Monday 18 November 2019

ರೋಮ್ ಕೊಲೋಸಿಯಂನಲ್ಲಿ ಒಂದು ದಿನ

ಕೊಲೋಸಿಯಂನ ಎದುರು ನಾನು
ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ರೋಮ್ ಸಾಮ್ರಾಜ್ಯದ ಸುವರ್ಣಯುಗಕ್ಕೆ ಸಾಕ್ಷಿ ಎಂಬಂತೆ ಎದುರಿಗೆ ನಿಂತಿತ್ತು ಬೃಹತ್ ರಂಗಮಂದಿರ. ಪ್ಲಾವಿಯನ್ ಆಂಫಿಥಿಯೇಟರ್ ಎಂಬ ಹೆಸರಿದ್ದರೂ ಕೊಲೋಸಿಯಂ ಎಂದೇ ಕರೆಸಿಕೊಳ್ಳುವ ಜಗದ್ವಿಖ್ಯಾತ ಕಟ್ಟಡದ ಮುಂದೆ ಕುಬ್ಜರಂತೆ ನಿಂತಿದ್ದೆವು ನಾವು.ಚಳಿಗಾಲದ ಸಮಯ. ಶೀತಗಾಳಿ ರೊಯ್ಯನೆ ಬೀಸಿ ಮೈ ನಡುಗುವಂತೆ ಮಾಡುತಿತ್ತು.ಸೂರ್ಯ ಸಹ ಆಗಷ್ಟೇ ಕತ್ತಲಿನ ಹೊದಿಕೆಯೊಳಗಿಂದ ಹೊರದಾಟುತ್ತಿದ್ದ. ಮುಂಜಾನೆಯಲ್ಲಿ ಒಂದಷ್ಟು ಭದ್ರತಾ ಸಿಬ್ಬಂದಿಗಳನ್ನು ಬಿಟ್ಟರೆ ಬೇರಾರೂ ಇರದೆ ಪ್ರಶಾಂತವಾಗಿತ್ತು ಆ ಜಾಗ. ಬೆಳಕು ಬಿರಿದಂತೆಲ್ಲ ನಿಧಾನವಾಗಿ ಒಬ್ಬೊಬ್ಬರೇ ಹಾಜರಾಗತೊಡಗಿದರು.ಟಿಕೆಟ್ ನ ಸಾಲು ಬೆಳೆಯತೊಡಗಿತ್ತು.ನಾವು ಮೊದಲೇ ಗೈಡೆಡ್ ಟೂರ್ ಟಿಕೆಟ್ ಕೊಂಡುಕೊಂಡಿದ್ದರಿಂದ ಸರತಿಯಲ್ಲಿ ನಿಂತು ಕಾಯುವ ಪ್ರಮೇಯವೇ ಒದಗಲಿಲ್ಲ.

ಕೊಲೋಸಿಯಂನ ಪಕ್ಕದಲ್ಲಿ ಇರುವ ಆರ್ಚ್ ಆಫ್ ಕಾನ್ಸ್ಟೆಂಟೈನ್ 
ನಿಗಧಿತ ಸಮಯಕ್ಕೆ ಸರಿಯಾಗಿ ಕೈಲೊಂದು ಬಾವುಟ ಹಿಡಿದು ಎದುರಾದಳು ನಮ್ಮ ಮಾರ್ಗದರ್ಶಿ ಇಲಾರಿಯ.ಮುಂದಿನ ಸುಮಾರು ಒಂದೂವರೆ ಗಂಟೆಗಳ ಕಾಲ ಕೊಲೋಸಿಯಂನ  ರೋಚಕ ಹಾಗೂ ಭಯಾನಕ ಕಥೆಗಳಿಗೆ ಕಿವಿಯಾಗಲಿದ್ದೆವು ನಾವು. ಮೊದಲಿಗೆ ಇಲಾರಿಯ ನಮ್ಮನ್ನು ಮಧ್ಯ ವೇದಿಕೆಗೆ ಕರೆದೊಯ್ದಳು. ಅದನ್ನು ಅರೀನಾ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಅರೀನಾ ಎಂದರೆ ಮರಳು ಎಂದರ್ಥ. ಹಿಂದೆ ಗ್ಲಾಡಿಯೇಟರ್ ಕಾಳಗಗಳು ನಡೆದಾಗ ಸುರಿದ ರಕ್ತ ಇಂಗಿಹೋಗಲೆಂದು  ಅಂಕಣದ ತುಂಬ ಮರಳು ಚೆಲ್ಲುತ್ತಿದ್ದರಂತೆ. ಹಾಗಾಗಿ ಈ ಹೆಸರಂತೆ. ಕೊಲೋಸಿಯಂ ಖೈದಿಗಳನ್ನಿಡುವ ಬಂದೀಖಾನೆಯಲ್ಲ.ಅಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವೇ ಹೊರತು ಯಾರೂ ವಾಸವಾಗಿರಲಿಲ್ಲ. ಆದರೆ ಕೊಲೋಸಿಯಂ ಎಷ್ಟು ಭವ್ಯವಾಗಿತ್ತು, ಅಗಾಧವಾಗಿತ್ತು ಎಂದರೆ ಸುಮಾರು ೫೦೦೦೦ ಜನರಿಗೆ ಅಲ್ಲಿ ಒಮ್ಮೆಗೆ ಕೂರಲು ಸ್ಥಳಾವಕಾಶ ಇತ್ತು. ಸಮಾಜದ ಸ್ಥಿತಿಗತಿಗಳಿಗೆ ಅನುಗುಣವಾಗಿ ಐದು ಸ್ಥರಗಳಲ್ಲಿ ಆಸನದ  ವ್ಯವಸ್ಥೆ ಮಾಡಲಾಗಿತ್ತು. ಅತೀ ಗಣ್ಯ ವ್ಯಕ್ತಿಗಳ ಆಸನ ವೇದಿಕೆಗೆ ತೀರಾ ಸಮೀಪವಾಗಿದ್ದರೆ ಜನಸಾಮಾನ್ಯರು ಕೊನೆಯ ಹಂತದಲ್ಲಿ ಕುಳಿತುಕೊಳ್ಳಬೇಕಾಗಿತ್ತು. 

ಕ್ರಿಸ್ತ ಪೂರ್ವದಲ್ಲಿ ಪ್ರಾರಂಭವಾದ ಈ ಗ್ಲಾಡಿಯೇಟರ್ ಕಾಳಗಗಳು ಸಾಮಾನ್ಯವಾಗಿ ವಿದೇಶಗಳಿಂದ ಆಮದಾದ ಜೀತದಾಳುಗಳ ಮಧ್ಯೆ ನಡೆಯಲ್ಪಡುತಿತ್ತು. ಇದಕ್ಕಾಗಿ ವರ್ಷಗಟ್ಟಲೆ ತರಬೇತಿಯನ್ನು ಸಹ ನೀಡಲಾಗುತಿತ್ತು. ಮಾಡು ಇಲ್ಲವೇ ಮಡಿ ಎಂಬಂತೆ ಹೆಚ್ಚಿನ ಹೊಡೆದಾಟಗಳು ಸಾವಿನಲ್ಲಿ ಅಂತ್ಯವಾಗುತಿತ್ತು. ಗೆದ್ದವನಿಗೆ ಗ್ಲಾಡಿಯೇಟರ್ ಎಂಬ ಬಿರುದು ನೀಡಲಾಗುತ್ತಿತ್ತು. ನಂತರದ ಶತಮಾನಗಳಲ್ಲಿ ಈ ರೀತಿಯ ಸ್ಪರ್ಧೆಗಳು ಅಮಾನವೀಯವೆನಿಸಿ ಅವುಗಳನ್ನು ನಿರ್ಬಂಧಿಸಲಾಯಿತು. ಆದರೆ ಮನರಂಜನೆಗೆ ಬೇರೇನಾದರೂ ಬೇಕಲ್ಲ! ಹಾಗಾಗಿ ಕ್ರೂರ ಪ್ರಾಣಿಗಳ ನಡುವೆ ಕಾಳಗಗಳನ್ನು ಏರ್ಪಡಿಸುತ್ತಿದ್ದರು. ಯೂರೋಪಿಯನ್ನರು ಕಂಡರಿಯದ ಬೃಹತ್ ಪ್ರಾಣಿಗಳನ್ನು ಆಫ್ರಿಕಾದ ಕಾಡುಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ವೇದಿಕೆಯ ಕೆಳಭಾಗದಲ್ಲಿ ಈ ವನ್ಯಮೃಗಗಳನ್ನು ಬಂದಿಸಿಡಲೆಂದೇ ಕೊಠಡಿಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಇದನ್ನು ಉಪಯೋಗಿಸುತ್ತಿದ್ದದ್ದು ಕೇವಲ ಸ್ಪರ್ಧೆಯ ಸಂದರ್ಭಗಳಲ್ಲಿ ಮಾತ್ರ. ಅಲ್ಲಿದ್ದ ರಾಟೆಗಳ ಮೂಲಕ ಬಂದಿಸಿಡುತ್ತಿದ್ದ ಪ್ರಾಣಿಗಳನ್ನು ಮೇಲೆಳೆದು ವೇದಿಕೆಗೆ ಬಿಡಲಾಗುತ್ತಿತ್ತು. ಇದಲ್ಲದೆ ಕೊಳಚೆ ನೀರು, ತ್ಯಾಜ್ಯ ವಸ್ತುಗಳು  ಹೊರಹೋಗಲು ಕಾಲುವೆಗಳ ವ್ಯವಸ್ಥೆ ಮಾಡಲಾಗಿತ್ತು.
ಕೊಲೋಸಿಯಂನ ಎದುರಿರುವ ವೀನಸ್ ಮತ್ತು ರೋಮಾ ದೇವಾಲಯ 
ನಂತರದ ಕೆಲ ಶತಮಾನಗಳಲ್ಲಿ ಈ ರಂಗಮಂದಿರ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಮಧ್ಯಯುಗದ ಹೊತ್ತಿಗೆ ಇದನ್ನು ಸ್ಮಾರಕವೆಂದು ಸಂರಕ್ಷಿಸದೆ, ಇಲ್ಲಿದ್ದ ಕಲ್ಲುಗಳನ್ನು ಹೊತ್ತೊಯ್ದು ಇನ್ನಿತರ ದೇವಾಲಯಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತಿತ್ತು. ೧೮ನೇ ಶತಮಾನದಲ್ಲಿ ಧರ್ಮಗುರುಗಳು, ಅಲ್ಲಿನ ಕಲ್ಲುಗಳನ್ನು ಬೇರೆ ಯಾವುದಕ್ಕೂ ಬಳಸದಂತೆ ಕಟ್ಟಳೆ ನಿರ್ಮಿಸುವ ವರೆಗೂ   ಪ್ಲಾವಿಯನ್ ಆಂಫಿಥಿಯೇಟರ್  ಕೇವಲ ಕ್ವಾರಿಯಾಗಿತ್ತು.

ಕೊಲೋಸಿಯಂನ ಒಳಭಾಗ ಮೇಲಂತಸ್ತಿನಿಂದ ಕಂಡದ್ದು ಹೀಗೆ
ಕೊನೆಯಲ್ಲಿ ನಮ್ಮ ಗೈಡ್ ಇಲಾರಿಯ, ನಮ್ಮನ್ನು ಮೇಲಂತಸ್ತಿಗೆ ಕರೆದೊಯ್ದಳು. ಅಲ್ಲಿ ಕೊಲೋಸಿಯಂ ಪೂರ್ಣ ದರ್ಶನ ಪ್ರಾಪ್ತವಾಯಿತು. ಅದೆಷ್ಟೋ ವೈಭವಗಳಿಗೆ, ನೋವುಗಳಿಗೆ, ಕರುಣಾಜನಕ ಕಥೆಗಳಿಗೆ ಮೂಕಸಾಕ್ಷಿಯಾಗಿ ಶತಶತಮಾನಗಳಿಂದ ನಿಂತಿದ್ದ ಆ ವೈಭವೋಪೇತ ಕಟ್ಟಡವನ್ನು ದರ್ಶಿಸಿದ ಧನ್ಯತಾಭಾವವೊಂದು ನಮ್ಮನ್ನು ಆವರಿಸಿತು.

Sunday 17 November 2019

ದೀಪಾವಳಿಯ ಉಡುಗೊರೆ


ಗೋಧೂಳಿ ವೇಳೆಯಾಗಿತ್ತು. ಹೊರಗೆ ಸುರಿಯುತ್ತಿದ್ದ ಸೋನೆ ಮಳೆಯ ಸದ್ದಿನ ವಿನಃ ಬೇರಾವ ಶಬ್ದವೂ ಕಿವಿಗೆ ಬೀಳುವಂತಿರಲಿಲ್ಲ.ನಾನು ಕಾಫಿ ಲೋಟ ಕೈಯಲ್ಲಿ ಹಿಡಿದು ಮೆಟ್ಟಿಲ ಮೇಲೆ ಕುಳಿತು ಸೂರಂಕಲಿನಿಂದ ಧಾರೆ ಧಾರೆಯಾಗಿ ಸುರಿಯುತ್ತಿದ್ದ ನೀರನ್ನೇ ನೋಡುತ್ತಿದ್ದೆ. ನಮ್ಮನೆಯ ನಾಯಿ ಮರಿ ಗುಂಡ ಮಳೆಯಲ್ಲಿ ನೆಂದು ಮೈ ನೆನೆಸಿಕೊಂಡು ಚಳಿಯೆಂದು ನಡುಗುತ್ತಾ ಗೋಣಿಯ ಮೇಲೆ ಮುದುರಿ ಮಲಗಿತ್ತು. ಹಕ್ಕಿಗಳೆಲ್ಲ ದಿನದ ಕೆಲಸ ಮುಗಿಸಿ ಗೂಡು ಸೇರಿಯಾಗಿತ್ತು. ದನ ಕರುಗಳೂ ಸಹ ಆಗಲೇ ಕೊಟ್ಟಿಗೆಗೆ ಬಂದಿರಬೇಕು. ಮನೆಯಂಗಳದಲ್ಲಿದ್ದ ರಂಗೋಲಿಯನ್ನು ಬಣ್ಣದ ಸಮೇತ ಮಳೆರಾಯ ಯಾವಾಗಲೋ ಹೊತ್ತೊಯ್ದಿದ್ದ. 

ಸ್ವಲ್ಪ ಹೊತ್ತಿಗೆ ಮಳೆರಾಯ ವಿಶ್ರಾಂತಿ ಪಡೆದ. ಅದೇನು ಕೆಲ ನಿಮಿಷಗಳಷ್ಟೇ ! ಏರು ಸ್ವರದಲ್ಲಿ ಹಾಡಿದ ಗಾಯಕ ಉಸಿರೆಳೆದುಕೊಳ್ಳಲು ಹಾಡು ನಿಲ್ಲಿಸುವ ಕೆಲ ಕ್ಷಣಗಳಂತೆ ಅದು. ನಂತರದಲ್ಲಿ ಆ ನೀರವತೆಯನ್ನು ಸೀಳುವಂತೆ ಒಂದೊಂದೇ ಶಬ್ದಗಳು ಕಿವಿಗೆ ತಲುಪುತ್ತಿದ್ದವು. ದೂರದಲ್ಲೆಲ್ಲೋ ಸಾಗುತ್ತಿದ್ದ ಬಸ್ಸಿನ ಶಬ್ದ, ಯಾರದೋ ಮನೆಯ ನಾಯಿಯ  ಕೂಗು, ಎಲೆಗಳ ಅಂಚಿನಿಂದ ತೊಟ್ಟಿಕ್ಕುತ್ತಿದ್ದ ಮಳೆ ಹನಿಗಳ ಟಪ್ ಟಪ್ ಶಬ್ದ, ಇದರೊಂದಿಗೆ ಕೇಳಿಬಂತು ನನ್ನಮ್ಮನ ಅಂಬೇ ಬಾ ಎನ್ನುವ ಕೂಗು, ಒಂದೆರಡು ಬಾರಿಯಲ್ಲ, ಹಿತ್ತಲಿನ ಕೊಟ್ಟಿಗೆಯ ಬಾಗಿಲಿನಾಚೆಗೆ ಕಪ್ಪು ಕೊಡೆಯಡಿ ನಿಂತು ಜೋರಾಗಿ ಅಂಬೇ ಬಾ ಎಂದು ಮತ್ತೆ ಮತ್ತೆ ಕರೆಯುತ್ತಿದ್ದಳು ಅಮ್ಮ. ಕೊಟ್ಟಿಗೆಗೆ ಹೋಗಿ ನೋಡಿದರೆ ಎಲ್ಲ ಗೌರಿ, ತುಳಸಿ, ಚಂದ್ರಿ, ಬೆಳ್ಳಿ ಎಲ್ಲವೂ ಇವೆ ಚಿನ್ನಿಯೊಂದನ್ನು ಬಿಟ್ಟು. ಅಷ್ಟರಲ್ಲಿ ಕೂಗಿ ಕೂಗಿ ಸಾಕಾಗಿ ಅಮ್ಮ ಕೊಟ್ಟಿಗೆಯ ಒಳಗೆ ಬಂದಳು. ಚಿನ್ನಿ ಮನೆಗೆ ಬಂದೇ ಇಲ್ಲ ಕಣೇ. ಒರತೆ ಹಳ್ಳದವರೆಗೂ ನೋಡಿ ಬಂದೆ. ಗಬ್ಬದ ದನ ಬೇರೆ. ಎಲ್ಲಿ ಮಳೆಯಲ್ಲಿ ಸಿಕ್ಕಿಹಾಕಿಕೊಂಡು ದಾರಿ ತಪ್ಪಿಸಿಕೊಂಡಿದೆಯೋ ಎಂದು ನಿಡುಸುಯ್ದು ಬೇರೆ ಜಾನುವಾರುಗಳಿಗೆ ಮುರವಿಡಲು ಹೋದಳು. 

ಕತ್ತಲು ಕವಿಯತೊಡಗಿತ್ತು. ತೋಟದ ಜಾರುದಾರಿಯಲ್ಲಿ ಭಾರವಾಗಿದ್ದ ಹಸಿ ಹುಲ್ಲಿನ ಹೊರೆಯನ್ನು ತಲೆಯ ಮೇಲೆ ಹೊತ್ತ ಅಪ್ಪ ನಿಧಾನವಾಗಿ ಒಂದೊಂದೇ ಮೆಟ್ಟಿಲ ಹತ್ತುತ್ತಾ  ಹಿತ್ತಲಿಗೆ ಬಂದೊಡನೆ ಧೊಪ್ ಎಂದು ಹೊರೆಯನ್ನು ಕೆಳಗೆ ಹಾಕಿ ಉಸ್ಸಪ್ಪ ಎನ್ನುತ್ತಾ ಅಲ್ಲೇ ಇದ್ದ ಮೆಟ್ಟಿಲ ಮೇಲೆ ಕುಳಿತರು. ನೀರು ಬೆಲ್ಲ ಕುಡಿದು ಸುಧಾರಿಸಿಕೊಂಡರು. ಅದನ್ನೇ ಕಾಯುತ್ತಿದ್ದ ಅಮ್ಮ, ರೀ ಚಿನ್ನಿ ಮನೆಗೆ ಬಂದೇ ಇಲ್ಲ ಕಣ್ರೀ  ಎಂದು  ವರದಿ ಒಪ್ಪಿಸಿದಳು. ಅಪ್ಪ ಅದನ್ನು ಕೇಳಿದವರೇ ಟಾರ್ಚ್ ತಂದು ಕೊಡಲು ಹೇಳಿ ಕಂಬಳಿ ಕೊಪ್ಪೆಯನ್ನೇರಿಸಿ ಚಪ್ಪಲಿ ಮೆಟ್ಟಿ ಹೊರಟರು ಚಿನ್ನಿಯನ್ನು ಹುಡುಕಲೆಂದು. ನಿಧಾನವಾಗಿ ಅವರ ಕೈಲಿದ್ದ ದೀಪದ ಬೆಳಕು ಮನೆಯ ಮುಂದಿದ್ದ ಕತ್ತಲ ದಾರಿಯಲ್ಲಿ ಸರಿದುಹೋಯಿತು. ನಾವೂ ಸಹ ಮಾತಿಲ್ಲದೆ ಅಪ್ಪನ ದಾರಿ ಕಾದೆವು. ಅಪ್ಪ ವಾಪಸಾದಾಗ ಸರಿರಾತ್ರಿಯಾಗಿತ್ತು. ಅವರ ಮುಖವೇ ಹೇಳುತಿತ್ತು ಹೋದ ಕೆಲಸವಾಗಿಲ್ಲವೆಂದು. ಹೊಳೆಯ ನೀರು ಏರಿದೆ. ಅಲ್ಲಿವರೆಗೂ ಹೋಗಿ ಬಂದೆ. ಬೆಳಿಗ್ಗೆ ನೀರು ಕಡಿಮೆ ಇದ್ದಾಗ ದನ ಹೊಳೆಯಾಚೆ ದಾಟಿಕೊಂಡಿದ್ದರೆ ಈಗ ವಾಪಸು ಬರಲು ಸಾಧ್ಯವೇ ಇಲ್ಲ ಎಂದು ನಿಟ್ಟುಸಿರಿಟ್ಟರು. ಹೊರಗೆ ನೇತು ಹಾಕಿದ್ದ ಕಂಬಳಿ ಕೊಪ್ಪೆಯಿಂದ ನೀರು ತೊಟ್ಟಿಕ್ಕುತ್ತಿತ್ತು.

ಮರುದಿನ ಬೆಳಿಗ್ಗೆ ಎದ್ದವರೇ ಅಪ್ಪ ಹುಡುಕಲು ಹೋದರು. ಈ ಸಲ ಮಳೆ ಜೋರಾಗಿಯೇ ಸುರಿದಿತ್ತು. ಮೊನ್ನೆ ಮೊನ್ನೆ ಗಣಪತಿ ಹಬ್ಬದ ಮರುದಿನ ಗಣಪತಿಯನ್ನು ನೀರಿಗೆ ಬಿಡಲು ಹೋದ ನಮ್ಮ ಊರವರು ನೆರೆ ಕಂಡು ಹೆದರಿ ಹೆಚ್ಚೇನೂ ದೂರ ಹೋಗದೆ ದೇವರನ್ನು ದಾರಿಯಲ್ಲೇ ಬಿಟ್ಟು ಬಂದಿದ್ದರು. ಈಗ ಮತ್ತೆ ಅಂತದ್ದೇ ನೆರೆ ಬಂದಿತ್ತು. ಎರಡು ದಿನ ಅಪ್ಪ ಬೇರೆ ಕೆಲಸಗಳನ್ನೆಲ್ಲ ಬದಿಗಿಟ್ಟು ಹುಡುಕಿದರೂ ನಮ್ಮನೆ ದನ ಸಿಗಲಿಲ್ಲ. ದಾರಿ ತಪ್ಪಿತೋ ಅಥವಾ ನೀರಲ್ಲಿ ತೇಲಿಕೊಂಡು ಹೋಯಿತೋ ಎಂದೆಲ್ಲ ಮನೆಯಲ್ಲಿ ಒಬ್ಬೊಬ್ಬರು ಒಂದೊಂದು ಯೋಚನೆ ಮಾಡಿದೆವು. ದಾರಿಯಲ್ಲಿ ಸಿಕ್ಕವರಿಗೆಲ್ಲ ನಮ್ಮನೆಯ ಕೆಂಪು ದನವೊಂದು ಕಳೆದು ಹೋಗಿದೆ, ಎಲ್ಲಾದರೂ ಕಂಡರೆ ಹೇಳಿ ಎಂದು ಹೇಳಿದ್ದರು ಅಪ್ಪ.

ಇದಾಗಿ ಒಂದು ವಾರವಾಗಿರಬಹುದು. ಅವತ್ತೊಂದಿನ ಶೇಖರ ಮನೆಯ ಬಾಗಿಲಲ್ಲಿ ನಿಂತು ಜೋರಾಗಿ ಕರೆಯತೊಡಗಿದ್ದ. ಅಪ್ಪ ಏನಾಯ್ತೆಂದು ಕೇಳಿದರೆ ನಿಮ್ಮನೆಯ ಕೆಂಪು ದನ ನಮ್ಮ ಗದ್ದೆಗೆ ನುಗ್ಗಿದೆ. ಬೆಳೆಯನ್ನೆಲ್ಲ ಹಾಳು  ಮಾಡಿ ಹಾಕಿದೆ ಎಂದು ದೂಷಿಸುವ ಧ್ವನಿಯಲ್ಲಿ ಅಂದ. ಬೇಗ ಬಂದು ಎಳೆದುಕೊಂಡು ಹೋಗಿ ಎನ್ನುವ ಧಾಟಿಯಿತ್ತು ಅವನ ಮಾತಿನಲ್ಲಿ. ಸರಿ ಅಂತೂ ನಮ್ಮ ಚಿನ್ನಿ ಸಿಕ್ಕಿತಲ್ಲ ಎಂದು ಕಣ್ಣಿ ಹಿಡಿದುಕೊಂಡು ಅಪ್ಪ ಗದ್ದೆಗೆ ಹೊರಟರು. ಅಲ್ಲಿ ಹೋಗಿ ನೋಡಿದರೆ ಅದು ನಮ್ಮ ದನವೇ ಅಲ್ಲವಂತೆ. ಕೆಂಪು ಬಣ್ಣವಿದ್ದುದನ್ನು ನೋಡಿ ನಮ್ಮದೇ ಎಂದುಕೊಂಡು ಓಡಿ ಬಂದಿದ್ದ ಶೇಖರ! ಅಲ್ಲಿ ಇಲ್ಲಿ ಕೆಂಪು ದನ ಕಂಡೊಡನೆ ಕರೆ ಬರುವುದು, ಹೋಗಿ ನೋಡುವುದು  ಮತ್ತೆ ಅದು ನಮ್ಮ ಚಿನ್ನಿ ಅಲ್ಲವೆಂಬ ನಿರಾಶೆಯೊಂದಿಗೆ ವಾಪಸಾಗುವುದೂ ಕೆಲ ಸಾರಿ ನಡೆಯಿತು. ಹೀಗೆ ದನ, ಎಮ್ಮೆಗಳು ಕಳೆದು ಹೋದಲ್ಲಿ ನಮ್ಮೂರಿಗೆ  ಸಮೀಪದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹರಕೆ ಹೇಳಿಕೊಳ್ಳುವ ಪರಿಪಾಟವಿದೆ. ಅಪ್ಪ ಗಣಪತಿಯ ಮುಂದೆ ಹಣ್ಣು ಕಾಯಿ ಇರಿಸಿ ಚಿನ್ನಿಯನ್ನು ಹುಡುಕುವ ಜವಾಬ್ದಾರಿಯನ್ನು ದೇವರಿಗೆ ಒಪ್ಪಿಸಿ ಬಂದರು.

ಹೆಚ್ಚು ಕಡಿಮೆ ತಿಂಗಳಾಗುತ್ತಾ ಬಂದಿತ್ತು. ಬೇರೆ ಎಲ್ಲ ಜಾನುವಾರುಗಳು ಸಮಯಕ್ಕೆ ಸರಿಯಾಗಿ ಮನೆಗೆ ಬರುತ್ತಿದ್ದರೂ, ಚಿನ್ನಿಯ ಸುಳಿವಿರಲಿಲ್ಲ. ಎಲ್ಲೋ ದಾರಿ ಮರೆತು ಇವತ್ತಲ್ಲ ನಾಳೆ ಹುಡುಕಿಕೊಂಡು ಮನೆಗೆ ಬರಬಹುದೆಂಬ ಸಣ್ಣ ಆಸೆಯಿಂದ ಅಮ್ಮ ಪ್ರತಿದಿನವೂ ಚಿನ್ನಿಯ ಹಾದಿ ಕಾಯುತ್ತಿದ್ದಳು. ಒಂದು ದಿನ ದಾರಿಯಲ್ಲಿ ಕುಯಿರ ಸಿಕ್ಕಿ ನಿಮ್ಮ ದನ ಕಳೆದು ಹೋಗಿದೆಯಂತಲ್ಲ ಮರ್ರೆ. ಮೊನ್ನೆ ಇತ್ತಲಾಗೆ ಅದು ದೇವರ ಬನದ ಹತ್ತಿರವಿರುವ ಧರೆ ಕೆಳಗೆ ಉರುಳಿ ಬಿದ್ದು ಸತ್ತಿದೆ.  ನಾನೇ ಕಣ್ಣಾರೆ ನೋಡಿ ಬಂದೆ ಎಂದನಂತೆ. ಗಾಬರಿಯಿಂದ ಒಂದೇ ಮಾತಿಗೆ ಹೋಗಿ ನೋಡಿಕೊಂಡು ಬಂದರು ಅಪ್ಪ. ಅಷ್ಟರಲ್ಲಾಗಲೇ ಅದರ ದೇಹ ಕೊಳೆಯಲು ಆರಂಭಿಸಿತ್ತು. ಹಾಗಾಗಿ  ಮೇಲಿಂದ ನಿಂತು ನೋಡಿದವರಿಗೆ ಅರ್ಧಂಬರ್ಧ ಕೊಳೆತು ಉಳಿದ ಅದರ ಮುಖ ಮಾತ್ರವೇ ಕಾಣಸಿಗುವಂತಿತ್ತು ಎಂದು ಮನೆಗೆ ಬಂದ ಅಪ್ಪ ವಿಷಯ ತಿಳಿಸಿದಾಗ ಎಲ್ಲರಿಗೂ ಬೇಜಾರು. ಅಮ್ಮ ಅಂತೂ ಕಣ್ಣೀರು ಸುರಿಸಿದಳು.

ತಿಂಗಳುಗಳು ಸರಿದವು. ಮಳೆಗಾಲವೂ ಮುಗಿದು ಚಳಿಗಾಲ ಅಂಬೆಗಾಲಿಡುತ್ತಾ ಬರುತಿತ್ತು. ಮಲೆನಾಡ ಜನರು ಅಡಿಕೆ ಕೊಯ್ಲಿಗೆ ಅಣಿಯಾಗುವ ದಿನಗಳವು. ಅಡಿಕೆ ಬೇಯಿಸುವ ಒಲೆಯಿಂದ ಹಿಡಿದು ಚಪ್ಪರದವರೆಗೂ  ಎಲ್ಲವನ್ನು ಸಿದ್ದ ಮಾಡುವುದರಲ್ಲಿ ಅಪ್ಪ ನಿರತರಾಗಿದ್ದರು. ಅವೊತ್ತೊಂದು ಸಂಜೆ ದನ, ಕರುಗಳನ್ನೆಲ್ಲ ಸ್ವಸ್ಥಾನದಲ್ಲಿ ಕಟ್ಟಿ ಹುಲ್ಲು ಹಾಕುತ್ತಿದ್ದ ಅಮ್ಮನಿಗೆ ಕೊಟ್ಟಿಗೆಯ ಹೊರಗೆ ಯಾವುದೋ ದನ ಅಂಬೇ ಎಂದು ಕ್ಷೀಣ ಸ್ವರದಲ್ಲಿ ಕೂಗುವುದು ಕೇಳಿಸಿತಂತೆ. ಚಿನ್ನಿ ಇರಬಹುದೆಂದು ಒಳ ಮನಸಿಗೆ ಎನಿಸಿದರೂ, ಅದು ತಿರುಗಿ ಬರಲಾರದ ಜಾಗಕ್ಕೆ ಹೋಗಿತ್ತಲ್ಲ! ಯಾವುದೊ ದನ ದಾರಿ ತಪ್ಪಿರಬೇಕು ಎಂದುಕೊಂಡು ಹೊರದಾಟಿದರೆ ಏನಾಶ್ಚರ್ಯ  ನಮ್ಮನೆ ಚಿನ್ನಿ ಉಣುಗೋಲಿನಾಚೆ ನಿಂತು ಕೂಗುತ್ತಿದೆ. ಸಂಭ್ರಮದಿಂದ ಕೊಟ್ಟಿಗೆಗೆ ಕರೆತಂದು ಕಟ್ಟಿದಳು. ಕತ್ತಲಲ್ಲಿ ಕಾಣದ್ದು ಕೊಟ್ಟಿಗೆಯ ವಿದ್ಯುತ್ ದೀಪದ ಬೆಳಕಿನಲ್ಲಿ ನಿಚ್ಚಳವಾಗಿ ಕಂಡಿತು ಅದರ ಸ್ಥಿತಿ.  ಮೈತುಂಬಿ ಕಳೆಕಳೆಯಾಗಿ ಹೊಳೆಯುತ್ತಿರಬೇಕಿದ್ದ ತುಂಬು ಗಬ್ಬದ ದನ, ಸೋತು ನಿತ್ರಾಣವಾಗಿದೆ. ಮೈ ತುಂಬ ಗಾಯದ ಗುರುತುಗಳು. ನಿಲ್ಲೋಕೆ ಆಗದೆ ಇರುವಷ್ಟು ನಿಶ್ಯಕ್ತಿ. ಕುತ್ತಿಗೆಯ ಮೇಲೆಲ್ಲಾ ಗಾಯದ ಗುರುತುಗಳು. ಯಾರೋ ಅದನ್ನು ದಿನಗಟ್ಟಲೆ ಕಟ್ಟಿಹಾಕಿ ಹೊಟ್ಟೆಗೆ ಕೊಡದೆ ಹಿಂಸೆ ಮಾಡಿದ್ದಾರೇನೋ ಎನಿಸಿತು. ಅಲ್ಲಲ್ಲಿ ಈ ರೀತಿ ಜಾನುವಾರುಗಳನ್ನು ಕಳ್ಳತನದಲ್ಲಿ ಕಟ್ಟಿ ಹಾಕಿ ಮಾರುವುದು ಅಪರೂಪವಾಗಿದ್ದರೂ ಹೊಸದೇನಾಗಿರಲಿಲ್ಲ. ಪಾಪ ಅದೆಷ್ಟು ಕಷ್ಟದಿಂದ ದಾರಿ ಹುಡುಕಿಕೊಂಡು ಬಂದಿತೋ ಏನೋ? ಅದಕ್ಕೆ ಕುಡಿಯಲು ಬೆಲ್ಲ ನೀರಿಟ್ಟಳು ಅಮ್ಮ. ನಿಧಾನವಾಗಿ ಒಂದೊಂದೇ ಗುಟುಕು ಕುಡಿದಾಗ ಎಲ್ಲರಿಗೂ ಸಮಾಧಾನ. ಇಷ್ಟು ದಿನಗಳ ನಂತರವೂ ದಾರಿ ಮರೆಯದೆ ಮರಳಿದ ಹಸುವಿನ ಮೇಲೆ ಅಭಿಮಾನ. ಇನ್ನೆರಡು ದಿನಗಳಲ್ಲಿ ಗಾಯಗಳೆಲ್ಲ ಮಾಗಿ  ನಮ್ಮನೆ ಚಿನ್ನಾರಿ ಚೇತರಿಸಿಕೊಂಡು ಓಡಾಡಲು ಶಕ್ತವಾಯಿತು.

ಮತ್ತೆರಡು ದಿನಗಳಲ್ಲಿ ಒಂದು ಪುಟ್ಟ ಹೆಣ್ಣುಗರುವಿಗೆ ಜನ್ಮ ನೀಡಿತು ಚಿನ್ನಿ. ಅಮ್ಮನಂತೆಯೇ ಕೆಂಪು ಕೆಂಪು ಕರು. ಅದಕ್ಕಿಟ್ಟ ಹೆಸರು ನಂದಿನಿ. ಜಿಂಕೆಯ ಮರಿಯಷ್ಟೇ ಮುದ್ದಾಗಿದ್ದ ಅದು ಕೊಟ್ಟಿಗೆಯ ತುಂಬೆಲ್ಲ ಚೆಂಡಿನಂತೆ ಪುಟಿಯುತ್ತಿದ್ದರೆ ಮುದ್ದುಕ್ಕಿ ಬರುತ್ತಿತ್ತು. ನಂದಿನಿ  ಒಮ್ಮೊಮ್ಮೆ ಅಂಗಳಕ್ಕಿಳಿದು ಎಲ್ಲವನ್ನೂ ಬೆರಗುಗಣ್ಣಿನಿಂದ ಮೂಸಿ ಮೂಸಿ ನೋಡುತಿತ್ತು. ಆಗಾಗ ಕುತೂಹಲದಿಂದ ನನ್ನಮ್ಮನನ್ನು ಹಿಂಬಾಲಿಸಿ ಅಡಿಗೆಮನೆಯವರೆಗೂ ಪಾದ ಬೆಳೆಸುತ್ತಿತ್ತು. ನಮ್ಮನೆಯ ನಾಯಿಯನ್ನು ಕಂಡು ಮೊದಲು ಹೆದರಿದರೂ ಆಮೇಲೆ ಸ್ನೇಹ ಬೆಳೆಸಿತ್ತು.

ದೀಪಾವಳಿ ಹಬ್ಬ ಬಾಗಿಲಿಗೆ ಬಂದಿತು. ಎಲ್ಲೆಡೆ ಹಬ್ಬದ ಸಂಭ್ರಮ. ಮನೆಯೆದುರು ಬಣ್ಣದ ರಂಗೋಲಿ ಹರಡಿತು. ಬಾಗಿಲಿಗೆ ಹೊಸ ಮಾವಿನೆಲೆಯ ತೋರಣ. ಗೋಪೂಜೆಯ ಹಿಂದಿನ ದಿನ ಗೋವುಗಳಿಗೆಂದು ಚೆಂಡು ಹೂವಿನ ಹಾರಗಳು, ಉಗಣೆಕಾಯಿಯ ಸರಗಳು, ಅಡಿಕೆ, ಏಲಕ್ಕಿ, ಹಿಂಗಾರ,  ಪಚ್ಚೆ ತೆನೆ ಮುಂತಾದ ಹನ್ನೆರಡು ತರದ ಎಲೆ, ಹೂವು, ಹಣ್ಣುಗಳುಳ್ಳ ಮಾಲೆಗಳು ತಯಾರಾದವು. ಮರುದಿನ ದನ, ಕರು ಜೊತೆಗೆ ಎಮ್ಮೆಗಳಿಗೂ ಸ್ನಾನವಾಯಿತು. ಅವುಗಳ ಮೈಮೇಲೆ ಕೆಂಪು, ಹಳದಿ ಬಣ್ಣದ ಚಿತ್ತಾರ ಅರಳಿತು. ಆಗಷ್ಟೇ ಹನ್ನೊಂದು ದಿನದ ಸೂತಕ ಕಳೆದು ನಿಂತಿದ್ದ ಚಿನ್ನಿ ಮತ್ತವಳ ಮುದ್ದು ಮಗಳು ನಂದಿನಿಗೆ ಅಂದಿನ ಅಗ್ರ ಪೂಜೆ ಸಲ್ಲಿಸಿ ಸಂಭ್ರಮ ಪಟ್ಟೆವು ನಾವು.