Wednesday 12 November 2014

ಚಾರ್ಮಾಡಿ ಮುಡಿಯಲ್ಲಿ- ಭಾಗ ೧

ಅವತ್ತು ಜುಲೈ ೬ರ  ಶನಿವಾರ . ಶುಕ್ರವಾರ  ಹೊರಟಿದ್ದ ೨೦ ಜನರ ನಮ್ಮ ಗುಂಪು ಚಾರ್ಮಾಡಿ ತಲುಪಿದ್ದು ಶನಿವಾರದ ಬೆಳಿಗ್ಗೆ ೪:೩೦ರ ಸುಮಾರಿಗೆ. ಸೂರ್ಯನಿನ್ನೂ ಮಲಗಿಯೇ ಇದ್ದ. ನಾವು ಮಾತ್ರ ಹಿಂದಿನ ದಿನ ರಾತ್ರಿ ಇಡಿ ಕಣ್ಣು ಮುಚ್ಚಿರಲಿಲ್ಲ. ಅಂತ್ಯಾಕ್ಷರಿ ಆಟ ಆಡುತ್ತಾ ಕಳೆದಿದ್ದೆವು.ಅಷ್ಟು ಸಂಭ್ರಮವಿತ್ತು.  ಕೊಟ್ಟಿಗೆಹಾರದಲ್ಲಿ  ಮಧ್ಯ ರಾತ್ರಿ  ತಿಂದ ನೀರು  ದೋಸೆ ಯ ಸವಿ  ನೆನಪಾಗುತ್ತಿದೆ.

ನಿಧಾನವಾಗಿ ಅರುಣನ ಆಗಮನ. ಬೆನ್ನಲ್ಲೇ ಕಾಣಿಸಿದ ಸೂರ್ಯ. ಕತ್ತಲಲ್ಲಿ ಮುಳುಗಿದ್ದ ಆ ಕಾನನ ರವಿ ಕಿರಣಗಳ ಕಾಂತಿಯಿಂದ ಕಂಗೊಳಿಸುತ್ತಿತ್ತು. ಮೈ ಮರೆಸುವ ಕ್ಷಣಗಳವು.ಆಗ ಕೇಳಿಸಿತು  ಹರ್ಷನ   ಧ್ವನಿ. ಇವನು ನಮ್ಮ ಚಾರಣಕ್ಕೆ ಸೂತ್ರಧಾರಿ. ಬೇಗ ತಿಂಡಿ ತಿಂದು ಹೊರಡಬೇಕೆಂದೂ  ಬೇಗ ಚಾರಣ ಪ್ರಾರಂಭಿಸಬೇಕು ಎಂದು ಹೇಳಿದ.ಅಲ್ಲೇ ಇದ್ದ ಹೋಟೆಲ್ ಒಂದರಲ್ಲಿ ನೀರು ದೋಸೆಯನ್ನು ಚಟ್ನಿಯ ಜೊತೆ ತಿಂದು ಹೊರಡಲು ಅನುವಾದೆವು. ಅಲ್ಲಿಂದ ನೋಡಿದರೆ ನಾವು  ಹತ್ತಬೇಕಾಗಿದ್ದ ಗುಡ್ಡ ಬೃಹದಾಕಾರವಾಗಿ  ಕಂಡಿತ್ತು. ತುದಿಯಲ್ಲಿ ಮುಸುಕಿದ್ದ ಮಂಜು.

ಏರಿಕಲ್ಲು ಗುಡ್ಡದ ಅಗಾಧತೆ
 ನಮಗೆ ಸಹಾಯ ಮಾಡಲು ಆ ಊರಿನವರೇ ಆದ ಒಬ್ಬ ಮಾರ್ಗದರ್ಶಿಯನ್ನು  ಗೊತ್ತು ಮಾಡಿದ್ದ ಹರ್ಷ.   ಅವರು ಇಂಬಳಗಳ  ಕಾಟದಿಂದ ತಪ್ಪಿಸಿಕೊಳ್ಳಲು ಒಂದಷ್ಟು ಎಣ್ಣೆ,ನಶ್ಯದ   ಪುಡಿಯನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಲು ಹೇಳಿದರು. ನಾವಂತೂ ಕೈ , ಕಾಲು,ಬೂಟು, ಕಾಲುಚೀಲ ಎಲ್ಲದಕ್ಕೂ ಮೆತ್ತಿಕೊಂಡಿದ್ದೇ.! ಅಂತೂ ಏರಿಕಲ್ಲುಗುಡ್ಡ ಹತ್ತಲುಸಂಪೂರ್ಣ ಸನ್ನದ್ಧರಾದೆವು.ಆಗ ಸುಮಾರು ಒಂಭತ್ತು ಗಂಟೆ.

ಮೊದಲಿಗೆ ನಮಗೆ ಶುರುವಾಯಿತು ಇಂಬಳಗಳ ಕಾಟ. ಆವೆಷ್ಟಿದ್ದವೂ ಆ ಜಾಗದಲ್ಲಿ ! ಒಂದೆರಡಲ್ಲ ನೂರಾರು. ಒಂದು ಕಾಲಿಗೆ ಹತ್ತಿಕೊಂಡಿದ್ದ ರಕ್ತದಾಹಿಗಳನ್ನು ಬಿಡಿಸುವಷ್ಟರಲ್ಲಿ ಇನ್ನೊದು ಕಾಲಿಗೂ ಹತ್ತಿರುತ್ತಿದ್ದವು. ಮತ್ತೊಂದಿಷ್ಟು ನಶ್ಯದ ಪುಡಿ ಸವರಿಕೊಂಡೆವು. ಸ್ವಲ್ಪ ದೂರದಲ್ಲೇ ಚೆಲುವಾದ ಚಿಕ್ಕ ತೊರೆ .ಅಲ್ಲಿ ನಿಂತು ನೋಡಿ ಆನಂದಿಸಲು ಇಂಬಳಗಳಿಗೆ ಶುಲ್ಕ ತೆರಬೇಕಾಗಿದ್ದರಿಂದ ಅಲ್ಲಿ ನಿಲ್ಲದೆ ಮುನ್ನಡೆದೆವು. ನಡೆದಂತೆಲ್ಲ ಗುಡ್ಡದ ಏರು ಹೆಚ್ಚಾಗಿತ್ತು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಸುಸ್ತಾಗಿ  ಮುನ್ನಡೆಯಲು ಸಾಧ್ಯವೇ ಇಲ್ಲ ಎಂದೆನಿಸಿ ಕುಳಿತುಕೊಂಡೆ .ಜೊತೆಗಿದ್ದ ಗೆಳೆಯರು ಹುರಿದುಂಬಿಸಿದರು. ಸೋತು ಹಿಂದೆ ಹೆಜ್ಜೆ ಇಟ್ಟರೆ ಏನು ಪ್ರಯೋಜನ ಎನ್ನಿಸಿ ಕಷ್ಟವಾದರೂ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಮುನ್ನಡೆದೆ. ಮುಂದೆ ಕಾಡು ಕಡಿಮೆಯಾಗುತ್ತಾ ಬಂತು. ಸುಮಾರು ಹನ್ನೊಂದು ಗಂಟೆಗೆ ಹುಲ್ಲುಗಳಿಂದ ಆವೃತವಾದ ಬೆಟ್ಟದ ಭಾಗವನ್ನು ತಲುಪಿದೆವು.

ಎದ್ದು ಬಿದ್ದು ಏದುಸಿರು ಬಿಡುತ್ತಾ ಹತ್ತುತ್ತಿದ್ದ ನಮಗೆ ಮುಂದೆ ಸಾಗುತ್ತಿದ್ದ ಗೆಳೆಯರ ಕೇಕೆ ಕೇಳಿಸಿತು. ಮಂಜು ಮುಸುಕಿದ್ದುದರಿಂದ  ಅವರ್ಯಾರೂ ಕಾಣುತ್ತಿರಲಿಲ್ಲ.ಇನ್ನೇನು ಬೆಟ್ಟದ ತುದಿ ಬಂದೇ ಬಿಟ್ಟಿತು ಎಂಬ ಹುರುಪಿನಲ್ಲಿ ಮುನ್ನಡೆದೆವು. ತುದಿ ಎಂದು ಹೇಳಬಹುದಾದ ಜಾಗವೊಂದನ್ನು ತಲುಪಿದೆವು . ಆದರೆ ಮುಂದೆ ಕಾಣುತ್ತಿದ್ದ ಇನ್ನೊಂದು ಎತ್ತರದ ಜಾಗವನ್ನು  ಕಂಡ ಮೇಲೆ ಅರಿವಾಯಿತು ಅದು ಬೆಟ್ಟದ ತುದಿ ಅಲ್ಲವೆಂದು . ಅದು ಇನ್ನೂ ಏರುತ್ತಲೇ ಹೋಗಿತ್ತು. ಕೆಲವರು ಸುಸ್ತಾಗಿ ಅಲ್ಲೇ ಇದ್ದ ಬಂಡೆಗಳ ಮೇಲೆ ಆಸೀನರಾದರು. ನಾನು ಉಳಿದ ದೂರವನ್ನು ವಿನಾಯಕನ ಜೊತೆ ಕ್ರಮಿಸಲು ನಿರ್ಧರಿಸಿದೆ.
                                                                                        
ಗೆಳೆಯರೊಂದಿಗೆ..

ಅತಿಯಾಗಿ ಆಯಾಸಗೊಂಡಿದ್ದೆ ನಾನು.ಇನ್ನೂ ಹತ್ತೇ ಹೆಜ್ಜೆಗಳು ಎಂದು ಲೆಕ್ಕವಿಟ್ಟು ಹತ್ತಿದ್ದೆ ಅವತ್ತು.ನಮಗಿಂತ ಮೊದಲು ಹತ್ತಿದ ಗೆಳೆಯರು ಕಾಣುವವರೆಗೂ ಹತ್ತುವುದನ್ನು ನಿಲ್ಲಿಸಕೂಡದು ಎಂದು ನಿರ್ಧರಿಸಿಕೊಂಡು ಮುಂದೆ ಸಾಗಿದೆವು. ಸ್ವಲ್ಪ ಹೆಜ್ಜೆ ಎಣಿಸಿದ ನಂತರ ಮುಸುಕಿದ ಮಂಜಿನ ತೆರೆಯಾಚೆ ಎಲ್ಲೋ ದೂರದಲ್ಲಿ ಮನುಷ್ಯರ ಮಾತು ಕೇಳಿಸಿತು.ಅತ್ತ ಕಡೆ ಹೆಜ್ಜೆ ಇಟ್ಟಾಗ ಮೊದಲೇ ತಲುಪಿದ್ದ ನಮ್ಮ ಜೊತೆಗಾರರು.ಅದು ಏರಿ ಕಲ್ಲು ಗುಡ್ಡದ ತುದಿಯಾಗಿತ್ತು.ಅಂತೂ ಏರಿ ಏರಿ ಏರಿಕಲ್ಲು ಗುಡ್ಡದ ನೆತ್ತಿಯನ್ನು ತಲುಪಿದ್ದೆವು.ಆಗ ಸುಮಾರು ಒಂದು ಗಂಟೆ .
                                           
 ಏರಿಕಲ್ಲು  ಗುಡ್ಡದ ದಾರಿ
ಚಾರಣದ ಕೊನೆಯ ಹಂತ ತಲುಪಿದಾಗ ಸಿಗುವ ಸಾರ್ಥಕತೆಯ ಸಂಭ್ರಮ  ಅವರ್ಣನೀಯ . ಅದು ಅನುಭವಿಸಿಯೇ ತಿಳಿಯುವಂತಹುದು.ಅವತ್ತು ಇಡೀ ಬೆಟ್ಟ ನಮ್ಮ ಕಾಲ ಕೆಳಗಿತ್ತು. ಅಲ್ಲಿಂದ ಕೆಳಗೆ ಕಣ್ಣು ಹಾಯಿಸಿದರೆ ಪ್ರಪಾತ. ಇಡೀ ಚಾರ್ಮಾಡಿ ಹಳ್ಳಿ ಸ್ತಬ್ದ ಚಿತ್ರದಂತೆ ಭಾಸವಾಗಿತ್ತು.ಸುತ್ತಲೂ ಪಶ್ಚಿಮ ಘಟ್ಟಗಳ ಸಾಲು ಸಾಲು.ಮಿಂಚುಕಲ್ಲು ಗುಡ್ಡ,ಎತ್ತಿನ ಭುಜ,ಕೊಡೇಕಲ್ಲು ಗುಡ್ಡ,ಬಾಳೆಕಲ್ಲು ಗುಡ್ಡ ಎಲ್ಲವೂ ಶತ್ರುವಿಗೆ ಎದೆಯೊಡ್ಡಿ ನಿಂತ ಸೈನಿಕರಂತೆ ನಿಂತಿದ್ದವು. ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು ನಂತರ ಇಳಿಯಲು ಪ್ರಾರಂಭಿಸಿದೆವು .

 ಮಂಜು ಮುಸುಕಿದ ಹಾದಿ..

ಇಳಿಯುವುದೇನೂ ಸುಲಭವಾಗಿರಲಿಲ್ಲ. ಮಳೆ ಹನಿಯಲಾರಂಭಿಸಿತು. ನೆಲ ತೋಯ್ದು ಕಾಲಿಟ್ಟಲ್ಲೆಲ್ಲ ಜಾರುತಿತ್ತು. ಊರುಗೋಲನ್ನು ಆಧಾರವಾಗಿಟ್ಟುಕೊಂಡು ಹೆಜ್ಜೆ ಇಡುತ್ತಿದ್ದೆ ನಾನು. ಅಲ್ಲೇ ಮಧ್ಯದಲ್ಲಿ ನಮ್ಮ ವನಭೋಜನ. ಕೆಳಗಿನಿಂದ ಹೊತ್ತು ತಂದಿದ್ದ ಚಪಾತಿ, ಚಟ್ನಿಪುಡಿ ತಿಂದೆವು.ಹತ್ತುವಾಗಲೇ ನೀರು ಖಾಲಿ ಮಾಡಿಕೊಂಡಿದ್ದರಿಂದ ಇಳಿಯುವಾಗ ಕುಡಿಯುವ ನೀರು ಇರಲಿಲ್ಲ. ಹತ್ತುವುದಕ್ಕಿಂತ ಇಳಿಯುವ ಹಾದಿ ಕಷ್ಟಕರವಾಗಿತ್ತು.ನಿಧಾನವಾಗಿ ನಡೆಯುತ್ತಾ ಅಲ್ಲಿಯೇ ಹರಿಯುತ್ತಿದ್ದ ಹಳ್ಳವೊಂದರ ಬಳಿ ತಲುಪಿದೆವು. ಮೊದಲೇ ಬಾಯಾರಿದ್ದ ನಮಗೆ ನಿಧಿ ಸಿಕ್ಕಂತಾಗಿ ನೀರು ತುಂಬಿಸಿಕೊಂಡು ಕುಡಿದೆವು. ನೀರಿನಲ್ಲಿ ಕಾಲಿಟ್ಟುಕೊಂಡು ಕುಳಿತಾಗ ಆಹ್ಲಾದವೆನಿಸಿತು. ಅಲ್ಲೇ ಇದ್ದು ಬಿಡೋಣವೆಂದೆನಿಸುವಷ್ಟು ಸುಸ್ತಾಗಿದ್ದರೂ ಹಸಿವು ಭಾದಿಸತೊಡಗಿ ಊರ ದಾರಿ ಹಿಡಿದೆವು.
 
ಅವತ್ತು ರಾತ್ರಿ ಅಲ್ಲಿನ ಸಣ್ಣ ಹೋಟೆಲ್ಲ್ ಒಂದರಲ್ಲಿ ನಮ್ಮ ಊಟ. ಹತ್ತಿರದಲ್ಲಿ ಇದ್ದ ದೇವಸ್ತಾನಕ್ಕೆ ಸೇರಿದ ಛತ್ರವೊಂದು ನಮ್ಮ ರಾತ್ರಿಯ ತಂಗುದಾಣವಾಗಿತ್ತು . ಅಲ್ಲೇ ಸ್ಲೀಪಿಂಗ್ ಬ್ಯಾಗ್ ತೆಗೆದು ಬೆಚ್ಚಗೆ ಅದರೊಳಗೆ ಮಲಗಿದೆವು. ಮರುದಿನದ ಚಾರಣದ ಬಗ್ಗೆ ಆಲೋಚಿಸಲುಸಾಧ್ಯವಿಲ್ಲದಷ್ಟು ಸುಸ್ತಾಗಿದ್ದ  ನಮ್ಮನ್ನು ನಿದ್ರಾದೇವಿ ತನ್ನ ತೆಕ್ಕೆಗೆ ಎಳೆದುಕೊಂಡಿದ್ದಳು.


( ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.. )