Friday 15 September 2017

ಗೊಥೆನ್ ಬರ್ಗ್ ನ ಸಾಂಸ್ಕೃತಿಕ ಹಬ್ಬ

ಎರಡು ವಾರಗಳ ಹಿಂದೆ ಗೊಥೆನ್ ಬರ್ಗ್ ನಲ್ಲಿ ಕಲ್ಚರ್  ಕಲಾಸೆಟ್ ನ ಸಂಭ್ರಮ. ನಾಲ್ಕು ದಿನಗಳ ಕಾಲ ವಿವಿಧ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ನಿವಲ್ ಗಳು ಜನಮನ ರಂಜಿಸಿದ್ದವು.ಇದು ಪ್ರಾರಂಭವಾಗಿದ್ದು ಗುರುವಾರವಾದರೂ, ವಾರದ ಮಧ್ಯದಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಕೆಲವು ಮಳಿಗೆಗಳನ್ನು ಬಿಟ್ಟರೆ ನೋಡುವಂತದ್ದೇನಿರಲಿಲ್ಲ. ಹಬ್ಬದ ಕೊನೆಯ ದಿನವಾಗಿದ್ದ ಭಾನುವಾರದಂದು ಮಾತ್ರ ಇಡಿಯ ಪಟ್ಟಣಕ್ಕೆ ಹೊಸ ಮೆರುಗು ಬಂದಿತ್ತು. ಎತ್ತ ನೋಡಿದರೂ ಜನವೋ ಜನ. ಸಾಮಾನ್ಯವಾಗಿ ಹೆಚ್ಚು ಜನರಿಲ್ಲದೆ ಖಾಲಿ ಎಂದೆನಿಸುವ ಬೀದಿಗಳು ಅಂದು ಮಾತ್ರ ಗಿಜಿಗಿಜಿಗುಟ್ಟುತ್ತಿದ್ದವು.

ಮಳೆಯ ಮುನ್ಸೂಚನೆ ಇದ್ದುದರಿಂದ ಜೊತೆಗೊಂದು ಕೊಡೆಯನ್ನು ಎತ್ತಿಕೊಂಡೇ ಭಾನುವಾರ ಮಧ್ಯಾಹ್ನ ಹೊರಹೊರಟೆವು. ಮೊದಲು ಭೇಟಿ ನೀಡಿದ್ದು ಪಟ್ಟಣದ ಮಧ್ಯದಲ್ಲಿಯೇ ಇದ್ದ ಅಂತರರಾಷ್ಟ್ರೀಯ ತಿಂಡಿ ತಿನಿಸುಗಳ ಮಾರುಕಟ್ಟೆ. ಹಾಲೆಂಡ್ , ಫ್ರಾನ್ಸ್, ಗ್ರೀಸ್ , ಥೈಲ್ಯಾಂಡ್ ಮುಂತಾದ ಹಲವು ದೇಶಗಳ ತಿನಿಸುಗಳು ಅಲ್ಲಿದ್ದವು. ಹೆಚ್ಚಿನವು ಮಾಂಸಾಹಾರವಾಗಿದ್ದರೂ, ಸಸ್ಯಾಹಾರಿಗಳಿಗೂ ಬಹಳಷ್ಟು ಆಯ್ಕೆಗಳಿದ್ದವು. ರಾಶಿ ರಾಶಿ ಸುರಿದುಕೊಂಡಿದ್ದ ಟ್ರಫಲ್ ಗಳು ಬಾಯಲ್ಲಿ ನೀರೂರಿಸಿದ್ದು ಸುಳ್ಳಲ್ಲ.ವೆನಿಲ್ಲಾ, ಚಾಕಲೇಟ್, ಲೆಮನ್, ರೋಸ್, ಆಪಲ್ ಹೀಗೆ ಅದೆಷ್ಟೋ ಬಗೆಯ , ನಾನಾ ವರ್ಣದ  ಮಕರೂನ್ ಗಳನ್ನು ಪೇರಿಸಿಟ್ಟಿದ್ದರು.ಬಣ್ಣ ಬಣ್ಣದ ಹೂಗಿಡಗಳು, ಬೋನ್ಸಾಯ್ ಗಿಡಗಳು, ಟುಲಿಪ್ ತಳಿಗಳು ಮುಂತಾದ ಬಹಳಷ್ಟು ಸಸಿಗಳು ಮಾರಾಟಕ್ಕಿದ್ದವು. ಹೂವು ಹಣ್ಣಿನ ಪರಿಮಳಯುಕ್ತ ಸೋಪುಗಳು ಸಹ ಮಾರಾಟಕ್ಕಿದ್ದವು



ಕಾರ್ನಿವಲ್ ನ ಸೊಬಗು 
ಸ್ವಲ್ಪ ಹೊತ್ತು ಅಲ್ಲಿ ಕಳೆದು ನಂತರ ಅಂದಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾದ ಕಾರ್ನಿವಲ್ ನೋಡಲು ಹೋದೆವು. ಬ್ರೆಜಿಲ್ ನಲ್ಲಿ ನಡೆಯುವ ಕಾರ್ನಿವಲ್ ಗೆ ಯಾವ ರೀತಿಯಲ್ಲೂ ಸಾಟಿ ಎನಿಸದಿದ್ದರೂ ಚಿಕ್ಕದಾಗಿ ಕೆಲದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳನ್ನು ಪ್ರದರ್ಶಿಸುತ್ತಾ ರಂಗುರಂಗಿನ ಉಡುಪುಗಳನ್ನು ತೊಟ್ಟ ಯುವಕ ಯುವತಿಯರು ಮೆರವಣಿಗೆ ನಡೆಸಿದರು. ರೆಕ್ಕೆ ಪುಕ್ಕಗಳಿಂದ, ಚಿತ್ರವಿಚಿತ್ರ ಮುಖವಾಡಗಳಿಂದ ವರ್ಣರಂಜಿತವಾಗಿದ್ದ ವಸ್ತ್ರಗಳನ್ನು ಧರಿಸಿ ನಡೆಯುತ್ತಿದ್ದ ಅವರನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿತ್ತು. 

ಕಥಕ್ ನೃತ್ಯ ಪ್ರದರ್ಶನ
ಭರತನಾಟ್ಯ ಪ್ರದರ್ಶನ ಗೀತಾ ಚಂದ್ರನ್ ಅವರಿಂದ 
ಕೊನೆಯದಾಗಿ ನಮ್ಮ ಪಟ್ಟಿಯಲ್ಲಿದ್ದದ್ದು ಭಾರತೀಯ ನೃತ್ಯ ಪ್ರದರ್ಶನ. ಮೊದಲಿಗೆ ಕಥಕ್ ನೃತ್ಯ ಪ್ರದರ್ಶನವಿತ್ತು. ನಾಲ್ವರು ನೀಲವರ್ಣದ ಉಡುಗೆ ಧರಿಸಿದ್ದ ನೀರೆಯರು ಅದ್ಭುತ ಪ್ರದರ್ಶನವನ್ನು ನೀಡಿದರು. ನಂತರದಲ್ಲಿ ಭರತನಾಟ್ಯ ಪ್ರದರ್ಶನ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಗೀತಾ ಚಂದ್ರನ್ ರವರಿಂದ ನೃತ್ಯ ಪ್ರದರ್ಶನವಿತ್ತು. ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ನೆನಪಿಸಲು ವಂದೇ ಮಾತರಂ ಎಂಬ ಗೀತೆಯನ್ನು ಮೊದಲಿಗೆ ಪ್ರಸ್ತುತ ಪಡಿಸಿದರು. ನಂತರದಲ್ಲಿ ಶಿವನ ಕುರಿತಾದ, ಕೃಷ್ಣ ನ ಕುರಿತಾದ ರೂಪಕ ಗಳನ್ನು ತೋರಿಸಿದರು. ಕೊನೆಯಲ್ಲಿ ಅಯಿಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಕೊನೆಯಲ್ಲಿ ರಾಜಸ್ಥಾನದ ತಂಡವೊಂದರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಇವಿಷ್ಟಲ್ಲದೆ  ಕೆಲವೆಡೆ ಉಚಿತವಾಗಿ ಬೋಟಿಂಗ್ ಕರೆದುಕೊಂಡು ಹೋಗಲಾಗುತಿತ್ತು. ಉಚಿತವಾಗಿ ಪರಿಣಿತರಿಂದ ೧೦ ನಿಮಿಷಗಳ ಸೇಲಿಂಗ್ ಕೂಡ ನಡೆಸಲಾಗುತ್ತಿತ್ತು. ವರ್ಚುಯಲ್ ರಿಯಾಲಿಟಿಯಾ ವಿಡಿಯೋ ಗಳನ್ನು ನೋಡಬಹುದಾಗಿತ್ತು. ಇನ್ನು ಮುಂತಾದ ಹಲವು ಆಕರ್ಷಣೆಗಳು ಅಲ್ಲಿದ್ದವು. ಇವೆಲ್ಲವನ್ನೂ ನೋಡಿಕೊಂಡು ಬಿಸಿಬಿಸಿಯಾಗಿ ಫಲಾಫಲ್ , ತಣ್ಣಗಿನ ಐಸ್ ಕ್ರೀಮ್ ತಿಂದು ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು.