Saturday 10 December 2016

ಮಳೆಗಾಲದ ಒಂದು ಸಂಜೆ

ತೆರೆದ ಕಿಟಕಿಯ ಕಂಬಿಗಳ ನಡುವಿನಿಂದ ಹೊರಗೆ ಮಳೆ ಬೀಳುವುದನ್ನೇ ನೋಡುತ್ತಿದ್ದೇನೆ. ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಹಸಿರೇ ಕಾಣುತ್ತಿದೆ. ಗಿಡ ಮರಗಳಿಗೆಲ್ಲಾ ಮಳೆ ನೀರಿನ ಅಭಿಷೇಕವಾಗುತ್ತಿದೆ. ಮನೆಯ ಮಾಡಿನ ಅಂಚಿನಿಂದ ಒಂದೇ ಸಮನೆ ಸುರಿಯುವ ನೀರು, ಮಳೆಯಲ್ಲಿ ತೊಯ್ದ ಕೆಸರು ನೆಲ. ಮಲೆಗಳಲ್ಲಿ ಮದುಮಗಳು ಪುಸ್ತಕ ಯಾಕೋ ತುಂಬಾ ಕಾಡುತ್ತಿದೆ. ಆ ಮಲೆ, ಮಳೆ ,ಮದುಮಗಳು  ಮತ್ತೆ ಮತ್ತೆ ನೆನಪಾಗುತ್ತಿದೆ. ನನ್ನ ಮದುವೆಯಾಗಿ ತಿಂಗಳು ಕಳೆಯಿತಷ್ಟೇ. ಈ ಮಳೆಗಾಲದಲ್ಲಿ ಮಲೆನಾಡಿನಲ್ಲಿ ಮದುಮಗಳಾಗಿ "ಅಬ್ಬಾ ಈ ಮಳೆಗಾಲದಲ್ಲೆಂತಾ ಮದುವೇನೇ" ಎಂದು ಹೇಳಿದವರೂ ಮಳೆಯಲ್ಲಿ ಸೀರೆ ನೆನೆಸಿಕೊಂಡು ಮದುವೆಗೆ ಬಂದು ಶುಭಾಶಯ ಹೇಳಿ ಹೋಗಿದ್ದು ಈಗ ಹಳೆಯದಾಗಿದೆ. 

ಮಳೆ ನಿಂತಿದೆ. ಮಳೆ ನಿಂತು ಹೋದ ಮೇಲೆ ಆ ನೀರವತೆಯ ಮಧ್ಯದಲ್ಲೂ ಎಲ್ಲವೂ ಜೀವ ತಳೆದಂತಿವೆ. ಹನಿಗಳ ಚಿಟಪಟ ಶಬ್ದವಿಲ್ಲ ನಿಜ, ಆದರೆ ನವಿಲೊಂದು ಏರುಸ್ವರದಲ್ಲಿ ಖುಷಿಯಿಂದ  ಕೂಗುತ್ತಿದೆ. ಅಲ್ಲೆಲ್ಲೋ  ಬೇಲಿಯ ಮೇಲೆ ಕುಳಿತ ಕಾಜಾಣ ತನ್ನ ನೀಳ ರೆಕ್ಕೆಗಳನ್ನು ಕೊಡವಿ ಮೈ ಒಣಗಿಸಿಕೊಳ್ಳುತ್ತಿದೆ. ನೀಲಿ ಬಣ್ಣದ ಮಿಂಚುಳ್ಳಿಯೊಂದು ತಪಸ್ಸಿಗೆ ಕುಳಿತಿದೆಯೇನೋ ಎಂಬಷ್ಟು ಸ್ತಬ್ಧವಾಗಿ ಗದ್ದೆಯ ಅಂಚಿನಲ್ಲಿರುವ ಕಲ್ಲುಕಂಬದ ಮೇಲೆ ಕುಳಿತಿದೆ. ಆಕಾಶದ ತುಂಬಾ ಮೋಡ.ಹಲವಾರು ದಿನಗಳಿಂದ  ಸೂರ್ಯನ ಮುಖ ಕಾಣುವುದಕ್ಕಿಲ್ಲ.ಕಪ್ಪು, ಮಳೆಹನಿಗೆ ಹೆದರಿ ಮರೆಯಾಗಿ ಕುಳಿತಿದ್ದ ನೀಲಿ ಬಣ್ಣದ ದೊಡ್ಡ ಗಾತ್ರದ ಚಿಟ್ಟೆಯೊಂದು ಈಗ ಗಿಡದಿಂದ ಗಿಡಕ್ಕೆ ಹಾರುತ್ತಿದೆ. ದಾಸವಾಳ ಗಿಡದ ತುಂಬಾ ಅರಳಿ ನಿಂತ ಕೆಂಪು ಕೆಂಪು ಹೂವುಗಳು.  ಕಿಟಕಿಯ ಸರಳುಗಳ ಮೇಲೆ ಸಣ್ಣ ಇರುವೆಗಳ ಸಾಲು. ಎದುರಿಗೊಂದು ನೆಲ್ಲಿಯ ಮರ. ಅದರ ಸಣ್ಣ ಎಲೆಗಳ ತುದಿಯಲ್ಲೆಲ್ಲಾ ನೀರ ಹನಿ ತೊಟ್ಟಿಕ್ಕುತ್ತಿದೆ. ಇಡಿಯ ಮರದ ತುಂಬ ಹನಿಗಳ ಚಿತ್ತಾರ. ಅದರ ಹತ್ತಿರ ತೆರಳಿ ಆ ಮರವನ್ನೊಮ್ಮೆ ಜೋರಾಗಿ ಅಲುಗಾಡಿಸಬೇಕೆನ್ನಿಸುತ್ತಿದೆ. ಆದರೆ ಕಟ್ಟಿಗೆ ಒಲೆಯ ಮುಂದೆ ಕಾಲು ಚಾಚಿ ಬೆಚ್ಚಗೆ ಚಳಿ ಕಾಯಿಸುತ್ತಾ ಕುಳಿತವಳಿಗೆ ಏಳುವ ಮನಸಿಲ್ಲ. ಕೂತು ಕೂತು ಒಂದು ಸುತ್ತು ದಪ್ಪಗಾಗಿದ್ದೇನೆ. ಚಿಕ್ಕಮ್ಮ ಕರಿದು ಕೊಟ್ಟ ಹಲಸಿನ ಕಾಯಿ ಹಪ್ಪಳ, ಬಿಸಿಬಿಸಿ ಕಾಫಿ ಕೈಯ್ಯಲ್ಲಿದೆ. ನಾನು ಡಯೆಟ್ ಮಾಡುತ್ತಿದ್ದೇನೆಂಬುದನ್ನೂ ಮರೆತು ನಾಲ್ಕನೇ ಹಪ್ಪಳದ ತುಂಡೊಂದನ್ನು ಬಾಯಿಗಿಡುತ್ತಿದ್ದೇನೆ. ದೂರದಲ್ಲೆಲ್ಲೋ ರಸ್ತೆಯಲ್ಲಿ ಸಾಗುತ್ತಿರುವ ಬಸ್ಸಿನ ಶಬ್ದ ಕೇಳಿಸುತ್ತಿದೆ.ಈಗ ಕಿಟಕಿಯ  ಬಳಿ ಹೊಗೆ ಸುರಳಿ ಸುರಳಿಯಾಗಿ ಸಾಗುತ್ತಿದೆ. ಕಣ್ಣ ತುಂಬಾ ಹೊಗೆಯಿಂದಾಗಿ ನೀರು ತುಂಬಿದೆ. ನನ್ನ ಆಲೋಚನಾ ಲಹರಿಯಿಂದ ಹೊರಬಂದು ನೋಡಿದರೆ ಒಲೆಯಲ್ಲಿನ ಬೆಂಕಿ ನಂದಿಹೋಗಿದೆ. ಊದುಗೊಳವೆಯಿಂದ ಗಾಳಿ ಹಾಕಿ, ಬೆಂಕಿ ಮಾಡಿ ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದೇನೆ.     

ಕತ್ತಲೆಯಾಗಿದೆ. ವರ್ಷಾಕಾಲವಿದು. ಮತ್ತೆ ಶುರುವಾಗಿದೆ ವರುಣನ ಅಬ್ಬರ. ಒಳಗಿನ ದೀಪದ ಬೆಳಕಿಗೆ ಹುಳಗಳು ಬರಬಹುದೆಂದು ಹೆದರಿ ಕಿಟಕಿಯ ಬಾಗಿಲು ಮುಚ್ಚಿದ್ದೇನೆ. ಹಕ್ಕಿಗಳೆಲ್ಲಾ ಗೂಡು ಸೇರಿರಬಹುದು ಈಗ. ಕೀಟಗಳ ಕೀ..ಪೀ..ಕೊಟರ್..ಕೊಟರ್ ಶಬ್ದ ಮಾತ್ರ ಬಿಟ್ಟೂ ಬಿಡದೆ ಬೀಳುವ ಮಳೆಹನಿಗಳ ನಡುವಿನಲ್ಲೂ ಸ್ಪಷ್ಟವಾಗಿಯೇ ಕೇಳಿಸುತ್ತಿದೆ.