ಅವರ ನಿರ್ಧಾರ ಸರಿಯಾದದ್ದೇ ಎಂದೆನ್ನಿಸಿತು.

ಮಳೆಯಲ್ಲಿ ತೋಯುತ್ತಿರುವ ಮನೆಯ ಹೊರನೋಟ
ಅವತ್ತು ಅಲ್ಲಿಂದ ಹೊರಟು ಕಮ್ಮರಡಿಯ ಬೆಣ್ಣೆ ಗುಡ್ಡ ಹತ್ತಿದೆವು. ಎಷ್ಟು ಜಾಗರೂಕಳಾಗಿದ್ದರೂ ಒಂದು ಇಂಬಳ ಕಚ್ಚಿಯೇ ಬಿಟ್ಟಿತ್ತು. ಅದನ್ನು ಕಿತ್ತೆಸೆದು, ಬೆಣ್ಣೆ ಗುಡ್ಡದಲ್ಲಿ ಒಂದಷ್ಟು ಹೊತ್ತು ಮಳೆಯಲ್ಲಿ ನೆನೆದು, ಇನ್ನೊಂದಷ್ಟು ಛಾಯಾಚಿತ್ರಗಳನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೊರಟೆವು. 
                         
ಬಿಸಿ ಬಿಸಿ ತಿಂಡಿ ಮಾಡುತ್ತಿದ್ದ ಚಿಕ್ಕಮ್ಮ.. 
ದೇವಸ್ಥಾನ ನೋಡಿ ಬಸ್ ಹತ್ತಿ ಮನೆ ಕಡೆ ನಡೆದವರಿಗೆ ಚಿಕ್ಕಮ್ಮ ಮಾಡಿದ ಬಿಸಿ ಬಿಸಿ ನಿಪ್ಪಟ್ಟು ಕಾಯುತ್ತಿತ್ತು. ಬಿಸಿ ಕಾಫಿಯ ಜೊತೆ ನಿಪ್ಪಟ್ಟು ತಿನ್ನುತ್ತಾ ಹರಟುತ್ತಾ ಕುಳಿತೆವು  ಆ ಆಹ್ಲಾದಕರ ವಾತಾವರಣದಲ್ಲಿ... 

Saturday 10 May 2014

ನೆನಪಿನ ಪುಟಗಳಲ್ಲಿ..

ಎಷ್ಟೋ ನೆನಪುಗಳು ಬರೆಯದೇ ಹಾಗೇ ಉಳಿದುಬಿಟ್ಟಿವೆ.ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ,ಬೀಳುವ ತುಂತುರು ಮಳೆ ಮತ್ತೆ ಮತ್ತೆ ತೀರ್ಥಹಳ್ಳಿಗೆ ಕರೆದೊಯ್ಯುತ್ತಿದೆ. ಏನಾದರೂ ಬರೆಯಬೇಕು ಎಂದುಕೊಂಡಾಗ ನೆನಪಾದದ್ದು ಇದು. 


ದಿನಾ ೪:೩೦ ಕ್ಕೆ  ಬಿಡುವ ನಮ್ಮ St.Mary's ಶಾಲೆಯಲ್ಲಿ ಅವತ್ತೊಂದು ದಿನ ಬೇಗ ಬಿಟ್ಟಿದ್ದರು.ಅವತ್ತು ೧೨:೩೦ ಕ್ಕೆ  ರಜ ಘೋಷಿಸಲಾಗಿತ್ತು. ಎಷ್ಟು ಸಂಭ್ರಮವೋ ಆ ದಿನ. ನೀಲಿ ನೀಲಿ ಬಣ್ಣದ ಸಮವಸ್ತ್ರ ಧರಿಸಿದ ಮಕ್ಕಳೆಲ್ಲ ಮನೆಗೆ ಓಡುತ್ತಿದ್ದರು. ಶಾಲೆಗೆ ರಜ ಕೋಳಿ ಮಜ ಅಂತ ಕೂಗುತ್ತಿದ್ದರು.ನಾವೂ ಅವರೊಂದಿಗೆ ದನಿಗೂಡಿಸಿದೆವು.ದಿನವೂ ಆಟೋದಲ್ಲಿ ಮನೆಗೆ ಹೋಗುತ್ತಿದ್ದೆವಾದರೂ ಅವತ್ತು ಮದ್ಯಾಹ್ನ ಶಾಲೆಗೆ ರಜ ಕೊಡ್ತಾರೆ ಅಂತ ಯಾರಿಗೆ ಗೊತ್ತಿತ್ತು.? ದಿನಾ ಆಟೋ ಬಂದಾಗ ನಮ್ಮಾಟೋ ಬಂತು ನಮ್ಮಾಟೋ ಬಂತು ಅಂತ ಕೂಗುವುದು ಅಭ್ಯಾಸ.ಆದರೆ ಅವತ್ತು ಆಟೋ ಬರಲೇ ಇಲ್ಲ. ಮನೆಗೆ ಫೋನ್ ಮಾಡೋಕೆ coin ಫೋನ್ ಗಳಾಗಲಿ,cell ಫೋನ್ ಗಳಾಗಲಿ ಇರಲಿಲ್ಲ. ಒಂದೇ ಆಟೋದಲ್ಲಿ ಹೋಗುವ ನಾವು ನಾಲ್ಕೈದು ಜನ ನಡೆದುಕೊಂಡು ಹೋಗೋಣ ಎಂದು ತೀರ್ಮಾನಿಸಿಕೊಂಡೆವು.ಗಣೇಶ ಬಸ್ ನಮಗೋಸ್ಕರವೇ ಎಂಬಂತೆ ಕಾಯುತ್ತಿತ್ತು.ಬಸ್ ಚಾರ್ಜ್ ಹೆಚ್ಚೇನು ಇರುತ್ತಿರಲಿಲ್ಲ. ಆದರೂ ಇನ್ನೂ ಮಳೆಗಾಲ ಮುಗಿದಿರಲಿಲ್ಲ.ಮಳೆಗಾಲದಲ್ಲಿ ನಡೆಯುವ ಅನುಭವವನ್ನು ಕಳೆದುಕೊಳ್ಳಲು ಇಷ್ಟಪಡದೆ  ನಾನು,ಸ್ಪೂರ್ತಿ,ಅರ್ಚನ,ಅನುಪಮ,ಅಮೃತ ಇಷ್ಟು ಜನ ಒಟ್ಟಿಗೆ ನಡೆಯುತ್ತಾ ಮನೆಕಡೆ ಹೊರಟೆವು. 

ಸುಮ್ನೆ ನಡೆಯೋದು ನಮಗೆ ಗೊತ್ತೇ ಇರ್ಲಿಲ್ಲ. ಅಂತ್ಯಾಕ್ಷರಿ ಆಟ ಆಡುತ್ತಾ,ಮಳೆಯಲ್ಲಿ ನೆನೆಯುತ್ತಾ,ಹಾರುತ್ತಾ ,ಕೂಗುತ್ತಾ ಮುಂದುವರೆಯುತ್ತಿದ್ದೆವು. ನೋಡಿದವರೆಲ್ಲ ವಾನರ ಸೈನ್ಯ ಅಂತಾನೆ ಅಂದುಕೊಳ್ಳುತ್ತಿದ್ದರೆನೋ!! ಅಷ್ಟೇ ಅಲ್ಲ, ಯಾವ ಬಾವೀಲಿ ಎಷ್ಟು ನೀರಿದೆ ಅಂತ ಇಣುಕಿ ನೋಡೋದು. ಬಾವಿ ನೀರು ಪ್ರಶಾಂತವಾಗಿದ್ದರೆ ದೊಡ್ಡ ಕಲ್ಲು ಎತ್ತಿ ಬಾವಿಗೆ ಹಾಕೋದು. ದಾರಿಯಲ್ಲಿ ಬರುವ ಹೊಳೆ ಎಷ್ಟು ತುಂಬಿದೆ ಅಂತ ಪರೀಕ್ಷೆ ಮಾಡೋದು,ಚಂದದ ಕಾರುಗಳನ್ನ ಕಣ್ಣರಳಿಸಿ ನೋಡುವುದು. ಹಳ್ಳಗಳಲ್ಲಿ ಎಲೆಗಳನ್ನ ತೇಲಿ ಬಿಡೋದು. ನೀರಲ್ಲಿ ಯಾವುದಾದರೂ ಹುಳ ಬಿದ್ದಿದ್ದರೆ ಎಲೆಗಳ ಸಹಾಯದಿಂದ ಮೇಲೆತ್ತುವುದು. ಹೀಗೆ ಮಾಡದ ತರಲೆಗಳೇ ಇಲ್ಲವೇನೋ..!!
                                      

ಅವತ್ತೂ ಹಾಗೆಲ್ಲ ತರಲೆಗಳನ್ನು ಮಾಡುತ್ತಲೇ ಮನೆಯ ದಾರಿ ಹಿಡಿದೆವು.ಆದರೂ ಮನೆಗೆ ಹೋಗಲು ಮನಸಿಲ್ಲ. ಹೇಗಿದ್ದರೂ ಶಾಲೆ  ಬೇಗ ಮುಗಿದಿದೆ ಎಂದು ಮನೆಯವರಿಗೆ ಗೊತ್ತೇ ಇಲ್ವಲ್ಲ.! ಇಲ್ಲೇ ಸಾಯಂಕಾಲದವರೆಗೂ ಆಟ ಆಡ್ತಾ ಇದ್ಬಿಡೋಣ. ದಿನಾ ಮನೆಗೆ ಹೋಗೋ ಹೊತ್ತಿಗೆ ಹೋದ್ರಾಯ್ತು ಅಂತ ಮಾತನಾಡಿಕೊಂಡೆವು. ದಾರಿಯಲ್ಲಿ ಯಾವುದೊ ಒಂದು ಹಳ್ಳ ಇತ್ತು. ಅಲ್ಲಿ ನೀರಾಡಿದ್ದು ಆಡಿದ್ದೇ. ಹೇಳುವವರು ಕೇಳುವವರು ಯಾರೂ ಇರಲಿಲ್ಲ. ಮದ್ಯಾಹ್ನ ಊಟಕ್ಕೆಂದು ತಂದ ಡಬ್ಬಿಗಳಿಂದ ವನಭೋಜನ ನಡೆಸಿದೆವು. ಹಾಗೆ ಸಾಯಂಕಾಲ ಆಗಿದ್ದೇ ಗೊತ್ತಾಗ್ಲಿಲ್ಲ.ಇನ್ನೂ ತಡವಾದರೆ ಮನೆಯಲ್ಲಿ ಕೋಲು ತೆಗೆದುಕೊಳ್ಳುತ್ತಾರೆಂದು ಭಯದಿಂದ ಬೇಗ ಮನೆ ಕಡೆ ನಡೆದೆವು. 


ಸ್ವಲ್ಪ ದೂರ ನಡೆದಿಲ್ಲ ,ಅಷ್ಟರಲ್ಲೇ ಚಿಕ್ಕಮ್ಮ ಬರುತ್ತಿರುವುದು ಕಾಣಿಸಿತು.ಅವರನ್ನ ನೋಡಿದಾಗ ಗಾಬರಿ ಆಯಿತು. ಯಾಕೋ ಏನೋ ಎಡವಟ್ಟು ಆಗಿದೆ ಅಂತ ಅನ್ನಿಸಿತು. ಚಿಕ್ಕಿ ಏನೀಕಡೆ ಬಂದ್ರಿ ಅಂತ ಕೇಳಿದೆವು. ಅದಕ್ಕೆ ಅವ್ರು ಏನು ಇಲ್ಲ ನಡೀರಿ ಮನೆಗೆ ಅಂದ್ರು. ನಾವು ಏನು ಕಾದಿದೆಯೋ ಮನೆಯಲ್ಲಿ ಅಂತ ಭಯದಿಂದ ಮನೆ ಕಡೆ ಹೆಜ್ಜೆ ಹಾಕಿದೆವು.ಮನೆಯಲ್ಲಿ ನೋಡಿದರೆ ಅಪ್ಪ ಕೋಲು ಹಿಡ್ಕೊಂಡು ಕಾಯ್ತಿದಾರೆ!! ಎಲ್ಲಿಗೆ ಹೋಗಿದ್ರಿ ಇಷ್ಟೊತ್ತು ಅಂತ ಜೋರಾಗಿ ಕೇಳಿದರು. ನಾವು ಎನೂ ಮಾತಾಡದೆ ಸುಮ್ನೆ ಇದ್ವಿ. ಒಂದಿಷ್ಟು ಬೈದು ಒಳಗೆ ಕಳಿಸಿದರು. ಶಾಲೆ ಬೇಗ ಬಿಟ್ಟಿದ್ದು ಅವರಿಗೆ ಹೇಗೆ ಗೊತ್ತಾಯ್ತು ಅನ್ನೋದು ನಮಗಿದ್ದ ಪ್ರಶ್ನೆ. ತೀರ್ಥಹಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ದೊಡ್ಡಪ್ಪ ಶಾಲೆ ಬಿಟ್ಟ ತಕ್ಷಣ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದರಂತೆ. ಸಾಲದೆಂಬಂತೆ ಸ್ವಲ್ಪ ಹೊತ್ತಾದ ಮೇಲೆ ಮಕ್ಕಳು ಇನ್ನೂ ಮನೆಗೆ ಬಂದಿಲ್ವಾ!! ಅಂತ ಇನ್ನೊಂದು ಸಲ ಫೋನ್ ಮಾಡಿದ್ದರಂತೆ. ಅದ್ಕೆ ಅಪ್ಪಂಗೆ ಸ್ವಲ್ಪ ಸಿಟ್ಟು ಜಾಸ್ತಿನೇ ಬಂದಿತ್ತು.ಮನೇಲಿ ಬೈಸ್ಕೊಳೋ ಹಾಗೆ ಮಾಡಿದ್ರಲ್ಲ ಅಂತ ನಮಗೂ ಅವತ್ತು ದೊಡ್ಡಪ್ಪನ ಮೇಲೆ ಸಿಟ್ಟು ಬಂದಿತ್ತು.

ಇದೆಲ್ಲ ಇವಾಗ ನೆನೆಸಿಕೊಂಡರೆ ಖುಷಿ ಆಗತ್ತೆ. ಎಷ್ಟು ಚನ್ನಾಗಿತ್ತು ಆ ದಿನಗಳು ಅಂತ ಅನ್ಸತ್ತೆ. ಮತ್ತೆ ಆ ಸಮಯ ಬರಬಾರದೇ ಅಂತ ಮನಸ್ಸು ಚಡಪಡಿಸತ್ತೆ.