Wednesday 11 November 2015

ರಂಗವಲ್ಲಿ ಇಡಲು ಬಾ..


ಉಷೋದಯವಾಗುತ್ತಿದೆ. ಅಗೋ ಅಲ್ಲಿ ಬೆಟ್ಟಗಳ ನಡುವೆ
ನಿಶೆ ಕಳೆಯುವ ಹೊತ್ತು.
ಇಬ್ಬನಿಯೋ ಮುಸಲ ಧಾರೆಯೋ !
ಹನಿಗರೆಯುತ್ತಿದೆ,ನಿನಗಾಗಿ ಹಂಬಲಿಸುವಂತೆ..
ದಾಸವಾಳದ ಪೊದೆಯಲ್ಲೊಂದು
ರಕ್ತ ವರ್ಣದ ಹೂಗಳ ನಡುವೆ
ಪುಟ್ಟದೊಂದು  ಹಕ್ಕಿಗೂಡು..
ಬೇಲಿ ಬದಿಯ ಮಲ್ಲಿಗೆ ಬಳ್ಳಿಯ ಸಾಲ ತುಂಬಾ
ತುಂಬಿವೆ ಹೂಗಳು ಅರಳು ಬಿರಿದಂತೆ.
ಬಾರಕ್ಕೆ ಬಾಗಿ ತೊನೆಯುತ್ತಿವೆ
ಕಟ್ಟಿ ಮುಡಿಯುವವರಿಲ್ಲ..
ಹೂತೋಟದ ತುಂಬಾ ಕಳೆ ಹುಲ್ಲು ,ಹಳು
ಮದ್ಯದಲ್ಲೆಲ್ಲೋ ಸರಸರ ಸರ್ಪ ಸರಿದ ಸದ್ದು..
ಮಳೆ ಸುರಿಯುತ್ತಿದೆ
ನಿನ್ನ ಹೆಸರಿಟ್ಟು ಕರೆವಂತೆ..
ನಿನ್ನ ಹಣೆಗೆ ಹೂ ಮುತ್ತನಿಡುವಂತೆ.
ದಾರಿ ಕಾಣದೆ ಕಂಗೆಟ್ಟಿರುವೆ.
ಹೆಜ್ಜೆಗಳನ್ನು ಹಿಂಬಾಲಿಸೋಣ ಎಂದರೆ
ನನ್ನ ಮುಂದೆ ನೀನಿಲ್ಲ.!
ದೀಪಾವಳಿ ಹತ್ತಿರವಾಗುತ್ತಿದೆ.
ಮನೆಯಂಗಳ ಸಾರಿಸಿ ಓರಣವಾಗಿದೆ.
ರಂಗವಲ್ಲಿ ಇಡಬೇಕಿದೆಯಷ್ಟೆ.
ಬೆಳದಿಂಗಳ ದೋಣಿಯಲ್ಲಿ
ಒಂಟಿ ಚಂದ್ರನನ್ನು ದಿಟ್ಟಿಸುತ್ತಾ ಕುಳಿತಿರುವೆ.
ಪಕ್ಕದಲ್ಲಿ ಖಾಲಿ ಜಾಗ.!
ಧರೆಯಂಚಿನ ಮರದ ಕೆಳಗೆ
ಹರಳುಗಳಂತೆ ಉದುರಿರುವ ನೀಲಿ ಬೀಜಗಳು.
ಅವುಗಳನ್ನು ಹೆಕ್ಕಿ ಜೋಪಾನವಾಗಿ
ಕಾಯ್ದಿರಿಸಿದ್ದೇನೆ ನಿನಗಾಗಿ..
ಗೆಳತಿ ನೀನೆಂದು ಬರುವೆ .?