Tuesday 31 December 2013

ಡಿಸೆಂಬರ್ ೩೧...

                                        

ಇವತ್ತು ವರ್ಷದ ಕೊನೆಯ ದಿನ. ಏನಾದ್ರು ಬರೆಯೋಣವೆಂದುಕೊಂಡೆ. ನಿನ್ನೆ ನನ್ನ ಸ್ನೇಹಿತರೊಬ್ಬರು ದೆವ್ವದ ಕಥೆಗಳನ್ನು ಹೆಚ್ಚಾಗಿ ಬರೆಯಲು ಹೇಳಿದ್ದರು. ಅಯ್ಯೋ!!ನನಗೇನು ಗೊತ್ತು ದೆವ್ವಗಳ ಬಗ್ಗೆ ಅಂತ ನಾನು ಕೇಳಿದ್ದಕ್ಕೆ, ಕಲ್ಪನೆ ಮಾಡಿ ಬರೆಯುವಂತೆ ಪ್ರೇರೇಪಿಸಿದರು. ಅಂತಹ ಕಲ್ಪನಾಶಕ್ತಿ ಇಲ್ಲವೆಂದೆ. ಆದರೂ ನೆನಪಿನ ಗೂಡಿನಲ್ಲಿ ಮತ್ತೊಮ್ಮೆ ಹುಡುಕಿದರೆ ಅಲ್ಲೆಲ್ಲೋ ಕಳೆದುಹೋಗಿದ್ದ ನೆನಪು ಮಸುಕಾಗಿ ಕಾಣಿಸಿತು..

ಡಿಸೆಂಬರ್ ೩೧..ಏನಂತಹ  ಮಹತ್ವವಿದೆ ಈ ದಿನಾಂಕಕ್ಕೆ ಎಂದು ಆಲೋಚಿಸಿದ್ದಿದೆ.ಕನ್ನಡದಲ್ಲಿ ಈ ಹೆಸರಿನ ಒಂದು ಚಲನಚಿತ್ರವೂ ಇದೆ.ನನಗೆ ಇದೊಂದು ಘಟನೆ ನೆನಪಾಗುತ್ತಿದೆ.ಅದನ್ನು ಹೇಳುವುದಕ್ಕಿಂತ ಮೊದಲು ನನಗೆ ದೆವ್ವಗಳ ಅಸ್ತಿತ್ವದ ಬಗ್ಗೆ ಇದ್ದ ಅಪಾರ ನಂಬಿಕೆಯ ಬಗ್ಗೆ ಹೇಳಲೇಬೇಕು. ಇವತ್ತಿಗೂ ನಾನು ಭಯಾನಕ ಚಿತ್ರಗಳನ್ನು ನೋಡುವುದಿಲ್ಲ.ವಿಪರೀತ ಭಯವೆನಿಸುತ್ತದೆ.ಮಲಗಿರುವ  ಮಂಚದ ಕೆಳಗೂ ಯಾರೋ ಅವಿತು ಕುಳಿತಿರುವಂತೆ ಭಾಸವಾಗುತ್ತದೆ.!!ನಮ್ಮ ತೀರ್ಥಹಳ್ಳಿಯಲ್ಲಿ ಚರ್ಚ್ ಒಂದಿದೆ. ಅದರ ಬೆನ್ನಿಗೇ ಕೋಳಿಕಾಲು ಗುಡ್ಡ. ಚರ್ಚ್ ಹಿಂದೆ ಖಾಲಿ ಜಾಗವಿದ್ದ ನೆನಪು. ಆ  ಜಾಗದಲ್ಲಿ ದೆವ್ವದ ಉಗುರು ಸಿಕ್ಕಿದೆ ಎಂಬ ವದಂತಿ ಹಬ್ಬಿತ್ತು..ನಾನು ಇಂತಹ ವಿಷಯಗಳನ್ನು ಪ್ರಶ್ನಿಸುವ ಗೋಜಿಗೇ ಹೋಗುತ್ತಿರಲಿಲ್ಲ.ಮುಗ್ಧವಾಗಿ ನಂಬಿದ್ದೆ. ದೆವ್ವದ ಉಗುರು ಹೇಗಿರುತ್ತದೆ .?ಸಿಕ್ಕಿದ್ದು ದೆವ್ವದ ಉಗುರೇ ಎನ್ನುವುದಕ್ಕೆ ಪುರಾವೆಯಾದರು ಏನು.? ಎಂದೆಲ್ಲ ಆಲೋಚಿಸಲು ಸಮಯವೆಲ್ಲಿರುತ್ತಿತ್ತು  ಬಿಡಿ..

ನಾನು ಎರಡನೇ ತರಗತಿಯಲ್ಲಿ ಇದ್ದಾಗ ನಡೆದದ್ದದಿದು.ನನಗೆ ಒಬ್ಬಳು ಗೆಳತಿ.ದೆವ್ವಗಳ ಬಗ್ಗೆ ಅದ್ಭುತವಾಗಿ ವರ್ಣಿಸುತ್ತಿದ್ದಳವಳು.ಬೆಳಿಗ್ಗೆ ನಾನು ಬೇಗ ಶಾಲೆಗೆ ಹೋಗುತ್ತಿದ್ದೆ. ಅವಳು ಬರುತ್ತಿದ್ದಳಾದ್ದರಿಂದ ನಮ್ಮ ಗಹನವಾದ ಚರ್ಚೆಗೆ ಸಮಯ ದೊರಕುತ್ತಿತ್ತು.ಅದು ೧೯೯೭ ರ ಕೊನೆಯ ದಿನ. ಎಂದಿನಂತೆ ಬೇಗ ಹೋಗಿದ್ದ ನನಗೆ ಅವಳ ಕಥೆಯೊಂದು ಕಾದಿತ್ತು. ಆದರೆ ಅದು ನನ್ನ ರಾತ್ರಿಯ ನಿದ್ರೆಯನ್ನೇ ಕೆಡಿಸುವುದೆಂಬ ಸಣ್ಣ ಸುಳಿವೂ ಇರಲಿಲ್ಲ ನನಗೆ..ಡಿಸೆಂಬರ್ ೩೧ ರಾತ್ರಿ ಒಂದು ರಾಕ್ಷಸ ಮಗುವಿನ ಜನನವಾಗುತ್ತದೆ. ಅದು ವಿಪರೀತವಾಗಿ ಬೆಳೆದಿರುವುದರಿಂದ ಅದನ್ನು ಯಾರೂ ಹಿಡಿಯಲಾರರು.ಅದು ಈ ದಿನಾಂಕದಂದು ಜನಿಸಲು ಕಾಯುತ್ತಿದೆ.ಸ್ವಾರಸ್ಯವೇನೆಂದರೆ ಅದು ಹುಟ್ಟಿದ ತಕ್ಷಣ ದೊಡ್ಡ ಶಬ್ದವೊಂದು ಕೇಳುತ್ತದೆ.ಅದು ದೆವ್ವದ ಕೂಗು. ಅದನ್ನು ಕೇಳಿದವರೆಲ್ಲ ಕಿವುಡಾಗುತ್ತಾರೆ.ಇದು ಕಥೆ. ಇದು ಅವಳು ಹೇಳಿದ ಕಟ್ಟು ಕಥೆಯೋ ಏನೋ ನಾನಂತೂ ಗಾಬರಿಯಾಗಿದ್ದೆ.

ನನಗೆ ಭಯವಾದಾಗೆಲ್ಲ ತೀರ್ಥಹಳ್ಳಿಯ ಮಾರಿಕಾಂಬ ದೇವಸ್ಥಾನಕ್ಕೆ ಹೋಗಿಬರುವುದು ವಾಡಿಕೆ."ಸಂಕಟ ಬಂದಾಗ ವೆಂಕಟರಮಣನಲ್ಲವೇ".ಅವತ್ತೂ ಹೋಗಿ ದೇವರಿಗೆ ನಮಸ್ಕರಿಸಿ,ಯಾರಿಗೂ ಆ ಕೂಗು ಕೇಳದೆ ಇರಲಿ ಎಂದು ಪ್ರಾರ್ಥಿಸಿದೆ. ದೇವರ ಆಶೀರ್ವಾದದ ಮೇಲೆ ಹೆಚ್ಚಿನ ನಂಬಿಕೆ ಇತ್ತು. ಮನೆಗೆ ಬಂದೊಡನೆ ಅಮ್ಮನಿಗೆ ವರದಿ ಒಪ್ಪಿಸಿದೆ. ಭಯಭೀತರಾಗುತ್ತಾರೆಂದುಕೊಂಡರೆ, ಆಶ್ಚರ್ಯ!!ನಿರೀಕ್ಷಿಸಿದ್ದದ್ದೇನು ನಡೆಯದೆ ಅಮ್ಮ ಸುಮ್ಮನೆ ನಕ್ಕು ಒಳಗೆ ಹೋಗಬೇಕೆ.? ನನಗೆ ಕೋಪ ಬಂದಿತು. ಇವರಿಗೆ ಪರಿಸ್ಥಿತಿಯ ಅರಿವಿಲ್ಲ, ನಾನೇ ಏನಾದರೂ ಮಾಡಬೇಕೆಂದು ಕಿಟಕಿ ಗಾಜುಗಳನ್ನು ಭದ್ರವಾಗಿ ಹಾಕಿದೆ. ಪರದೆಗಳನ್ನು ಬಲವಾಗಿ ಕಟ್ಟಿದೆ.ಕಿವಿಯಲ್ಲಿ ಹತ್ತಿಯ ಉಂಡೆಗಳನ್ನು ಇಟ್ಟುಕೊಂಡು ರಾಮ ನಾಮ ಸ್ಮರಣೆ ಮಾಡುತ್ತಾ ಮಲಗಿದೆ.

ಒಮ್ಮೆಲೆ ಎಚ್ಚರಾಯಿತು. ಪಕ್ಕದಲ್ಲಿ ಅಪ್ಪ ,ಅಮ್ಮ ಇಬ್ಬರೂ ನಿದ್ರಿಸುತ್ತಿದ್ದಾರೆ. ದುರದೃಷ್ಟವಶಾತ್ ಕೇಳಿದ ಕಥೆಯೆಲ್ಲ ಮತ್ತೆ ಸ್ಮೃತಿಗೆ ಬಂತು. ಯಾಕಾದರೂ ಕೇಳಿದೆನೋ ಹಾಳು  ಕಥೆಯನ್ನ ಎಂದು ಹಲುಬಿದೆ. ಆದರು ನಿದ್ರಾದೇವಿಯ ಸುಳಿವಿಲ್ಲ. ಎದ್ದು ಗಂಟೆ ನೋಡೋಣವೆಂದರೆ ಆ ಸಮಯದಲ್ಲಿ ನನಗೇನಾದರೂ ಆ ಕೂಗು ಕೇಳಿಸಿದರೆ ಎಂಬ ಭಯ.ಬೆರಳುಗಳಿಂದ ಕಿವಿಯನ್ನು ಬಲವಾಗಿ ಮುಚ್ಚಿಕೊಂಡು ಮಲಗಿದೆ. ಎಷ್ಟು ಒದ್ದಾಡಿದರೂ ನಿದ್ರೆ ಬರಲೊಲ್ಲದು. ಯಾವ ದೇವರಿಗೆ ಬೇಡಿಕೊಂಡೆನೋ ಕೊನೆಗೂ ನಿದ್ರೆ ಆವರಿಸಿತು.

ಬೆಳಿಗ್ಗೆ ಎದ್ದು ನೋಡಿದರೆ ಎನೂ ಆಗಿಯೇ ಇಲ್ಲ.!!ಆದರೆ ನಾನದನ್ನು ಕಟ್ಟು ಕಥೆ ಎಂದು ಅಲ್ಲಗಳೆಯಲು ತಯಾರಿರಲಿಲ್ಲ. ದೇವಸ್ಥಾನಕ್ಕೆ ಹೋಗಿ ಬಂದಿದ್ದರಿಂದ ದೇವರ ಶ್ರೀರಕ್ಷೆ ಇತ್ತು. ಹಾಗಾಗಿ ಯಾವ ಅನಾಹುತವೂ ಸಂಭವಿಸಲಿಲ್ಲ ಎಂದು ನನ್ನನ್ನು ನಾನೇ ಸಮರ್ಥಿಸಿಕೊಂಡೆ. ಅಮ್ಮ ಕೇಳಿದರೂ ನನ್ನ ವಾದವನ್ನು ಬಿಟ್ಟುಕೊಡಲು ಒಪ್ಪಲಿಲ್ಲ.ನನ್ನ ವಿತಂಡ ವಾದಕ್ಕೆ ಎದುರು ಹೇಳಲಾಗದೆ ಅಮ್ಮ  ಸುಮ್ಮನಾಗಿದ್ದರು.ಇವತ್ತಿಗೂ ಇದನ್ನು ನೆನೆಸಿಕೊಂಡಾಗ ಅರಿವಿಲ್ಲದೆಯೇ ಮುಗುಳ್ನಗೆಯೊಂದು ಹರಿಯುತ್ತದೆ.


Monday 16 December 2013

ಜಲ ವಿಹಾರ..

ನಾನು ಬರೆಯುವ ನೆನಪುಗಳೆಲ್ಲ ತೀರ್ಥಹಳ್ಳಿಯ ಜೊತೆ ಬೆಸುಗೆ ಹಾಕಿಕೊಂಡಿರುತ್ತವೆ. ನಮ್ಮೂರು ಕೊಪ್ಪಲು..ಈ ಹೆಸರಿಗೆ ಹಳ್ಳಿ ಎಂಬ ಸಮಾನಾರ್ಥವಿದೆ.ಈ ಹೆಸರು ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರ ನನಗೂ ದೊರೆತಿಲ್ಲ. ನಮ್ಮೂರಿನ ಎಲ್ಲ ಸ್ಥಳಗಳ ಪರಿಚಯ ಇನ್ನೊಮ್ಮೆ ಮಾಡಿಕೊಡುತ್ತೇನೆ.ನಮ್ಮುರೂ, ಮಲೆನಾಡಿನ ಎಲ್ಲ ಹಳ್ಳಿಗಳಂತೆ ಐದು ಆರು ಮನೆಗಳಿಗೆ ಸೀಮಿತಗೊಂಡಿದೆ.ಕೂಗಳತೆಯ ದೂರದಲ್ಲೊಂದು ಮನೆಯೂ ಸಿಗಲಾರದು. ಮಲೆನಾಡಿನ ಜನಜೀವನದ ಪರಿಚಯವಿಲ್ಲದವರು ಕುವೆಂಪುರವರ ಪುಸ್ತಕಗಳನ್ನು ಓದಿ. ನೀವೇ ಸ್ವತಃ ತಿಳಿದುಕೊಳ್ಳುವಿರಾದರೆ ಮಲೆನಾಡಿಗೆ ಬನ್ನಿ.

ನಮ್ಮೂರಿನಲ್ಲಿ ಒಂದು ಕೆರೆಯಿದೆ. ಇದರಲ್ಲೇನು ವಿಶೇಷ ಅಂತೀರಾ.? ಅದು ನಮ್ಮೆಲ್ಲರ ಈಜುಕೊಳ.!!ಕೆರೆಯ ದಡದಲ್ಲೊಂದು ದೊಡ್ಡ ಅರಳೀ ಮರ. ಅದರ ಕೆಳಗೊಂದು ಮಾರುತಿಯ ಮೂರುತಿ. ಅದಕ್ಕೊಂದು ಚಿಕ್ಕ ಮಂಟಪ. ಜೊತೆಯಲ್ಲಿ ನಾಗದೇವರಕಲ್ಲುಗಳು.ಅರಳಿ ಮರ ಅಂದಾಗೆಲ್ಲ ನನಗೆ  ಒಂದು ವಾಕ್ಯ ನೆನಪಾಗುತ್ತದೆ. "ಅಶ್ವತ್ಥರಳೀ ಮರದ ತಳಿರೊಡೆದೆರಡೆಳೆಯಾಯ್ತು". ಇದನ್ನು ವೇಗವಾಗಿ,ತಡವರಿಸದೆ ಉಚ್ಚರಿಸಲು ಪ್ರಯತ್ನಿಸಿ ಸೋತಿದ್ದೇನೆ.ನೀವೊಮ್ಮೆ ಪ್ರಯತ್ನಿಸಿ.!

ನಮ್ಮೂರ ಕೆರೆ 
                                                           
ಹನುಮಂತನ ಗುಡಿ 
                                                                             
ನನ್ನ ಅಣ್ಣಂದಿರು (ವಿಕಾಸ,ಪ್ರಣವ ) ದಿನವೂ ಕೆರೆಗೆ ಈಜು ಕಲಿಯಲು ಹೋಗುತ್ತಿದ್ದರು.ಆಗ ನನಗೆ ಸುಮಾರು ಐದು ವರ್ಷವಿರಬಹುದು.ಅವರ ಬಾಯಿಂದ ವಿವರಣೆಗಳನ್ನು ಕೇಳಿದ ನಂಗೆ ಈಜು ಕಲಿಯುವ ಮನಸ್ಸಾಯಿತು.ಇನ್ನೇನು ಎರಡು ಒಣಗಿದ ಸಣ್ಣ ತೆಂಗಿನ ಕಾಯಿಗಳನ್ನು ಕಟ್ಟಿಕೊಂಡು ಹೋಗಿ ಕೆರೆ ದಂಡೆಯ ಮೇಲೆ ನಿಲ್ಲುತ್ತಿದ್ದೆ.ಒಣಗಿದ ಕಾಯಿಗಳು ನೀರಿನಲ್ಲಿ ಮುಳುಗದಂತೆ ತಡೆಯುತ್ತವೆ.ಈಜು ಕಲಿಯಲು ಆರಂಭ ಶೂರತ್ವವೇನೋ ತೋರಿಸಿದ್ದೇನೋ ಸರಿ ನೀರಿಗಿಳಿಯಲು ಧೈರ್ಯ ಸಾಲಲಿಲ್ಲ. ಎಲ್ಲರೂ ನೀರಿಗಿಳಿಯಲು ಪ್ರೇರೇಪಿಸುತ್ತಿದ್ದರು. ನನಗೋ ಅಧೈರ್ಯ. ಸುಮ್ಮನೆ ಅವರು ಆಡುವುದನ್ನೇ ನೋಡುತ್ತಾ ಕುಳಿತುಕೊಳ್ಳುತ್ತಿದ್ದೆ. ಒಂದು ದಿನ ನನ್ನ ಅಣ್ಣ ನೀರಿಗೆ ತಳ್ಳಿ ಬಿಟ್ಟ. ನೀರು ಕುಡಿದಿದ್ದಾಯಿತು ಆದರೆ ಈಜು ಕಲಿಯುವ ಪ್ರಯತ್ನವನ್ನಂತೂ ಮಾಡಲಿಲ್ಲ. ಆ ಘಟನೆಯಾದ ಮೇಲೆ ನೀರಿನಿಂದ ದೂರವೇ ಉಳಿದದ್ದಾಯಿತು. ನೀರಿಗಿಳಿಯದೆ ಈಜು ಕಲಿಯಲು ಸಾಧ್ಯವೇ .? ಹೀಗೆ ನನ್ನ ಇರಾದೆಯೂ ಕೊನೆಗೊಂಡಿತು.

ಅದೇ ಸಮಯದಲ್ಲಿ ಅನಕೊಂಡ ಚಲನಚಿತ್ರ ತುಂಬ ಜನಪ್ರಿಯವಾಗಿತ್ತು. ಎಲ್ಲರೂ ಉತ್ಸಾಹಭರಿತರಾಗಿ ಚಿತ್ರ ನೋಡಿ ಬಂದದ್ದೇನೋ ಸರಿ ಪರಿಣಾಮ.? ನನ್ನ ಅಣ್ಣಂದಿರು ನೀರಿಗಿಳಿಯುವುದನ್ನೇ ಬಿಟ್ಟರು. ಕೆರೆಯ ಬಳಿ ಆಗಾಗ ಕಾಳಿಂಗ ಸರ್ಪಗಳು ಕಂಡು ಬರುತ್ತಿರುತ್ತವೆ. ಹಾವಿನ ಪ್ರತಾಪವನ್ನು ತೆರೆಯ ಮೇಲೆ ನೋಡಿದ್ದವರು, ಚಿಕ್ಕ ಚಿಕ್ಕ ಹಾವುಗಳನ್ನೂ ಕಂಡು ಭಯಪಡತೊಡಗಿದರು.ಅಲ್ಲಿಗೆ ನಮ್ಮ ಈಜು ಕಲಿಯುವ ಕತೆ ಮುಗಿಯಿತು.ಆದರೆ ಇತ್ತೀಚಿಗೆ ನನ್ನ ಅಣ್ಣಂದಿರು ಮತ್ತೆ ಕೆರೆಗಿಳಿಯಲು ಪ್ರಾರಂಭಿಸಿದ್ದಾರೆ.ಒಂದೇ ವ್ಯತ್ಯಾಸ ನನ್ನ ಜಾಗದಲ್ಲಿ ಇವತ್ತು ನನ್ನ ತಮ್ಮನಿದ್ದಾನೆ.!

ಕೆರೆಯ ಒಂದು ಪಾರ್ಶ್ವ
ನನಗೆ ಇವತ್ತಿಗೂ ಅನಿಸುತ್ತದೆ, ಛೆ.!ಆಗ ಸ್ವಲ್ಪ ಧೈರ್ಯದಿಂದ ಪ್ರವರ್ತಿಸಿದ್ದರೆ ಎಷ್ಟೋ ಚನ್ನಾಗಿರುತ್ತಿತ್ತೆಂದು. ನೀರೊಳಗಿನ ಬೇರೆ ಪ್ರಪಂಚವೊಂದು ನನ್ನೆದುರು ತೆರೆದುಕೊಳ್ಳುತ್ತಿತ್ತೇನೋ.? ಸ್ವಲ್ಪ ದೊಡ್ಡವಳಾದ ಮೇಲೆ ಪಕ್ಷಿ ವೀಕ್ಷಣೆಗೆಂದು ಕೆರೆಯ ಬಳಿ  ಹೋಗುತ್ತಿದ್ದೆ.ಪಕ್ಷಿ ವೀಕ್ಷಣೆ ನನ್ನ ನೆಚ್ಚಿನ ಹವ್ಯಾಸ. ತೇಜಸ್ವಿಯವರ "ಹೆಜ್ಜೆ ಮೂಡದ ಹಾದಿ", "ಕನ್ನಡ ನಾಡಿನ ಹಕ್ಕಿಗಳು" ಮುಂತಾದ ಪುಸ್ತಕಗಳ ಹೊರತಾಗಿ,ವಿವರಣೆಗಳನ್ನು ಬರೆದುಕೊಳ್ಳಲೊಂದು  ಪುಸ್ತಕ,ಲೇಖನಿ,ಜೊತೆಗೊಂದು  ದುರ್ಬೀನು ಹಿಡಿದುಕೊಂಡು ಹಕ್ಕಿಗಳ ಆಗಮನಕ್ಕಾಗಿ ಕಾಯುತ್ತ ಕುಳಿತಿರುತ್ತಿದ್ದೆ.ಎಷ್ಟೋ ಹಕ್ಕಿಗಳ ಬಗ್ಗೆ ತಿಳಿದುಕೊಂಡಿದ್ದೆ.ಸೂರಕ್ಕಿ,ಪಿಕಳಾರ,ಟ್ರೋಜನ್,ಮುನಿಯ ಹೀಗೆ ನಾನು ಗಮನಿಸುತ್ತಿದ್ದ ಹಕ್ಕಿಗಳ ಪಟ್ಟಿಯೇ ಇದೆ. ನನ್ನ ಬಳಿ  ಆಗ ಕ್ಯಾಮೆರಾ ಇರಲಿಲ್ಲವಾದ್ದರಿಂದ ಹೆಚ್ಚಿನ  ಛಾಯಾಚಿತ್ರಗಳಿಲ್ಲ.

ಟ್ರೋಜನ್ ಹಕ್ಕಿ
ಸೂರಕ್ಕಿ ಗೂಡು ( ಸನ್ ಬರ್ಡ್ )
ಪಿಕಳಾರ ಹಕ್ಕಿಯ ಮರಿ ( ಬುಲ್ ಬುಲ್ )
ಸಲೀಂ ಅಲಿಯವರ ಹಾಗೆ ನಾನು ಏನನ್ನಾದರೂ ಸಾಧಿಸಬೇಕೆಂದುಕೊಳ್ಳುತ್ತಿದ್ದೆ ಆಗ. ಪಕ್ಷಿ ವಿಜ್ಞಾನ ಲೋಕಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದೆಲ್ಲ ಕನಸು ಕಾಣುತ್ತಿದ್ದೆ.ಈಗಂತೂ ಆ ಕನಸನ್ನೇ ಮರೆತಿದ್ದೇನೆ. ಓದು,ಕೆಲಸ ಎಂದು ನನ್ನ ಹವ್ಯಾಸಗಳಿಗೆ ಸಮಯವೇ ಇಲ್ಲವಾಗಿದೆ.ಗಣಕಯಂತ್ರ ನನ್ನ ಸಮಯವನ್ನು ಅದಕ್ಕಾಗಿ ಮೀಸಲಿಡಬೇಕು ಎಂದು ಕೇಳಿತು. ಅದಕ್ಕೂ ಒಪ್ಪಿಕೊಂಡೆ. ಹಾಗಾಗಿ ಉಳಿದ ಹವ್ಯಾಸ,ಅಭ್ಯಾಸಗಳಿಗೆ ವಿದಾಯ ಹೇಳಬೇಕಾಯಿತು...


Monday 2 December 2013

ಕಾಲಾಯ ತಸ್ಮೈ ನಮಃ..

ಸುಮಾರು ದಿನಗಳ ನಂತರ ದೀಪಾವಳಿ ಹಬ್ಬಕ್ಕೆಂದು ಮನೆಗೆ ಹೋಗಿದ್ದೆ. ಮೊದಲಿನಷ್ಟು ಸಂಭ್ರಮ ಇಲ್ಲದಿದ್ದರೂ ದೀಪಾವಳಿ ತನ್ನ ಸೊಗಡನ್ನು ಇನ್ನೂ ಉಳಿಸಿಕೊಂಡಿದೆ. ಹಬ್ಬ ಹೇಗೆ ಮುಗಿಯಿತೆಂದು ಗೊತ್ತೇ ಆಗಲಿಲ್ಲ. ಹೊರಡುವ ಮೊದಲು ಅಜ್ಜನಿಗೆ ಹುಷಾರಿಲ್ಲ ಅಂತ ಕೇಳಿ ನೋಡಿಕೊಂಡು ಬರೋಣವೆಂದು ಅಜ್ಜನ ಮನೆಗೆ ಹೊರಟೆವು. 

ತುಂಬಾ ದಿನಗಳ ನಂತರ ನನ್ನನ್ನು ನೋಡಿದ ಅಜ್ಜನ ಕಣ್ಣು ತುಂಬಿ ಬಂದಿತ್ತು. ಪ್ರೀತಿಯಿಂದ ನನಗೆ ಗುಬ್ಬಿ ಅಂತ ಕರೆದರು. ಅವರ ಆಪ್ಯಾಯತೆಗೆ ಮನಸು ಮುದಗೊಂಡಿತ್ತು. ಅವತ್ತು ಮಧ್ಯಾಹ್ನ ಭೂರಿ ಬೋಜನ.ಪಾಯಸ,ಸಾರು,ಹುಳಿ ,ಚಟ್ನಿ,ಸಾಸಿವೆ ಎಲ್ಲ ಮಾಡಿದ್ದರು ದೊಡ್ಡಮ್ಮ(ಅಮ್ಮನ ಅಮ್ಮ ). ಶಂಕರ ಪೊಳೆ,ಬೋಂಡ ,ಅತಿರಸ,ಹೋಳಿಗೆ ತಿಂದು ನನಗೆ ನಡೆಯಲು ಕಷ್ಟವಾಗುತ್ತಿತ್ತು. ನಿದ್ರೆ ಮಾಡುವುದು ಸರಿಯಲ್ಲವೆಂದು ಹೊರಗೆ ತಿರುಗಾಡಲು ನನ್ನ ತಮ್ಮನೊಂದಿಗೆ ಹೊರಟೆ. ಕೈಯಲ್ಲೊಂದು ಕ್ಯಾಮೆರಾ ಹಿಡಿದುಕೊಂಡು.. 

ಹಾಗೆ ಹೊರಗೆ ಹೊರಟವಳಿಗೆ ಹಳೆಯ ನೆನಪುಗಳು ಮರುಕಳಿಸಿದವು. ಆದರೆ ಯಾವುದೂ ಮೊದಲಿದ್ದಂತೆ ಇರಲಿಲ್ಲ.ನಾನು  ಆ ಜಾಗಕ್ಕೆ ಅಪರಿಚಿತಳೇನೋ ಎನ್ನುವಷ್ಟು  ಬದಲಾವಣೆಗಳು ಆಗಿದ್ದವು. ಮನೆಯ ಮುಂದಿದ್ದ ಬಿದಿರನ ಮಟ್ಟಿ (ಬಿದಿರಿನ ಮರವನ್ನು ಹಾಗೆ ಕರೆಯುತ್ತಾರೆ) ಕಾಣೆಯಾಗಿತ್ತು. ಬಿದಿರು ಕಟ್ಟೆ ಬಂದು ಅದು ನಾಶವಾಗಿತ್ತು. (ಕಟ್ಟೆ ಬರುವುದು ಎಂದರೆ ಭತ್ತದಂತೆಯೇ ಇರುವ ಬಿದಿರಿನ ಬೀಜಗಳು ಹುಟ್ಟುತ್ತವೆ.ಬಿದಿರಕ್ಕಿ ಎಂದು ಕರೆಯುತ್ತಾರೆ. ಅದು ಬಂದಾಗ ಬಿದಿರು ತಾನು ಸತ್ತು ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುತ್ತದೆ.) ತೋಟದಲ್ಲಿ ಯಾವಾಗಲೂ ಹರಡಿರುತ್ತಿದ್ದ ಮದ್ಯಾಹ್ನ ಮಲ್ಲಿಗೆಯ ಗಿಡಗಳು ಅಲ್ಲಿ ಇರಲೇ ಇಲ್ಲವೇನೋ ಎಂಬಂತೆ ನಾಮವಶೇಷ ಆಗಿದ್ದವು. ಬೇಲಿಯಲ್ಲಿ ಆಗ ತಾನೇ ಅರಳಿ ನಿಂತಿರುತಿದ್ದ ಶ್ವೇತ ವರ್ಣದ ಕಣಗಿಲೆ ಹೂವುಗಳನ್ನು ಕಿವಿಯೋಲೆಯಾಗಿ ಬಳಸಿ ಆಡಿಕೊಳ್ಳುತ್ತಿದ್ದುದು ನೆನಪಾಯಿತು. ಬೇಲಿಯ ಕಡೆ ನೋಡಿದೆ. ಎಲೆಯೇ ಇಲ್ಲದೆ ಒಣಗಿ ಕುಳಿತ ಗಿಡಗಳು.!!ಮನೆಯ ಮುಂದೆ ಧರೆಯೊಂದಿತ್ತು.ಅಲ್ಲಿಂದ  ಕೆಳಗೆ ಹಾರುವುದು ನಾವು ಆಡುತ್ತಿದ್ದ ಆಟಗಳಲ್ಲೊಂದು. ಅದರ ತುದಿಯಲ್ಲೊಂದು ಪಾರಿಜಾತದ  ಮರ. ದೊಡ್ಡಮ್ಮ ಕೃಷ್ಣ ಪಾರಿಜಾತ ತಂದ ಕಥೆ ಹೇಳುವಾಗೆಲ್ಲ ನಾನು ಈ ಗಿಡವೇನೇನೋ ಎಂದುಕೊಳ್ಳುತಿದ್ದೆ. ಮುಂಜಾನೆಯ ಮಂಜಿನಲ್ಲಿ ಎದ್ದು ದೇವರಿಗೆ ಪ್ರಿಯವೆಂದು ಕೆಳಗೆ ಬಿದ್ದ ಪಾರಿಜಾತದ ಹೂವುಗಳನ್ನು ಆಯ್ದು ತರುತ್ತಿದ್ದೆವು. ಒಂದು ದಿನ ಸುರಿದ ಭಾರೀ ಮಳೆಗೆ ಆ ಧರೆ ಕುಸಿದು ,ತುದಿಯ ಮರ ಕೆಳಗುರುಳಿತಂತೆ.ನಾವು ನೀರು ಸೇದಿ ತರುತ್ತಿದ್ದ ಬಾವಿಯ ಬಳಿಗೆ ಹೋದೆ. ರಾಟೆ ಹಗ್ಗ ಯಾವುದೂ ಇರಲಿಲ್ಲ.ಯಂತ್ರಗಳ ಆವಿಷ್ಕಾರಗಳ  ಪರಿಣಾಮ.!

ಬಾವಿ 
ನಾವು ಆಡುತ್ತಿದ್ದ ಪಗಡೆ,ಚನ್ನೆ ಮಣೆಗಳು ಕೇಳುವವರಿಲ್ಲದೆ ಮೂಲೆ ಹಿಡಿದಿದ್ದವು.ಯಾವಾಗಲೂ ಹಣ್ಣುಗಳಿಂದ ತುಂಬಿ ತೂಗುತ್ತಿರುತ್ತಿದ್ದ ಸಪೋಟ ಮರವಿರಲಿಲ್ಲ.ಬುಟ್ಟಿ ತುಂಬುವಷ್ಟು ಹಣ್ಣು ಕೊಡುತ್ತಿದ್ದ ಪೇರಳೆ ಮರವೂ ಇರಲಿಲ್ಲ. ಹಣ್ಣು ತಿನ್ನಲು ಬರುವ ಮಂಗಗಳು ಅಡಿಕೆ ತೋಟಕ್ಕೆ ನುಗ್ಗುತ್ತವೆಂದು ಮರಗಳನ್ನು ಕಡಿಸಿದ್ದರು. ಮಂಗಗಳನ್ನು ಓಡಿಸಲು ಅಜ್ಜ ಬಳಸುತ್ತಿದ್ದ ಕವಣೆ ಪಟ್ಟೆಯ ಕಾಲವೂ ಮುಗಿದಿತ್ತು. (ಕವಣೆ ಪಟ್ಟೆ ಎಂದರೆ ದಪ್ಪವಾದ ಬಟ್ಟೆಯ ಎರಡೂ ತುದಿಯಲ್ಲಿ ಹಗ್ಗಗಳನ್ನು ಕಟ್ಟಿರುತ್ತಾರೆ. ಮದ್ಯದಲ್ಲಿ ಕಲ್ಲು ಇಟ್ಟು  ಬೀಸಿ ಎಸೆಯುತ್ತಾರೆ.ಉತ್ತಮ ಗುರಿಕಾರರಾಗಿದ್ದರೆ ಕಲ್ಲು ತುಂಬಾ ದೂರದ ವರೆಗೂ ತಲುಪುತ್ತದೆ ). ನನ್ನೊಂದಿಗೆ ಕಾಡು ಸುತ್ತುವುದಕ್ಕೆ,ಪಕ್ಷಿವೀಕ್ಷಣೆಗೆ ಬರುತ್ತಿದ್ದ ಅಜ್ಜ ಹಾಸಿಗೆ ಹಿಡಿದು ಮಲಗಿದ್ದರು. ಗುಡ್ಡ ಹತ್ತುವುದಿರಲಿ ಮನೆಯಿಂದ ಹೊರಗೆ ಬರಲಾಗದಷ್ಟು ಶಕ್ತಿಹೀನರಾಗಿದ್ದರು. ಒಂದಾದ ಮೇಲೊಂದು ಕಥೆಗಳನ್ನು ಹೇಳುತ್ತಿದ್ದ  ದೊಡ್ಡಮ್ಮ ಕೂಡ ಮೊದಲಿನ ಉತ್ಸಾಹ ಕಳೆದು ಕೊಂಡಿದ್ದರು.ಜೊತೆಯಾಗಿದ್ದ ಗೆಳತಿ ಕೂಡ ಮದುವೆಯಾಗಿ ಬೇರೆ ಊರು ಸೇರಿದ್ದಳು.ಯಾಕೋ ಒಂಟಿ ಎಂಬ ಭಾವನೆ ಆವರಿಸಿತು.ನನ್ನನ್ನೊಮ್ಮೆ ಕೇಳಿಕೊಂಡೆ ನಾನೆಷ್ಟು ಬದಲಾಗಿರುವೆ ? ಎಂದು. ಹೌದು ನನ್ನಲ್ಲೇ ಎಷ್ಟೋ ಬದಲಾವಣೆ ಇದೆ. ಅಂತಹುದರಲ್ಲಿ ಇವೆಲ್ಲ ಬದಲಾಗದೆ ಹೇಗೆ ಉಳಿದಾವು ಎನಿಸಿತು. 

ಚನ್ನೆ ಮಣೆ 
ಮನೆಯ ಮುಂದಿದ್ದ ಸಪೋಟ ಗಿಡದೊಂದಿಗೆ ಒಂದು ಘಟನೆ ತಳುಕು ಹಾಕಿಕೊಂಡಿದೆ. ಯಾವಾಗಲೂ ಹಕ್ಕಿ ಗೂಡುಗಳನ್ನು ತಂದು ಮನೆಯ ಮುಂದಿನ ಗಿಡಗಳಲ್ಲಿ ಇಡುವುದು ನನ್ನ ಅಭ್ಯಾಸ. ಹಕ್ಕಿಗಳು ಬಂದು ಮೊಟ್ಟೆ ಇಡುತ್ತವೆ ಎಂಬ ಭರವಸೆಯಿಂದ ಕಾಯುತ್ತಿದ್ದೆ.ಯಾವುದಾದರೂ ಹಕ್ಕಿ ಮೊಟ್ಟೆ ಇಟ್ಟಿದೆಯೇ ಎಂದು ಪ್ರತಿ ದಿನವೂ ಒಂದು ಬಾರಿಯಾದರೂ ಪರಿಶೀಲಿಸುತ್ತಿದ್ದೆ. ಅವತ್ತೂ ಹಾಗೆ ಸಪೋಟ ಗಿಡದಲ್ಲಿ ತಂದಿಟ್ಟಿದ್ದ ಗೂಡಿನ  ಹತ್ತಿರ ಹೋಗಿ ನೋಡಿದೆ. ಹೊಸ ಅತಿಥಿಯೊಬ್ಬರು ಗೂಡೊಳಗೆ.!ಯಾರೆನ್ನುತ್ತೀರೋ .? ಕಂದು ಬಣ್ಣದ ಹಪ್ಪಟ್ಟೆ  ಹಾವು ಬೆಚ್ಚಗೆ ಮಲಗಿದೆ. ಗಿಡದ ಬುಡದಲ್ಲಿ ಇನ್ನೊಂದು ಹಾವು.!ಗೂಡಿಗೆ ಕೈ ಇಟ್ಟವಳು ಭಯದಿಂದ ಕಂಪಿಸಿದೆ.ಮನೆಗೆ ಓಡಿ ಬಂದವಳು ಇನ್ನೆಂದೂ ಮನೆಗೆ ಗೂಡು ತರುವ ಸಾಹಸಕ್ಕೆ ಹೋಗಲಿಲ್ಲ. 

ಕ್ಯಾಮೆರಾ ಕಣ್ಣಿನಲ್ಲಿ ಬೇಕೆನಿಸಿದ್ದನ್ನೆಲ್ಲ ಸೆರೆಹಿಡಿಯುತ್ತಿದ್ದಾಗ ಆಶ್ಚರ್ಯವೊಂದು ಕಾದಿತ್ತು.ಹಳೆಯದಾಗಿದ್ದರೂ ಹೊಸತನವನ್ನು ಉಳಿಸಿಕೊಂಡು ಬದಲಾಗದೆ, ನನ್ನೆಲ್ಲ ನೆನಪುಗಳಿಗೆ ಕುರುಹಾಗಿ ಉಳಿದಿತ್ತೊಂದು ಇರುವೆ ಗೂಡು. ಬಹಳ  ವರುಷಗಳಿಂದ ಇರುವ ಗೂಡು, ಎರಡು ಮೂರು ತಲೆಮಾರುಗಳು ಕಳೆದರೂ ಎಲ್ಲದಕ್ಕೂ ಸಾಕ್ಷಿ ಎಂಬಂತೆ ಅಲ್ಲಿತ್ತು. ಮನೆಯ ಸುತ್ತ ಮುತ್ತ ಸುಮಾರು ನಾಲ್ಕು ಅಂತಹ ಗೂಡುಗಳಿದ್ದವು.ಹುಡುಕಿದಾಗ  ನನಗೆ ದೊರಕಿದ್ದು ಎರಡು ಮಾತ್ರ. ನಾವು (ನಾನು,ನನ್ನ ಗೆಳತಿ) ಅಪರೂಪಕ್ಕೊಮ್ಮೆ ಅವುಗಳಿಗೆ ಸಕ್ಕರೆ ಹಾಕುತ್ತಿದ್ದೆವು. ಇರುವೆಗಳು ಸಾಲಾಗಿ ಬಂದು ಸಕ್ಕರೆಯನ್ನು ಹೊತ್ತೊಯ್ಯುವ ದೃಶ್ಯ ನೋಡುತ್ತಾ ಕುಳಿತಿರುತ್ತಿದ್ದ ನಮಗೆ ಸಮಯದ ಪರಿವೇ ಇರುತ್ತಿರಲಿಲ್ಲ.

ಇರುವೆ ಗೂಡು 
ಗುಬ್ಬಿ ಎನ್ನುವ ಚಿಕ್ಕ ಹುಳಗಳ ಜೊತೆ ಆಡುತ್ತಿದ್ದದ್ದು ಇನ್ನೂ ಮರೆತಿಲ್ಲ .ಮಣ್ಣಿನಲ್ಲಿ ಅವಿತು ಕುಳಿತಿರುತ್ತವೆ ಇವು. ಈ ಹುಳಗಳಿಗೆ ಬೇರೆ ಏನಾದರು ಹೆಸರು ಇದೆಯೇನೋ ನನಗೆ ತಿಳಿಯದು. ನಾವು ಗುಬ್ಬಿ ಎಂದೇ ಕರೆಯುತ್ತೇವೆ.ಅವುಗಳನ್ನು ಹುಡುಕಿ ಕೈ ಮೇಲೆ ಬಿಟ್ಟುಕೊಂಡಾಗ ಕಚಗುಳಿಯೆನಿಸುತ್ತದೆ.ಮುಂದೆ ನಡೆಯಲು  ದಾರಿ ತಿಳಿಯದಿದ್ದಾಗ ದಿಕ್ಸೂಚಿಗಳಾಗಿ ಉಪಯೋಗಿಸಿಕೊಳ್ಳುತ್ತಿದ್ದೆವು. ಕೈಮೇಲೆ ಬಿಟ್ಟಾಗ ಅದು ಚಲಿಸಿದ ದಿಕ್ಕೇ ನಮಗೆ ದಾರಿ. ನಾನು ಅವುಗಳಿಗೆ ಸಹಾಯ ಮಾಡಲು ತುಂಬಾ ಪ್ರಯತ್ನಿಸಿದ್ದೆ.! ಹಿಟ್ಟು ಸಾಣಿಸುವ ಪಾತ್ರೆಯ ಸಹಾಯದಿಂದ ಮಣ್ಣು ಸಾಣಿಸಿ ನುಣುಪಾದ ಮಣ್ಣು ಶೇಖರಿಸಿ ಗುಬ್ಬಿಗಳನ್ನೆಲ್ಲ ಹುಡುಕಿ ಅಲ್ಲಿಗೆ ತಂದು ಬಿಡುತ್ತಿದ್ದೆ.ಸ್ವಲ್ಪ ಹೊತ್ತಾದ ಮೇಲೆ ಹೋಗಿ ನೋಡಿದರೆ ಒಂದಾದರೂ ಇರಬೇಡವೇ .! ಪತ್ತೆಯೇ ಇರುತ್ತಿರಲಿಲ್ಲ.ಕೊನೆಗೆ ವ್ಯರ್ಥ ಪ್ರಯತ್ನವೆಂದು ಸುಮ್ಮನಾಗುತ್ತಿದ್ದೆ.ಇಂದೆಲ್ಲಾದರು  ನನ್ನ ಕ್ಯಾಮೆರಾಕ್ಕೆ ಕಾಣಸಿಗುತ್ತವೇನೋ ಎಂದು ಆತುರಾತುರವಾಗಿ ಹುಡುಕಿದೆ.ನೆಲದಲ್ಲಿ ಚಿಕ್ಕ ಚಿಕ್ಕ ಗುಬ್ಬಿ ಗೂಡುಗಳು. ಮತ್ತೆ ಹಳೆಯ ಆಟ ಆಡುತ್ತ ಕುಳಿತಿದ್ದೆ  ಅಮ್ಮನ ಕರೆ ಬರುವವರೆಗೂ.. "ಬಂದೆ ಅಮ್ಮಾ! ಎರಡ್ನಿಮ್ಶ" ಅಂತ ಹೇಳಿ ಒಂದೆರಡು ಛಾಯಾಚಿತ್ರ ತೆಗೆದುಕೊಂದು ಒಳಗೆ ಓಡಿದೆ. 

ಗುಬ್ಬಿಯ ಗೂಡು 

ಗುಬ್ಬಿ ಹುಳ 
ಅವತ್ತಿಂದ ಇವತ್ತಿಗೆ ಎಲ್ಲ ಬದಲಾಗಿತ್ತು.ಮನುಷ್ಯ,ಮನಸ್ಸು ಎರಡೂ ಕಾಲದ ಸೆಳೆತಕ್ಕೆ ಸಿಕ್ಕಿದ್ದವು. ಆದರೆ ಚಿಕ್ಕ ಇರುವೆಯ ಗೂಡು ಹಾಗೇ  ಇತ್ತು.ನಾನು  ನಾನೆಂಬ ಅಹಂಕಾರದಿಂದ ಮೆರೆಯುವ ಮನುಷ್ಯ, ಪ್ರಕೃತಿಯ ಮುಂದೆ ಎಷ್ಟು ಕುಬ್ಜನಲ್ಲವೇ.?
"ಕಾಲಾಯ ತಸ್ಮೈ ನಮಃ.. "