Thursday 9 June 2016

ಹನುಮನಗುಂಡಿ ಮತ್ತು ಬೇಲೂರು

ಕುದುರೆಮುಖ ಚಾರಣ ಮುಗಿಸಿ ಮರುದಿನ ಹೊರಟಿದ್ದು  ಹನುಮನ ಗುಂಡಿ ಜಲಪಾತಕ್ಕೆ. ದಾರಿಯಲ್ಲಿ ಕಡಂಬಿ ಜಲಪಾತ ಕಂಡಿತು. ನಮ್ಮ ವಾಹನದ ಚಾಲಕ ಅಲ್ಲಿ ನಿಲ್ಲಗೊಡಲಿಲ್ಲ. ವಾಹನದೊಳಗಿಂದಲೇ ಕೆಲವು ಛಾಯಾಚಿತ್ರ ತೆಗೆದುಕೊಂಡೆವು. ಹನುಮನಗುಂಡಿ ಜಲಪಾತ ಹತ್ತಿರದಲ್ಲೇ ಇತ್ತು. ಕೆಳಗಿಳಿಯಲು ಮೆಟ್ಟಿಲುಗಳಿವೆ. ಸುಲಭವಾಗಿ ಎಲ್ಲರಿಗೂ ಹೋಗಿ ಬರಲು ಸಾಧ್ಯವಾಗುವಂತೆ ಅನುಕೂಲಗಳಿವೆ. ಹಾಗೆಯೇ ಜನ ಜಾಸ್ತಿಯಾದಂತೆಲ್ಲ ಸುತ್ತಮುತ್ತಲ ವಾತಾವರಣ ಕೆಡುವ ಅಪಾಯವೂ ಇಲ್ಲದಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುತ್ತಿತ್ತು ಸೂತನಬ್ಬಿ. ನೀರಿಗಿಳಿದು ಆಡುವ ಯೋಚನೆಯನ್ನು ಯಾರೂ ಮಾಡಲಿಲ್ಲ. 
ಕಡಂಬಿ ಜಲಪಾತ 

ಹನುಮನ ಗುಂಡಿ (ಸೂತನಬ್ಬಿ ) ಜಲಪಾತ 

ಅಲ್ಲಿಂದ ಬೆಂಗಳೂರಿನ ಕಡೆಗೆ ನಮ್ಮ ಪ್ರಯಾಣ ಸಾಗಿತು. ಕೊಟ್ಟಿಗೆ ಹಾರದಲ್ಲಿ ನಮ್ಮ ಊಟ. ದಾರಿಯಲ್ಲೇ ಇದ್ದ ಬೇಲೂರು ತಲುಪಿದೆವು. ಅಲ್ಲಿನ ಚನ್ನಕೇಶವನ ದೇವಸ್ಥಾನ, ಕರ್ನಾಟಕದ ವಾಸ್ತುಶಿಲ್ಪದ ಸೊಗಡಿಗೆ ಹಿಡಿದ ಕನ್ನಡಿ. ಶಿಲಾಬಾಲಿಕೆಯರ ಅಷ್ಟೂ ಚೆಲುವನ್ನು ಕಲ್ಲಿನಲ್ಲಿ ಕೆತ್ತಿ ಅದ್ಭುತವನ್ನೇ ತೋರಿಸಿದ ಶಿಲ್ಪಿಗೆ ನುಡಿನಮನ. ದರ್ಪಣ ಸುಂದರಿ ಎಲ್ಲಿದೆ ಎಂದು ಹುಡುಕಿದ್ದೆ ನಾನು. ದೇವಾಲಯದ ಮುಂಭಾಗದಲ್ಲೇ ಇತ್ತು ಅದು. ದೇವರ ದರ್ಶನ ಪಡೆದೆವು. ಅಲ್ಲಿಂದ ಹೊರಬಂದಾಗ ಏನೋ ಪ್ರಶಾಂತತೆ ಮನಸ್ಸನ್ನು  ತುಂಬಿತ್ತು.

ಬೇಲೂರಿನ ಗುಡಿಯಲ್ಲಿ ಕೇಶವನೆದುರಲ್ಲಿ..  

ಅಷ್ಟೇ ಅಲ್ಲಿಂದ ಮತ್ತೆ ಬೆಂಗಳೂರಿಗೆ ವಾಪಸು ಬಂದಿದ್ದು. ನಮ್ಮ ಪ್ರವಾಸದ ಕೊನೆಯ ಕೆಲವು ಗಂಟೆಗಳು  ಬಸ್ ಪ್ರಯಾಣದಲ್ಲಿ ಕಳೆಯಿತು. ಬೆಂಗಳೂರು ತಲುಪುವಷ್ಟರಲ್ಲಿ ೧೧ ಗಂಟೆಯ ಸುಮಾರು. ಎಲ್ಲರೂ ವಿದಾಯ ಹೇಳಿ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿದೆವು. 


PC :ತೇಜಸ್ ಜಯಶೀಲ್ 




Tuesday 7 June 2016

ಮಳೆಗಾಲದ ಕುದುರೆಮುಖ..

ಮತ್ತೆ ಮಳೆಗಾಲ ಬಂದಿದೆ. ಮತ್ತೆ ಚಾರಣಗಳು. ಚಾರಣಿಗರೆಲ್ಲ ಈ ಸಲ ಮಳೆಗಾಲದಲ್ಲಿ ಎಲ್ಲಿ ಹೋಗೋದು ಅಂತ ಆಗಲೇ ಲೆಕ್ಕ ಹಾಕಿ ಕೂತಿದ್ದಾರೆ ಅನ್ಸತ್ತೆ.ಇವತ್ತು ಮತ್ತೆ ಆ ಹಸಿರಿನ ಸುಗ್ಗಿಯ ನೆನಪಿಗೆ ತನ್ನದೊಂದು ಪುಟವನ್ನು ಸೇರಿಸಿದ ಕುದುರೆಮುಖ ಪ್ರವಾಸದ ಬಗ್ಗೆ ಬರೆಯುತ್ತಿದ್ದೇನೆ. ಇದು ಸುಮಾರು ವರ್ಷದ ಹಿಂದಿನ ಅನುಭವ. ಜುಲೈ ತಿಂಗಳು ಬಂದರೆ ಪೂರ್ತಿ ಒಂದು ವರ್ಷವಾಗುತ್ತದೆ.ಕುದುರೆಮುಖದ ಜಾಡಿನಲ್ಲಿ ಉಳಿದ ನೆನಪಿನ ಚಿಹ್ನೆಗಳನ್ನು ಮಾಸುವ ಮುನ್ನ ಬರೆದಿಡಬೇಕಿದೆ.   

ಮಳೆಗಾಲದ ದಿನಗಳು ಚಾರಣಕ್ಕೆ ಹೇಳಿ ಮಾಡಿಸಿದಂತವು. ಬೇಸಿಗೆಯಲ್ಲಿ ಬಿಕೋ ಎನ್ನುವ ಭೂಮಿ, ರಣ ಬಿಸಿಲಲ್ಲಿ ಜನರಿಲ್ಲದೆ ಬರಡಾಗಿ, ಗಿಡ ಮರಗಳೆಲ್ಲ ಬೆಂದು, ಬಾಡಿರುತ್ತವೆ. ಅದೇ ಮಳೆಗಾಲ ಬರಲಿ ಯಾರೋ ಮಾಂತ್ರಿಕನ ಮಂತ್ರ ದಂಡಕ್ಕೆ ಸಿಕ್ಕಿದ ವಸ್ತುಗಳಂತೆ ಗಿಡ,ಮರ,ತರು,ಲತೆಗಳೆಲ್ಲ ನಳನಳಿಸುತ್ತಿರುತ್ತವೆ. ಗುರುತಿಸಲಾಗದಷ್ಟು ಬದಲಾವಣೆ. ಇಂತಹ ಸಮಯದಲ್ಲೇ ನಾವು ಹೊರಟಿದ್ದು ಕುದುರೆಮುಖಕ್ಕೆ. ಶ್ರೀಹರ್ಷ ಐತಾಳ್ ನಮ್ಮ ಚಾರಣದ ಆಯೋಜಕರಾಗಿದ್ದರು. ಆದರೆ ಅಲ್ಲಿ ನಮ್ಮನ್ನ ಕರೆದೊಯ್ದದ್ದು, ಎಲ್ಲ ಮೇಲ್ವಿಚಾರಣೆ ನೋಡಿಕೊಂಡಿದ್ದು ತೇಜಸ್. ನಾನು ಚಾರಣಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಹೊಸದಾಗಿ ಕೊಂಡಿದ್ದೆ.ಏನೋ ಒಂತರ ಸಂಭ್ರಮವಿತ್ತು.ಅಂತೂ ಹೊರಡುವ ದಿನ ಬಂತು. ಅವತ್ತು ಶುಕ್ರವಾರದ ರಾತ್ರಿ ನಾನು ಹೋಗಿ ಶಾಂತಲ ಸಿಲ್ಕ್ ಬೋರ್ಡ್ ಹತ್ತಿರ ಇಳಿಯುವ ವೇಳೆಗೆ ಸುಮಾರು ಜನ ಆಗಲೇ ಬಂದು ಕಾಯುತ್ತ ನಿಂತಿದ್ದರು. ಕೆಲವರು ನನಗೆ ಮೊದಲೇ ಪರಿಚಯವಿದ್ದವರು.ಇನ್ನು ಕೆಲವರು ಹೊಸತಾಗಿ ಪರಿಚಯವಾದರು.ಸ್ವಲ್ಪ ಹೊತ್ತಿಗೆ ನಮ್ಮನ್ನು ಕರೆದೊಯ್ಯಬೇಕಾಗಿದ್ದ ವಾಹನ ಬಂದಿತು. ನಾವಿದ್ದದ್ದು ಇಪ್ಪತ್ತು ಜನ. ಹತ್ತಿ ಕುಳಿತು ಹೆಚ್ಚು ಹರಟೆ ಹೊಡೆಯದೆ ನಿದ್ರೆ ಹೋದೆವು.೨:೩೦ ಗಂಟೆಯ ಸುಮಾರಿಗೆ ಕೊಟ್ಟಿಗೆ ಹಾರದ ದೋಸೆಯ ವಾಸನೆ ಎಲ್ಲರನ್ನೂ ಎಬ್ಬಿಸಿತ್ತು. ಬಿಸಿ ಬಿಸಿ ಕಾಫಿ ಜೊತೆಯಲ್ಲಿ ದೋಸೆ ತಿಂದದ್ದು ಅದ್ಭುತವಾಗಿತ್ತು.ಮತ್ತೆ ನಮ್ಮ ಪ್ರಯಾಣ ಮುಂದುವರೆಯಿತು. 

ಬೆಳಿಗ್ಗೆ ಎದ್ದು ಕಣ್ಣುಜ್ಜಿಕೊಂಡೆ. ಮಬ್ಬು ಕತ್ತಲೆಯ ಮಧ್ಯದಲ್ಲಿ ಆಗ ತಾನೇ ಹೊರಟಿದ್ದ ಬೆಳಕು ತಣ್ಣಗೆ ತನ್ನ ಕಿರಣಗಳನ್ನು ಪಸರಿಸತೊಡಗಿತ್ತು. ಅಲ್ಲಲ್ಲಿ ಟೀ ಎಸ್ಟೇಟ್ ಗಳು. ಚಿಕ್ಕಮಗಳೂರಿನ ಮಡಿಲಲ್ಲಿ ಇದ್ದೆವು ನಾವು. ಅಲ್ಲಿಂದ ಸಂಸೆಯವರೆಗಿನ ಪಯಣ.ಸಂಸೆಯಲ್ಲಿ ಇಳಿದಾಗ ಚನ್ನಾಗಿ ಬೆಳಕಾಗಿತ್ತು. ಹಕ್ಕಿಗಳ ಉಲಿಯ ,ಮಳೆರಾಯನ ಜಿನುಗುವ ಹನಿಯ ಸ್ವಾಗತ ನಮಗೆ. ಅಲ್ಲಿಂದ ಜೀಪೊಂದು ಮಣ್ಣು ದಾರಿಯ(ಕೆಸರು ದಾರಿ ಹೆಚ್ಚು ಸೂಕ್ತ) ಮೂಲಕ ನಮ್ಮನ್ನು ನಮ್ಮ ಚಾರಣದ ಮಾರ್ಗದರ್ಶಿಗಳ ಮನೆಗೆ ತಲುಪಿಸಿತು. ದಾರಿಯಂತೂ ದೇವರಿಗೆ ಪ್ರೀತಿ. ಅಷ್ಟು ಕಷ್ಟದ ಕುಲುಕಾಟದ ದಾರಿ. ಆ ಚಾಲಕನ ಹತ್ತಿರ ಬೇರೆ ಹಾಡು ಇರಲಿಲ್ಲ ಅನ್ಸತ್ತೆ, ಬರೀ  "ವೋನೆ ವೋನೆ" ಅಂತ ಹಾಡು ಹಾಕಿ ತಲೆನೋವು ಬರಿಸಿದ್ದ.ನಮ್ಮ ಚೀಲಗಳನ್ನು ಗೈಡ್ ಮನೆಯಲ್ಲಿ ಇಟ್ಟು ಬೆಳಗ್ಗಿನ ತಿಂಡಿ ತಿಂದೆವು.ಮದ್ಯಾಹ್ನದ ಊಟಕ್ಕೆಂದು ಮಾಡಿದ ಪುಳಿಯೋಗರೆ ಕಟ್ಟಿಸಿಕೊಂಡೆವು.
ದಾರಿಯಲ್ಲಿ ಕಾಣಿಸಿದ ಟೀ ಎಸ್ಟೇಟ್ 
 ನನ್ನ ಕನಸಿನ ಬಗ್ಗೆ ಹೇಳಲೇ ಬೇಕು ಇಲ್ಲಿ. ನಂಗೆ ಒಂದು ಕನಸು ಬಿದ್ದಿತ್ತು. ಯಾವುದೋ ಜಾಗಕ್ಕೆ ಚಾರಣಕ್ಕೆ ಹೋಗಿದ್ದೆವು ನಾವು. ಅಲ್ಲಿ ತುಂಬಾ ಇಂಬಳಗಳು. ಅದು ಕರ್ನಾಟಕದ ಅತಿ ಹೆಚ್ಚು ಇಂಬಳಗಳಿರುವ ಪ್ರದೇಶ ಎಂದು ಪ್ರಸಿದ್ದಿ ಪಡೆದಿತ್ತು. ಅಲ್ಲಿದ್ದ ಉದ್ದ ಉದ್ದದ ಇಂಬಳಗಳನ್ನು ನೋಡಿ ಭಯವಾಗಿತ್ತು ಎಂಬುದು ಕನಸಿನ ಸಾರಾಂಶ. Whatsapp ಗುಂಪಿನಲ್ಲಿ ನನ್ನ ಕನಸಿನ ಬಗ್ಗೆ ಹೇಳಿದೆ. ಅದಕ್ಕೆ ಶಿಲ್ಪನ ಉತ್ತರ  "ನನಗೆ ಮಾತ್ರ ಇಂತಹ ಕನಸು ಬೀಳುವುದು ಎಂದುಕೊಂಡಿದ್ದೆ. ನಿಂಗೂ ಈ ತರ ಕನಸು ಬೀಳತ್ತೆ ಅಂತ ಗೊತ್ತಾಯ್ತು " ಎಂದಳವಳು. ಹರ್ಷನ ಉತ್ತರ " ಕುದುರೆಮುಖ ಇರ್ಬೇಕು ಅದು. ನಾನು ಕುದುರೆಮುಖ ಹೋದಾಗ ಜಾರಿ ಬಿದ್ದು  ಇಡೀ  ಮೈಗೆಲ್ಲ ಇಂಬಳ ಹತ್ತಿತ್ತು " ಅಂದ. ಪವಿತ್ರ ಅಂತ ಇನ್ನೊಬ್ಬಳು ಗೆಳತಿ "ನನ್ನ ಕಾಲಿನಲ್ಲಿ ಕಾಲ್ಗೆಜ್ಜೆ ತರ ಒಂದು ಸುತ್ತು, ಕುತ್ತಿಗೆಯ ಬಳಿ ಸಹ ಸರದಂತೆ ಇಂಬಳಗಳಿದ್ದವು.ರಕ್ತ ತುಂಬಾ ಹೋಗಿ ನಾನು ಆಸ್ಪತ್ರೆಗೆ ಸೇರಬೇಕಾಯ್ತು. ಆಮೇಲೆ ೨ ಕೆ. ಜಿ ತೂಕ ಕಳೆದುಕೊಂಡೆ" ಎಂದಳು. ಇದಿಷ್ಟು ನನಗೆ ದೊರೆತಿದ್ದ ಮಾಹಿತಿ. ನಾನು ಎಲ್ಲದಕ್ಕೂ ತಯಾರಾಗಿ dettol, deoderant  ತೆಗೆದುಕೊಂಡು ಹೋಗಿದ್ದೆ. ನಶ್ಯದ ಪುಡಿ ಸಿಕ್ಕಿರಲಿಲ್ಲ. ನನ್ನ ಶೂ ಸಾಕ್ಸ್ ಎಲ್ಲವನ್ನು dettol ಅಲ್ಲಿ ಅದ್ಡಿ ತೆಗೆದು ಹಾಕಿಕೊಂಡು ಚಾರಣಕ್ಕೆ ಅಣಿಯಾದೆ. 

ಕುದುರೆಮುಖದ ಶೃಂಗ ತಲುಪುವುದಕ್ಕೆ ಸುಮಾರು ೮ ಕಿ. ಮೀ ನಡೆಯಬೇಕಿತ್ತು. ಮತ್ತೆ ತಿರುಗಿ ಬರಲು ಇನ್ನೆಂಟು ಕಿ.ಮೀ. ಒಟ್ಟು ೧೬ ಕಿ. ಮೀ ಒಂದು ದಿನದಲ್ಲಿ ನಡೆಯಬೇಕಾಗಿದ್ದ ದೂರ. ಮೊದಲೇ ಹೇಳಿಕೇಳಿ ಮಳೆಗಾಲ. ಮದ್ಯದಲ್ಲಿ ಇದ್ದ ೭-೮ ಹಳ್ಳಗಳು ತುಂಬಿ ಹರಿಯುತ್ತಿದ್ದವು. ಮೊದಲಿನ ಒಂದೆರಡು ಹಳ್ಳಗಳ ದಾಟುವಷ್ಟರಲ್ಲೇ ನಾನು ಹಚ್ಚಿಕೊಂಡಿದ್ದ dettol ಎಲ್ಲ ಕೊಚ್ಚಿ ಹೋಗಿತ್ತು.ದಟ್ಟವಾಗಿ ಮರ ಬೆಳೆದ ದಂಡಕಾರಣ್ಯ ಅಲ್ಲ ಅದು. ಏರಾದ ದಾರಿಯೂ ಅಷ್ಟಾಗಿ ಇರಲಿಲ್ಲ. ಹಸಿರು ಹುಲ್ಲಿನ ಹೊದಿಕೆ ಹೊದೆದು ಸಾಲಾಗಿ ಸದ್ದಿಲ್ಲದೇ ಮಲಗಿದ್ದ ಚಿಕ್ಕ ಚಿಕ್ಕ ಗುಡ್ಡಗಳು ನಡುವೆ ಮಣ್ಣಿನ ಕಾಲು ದಾರಿ. ಮಳೆಹನಿಯ ನಡುವೆ ಅಲ್ಲಲ್ಲಿ ಮುಸುಕಿದ ಮಂಜಿನ ಜಾತ್ರೆ.ಕಡವೆಗಳ ದರ್ಶನವೂ ಸಿಕ್ಕಿತ್ತು.ಅವೆಲ್ಲದರ ನಡುವೆ ನಡುಗುತ್ತ, ಜೊತೆಗೊಂದಿಷ್ಟು ಫೋಟೋ ತೆಗೆದುಕೊಳ್ಳುತ್ತಾ ಬೆಟ್ಟದ ತುತ್ತ ತುದಿ ತಲುಪಿದಾಗ ಗಂಟೆ ೨ ರ ಆಸುಪಾಸು.ಅಲ್ಲಿಂದ ಕೆಳಗೆ ನೋಡಿದರೆ ಒಂದೇ ಗಾತ್ರದ ಮಡಿಕೆ ಮಡಿಕೆಯಾಗಿ ಮಲಗಿದ ಗುಡ್ಡಗಳು. ಹಸಿರು ಬಿಳಿ ಬಣ್ಣಗಳ ಸಮ್ಮೇಳನ. ಹೀಗಿತ್ತು ಕುದುರೆಮುಖ.

ಚಿಕ್ಕ ಚಿಕ್ಕ ಹಳ್ಳಗಳು 
ಒಂದು ಗುಂಪಿನಲ್ಲಿ ತೆಗಿಸಿಕೊಂಡ ಚಿತ್ರ 

ಹುಲ್ಲಿನ ನಡುವೆ ಹಾದಿ 
ಹೀಗಿತ್ತು ಕುದುರೆಮುಖ 

ಪರ್ವತ ಶೃಂಗದಲ್ಲಿ ಗೆಳೆಯರು 

ಅಡಿಬರಹ ಗೊತ್ತಾಗ್ತಿಲ್ಲ !!
ಮದ್ಯಾಹ್ನದ ಪುಳಿಯೋಗರೆ ಊಟ

ಮಳೆಯಲ್ಲಿ ನಿಂತು ಪುಳಿಯೋಗರೆ ತಿಂದು ಸ್ವಲ್ಪ ಹೊತ್ತಿನ ನಂತರ ಮರಳಿ ಬಂದ ದಾರಿ ಹಿಡಿದೆವು.ಗೈಡ್ ಮನೆ ತಲುಪಿದಾಗ ಸಂಜೆ ೭ ಗಂಟೆಯ ಸುಮಾರು. ಅದೃಷ್ಟಕ್ಕೆ ನನಗೆ ಇಡೀ ದಿನದಲ್ಲಿ ಒಂದೇ ಒಂದು ಇಂಬಳವೂ ಕಚ್ಚಿರಲಿಲ್ಲ. ಮಳೆಯಲ್ಲಿ ನೆನೆದು ಸುಸ್ತಾಗಿ ಬಂದಿದ್ದ ನಮಗೆ ಬೆಂಕಿಯ ಮುಂದೆ ಕುಳಿತು ಚಳಿ ಕಾಯಿಸಿ ಕೊಳ್ಳುವ ಬೆಚ್ಚನೆಯ ಅನುಭವ ದೊರೆಯಿತು. ಅದರೊಂದಿಗೆ ಬಿಸಿ ಬಿಸಿ ಮೆಣಸಿನ ಕಾಯಿಯ ಬಜ್ಜಿ ಮತ್ತೆ ಕಾಫಿ ಕೂಡ ಬಂದಿತು. ಚಿಕ್ಕಮಗಳೂರಿನ ಕಾಫಿ ರುಚಿಯ ಬಗ್ಗೆ ಹೇಳುವುದು ಬೇಕಿಲ್ಲ ಅಲ್ಲವೇ? ಒಟ್ಟಿನಲ್ಲಿ ಎಲ್ಲವೂ ವಾಹ್ಹ್ ಎನಿಸುವಂತೆ ಇತ್ತು.ಅದನ್ನ ಚಪ್ಪರಿಸುತ್ತ ತಿಂದೆವು.ಆಮೇಲೆ ಬಿಸಿ ಬಿಸಿ ನೀರಿನ ಸ್ನಾನ ಆಯಿತು.ಕೊನೆಯಲ್ಲಿ ನಾನೊಂದು ಚೂರು ಊಟದ ಶಾಸ್ತ್ರ ಮುಗಿಸಿದೆ. ಎಲ್ಲರಿಗೂ ಸುಸ್ತಾಗಿತ್ತು. ಆದಷ್ಟು ಬೇಗ ತಂದಿದ್ದ ಮಲಗುವ ಚೀಲದ ಒಳಗೆ ಸೇರಿಕೊಂಡೆವು ನಾವು. 

PC  :Kumaran Mathivanan