Thursday 28 November 2013

ಮೊದಲ ನೆನಪು..

ಏನೇನೋ ಕನಸುಗಳು . ಅವನ್ನೆಲ್ಲ ಬದಿಗೊತ್ತಿ ನಿದ್ರೆಯಿಂದ ಹೊರಬಂದೆ. ಆಗಲೇ ಗಂಟೆ ೪:೩೦ ಆಗಿತ್ತು. ಏಳಲೇಬೇಕಾ ಎಂದು ಮನಸು ಕೇಳಿದ ಪ್ರಶ್ನೆಗೆ ಸಮಾಧಾನ ಹೇಳಿ ಎದ್ದು ಕುಳಿತೆ. ತಣ್ಣಗಿನ ಗಾಳಿ ಬೀಸುತ್ತಿತ್ತು. ಸಣ್ಣಗೆ ಕೊರೆಯುವ ಚಳಿ. ಪ್ರಶಾಂತವಾಗಿತ್ತು ಕೊಠಡಿ.ಹಾಗೇ  ಒಂದಿಷ್ಟು ಕೊಳಲು ವಾದನಗಳನ್ನು ಕೇಳುತ್ತಾ  ಕುಳಿತೆ.ಯಾಕೋ ಮುಂಜಾನೆಯ ಸೂರ್ಯೋದಯವನ್ನು ನೋಡುತ್ತಾ  ಭೈರವಿ ರಾಗವನ್ನೋ , ಶಂಕರಾಭರಣವನ್ನೋ ಕೇಳಬೇಕು ಎಂದೆನಿಸಿತು. ಜೊತೆಗೇ ಬಂತು ಬಾಲ್ಯದ ನೆನಪುಗಳು.
                               

ತೀರ್ಥಹಳ್ಳಿಯ ಚಳಿ ಹೇಗಿರುತ್ತಿತ್ತು ಅಂತ ಮನಸು ನೆನಪಿಸಿತು.ಅಡಿಕೆ ತೋಟಗಳು,ಸುತ್ತುವರಿದ ಕಾಡುಗಳ  ಮಧ್ಯದಲ್ಲಿ ಇರುವ ಒಂದೊಂದು ಮನೆಗಳು.ನಮ್ಮ ಮನೆಯೂ ಇದಕ್ಕೆ ಹೊರತಲ್ಲ. ಚಳಿಗಾಲವೆಂದರೆ ಅಡಿಕೆ ಕೊಯಿಲು.ಅಡಿಕೆ ಕೊಯಿಲು ಎಂದರೆ ಚಳಿಗಾಲ ಏಕೆಂದರೆ ಆ ಸಮಯದಲ್ಲಿ ಮನೆ ಮುಂದೆ ಚಪ್ಪರ ಹಾಕುವುದು ,ಅಡಿಕೆ ಕೊನೆ ತೆಗೆಯುವುದು,ಅಡಿಕೆ ಸುಲಿಯುವುದು,ಬೇಯಿಸಿ ಒಣಗಿಸುವುದು ಹೀಗೆ ಬೇರೆ ಆಲೋಚಿಸಲು ಸಮಯವಿಲ್ಲದಷ್ಟು ಕೆಲಸವಿರುತ್ತದೆ.ತೀರ್ಥಹಳ್ಳಿಯವರ ಮಾತಿನಲ್ಲೇ ಹೇಳುವುದಾದರೆ "ನಂಗ್  ಪುರುಸತ್ತೇ ಇಲ್ಲ ಮರ್ರೆ ಅಡಿಕೆ ಕುಯ್ಲು"  ಎಂಬುದು ಯಾವಾಗಲು ಕೇಳಿಬರುವ ಮಾತು.ಅಡಿಕೆ ಕೊನೆ ತೆಗೆದ ಮೊದಮೊದಲ ದಿನಗಳಲ್ಲಿ  ಸಂಭ್ರಮ. ಅಡಿಕೆ ಮನೆಗೆ ಬಂದ ತಕ್ಷಣ ಚಿಕ್ಕ ಮಕ್ಕಳೆಲ್ಲ ಕತ್ತಿ ಹಿಡಿದು ಅಡಿಕೆ ಸುಲಿಯಲು ಕುಳಿತುಕೊಳ್ಳುತ್ತಿದ್ದೆವು.ಕೊಳಗ (ಸುಲಿದ ಅಡಿಕೆ ಅಳೆಯುವ ಪಾತ್ರೆ ) ತುಂಬಿಸುವ ಪ್ರಯತ್ನದಲ್ಲಿ ನಾವು. 

ಕೈಗೆ ಗಾಯ ಮಾಡಿಕೊಂಡ ಎಷ್ಟೋ ದಿನಗಳು ನೆನಪಿವೆ. ಹಾಗೆ ಕೈ ನೋಡಿಕೊಂಡೆ . ಕೈಯಲ್ಲಿ ೨-೩ ಕಲೆಗಳು ನಿನ್ನ ನೆನಪುಗಳನ್ನು ಹಸಿಯಾಗಿರಿಸಲು ನಾವಿದ್ದೇವೆ ಎಂದು ಹೇಳುವಂತೆ ಕಂಡುಬಂದವು.ಅದರಲ್ಲಿ ಒಂದು ಬಲಗೈ ಕಿರುಬೆರಳ ಕಲೆ. ಹಾಗೆ ನೆನಪಾಯಿತು ಅವತ್ತು ಬೆಳಿಗ್ಗೆ ಅಪ್ಪ ಬೇಡ ಎಂದು ಹೇಳಿದ್ದರೂ  ಉತ್ಸಾಹದಲ್ಲಿ ಕತ್ತಿ ಹಿಡಿದು ಅಡಿಕೆ ಸುಲಿಯಲು ಕುಳಿತಿದ್ದೆ. ಅಡಿಕೆ ಕಾಯಿಗಳ ಮೇಲೆ ಇಬ್ಬನಿಯ ಹನಿಗಳು ಕೈ ಜಾರುವಂತೆ ಮಾಡಿದವು. ಬೆರಳು ಅಡಿಕೆಯ ಜಾಗದಲ್ಲಿತ್ತು. ಗಾಯ ದೊಡ್ಡದಾಗಿತ್ತು. ರಕ್ತದ ಹನಿಗಳು ಕೆಳಗೆ ಬಿದ್ದವು. ಅಪ್ಪ ಅಲ್ಲೇ ಬಾವಿಯ ಹತ್ತಿರ ಇದ್ದರು . ನಂಗೆ ಅಳು ಬಂತು .ರಕ್ತ ಬರುತ್ತಿತ್ತು ಅಂತ ಅಲ್ಲ ಆದರೆ ಅಪ್ಪ ಬೈತಾರೆ ಅಂತ. ಭಯದಿಂದ ಅವರ ಹತ್ತಿರ ಹೋಗಿ ತೋರಿಸಿದೆ. ನನ್ನ ಅಳು ನೋಡಿ ಪಾಪ ಅನಿಸಿರಬೇಕು, ಏನೂ ಹೇಳಲಿಲ್ಲ. ಔಷಧ ಹಚ್ಚಿ ಬಟ್ಟೆ ಕಟ್ಟಿದರು. ಅಮ್ಮನ ಹತ್ತಿರ ಹೋಗಿ ಅತ್ತೆ. ಅಮ್ಮ ಸಮಾಧಾನ ಮಾಡಿ ಊಟ ಮಾಡಿಸಿದರು. 

ಇವತ್ತು ಬೆಳಿಗ್ಗೆ ಎದ್ದು ಕುಳಿತವಳಿಗೆ ಇಷ್ಟೆಲ್ಲಾ ನೆನಪಾಗಿತ್ತು. ನಮ್ಮಮ್ಮ ಒಂದು ಹಾಡು ಹೇಳಿಕೊಟ್ಟಿದ್ದರು . ಅದು ನನಗೆ ನೆನಪಿಲ್ಲ. ಅದರ ಸಾರಾಂಶವಿಷ್ಟೇ ,
                              ಬೆಳಿಗ್ಗೆ  ಎದ್ದೆ. ಚಳಿಯಾಗುತ್ತಿತ್ತು. 
                              ಅಪ್ಪನ ಅಂಗಿ ಹಾಕಿಕೊಂಡೆ. ಕಡಿಮೆಯಾಗಲಿಲ್ಲ. 
                              ಅಮ್ಮನ ಸೀರೆ ಸುತ್ತಿಕೊಂಡರೂ  ಕಡಿಮೆ ಆಗಲಿಲ್ಲ. 
                              ಆಮೇಲೆ ಅಮ್ಮ ಮಾಡಿದ ಕಾಫಿ ಕುಡಿದೆ. 
                              ಚಳಿರಾಯ ಓಡಿಹೋದ. 
ನೆನಸಿಕೊಂಡಾಕ್ಷಣ ಒಂದು ಮುಗುಳ್ನಗು ಹಾದು ಹೋಯಿತು.ಜೊತೆಗೆ ಅಮ್ಮನ  ನೆನಪಾಯ್ತು.ಅಷ್ಟರಲ್ಲಿ ಚಳಿರಾಯ ತನ್ನ ಪ್ರತಾಪವನ್ನು ತೋರಿಸತೊಡಗಿದ್ದ.ಕಾಫಿ ಇಲ್ಲದಿದ್ದರೇನಂತೆ ಟೀ ಕುಡಿಯೋಣವೆಂದು ಹೊರಟೆ.  

9 comments:

  1. ಮೊದಲ ನೆನಪಿನ ಬರಹ ತುಂಬಾ ಹಿತವಾಗಿದೆ.ನಮ್ಮನ್ನೂ ಆ ಲೋಕಕ್ಕೆ ಪರಿಚಯಿಸಿಕೊಂಡ ಅನುಭವ.
    ಒಳ್ಳೆಯ ಬರವಣಿಗೆಯ ಶಕ್ತಿ ಎದ್ದು ಕಾಣುತ್ತಿದೆ.
    ನಿನ್ನ ಅನುಭವಗಳ ಜಾಡು ಹಿಡಿದು, ನಾವೂ ಬರುತ್ತೇವೆ,:D
    ಮುಂದುವರೆಸು.!

    ReplyDelete
  2. ನೆನಪುಗಳ ಸರಮಾಲೆಯ ಅಂಬಾರಿಯನ್ನು,ಪದಗಳಿಂದ ಶೃಂಗರಿಸಿ ಮೆರವಣಿಗೆ ಹೊರಡಿಸಿದಂತಿದೆ ನಿಮ್ಮ ಈ ಲೇಖನ. ನಿಮ್ಮ ಮೊದಲ ನೆನೆಪಿನ ಜಾಡು ಮನದಾಳದಲ್ಲಿ ಮರೆಯಾಗಿ ಹೋಗಿದ್ದ ಎಷ್ಟೋ ಸವಿ ನೆನಪುಗಳನ್ನು ಹೊರತಂದಿದೆ. ನೆನಪಿನ ಈ ಮೆರವಣಿಗೆ ಹೀಗೆ ಮುಂದೆ ಸಾಗಲಿ .

    ReplyDelete
  3. ನನ್ನ ನೆನಪುಗಳ ಜಾಡಿನಲ್ಲಿ ನಿಮ್ಮೆಲ್ಲರನನ್ನು ಜೊತೆಯಾಗಿ ಕರೆದೊಯ್ಯುವ ನನ್ನ ಪ್ರಯತ್ನ.
    ನಿಮ್ಮ ಅಭಿನಂದನೆಗಳಿಗೆ ನನ್ನ ಧನ್ಯವಾದಗಳು..

    ReplyDelete
  4. Well written :) Keep up the good work and keep blogging :) Hoping to read more and more memories :)

    ReplyDelete
  5. Good one. Really karchillade oorige hogi bande.
    Nimma prayatna hige munudvariyali

    ReplyDelete
    Replies
    1. ಧನ್ಯವಾದಗಳು ನಿಮಗೆ..:)

      Delete
  6. suchetha, nammellara balyada nenapu matthe marukalisuvante madiddeya. thumba thanks.

    ReplyDelete
    Replies
    1. thank you akka..:) heege odta iru..:) innu bareyodakke prayatnisuttene..

      Delete