Wednesday 12 November 2014

ಚಾರ್ಮಾಡಿ ಮುಡಿಯಲ್ಲಿ- ಭಾಗ ೧

ಅವತ್ತು ಜುಲೈ ೬ರ  ಶನಿವಾರ . ಶುಕ್ರವಾರ  ಹೊರಟಿದ್ದ ೨೦ ಜನರ ನಮ್ಮ ಗುಂಪು ಚಾರ್ಮಾಡಿ ತಲುಪಿದ್ದು ಶನಿವಾರದ ಬೆಳಿಗ್ಗೆ ೪:೩೦ರ ಸುಮಾರಿಗೆ. ಸೂರ್ಯನಿನ್ನೂ ಮಲಗಿಯೇ ಇದ್ದ. ನಾವು ಮಾತ್ರ ಹಿಂದಿನ ದಿನ ರಾತ್ರಿ ಇಡಿ ಕಣ್ಣು ಮುಚ್ಚಿರಲಿಲ್ಲ. ಅಂತ್ಯಾಕ್ಷರಿ ಆಟ ಆಡುತ್ತಾ ಕಳೆದಿದ್ದೆವು.ಅಷ್ಟು ಸಂಭ್ರಮವಿತ್ತು.  ಕೊಟ್ಟಿಗೆಹಾರದಲ್ಲಿ  ಮಧ್ಯ ರಾತ್ರಿ  ತಿಂದ ನೀರು  ದೋಸೆ ಯ ಸವಿ  ನೆನಪಾಗುತ್ತಿದೆ.

ನಿಧಾನವಾಗಿ ಅರುಣನ ಆಗಮನ. ಬೆನ್ನಲ್ಲೇ ಕಾಣಿಸಿದ ಸೂರ್ಯ. ಕತ್ತಲಲ್ಲಿ ಮುಳುಗಿದ್ದ ಆ ಕಾನನ ರವಿ ಕಿರಣಗಳ ಕಾಂತಿಯಿಂದ ಕಂಗೊಳಿಸುತ್ತಿತ್ತು. ಮೈ ಮರೆಸುವ ಕ್ಷಣಗಳವು.ಆಗ ಕೇಳಿಸಿತು  ಹರ್ಷನ   ಧ್ವನಿ. ಇವನು ನಮ್ಮ ಚಾರಣಕ್ಕೆ ಸೂತ್ರಧಾರಿ. ಬೇಗ ತಿಂಡಿ ತಿಂದು ಹೊರಡಬೇಕೆಂದೂ  ಬೇಗ ಚಾರಣ ಪ್ರಾರಂಭಿಸಬೇಕು ಎಂದು ಹೇಳಿದ.ಅಲ್ಲೇ ಇದ್ದ ಹೋಟೆಲ್ ಒಂದರಲ್ಲಿ ನೀರು ದೋಸೆಯನ್ನು ಚಟ್ನಿಯ ಜೊತೆ ತಿಂದು ಹೊರಡಲು ಅನುವಾದೆವು. ಅಲ್ಲಿಂದ ನೋಡಿದರೆ ನಾವು  ಹತ್ತಬೇಕಾಗಿದ್ದ ಗುಡ್ಡ ಬೃಹದಾಕಾರವಾಗಿ  ಕಂಡಿತ್ತು. ತುದಿಯಲ್ಲಿ ಮುಸುಕಿದ್ದ ಮಂಜು.

ಏರಿಕಲ್ಲು ಗುಡ್ಡದ ಅಗಾಧತೆ
 ನಮಗೆ ಸಹಾಯ ಮಾಡಲು ಆ ಊರಿನವರೇ ಆದ ಒಬ್ಬ ಮಾರ್ಗದರ್ಶಿಯನ್ನು  ಗೊತ್ತು ಮಾಡಿದ್ದ ಹರ್ಷ.   ಅವರು ಇಂಬಳಗಳ  ಕಾಟದಿಂದ ತಪ್ಪಿಸಿಕೊಳ್ಳಲು ಒಂದಷ್ಟು ಎಣ್ಣೆ,ನಶ್ಯದ   ಪುಡಿಯನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಲು ಹೇಳಿದರು. ನಾವಂತೂ ಕೈ , ಕಾಲು,ಬೂಟು, ಕಾಲುಚೀಲ ಎಲ್ಲದಕ್ಕೂ ಮೆತ್ತಿಕೊಂಡಿದ್ದೇ.! ಅಂತೂ ಏರಿಕಲ್ಲುಗುಡ್ಡ ಹತ್ತಲುಸಂಪೂರ್ಣ ಸನ್ನದ್ಧರಾದೆವು.ಆಗ ಸುಮಾರು ಒಂಭತ್ತು ಗಂಟೆ.

ಮೊದಲಿಗೆ ನಮಗೆ ಶುರುವಾಯಿತು ಇಂಬಳಗಳ ಕಾಟ. ಆವೆಷ್ಟಿದ್ದವೂ ಆ ಜಾಗದಲ್ಲಿ ! ಒಂದೆರಡಲ್ಲ ನೂರಾರು. ಒಂದು ಕಾಲಿಗೆ ಹತ್ತಿಕೊಂಡಿದ್ದ ರಕ್ತದಾಹಿಗಳನ್ನು ಬಿಡಿಸುವಷ್ಟರಲ್ಲಿ ಇನ್ನೊದು ಕಾಲಿಗೂ ಹತ್ತಿರುತ್ತಿದ್ದವು. ಮತ್ತೊಂದಿಷ್ಟು ನಶ್ಯದ ಪುಡಿ ಸವರಿಕೊಂಡೆವು. ಸ್ವಲ್ಪ ದೂರದಲ್ಲೇ ಚೆಲುವಾದ ಚಿಕ್ಕ ತೊರೆ .ಅಲ್ಲಿ ನಿಂತು ನೋಡಿ ಆನಂದಿಸಲು ಇಂಬಳಗಳಿಗೆ ಶುಲ್ಕ ತೆರಬೇಕಾಗಿದ್ದರಿಂದ ಅಲ್ಲಿ ನಿಲ್ಲದೆ ಮುನ್ನಡೆದೆವು. ನಡೆದಂತೆಲ್ಲ ಗುಡ್ಡದ ಏರು ಹೆಚ್ಚಾಗಿತ್ತು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಸುಸ್ತಾಗಿ  ಮುನ್ನಡೆಯಲು ಸಾಧ್ಯವೇ ಇಲ್ಲ ಎಂದೆನಿಸಿ ಕುಳಿತುಕೊಂಡೆ .ಜೊತೆಗಿದ್ದ ಗೆಳೆಯರು ಹುರಿದುಂಬಿಸಿದರು. ಸೋತು ಹಿಂದೆ ಹೆಜ್ಜೆ ಇಟ್ಟರೆ ಏನು ಪ್ರಯೋಜನ ಎನ್ನಿಸಿ ಕಷ್ಟವಾದರೂ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಮುನ್ನಡೆದೆ. ಮುಂದೆ ಕಾಡು ಕಡಿಮೆಯಾಗುತ್ತಾ ಬಂತು. ಸುಮಾರು ಹನ್ನೊಂದು ಗಂಟೆಗೆ ಹುಲ್ಲುಗಳಿಂದ ಆವೃತವಾದ ಬೆಟ್ಟದ ಭಾಗವನ್ನು ತಲುಪಿದೆವು.

ಎದ್ದು ಬಿದ್ದು ಏದುಸಿರು ಬಿಡುತ್ತಾ ಹತ್ತುತ್ತಿದ್ದ ನಮಗೆ ಮುಂದೆ ಸಾಗುತ್ತಿದ್ದ ಗೆಳೆಯರ ಕೇಕೆ ಕೇಳಿಸಿತು. ಮಂಜು ಮುಸುಕಿದ್ದುದರಿಂದ  ಅವರ್ಯಾರೂ ಕಾಣುತ್ತಿರಲಿಲ್ಲ.ಇನ್ನೇನು ಬೆಟ್ಟದ ತುದಿ ಬಂದೇ ಬಿಟ್ಟಿತು ಎಂಬ ಹುರುಪಿನಲ್ಲಿ ಮುನ್ನಡೆದೆವು. ತುದಿ ಎಂದು ಹೇಳಬಹುದಾದ ಜಾಗವೊಂದನ್ನು ತಲುಪಿದೆವು . ಆದರೆ ಮುಂದೆ ಕಾಣುತ್ತಿದ್ದ ಇನ್ನೊಂದು ಎತ್ತರದ ಜಾಗವನ್ನು  ಕಂಡ ಮೇಲೆ ಅರಿವಾಯಿತು ಅದು ಬೆಟ್ಟದ ತುದಿ ಅಲ್ಲವೆಂದು . ಅದು ಇನ್ನೂ ಏರುತ್ತಲೇ ಹೋಗಿತ್ತು. ಕೆಲವರು ಸುಸ್ತಾಗಿ ಅಲ್ಲೇ ಇದ್ದ ಬಂಡೆಗಳ ಮೇಲೆ ಆಸೀನರಾದರು. ನಾನು ಉಳಿದ ದೂರವನ್ನು ವಿನಾಯಕನ ಜೊತೆ ಕ್ರಮಿಸಲು ನಿರ್ಧರಿಸಿದೆ.
                                                                                        
ಗೆಳೆಯರೊಂದಿಗೆ..

ಅತಿಯಾಗಿ ಆಯಾಸಗೊಂಡಿದ್ದೆ ನಾನು.ಇನ್ನೂ ಹತ್ತೇ ಹೆಜ್ಜೆಗಳು ಎಂದು ಲೆಕ್ಕವಿಟ್ಟು ಹತ್ತಿದ್ದೆ ಅವತ್ತು.ನಮಗಿಂತ ಮೊದಲು ಹತ್ತಿದ ಗೆಳೆಯರು ಕಾಣುವವರೆಗೂ ಹತ್ತುವುದನ್ನು ನಿಲ್ಲಿಸಕೂಡದು ಎಂದು ನಿರ್ಧರಿಸಿಕೊಂಡು ಮುಂದೆ ಸಾಗಿದೆವು. ಸ್ವಲ್ಪ ಹೆಜ್ಜೆ ಎಣಿಸಿದ ನಂತರ ಮುಸುಕಿದ ಮಂಜಿನ ತೆರೆಯಾಚೆ ಎಲ್ಲೋ ದೂರದಲ್ಲಿ ಮನುಷ್ಯರ ಮಾತು ಕೇಳಿಸಿತು.ಅತ್ತ ಕಡೆ ಹೆಜ್ಜೆ ಇಟ್ಟಾಗ ಮೊದಲೇ ತಲುಪಿದ್ದ ನಮ್ಮ ಜೊತೆಗಾರರು.ಅದು ಏರಿ ಕಲ್ಲು ಗುಡ್ಡದ ತುದಿಯಾಗಿತ್ತು.ಅಂತೂ ಏರಿ ಏರಿ ಏರಿಕಲ್ಲು ಗುಡ್ಡದ ನೆತ್ತಿಯನ್ನು ತಲುಪಿದ್ದೆವು.ಆಗ ಸುಮಾರು ಒಂದು ಗಂಟೆ .
                                           
 ಏರಿಕಲ್ಲು  ಗುಡ್ಡದ ದಾರಿ
ಚಾರಣದ ಕೊನೆಯ ಹಂತ ತಲುಪಿದಾಗ ಸಿಗುವ ಸಾರ್ಥಕತೆಯ ಸಂಭ್ರಮ  ಅವರ್ಣನೀಯ . ಅದು ಅನುಭವಿಸಿಯೇ ತಿಳಿಯುವಂತಹುದು.ಅವತ್ತು ಇಡೀ ಬೆಟ್ಟ ನಮ್ಮ ಕಾಲ ಕೆಳಗಿತ್ತು. ಅಲ್ಲಿಂದ ಕೆಳಗೆ ಕಣ್ಣು ಹಾಯಿಸಿದರೆ ಪ್ರಪಾತ. ಇಡೀ ಚಾರ್ಮಾಡಿ ಹಳ್ಳಿ ಸ್ತಬ್ದ ಚಿತ್ರದಂತೆ ಭಾಸವಾಗಿತ್ತು.ಸುತ್ತಲೂ ಪಶ್ಚಿಮ ಘಟ್ಟಗಳ ಸಾಲು ಸಾಲು.ಮಿಂಚುಕಲ್ಲು ಗುಡ್ಡ,ಎತ್ತಿನ ಭುಜ,ಕೊಡೇಕಲ್ಲು ಗುಡ್ಡ,ಬಾಳೆಕಲ್ಲು ಗುಡ್ಡ ಎಲ್ಲವೂ ಶತ್ರುವಿಗೆ ಎದೆಯೊಡ್ಡಿ ನಿಂತ ಸೈನಿಕರಂತೆ ನಿಂತಿದ್ದವು. ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು ನಂತರ ಇಳಿಯಲು ಪ್ರಾರಂಭಿಸಿದೆವು .

 ಮಂಜು ಮುಸುಕಿದ ಹಾದಿ..

ಇಳಿಯುವುದೇನೂ ಸುಲಭವಾಗಿರಲಿಲ್ಲ. ಮಳೆ ಹನಿಯಲಾರಂಭಿಸಿತು. ನೆಲ ತೋಯ್ದು ಕಾಲಿಟ್ಟಲ್ಲೆಲ್ಲ ಜಾರುತಿತ್ತು. ಊರುಗೋಲನ್ನು ಆಧಾರವಾಗಿಟ್ಟುಕೊಂಡು ಹೆಜ್ಜೆ ಇಡುತ್ತಿದ್ದೆ ನಾನು. ಅಲ್ಲೇ ಮಧ್ಯದಲ್ಲಿ ನಮ್ಮ ವನಭೋಜನ. ಕೆಳಗಿನಿಂದ ಹೊತ್ತು ತಂದಿದ್ದ ಚಪಾತಿ, ಚಟ್ನಿಪುಡಿ ತಿಂದೆವು.ಹತ್ತುವಾಗಲೇ ನೀರು ಖಾಲಿ ಮಾಡಿಕೊಂಡಿದ್ದರಿಂದ ಇಳಿಯುವಾಗ ಕುಡಿಯುವ ನೀರು ಇರಲಿಲ್ಲ. ಹತ್ತುವುದಕ್ಕಿಂತ ಇಳಿಯುವ ಹಾದಿ ಕಷ್ಟಕರವಾಗಿತ್ತು.ನಿಧಾನವಾಗಿ ನಡೆಯುತ್ತಾ ಅಲ್ಲಿಯೇ ಹರಿಯುತ್ತಿದ್ದ ಹಳ್ಳವೊಂದರ ಬಳಿ ತಲುಪಿದೆವು. ಮೊದಲೇ ಬಾಯಾರಿದ್ದ ನಮಗೆ ನಿಧಿ ಸಿಕ್ಕಂತಾಗಿ ನೀರು ತುಂಬಿಸಿಕೊಂಡು ಕುಡಿದೆವು. ನೀರಿನಲ್ಲಿ ಕಾಲಿಟ್ಟುಕೊಂಡು ಕುಳಿತಾಗ ಆಹ್ಲಾದವೆನಿಸಿತು. ಅಲ್ಲೇ ಇದ್ದು ಬಿಡೋಣವೆಂದೆನಿಸುವಷ್ಟು ಸುಸ್ತಾಗಿದ್ದರೂ ಹಸಿವು ಭಾದಿಸತೊಡಗಿ ಊರ ದಾರಿ ಹಿಡಿದೆವು.
 
ಅವತ್ತು ರಾತ್ರಿ ಅಲ್ಲಿನ ಸಣ್ಣ ಹೋಟೆಲ್ಲ್ ಒಂದರಲ್ಲಿ ನಮ್ಮ ಊಟ. ಹತ್ತಿರದಲ್ಲಿ ಇದ್ದ ದೇವಸ್ತಾನಕ್ಕೆ ಸೇರಿದ ಛತ್ರವೊಂದು ನಮ್ಮ ರಾತ್ರಿಯ ತಂಗುದಾಣವಾಗಿತ್ತು . ಅಲ್ಲೇ ಸ್ಲೀಪಿಂಗ್ ಬ್ಯಾಗ್ ತೆಗೆದು ಬೆಚ್ಚಗೆ ಅದರೊಳಗೆ ಮಲಗಿದೆವು. ಮರುದಿನದ ಚಾರಣದ ಬಗ್ಗೆ ಆಲೋಚಿಸಲುಸಾಧ್ಯವಿಲ್ಲದಷ್ಟು ಸುಸ್ತಾಗಿದ್ದ  ನಮ್ಮನ್ನು ನಿದ್ರಾದೇವಿ ತನ್ನ ತೆಕ್ಕೆಗೆ ಎಳೆದುಕೊಂಡಿದ್ದಳು.


( ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.. )


Tuesday 24 June 2014

ನೀನಿಲ್ಲದೇ...


 ಗೆಳೆಯಾ ,
      ಕಾಣದಷ್ಟು ದೂರದಲ್ಲಿರುವ, ಕರೆದರೂ ಬಾರದ,ಕಾಯುತ್ತಿದ್ದರೂ ಕನಿಕರಿಸದ ನಿನಗೆ..

ಕಾಡುತ್ತಿದೆ ನಿನ್ನ ನೆನಪು.ಮಳೆಗಾಲ ಪ್ರಾರಂಭವಾಗಿದೆ.ನೆನೆಯಲು ಆಸೆಯಾದರೂ ನೀನಿಲ್ಲವೆಂದು ಸುಮ್ಮನಾಗಿದ್ದೇನೆ. ಇಂದು ಬರುವೆ,ನಾಳೆ ಬರುವೆ ಎಂದು ನೀನು ನಡೆದು ಹೋದ ದಾರಿಯನ್ನೇ ನೋಡುತ್ತಿದ್ದೇನೆ. ಆದರೆ ಅದರ ಸೂಚನೆಯೇ ಕಾಣುತ್ತಿಲ್ಲವಲ್ಲ ಗೆಳೆಯ.!ಸೂರ್ಯ ದಿನಕ್ಕೊಮ್ಮೆ ಬರುವ.ಪೌರ್ಣಮಿ ತಿಂಗಳಿಗೊಮ್ಮೆ. ಸ್ವಾತಿ ಮಳೆ ವರ್ಷಕ್ಕೊಮ್ಮೆ. ಆದರೆ ನೀನು ವರ್ಷವೇ ಕಳೆದರೂ ಬರಲಿಲ್ಲ... 

ನೀನಿಲ್ಲದೇ ನನಗೇನಿದೆ ಅನ್ನೋ ಹಾಡು ನೆನಪಾಗುತ್ತದೆ. ಕೇಳಲು ಮತ್ತೆ ನೀನಿಲ್ಲ ಇಲ್ಲಿ.ನಿನ್ನೊಂದಿಗೆ ಕಳೆದ ಗಳಿಗೆಗಳ  ನೆನಪುಗಳನ್ನು ಚಿತ್ರಗಳಾಗಿ ಮೂಡಿಸಿ ಬಣ್ಣಗಳಿಂದ ನವೀಕರಿಸುವಾಸೆ. ಆದರೆ ಅಂತಹ ಗಳಿಗೆಯೊಂದೂ ನೆನಪಾಗುತ್ತಿಲ್ಲ. ಜೊತೆಗೆ ತೆಗೆದ ಒಂದು ಭಾವಚಿತ್ರವೂ ಇಲ್ಲ, ಪುಸ್ತಕದೊಳಗೆ ಅಡಗಿಸೋಣವೆಂದರೆ. ಕೈ ಹಿಡಿದು ನಡೆದ ಮಧುರ ಅನುಭೂತಿಯೂ ಇಲ್ಲ ಸ್ಮರಿಸೋಣವೆಂದರೆ.whatsapp  ಸ್ಟೇಟಸ್  ಬದಲಾಯಿಸಿದ್ದೇನೆ.ನಿನಗೋ ಅದು ಕಾಣದು.. ಒಂಟಿಯೆಂಬ ಭಾವನೆ ಬಹಳವಾಗಿ ಕಾಡುತ್ತದೆ. ಒಮ್ಮೊಮ್ಮೆ ನೀನು ನನ್ನ ಕಲ್ಪನೆಯೇನೋ ಎಂದೆನಿಸುತ್ತದೆ. 

ಆದರೇನು..!! ನಿನ್ನ ನವಿರಾದ ನೆನಪುಗಳಿವೆ. ನೀನೆಷ್ಟು ನೆನಪಾಗುವೆ ಎಂದು ಗೊತ್ತೇ ನಿನಗೆ.? ಬಿರಿದ ದುಂಡು ಮಲ್ಲಿಗೆ ಮುಡಿಯೇರಿ ಸೂಸಿದ ಸುವಾಸನೆಯಲ್ಲಿ ನಿನ್ನ ನೆನಪಿತ್ತು. ಮಳೆಗಾಲದ ಸಾಯಂಕಾಲದಲ್ಲಿ ಕೈಯಲ್ಲಿ  ಹಿಡಿದು ಕುಳಿತ coffee ಯ ಘಮದಲ್ಲಿ ನಿನ್ನ ನೆನಪಿತ್ತು. ದೂರದಲ್ಲೆಲ್ಲೋ ಕಾಣುವ ನೀಲಿ ಬೆಟ್ಟ, ಅದರ ನೆತ್ತಿಯಲ್ಲಿನ ಪುಟ್ಟ ದೇವಸ್ಥಾನ ನಿನ್ನ ನೆನಪು ತಂದಿತ್ತು. ಒಬ್ಬಳೇ ಕುಳಿತಾಗ ಪಕ್ಕದಲ್ಲಿದ್ದ ಖಾಲಿ ಜಾಗವೂ ನಿನ್ನ ನೆನಪನ್ನೇ ಹೊತ್ತು ಬಂದಿತ್ತು. ಕಾದ ನೆಲದ ಮೇಲೆ ಬಿದ್ದ ಹನಿ ತಂದ ಮೂಗರಳಿಸುವ ಪರಿಮಳದಲ್ಲಿ ಕೂಡ ಇದ್ದದ್ದು ನಿನ್ನದೇ ನೆನಪು ಗೊತ್ತೇ ಗೆಳೆಯ.ಎಷ್ಟೊಂದು ನೆನಪುಗಳು. ಅವುಗಳನ್ನೆಲ್ಲ ನನ್ನ ದಿನಚರಿಯ ಪುಟ ಪುಟ ಗಳಲ್ಲಿ ಬರೆದಿಡುತ್ತಿದ್ದೇನೆ.ನೀನು ಮರಳಿ ಬಂದ ದಿನ ನಿನ್ನ ಕೈಗಿರಿಸುತ್ತೇನೆ ಅದನ್ನು.. 

ನೀನಿರುವೆಯೆಂದು ನೆನಪಿಸಲು ನೀನಿತ್ತ ಹಸಿರು ಹರಳಿನ ಕಿವಿಯೋಲೆಯಿದೆ. ತಿಂದು ಮುಗಿಸಿದ chocolate ನ wrapper ಇದೆ. ನೀನು ಬಿಡಿಸಿ ಕಳಿಸಿದ ನನ್ನ ಚಿತ್ರವಿದೆ.ಅರ್ಥವಿಲ್ಲದೆ ಆಗುವ ಜಗಳಗಳಲ್ಲಿ ಅಸಹಾಯಕತೆಯಿದೆ.ಬರುವ ಕಣ್ಣೀರನ್ನು ಒರೆಸಲು ಮಾತ್ರ ನೀನಿಲ್ಲ.ಆಗ ನಿಜವಾಗಿಯೂ ಅನಿಸುತ್ತದೆ,ಯಾವುದಿದ್ದರೂ ನೀನಿಲ್ಲವಲ್ಲ..!ನೀನಿಲ್ಲದೆ ನಿಜವಾಗಿಯೂ ಏನೂ ಇಲ್ಲ..ಕಳೆದ ದಿನಗಳ ಮೆಲುಕು ಹಾಕುತ್ತ, ಬರುವ ದಿನಗಳನ್ನು ನಿನ್ನೊಂದಿಗೆ ಕಳೆಯುವ ಹಾರೈಕೆಯಲ್ಲಿ 

ಪ್ರೀತಿಯಿಂದ... 
ನಿನ್ನ ಗೆಳತಿ.

Monday 16 June 2014

ಶುಭಾಶಯಗಳೊಂದಿಗೆ..

ಕೆಲವಾರು ಸಂವತ್ಸರಗಳ ಹಿಂದೆ ಜೂನ್ ೧೬ ರಂದು  ನಮ್ಮ ಮನೆಗೊಂದು ಪುಟ್ಟ ಪಾಪು ಬಂದಿತ್ತು . ಆ ಪುಟ್ಟ ಪಾಪುವಿನ ೧೬ ನೆ ಹುಟ್ಟಿದ ಹಬ್ಬ ಇವತ್ತು ( ದೊಡ್ಡವನಾದರೂ ನನಗಿನ್ನೂ ಚಿಕ್ಕ ತಮ್ಮ..). ಅವನಿಗೆ ಶುಭಾಶಯ ಕೋರುವ ಸಲುವಾಗಿ ಈ ಲೇಖನ..                                           


೧೯೯೯ ರ ಜೂನ್ ತಿಂಗಳು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ ನಾನು ಆಗ.ಮಳೆಗಾಲ ಆಗಲೇ ಕಾಲಿಟ್ಟಿತ್ತು ಮಲೆನಾಡಿನಲ್ಲಿ.ರಸ್ತೆಗಳೆಲ್ಲ ಕೆಸರುಮಯ. ಹಳ್ಳ ಗುಂಡಿಗಳಲ್ಲಿ ಕೆಂಪು ನೀರು.ಅವತ್ತೊಂದಿನ ಬೆಳಿಗ್ಗೆ ಎದ್ದಾಗ "ನಿಂಗೆ ತಮ್ಮ ಹುಟ್ಟಿದ್ದಾನೆ ಕಣೇ" ಅಂತ ಅಪ್ಪ ಖುಷಿಯಿಂದ ಹೇಳಿದ್ದರು."ನನ್ನೂ ಕರ್ಕೊಂಡು ಹೋಗಿ ಪಾಪು ನೋಡೋಕೆ" ಅಂದಿದ್ದೆ ಅಪ್ಪಂಗೆ. "ಬೇಡ ಕಣೇ ಮಳೆ ಜಾಸ್ತಿ ಇದೆ.ನೀನು ಶಾಲೆಗೆ ಹೋಗು. ಅಜ್ಜನ ಮನೆಗೆ ಹೋಗಿ ನೋಡ್ಕೊಂಡು ಬಂದ್ರಾಯ್ತು" ಅಂದರು ಅಪ್ಪ.
ನಿನಗೊಂದು ಉಡುಗೊರೆ ಇದೆ ಅಂತ ಹೇಳಿ, ಏನು? ಹೇಗಿದೆ ? ಅಂತ ನೋಡೋಕೆ ಬಿಡದೆ ಇದ್ದಾಗ , ನೋಡ್ಬೇಕು ಅನ್ನೋ ಕುತೂಹಲ, ಯಾವಾಗ ನೋಡ್ತಿನೋ ? ಅನ್ನೋ ಹಪಹಪಿ ಎಲ್ಲಾ ಇರುತ್ತಲ್ಲಾ  ಹಾಗೆ ಆಗಿತ್ತು ನಂಗೆ. ತಮ್ಮ ಹುಟ್ಟಿದಾನೆ ಅಂತಿದಾರೆ ಆದ್ರೆ  ತೋರಿಸ್ತಿಲ್ಲ ಅಂತ ಬೇಜಾರಾಗಿತ್ತು. ಶಾಲೆಗೆ ಹೋದ ಮೇಲೆ ಎಲ್ಲರಿಗೂ ಈ ವಿಷಯ ಹೇಳಿದೆ.(ನಮ್ಮ ಟೀಚರ್ ಗೂ ಸಹ ಹೇಳಿದ್ದೆ..) . ಅದೇ ಸಂಭ್ರಮದಲ್ಲಿ ಮದ್ಯಾಹ್ನ ಊಟದ ಘಂಟೆ ಬಾರಿಸಿತು. 
 
ನನ್ನ ಗೆಳತಿ ಒಬ್ಬಳು ರೆಜಿನಾ ಅಂತ.ಊಟದ ಸಮಯದಲ್ಲಿ ಅವಳು ಕೇಳಿದಳು "ಯಾವ ಆಸ್ಪತ್ರೇಲಿ ಇದ್ದಾರೆ ಗೊತ್ತಾ" ಅಂತ. ಬೆಳಿಗ್ಗೆ ಎಲ್ಲ ಮಾತಾಡ್ಕೊಳೋದು  ಕೇಳಿದ್ದ ನಾನು "ಗವರ್ನಮೆಂಟ್ ಹಾಸ್ಪಿಟಲ್ ಅಂತೆ" ಅಂದಿದ್ದೆ . ಅಷ್ಟೇ! ಅವಳು ನನ್ನನ್ನು ಇಲ್ಲೇ ಹತ್ತಿರ ಬಾ ಹೋಗೋಣ ಅಂತ ಕರೆದೊಯ್ದಳು. ಅವಳ ದೊಡ್ಡ ಕೊಡೆಯಲ್ಲಿ ತೂರಿಕೊಂಡು ಬಟ್ಟೆ ಎಲ್ಲ ತೋಯಿಸಿಕೊಂಡು ಅಂತೂ ಆಸ್ಪತ್ರೆ ತಲುಪಿಕೊಂಡೆವು.ಆದರೆ ಅಲ್ಲಿ ಎಲ್ಲಿ ಅಂತ ಹುಡುಕುವುದು.! ಆದರೆ ಅದು ನಮಗೆ ಸಮಸ್ಯೆಯಾಗಲೇ ಇಲ್ಲ. ಏನೋ ತರಲು ಹೊರಬಂದ ಅಪ್ಪ,ನಮ್ಮನ್ನು ನೋಡಿ ಆಶ್ಚರ್ಯದಿಂದ "ನೀವಿಬ್ರು ಹೇಗೆ ಬಂದ್ರಿ" ಅಂತ ಕೇಳಿ ಒಳಗೆ ಕರೆದುಕೊಂಡು ಹೋದರು. 

ಒಳಗೆ ಹೋದ ನಾನು ಮೊದಲು ನೋಡಿದ್ದು ಮಂಚದ ಮೇಲೆ ಮಲಗಿದ್ದ ಅಮ್ಮನನ್ನು. ಅವಳಿಗೂ, ನಾನು ಬರುತ್ತೇನೆ ಎಂದು ಗೊತ್ತಿರದೇ ಇದ್ದುದರಿಂದ ಆಶ್ಚರ್ಯವಾಯಿತು.ನಾನೆಷ್ಟು ಎತ್ತರವಾಗಿದ್ದೆ ಎಂದರೆ ಮಂಚದ ಮೇಲೆ ಮಲಗಿದ್ದ ಮಗು ಕಾಣುತ್ತಲೇ  ಇರಲಿಲ್ಲ. ಅಪ್ಪ ನನ್ನನ್ನು ಎತ್ತಿಕೊಂಡು ನೋಡಲು ಹೇಳಿದರು. ಹೇಗಿತ್ತು ಮಗು ಅದೇನೂ ನೆನಪಿಲ್ಲ ನನಗೆ. ಆದರೆ ಅದರ  ಪುಟ್ಟ ಕೈ ಮಾತ್ರ ಸುತ್ತಿದ ಬಟ್ಟೆಯಿಂದ ಹೊರಗೆ ಬಂದಿತ್ತು.ಮೃದುವಾದ ಕೈ. ಚಿಕ್ಕಚಿಕ್ಕ ಬೆರಳುಗಳು.ಮೆತ್ತಗಿನ ಉಗುರುಗಳು. ಅದರ ಕೈ ಬೆರಳುಗಳನ್ನು ಹಿಡಿದುಕೊಂಡಾಗ ಆ ಮಗು ಕೂಡ ನನ್ನ ಬೆರಳನ್ನು ಹಿಡಿದುಕೊಂಡಿತ್ತು. ಒಂದು ಮುತ್ತು ಕೊಟ್ಟಿದ್ದೆ ಅದರ  ಕೈಗೆ ಎನ್ನುವುದು ಮಾತ್ರ ನೆನಪಿದೆ.ಇದು ನನ್ನ ತಮ್ಮನನ್ನ ಮೊದಲ ಬಾರಿಗೆ ನೋಡಿದ್ದು ನಾನು. 

ಶಾಲೆಗೆ ತಡವಾಗುತ್ತದೆ ಎಂದುಕೊಂಡು,ಅಮ್ಮನಿಗೆ ನಾಳೆ ಬರುತ್ತೇವೆ ನೋಡಲು ಎಂದೆ. ಅಮ್ಮ "ನಾವು ಇವತ್ತು ಅಜ್ಜನ ಮನೆಗೆ ಹೋಗ್ತಿದೀವಿ. ನೀನು ನಾಳೆ ಬರಬೇಡ. ಶನಿವಾರ ಹೇಗಿದ್ದರೂ ರಜಾ ಇರುತ್ತದೆಯಲ್ಲ, ಆಗ ಅಜ್ಜನ ಮನೆಗೆ ಬರುವೆಯಂತೆ" ಎಂದಿದ್ದಳು. ಸರಿ ಎಂದು ಹೊರಟು  ಶಾಲೆ ತಲುಪಿಕೊಂಡಿದ್ದೆವು ನಾವು. ಶನಿವಾರ ಬಂದ  ತಕ್ಷಣ ಅಪ್ಪ ,ನಾನು ಅಜ್ಜನ ಮನೆಗೆ ಹೋಗುತ್ತಿದ್ದೆವು ೫:೩೦ ಕ್ಕೆ ಬರುತ್ತಿದ್ದ ದುರ್ಗಾಂಬಿಕ ಬಸ್ಸಿನಲ್ಲಿ. ಬಿಳಿ ಬಟ್ಟೆಯಲ್ಲಿ ಸುತ್ತಿಸಿಕೊಂಡು ನನ್ನ ತಮ್ಮ ಮಲಗಿರುತ್ತಿದ್ದ.ನಾನು ನಿಧಾನಕ್ಕೆ ಕಾಲ ಮೇಲೆ ಮಲಗಿಸಿಕೊಳ್ಳುತ್ತಿದ್ದೆ. ಆಟ ಆಡಿಸುತ್ತಿದ್ದೆ.ಪ್ರತಿ ವಾರವೂ ಹಾಗೇ ಕಳೆಯುತ್ತಿತ್ತು.ಅವನ ಹೆಸರು ಇಡುವಾಗ ನಾನು ಹಟ  ಮಾಡಿದ್ದೆ ಸ್ವರೂಪ್ ಅಂತಾನೆ ಇಡಬೇಕು ಅಂತ. ಮನೆಯವರೆಲ್ಲರೂ ಅದಕ್ಕಿಂತ ಚಂದದ ಹೆಸರು ಹುಡುಕಿದ್ದರು ಆದರೂ ನನ್ನ ಮಾತು ನಡೆಯಬೇಕೆಂದು ಹಟ  ಮಾಡಿ ಸ್ವರೂಪ್ ಅಂತ ಹೆಸರಿಡಿಸಿದೆ. 

ನಡೆಯಲು ಕಲಿತ ಮೇಲೆ ನನ್ನ ಹಿಂದೆಯೇ ಬರುತ್ತಿದ್ದ.ಒಂದು ದಿನ ಯಾವುದೋ ಹಕ್ಕಿ ಹಾರುವುದನ್ನು ನೋಡುತ್ತಾ ಹೋಗುತ್ತಿದ್ದ ನನಗೆ ಅವನು ಬಂದಿದ್ದು ಗೊತ್ತೇ ಆಗಿರಲಿಲ್ಲ.ಬರಿಗಾಲಲ್ಲಿ ಬಂದಿದ್ದ ಅವನಿಗೆ ಒಂದು ದೊಡ್ಡ ಮುಳ್ಳು ಚುಚ್ಚಿತು.ಜೋರಾಗಿ ಕೂಗಲು ಪ್ರಾರಂಬಿಸಿದ. ನನಗೆ ಭಯ, ಸಿಟ್ಟು ಒಟ್ಟಿಗೆ ಬಂತು. "ನನ್ನ ಹಿಂದೆ ಬಾ ಅಂತ ನಾನು ಹೇಳಿದ್ನಾ ನಿಂಗೆ" ಅಂತ ಬೈದು ಅಂತ ಎತ್ತಿಕೊಂಡು ಮನೆಗೆ ಹೋದೆ. ತುಂಬಾ ದೊಡ್ಡ ಮುಳ್ಳು! ಪುಟ್ಟ ಪಾದಕ್ಕೆ ಆಳವಾಗಿ ಹೊಕ್ಕಿತ್ತು . ನಾವು ಎಷ್ಟು ಪ್ರಯತ್ನಿಸಿದರೂ ಹೊರ ತೆಗೆಯಲಾಗದೆ ಕೊನೆಗೆ ಡಾಕ್ಟರ್  ಹತ್ರ ಕರೆದುಕೊಂಡು  ಹೋಗಬೇಕಾಯಿತು.ಅವತ್ತು ಒಂದು ದಿನ ನಡೆಯಲಾಗದೆ ಇದ್ದುದರಿಂದ ನನ್ನ ಹಿಂದೆ ಬಂದಿರಲಿಲ್ಲ.!


ಎಷ್ಟೋ ಜಗಳ ಗಳು ನಮ್ಮ ಮಧ್ಯೆ. ದಿನಾ ಕಚ್ಚಾಟ. ಏನಾದರೂ,"ನೀನು ದೊಡ್ಡವಳು ಸುಮ್ನಿರು" ಅಂತಿದ್ರು.ನಂಗೆ ಸಿಟ್ಟು ಬರುತ್ತಿತ್ತು. ಆದರೆ ಎಲ್ಲ ಕೆಲಸಗಳಲ್ಲಿ ನನಗೆ ಸಹಾಯ ಮಾಡುತ್ತಿದ್ದ. ಬೇಗ ಕೆಲಸ ಮುಗಿದರೆ ಉಳಿದ ಸಮಯದಲ್ಲಿ ನಾವು ಆಟ ಆಡಬಹುದು ಅಂತ.ಇವಾಗ್ಲೂ "ಅಕ್ಕ ನನ್ನ ಪುಸ್ತಕಕ್ಕೆ ಬೈಂಡ್ ಹಾಕಿ ಕೊಡು, ಹೆಸರು ಬರೆದು ಕೊಡು,ಅಕ್ಕ ಬಾರೆ ಕರ್ಜಿ  ಹಣ್ಣು ತಿನ್ನೋಕೆ ಹೋಗೋಣ, ಬೈಕ್ ಅಲ್ಲಿ ಅಜ್ಜನ ಮನೆಗೆ ಕರ್ಕೊಂಡು ಹೋಗ್ತೀನಿ ಬಾ" ಅಂತ ಕೇಳ್ತಾನೆ. "ಯಾವತ್ತು ಮನೆಗೆ ಬರ್ತೀಯ .?ನಂಗೆ ಆ ಮೂವಿ ತಗೊಂಡು ಬಾ. pen drive ತಗೊಂಡು ಬಾ" ಅಂತೆಲ್ಲಾ ಮೆಸೇಜ್ ಮಾಡ್ತಾನೆ.ಮನೆಗೆ ಹೋದ ತಕ್ಷಣ ನನ್ನ ಚೀಲವನ್ನೆಲ್ಲ ಕೆದಕಿ ನನಗೇನು ತಂದಿದೀಯ ಅಂತ ಹುಡುಕುತ್ತಾನೆ. 

 
                                              
ಇವತ್ತು ನನ್ನ ಪುಟ್ಟ ತಮ್ಮ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಅವನ ಜೊತೆಗಿನ ನೆನಪುಗಳು ಬರೆದು ಮುಗಿಯದ ಅವನಿಗೆ ಮತ್ತೊಮ್ಮೆನಮ್ಮೆಲ್ಲರ ಹಾರೈಕೆಗಳು. 

 
ಪ್ರೀತಿಯ ಸ್ವರೂಪ್,

ಇವತ್ತು ನಿನ್ನ ಹುಟ್ಟಿದ ದಿನ. ಹುಟ್ಟಿದ ಹಬ್ಬದ ಹಾರ್ದಿಕ ಶುಭಾಷಯಗಳು.ನಿನ್ನೆಲ್ಲ ಕನಸುಗಳು ಸಾಕಾರಗೊಳ್ಳಲಿ ಎಂದು ಆಶಿಸುತ್ತಾ...

                             


ಶುಭಾಶಯಗಳೊಂದಿಗೆ ,
ಸುಚೇತ..

Tuesday 10 June 2014

ಎರಡು ರೂಪಾಯಿ..!!

ಇಂತಹದೇ ಘಟನೆಯೊಂದನ್ನು ಬಹಳ ವರ್ಷಗಳ ಹಿಂದೆ ಎಲ್ಲೋ  ಓದಿದ ನೆನಪು.ಇದು ನನ್ನ ಅನುಭವಕ್ಕೂ ಬಂದಿರುವುದು ಕಾಕತಾಳೀಯ.
 
ನಾನು  ಆಫೀಸ್ ಗೆ ಹೊರಟಿದ್ದ ಒಂದು ಬೆಳಿಗ್ಗೆ. ಕುಂದಲಹಳ್ಳಿಯಿಂದ ವೈದೇಹಿಗೆ ಹೋಗಬೇಕಾಗಿತ್ತು.ವೋಲ್ವೋ ಬಸ್ ಗೆ ದಿನವೂ ೭೦ ರೂಪಾಯಿ ಮೀಸಲಿಡಬೇಕು. ಅದಕ್ಕಾಗಿ ಅವತ್ತು ವೋಲ್ವೋ ಬೇಡವೆಂದು ತೀರ್ಮಾನಿಸಿ ಬೇರೆ ಬಸ್ ಹತ್ತಿದ್ದೆ.ವೈದೇಹಿಗೆ ಕುಂದಲಹಳ್ಳಿಯಿಂದ ೧೩ ರೂಪಾಯಿ ಎಂದ ಕಂಡಕ್ಟರ್. ಚಿಲ್ಲರೆ ಇಲ್ಲವೆಂದು ಹತ್ತು ರೂಪಾಯಿಯ ನೋಟೊಂದನ್ನು, ೫ ರೂಪಾಯಿಯ ನಾಣ್ಯವೊಂದನ್ನು ಕೊಟ್ಟೆ. ೨ ರೂಪಾಯಿ ಚಿಲ್ಲರೆ ಕೊಡಬೇಕಾಗಿದ್ದ ನಿರ್ವಾಹಕ ಅದು ದೊಡ್ಡ ಮೊತ್ತವೇ ಅಲ್ಲವೆಂಬಂತೆ ಮುಂದೆ ಹೋದ, "ಯಾರ್ರೀ ಟಿಕೆಟ್ ಅಲ್ಲಿ" ಎಂದೆನ್ನುತ್ತಾ..!
 
ಮುಂದಿನ ಒಂದು ಸ್ಟಾಪ್ ನಲ್ಲಿ  ಹತ್ತಿದ ಮಹಿಳೆಯೊಬ್ಬಳು ೧೦ ರೂಪಾಯಿಯ ಒಂದು ನೋಟ್ ಒಂದನ್ನು ಕೊಟ್ಟು ಎಲ್ಲಿಗೆ ಟಿಕೆಟ್ ಬೇಕೆಂದು ಕೇಳಿದಳು.ಅಲ್ಲಿಗೆ ೧೨ ರೂಪಾಯಿ,ಇನ್ನೆರಡು ರೂಪಾಯಿ ಕೊಡಮ್ಮ ಎಂದು ಕೇಳಿದ ಕಂಡಕ್ಟರ್. ಅವಳು ಇಲ್ಲಿಂದ ಅಲ್ಲಿಗೆ ಹತ್ತೇ ರೂಪಾಯಿ.ಹನ್ನೆರಡಲ್ಲ.! ನಾನು ಇನ್ನೆರಡು ರೂಪಾಯಿ ಕೊಡಲ್ಲ ಎಂದಳು.ಕಂಡಕ್ಟರ್ ಬಿಡುತ್ತಾನೆಯೇ .? ಏನೇನೋ ಒಂದಿಷ್ಟು ಬೈಗುಳಗಳನ್ನು ಬೈದು ಎರಡು ರೂಪಾಯಿ ಕೊಡದಿದ್ದರೆ ಇಳಿ ಕೆಳಗೆ ಎಂದು ಕೂಗಿದ.ಆದರೂ ಅವಳು ಜಗ್ಗಲಿಲ್ಲ.ಅವಳ ಹಟಕ್ಕೆ ಸೊಪ್ಪು ಹಾಕದೆ, ಡ್ರೈವರ್ ಬಸ್ ನಿಲ್ಲಿಸಿ ಕೆಳಗಿಳಿಯಲು ಹೇಳಿದ.ಆ ಮಹಿಳೆ ಕೊನೆಯಲ್ಲಿ ನಿರ್ವಾಹವಿಲ್ಲದೆ ಕೊಡಬೇಕಾಯಿತು.

ನಾನು ಇಳಿಯುವ ವೈದೇಹಿ ಸ್ಟಾಪ್ ಬಂದಿತು. ೨ ರೂಪಾಯಿ ಚಿಲ್ಲರೆ ನನಗೆ ಬರಬೇಕಾಗಿದ್ದುದರಿಂದ ಹೋಗಿ ಕೇಳಿದರೆ, ಕಂಡಕ್ಟರ್ ಎರಡೇ ರೂಪಾಯಿ ಎಂಬ ಅಸಡ್ಡೆಯಿಂದ ಸ್ವಲ್ಪ ಜೋರಾಗೆ ಚಿಲ್ಲರೆ ಇಲ್ಲಾರೀ ಅಂತ ಹೇಳಿಕೊಂಡು ಹೊರಟೇ  ಹೋದ. ಬೆಳಿಗ್ಗೆ ಬೆಳಿಗ್ಗೆ ಎರಡು ರೂಪಾಯಿಗೋಸ್ಕರ ಅವನ ಬೈಗುಳ ಕೇಳುವ ಮನಸಿಲ್ಲದೆ, ವೋಲ್ವೋ ಬಸ್ ಹತ್ತಿದ್ದರೆ ಮೂವತ್ತೈದು ಕೊಡಬೇಕಾಗಿತ್ತು, ಇದು ಹದಿನೈದು ರೂಪಾಯಿಯಲ್ಲೇ ಮುಗಿಯಿತು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ.ಆದರೂ  ಅವರಿಗೆ ಬರಬೇಕಾಗಿದ್ದ ಎರಡು ರೂಪಾಯಿಗೆ ಅಷ್ಟು ರಾದ್ದಾಂತ ಮಾಡಿದ ಅವರು ನನಗೇಕೆ ಎರಡು ರೂಪಾಯಿ ಕೊಡಲಿಲ್ಲವೋ ತಿಳಿಯಲಿಲ್ಲ. 

Friday 6 June 2014

ತಿಗಣೆ ಪುರಾಣ

ಈಗ್ಗೆ ಆರು ಸಂವತ್ಸರಗಳ ಹಿಂದೆ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವರೆದುರು ನಿಂತು ಕಣ್ಮುಚ್ಚಿ ಕೈ ಮುಗಿದು ಪರಮ ಭಕ್ತಿ ಇಂದ ಕೇಳಿಕೊಂಡಿದ್ದೆ, "ಇಂಜಿನಿಯರಿಂಗ್ ಬೇಗ ಮುಗಿದು ಒಂದು ಕೆಲಸ ಅಂತ ಸಿಕ್ಕಿಬಿಟ್ಟರೆ ಸಾಕು ಇನ್ನೇನು ಆಸೆ ಇಲ್ಲ ದೇವರೇ. ನೀನು ಇದೊಂದು ಬೇಡಿಕೆ ಪೂರ್ತಿ ಮಾಡಿದ್ರೆ ನಾನು ನಿಂಗೆ ಆಯುರ್ಕೊಡ ಮಾಡಿಸ್ತೀವಿ" ಅಂತ. (ಆಯುರ್ಕೊಡ :ಸಾವಿರ ಕೊಡಗಳ ನೀರಿನಿಂದ ದೇವರಿಗೆ ಮಾಡುವ  ಅಭಿಷೇಕ).ಆಸೆ ಎನ್ನುವುದು ಆ ಕ್ಷಣಕ್ಕೆ ಅದೊಂದೇ ಆಗಿತ್ತು. ಇನ್ನೊಂದೇ ಮತ್ತೊಂದೇ ಅಂತ  ಪ್ರತಿ ಬಾರಿ ದೇವರೆದುರು ಅರ್ಜಿ ಹಾಕುವಾಗಲೂ ಇದು ಕೊನೆಯದು ಅಂತಲೇ ಪ್ರಾರ್ಥಿಸುತ್ತೇನೆ. (ಸುಳ್ಳು ಎಂದು ಅರಿವಿದ್ದರೂ ಸಹ !!) ಬೇಡಿಕೆ ಎಷ್ಟು ದೊಡ್ಡದು ಎನ್ನುವುದರ ಮೇಲೆ ಹಣ್ಣುಕಾಯಿ ಮಾಡಿಸುವುದೋ, ಕಾಣಿಕೆ ಹಾಕುವುದೋ ಅಥವಾ ಆಯುರ್ಕೊಡದಂತಹ ಅಭಿಷೇಕ ಮಾಡಿಸುವುದೋ ಎಂಬುದು  ನಿರ್ಧಾರವಾಗುತ್ತದೆ.ಇದು ಲಂಚದ ಅವತಾರ.ಹಾಗೆ ಕೇಳಿಕೊಂಡ ಅವತ್ತು  ದೇವರಿಗೆ ನನ್ನ ಮೊರೆ ಕೇಳಿಸಿತೇನೋ.! ಕೃತಯುಗ, ತ್ರೇತಾಯುಗವಾಗಿದ್ದ ಪಕ್ಷದಲ್ಲಿ ಪ್ರತ್ಯಕ್ಷವಾಗುತ್ತಿದ್ದ ದೇವರು ಕಲಿಯುಗವೆಂದು ಅಲ್ಲಿಂದಲೇ ನನ್ನ ಬೇಡಿಕೆಗೆ ಅಸ್ತು ಎಂದಿದ್ದನೆನಿಸುತ್ತದೆ. ಅಂದುಕೊಂಡಿದ್ದೆಲ್ಲ ಆಗಿದ್ದರೂ ಇವತ್ತಿನವರೆಗೂ ಆ ಹರಕೆ ತೀರಿಸಲಾಗಿಲ್ಲ ನನಗೆ. 


ಎರಡು ವರುಷಗಳ ಹಿಂದೆ ಇಂಜಿನಿಯರಿಂಗ್ ಮುಗಿದಿತ್ತು. ಯಾವುದೇ ಯೋಚನೆ ಇಲ್ಲದೆ ಮೂರು ತಿಂಗಳು ಕಳೆದ ಮೇಲೆ ಕೆಲಸಕ್ಕೆ ಕರೆ ಬಂದಿತ್ತು.ಕೆಲಸ ದೂರದ ಹೈದರಾಬಾದಿನಲ್ಲಿ.ಅಪ್ಪ,ಅಮ್ಮನಿಗೆ ಚಿಂತೆಯಾದರೆ ನನಗೋ ಸಂಭ್ರಮ.ಬೇರೆ ರಾಜ್ಯ,ಅದರಲ್ಲೂ  ಆಂಧ್ರ ಪ್ರದೇಶ. ನಾಲ್ಕು ವರ್ಷ  ಹಾಸ್ಟೆಲ್ನಲ್ಲಿ ಲೆಕ್ಕವಿಲ್ಲದಷ್ಟು ತೆಲುಗು ಸಿನಿಮಾ ನೋಡಿ, ತೆಲುಗು ಕಲಿತುಕೊಂಡಿದ್ದ ನನಗೆ ಅದನ್ನು  ಮಾತನಾಡುವವರ  ಜೊತೆ ನನ್ನ ಭಾಷಾಪ್ರಾವಿಣ್ಯತೆಯ ಪ್ರದರ್ಶನ ಮಾಡಬೇಕೆಂಬ ಹಂಬಲವಿತ್ತು.ಅದಕ್ಕಾಗಿ ಸಿಕ್ಕ ಅವಕಾಶಕ್ಕೆ ಖುಷಿ ಪಟ್ಟಿದ್ದೆ.ನನ್ನ ಧೈರ್ಯ ನೋಡಿ ಅಪ್ಪ,ಅಮ್ಮನಿಗೂ ಧೈರ್ಯ ಬಂದಿರಬೇಕು.ಸರಿ ಹೊರಡಲು ಎಲ್ಲ ತಯಾರಿಯೂ ನಡೆಯಿತು.ತೀರ್ಥಹಳ್ಳಿಯಿಂದ  ಹೈದರಾಬಾದ್ ಗೆ  ರಾಜಹಂಸ ಬಸ್ ಇದೆ.ಅದರಲ್ಲಿ ಹೈದರಾಬಾದ್ ಹೋಗುವುದೆಂದೂ,ಮೊದಲ ಬಾರಿಯ ಪ್ರಯಾಣವಾದ್ದರಿಂದ ಅಪ್ಪ,ತಮ್ಮ ಜೊತೆಗೆ ಬರುವುದೆಂದೂ ಒಟ್ಟಿಗೆ ಮೂರು ಟಿಕೆಟ್ ತೆಗೆದುಕೊಂಡದ್ದಾಯಿತು.ಹೊರಡುವ ಕೊನೆ ದಿನದವರೆಗೂ ಇದ್ದ ಉತ್ಸಾಹ ಹೊರಡುವ ದಿನ ಮಾತ್ರ ಬತ್ತಿಹೋಗಿತ್ತು.ಏನೋ ಹೇಳಲಾಗದ ಚಡಪಡಿಕೆ.ಮತ್ತೆ ಬರುವುದೇ ಇಲ್ಲವೇನೋ ಹಿಂದಿರುಗಿ ಎನ್ನುವ ಭಾವ.ಬಸ್ ಸ್ಟಾಂಡ್ ಗೆ ಬಂದ ಎಲ್ಲರಿಂದ ಬೀಳ್ಕೊಂಡು ಹೊರಡುವಾಗ ಮನಸ್ಸು ಖಾಲಿ ಖಾಲಿ .. 

ಹೊರಡುವ ಮೊದಲು ಮನೆಯಲ್ಲಿ ಅಮ್ಮ ಹೇಳಿದ್ದರು "ಬಸ್ನಲ್ಲಿ ತಿಗಣೆಗಳು ಇರ್ತವೆ ಕಣೇ. ಅಲ್ಲಿಗೆ ಹೋದಮೇಲೆ ಸ್ವಲ್ಪ ಬ್ಯಾಗ್ ಎಲ್ಲ ಸರಿಯಾಗಿ ನೋಡಿಕೋ. ಒಂದು ಸಲ ರೂಂನಲ್ಲಿ ಸೇರಿಕೊಂಡರೆ ಮತ್ತೆ ಅವು ಹಾಗೆ ಜಾಸ್ತಿ ಆಗ್ತಾವೆ" ಅಂತ. "ಸರಿ ಅಮ್ಮ ಹೋದ ತಕ್ಷಣ ಎಲ್ಲ ನೋಡಿ ಜೋಡಿಸಿ ಇಟ್ಕೊಳ್ತಿನಿ " ಅಂತ ಅಂದಿದ್ದೆ ನಾನು.ಬಸ್ನಲ್ಲಿ ನಂಗೆ ತಿಗಣೆಗಳದ್ದೇ ಚಿಂತೆ. ಎಷ್ಟು ಸೇರಿಕೊಂಡಿದೆಯೋ ಬ್ಯಾಗಿನಲ್ಲಿ ಅಂತ. ಶುಕ್ರವಾರ ೩:೩೦ಗೆ ಬಸ್ ಹತ್ತಿದ್ದ ನಾವು ಹೈದರಾಬಾದ್ ತಲುಪುವಷ್ಟರಲ್ಲಿ ಮಾರನೇ ದಿನ ಬೆಳಿಗ್ಗೆ ಸರಿಯಾಗಿ ೮ ಗಂಟೆ.ಹಾಸ್ಟೆಲ್ ಇನ್ನು ಹುಡುಕಿರಲಿಲ್ಲವಾದ್ದರಿಂದ ಎರಡು ದಿನ ಮುಂಚಿತವಾಗಿಯೇ ಹೊರಟು ಒಂದು ವಸತಿಗೃಹದಲ್ಲಿ ಕೊಠಡಿಯೊಂದನ್ನು ತೆಗೆದುಕೊಂಡಿದ್ದೆವು.ಎಲ್ಲ ವಸ್ತುಗಳನ್ನು ಎಸೆದು  ಹಾಸಿಗೆಯ ಮೇಲೆ ಮೈಚೆಲ್ಲಿದವಳಿಗೆ ಮತ್ತೆ ಬಂತು ತಿಗಣೆಯ ಯೋಚನೆ. ತಕ್ಷಣ ಎಲ್ಲ  ಬ್ಯಾಗ್ ಗಳನ್ನೂ ಪರಿಶೀಲಿಸಿದೆ.ಅಲ್ಲಲ್ಲಿ ಒಂದೊಂದು ನಾವಿರುವುದು ನಿಜವೆಂದು ಹೇಳುವಂತೆ ಹರಿಯುತ್ತಿದ್ದವು.ಅಪ್ಪನ ಕೈ ಗಡಿಯಾರದಲ್ಲೊಂದು,ಬ್ಯಾಗಿನ ಅಂಚಿನಲ್ಲೊಂದು ಅವಿತು ಮಲಗಿದ್ದವು. ಅವನ್ನೆಲ್ಲ ಹುಡುಕಿ ಹುಡುಕಿ ಕೊಂದ ಮೇಲೆ ಮನಸ್ಸಿಗೆ ನಿರಾಳವೆನಿಸಿತ್ತು. 



ನಮ್ಮ ಆಫೀಸ್ ಇದ್ದದ್ದು ವಿಪ್ರೊ ಸರ್ಕಲ್ ಹತ್ತಿರದ  ಕ್ಯು ಸಿಟಿ (Qcity ) ಯಲ್ಲಿ.ನನ್ನ ಸ್ನೇಹಿತೆಯರೆಲ್ಲ ಮೊದಲೇ ಹೈದರಾಬಾದಿಗೆ ಬಂದಿಳಿದಿದ್ದರು. ಆಫೀಸ್ ಹತ್ತಿರದಲ್ಲೇ ಯಾವುದಾದರೂ PG ಹುಡುಕುವುದೆಂದು ಅವರ ಜೊತೆಯಾಗಿ ನಾವೂ, ಸುತ್ತ ಮುತ್ತ ಒಂದಿಷ್ಟು PG ಎಂದು ಹೆಸರಿಟ್ಟುಕೊಂಡ ಕಟ್ಟಡಗಳನ್ನು ನೋಡಿದೆವು.ಇದ್ದುದರಲ್ಲಿ ಒಂದು ಚನ್ನಾಗಿತ್ತು.ಎಲ್ಲರಿಗೂ ಹಿಡಿಸಿತ್ತು.ಅಲ್ಲೇ ಸೇರಿಕೊಳ್ಳೋಣವೆಂದರೆ ಅಲ್ಲಿ ಖಾಲಿ ಕೊಠಡಿ ಇರಲಿಲ್ಲ.ಆಗ ಅಲ್ಲಿನ ಮ್ಯಾನೇಜರ್ ನಮ್ಮದೇ ಇನ್ನೊಂದು PG ಇದೆ. ಅಲ್ಲಿ ಒಂದು ವಾರ ಇರಿ. ಆಮೇಲೆ ಇಲ್ಲಿ  ನಿಮಗೆ ವ್ಯವಸ್ತೆ ಮಾಡುತ್ತೇನೆ ಎಂದರು. ಅವರು ಹೇಳಿದ ಇನ್ನೊಂದು PG ನೋಡಲು ಸುಮಾರಾಗಿ ಇತ್ತು.ಸರಿ ಒಂದು ಹತ್ತು ದಿನಗಳೇ ತಾನೇ ಅಂತ ಒಪ್ಪಿಕೊಂಡು ನಮ್ಮ ವಸ್ತುಗಳನ್ನೆಲ್ಲ ಅಲ್ಲಿಗೆ ತಂದಿಟ್ಟುಕೊಂಡ ಮೇಲೆ  ಅಪ್ಪ,ತಮ್ಮ ಹೊರಡುತ್ತೇವೆಂದರು.ಅವರನ್ನು ಕಳಿಸಿ ವಾಪಾಸು ಬಂದಾಗ ರಾತ್ರಿ ಆಗಿತ್ತು. ಊಟ ಮಾಡಿ ಎಲ್ಲವನ್ನೂ ಜೋಡಿಸಿಟ್ಟುಕೊಳ್ಳಲು ರೂಮಿಗೆ ಹೋದೆ. 


ಇಲ್ಲೇ ಇರುವುದು ನಾನು ಇಷ್ಟೊತ್ತು ಹೇಳಿದ ಕಥೆಯ ಸ್ವಾರಸ್ಯ.ರೂಮಿಗೆ ತೆರಳಿ ಲೈಟ್ ಹಾಕಿ ನೋಡಿದವಳು ಬೆಚ್ಚಿಬಿದ್ದೆ.ನಾನು ನನ್ನ ಗೆಳತಿ ಮಲಗುವ ಮಂಚದ ಮೇಲೆಲ್ಲಾ ರಾಶಿ ರಾಶಿ ತಿಗಣೆಗಳು.ಎಲ್ಲೆಲ್ಲಿ ನೋಡಿದರೂ ತಿಗಣೆ.ನಾನು ಅಷ್ಟು ಮುತುವರ್ಜಿಯಿಂದ ನನ್ನ ಬ್ಯಾಗ್ ಗಳ ಸಂದಿಗೊಂದಿಗಳನೆಲ್ಲ ಹುಡುಕಿ, ಇದ್ದ ಕ್ರಿಮಿಗಳನ್ನೆಲ್ಲ ಸಾಯಿಸಿದ್ದೆ. ಆದರೆ ಇಲ್ಲಿ ನೋಡಿದರೆ ಸಾವಿರಾರು ತಿಗಣೆಗಳು. !! ರಣರಂಗದಲ್ಲಿ ಬಡಪಾಯಿ ಸೈನಿಕನೊಬ್ಬ ಒಮ್ಮೆಗೇ ಮೂರು ನಾಲ್ಕು ಎದುರಾಳಿಗಳೊಂದಿಗೆ ಸೆಣಸಿ ಗೆದ್ದು ಹಮ್ಮಿನಿಂದ ಮುಂದುವರೆಯುವಾಗ ಕಣ್ಣ ಮುಂದೆ ಸಾವಿರಾರು ಶತ್ರುಗಳು ಬಂದಂತೆ ಆಗಿತ್ತು ನನಗೆ.ಏನು ಮಾಡಲೂ ತೋಚದೆ ಸುಮ್ಮನೆ ನಿಂತುಬಿಟ್ಟೆ.ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ಕಸ ಗುಡಿಸಲು ಇದ್ದ ಹೆಂಗಸನ್ನು ಕರೆದು ಅವುಗಳನ್ನು ಹೊರಹಾಕಲು ಹೇಳಿದೆನಾದರೂ ಹಾಸಿಗೆಯ ಕೆಳಗೆ,ಕಿಟಕಿ,ಬಾಗಿಲು ಎಲ್ಲೆಂದರಲ್ಲಿ ಅಷ್ಟೇಕೆ  ಇದ್ದ ದೇವರ ಗೂಡಿನಲ್ಲೂ ಅವೇ ಇರುವಾಗ ಅವುಗಳನ್ನು ನಿರ್ನಾಮ ಮಾಡುವುದಾದರೂ ಹೇಗೆ.?? ಅವತ್ತು ರಾತ್ರಿ ತಿಗಣೆ ಕೊಂದ ಜಾಣೆಗೆ ಜಾಗರಣೆ.!

ಒಂದೆರಡು ದಿನ ಹಾಗೇ ಕಳೆಯಿತು.ಬರುಬರುತ್ತಾ ಆ ತಿಗಣೆಗಳ ಇರುವಿಕೆ ಅಭ್ಯಾಸವಾಗಿ ಹೋಯಿತು. ಅವುಗಳ ಕೋಣೆಗೆ ನಾವು ಹೋಗಿ ಇದ್ದುದರಿಂದ ಎಲ್ಲಾ  ಉಪಟಳವನ್ನೂ ಸಹಿಸಲೇಬೇಕಾಗಿತ್ತು. ಶತ್ರುವನ್ನು ಗೆಲ್ಲಲಾಗದಿದ್ದಲ್ಲಿ ರಾಜಿಯಾಗುವುದು ಜಾಣತನ. ಹಾಗೆ ನಡೆದುಕೊಂಡೆವು ಕೂಡ. ೫-೬ ದಿನಗಳಲ್ಲಿ ನಮಗೆ ಹೊಸ PG ಯಲ್ಲಿ ರೂಂ ಸಿಕ್ಕಿತು. ಅಂತೂ ಬಿಡುಗಡೆ ಹೊಂದಿ ಹೊಸ PG ಯಲ್ಲಿ ಸೇರಿಕೊಂಡ ಮೇಲೆ ಒಂದು ತಿಗಣೆಯೂ ಕಾಣಲಿಲ್ಲ ನನಗೆ. 

ಅಪರೂಪಕ್ಕೊಮ್ಮೆ ಇದು ನೆನಪಾಗುತ್ತದೆ.ಕೆಲವೊಮ್ಮೆ ಜೀವನದಲ್ಲಿ ನಾವು ಬೇಡವೆಂದುಕೊಂಡಿದ್ದು ಆಗಿರುತ್ತದೆ.ಅದಕ್ಕೆ ಈ ತಿಗಣೆ ಕಥೆಯೇ ಉದಾಹರಣೆ. ಬೇಡ ಬೇಡ ಎಂದುಕೊಂಡು ಅವುಗಳೊಂದಿಗೇ ಹೊಂದಿಕೊಂಡದ್ದು ಯೋಚಿಸಿದಾಗ ಮಾತ್ರ ಸಣ್ಣ ಮೆಚ್ಚುಗೆಯೊಂದು ಮೂಡುತ್ತದೆ. 

Monday 12 May 2014

ಅರಮನೆ ತೋಟದಲ್ಲಿ..

ಇಂಜಿನಿಯರಿಂಗ್ ಮುಗಿಸಿಕೊಂಡು ಯಾವ ಯೋಚನೇನೂ ಇಲ್ದೆ ,ಎನೂ ಕೆಲಸ ಇಲ್ದೆ  ಮನೆಯಲ್ಲಿ ಕೂತಿದ್ದೆ. ಮಳೆಗಾಲದ ದಿನಗಳವು.ಅಮ್ಮ ಹಾಸ್ಟೆಲ್ ನಿಂದ ಬಂದ ಮೊದಲೆರಡು ದಿನಗಳು ಚನ್ನಾಗಿ ನೋಡಿಕೊಂಡರು (ಯಾವ ಕೆಲಸವನ್ನೂ ಹೇಳದೆ..!!). ಆಮೇಲೆ ಅಡಿಗೆ ಕಲಿ,ಹೊಸ್ಲಿಗೆ ರಂಗೋಲಿ ಹಾಕು,ನಂಗೆ ಕೆಲಸ ಮಾಡ್ಕೊಡು ಅಂತೆಲ್ಲ  ಹೇಳೋಕೆ ಶುರು ಮಾಡಿದ್ರು.ಹೇಳಿದ ಕೆಲಸ ಮಾಡಿಲ್ಲ ಅಂದ್ರೆ "ಅಯ್ಯೋ ನಾನು ನಿನ್ನ ಒಳ್ಳೇದಕ್ಕೆ ಹೇಳೋದು. ನಾಳೆ ಮದ್ವೆ ಆದ್ಮೇಲೆ ಇದೆಲ್ಲ ಕೆಲಸ ಮಾಡಬೇಕಲ್ವ?.ಎಲ್ಲ ಕೆಲಸ ಕಲ್ತಿರ್ಬೇಕು ಹೆಣ್ಣುಮಕ್ಕಳು. ಇಲ್ಲಾಂದ್ರೆ ನಿಮ್ಮಮ್ಮ ಇದೇ ಕಲ್ಸಿದ್ದ ಅಂತ ನಂಗೆ ಬೈತಾರೆ"  ಅಂತ ರಗಳೆ ಶುರು ಮಾಡ್ತಿದ್ರು. ಇನ್ನೇನು ಬೇಜಾರಾಗಿ ವಿರಕ್ತಿ ಹುಟ್ಟಬೇಕು ಜೀವನದಲ್ಲಿ,ಅಷ್ಟರಲ್ಲಿ  ಚಿಕ್ಕಮ್ಮ ಫೋನ್ ಮಾಡಿ "ಮನೇಲಿ ಒಬ್ಳೆ ಕೂತ್ಕೊಂಡು ಏನ್ಮಾಡ್ತಿ.?ಬಾ ನಮ್ಮನೆಗೆ. ಎಲ್ಲ ಕಡೆ ಸುತ್ತಬಹುದು" ಅಂತ ಕರೆದರು. ವೈದ್ಯ ಹೇಳಿದ್ದು ಹಾಲು ಅನ್ನ ,ರೋಗಿ ಬಯಸಿದ್ದು ಹಾಲು ಅನ್ನ ಅನ್ನೋ ಹಾಗೆ ನಂಗು ಅದೇ ಬೇಕಾಗಿತ್ತು. ತಕ್ಷಣ ಹೊರಟೆ ಅವರೂರ ಕಡೆಗೆ.

ಮಳೆಗಾಲದಲ್ಲಿ ಮಲೆಕಾಡು  ಹೇಗಿರುತ್ತದೆ ಎಂದರೆ ಯಾರೋ ಆಗಷ್ಟೇ ರಂಗೋಲಿ ಬಿಡಿಸಿ ಬೇರೆ ಬಣ್ಣ ಹಾಕಲು ಮರೆತು ಬರೀ ಹಸಿರನ್ನೇ ಚೆಲ್ಲಿದ್ದಾರೇನೋ  ಎನ್ನಿಸುತ್ತದೆ.ಧೋ ಎಂದು ಸುರಿಯುವ ಮಳೆ.ಕೆಸರು ತುಂಬಿಕೊಂಡ ಮಣ್ಣಿನ ರಸ್ತೆಗಳು. ಆ ಸಮಯದಲ್ಲಿ ಹಕ್ಕಿಗಳೂ ಕೂಡ ಗೂಡು ಸೇರಿ ಬೆಚ್ಚಗೆ ಮುದುಡಿ ಮಲಗಿರುತ್ತವೆ. ಬೇಸಿಗೆಯಲ್ಲಿ ಉಸಿರೇ ಇಲ್ಲದೆ ಮಲಗಿರುವ ಹೊಳೆ,ಹಳ್ಳಗಳು ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತವೆ.ಆ ಕೆಂಪು ನೀರನ್ನೂ,ಅದರ ರಭಸವನ್ನೂ ನೋಡಬೇಕು ಆಗ.. ನಮ್ಮೂರಿನ ಈ ಹಳ್ಳ ಕೊಳ್ಳಗಳು ನೀರನ್ನೆಲ್ಲ ಹೊತ್ತೊಯ್ದು ಸುರಿಯುವುದು ತುಂಗೆಗೆ. ತನ್ನ ಇಕ್ಕೆಲಗಳನ್ನು ವಿಸ್ತರಿಸಿಕೊಳ್ಳುತ್ತಾ ಗಂಭೀರೆಯಾಗುತ್ತಾಳೆ, ಮಂದಗಮನೆಯಾಗುತ್ತಾಳೆ ನಮ್ಮ ತುಂಗೆ.                                             
                            
 ಹರಿಹರಪುರದಲ್ಲಿ ತುಂಗೆ..
ಚಿಕ್ಕಮ್ಮನ ಮನೆ ಇದ್ದದ್ದು ಶೃಂಗೇರಿಗೆ ಸಮೀಪದ ಬಿಳುವಿನಕೊಡಿಗೆಯಲ್ಲಿ. ಮಲೆನಾಡಿನ ಸೆರಗಿನಲ್ಲಿ ಇರುವ ಒಂದು ಪುಟ್ಟ ಹಳ್ಳಿ ಅದು.ಅವತ್ತು ಅವರ ಮನೆಯ ಹತ್ತಿರ ಇರುವ ಬಸ್ ಸ್ಟಾಪ್ ನಲ್ಲಿ ಇಳಿದಾಗ ಸೂರ್ಯನಾಗಲೇ ಅಸ್ತಮಿಸಿದ್ದ. ಮಳೆ ಮಾತ್ರ ಒಂದೇ ಸಮನೆ ಸುರಿಯುತ್ತಿತ್ತು. ನನ್ನನ್ನು ಕರೆದೊಯ್ಯಲು ಬಂದಿದ್ದ  ತಮ್ಮ,ತಂಗಿ  ಕಾಯುತ್ತಾ ನಿಂತಿದ್ದರು.ಕತ್ತಲು ಆಗಲೇ ನಿಧಾನವಾಗಿ ಪಸರಿಸತೊಡಗಿತ್ತು.ದಾರಿ ಕಾಣದಿದ್ದರೂ,ಅಭ್ಯಾಸ ಬಲದಿಂದ ಅವರಿಬ್ಬರು ಮುಂದೆ ನಡೆಯುತ್ತಿದ್ದರು.ಅವರ ಹಿಂದೆ ನಾನು ಇಂಬಳಗಳಿಗೆ ಹೆದರಿ ಹೆದರಿ ಹೆಜ್ಜೆ ಇಡುತ್ತಿದ್ದೆ. ಮನೆಗೆ ಬಂದ  ತಕ್ಷಣ ಮೊದಲು ಮಾಡಿದ ಕೆಲಸವೆಂದರೆ  ಕಾಲಿನಲ್ಲಿ ಇಂಬಳಗಳಿಗಾಗಿ ಹುಡುಕಿದ್ದು. ಸಧ್ಯ ಒಂದೂ ಸಿಗಲಿಲ್ಲ.ಅವರ ಮನೆಯಲ್ಲಿ ಚಿಕ್ಕಮ್ಮ,ಚಿಕ್ಕಪ್ಪ,ಅಜ್ಜ,ದೊಡ್ಡಮ್ಮ ಎಲ್ಲರೂ ಆದರದಿಂದ ಬರಮಾಡಿಕೊಂಡರು. ಪ್ರಯಾಣದ ಆಯಾಸ,ಸುಸ್ತು  ಊಟವಾದ ತಕ್ಷಣ ನಿದ್ರೆಗೆ ಶರಣಾಗುವಂತೆ ಮಾಡಿತ್ತು. 

ಅಲ್ಲಿದ್ದ ಅಜ್ಜ ..
ಅಲ್ಲಿ ಸುತ್ತ ಮುತ್ತ ತಿರುಗಾಡಲು ಹೋಗುವುದೆಂದು ಮೊದಲೇ  ತೀರ್ಮಾನವಾಗಿತ್ತಲ್ಲ.! ಮರುದಿನ ಬೆಳಿಗ್ಗೆ  ಶೃಂಗೇರಿ ದೇವಸ್ಥಾನ, ಮದ್ಯಾಹ್ನ ಹರಿಹರಪುರದ ಮಠ, ತೂಗುಸೇತುವೆ ಹಾಗೂ ಅಲ್ಲಿಯ ಗುರುಕುಲವನ್ನು ನೋಡಿಕೊಂಡು ಬಂದಿದ್ದೆವು.ಅದರ ಮಾರನೇ ದಿನ, ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ  ಸಿರಿಮನೆ ಜಲಪಾತಕ್ಕೆ ನಮ್ಮ ಪಯಣ. ಕಿಗ್ಗದ ಋಷ್ಯಶೃಂಗ ದೇವಾಲಯದ ಒಳಹೊಕ್ಕು, ನಮಸ್ಕರಿಸಿ ಸಿರಿಮನೆ ಜಲಪಾತದತ್ತ ನಮ್ಮ ಚಾರಣ ಪ್ರಾರಂಭಿಸಿದೆವು. "ಇಲ್ಲೆಲ್ಲಾ ನಕ್ಸಲೈಟ್ಸ್ ಇರ್ತಾರೆ ಕಣೆ" ಅಂತ ಹೆದರಿಸಿದ್ದ  ನನ್ನ ತಮ್ಮ. ಆದರೆ ಯಾರೂ ಕಣ್ಣಿಗೆ ಬೀಳಲಿಲ್ಲ. ಸುಮಾರು  ೫ ಕಿ.ಮೀ ದೂರವನ್ನು ಕಾಲುನಡಿಗೆಯಲ್ಲಿ ಕ್ರಮಿಸಿ ಜಲಪಾತವನ್ನು ತಲುಪಿದ್ದು ಅವಿಸ್ಮರಣೀಯ ಅನುಭವ. ಜಲಪಾತ ಸಮೀಪಿಸಿದಾಗ ಅದರ ಭೋರ್ಗರೆತ ಕೇಳಿ ಭಯವಾದದ್ದು ನಿಜವಾದರೂ, ಹತ್ತಿರದಿಂದ ನೋಡಿದಾಗ ಮಾತ್ರ ಮನಸ್ಸು ಮೂಕವಾಗಿತ್ತು.                      
     
ಮೈದುಂಬಿರುವ ಜಲಧಾರೆ
ಮೂರನೇ ದಿನ ಚಿಕ್ಕಮ್ಮನ ಹಿಂದೆ ಅಡಿಗೆ ಮನೆ ಸೇರಿಕೊಂಡು ಬಿಟ್ಟಿದ್ದೆ. ಆಗ ಚಿಕ್ಕಮ್ಮ ಅರಮನೆತೋಟಕ್ಕೆ ಹೋಗಿ ಬನ್ನಿ. ಹಾಗೇ ಕಮ್ಮರಡಿಯ ಬೆಣ್ಣೆ ಗುಡ್ಡ ನೋಡಿಕೊಂಡು,ದೇವಸ್ಥಾನಕ್ಕೆ ಹೋಗಿ ಬನ್ನಿ ಅಂದರು.ನನಗೆ ಅರಮನೆ ತೋಟದಲ್ಲಿ ಏನಿದೆ ಅಂತ ಗೊತ್ತಿರಲಿಲ್ಲ.ಅದು ಆ ಮನೆಯಲ್ಲಿದ್ದ ದೊಡ್ಡಮ್ಮನ ತಂಗಿಯ ಮನೆ. ಇಷ್ಟೇ ಆಗಿದ್ದಿದ್ದರೆ ಬರೆಯಲು ಏನೂ ಇರುತ್ತಿರಲಿಲ್ಲ.ಆದರೆ ಅವರ ಮನೆ ಇನ್ನೂರು ವರುಷಗಳಿಗಿಂತ ಹಳೆಯದು.ಅದನ್ನು ಯಾವ ಕಾಲದಲ್ಲಿ ಕಟ್ಟಿದರು ಎಂಬ ಮಾಹಿತಿ ಮನೆಯವರಿಗೂ ತಿಳಿದಿರಲಿಲ್ಲ. ಅವರ ಅಜ್ಜನ ಅಜ್ಜ ಕಟ್ಟಿಸಿದ ಮನೆ ಇರಬಹುದು ಎಂಬುದು ಅವರ ಹೇಳಿಕೆ. ಅದನ್ನೊಂದು ನೋಡೇ ಬಿಡುವ ಎಂದು ಅರಮನೆ ತೋಟಕ್ಕೆ ಹೊರಟೆವು. 

ಮನೆಯ ಮುಂಬಾಗ
ತೀರ್ಥಹಳ್ಳಿಯ ಸುತ್ತಮುತ್ತ ಇಂತಹ ಮನೆಗಳು ಕೆಲವಾರು ಇವೆ. ಆದರೆ ಅವುಗಳಲ್ಲಿ ಹೆಚ್ಚಿನ ಮನೆಗಳಿಗೆ ಹೆಂಚು ಹೊದೆಸಲಾಗಿದೆ. ಈ ಮನೆ ಮಾತ್ರ ಇನ್ನೂ ಸೋಗೆ ಗರಿಗಳಿಂದ ಮುಚ್ಚಲ್ಪಟ್ಟಿತ್ತು.ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಮನೆಯ ಎಲ್ಲ ಸದಸ್ಯರೂ ಬಂದು ಮಾಡು ಬಿಚ್ಚಿ ಸೋಗೆ ಹೊದೆಸುತ್ತಾರಂತೆ. ಹೀಗೆ ದೀಪಾವಳಿ, ಗೌರಿ ಹಬ್ಬಗಳು ಬಂದಾಗ ಮಾತ್ರ ಮನೆ ತುಂಬಾ ಜನಗಳು. ಉಳಿದ ಸಮಯದಲ್ಲಿ ಇರುವವರು ಇಬ್ಬರೇ.!!

ಮುಂಚೆಕಡೆಯಲ್ಲಿ ನಾನು
ಅಲ್ಲಿಗೆ ಹೋಗುವಷ್ಟರಲ್ಲಿ ಹೆಚ್ಚು ಕಡಿಮೆ ಊಟದ ಸಮಯವಾಗಿತ್ತು.ಕೆಲವೊಂದು ಛಾಯಚಿತ್ರಗಳನ್ನು ತೆಗೆದುಕೊಂಡೆ.ಊಟ ಆದ ಮೇಲೆ, ಮನೆಯವರು ತುಂಬಾ ಆಸ್ಥೆಯಿಂದ ಇಡೀ ಮನೆಯನ್ನು ತೋರಿಸಿದರು. ಮುಂಚೆಕಡೆ, ನಡುಮನೆ, ಕಡಿಮಾಡು, ಉಪ್ಪರಿಗೆ, ಅಡಿಗೆ ಮನೆ, ದೇವರಕೋಣೆ ಹೀಗೆ ಇಡೀ ಮನೆ ಸುತ್ತಿದ್ದಾಯ್ತು. ಹೆಚ್ಚಿನ ಕೋಣೆಗಳಲ್ಲಿ ಗವ್ ಎನ್ನುವ ಕತ್ತಲೆ ಹಾಗೂ ನಿಶ್ಯಬ್ದ. ದಪ್ಪ ದಪ್ಪದ ಮಣ್ಣಿನ ಗೋಡೆಗಳು.ಬೃಹತ್ ಗಾತ್ರದ ಕಂಬಗಳು.ಸಣ್ಣ ಸಣ್ಣ ಕಿಟಕಿಗಳು,ಹೊಗೆ ಅಟ್ಟ (ಹೊಗೆ ಅಟ್ಟ ಎಂದರೆ  ಹಿಂದೆಲ್ಲ ಕಟ್ಟಿಗೆ ಒಲೆಗಳು ಇದ್ದ ಕಾರಣ ಹೊಗೆ ಮನೆಯಿಂದ ಹೊರಗೆ ಹೋಗಲು ಬಿಟ್ಟಿರುತ್ತಿದ್ದ ಸ್ವಲ್ಪ ಜಾಗ ), ಪಣತ (ಭತ್ತ ಶೇಖರಿಸುವ ಗೂಡು), ಹಳೆಯ ಗಡಿಯಾರ, ಶಂಖ, ಸಂದೂಕ  ಹೀಗೆ ಎಷ್ಟೋ ನಮಗೆ ತಿಳಿಯದ ವಸ್ತುಗಳು.!! ಅವನ್ನೆಲ್ಲ ನೋಡಿ ಖುಷಿ ಆಗಿತ್ತು. ಬಂದಿದ್ದು ವ್ಯರ್ಥವಾಗಲಿಲ್ಲವಲ್ಲ ಎಂದು ಸಮಾಧಾನವೂ ಆಯಿತು.                                       
                     
ಚಿಕ್ಕ ಕಿಟಕಿ
                   
ಹಳೆಯ ಗಡಿಯಾರ
ಇಡೀ ಮನೆ ನೋಡುವಷ್ಟರಲ್ಲಿ ಸುಮಾರು ಒಂದು ಗಂಟೆಗಿಂತ ಹೆಚ್ಚೇ ಆಗಿತ್ತು. ಆಮೇಲೆ ಆ ಮನೆಯ ಆಂಟಿ, ಅವರೇ ಮಾಡಿದ ಗೆಜ್ಜೆ ವಸ್ತ್ರಗಳನ್ನು ತೋರಿಸಿದರು.ಇನ್ನು ಹೊರಡೋಣವೆಂದು ನಾವು ಮಾತನಾಡಿಕೊಂಡೆವು. ಆಗ ಆ ಮನೆಯವರು ಹೇಳಿದರು "ನೀವು ಇನ್ನೊಂದ್ಸಲ ಬರೋವಷ್ಟ್ರಲ್ಲಿ ಈ ಮನೆ ಇರತ್ತೋ ಇಲ್ವೋ ಗೊತ್ತಿಲ್ಲ.! ಕಮ್ಮರಡಿ ಹತ್ರ ಒಂದು ಮನೆ ಕಟ್ಟಿಸ್ತಾ  ಇದೀವಿ. ಈ ಮನೆಯನ್ನ ಕೆಡವಿ ಉಪಯೋಗಕ್ಕೆ ಬರುವ ವಸ್ತುಗಳನ್ನೆಲ್ಲ ತೆಗೆದುಕೊಳ್ತೀವಿ" ಅಂತ. ನನಗೆ ಬೇಜಾರಾಯಿತು. ಅಯ್ಯೋ ಪುರಾತನ ಕಾಲದಿಂದ ಬಂದಿದ್ದು. ನಮ್ಮಂತಹವರು ನೋಡಬೇಕಾದ ಮನೆ. ಯಾಕೆ ಇದನ್ನು ಉಳಿಸಿಕೊಳ್ಳಲಾರರು ಎಂದುಕೊಂಡೆ. ಆಮೇಲೆ ಮತ್ತೆ ಯೋಚಿಸಿದಾಗ, ಅವರಿಗೇನು ಹುಟ್ಟಿ ಬೆಳೆದ ಮನೆಯ ಮೇಲೆ ಅಭಿಮಾನ ಇರುವುದಿಲ್ಲವೇ.! ಒಂದು ಕಾಲದಲ್ಲಿ ಜನ ನಿಬಿಡವಾಗಿದ್ದ ಮನೆಯಲ್ಲಿ ಇವತ್ತು ಇರುವುದು ಇಬ್ಬರೇ.ಮಕ್ಕಳೂ ಬೆಂಗಳೂರು ಸೇರಿ ಸುಮಾರು ವರ್ಷಗಳೇ ಕಳೆದಿವೆ.ಇನ್ನು ಅಲ್ಲಿ ಬಂದು ಇರುವವರು ಯಾರು.? ಯಾವುದೂ ಶಾಶ್ವತವಲ್ಲ. ಎಲ್ಲವೂ ಒಂದು ದಿನ ಈ ಭೂಮಿಯ ಬಿಟ್ಟು ತೆರಳಬೇಕಲ್ಲವೇ.? ಅವರ ನಿರ್ಧಾರ ಸರಿಯಾದದ್ದೇ ಎಂದೆನ್ನಿಸಿತು.

ಮಳೆಯಲ್ಲಿ ತೋಯುತ್ತಿರುವ ಮನೆಯ ಹೊರನೋಟ
ಅವತ್ತು ಅಲ್ಲಿಂದ ಹೊರಟು ಕಮ್ಮರಡಿಯ ಬೆಣ್ಣೆ ಗುಡ್ಡ ಹತ್ತಿದೆವು. ಎಷ್ಟು ಜಾಗರೂಕಳಾಗಿದ್ದರೂ ಒಂದು ಇಂಬಳ ಕಚ್ಚಿಯೇ ಬಿಟ್ಟಿತ್ತು. ಅದನ್ನು ಕಿತ್ತೆಸೆದು, ಬೆಣ್ಣೆ ಗುಡ್ಡದಲ್ಲಿ ಒಂದಷ್ಟು ಹೊತ್ತು ಮಳೆಯಲ್ಲಿ ನೆನೆದು, ಇನ್ನೊಂದಷ್ಟು ಛಾಯಾಚಿತ್ರಗಳನ್ನು ತೆಗೆದುಕೊಂಡು ದೇವಸ್ಥಾನಕ್ಕೆ ಹೊರಟೆವು. 
                         
ಬಿಸಿ ಬಿಸಿ ತಿಂಡಿ ಮಾಡುತ್ತಿದ್ದ ಚಿಕ್ಕಮ್ಮ.. 
ದೇವಸ್ಥಾನ ನೋಡಿ ಬಸ್ ಹತ್ತಿ ಮನೆ ಕಡೆ ನಡೆದವರಿಗೆ ಚಿಕ್ಕಮ್ಮ ಮಾಡಿದ ಬಿಸಿ ಬಿಸಿ ನಿಪ್ಪಟ್ಟು ಕಾಯುತ್ತಿತ್ತು. ಬಿಸಿ ಕಾಫಿಯ ಜೊತೆ ನಿಪ್ಪಟ್ಟು ತಿನ್ನುತ್ತಾ ಹರಟುತ್ತಾ ಕುಳಿತೆವು  ಆ ಆಹ್ಲಾದಕರ ವಾತಾವರಣದಲ್ಲಿ... 

Saturday 10 May 2014

ನೆನಪಿನ ಪುಟಗಳಲ್ಲಿ..

ಎಷ್ಟೋ ನೆನಪುಗಳು ಬರೆಯದೇ ಹಾಗೇ ಉಳಿದುಬಿಟ್ಟಿವೆ.ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ,ಬೀಳುವ ತುಂತುರು ಮಳೆ ಮತ್ತೆ ಮತ್ತೆ ತೀರ್ಥಹಳ್ಳಿಗೆ ಕರೆದೊಯ್ಯುತ್ತಿದೆ. ಏನಾದರೂ ಬರೆಯಬೇಕು ಎಂದುಕೊಂಡಾಗ ನೆನಪಾದದ್ದು ಇದು. 


ದಿನಾ ೪:೩೦ ಕ್ಕೆ  ಬಿಡುವ ನಮ್ಮ St.Mary's ಶಾಲೆಯಲ್ಲಿ ಅವತ್ತೊಂದು ದಿನ ಬೇಗ ಬಿಟ್ಟಿದ್ದರು.ಅವತ್ತು ೧೨:೩೦ ಕ್ಕೆ  ರಜ ಘೋಷಿಸಲಾಗಿತ್ತು. ಎಷ್ಟು ಸಂಭ್ರಮವೋ ಆ ದಿನ. ನೀಲಿ ನೀಲಿ ಬಣ್ಣದ ಸಮವಸ್ತ್ರ ಧರಿಸಿದ ಮಕ್ಕಳೆಲ್ಲ ಮನೆಗೆ ಓಡುತ್ತಿದ್ದರು. ಶಾಲೆಗೆ ರಜ ಕೋಳಿ ಮಜ ಅಂತ ಕೂಗುತ್ತಿದ್ದರು.ನಾವೂ ಅವರೊಂದಿಗೆ ದನಿಗೂಡಿಸಿದೆವು.ದಿನವೂ ಆಟೋದಲ್ಲಿ ಮನೆಗೆ ಹೋಗುತ್ತಿದ್ದೆವಾದರೂ ಅವತ್ತು ಮದ್ಯಾಹ್ನ ಶಾಲೆಗೆ ರಜ ಕೊಡ್ತಾರೆ ಅಂತ ಯಾರಿಗೆ ಗೊತ್ತಿತ್ತು.? ದಿನಾ ಆಟೋ ಬಂದಾಗ ನಮ್ಮಾಟೋ ಬಂತು ನಮ್ಮಾಟೋ ಬಂತು ಅಂತ ಕೂಗುವುದು ಅಭ್ಯಾಸ.ಆದರೆ ಅವತ್ತು ಆಟೋ ಬರಲೇ ಇಲ್ಲ. ಮನೆಗೆ ಫೋನ್ ಮಾಡೋಕೆ coin ಫೋನ್ ಗಳಾಗಲಿ,cell ಫೋನ್ ಗಳಾಗಲಿ ಇರಲಿಲ್ಲ. ಒಂದೇ ಆಟೋದಲ್ಲಿ ಹೋಗುವ ನಾವು ನಾಲ್ಕೈದು ಜನ ನಡೆದುಕೊಂಡು ಹೋಗೋಣ ಎಂದು ತೀರ್ಮಾನಿಸಿಕೊಂಡೆವು.ಗಣೇಶ ಬಸ್ ನಮಗೋಸ್ಕರವೇ ಎಂಬಂತೆ ಕಾಯುತ್ತಿತ್ತು.ಬಸ್ ಚಾರ್ಜ್ ಹೆಚ್ಚೇನು ಇರುತ್ತಿರಲಿಲ್ಲ. ಆದರೂ ಇನ್ನೂ ಮಳೆಗಾಲ ಮುಗಿದಿರಲಿಲ್ಲ.ಮಳೆಗಾಲದಲ್ಲಿ ನಡೆಯುವ ಅನುಭವವನ್ನು ಕಳೆದುಕೊಳ್ಳಲು ಇಷ್ಟಪಡದೆ  ನಾನು,ಸ್ಪೂರ್ತಿ,ಅರ್ಚನ,ಅನುಪಮ,ಅಮೃತ ಇಷ್ಟು ಜನ ಒಟ್ಟಿಗೆ ನಡೆಯುತ್ತಾ ಮನೆಕಡೆ ಹೊರಟೆವು. 

ಸುಮ್ನೆ ನಡೆಯೋದು ನಮಗೆ ಗೊತ್ತೇ ಇರ್ಲಿಲ್ಲ. ಅಂತ್ಯಾಕ್ಷರಿ ಆಟ ಆಡುತ್ತಾ,ಮಳೆಯಲ್ಲಿ ನೆನೆಯುತ್ತಾ,ಹಾರುತ್ತಾ ,ಕೂಗುತ್ತಾ ಮುಂದುವರೆಯುತ್ತಿದ್ದೆವು. ನೋಡಿದವರೆಲ್ಲ ವಾನರ ಸೈನ್ಯ ಅಂತಾನೆ ಅಂದುಕೊಳ್ಳುತ್ತಿದ್ದರೆನೋ!! ಅಷ್ಟೇ ಅಲ್ಲ, ಯಾವ ಬಾವೀಲಿ ಎಷ್ಟು ನೀರಿದೆ ಅಂತ ಇಣುಕಿ ನೋಡೋದು. ಬಾವಿ ನೀರು ಪ್ರಶಾಂತವಾಗಿದ್ದರೆ ದೊಡ್ಡ ಕಲ್ಲು ಎತ್ತಿ ಬಾವಿಗೆ ಹಾಕೋದು. ದಾರಿಯಲ್ಲಿ ಬರುವ ಹೊಳೆ ಎಷ್ಟು ತುಂಬಿದೆ ಅಂತ ಪರೀಕ್ಷೆ ಮಾಡೋದು,ಚಂದದ ಕಾರುಗಳನ್ನ ಕಣ್ಣರಳಿಸಿ ನೋಡುವುದು. ಹಳ್ಳಗಳಲ್ಲಿ ಎಲೆಗಳನ್ನ ತೇಲಿ ಬಿಡೋದು. ನೀರಲ್ಲಿ ಯಾವುದಾದರೂ ಹುಳ ಬಿದ್ದಿದ್ದರೆ ಎಲೆಗಳ ಸಹಾಯದಿಂದ ಮೇಲೆತ್ತುವುದು. ಹೀಗೆ ಮಾಡದ ತರಲೆಗಳೇ ಇಲ್ಲವೇನೋ..!!
                                      

ಅವತ್ತೂ ಹಾಗೆಲ್ಲ ತರಲೆಗಳನ್ನು ಮಾಡುತ್ತಲೇ ಮನೆಯ ದಾರಿ ಹಿಡಿದೆವು.ಆದರೂ ಮನೆಗೆ ಹೋಗಲು ಮನಸಿಲ್ಲ. ಹೇಗಿದ್ದರೂ ಶಾಲೆ  ಬೇಗ ಮುಗಿದಿದೆ ಎಂದು ಮನೆಯವರಿಗೆ ಗೊತ್ತೇ ಇಲ್ವಲ್ಲ.! ಇಲ್ಲೇ ಸಾಯಂಕಾಲದವರೆಗೂ ಆಟ ಆಡ್ತಾ ಇದ್ಬಿಡೋಣ. ದಿನಾ ಮನೆಗೆ ಹೋಗೋ ಹೊತ್ತಿಗೆ ಹೋದ್ರಾಯ್ತು ಅಂತ ಮಾತನಾಡಿಕೊಂಡೆವು. ದಾರಿಯಲ್ಲಿ ಯಾವುದೊ ಒಂದು ಹಳ್ಳ ಇತ್ತು. ಅಲ್ಲಿ ನೀರಾಡಿದ್ದು ಆಡಿದ್ದೇ. ಹೇಳುವವರು ಕೇಳುವವರು ಯಾರೂ ಇರಲಿಲ್ಲ. ಮದ್ಯಾಹ್ನ ಊಟಕ್ಕೆಂದು ತಂದ ಡಬ್ಬಿಗಳಿಂದ ವನಭೋಜನ ನಡೆಸಿದೆವು. ಹಾಗೆ ಸಾಯಂಕಾಲ ಆಗಿದ್ದೇ ಗೊತ್ತಾಗ್ಲಿಲ್ಲ.ಇನ್ನೂ ತಡವಾದರೆ ಮನೆಯಲ್ಲಿ ಕೋಲು ತೆಗೆದುಕೊಳ್ಳುತ್ತಾರೆಂದು ಭಯದಿಂದ ಬೇಗ ಮನೆ ಕಡೆ ನಡೆದೆವು. 


ಸ್ವಲ್ಪ ದೂರ ನಡೆದಿಲ್ಲ ,ಅಷ್ಟರಲ್ಲೇ ಚಿಕ್ಕಮ್ಮ ಬರುತ್ತಿರುವುದು ಕಾಣಿಸಿತು.ಅವರನ್ನ ನೋಡಿದಾಗ ಗಾಬರಿ ಆಯಿತು. ಯಾಕೋ ಏನೋ ಎಡವಟ್ಟು ಆಗಿದೆ ಅಂತ ಅನ್ನಿಸಿತು. ಚಿಕ್ಕಿ ಏನೀಕಡೆ ಬಂದ್ರಿ ಅಂತ ಕೇಳಿದೆವು. ಅದಕ್ಕೆ ಅವ್ರು ಏನು ಇಲ್ಲ ನಡೀರಿ ಮನೆಗೆ ಅಂದ್ರು. ನಾವು ಏನು ಕಾದಿದೆಯೋ ಮನೆಯಲ್ಲಿ ಅಂತ ಭಯದಿಂದ ಮನೆ ಕಡೆ ಹೆಜ್ಜೆ ಹಾಕಿದೆವು.ಮನೆಯಲ್ಲಿ ನೋಡಿದರೆ ಅಪ್ಪ ಕೋಲು ಹಿಡ್ಕೊಂಡು ಕಾಯ್ತಿದಾರೆ!! ಎಲ್ಲಿಗೆ ಹೋಗಿದ್ರಿ ಇಷ್ಟೊತ್ತು ಅಂತ ಜೋರಾಗಿ ಕೇಳಿದರು. ನಾವು ಎನೂ ಮಾತಾಡದೆ ಸುಮ್ನೆ ಇದ್ವಿ. ಒಂದಿಷ್ಟು ಬೈದು ಒಳಗೆ ಕಳಿಸಿದರು. ಶಾಲೆ ಬೇಗ ಬಿಟ್ಟಿದ್ದು ಅವರಿಗೆ ಹೇಗೆ ಗೊತ್ತಾಯ್ತು ಅನ್ನೋದು ನಮಗಿದ್ದ ಪ್ರಶ್ನೆ. ತೀರ್ಥಹಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ದೊಡ್ಡಪ್ಪ ಶಾಲೆ ಬಿಟ್ಟ ತಕ್ಷಣ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದರಂತೆ. ಸಾಲದೆಂಬಂತೆ ಸ್ವಲ್ಪ ಹೊತ್ತಾದ ಮೇಲೆ ಮಕ್ಕಳು ಇನ್ನೂ ಮನೆಗೆ ಬಂದಿಲ್ವಾ!! ಅಂತ ಇನ್ನೊಂದು ಸಲ ಫೋನ್ ಮಾಡಿದ್ದರಂತೆ. ಅದ್ಕೆ ಅಪ್ಪಂಗೆ ಸ್ವಲ್ಪ ಸಿಟ್ಟು ಜಾಸ್ತಿನೇ ಬಂದಿತ್ತು.ಮನೇಲಿ ಬೈಸ್ಕೊಳೋ ಹಾಗೆ ಮಾಡಿದ್ರಲ್ಲ ಅಂತ ನಮಗೂ ಅವತ್ತು ದೊಡ್ಡಪ್ಪನ ಮೇಲೆ ಸಿಟ್ಟು ಬಂದಿತ್ತು.

ಇದೆಲ್ಲ ಇವಾಗ ನೆನೆಸಿಕೊಂಡರೆ ಖುಷಿ ಆಗತ್ತೆ. ಎಷ್ಟು ಚನ್ನಾಗಿತ್ತು ಆ ದಿನಗಳು ಅಂತ ಅನ್ಸತ್ತೆ. ಮತ್ತೆ ಆ ಸಮಯ ಬರಬಾರದೇ ಅಂತ ಮನಸ್ಸು ಚಡಪಡಿಸತ್ತೆ.


Thursday 20 March 2014

ಹಕ್ಕಿಯ ಹಾಡಿಗೆ...


ಯಾಕೋ ಇವತ್ತು ಸುಭದ್ರಾ ಕುಮಾರಿ ಚೌಹಾನ್ ರವರ ಪದ್ಯದ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತಿವೆ.   
                                 बार-बार आती है मुझको मधुर याद बचपन तेरी।
                                 गया ले गया तू जीवन की सबसे मस्त खुशी मेरी॥
ನನ್ನ ಬಾಲ್ಯ ಬಹಳ ವೇಗವಾಗಿ ಕಳೆದು ಹೋಯಿತು  ಎಂದು ನನ್ನ ಭಾವನೆ.ಈಗ ಉಳಿದಿರುವುದು ಅದರ ಮಧುರ ಸ್ಮೃತಿ ಮಾತ್ರವೇ. 

ಗಿಡ ಮರಗಳು,ನೀರು ,ನದಿ ,ಹಕ್ಕಿ ,ಹಣ್ಣು  ಇವೇ ನನ್ನ ಬಾಲ್ಯದ ಒಡನಾಡಿಗಳು.ನಮ್ಮ ಶಾಲೆ ಇದ್ದದ್ದು ಮನೆಯಿಂದ ಸುಮಾರು ೬ ಕಿ. ಮೀ ದೂರದ ತೀರ್ಥಹಳ್ಳಿಯಲ್ಲಿ. ನಮ್ಮ ಮನೆಯ ಮುಂದಿನ ತೋಟದ ಸಾಲುಗಳನ್ನೆಲ್ಲ ದಾಟಿಕೊಂಡು,ಮುಂದೆ ಇದ್ದ ಮಲೆಸಾಲುಗಳನ್ನೂ ಕ್ರಮಿಸಿ,ಮತ್ತೆ ಅಡಿಕೆ ತೋಟಗಳ ಮದ್ಯದಲ್ಲಿ ನುಸುಳಿಕೊಂಡು ಹೋಗಬೇಕಾಗಿತ್ತು.ಅರ್ಧ ಗಂಟೆಯ ದಾರಿಯದು. ದಾರಿಯಲ್ಲೊಂದು ಒಂಟಿ ಮನೆ. ಬೇರೆ ಎಲ್ಲಿಯೂ ಜನವಸತಿ ಇರಲಿಲ್ಲ. ನಿರ್ಜನ ಪ್ರದೇಶ. ಅಲ್ಲೊಂದು ಗೇರು ಮರ. ಅದರಡಿಯಲ್ಲಿ ದಿನವೂ ಕುಳಿತು ಹರಟೆ ಹೊಡೆಯುತ್ತಿದ್ದೆವು. ಸಾಯಂಕಾಲ ಊಟದ ಡಬ್ಬಿಯಲ್ಲಿ ಏನಾದರೂ ಉಳಿದದ್ದಿದ್ದರೆ ಅಲ್ಲಿ ನಮ್ಮ ವನಭೋಜನ . ಅಲ್ಲಿಂದ ಮುಂದೆ  ಸ್ವಲ್ಪ  ದೂರ ನಡೆದರೆ ಆಟೋ ರಿಕ್ಷಾ ಬರುವ ಜಾಗ. 

ನಾನೀಗ ಹೇಳಹೊರಟಿರುವುದು ಪುಟ್ಟ ಹಕ್ಕಿಯ ಬಗ್ಗೆ.ಆ ಒಂಟಿ ಮನೆಯ ನೆನಪು ಬಂದಾಗೆಲ್ಲ ಜೊತೆಗೇ ಮನಸ್ಸಿಗೆ ಬರುವುದು ಅಲ್ಲಿಯ ಹೂತೋಟ. ಆ ಮನೆಯವರು ತುಂಬಾ ಆಸ್ಥೆಯಿಂದ ಬೆಳೆಸಿದ್ದ ತೋಟವದು. ಕೆಂಪು,ಹಳದಿ,ಬಿಳಿ ಬಣ್ಣದ ಗುಲಾಬಿಗಳು,ಸೇವಂತಿಗೆ,ಮಲ್ಲಿಗೆ,ಕನಕಾಂಬರ ಹೀಗೆ ತರಹೇವಾರಿ ಗಿಡಗಳು. ನನಗೆ ಆ ಹೂವುಗಳನ್ನು ದಿನಾ ನೋಡುವಾಸೆ. ಒಂದು ದಿನ ಹೀಗೆ ಹೂವುಗಳನ್ನೆಲ್ಲ ನೋಡುತ್ತಿದ್ದಾಗ ಗಿಡಗಳ ಮದ್ಯದಲ್ಲಿ ಏನೋ ಕಾಣಿಸಿತು ಅದೇನು ಅಂತ ಕುತೂಹಲದಿಂದ ನೋಡಿದೆ. ಪುಟ್ಟ ಹಕ್ಕಿಯೊಂದರ ಮನೆ  ಅದು. ನಾನು ಆಗಿನ್ನೂ ೬ ವರ್ಷದ ಹುಡುಗಿ. ಆ ಹಕ್ಕಿಯ ಗೂಡು ನನಗೆ ಆಕರ್ಷಣೀಯವಾಗಿ ಕಂಡಿತು. ಗೂಡಿನ ಒಳಗೇನಿದೆ ಎಂದು ನೋಡುವಾಸೆಯಾಯಿತು. ಏನೂ ಕಾಣಲಿಲ್ಲ. ಕುತೂಹಲವನ್ನು ಹತ್ತಿಕ್ಕಲಾರದೆ ಕೈಯಲ್ಲಿ ಮುಟ್ಟಿ ನೋಡಿದೆ. ಮೆತ್ತನೆಯ ಸ್ಪರ್ಶಾನುಭವ.!!!ಆಗ ನನಗೆ ಹಕ್ಕಿ ಮರಿಗಳಿವೆ ಒಳಗೆ ಎಂದು ತಿಳಿಯಿತು.ಮುದ್ದಾದ ಎರಡು ಹಕ್ಕಿ ಮರಿಗಳು.!ಮನಸ್ಸು ಮುದಗೊಂಡಿತು. 

ನನಗೆ ಸಂಗಾತಿಯಾಗಿ, ನನ್ನ ಕಾರುಬಾರುಗಳಿಗೆ ಸ್ಫೂರ್ತಿಯಾಗಿ ನನ್ನ ಬಾಲ್ಯ ಸ್ನೇಹಿತೆ "ಸ್ಫೂರ್ತಿ " ನನ್ನೊಂದಿಗಿದ್ದಳು. ತನ್ನ ಧೈರ್ಯವನ್ನು ನನಗೆ ತುಂಬಿ ತಾನು ಎಲೆ ಮರೆಯ ಕಾಯಿಯಂತೆ ಇದ್ದು ಬಿಡುತ್ತಿದ್ದಳು. ಹಕ್ಕಿ ಮರಿಗಳನ್ನು ನೋಡಿದ ಕೂಡಲೇ ಸಾಕುವ ಯೋಚನೇ ಜೊತೆಗೇ ಬಂತು. ಸರಿ ತಪ್ಪುಗಳೊಂದೂ ತಿಳಿಯದ ಮುಗ್ಧ ಮನಸ್ಸು. ಸ್ಫೂರ್ತಿಯ ಬೆಂಬಲವೂ ಜೊತೆಗಿತ್ತು. ಸರಿ ಇನ್ನೇನು ಬೇಕು? ನಾನು ಹಕ್ಕಿ ಗೂಡನ್ನೇ ಮನೆಗೆ ತಂದೆ. ನನ್ನ ಸಾಹಸ ನೋಡಿ ಎಲ್ಲರೂ ಪ್ರಶಂಸಿಸುತ್ತಾರೆ ಎಂದುಕೊಂಡಿದ್ದೆ. ಏನೋ ಸಾಧಿಸಿದ ತೃಪ್ತಿಯಿಂದ ಮನೆಗೆ ಬಂದು,ಅಪ್ಪ ಅಮ್ಮನಿಗೆ ತೋರಿಸಿದೆ. ಆದರೆ ಬೈಗುಳವಷ್ಟೇ ದೊರಕಿತು.ಆಮೇಲೆ ನನಗೆ ಕಷ್ಟಗಳ ಸರಮಾಲೆ. 

ಸ್ವಲ್ಪ ಹೊತ್ತಿನ ನಂತರ ಹಕ್ಕಿ ಮರಿಗಳ ಆರ್ಭಟ ಮೊದಲುಗೊಂಡಿತು. ಅಮ್ಮನ ಗುಟುಕಿಗಾಗಿ ಪರಿತಪಿಸುತ್ತಿದ್ದವು ಅವು. ನನಗೆ ಅವುಗಳ ಹಸಿವಿನ ಅರಿವಾಯಿತಾದರೂ ಹೇಗೆ ಊಟ ಮಾಡಿಸಬೇಕೆಂದು ತಿಳಿದಿರಲಿಲ್ಲ. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ನಾನು ತಿನ್ನುತ್ತಿದ್ದ ಅನ್ನವನ್ನೇ ತಿನ್ನಿಸಲು ಯತ್ನಿಸಿದೆ. ಚಿಕ್ಕ ಮರಿಗಳಿಗೇನು ಗೊತ್ತು ಹೇಗೆ ತಿನ್ನಬೇಕೆಂದು .?ತಿನ್ನಲಾರದೆ ಅವುಗಳ ಕೂಗು ಹೆಚ್ಚಾಯಿತು. ನನಗೆ ನಿದ್ರೆ ಬರುವ ಹೊತ್ತಾಗಿತ್ತು. ಅಮ್ಮನ ಜೊತೆ ಬೆಚ್ಚಗೆ ಮಲಗಿದೆ. ಆ ಪಾಪದ ಮರಿಗಳನ್ನು ಅವುಗಳ ಅಮ್ಮನಿಂದ ದೂರ ಮಾಡಿ. ಪಾಪ ಆ ತಾಯಿ ಹಕ್ಕಿ ತನ್ನ ಮರಿಗಳಿಗೋಸ್ಕರ ಎಷ್ಟು ಪರಿತಪಿಸಿತೋ ಎನೊ.?

ಬೆಳಿಗ್ಗೆ ಅವುಗಳಿಗೆ ಕೂಗಲೂ ಶಕ್ತಿ ಇರಲಿಲ್ಲ. ನಾನು ದಿನ ಬೆಳಿಗ್ಗೆ ಸ್ನಾನ ಮಾಡುತ್ತಿದ್ದೆನ್ನಲ್ಲ. ಅವುಗಳಿಗೂ ಸ್ನಾನ ಮಾಡಿಸಿದೆ. ಅವುಗಳಿಗೆ ಸ್ನಾನ ಮಾಡಿಸಬೇಕೆಂಬ ಯೋಚನೆ ನನಗಿರಲಿಲ್ಲ. ಅದು ಹೊಳೆದಿದ್ದು ನಮ್ಮ ಜಾಣೆ  ಸ್ಫೂರ್ತಿಗೆ.ಬಿಸಿನೀರಿನ ಅಭ್ಯಂಜನವೂ ಜರುಗಿತು. ಮದ್ಯಾಹ್ನದ ಹೊತ್ತಿಗೆ ಒಂದು ಮರಿ ಕೊನೆಯುಸಿರೆಳೆದಿತ್ತು. ಇನ್ನೊಂದು ಅರೆಜೀವವಾಗಿತ್ತು. ಮರುದಿನ ಇನ್ನೊಂದು ಮರಿಯು ಹಸಿವಿನಿಂದ ಸಾವನ್ನಪ್ಪಿತ್ತು. ಈ ಘಟನೆ ಯಾವಾಗಲೂ ಮನಸ್ಸಿನಾಳದಲ್ಲಿ ಅಚ್ಚೊತ್ತಿದಂತಿದೆ. ಆ ತಾಯಿ ಹಕ್ಕಿಯ ನೋವಿಗೆ,ಮರಿಗಳ ಸಾವಿಗೆ ನಾನೇ ಕಾರಣನಾದೆನಲ್ಲ ಎಂಬ ಪಶ್ಚಾತ್ತಾಪದ ನಿಟ್ಟುಸಿರು ಬರುತ್ತದೆ.ಇವತ್ತಿಗೂ ಆ ಮರಿಗಳ ಆರ್ತನಾದ ಕಿವಿಯಲ್ಲಿ ಅನುರಣಿಸುತ್ತದೆ. 

ಎಂದಾದರೂ ಪುಟ್ಟ ತಾಯಿ ಹಕ್ಕಿ ಸಿಕ್ಕಿದರೆ, ಚಿಕ್ಕ ವಯಸ್ಸು,ತಿಳಿಯದೇ ಆದ ಪ್ರಮಾದ ಕ್ಷಮಿಸು ಎಂದು ಕೇಳಬೇಕು ಎಂದುಕೊಂಡಿದ್ದೇನೆ. ನಿಮಗೆ ಯಾವಾಗಲಾದರೂ,ಅದು ಮಾತಿಗೆ ಸಿಕ್ಕಿದರೆ ನನ್ನ ಪರವಾಗಿ ಕ್ಷಮೆ ಯಾಚಿಸಿ please...


Sunday 12 January 2014

ಮನಸ್ಸುಮ...


ಹನಿಗವನಗಳು













ದಿನಕರನಿಗೆ ಲೋಕದ ಚಿಂತೆ 
ತಾನು ಅಸ್ತಮಿಸಿದ ನಂತರ ಏನು ಕತೆ..?
ಚಂದ್ರನಿಲ್ಲದ ರಾತ್ರಿಯಲಿ ಜನ ಹೇಗಿರುವರೋ ಕತ್ತಲ ಜೊತೆ..?

ಸೂರ್ಯನ ವ್ಯಥೆ ನೋಡಿದ ಹಣತೆ
ನಿಧಾನವಾಗಿ ಹೇಳಿತ್ತಂತೆ,
"ನಾನುರಿದು ಬೆಳಕ ತರುವೆ ಮತ್ತೆ.."
(ಎಲ್ಲೋ ಓದಿದ್ದ ಕತೆಯೊಂದರ ಸಾರಾಂಶ..)
 ***












ತುಳುಕಿದ ಕಣ್ಣೀರಿಗೆ ಕೇಳಿದೆ,
"ಕಣ್ಣಿಂದ ಹೊರಗೇಕೆ ಬಂದೆ..?"
ಕಣ್ಣೀರು ಹೇಳಿತು,
"ನನಗೆ ಜಾಗವೆಲ್ಲಿದೆ..? 
ನಿನ್ನ ಇನಿಯನ ನೆನಪು ,ಕನಸು
ಕಣ್ಣ ತುಂಬಿದೆ.
ಅದಕ್ಕೆ ನಾನು ಕೆನ್ನೆಯ ಮೇಲೆ ಹರಿದೆ.."
 ***
















ನಾನು ಕವಯತ್ರಿಯಲ್ಲ
ಭಾವನೆಗಳನ್ನು ಪುಟಕ್ಕಿಳಿಸಲು, ನಿನಗೆ ತಿಳಿಸಲು
ಪದಗಳ ಹುಡುಕಾಟದಲ್ಲಿರುವೆ..!

ಆದರೂ ನಿಜವಾದ ಪ್ರೀತಿಗೆ
ಅಕ್ಷರಗಳ ಅವಶ್ಯಕತೆ ಇಲ್ಲ
ಕಣ್ಣಿನ ಭಾಷೆಯೊಂದೇ ಸಾಕಲ್ಲವೇ..?

ಬಿಸಿಲಿಗೆ ಬಾಯಾರಿ ಬಾಯ್ದೆರೆದ ಭುವಿ ನಾನಾಗಿರಲು
ಬಾನಧಾರೆಯಾಗಿ  ನೀ ಬಂದು
ಮಳೆಬಿಲ್ಲ ವರ್ಣಗಳಿಂದ ನನ್ನ ಸಿಂಗರಿಸುವೆಯಲ್ಲವೇ.. ?

***