Sunday 27 September 2020

ಶರದ ಋತುವಿನ ಶನಿವಾರ

ಶುಕ್ರವಾರವಿಡೀ ಬಿಟ್ಟು ಬಿಡದೆ ಸುರಿದಿದ್ದ ಮಳೆ ವಾರಾಂತ್ಯದಲ್ಲಿ  ಸ್ವಲ್ಪ ಬಿಡುವು ನೀಡಿತ್ತು. ಎರಡು ವಾರದಿಂದಲೇ ಸಣ್ಣ ಚಾರಣವೊಂದನ್ನು ಮಾಡೋಣವೆಂದು ತಯಾರಿ ಮಾಡಿಕೊಳ್ಳುತ್ತಿದ್ದ ನಮಗೆ  ಮಳೆರಾಯನ ಗೈರುಹಾಜರಿ ಹುರುಪನ್ನೇ ನೀಡಿತ್ತು. ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ, ಮುಂಬರಲಿರುವ ಚಳಿಗಾಲದ ಆಗಮನವನ್ನು ಸ್ವಾಗತಿಸಲೋ ಎಂಬಂತೆ ಎಲ್ಲ ಗಿಡಮರಗಳು ಬಣ್ಣ ಬಣ್ಣದ ಎಲೆಗಳನ್ನು ಹೊತ್ತು ನಿಂತಿರುತ್ತವೆ. ಆ ಬಣ್ಣಗಳ ಜಾತ್ರೆಯನ್ನು ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ಕಾಡು ದಾರಿಯಲ್ಲಿ ನಡೆಯುತ್ತಾ, ಆ ಹಸಿರ ಸಿರಿಯ ನಡುವೆ ಕಣ್ಣರಳಿಸುತ್ತಾ, ಗೆಳೆಯರ ಮಾತುಗಳಿಗೆ ಕಿವಿಯಾಗುತ್ತಾ, ಎಲ್ಲೋ ಕುಳಿತು ತಣ್ಣಗೆ ಬೀಸೋ ಗಾಳಿಯ ನಡುವೆ ಕಾಫಿ ಕುಡಿಯುತ್ತಾ ಕಳೆಯುವ ಸಮಯವಿದೆಯಲ್ಲ ಅದಂತೂ ಸ್ವರ್ಗ ಸದೃಶ. ಇಂತಹ ಅನುಭವಕ್ಕೆ ಸಾಕ್ಷಿಯಾಗಲೆಂದೇ  ಶ್ರೀಗಂಧ ಕನ್ನಡ ಬಳಗದ ವತಿಯಿಂದ ಡೆಲ್ಶ್ಯುನ್ ಸರೋವರದ ಸುತ್ತ ಚಾರಣ ಮಾಡೋಣವೆಂದು ನಿರ್ಧರಿಸಿದ್ದೆವು. 

ಪಚ್ಚೆ ಪರ್ಣಶೋಭಿತ!!

ಶನಿವಾರ ( ೨೬-೦೯-೨೦೨೦) ಮಧ್ಯಾಹ್ನ ೧:೩೦ ರ  ಸುಮಾರಿಗೆ ಹದಿನೈದು ಜನರ ನಮ್ಮ ಕನ್ನಡಿಗರ ಗುಂಪೊಂದು ಸ್ಪೊನ್ ತೊರ್ಯೆತ್ ನಿಂದ ಹೊರಟು ಅನಾಲಿಸ್ ವಾಗೇನ್ ತಲುಪುವ ಕಾಡು ದಾರಿಯಲ್ಲಿದ್ದೆವು. ಕೆಲ ದಿನಗಳಿಂದ ಆಗಾಗ ಸುರಿಯುತ್ತಿದ್ದ ಮಳೆ ದಾರಿಯಲ್ಲೆಲ್ಲ ಹಸಿರ ಹರಡಿತ್ತು. ನೀರಿನ ತೊರಗಳು ಜುಳುಜುಳು ನಿನಾದವನ್ನು ನುಡಿಸುತ್ತಾ ಹರಿಯುತ್ತಿದ್ದವು. ಶರದೃತುರಾಜ ಆಗಲೇ ಬಂದಾಗಿದೆ ಎಂಬುದನ್ನು ಕೂಗಿ ಹೇಳುವಂತೆ ಎಲೆಗಳೆಲ್ಲ ಹಳದಿ, ಕೇಸರಿ ಬಣ್ಣಕ್ಕೆ ತಿರುಗಿದ್ದವು. ಕೆಂಪು, ಅರಿಶಿಣ, ಕೆನೆ ಹಾಲು ಬಣ್ಣದ ಅಣಬೆಗಳು ಅಲ್ಲಲ್ಲಿ ತಲೆಯೆತ್ತಿ ನಿಂತಿದ್ದವು. ಸಣ್ಣ ಸಣ್ಣ ಕೆರೆಗಳಲ್ಲಿ ನೀರ ಹಕ್ಕಿಗಳು ಈಜಾಡುತ್ತಿದ್ದವು. 

ಹೀಗಿತ್ತು ನಾವು ನಡೆದ ದಾರಿ...


ವರ್ಣವೈಭವ !

ನೋಡಲು ವರ್ಣರಂಜಿತ ವಾಗಿದ್ದರೂ ವಿಷಪೂರಿತ ಅಣಬೆ 

ಮುಂದೆ  ಗಾಳಿಯ ಹೊಡೆತಕ್ಕೆ ಮರವೊಂದು  ಬುಡ ಮೇಲಾಗಿ ಬಿದ್ದಿತ್ತು. ಅದರ ಪಕ್ಕದಲ್ಲಿ ನಿಂತು ಎಲ್ಲರೂ ಫೋಟೋ ತೆಗೆಸಿಕೊಂಡೆವು. ದಾರಿಯಲ್ಲಿ ಸೈಕಲ್ ಸವಾರರು, ತಮ್ಮ ನಾಯಿಗಳೊಂದಿಗೆ ವಿಹಾರಕ್ಕೆ ಬಂದವರು, ಚಿಕ್ಕ ಮಕ್ಕಳನ್ನು ಕರೆತಂದ ತಂದೆ ತಾಯಿಗಳು, ಬೆವರಿಳಿಸುತ್ತಾ, ಏದುಸಿರು ಬಿಡುತ್ತಾ ಓಡುತ್ತಿದ್ದ ಓಟಗಾರರು ಎದುರಾದರು. ನಾವು ಅವರನ್ನೆಲ್ಲ ದಾಟಿಕೊಂಡು ನಿಧಾನವಾಗಿ ಲಿಲ್ಲಾ ಡೆಲ್ಶ್ಯುನ್  ಸರೋವರವನ್ನು ತಲುಪಿದೆವು. ಆ ತಿಳಿನೀರ ಕೆರೆಯ ದಡದಲ್ಲಿ ಕುಳಿತು ಚಂದನ್ ತಂದಿದ್ದ ಆಪಲ್ ಕೇಕ್ ಅನ್ನು ಬಾಯಿ ಚಪ್ಪರಿಸಿಕೊಂಡು ತಿಂದೆವು. ಆ ನೀರವ ವಾತಾವರಣದಲ್ಲಿ ಅರ್ಪಿತಾಳ ಸೊಗಸಾದ ಗಾಯನ ಕಾಫಿಗೆ ಬೆರೆಸಿದ ಸಕ್ಕರೆಯಷ್ಟೇ ಹಿತವಾಗಿತ್ತು. ದೂರದಲ್ಲೆಲ್ಲೋ ಹಾಯಿದೋಣಿಯ ಮೇಲೆ ಕುಳಿತಿದ್ದವರನ್ನು ಕಂಡ ನನ್ನ ಮನ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಎಂಬ ಹಾಡನ್ನು ಗುನುಗಿತ್ತು.

ನೆಲಕ್ಕಚ್ಚಿದ ಮರದ ಎದುರು ನಾವು!

ಹೊಟ್ಟೆ ಪಾಡು -ಹಾಡು

ಸಂಜೆ ಸಮೀಪಿಸುತ್ತಿತ್ತು. ನಾವು ನಮ್ಮ ಹೊಟ್ಟೆ ತುಂಬಿಸಿಕೊಂಡು ನಿಧಾನವಾಗಿ ಚಾರಣದ ಕೊನೆಯ ಹಂತವನ್ನು ಕ್ರಮಿಸಿದೆವು. ಕೊನೆಯಲ್ಲಿ ಎಲ್ಲರೂ ಒಂದು ಸುಂದರ ಸಂಜೆಯನ್ನು ಜೊತೆಯಾಗಿ ಕಳೆದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಇಂತಹ ಯೋಜನೆಗಳಿಗೆ ಮುಂದೆಯೂ ಜೊತೆಯಾಗುವ ಇಚ್ಛೆ ಹಲವರಿಗಿತ್ತು. ಕೊನೆಯಬಾರಿ ನಮ್ಮ ಗುಂಪಿನ ಛಾಯಾಚಿತ್ರವೊಂದನ್ನು ತೆಗೆದುಕೊಂಡು ಮನೆಯ ದಾರಿ ಹಿಡಿದೆವು. ಶನಿವಾರದ ಅಪರಾಹ್ನವೊಂದನ್ನು ಖುಷಿ ಖುಷಿಯಾಗಿ ಕಳೆದ ಸಾರ್ಥಕತೆಯ ಭಾವ ನನ್ನ ಮನ ತುಂಬಿತ್ತು. 

Sunday 9 August 2020

ಸ್ಲಾಟ್ ಸ್ಕೂಗೆನ್ ನಲ್ಲಿ ಪಕ್ಷಿವೀಕ್ಷಣೆ

ಆಗಸ್ಟ್ ತಿಂಗಳ ಎರಡನೇ ಶನಿವಾರ. ಶ್ರೀಗಂಧ ಕನ್ನಡ ಬಳಗದ ವತಿಯಿಂದ ಸ್ಲಾಟ್ ಸ್ಕೂಗೆನ್ ನಲ್ಲಿ ಪಕ್ಷಿವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಾವು ಹತ್ತು ಗಂಟೆಗೆ ಸರಿಯಾಗಿ ಲಿನ್ನೆ ಪ್ಲಾಟ್ ಸೆನ್  ಬಳಿ ಇದ್ದ ಗಾಲ್ಫ್ ಅಂಗಣದ ಬಳಿ ಭೇಟಿಯಾಗಿ  ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಬಿಸಿಲು ಸ್ವಲ್ಪ ಹೆಚ್ಚೇ ಎನ್ನುವಂತಿತ್ತು. 
    
ಗ್ರೇ ವಾಗ್ ಟೈಲ್ ( ಚಿತ್ರ ಕೃಪೆ : ದೀಪಕ್ ವಸ್ತಾರೆ )

ಮೊದಲಿಗೆ ಹತ್ತಿರದಲ್ಲೇ ಇದ್ದ ಫಾಗೆಲ್ ಡಾಮೆನ್ ಎನ್ನುವ ಸಣ್ಣ ಕೊಳದಲ್ಲಿ ಮಲ್ಲಾರ್ಡ್, ಗದ್ವಾಲ್ , ಗ್ರೇ ವಾಗ್ ಟೈಲ್ ಮುಂತಾದ ಹಕ್ಕಿಗಳನ್ನು ನೋಡಿದೆವು. ಜೊತೆಗಿದ್ದ ಚಿಕ್ಕ ಮಕ್ಕಳು ಬಹಳ ಆಸಕ್ತಿಯಿಂದ ಹಕ್ಕಿಗಳನ್ನು ಗಮನಿಸುತ್ತಾ  ಹೆಸರುಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದದ್ದು ನಮ್ಮಲ್ಲೂ ಉತ್ಸಾಹ ಮೂಡಿಸಿತ್ತು. ಅಲ್ಲಿಂದ ಮುಂದೆ ನಮ್ಮ ಹದಿನಾಲ್ಕು ಜನರ ಗುಂಪು ನಡೆಯುತ್ತಾ ನಿಧಾನವಾಗಿ ಸ್ಟೂರ ಡಾಮೆನ್ ಕಡೆ ಹೊರಟೆವು. ದಾರಿಯಲ್ಲಿ ಜಾಕ್ ಡಾ, ವುಡ್ ಪಿಜನ್ ಗಳು ಕಂಡವು. ಸ್ಟೂರ ಡಾಮೆನ್ ಬಳಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿದ್ದ  ಕೆನಡಾ ಗೂಸ್, ಮೂರರಿಂದ ನಾಲ್ಕು ಕಾಮನ್ ಮೂರ್ ಹೆನ್ ಗಳು , ಹಸಿರ ನೆಲದ ಮೇಲೆಲ್ಲಾ ಹರಡಿದ್ದ ಬಿಳಿಯ ಸೀ ಗಲ್ಸ್ ಗಳು ಕಂಡು ಬಂದವು. ತನ್ನ ಕಾಲಿನಲ್ಲಿ ಏನನ್ನೋ ಬಲವಾಗಿ ಹಿಡಿದುಕೊಂಡು  ಹನಿ ಬಝರ್ಡ್ ಹಕ್ಕಿಯೊಂದು ತೀರಾ ಸಮೀಪದಲ್ಲೇ ಹಾರಿಹೋಯಿತು. 

ಲೆಸ್ಸರ್ ಬ್ಲಾಕ್ ಬ್ಯಾಕ್ಡ್ ಗಲ್ (ಚಿತ್ರ ಕೃಪೆ : ಅನೂಪ್ ಕೆ ಎಸ್ )

ಓರಿಯೆಂಟಲ್ ಹನಿ ಬಝರ್ಡ್ (ಚಿತ್ರ ಕೃಪೆ : ಅನೂಪ್ ಕೆ ಎಸ್ )

೧೧ ಗಂಟೆಯ ಸುಮಾರಿಗೆ ಎಲ್ಲರಿಗೂ ಹಸಿವಾಗಿದ್ದುದರಿಂದ  ಅಲ್ಲೇ ಮರಗಳ ನಡುವೆ ಕುಳಿತು ತಂದ ತಿಂಡಿ, ಹಣ್ಣುಗಳನ್ನು ತಿಂದೆವು. ಅಲ್ಲಿಂದ ಸ್ವಲ್ಪ ಮುಂದಿದ್ದ ಕೆರೆಯೊಂದರಲ್ಲಿ ಗ್ರೇ ಲ್ಯಾಗ್ ಗೂಸ್, ಬಾರ್ನಕಲ್ ಗೂಸ್, ಗೋಲ್ಡನ್ ಐ ಮುಂತಾದ ಹಕ್ಕಿಗಳು ನೀರಿನಲ್ಲಿ ಈಜಾಡುತ್ತಿರುವುದನ್ನು ಕಾಣಬಹುದಿತ್ತು. ನಮ್ಮ ಪಕ್ಷಿವೀಕ್ಷಣಾ ಕಾರ್ಯಕ್ರಮ ಇನ್ನೇನು ಮುಗಿಯುವ ಹಂತಕ್ಕೆ ತಲುಪಿತ್ತು. ಅಲ್ಲಿಂದ ಮರಳುವ ದಾರಿಯಲ್ಲಿ ಯುರೇಷಿಯನ್ ನಟಾಚ್, ಗ್ರೇಟ್ ಸ್ಪಾಟೆಡ್ ವುಡ್ ಪೆಕರ್ ಗಳು ಕಂಡವು. ಮರಕುಟಿಕ (ಗ್ರೇಟ್ ಸ್ಪಾಟೆಡ್ ವುಡ್ ಪೆಕರ್ ) ನೆಲಮಟ್ಟಕ್ಕೆ ಸಮೀಪವಾಗಿದ್ದು ಬರಿಕಣ್ಣಿಗೇ ಸ್ಪಷ್ಟವಾಗಿ ಕಂಡಿತು . 
ಕಾಮನ್ ವುಡ್ ಪಿಜನ್ (ಚಿತ್ರ ಕೃಪೆ : ದೀಪಕ್ ವಸ್ತಾರೆ )

ಪಕ್ಷಿವೀಕ್ಷಕರ ಗಹನವಾದ ಚರ್ಚೆ ! (ಚಿತ್ರ ಕೃಪೆ : ನಾಗರಾಜ್ )

ಒಂದು ಛಾಯಾಚಿತ್ರಕ್ಕಾಗಿ ಇಷ್ಟೆಲ್ಲಾ ಕಷ್ಟ (ಚಿತ್ರ ಕೃಪೆ : ನಾಗರಾಜ್ )

ನಮ್ಮ ಗುಂಪು (ಚಿತ್ರ ಕೃಪೆ : ದೀಪಕ್ ವಸ್ತಾರೆ )

ವಿರಾಮದ ಸಮಯ (ಚಿತ್ರ ಕೃಪೆ : ದೀಪಕ್ ವಸ್ತಾರೆ )

ಕೊನೆಯಲ್ಲೊಂದು ಗ್ರೂಪ್ ಫೋಟೋ ( ಚಿತ್ರ ಕೃಪೆ : ಆನಂದ್ )

ಕೊನೆಯಲ್ಲಿ ಲಿಲ್ಲಾ ಡಾಮೆನ್ ನಮ್ಮ ಕೊನೆಯ ಪಕ್ಷಿವೀಕ್ಷಣೆಯ ಸ್ಥಳವಾಗಿದ್ದು ಅಲ್ಲಿ ಹೆಚ್ಚಿನ ಹಕ್ಕಿಗಳೇನೂ ಕಾಣಲಿಲ್ಲ. ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದನ್ನು ಚಂದಗೊಳಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು. ಒಬ್ಬರಿಗೊಬ್ಬರು ವಿದಾಯ ಹೇಳಿ ಮನೆಯ ದಾರಿ ಹಿಡಿದೆವು. ನಮ್ಮ ಕನ್ನಡ ಬಳಗದ ವತಿಯಿಂದ ನಡೆದ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಬಹಳಷ್ಟು ಹೊಸ ಜನರ ಪರಿಚಯ ಸಂತಸ ತಂದಿತು. 

ನಾವು ನೋಡಿದ ಪಕ್ಷಿಗಳು ( ಕನ್ನಡದಲ್ಲಿ ಹೆಸರಿಸುವುದು ಕಷ್ಟವಾದ್ದರಿಂದ ಇಂಗ್ಲಿಷ್ನಲ್ಲಿ ಬರೆಯಲಾಗಿದೆ )

ದಿನಾಂಕ : ೦೮-೦೮-೨೦೨೦

Lesser Black-backed Gull
European Herring Gull
Mew Gull
Black-headed Gull
Mallard
Common Wood Pigeon
Common Moorhen
Common Goldeneye
Great Tit
Canada Goose
Barnacle Goose
Gadwall
Greylag Goose
Greater Spotted Woodpecker (male)
Grey Wagtail
Eurasian Nuthatch
Eurasian Tree Sparrow
Eurasian Magpie
Eurasin Blue Tit
Oriental Honey Buzzard (male)
Pied Flycatcher(female)

Sunday 12 April 2020

ಮಿಂಚುಳ್ಳಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೧), ಹೆಜ್ಜೆ ಮೂಡದ ಹಾದಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೨)




ಚಿಕ್ಕಂದಿನಿಂದಲೂ ನನಗೆ ಪಕ್ಷಿಗಳೆಂದರೆ ಏನೋ ಕುತೂಹಲ. ನಮ್ಮನೆಯ ಎದುರಿಗಿದ್ದ ಟೊಳ್ಳಾದ ನಂದಿ ಮರದಲ್ಲಿ ಗುಂಪಾಗಿ ವಾಸವಾಗಿದ್ದ ಗಿಳಿಗಳು, ಜೊತೆಗೇ ಸಹಜೀವನ ನಡೆಸುತ್ತಿದ್ದ ಮೈನಾ ಹಕ್ಕಿಗಳು, ಗದ್ದೆ ಬದಿಯಲ್ಲಿ ಅಲೆದಾಡುತ್ತಿದ್ದ ಕೊಕ್ಕರೆಗಳು, ಕೆರೆಯಂಚಿನ ಕೊಂಬೆಯೊಂದರ ಮೇಲೆ ಕುಳಿತಿರುತ್ತಿದ್ದ ಮಿಂಚುಳ್ಳಿಗಳು ಇವೆಲ್ಲವನ್ನೂ ಕಣ್ಣರಳಿಸಿಕೊಂಡು ನೋಡುತ್ತಿದ್ದೆ. ವಾರಾಂತ್ಯದಲ್ಲಿ ಹಕ್ಕಿ ಗೂಡು ಹುಡುಕುವುದೇ ಕೆಲಸ. ಸಿಕ್ಕ ಖಾಲಿ ಗೂಡುಗಳನ್ನೆಲ್ಲ ಮನೆಯಲ್ಲಿ ಮಾವಿನ ಮರಕ್ಕೋ, ದಾಸವಾಳದ ಗಿಡಕ್ಕೋ ಸಿಕ್ಕಿಸಿ ಯಾವುದಾದರೂ ಹಕ್ಕಿ ಬಂದು ಮರಿಮಾಡುತ್ತದೆಂದು ಕಾಯುತ್ತಿದ್ದೆ!

ಎಂಟನೆಯ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಗೀಜುಗನ ಗೂಡು ಎಂಬ ಪಾಠವೊಂದಿತ್ತು. ಪೂರ್ಣಚಂದ್ರ ತೇಜಸ್ವಿಯವರ ಹೆಜ್ಜೆ ಮೂಡದ ಹಾದಿ ಎಂಬ ಅನುಭವ ಕಥನದಿಂದ ಆಯ್ದುದಾಗಿತ್ತು. ತೇಜಸ್ವಿ, ಗೀಜುಗ ಹಕ್ಕಿಯ ಬಗ್ಗೆ ಚಂದದ ವಿವರಣೆ ನೀಡಿದ್ದರು. ಅದಕ್ಕೆ ಸಮವಾಗಿ ನಮ್ಮ ಕನ್ನಡ ಮೇಷ್ಟ್ರು ಅದೆಷ್ಟು ಚನ್ನಾಗಿ ಪಾಠ ಮಾಡಿದ್ದರೆಂದರೆ ಆ ವರ್ಷದ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಹೆಜ್ಜೆ ಮೂಡದ ಹಾದಿ ಪುಸ್ತಕವನ್ನ ತೆಗೆದುಕೊಂಡೆ. ಅದನ್ನು ಓದುತ್ತಾ ಹೋದಂತೆ ಹೊಸದೊಂದು ಪರಿಸರ ನನ್ನೆದುರು ತೆರೆದುಕೊಂಡಿತು. ಅಲ್ಲಿಂದ ಹಕ್ಕಿಗಳ ಬಗೆಗಿನ ಆಸಕ್ತಿ ಹೆಚ್ಚಾಯಿತು. ತೇಜಸ್ವಿಯವರಂತೆ ನಾನು ಕೆರೆ ದಂಡೆಗಳಲ್ಲಿ ಗಂಟೆಗಟ್ಟಲೆ ಕೂರಲು ಶುರು ಮಾಡಿದೆ. ಕಾಗೆ, ಗಿಳಿ, ಗುಬ್ಬಿಗಳಲ್ಲದೆ ಮುನಿಯ, ಪಿಕಳಾರ, ಸೂರಕ್ಕಿ, ಮಡಿವಾಳ ಅವುಗಳ ಭಿನ್ನತೆ, ಸಾಮ್ಯತೆಗಳನ್ನು ಗುರುತಿಸಲು ಕಲಿತೆ. ಕೆಲಸ ಸಿಕ್ಕ ಮೇಲೆ ಒಂದು ದುರ್ಬೀನು ಕೊಂಡುಕೊಂಡು ಪಕ್ಷಿವೀಕ್ಷಣೆಯ ಹವ್ಯಾಸವನ್ನು ಮುಂದುವರೆಸಿದೆ. ಇವಳಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಇದೇನು ಊಟ ಹಾಕತ್ತಾ ಅಂತ ಎಷ್ಟೋ ಜನ ಬೈದದ್ದಿದೆ. 

ಕನ್ನಡ ನಾಡಿನ ಹಕ್ಕಿಗಳ ಬಗ್ಗೆ ಕನ್ನಡದಲ್ಲಿ ಬರೆದ ಬೆರಳೆಣಿಕೆಯಷ್ಟು ಜನರಲ್ಲಿ ತೇಜಸ್ವಿಯವರು ಅಗ್ರಗಣ್ಯರು. ಅವರ ಮಿಂಚುಳ್ಳಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೧), ಹೆಜ್ಜೆ ಮೂಡದ ಹಾದಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೨) ಈ ಎರಡು ಪುಸ್ತಕಗಳೂ ವಿಶಿಷ್ಟವಾಗಿವೆ. ನಮ್ಮೊಂದಿಗೇ ಇದ್ದು ನಾವು ಗಮನಿಸದೇ ಇರುವ ನೆರೆಹೊರೆಯವರ ಬಗ್ಗೆ ಮಾಹಿತಿ ನೀಡುತ್ತವೆ ಇವು. ತೇಜಸ್ವಿ ನದಿ ದಡಗಳಲ್ಲಿ ಮೀನು ಹಿಡಿಯಲು  ಕುಳಿತಾಗ ಕಂಡ ನೀರಿನ ಹಕ್ಕಿಗಳು, ಜವುಗಿನ ಹಕ್ಕಿಗಳು, ಹೂವಿನ ಗಿಡಗಳಲ್ಲಿ ಗೂಡು ಕಟ್ಟಿದ್ದ ಸೂರಕ್ಕಿಗಳು, ಪಿಕಳಾರಗಳು, ಜಗಳ ಕಾಯುವ ಕಾಜಾಣಗಳು, ಯಾರದೋ ಕೋವಿಯ ಗುಂಡಿಗೆ ಬಲಿಯಾದ ಟ್ರೊಗನ್ ಹಕ್ಕಿ, ತೇಜಸ್ವಿಯವರು ಹಕ್ಕಿ ಸಾಕಲು ಪ್ರಯತ್ನಿಸಿದ್ದು, ಜೇನುಮಗರೆ ಹಕ್ಕಿಗಳ ಕಿತಾಪತಿ, ಪಿಕಳಾರ ಸೂರಕ್ಕಿಗಳ ನಡುವಿನ ಜಗಳ ಇವೆಲ್ಲವೂ ಅವರ ನಿತ್ಯದ ಜೀವನದಿಂದ ಆಯ್ದ ಘಟನೆಗಳೇ. ಓದುಗರನ್ನು ಮೈಮರೆಯುವಂತೆ ಮಾಡುವ ಇಂತಹ ಪ್ರಸಂಗಳೆಷ್ಟೋ ಇವೆ  ಅದರಲ್ಲಿ. 

ಇನ್ನು ಈ ಪುಸ್ತಕಗಳ ಕೊರತೆಯ ಬಗ್ಗೆ ಹೇಳುವುದಾದರೆ ತೇಜಸ್ವಿಯವರೇ ಹೇಳುವಂತೆ ಈ ಪುಸ್ತಕಗಳು  ಪಕ್ಷಿವೀಕ್ಷಕರ ಮಾರ್ಗದರ್ಶಿಯಲ್ಲ. ಬದಲಿಗೆ  ಓದುಗರಲ್ಲಿ ಪಕ್ಷಿಪ್ರಪಂಚದೆಡೆಗೆ ಆಸಕ್ತಿ ಹುಟ್ಟುವಂತೆ ಮಾಡುವ ಒಂದು ಪ್ರಯತ್ನವಷ್ಟೇ. ಇದರಲ್ಲಿ ಹಕ್ಕಿಗಳ ಪ್ರಬೇಧಗಳ ಸ್ಥೂಲ ಹೆಸರುಗಳನ್ನು ನೀಡಲಾಗಿದೆಯೇ ಹೊರತು ಒಳಪ್ರಬೇಧಗಳನ್ನು ಗುರುತಿಸಲು, ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅವಕಾಶವಿಲ್ಲ. ಅದರಲ್ಲಿನ ವಿಷಯಗಳೂ ಅವರು ನಿತ್ಯ ಕಂಡ ಹಕ್ಕಿಗಳ ಬಗೆಗೆ ಮಾತ್ರ ಸೀಮಿತವಾಗಿವೆ. ಇದಲ್ಲದೆ ಬಹಳಷ್ಟು ಹಕ್ಕಿಗಳಿಗೆ ಕನ್ನಡದಲ್ಲಿ ಸರಿಯಾದ ಹೆಸರುಗಳಿಲ್ಲ. ಹಾಗಾಗಿ ಅವರು ಕನ್ನಡದಲ್ಲಿ ಹೆಸರಿಸಲು ಪ್ರಯತ್ನಿಸುವಾಗ ಕೆಲವಷ್ಟು ತಪ್ಪುಗಳು ನುಸುಳಿವೆ.ಇವುಗಳನ್ನು ಪಕ್ಷಿವೀಕ್ಷಣೆಯ ಗೈಡ್ ಬುಕ್ ಆಗಿ ಬಳಸಿಕೊಂಡಲ್ಲಿ ಗೊಂದಲಗಳೇಳುತ್ತವೆ. 

ಆದಾಗ್ಯೂ ಪರಿಸರ ಪ್ರೇಮಿಗಳಿಗೂ, ಪಕ್ಷಿಪ್ರೇಮಿಗಳಿಗೂ ಈ ಎರಡು ಪುಸ್ತಕಗಳು ಮುದ ನೀಡುವುದರಲ್ಲಿ ಸಂದೇಹವಿಲ್ಲ. ದಿನನಿತ್ಯದ ನಮ್ಮ ಧಾವಂತದ ಬದುಕಿನಲ್ಲಿ ನಿಮಿಷಗಳನ್ನೂ ಎಣಿಸಿ ಬದುಕುವಾಗ, ಕೆರೆಯ ದಂಡೆಯ ಮೇಲೆ ದಿನವಿಡೀ ಕುಳಿತು ಕಥೆ ಹೇಳುವ ತೇಜಸ್ವಿ ಅಚ್ಚರಿ ಹುಟ್ಟಿಸುತ್ತಾರೆ. ನಾವು ಕಾಣದ ಬೆರಗಿನ ಲೋಕವೊಂದನ್ನು ಅವರ ಕಣ್ಣುಗಳಲ್ಲಿ ಕಟ್ಟಿಕೊಡುತ್ತಾರೆ.  


Saturday 28 March 2020

ಡಿಸೈನರ್ ಬೇಬೀಸ್

ಸಂತೆಯಲ್ಲಿ ತರಕಾರಿ ಕೊಳ್ಳುವ ಮೊದಲು ಬಣ್ಣ, ತೂಕ, ಎಳೆತಿದೆಯೋ, ಬಲಿತಿದೆಯೋ, ಕೊಳೆತಿದೆಯೋ ಹೀಗೆ ಎಲ್ಲವನ್ನು ಅಳೆದು ತೂಗಿ ಇದ್ದುದರಲ್ಲಿ ಉತ್ತಮವಾದುದನ್ನು ಆರಿಸುವಂತೆ ತಂದೆ ತಾಯಿಗಳು ತಮಗೆ ಹುಟ್ಟುವ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದರೆ? ಮದುವೆ ಸೀರೆಗಳನ್ನು ಬೇಕೆಂದ ರೀತಿಯಲ್ಲಿ ವಿನ್ಯಾಸ ಮಾಡಿಸಿಕೊಳ್ಳುವಂತೆ ಮಕ್ಕಳನ್ನೂ ಸಹ  ತಮ್ಮಿಷ್ಟದಂತೆ ವಿನ್ಯಾಸಗೊಳಿಸಿಕೊಳ್ಳುವ ಹಾಗಿದ್ದರೆ? ಇದ್ಯಾವುದೋ ಕಪೋಲಕಲ್ಪಿತ ಕಥೆಯೆಂದುಕೊಂಡಿರಾ! ಅಲ್ಲವೇ ಅಲ್ಲ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು, ಸಿಕ್ಕ ಯಶಸ್ಸುಗಳು ಹೊಸ ಅಲೆಯನ್ನೇ ಹುಟ್ಟುಹಾಕಿವೆ. ಜೆನೆಟಿಕ್ ಇಂಜಿನಿಯರಿಂಗ್ ಎಂಬ ಮಹಾ ವಟವೃಕ್ಷವು ತನ್ನ ಬೃಹತ್ ರೆಂಬೆಕೊಂಬೆಗಳನ್ನು ಊರಗಲ ಚಾಚಿ ಹರಡುತ್ತಿದೆ. ಜೀವಕೋಶಗಳನ್ನೂ ಹರಿದು ಒಳಗೇನಿದೆ ಎಂದು ನೋಡಿದ ಮೇಲೂ ಕುತೂಹಲ ಇಂಗದೆ ಮನುಷ್ಯ ವರ್ಣತಂತುಗಳ (ಕ್ರೋಮೋಸೋಮ್) ಆಳಕ್ಕಿಳಿದು ಡಿಎನ್ಎಗಳ ಗುಟ್ಟನ್ನು ತಿಳಿಯುವ ಪ್ರಯತ್ನದಲ್ಲಿದ್ದಾನೆ. ಅವನು ದಾಪುಗಾಲಿಡುತ್ತಾ ಓಡುತ್ತಿರುವ ವೇಗವನ್ನು ಕಂಡರೆ ಇಂತಹ ದಿನಗಳು ಬಹಳ ದೂರವಿಲ್ಲ ಎಂದೆನಿಸದಿರದು.

ಒಂದು ಕಾಲದಲ್ಲಿ ಅದ್ಬುತ ಎಂದೇ ಬಣ್ಣಿಸಲಾದ ಪ್ರನಾಳ ಶಿಶುಗಳ (ಟೆಸ್ಟ್ ಟ್ಯೂಬ್ ಬೇಬಿಸ್ ) ಹುಟ್ಟು ಈಗ ಸರ್ವೇ ಸಾಮಾನ್ಯ. ಮೊದಲ ಪ್ರನಾಳ ಶಿಶು ಲೂಯಿಸ್ ಬ್ರೌನ್ ಗೆ ಈಗ ೪೦ರ ಪ್ರಾಯ. ಪ್ರಪಂಚದಲ್ಲಿ ಆ ನಂತರ ಇಂತಹ ಲೆಕ್ಕವಿಲ್ಲದಷ್ಟು ಪ್ರನಾಳ ಶಿಶುಗಳು ಜನಿಸಿವೆ. ನಮ್ಮ ನಿಮ್ಮ ನಡುವೆಯೇ ಬೆಳೆಯುತ್ತಿವೆ. ಆದರೆ ವಿಜ್ಞಾನಿಗಳು ಈ ಗೆಲುವಿನ ಅಮಲಿನಲ್ಲಿ ಮೈಮರೆತಿಲ್ಲ. ಹೊಸದೇನನ್ನಾದರೂ ಕಂಡುಹಿಡಿಯುವ ಹಪಹಪಿಯೊಂದಿಗೆ ತಮ್ಮ ಅನುಭವ, ಜ್ಞಾನವನ್ನೆಲ್ಲ ಧಾರೆ ಎರೆದು ಹಗಲಿರುಳು ದುಡಿಯುತ್ತಿದ್ದಾರೆ. ಪ್ರಕೃತಿ ಲಕ್ಷಗಟ್ಟಲೆ ವರ್ಷಗಳಿಂದ ಪ್ರಯೋಗಾತ್ಮಕವಾಗಿ ಸಾಧಿಸಿದ ವಿಕಸನದ ಎಳೆಗಳನ್ನು ತುಂಡರಿಸಿ ತಮ್ಮದೇ ಹೊಸ ಸ್ಪರ್ಶ ನೀಡಲು ಕಾತರರಾಗಿದ್ದಾರೆ. ಇಂತಹ ಅವಿರತ ಪ್ರಯತ್ನದ ಫಲವಾಗಿ ಹುಟ್ಟಿದ್ದೇ ಡಿಸೈನರ್ ಬೇಬೀಸ್ ಎಂಬ ತಂತ್ರಜ್ಞಾನ. 

ಏನಿದು  ಡಿಸೈನರ್ ಬೇಬೀಸ್ ?
ಮನುಷ್ಯರ ಬ್ರೂಣದಲ್ಲಿನ ಅನುವಂಶಿಕ ಧಾತುಗಳನ್ನು(ಜೀನ್) ಬೇಕಾದ ರೀತಿಯಲ್ಲಿ ಮಾರ್ಪಡಿಸಿ ತಮ್ಮಿಷ್ಟದಂತೆ ಮಕ್ಕಳನ್ನು ವಿನ್ಯಾಸಗೊಳಿಸಿಕೊಳ್ಳುವ ಕ್ರಮಕ್ಕೆ ಡಿಸೈನರ್ ಬೇಬೀಸ್ ಎಂಬ ಆಕರ್ಷಕ ಹೆಸರು! ಈ ತಂತ್ರಜ್ಞಾನದ ಮೂಲಕ ತಂದೆ ತಾಯಿಗಳಿಂದ ಮಕ್ಕಳಿಗೆ ಯಾವುದೇ ಖಾಯಿಲೆಗಳು ಹರಿದು ಹೋಗದಂತೆ ತಡೆಯುವುದರಿಂದ ಹಿಡಿದು ಹುಟ್ಟುವ ಮಗು ಗಂಡಾಗಿರಬೇಕೋ ಹೆಣ್ಣೋ, ಮಗುವಿನ ಕಣ್ಣಿನ ಬಣ್ಣ, ತಲೆಕೂದಲು, ಧ್ವನಿ ಹೇಗಿರಬೇಕು ಎಂಬುದನ್ನೆಲ್ಲ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವಿರುತ್ತದೆ. ಇದು ನಿಜವೇ ಆದಲ್ಲಿ ಮುಂದಿನ ಕೆಲ ದಶಕಗಳಲ್ಲಿ ಈಗಿನ ಮನುಷ್ಯರಿಗಿಂತ ಹೆಚ್ಚು ದೃಢಕಾಯದ, ಬಲಿಷ್ಠ, ಸ್ಪುರದ್ರೂಪಿಯಾದ ನವೀನ ಜನಾಂಗವೊಂದು ಸೃಷ್ಟಿಯಾದೀತು.

ಪಿಜಿಡಿ (ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ )
ಈ ದಿಕ್ಕಿನಲ್ಲಿ ದೃಢವಾದ ಹೆಜ್ಜೆಗಳನ್ನಿಟ್ಟು ಮುಂಬರಿಯಲು ಊರುಗೋಲಾಗಿ ನಿಂತಿರುವುದು ಪಿಜಿಡಿ (ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ ) ಎಂಬೊಂದು ವಿಧಾನ. ಬಹಳಷ್ಟು ಯಶಸ್ಸು ಕಂಡಿರುವ, ಕೆಲ ಮುಂದುವರಿದ ದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಪ್ರಕ್ರಿಯೆ ಇದಾಗಿದೆ. ಇಲ್ಲಿ ತಂದೆ ತಾಯಿಯರ ಅಂಡಾಣು ವೀರ್ಯಾಣುಗಳನ್ನು ಪ್ರನಾಳಿಕೆಗಳಲ್ಲಿ ವಿಧವಿಧವಾಗಿ ಸಂಯೋಜನೆಗೊಳಪಡಿಸಿ ಕೆಲ ವಾರಗಳ ನಂತರ ಆ ಬ್ರೂಣವನ್ನು ತಪಾಸಣೆಗೊಳಪಡಿಸಲಾಗುತ್ತದೆ. ಮಗು ಹುಟ್ಟುವುದಕ್ಕೆ ಮೊದಲೇ ಜೀನ್ಸ್ ಗಳ ಮೂಲಕ ವಂಶವಾಹಿನಿಯಲ್ಲಿ ಹರಿದು ಬರಬಲ್ಲ ಸಿಕಲ್ ಸೆಲ್ ಅನೀಮಿಯಾ, ಥ್ಯಾಲ್ಲಸೆಮಿಯಾ ದಂತಹ ಕೆಲವು ವಿರಳ ರೋಗಗಳನ್ನು ಗುರುತಿಸಿ, ಅಂತಹ ಜೀವಧಾತುಗಳನ್ನು ಹೊಂದಿರುವ ಬ್ರೂಣಗಳನ್ನು ಬದಿಗಿರಿಸಿ ಆರೋಗ್ಯಕರವಾಗಿರುವ ಮಗುವನ್ನು ಆಯ್ದುಕೊಳ್ಳುವ ಅವಕಾಶ ತಂದೆತಾಯಿಯರಿಗಿರುತ್ತದೆ. ಹೀಗೆ ಆಯ್ಕೆಗೊಂಡ ಬ್ರೂಣವನ್ನು ತಾಯಿಯ ಗರ್ಭದಲ್ಲಿರಿಸಲಾಗುತ್ತದೆ. ಮಗುವಿನ ಲಿಂಗವನ್ನು ಸಹ ಇಲ್ಲಿ ಪೋಷಕರು ಆರಿಸಿಕೊಳ್ಳಬಹುದೆಂಬುದು ಗಮನಾರ್ಹ ಸಂಗತಿ.

ಕೆಲ ವರ್ಷಗಳ ಹಿಂದೆ ಸೇವಿಯರ್ ಸಿಬ್ಲಿಂಗ್ಸ್ ಎನ್ನುವ ಪದ ಬಹಳಷ್ಟು ಸುದ್ದಿ ಮಾಡಿತ್ತು. ತನ್ನ ಸಹೋದರ ಅಥವಾ ಸಹೋದರಿಯ ಬೀಟಾ-ಥ್ಯಾಲ್ಲಸೆಮಿಯಾ, ಲ್ಯೂಕೆಮಿಯಾದಂತಹ ಮಾರಣಾಂತಿಕ ಖಾಯಿಲೆಯನ್ನು ಗುಣಪಡಿಸಲೆಂದು ಜನ್ಮ ತಾಳುವ ಮಕ್ಕಳೇ ಸೇವಿಯರ್ ಸಿಬ್ಲಿಂಗ್ಸ್. ಆರೋಗ್ಯವಂತ ವ್ಯಕ್ತಿಯ ಕೆಲ ಜೀವಕೋಶಗಳನ್ನು ಬಳಸಿ ಇಂತಹ ಬೇನೆಗಳನ್ನು ಗುಣಪಡಿಸಬಹುದಂತೆ. ಆದರೆ ಅದಕ್ಕೆ ಆ ಜೀವಕೋಶಗಳಲ್ಲಿ ಅತಿ ಹೆಚ್ಚಿನ ಸಾಮ್ಯತೆ ಇರಬೇಕು. ತಮ್ಮ ಮಕ್ಕಳನ್ನುಳಿಸಲು ತಂದೆ ತಾಯಿಗಳು ಪಿಜಿಡಿ ತಂತ್ರಜ್ಞಾನದ ಮೂಲಕ ತಮಗೆ ಬೇಕಾದ ಬ್ರೂಣವನ್ನೇ ಮಗುವಾಗಿ ಪಡೆಯುತ್ತಾರೆ. ಇಂತಹ ಉದಾಹರಣೆಗಳು ಬಹಳಷ್ಟಿವೆ. ಪ್ರಪಂಚದ ಮೊದಲ ಸೇವಿಯರ್ ಸಿಬ್ಲಿಂಗ್ ಎಂದೇ ಹೆಸರು ಪಡೆದ ಆಡಮ್ ನ್ಯಾಶ್ ಹುಟ್ಟಿದ್ದು ಸಹ ತನ್ನ ಅಕ್ಕನಿಗಾಗಿ. ತಮ್ಮ ಮಗಳು ಮೋಲಿ ನ್ಯಾಶ್  ಫ್ಯಾಂಕೋನಿ-ಅನೀಮಿಯಾ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾಳೆ ಎಂಬ ವಿಷಯ, ಜಾಕ್ ಮತ್ತು ಲೀಸಾ ನ್ಯಾಶ್ ದಂಪತಿಗಳಿಗೆ ತಿಳಿದಾಗ ಇಬ್ಬರೂ ಆಘಾತಕ್ಕೊಳಗಾಗುತ್ತಾರೆ. ಫ್ಯಾಂಕೋನಿ-ಅನೀಮಿಯಾ ಅನುವಂಶಿಕವಾಗಿ ಬರುವ ವಿಚಿತ್ರ ರೋಗ. ಮೂಳೆ ಮಜ್ಜೆಯನ್ನು(ಬೋನ್ ಮ್ಯಾರೋ) ಗುರಿಯಾಗಿಸುವ ಇದು ರಕ್ತ ಕಣಗಳ ಉತ್ಪಾದನೆಯನ್ನೇ ಗಣನೀಯವಾಗಿ ಕಡಿಮೆಗೊಳಿಸುತ್ತದೆ. ಅಂತಿಮ ಸ್ಥರದಲ್ಲಿ ರೋಗಿ ಅಂಗವೈಕಲ್ಯ, ಮೂಳೆ ಮಜ್ಜೆಯ ಪೂರ್ಣ ವೈಫಲ್ಯ ಅಥವಾ ಲ್ಯೂಕೆಮಿಯಾದಂತಹ ಮಾರಣಾಂತಿಕ ಖಾಯಿಲೆಗಳಿಗೆ ಬಲಿಯಾಗಬಹುದು. ಇದಕ್ಕೆ ಮದ್ದು ಎಂದರೆ ಬೋನ್ ಮ್ಯಾರೋದ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವುದು. ರೋಗಿಯ ಜೀವಕಣಗಳಿಗೆ ಅತೀ ಸಮೀಪವಾಗಿ ಹೊಂದಾಣಿಕೆ ಆಗುವಂತಹ ಬೇರೆ ವ್ಯಕ್ತಿಯ ಬೋನ್ ಮ್ಯಾರೋದಿಂದ ತೆಗೆದ ಜೀವಕೋಶಗಳನ್ನು ವರ್ಗಾವಣೆ ಮಾಡುವುದರಿಂದ ಆ ಖಾಯಿಲೆಯನ್ನು ತಕ್ಕ ಮಟ್ಟಿಗೆ ಗುಣಪಡಿಸಬಹುದು. ಹೊಂದಾಣಿಕೆ ಇಲ್ಲದ ಪಕ್ಷದಲ್ಲಿ ಹೊಸ  ಜೀವಕೋಶಗಳನ್ನು ರೋಗಿಯ ದೇಹ ತನ್ನದೆಂದು ಒಪ್ಪಿಕೊಳ್ಳುವುದಿಲ್ಲ. ತಮ್ಮ ಮುದ್ದು ಮಗಳು ದಿನ ದಿನವೂ ಸಾವಿಗೆ ಸಮೀಪವಾಗುವುದನ್ನು ನೋಡಲಾರದೆ ಒದ್ದಾಡುತ್ತಿದ್ದ ಅಪ್ಪ ಅಮ್ಮನಿಗೆ ಆಶಾಕಿರಣವಾಗಿ ಬಂದಿದ್ದು ಡಿಸೈನರ್  ಬೇಬೀಸ್  ತಂತ್ರಜ್ಞಾನ. ಡಾಕ್ಟರ್ ನ ಸಲಹೆಯಂತೆ ಗಂಡ ಹೆಂಡತಿ ಇಬ್ಬರೂ ಮೋಲಿ ನ್ಯಾಶ್ ಗೆ  ಬೇಕಾಗುವ ಜೀವಕೋಶಗಳಿರುವ ಮಗುವನ್ನು ಹೆರಲು ಮುಂದಾದರು. ಕೆಲ ಬ್ರೂಣಗಳನ್ನು ಪರೀಕ್ಷಿಸಿದ ಮೇಲೆ ಇವರಿಗೆ ಬೇಕಾಗಿದ್ದಂತಹ ಮಗು ಸಿಕ್ಕಿತು. ಅದನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡ ಲೀಸಾ ನ್ಯಾಶ್ ಕೆಲ ತಿಂಗಳುಗಳ ನಂತರ ಮಗುವನ್ನು ಹೆತ್ತಳು. ಈ ಮಗುವೇ ಆಡಮ್ ನ್ಯಾಶ್. ಆಡಮ್ ನ್ಯಾಶ್ ನ ಜೀವಕಣಗಳು ಮೋಲಿ ಗೆ ಹೊಸ ಹುಟ್ಟು ನೀಡಿದ್ದು ಈಗ ಹಳೆಯ ಸಂಗತಿ.

ಕೆಲ ಅನುವಂಶಿಕ ಖಾಯಿಲೆಗಳಿಂದ ಮುಂದಿನ ಪೀಳಿಗೆಯನ್ನು ರಕ್ಷಿಸಲು ಪಿಜಿಡಿ ವಿಧಾನ ಸಹಾಯಕಾರಿ. ಆದರೆ ಪಿಜಿಡಿ ಇದ್ದುದರಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆಯೇ ಹೊರತು ಹೊಸದನ್ನು ಸೃಷ್ಟಿಮಾಡಲಲ್ಲ. ಮಕ್ಕಳ ಎತ್ತರ, ಬಣ್ಣ, ರೂಪ ಯಾವೊಂದನ್ನೂ ಇಲ್ಲಿ ಬದಲಾಯಿಸಲಾಗದು. ಮತ್ತು ಎಲ್ಲ ಖಾಯಿಲೆಗಳನ್ನೂ ಮುಂದಿನ ಪೀಳಿಗೆಗೆ ಜಾರದಂತೆ ತಡೆಯಲಾಗದು. ಪ್ರಪಂಚದೆಲ್ಲೆಡೆ  ಇದರ ಉಪಯೋಗ ನೈತಿಕ ಪ್ರಶ್ನೆಗೆ ಒಳಗಾಗಿದ್ದರೂ ಬ್ರಿಟನ್, ಜರ್ಮನಿಯಂತಹ ದೇಶಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಇದರ ಬಳಕೆಯನ್ನು ಸೀಮಿತಗೊಳಿಸಲಾಗಿದೆ. ಖಾಯಿಲೆಗೆ ಉತ್ತರವೆಂಬಂತೆ ಮಕ್ಕಳನ್ನು ಹೆರುವ ಮನಸ್ಥಿತಿಯ ತಂದೆ ತಾಯಿಯರು ನಾಳೆ ತಮ್ಮ ಮಕ್ಕಳಿಗೆ ಯಾವುದಾದರು ಅಂಗ ಬೇಕಾದಲ್ಲಿ ಇನ್ನೊಂದು ಬ್ರೂಣವನ್ನು ಬೆಳೆಸಿ ಅದರ ಅಂಗವನ್ನು ತಮ್ಮ ಮಕ್ಕಳಿಗೆ ಕೊಡಬಲ್ಲ ಸಾಧ್ಯತೆ ಇಲ್ಲವೇ ಎಂಬುದು ಹಲವರ ಪ್ರಶ್ನೆ! ಇದೇ ಪರಿಕಲ್ಪನೆಯನ್ನು ಆಧರಿಸಿ ೨೦೦೯ರಲ್ಲಿ  ಮೈ ಸಿಸ್ಟರ್ಸ್ ಕೀಪರ್ ಎನ್ನುವ ಚಲನಚಿತ್ರವೊಂದು ಬಂದಿದೆ.

ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್
ಇದಲ್ಲದೆ ಇನ್ನೂ ಮುಂದುವರೆದ, ಡಿಸೈನರ್ ಬೇಬೀಸ್ ಗಳ ಹುಟ್ಟಿಗೆ ಇಂಬು ಕೊಡಲೋಸುಗ ಕಂಡುಹಿಡಿದ ಬಹಳಷ್ಟು ಬಿಸಿ ಚರ್ಚೆಗೆ ಗುರಿಯಾಗುತ್ತಿರುವ ವಿಧಾನವೊಂದಿದೆ.   ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ಎಂದು ಕರೆಸಿಕೊಳ್ಳುವ ಇದರಲ್ಲಿ ಅಂಡಾಣು, ವೀರ್ಯಾಣುಗಳಲ್ಲಿನ ಜೀವಕೋಶಗಳ ಡಿಎನ್ಎ ಸೀಕ್ವೆನ್ಸ್ ಗಳನ್ನು ಬದಲಿಸಿ ಬೇಡದ ಜೀನ್ ಗಳನ್ನು ಕತ್ತರಿಸಿ ಹೊಸದನ್ನು  ಜೋಡಿಸಲಾಗುತ್ತದೆ. ಇದರ ಸಹಾಯದಿಂದ ಏಡ್ಸ್ ನಂತಹ ಗುಣಪಡಿಸಲಾಗದೆ ಉಳಿದ ಎಷ್ಟೋ ರೋಗಗಳನ್ನು ವಾಸಿಮಾಡಬಹುದೆಂಬ ನಂಬಿಕೆ ಇದೆ. ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ನ  ಮತ್ತೊಂದು ಸಂಭವನೀಯ ಬಳಕೆ ಎಂದರೆ ಈ ಕಾಲಕ್ಕೆ ಕಾಲ್ಪನಿಕ ಎನಿಸಿದರೂ ಮನುಷ್ಯರ ಗುಣಗಳನ್ನೇ ಬದಲಾಯಿಸಬಹುದಾದಂತಹ ಪ್ರಕ್ರಿಯೆ. ಉದಾಹರಣೆಗೆ ಉತ್ತಮ ದೇಹಧಾರ್ಡ್ಯ ಹೊಂದಿರುವ ಆರೋಗ್ಯವಂತ ಮನುಷ್ಯರನ್ನು ತಯಾರು ಮಾಡುವುದು ಅಥವಾ ಚರ್ಮದ, ಕೂದಲಿನ ಬಣ್ಣದ  ಆಯ್ಕೆ, ಹುಟ್ಟುವ ಮಕ್ಕಳ ಬುದ್ಧಿಶಕ್ತಿ ಹೆಚ್ಚುವಂತೆ ಮಾಡುವುದು ಇತ್ಯಾದಿ! ಜೀನ್ ಥೆರಪಿ ಎಂಬ ವಿಧಾನ ಹೆಚ್ಚು ಕಡಿಮೆ ಜೆರ್ಮ್ ಲೈನ್ ಇಂಜಿನಿಯರಿಂಗ್ ನಂತೆಯೇ ಇದ್ದರೂ ಜೀನ್ ಥೆರಪಿಯಲ್ಲಿ ಸಂತಾನೋತ್ಪತ್ತಿಯಲ್ಲಿ ಭಾಗವಹಿಸದ ಜೀವಕೋಶಗಳನ್ನು ಮಾರ್ಪಡಿಸುವ ಕಾರಣ ಅವುಗಳು ತರುವ ಬದಲಾವಣೆಗಳು ಕೇವಲ ಆ ವ್ಯಕ್ತಿಗೆ ಸೀಮಿತವಾಗಿರುತ್ತವೆಯೇ ಹೊರತು ಮುಂದಿನ ಮಕ್ಕಳಿಗೆ ದಾಟಲಾರವು.

ಕ್ರಿಸ್ಪರ್ /ಕ್ಯಾಸ್ ೯ (CRISPR /cas9)
ಡಿಎನ್ಎಗಳನ್ನು ನಮಗೆ ಬೇಕಾದಂತೆ ತಿದ್ದುವುದು ಅಷ್ಟು ಸುಲಭವಲ್ಲ. ಮೊದಲಿಗೆ ಎದುರಾಗುವ ಸಮಸ್ಯೆ ಎಂದರೆ ಇನ್ನೂ ಜೀವಧಾತುಗಳು ಮನುಷ್ಯನ ಹಿಡಿತಕ್ಕೆ ಸಂಪೂರ್ಣವಾಗಿ ಸಿಕ್ಕಿಲ್ಲ. ಆ ವರ್ಣತಂತುವೆಂಬ ಕಪ್ಪು ಪೆಟ್ಟಿಗೆಯ ಒಳಗೇನಿದೆ ಎಂದು ಸರಿಯಾಗಿ ತಿಳಿಯದೆ ಹೆಚ್ಚೇನನ್ನೂ ಮಾಡಲಾಗದು. ಆದರೂ ಛಲಬಿಡದ ತ್ರಿವಿಕ್ರಮರು ಇವುಗಳ ಗುಟ್ಟನ್ನು ಅರಿಯುವ ಸತತ ಪ್ರಯತ್ನದಲ್ಲಿದ್ದಾರೆ. ಈ ರೀತಿ ಡಿಎನ್ಎ ಗಳ ತಿದ್ದುಪಡಿ ಮಾಡಲೆಂದೇ ಕ್ರಿಸ್ಪರ್/ಕ್ಯಾಸ್೯ ಎಂಬ ಕ್ಲಿಷ್ಟಕರವಾದ ಆದರೆ ಕರಾರುವಾಕ್ಕಾದ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಕ್ರಿಸ್ಪರ್/ಕ್ಯಾಸ್೯ ಎಂಬುದು ಕಿಣ್ವಗಳ(ಎನ್ಜೈಮ್) ಗುಂಪು. ಕ್ರಿಸ್ಪರ್ ಎಂದರೆ ಯಾವ ಜೀನ್ ಗಳನ್ನು ಬದಲಿಸಬೇಕಿದೆಯೋ ಅವುಗಳ ಸೀಕ್ವೆನ್ಸ್ ಗೆ ಹೊಂದಾಣಿಕೆಯಾಗುವಂತಹ ಚಿಕ್ಕ ಆರ್ ಎನ್ಎ ತುಂಡು. ಕ್ಯಾಸ್೯ ಕಿಣ್ವ ಬದಲಿಸಬೇಕಾದ ಡಿಎನ್ಎ ಯನ್ನು ಕತ್ತರಿಸಲು ನೆರವಾಗುತ್ತದೆ. ಕ್ರಿಸ್ಪರ್/ಕ್ಯಾಸ್೯ ಸಂಕೀರ್ಣವು(ಕಾಂಪ್ಲೆಕ್ಸ್) ಮೊದಲಿಗೆ ಇಡಿಯ ಡಿಎನ್ಎ ಯನ್ನು ಹುಡುಕಿ ಕ್ರಿಸ್ಪರ್ ಆರ್ ಎನ್ಎ ಹೊಂದಿಕೆಯಾಗುವಂತಹ ಸೀಕ್ವೆನ್ಸ್ ಅನ್ನು ಗುರುತಿಸುತ್ತದೆ. ಕ್ಯಾಸ್೯ ಆ ಬೇಡದ ಡಿಎನ್ಎ ಯನ್ನು ಕತ್ತರಿಸಿ ತೆಗೆಯುತ್ತದೆ. ನಂತರದಲ್ಲಿ ಬೇಕೆಂದ ಹೊಸ ಡಿಎನ್ಎಯನ್ನು ಆ ಜಾಗದಲ್ಲಿ ಕೂರಿಸಲಾಗುತ್ತದೆ. ಕ್ರಿಸ್ಪರ್/ಕ್ಯಾಸ್೯ ನ ಮುಖ್ಯ ಉಪಯೋಗ ಪ್ರಯೋಗಾತ್ಮಕವಾಗಿದ್ದು ಡಿಎನ್ಎ ಗಳಲ್ಲಿನ ಬೇರೆ ಬೇರೆ ಜೀವಕೋಶಗಳನ್ನು ತೆಗೆದುಹಾಕಿ ಅವು ಯಾವ ಗುಣಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ನೋಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನುವಂಶಿಕ ಖಾಯಿಲೆಗಳಿಗೆ ಕಾರಣವಾಗುವ ಧಾತುಗಳನ್ನು ಗುರುತಿಸಿ ಅವುಗಳನ್ನು ಬೇರ್ಪಡಿಸಿ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದೇ ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ನ ಸಧ್ಯದ ಗುರಿ ಎಂದು ಹೇಳಬಹುದು.

ಈ ವಿಧಾನ ಸದ್ಯದ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂತಹ ಗೆಲುವನ್ನೇನೂ ಸಾಧಿಸದಿದ್ದರೂ ತೀವ್ರವಾಗಿ ಸಂಶೋಧನೆಗೊಳಗಾಗುತ್ತಿರುವುದಂತೂ ನಿಜ. ಈ ಹಾದಿಯಲ್ಲಿ ಮುಂಚೂಣಿಯಲ್ಲಿರುವ ಚೈನಾದ ವಿಜ್ಞಾನಿಗಳು ಕ್ರಿಸ್ಪರ್/ಕ್ಯಾಸ್೯ ವಿಧಾನ ಬಳಸಿ ಜೀನ್ ಗಳನ್ನು ಬದಲಿಸಲು ಪ್ರಯತ್ನಪಟ್ಟಿದ್ದಾರಾದರೂ ಪ್ರತಿಬಾರಿಯೂ ಪ್ರಯೋಗ ವಿಫಲವಾಗಿದೆ. ಮುಂದೊಂದು ದಿನ ಗಮ್ಯ ತಲುಪಿಯೇ ತೀರುತ್ತೇವೆ ಎನ್ನುವ ಆಶಾಭಾವನೆಯಿಂದ ವಿಜ್ಞಾನಿಗಳು ಮೇಲಿಂದ ಮೇಲೆ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.

ಲುಲು ಮತ್ತು ನಾನಾ :
೨೦೧೮ ರ ನವೆಂಬರ್ ತಿಂಗಳಲ್ಲಿ ಚೈನಾ ದೇಶದ ವಿಜ್ಞಾನಿ ಹೇ ಜಿಯಾನ್ಕ್ಯೂಯಿ ಎಂಬಾತ ತಾನು ಈಗಾಗಲೇ ಅವಳಿ ಹೆಣ್ಣುಮಕ್ಕಳಾದ ಲುಲು ಮತ್ತು ನಾನಾ ಎಂಬ ಹೆಸರಿನ ಡಿಸೈನರ್  ಬೇಬೀಸ್ ಗಳನ್ನು ತಯಾರು ಮಾಡಿದ್ದೇನೆ ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟ. ಉಳಿದೆಲ್ಲ ವಿವರಗಳನ್ನೂ ಗೌಪ್ಯವಾಗಿಟ್ಟ. ಇದು ಸತ್ಯವೆಂದು ಸಾಬೀತಾಗಲಿಲ್ಲ. ಆದರೆ ಸುಳ್ಳೆಂದು ಅಲ್ಲಗಳೆಯಲು ಪುರಾವೆಗಳೂ ಇಲ್ಲ. ಇದು ಎಲ್ಲೆಡೆ ವ್ಯಾಪಕವಾಗಿ ಟೀಕೆಗೆ ಒಳಗಾಯಿತು. ಚೈನಾದ ಸರಕಾರ ಕಾನೂನು ಉಲ್ಲಂಘನೆ ಮಾಡಿದನೆಂದು ಆತನ ಎಲ್ಲ ಸಂಶೋಧನೆಗಳನ್ನು ಮುಂದುವರೆಸದಂತೆ ತಡೆಹಿಡಿಯಿತು. ಆ ದೇಶದ ಸರಕಾರದಿಂದಲೇ ಈ ಸಂಶೋಧನೆಗೆ ಹಣ ಸಂದಾಯವಾಗಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದವು.

ಪಿಜಿಡಿಯ ಮೂಲಕ ತಂದೆ ತಾಯಿಗಳು ತಮ್ಮದೇ ಬ್ರೂಣಗಳಲ್ಲಿ ಆರೋಗ್ಯವಂತ ಬ್ರೂಣವೊಂದನ್ನು ಆಯ್ಕೆಮಾಡಿಕೊಳ್ಳಲು ಮಾತ್ರ ಸಾಧ್ಯ. ಅಕಸ್ಮಾತ್ ಎಲ್ಲ ಬ್ರೂಣಗಳಲ್ಲೂ ಅವರಿಗಿರುವ ಖಾಯಿಲೆ ಅನುವಂಶಿಕವಾಗಿ ಬಂದಿದ್ದಲ್ಲಿ ಅವರೇನೂ ಮಾಡುವ ಹಾಗಿಲ್ಲ. ಆದರೆ ಕ್ರಿಸ್ಪರ್/ಕ್ಯಾಸ್೯ ನ ಮುಖಾಂತರ ಅಂತಹ ಜೀನ್ ಗಳನ್ನೇ ತುಂಡರಿಸಿ ಎಸೆಯುವ ಮೂಲಕ ಮುಂದಿನ ಕೆಲ ಪೀಳಿಗೆಗಳಲ್ಲಿ ಈ ಪಿಡುಗುಗಳನ್ನೇ ನಾಮಾವಶೇಷ ಮಾಡುವ ಕನಸು ಕಾಣಲಾಗುತ್ತಿದೆ. ಆದರೆ ಇದು ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಲ್ಲ. ವಂಶವಾಹಿಗಳು ಅತೀ ಸಂಕೀರ್ಣವಾಗಿದ್ದು ಅವುಗಳನ್ನು ಬದಲಿಸುವ ಮೊದಲು ಅದರ ಒಳಹೊರಗನ್ನು ಅರಿತಿರಬೇಕು. ಈ ಬದಲಾವಣೆಗಳು ಕೇವಲ ಆ ವ್ಯಕ್ತಿಗಷ್ಟೇ ಸೀಮಿತವಾಗದೆ ಮುಂದಿನವರಿಗೂ ಹರಿಯುವುದರಿಂದ ಪ್ರಯೋಗದಲ್ಲಿ ಸ್ವಲ್ಪ ಎಡವಟ್ಟಾದರೂ ಅದು ಬಹಳಷ್ಟು ಜೀವಗಳನ್ನು ಆಹುತಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

ಇದನ್ನೆಲ್ಲಾ ಮಾಡಲು ಸಾಧ್ಯವೇ ಎನ್ನುವುದಕ್ಕಿಂತ ಇಂತಹ ಪ್ರಯೋಗಗಳನ್ನು ಮಾಡಬೇಕೆ ಬೇಡವೇ ಎನ್ನುವುದೇ ಇಂದಿನ ದೊಡ್ಡ ಸವಾಲು? ವೈದ್ಯಕೀಯ ವಲಯದಲ್ಲಿ ಇದು ಒಂದು ಅದ್ಭುತವನ್ನೇ ಮಾಡಬಹುದಾದರೂ ಸಮಾಜದ ಸ್ವಾಸ್ತ್ಯ ಕೆಡಿಸುವಲ್ಲಿಯೂ ಇದರ ಪ್ರಯೋಗವಾಗುವ ಸಾಧ್ಯತೆ ಇದೆ. ಹರಿತವಾದ ಕತ್ತಿಯಲುಗಿನಂತೆ ಬಳಸುವವರ ಕೈಗೊಂಬೆಯಾಗಬಲ್ಲದು. ಹಣ ಮಾಡುವ ಹೊಸ ದಾರಿಯಾಗಬಲ್ಲದು. ಇನ್ನು ಗುಣಗಳನ್ನು ಬದಲಾಯಿಸುವ ಪ್ರಯೋಗವಂತೂ ಮಾನವ ಸಂಕುಲವನ್ನು ಅಧಃಪತನದತ್ತ ಜಾರುವಂತೆ ಮಾಡುತ್ತದೆಯೇ? ಸಾವಿನ ಸಂಖ್ಯೆ ಇಳಿಮುಖವಾಗಿ ಜನಸಂಖ್ಯೆ ಇನ್ನಷ್ಟು ಏರುತ್ತದೆಯೇ? ಬಹಳಷ್ಟು ದೇಶಗಳಲ್ಲಿ ಇದರ ಬಳಕೆ ನಿಷೇಧವಿದ್ದರೂ, ತೀವ್ರ ವಿರೋಧ ವ್ಯಕ್ತವಾಗಿದ್ದರೂ ಕೆಲವಾರು ಕಂಪೆನಿಗಳು ಗುಟ್ಟಾಗಿ ತಮ್ಮ ಹಣವನ್ನು ಇಂತಹ ಸಂಶೋಧನೆಗಳಿಗೆ ಸುರಿಯುತ್ತಿವೆ. ಇದೊಂದು ಮಹತ್ಕಾರ್ಯ ಎಂಬ ಸಕಾರಾತ್ಮಕ ಭಾವನೆಯುಳ್ಳ ಹಲವರು ಈ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ನಮ್ಮೀ ಅತ್ಯಾಸೆ ಕೊನೆಗೆ ನಮ್ಮನ್ನು ಎಲ್ಲಿ ತಂದು ನಿಲ್ಲಿಸುವುದೋ ಕಾಲವೇ ಉತ್ತರಿಸಬೇಕಿದೆ.

[ ತರಂಗ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ ]

Saturday 22 February 2020

ಗಲಿವರ್ಸ್ ಟ್ರಾವೆಲ್ಸ್ - ಜೊನಾಥನ್ ಸ್ವಿಫ್ಟ್



ಅಮ್ಮ ಅಮ್ಮ ಗಲಿವರ ಮತ್ತು ಲಿಲ್ಲಿಪುಟ್ ಗಳ ಕಥೆ ಹೇಳಮ್ಮ ಅಂತ ಆಗಾಗ ಅಮ್ಮನನ್ನು ಕೇಳುತ್ತಿದ್ದೆ ನಾನು. ಗಲಿವರನೆಂಬ ನಾವಿಕ ತನ್ನ ಸಮುದ್ರಯಾನದ ಸಮಯದಲ್ಲಿ ದಿಕ್ಕುತಪ್ಪಿ ಲಿಲ್ಲಿಪುಟ್ ಗಳೆಂಬ ಬೆರಳೆತ್ತರದ ಮನುಷ್ಯರ ನಾಡನ್ನು ತಲುಪುವ ಕಥೆ ಎಂದಿಗೂ ಸೋಜಿಗವನ್ನುಂಟುಮಾಡುತ್ತಿತ್ತು. ಗಲಿವರ, ಲಿಲ್ಲಿಪುಟ್ ಗಳು ನಮ್ಮವರೇ ಏನೋ ಎನ್ನುವಷ್ಟು ಆಳವಾಗಿ ನಮ್ಮ ಭಾಷೆಯಲ್ಲಿ ಆ ಪದಗಳು ಬೆರೆತುಹೋಗಿವೆ.  

ಗಲಿವರನ ಸಾಹಸಗಳನ್ನು ಮಕ್ಕಳ ಕಥೆಗಳೆಂದೇ ತಿಳಿದಿದ್ದ ನನಗೆ ಈಗ್ಗೆ ಹತ್ತು ವರ್ಷಗಳ ಹಿಂದೆ ಕನ್ನಡ ಅನುವಾದಿತ ಪುಸ್ತಕವೊಂದು ಸಿಕ್ಕಿತ್ತು ( ಹೆಸರು ಮರೆತಿದ್ದೇನೆ. ಗೆಳೆಯರೊಬ್ಬರು ಓದಲು ಕೊಂಡುಹೋಗಿದ್ದ ಪುಸ್ತಕ ವಾಪಸು ಬರಲೇ ಇಲ್ಲ) . ಅದನ್ನು ಓದಿದ ಮೇಲೆಯೇ ತಿಳಿದದ್ದು, ಅದು ಮಕ್ಕಳಿಗೆಂದು ಬರೆದ ಕಥೆಗಳಲ್ಲವೇ ಅಲ್ಲ. ಆಗಿನ ಬ್ರಿಟಿಷ್ ದೇಶದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನಿಲುವುಗಳನ್ನು ಪ್ರಶ್ನಿಸುವ, ಅಲ್ಲಿನ ಕುಂದುಕೊರತೆಗಳನ್ನು ಎತ್ತಿ ಹಿಡಿಯುವ ವಿಡಂಬನಾತ್ಮಕ ಪುಸ್ತಕ ಎಂದು. ಕನ್ನಡದಲ್ಲಿ ಓದಿದ ಮೇಲೆ ಇಂಗ್ಲಿಷ್ನಲ್ಲೂ ಓದಿ ನೋಡೋಣವೆಂದು ಇತ್ತೀಚೆಗೆ ಕಿಂಡಲ್ ನಲ್ಲಿ ಉಚಿತವಾಗಿ ದೊರೆತ ಗಲಿವರ್ಸ್ ಟ್ರಾವೆಲ್ಸ್  ಪುಸ್ತಕ ಓದಿದೆ. ಗಲಿವರ್ಸ್ ಟ್ರಾವೆಲ್ಸ್ ಹೊತ್ತಿಗೆ ಓದುಗರ ಕೈಸೇರಿ ಶತಮಾನಗಳೇ ಕಳೆದರೂ ಅದರ ಸೊಗಸು ಪ್ರಸ್ತುತಕ್ಕೂ ಮಾಸಿಲ್ಲ. 

ಗಲಿವರನ ಕಡಲಯಾನದ ಸಾಹಸಗಳನ್ನು ನಾವು  ಓದಿಯೇ ಸವಿಯಬೇಕು. ಮೊದಲ ಪರ್ಯಟನೆಯ ಸಮಯದಲ್ಲಿ ಅವನಿದ್ದ ಹಡಗು ಮುಳುಗಿ ಲಿಲ್ಲಿಪುಟ್ ಗಳ ಕೈಸೆರೆಯಾಗುತ್ತಾನೆ. ಅವರ ಪುಟ್ಟ ಕಣ್ಣುಗಳಿಗೆ ಗಲಿವರ ಬೆಟ್ಟಪ್ಪ. ಅಲ್ಲಿನ ರಾಜನ, ಪ್ರಜೆಗಳೊಂದಿಗಿನ ಒಡನಾಟ, ಬೆಂಕಿಪೊಟ್ಟಣಗನ್ನು ಜೋಡಿಸಿಟ್ಟಂತೆ ಪುಟ್ಟ ಕಟ್ಟಡಗಳು, ಪಾಳುಬಿದ್ದ ದೇವಸ್ಥಾನದಲ್ಲಿ ಇವನ ವಾಸ, ಅವರ ನಂಬಿಕೆಗಳು, ಆಚರಣೆಗಳು ಇವೆಲ್ಲವುಗಳ ವಿವರಣೆ ಇದೆ. ಮೊಟ್ಟೆಯನ್ನು ಯಾವ ತುದಿಯಿಂದ ಒಡೆಯಬೇಕೆಂಬ ವಿಚಾರಕ್ಕೆ ಪಕ್ಕದ ರಾಜ್ಯವಾದ ಬ್ಲೇಫುಸ್ಕು ಗಳೊಂದಿಗೆ ಲಿಲ್ಲಿಪುಟ್ ಗಳ ಕಾದಾಟ, ಕೆಲವೊಮ್ಮೆಕಾರಣವೇ ಇಲ್ಲದೆ ಹೊಡೆದಾಡುವ ನಮ್ಮನ್ನೇ ನೆನಪಿಸುತ್ತದೆ. ಕೊನೆಯಲ್ಲಿ ಗಲಿವರನ ವಿರುದ್ಧವೇ ಪಿತೂರಿ ನಡೆದು, ಅಲ್ಲಿನ ದೊರೆ ಅವನ ಕಣ್ಣುಗಳನ್ನು ಕೀಳುವ ಆಜ್ಞೆನೀಡಿದಾಗ ಬೆಟ್ಟಪ್ಪ ಸಣ್ಣ ಬೋಟಿನ ಸಹಾಯದಿಂದ ಪರಾರಿಯಾಗುತ್ತಾನೆ.  

ಇವನ ಪ್ರಯಾಣಗಳು ಕೇವಲ ಲಿಲ್ಲಿಪುಟ್ ಗಳ ನಾಡಿಗೆ ಸೀಮಿತವಲ್ಲ. ಅಲ್ಲಿಂದ ಮುಂದೆ ಬ್ರಾಬ್ದಿನ್ಗ್ ನಾಗ್ ದ್ವೀಪದಲ್ಲಿ ೫೦ ಅಡಿಗಳಿಗೂ ಎತ್ತರದ ಬೃಹತ್ ಮನುಷ್ಯರ ಕೈಗೆ ಸಿಕ್ಕಿಕೊಳ್ಳುವ ಸಂಗತಿ ಇದೆ. ಅಲ್ಲಿ ಗಲಿವರ ಅವರ ಪ್ರದರ್ಶನದ ಬೊಂಬೆಯಾಗುತ್ತಾನೆ. ಬೀದಿ ಬೀದಿಯಲ್ಲಿ ಇವನನ್ನು ನೋಡಲು ಬರುವ ಜನರೆದುರು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪ್ರದರ್ಶನಗಳನ್ನು ನೀಡುತ್ತಾ ಬಹಳ ಬಳಲುತ್ತಾನೆ. ಪ್ರಾಣಿಗಳನ್ನು ನಮ್ಮ ಹೊಟ್ಟೆಪಾಡಿಗಾಗಿ ದುಡಿಸಿಕೊಳ್ಳುವ ನಮ್ಮದೇ ಕಥೆ ಅದು ಎಂದೆನಿಸದೇ ಇರಲಾರದು. ಅದೃಷ್ಟವಶಾತ್ ಅಲ್ಲಿನ ರಾಣಿ ಹೆಚ್ಚಿನ ಬೆಲೆ ತೆತ್ತು ಇವನ್ನನ್ನು ಕೊಂಡುಕೊಂಡು ಜೊತೆಯಲ್ಲಿರಿಸಿಕೊಳ್ಳುತ್ತಾಳೆ. ಮುಂದೆ ಅರಮನೆಯಲ್ಲಿನ ಕುಬ್ಜನೊಬ್ಬನ ಕುತಂತ್ರಗಳು,  ಹೆಜ್ಜೇನುಗಳೊಂದಿಗೆ ಕಾದಾಟ, ಮಂಗನ ಕೈಗೆ ಸಿಕ್ಕಿಕೊಳ್ಳುವ ಕಥೆ, ಅಲ್ಲಿನ ರಾಜನ ಜೊತೆ ನಡೆವ ಮಾತು ಕಥೆಗಳು, ಯೂರೋಪಿನ ಜನರ ಯುದ್ದೋತ್ಸಾಹ, ಕೋವಿ ಫಿರಂಗಿಗಳ ಬಳಕೆಯ ಬಗ್ಗೆ ರಾಜನ ಅಸಮ್ಮತಿ ಎಲ್ಲವೂ ರಸಗವಳವೇ ಸರಿ. 

ಮೂರನೇ ಯಾನದಲ್ಲಿ ಕಡಲ್ಗಳ್ಳರ ಕೈಗೆ ಸಿಕ್ಕಿ ತೊಂದರೆಗೊಳಗಾಗಿ ಲ್ಯಾಪುಟ ಎಂಬ ತೇಲುವ ದ್ವೀಪ ಸೇರುತ್ತಾನೆ ಗಲಿವರ. ಆ ನಾಡಿನ ಪ್ರವಾಸದ ಸಂದರ್ಭದಲ್ಲಿ ಲಗಾಡೋ ಎಂಬಲ್ಲಿನ ಗ್ರಾಂಡ್ ಅಕಾಡೆಮಿಯಲ್ಲಿ ನಡೆಯುತ್ತಿದ್ದ ಸೌತೆಕಾಯಿಗಳಿಂದ ಸೂರ್ಯಕಿರಣಗಳನ್ನು ಹೊರತೆಗೆಯುವ ಬಗೆ ಹೇಗೆ, ಕಲ್ಲುಗಳನ್ನು ಮೃದುವಾಗಿಸಿ ದಿಂಬುಗಳನ್ನಾಗಿ ಉಪಯೋಗಿಸುವ ಮಾರ್ಗ, ಸಂಶಯಾಸ್ಪದ ವ್ಯಕ್ತಿಯ  ಮಲವಿಸರ್ಜನೆಯನ್ನು ಪರೀಕ್ಷಿಸಿ ಆತನ ಉದ್ದೇಶಗಳನ್ನು ತಿಳಿಯುವ ಬಗೆ ಮುಂತಾದ  ಅರ್ಥಹೀನ ವೈಜ್ಞಾನಿಕ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ, ಬ್ರಿಟಿಷರ ಅಂಧಶ್ರದ್ಧೆಯನ್ನು ಟೀಕಿಸುತ್ತಾನೆ. ಲುಗ್ಗ್ ನಾಗ್ಗ್ ದ್ವೀಪದಲ್ಲಿನ ಸ್ಟ್ರುಲ್ಡ್ ಬ್ರುಗ್ಸ್ ಗಳೆಂಬ ಸಾವಿಲ್ಲದ ಜನರ ಶೋಚನೀಯ ಸ್ಥಿತಿ, ಗ್ಲುಬ್ ಡುಬ್ ಡ್ರಿಬ್ ನಲ್ಲಿ ಜೂಲಿಯಸ್ ಸೀಸರ್, ಬ್ರುಟಸ್, ಅರಿಸ್ಟಾಟಲ್ ಮುಂತಾದ ಆತ್ಮಗಳ ಜೊತೆ ಸಂವಾದ ಇವನ ಪ್ರವಾಸದ ಮುಖ್ಯಾಂಶಗಳು. 

ಕೊನೆಯ ಭಾಗದಲ್ಲಿ ಕುದುರೆಗಳ ನಾಡಿನಲ್ಲಿ ಹ್ವಿನ್ ಹನ್ಮ್ಸ್ ಗಳ ಜೊತೆ ಕಳೆಯುವ ೫ ವರ್ಷಗಳ ರಸವತ್ತಾದ ವಿವರಣೆ ಇದೆ. ಮನುಷ್ಯರನ್ನೇ ಹೋಲುವ ಯಾಹೂಗಳೆಂಬ ಪ್ರಾಣಿಗಳು, ಮಣ್ಣಿನಲ್ಲಿ ಸಿಗುವ ಯಾವುದೋ ಬಣ್ಣದ ಕಲ್ಲಿಗಾಗಿ ಅವುಗಳ ಹೊಡೆದಾಟ, ಹೊಟ್ಟೆ ತುಂಬುವಷ್ಟು ಊಟ ಕೊಟ್ಟರೂ ಪಕ್ಕದವರ ತಟ್ಟೆಗೆ ಕೈಹಾಕುವ ಅತ್ಯಾಸೆ, ಅತಿಯಾಗಿ ತಿಂದು ಖಾಯಿಲೆ ಬರಿಸಿಕೊಂಡು ಒದ್ದಾಡುವ ಅವುಗಳ ಗುಣ ಅಲ್ಲಿನ ಕುದುರೆಗಳಿಗೆ ಅಸಹ್ಯ ಹುಟ್ಟಿಸಿರುತ್ತವೆ. ಅಲ್ಲಿ ಯಾಹೂಗಳೇ ಕೆಲಸಗಾರರು. ಇಲ್ಲಿನ ಕುದುರೆಗಳು ಮನುಷ್ಯರನ್ನು ಹೊತ್ತೊಯ್ಯುವಂತೆ ಅಲ್ಲಿ ಯಾಹೂಗಳು ಕುದುರೆಗಳ ಸೇವೆ ಮಾಡುತ್ತಿರುತ್ತವೆ. ಕೆಲ ವರ್ಷಗಳನ್ನು ಅಲ್ಲಿ ಕಳೆದ ಗಲಿವರನೂ ಒಬ್ಬ ಯಾಹೂ ಎಂದು ತಿಳಿದು ಅಲ್ಲಿನ ಕುದುರೆಗಳು ಅವನಿಗೆ ನಿನ್ನ ನಾಡಿಗೆ ವಾಪಸಾಗೆಂದು ಹೇಳುತ್ತವೆ. ಇಷ್ಟವಿಲ್ಲದಿದ್ದರೂ ಅವರಿಗೆ ವಿದಾಯ ಹೇಳಿ ಅಲ್ಲಿ ಇಲ್ಲಿ ಅಲೆದಾಡುತ್ತಾ ಕೊನೆಗೆ ಇಂಗ್ಲೆಂಡ್ ತಲುಪಿಕೊಳ್ಳುತ್ತಾನೆ. ಮನುಷ್ಯರೆಂಬ ಯಾಹೂಗಳೊಂದಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಾ, ಹೆಂಡತಿ ಮಕ್ಕಳನ್ನೇ ದೂರವಿಟ್ಟು ಕುದುರೆಗಳೊಂದಿಗೆ ಸಮಯ ಕಳೆಯುತ್ತಾ ತನ್ನ ಮುಂದಿನ ದಿನಗಳನ್ನು ಕಳೆಯುವ ಗಲಿವರನ ಮಾತುಗಳೊಂದಿಗೆ ಈ ಪುಸ್ತಕ ಕೊನೆಯಾಗುತ್ತದೆ.  

Saturday 1 February 2020

ಕ್ಯಾರಿ - ಸ್ಟೆಫೆನ್ ಕಿಂಗ್


ಹಾರರ್ , ಥ್ರಿಲ್ಲರ್  ಕಥೆಗಳ ಮೂಲಕ  ಪ್ರಸಿದ್ದಿ ಪಡೆದ ಸ್ಟೆಫೆನ್ ಕಿಂಗ್ ರ ಕ್ಯಾರಿ ಪುಸ್ತಕವನ್ನ ಕೈಗೆತ್ತಿಕೊಂಡಿದ್ದೆ. ಕೆಲವು ಪುಟಗಳನ್ನ ತಿರುವಿಹಾಕುವುದರೊಳಗಾಗಿ ಪೂರ್ತಿ ಕಥೆಯ ಹಿಡಿತ ಸಿಕ್ಕಿಬಿಡುತ್ತದೆ. ಆದರೂ ಮುಂದೆ ಓದಿಸಿಕೊಂಡು ಹೋಗುತ್ತದೆಂಬುದು ಇದರ ಧನಾತ್ಮಕ ಅಂಶ. 

ಇದು ಅವರ ಮೊದಲ ಪುಸ್ತಕ. ಕ್ಯಾರಿ ಎನ್ನುವ ಪಾತ್ರದ ಸುತ್ತ ಸುತ್ತುವ ಕಥೆ. ತನ್ನ ತಾಯಿಯ ವಿಪರೀತ ಎನಿಸುವಂತಹ  ಧಾರ್ಮಿಕತೆಯ ಮಧ್ಯೆ ಬೆಳೆಯುವ ಆಕೆ, ಬೇರೆಲ್ಲ ಸ್ನೇಹ ಸಂಬಂಧಗಳಿಂದ ವಂಚಿತೆ. ನಿತ್ಯವೂ ಸಹಪಾಠಿಗಳಿಂದ ಕಿರುಕುಳ, ಅವಮಾನಕ್ಕೆ ಗುರಿಯಾಗುತ್ತಿರುತ್ತಾಳೆ. ಆದರೆ ಎಲ್ಲರಂತೆ ಸಾಮಾನ್ಯ ಹುಡುಗಿಯಲ್ಲ ಅವಳು. ತನ್ನ ಮನಸ್ಸಿನ ಮೂಲಕವೇ ವಸ್ತುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬಲ್ಲ ಟೆಲಿಕೈನೆಟಿಕ್ ಶಕ್ತಿ ಆಕೆಗೊಲಿದಿರುತ್ತದೆ. 

ಹೈಸ್ಕೂಲು ಕೊನೆಯ ವರ್ಷದ ಪ್ರಾಮ್ ನೈಟ್ ಗೆ ಸಹಪಾಠಿಯೊಂದಿಗೆ ಕ್ಯಾರಿ ವೈಟ್ ಗೆ ಕನಸೋ, ನಿಜವೋ ಎನ್ನುವಷ್ಟು ಸುಂದರವೆನಿಸುತ್ತದೆ ಆ ರಾತ್ರಿ. ಆದರೆ ಅಲ್ಲಾಗಲೇ ಆಕೆಯ ವಿರುದ್ಧ ಸಂಚೊಂದು ರೂಪುಗೊಂಡಿರುತ್ತದೆ. ಅದರ ಸುಳಿಗೆ ಸಿಕ್ಕಿಬಿದ್ದು ಅವಮಾನಿತಳಾದಾಗ ಕ್ಯಾರಿ ತನ್ನ ಅತಿಮಾನುಷ ಶಕ್ತಿಯ ಮೊರೆಹೋಗುತ್ತಾಳೆ. ಮುಂದೆ ? ಓದಿ ನೋಡಿ. 

ಮೇಲೆ ಹೇಳಿದಂತೆ ಮೊದಲ ಕೆಲ ಪುಟಗಳಲ್ಲೇ ಪೂರ್ತಿ ಸಾರಾಂಶ ಅಡಗಿದ್ದರೂ, ಕ್ಯಾರಿ ಕಾಡುವ ನೆನಪಿನಲ್ಲುಳಿಯುವ ಪಾತ್ರ. 

Saturday 25 January 2020

ದ ಅನ್ ಎಕ್ಸ್ಪೆಕ್ಟೆಡ್ ಗೆಸ್ಟ್ - ಅಗಾಥಾ ಕ್ರಿಸ್ಟಿ




ನವೆಂಬರ್ ತಿಂಗಳ ಮಂಜು ಕವಿದ ಮಧ್ಯರಾತ್ರಿ. ಸೌತ್ ವೇಲ್ಸ್ ನ ಯಾವುದೋ ಹಳ್ಳಿಗಾಡಿನ ಕಿರಿದಾದ  ಹಾದಿಯ ತಿರುವೊಂದರಲ್ಲಿ ನಿಂತಿದ್ದ ಮೂರು ಅಂತಸ್ತಿನ ಸುಂದರ ಭವನ. ಅದರೆದುರಿಗೆ ವಿಶಾಲ ಉದ್ಯಾನ. ಸುತ್ತ ಮುತ್ತ ಹತ್ತಿರದಲ್ಲಿ ಮನೆಯೊಂದೂ ಕಾಣಲಾರದು. ಅಂತಹ ಚಳಿಗಾಲದ ರಾತ್ರಿಯಲ್ಲಿ, ಅದೇ ಮನೆಯ ಎದುರಿನ ದಾರಿಯಲ್ಲಿ, ಸುಮಾರು ಮೂವತ್ತೈದು ವರ್ಷದ ಯುವಕನೊಬ್ಬ ಹೂತುಹೋಗಿದ್ದ ತನ್ನ ಕಾರಿನ ಚಕ್ರಗಳನ್ನು ಹೊರಗೆಳೆಯುವ ಹರಸಾಹಸದಲ್ಲಿರುತ್ತಾನೆ. ತನ್ನ ಪ್ರಯತ್ನ ಫಲಿಸದೆ, ಇನ್ನೇನು ಮಾಡಲೂ ತೋಚದೆ ಸಹಾಯಕ್ಕಾಗಿ ಆ ಒಂಟಿ ಮನೆಯ ಬಾಗಿಲು ತಟ್ಟಬೇಕಾಗುತ್ತದೆ. ಒಳಗಿಂದ ಯಾವುದೇ ಉತ್ತರ ಬರದು. ಅಲ್ಲೇ ಪಕ್ಕದಲ್ಲಿದ್ದ ಫ್ರೆಂಚ್ ಕಿಟಕಿಗಳ ಸಹಾಯದಿಂದ ಒಳದಾಟಿದ ಕಾರಿನ ಚಾಲಕನಿಗೆ ಎದುರಾಗುವುದು ಮನೆಯೊಳಗೆ ಹರಡಿದ್ದ ನಿಶ್ಯಬ್ದತೆಯ ನಡುವಲ್ಲಿ, ಕುರ್ಚಿಯೊಂದರ ಮೇಲೆ ಕುಳಿತಲ್ಲೇ ನಿದ್ರೆಗೆ ಜಾರಿದ ಮಧ್ಯವಯಸ್ಕನನ್ನು ಕಂಡ ಕಾರಿನ ಚಾಲಕ ತನ್ನ ಪರಿಸ್ಥಿತಿಯನ್ನು ವಿವರಿಸಿ ಸಹಾಯ ಕೋರುತ್ತಾನೆ. ಆದರೆ ಆತನ ನಿದ್ರಾಭಂಗಿ ಬದಲಾಗದು . ಭುಜ ಹಿಡಿದು ಎಚ್ಚರಿಸಲು ನೋಡಿದಾಗ ಆತ ಹೆಣವಾಗಿದ್ದನೆಂದು ತಿಳಿಯುತ್ತದೆ.  ಹತ್ತಿರದಲ್ಲೇ ಕೈಯಲ್ಲಿ ಬಂದೂಕು ಹಿಡಿದು ನಿಂತ ಸುಂದರವಾದ ಯುವತಿ. ತಾನೇ  ತನ್ನ ಗಂಡನನ್ನು ಕೊಂದೆನೆಂದು ತಪ್ಪೊಪ್ಪಿಕೊಳ್ಳುತ್ತಾಳೆ. ಆಕೆಯ ಸೌಂದರ್ಯಕ್ಕೆ ಸೋತ ಕಾರಿನ ಚಾಲಕ, ಆಕೆಗೆ ಸಹಾಯ ಮಾಡಲು ಮುಂದಾಗುತ್ತಾನೆ. ಇಬ್ಬರೂ ಸೇರಿ ಹೊಸದೊಂದು ಸಂಚು ರೂಪಿಸುತ್ತಾರೆ. ಮುಂದೆ? ಆಕೆ ಹೇಳಿದ್ದು ನಿಜವೇ ? ಆ ಸೌಂದರ್ಯದ ಹಿಂದೆ ಮೋಸವಡಗಿದೆಯೇ? ಆ ಕಾರಿನ ಚಾಲಕ ಯಾರಿಗೋ ಸಹಾಯ ಮಾಡಲು ಹೋಗಿ ತಾನೇ ತೊಂದರೆಗೀಡಾಗುತ್ತಾನೆಯೇ? 

ಅಗಾಥಾ ಕ್ರಿಸ್ಟಿ ಯವರ ಎಲ್ಲ ಪತ್ತೇದಾರಿ ಕಥೆಗಳಂತೆ ಈ ಪುಸ್ತಕ ಸಹ ಕೊನೆಯವರೆಗೂ ತನ್ನ ಕುತೂಹಲ ಉಳಿಸಿಕೊಳ್ಳುತ್ತದೆ. ಮರ್ಡರ್ ಇನ್ ದಿ ಓರಿಯಂಟ್ ಎಕ್ಸ್ಪ್ರೆಸ್, ದೆನ್ ದೇರ್ ವರ್ ನನ್ ಗಳಂತಹ ಅದ್ಭುತ ಪುಸ್ತಕಗಳ ಸಾಲಿಗೆ ಸೇರಿಸಲಾಗದಿದ್ದರೂ, ಓದುಗರಲ್ಲಿನ ಪತ್ತೇದಾರನನ್ನು ಜಾಗೃತಗೊಳಿಸುವುದಂತೂ ನಿಜ. ಒಂದೇ ಪಟ್ಟಿಗೆ ಮುಗಿಸಬಹುದಾದ ಚಿಕ್ಕ ಪುಸ್ತಕವಿದು.