Saturday 28 March 2020

ಡಿಸೈನರ್ ಬೇಬೀಸ್

ಸಂತೆಯಲ್ಲಿ ತರಕಾರಿ ಕೊಳ್ಳುವ ಮೊದಲು ಬಣ್ಣ, ತೂಕ, ಎಳೆತಿದೆಯೋ, ಬಲಿತಿದೆಯೋ, ಕೊಳೆತಿದೆಯೋ ಹೀಗೆ ಎಲ್ಲವನ್ನು ಅಳೆದು ತೂಗಿ ಇದ್ದುದರಲ್ಲಿ ಉತ್ತಮವಾದುದನ್ನು ಆರಿಸುವಂತೆ ತಂದೆ ತಾಯಿಗಳು ತಮಗೆ ಹುಟ್ಟುವ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದರೆ? ಮದುವೆ ಸೀರೆಗಳನ್ನು ಬೇಕೆಂದ ರೀತಿಯಲ್ಲಿ ವಿನ್ಯಾಸ ಮಾಡಿಸಿಕೊಳ್ಳುವಂತೆ ಮಕ್ಕಳನ್ನೂ ಸಹ  ತಮ್ಮಿಷ್ಟದಂತೆ ವಿನ್ಯಾಸಗೊಳಿಸಿಕೊಳ್ಳುವ ಹಾಗಿದ್ದರೆ? ಇದ್ಯಾವುದೋ ಕಪೋಲಕಲ್ಪಿತ ಕಥೆಯೆಂದುಕೊಂಡಿರಾ! ಅಲ್ಲವೇ ಅಲ್ಲ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆಗಳು, ಸಿಕ್ಕ ಯಶಸ್ಸುಗಳು ಹೊಸ ಅಲೆಯನ್ನೇ ಹುಟ್ಟುಹಾಕಿವೆ. ಜೆನೆಟಿಕ್ ಇಂಜಿನಿಯರಿಂಗ್ ಎಂಬ ಮಹಾ ವಟವೃಕ್ಷವು ತನ್ನ ಬೃಹತ್ ರೆಂಬೆಕೊಂಬೆಗಳನ್ನು ಊರಗಲ ಚಾಚಿ ಹರಡುತ್ತಿದೆ. ಜೀವಕೋಶಗಳನ್ನೂ ಹರಿದು ಒಳಗೇನಿದೆ ಎಂದು ನೋಡಿದ ಮೇಲೂ ಕುತೂಹಲ ಇಂಗದೆ ಮನುಷ್ಯ ವರ್ಣತಂತುಗಳ (ಕ್ರೋಮೋಸೋಮ್) ಆಳಕ್ಕಿಳಿದು ಡಿಎನ್ಎಗಳ ಗುಟ್ಟನ್ನು ತಿಳಿಯುವ ಪ್ರಯತ್ನದಲ್ಲಿದ್ದಾನೆ. ಅವನು ದಾಪುಗಾಲಿಡುತ್ತಾ ಓಡುತ್ತಿರುವ ವೇಗವನ್ನು ಕಂಡರೆ ಇಂತಹ ದಿನಗಳು ಬಹಳ ದೂರವಿಲ್ಲ ಎಂದೆನಿಸದಿರದು.

ಒಂದು ಕಾಲದಲ್ಲಿ ಅದ್ಬುತ ಎಂದೇ ಬಣ್ಣಿಸಲಾದ ಪ್ರನಾಳ ಶಿಶುಗಳ (ಟೆಸ್ಟ್ ಟ್ಯೂಬ್ ಬೇಬಿಸ್ ) ಹುಟ್ಟು ಈಗ ಸರ್ವೇ ಸಾಮಾನ್ಯ. ಮೊದಲ ಪ್ರನಾಳ ಶಿಶು ಲೂಯಿಸ್ ಬ್ರೌನ್ ಗೆ ಈಗ ೪೦ರ ಪ್ರಾಯ. ಪ್ರಪಂಚದಲ್ಲಿ ಆ ನಂತರ ಇಂತಹ ಲೆಕ್ಕವಿಲ್ಲದಷ್ಟು ಪ್ರನಾಳ ಶಿಶುಗಳು ಜನಿಸಿವೆ. ನಮ್ಮ ನಿಮ್ಮ ನಡುವೆಯೇ ಬೆಳೆಯುತ್ತಿವೆ. ಆದರೆ ವಿಜ್ಞಾನಿಗಳು ಈ ಗೆಲುವಿನ ಅಮಲಿನಲ್ಲಿ ಮೈಮರೆತಿಲ್ಲ. ಹೊಸದೇನನ್ನಾದರೂ ಕಂಡುಹಿಡಿಯುವ ಹಪಹಪಿಯೊಂದಿಗೆ ತಮ್ಮ ಅನುಭವ, ಜ್ಞಾನವನ್ನೆಲ್ಲ ಧಾರೆ ಎರೆದು ಹಗಲಿರುಳು ದುಡಿಯುತ್ತಿದ್ದಾರೆ. ಪ್ರಕೃತಿ ಲಕ್ಷಗಟ್ಟಲೆ ವರ್ಷಗಳಿಂದ ಪ್ರಯೋಗಾತ್ಮಕವಾಗಿ ಸಾಧಿಸಿದ ವಿಕಸನದ ಎಳೆಗಳನ್ನು ತುಂಡರಿಸಿ ತಮ್ಮದೇ ಹೊಸ ಸ್ಪರ್ಶ ನೀಡಲು ಕಾತರರಾಗಿದ್ದಾರೆ. ಇಂತಹ ಅವಿರತ ಪ್ರಯತ್ನದ ಫಲವಾಗಿ ಹುಟ್ಟಿದ್ದೇ ಡಿಸೈನರ್ ಬೇಬೀಸ್ ಎಂಬ ತಂತ್ರಜ್ಞಾನ. 

ಏನಿದು  ಡಿಸೈನರ್ ಬೇಬೀಸ್ ?
ಮನುಷ್ಯರ ಬ್ರೂಣದಲ್ಲಿನ ಅನುವಂಶಿಕ ಧಾತುಗಳನ್ನು(ಜೀನ್) ಬೇಕಾದ ರೀತಿಯಲ್ಲಿ ಮಾರ್ಪಡಿಸಿ ತಮ್ಮಿಷ್ಟದಂತೆ ಮಕ್ಕಳನ್ನು ವಿನ್ಯಾಸಗೊಳಿಸಿಕೊಳ್ಳುವ ಕ್ರಮಕ್ಕೆ ಡಿಸೈನರ್ ಬೇಬೀಸ್ ಎಂಬ ಆಕರ್ಷಕ ಹೆಸರು! ಈ ತಂತ್ರಜ್ಞಾನದ ಮೂಲಕ ತಂದೆ ತಾಯಿಗಳಿಂದ ಮಕ್ಕಳಿಗೆ ಯಾವುದೇ ಖಾಯಿಲೆಗಳು ಹರಿದು ಹೋಗದಂತೆ ತಡೆಯುವುದರಿಂದ ಹಿಡಿದು ಹುಟ್ಟುವ ಮಗು ಗಂಡಾಗಿರಬೇಕೋ ಹೆಣ್ಣೋ, ಮಗುವಿನ ಕಣ್ಣಿನ ಬಣ್ಣ, ತಲೆಕೂದಲು, ಧ್ವನಿ ಹೇಗಿರಬೇಕು ಎಂಬುದನ್ನೆಲ್ಲ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವಿರುತ್ತದೆ. ಇದು ನಿಜವೇ ಆದಲ್ಲಿ ಮುಂದಿನ ಕೆಲ ದಶಕಗಳಲ್ಲಿ ಈಗಿನ ಮನುಷ್ಯರಿಗಿಂತ ಹೆಚ್ಚು ದೃಢಕಾಯದ, ಬಲಿಷ್ಠ, ಸ್ಪುರದ್ರೂಪಿಯಾದ ನವೀನ ಜನಾಂಗವೊಂದು ಸೃಷ್ಟಿಯಾದೀತು.

ಪಿಜಿಡಿ (ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ )
ಈ ದಿಕ್ಕಿನಲ್ಲಿ ದೃಢವಾದ ಹೆಜ್ಜೆಗಳನ್ನಿಟ್ಟು ಮುಂಬರಿಯಲು ಊರುಗೋಲಾಗಿ ನಿಂತಿರುವುದು ಪಿಜಿಡಿ (ಪ್ರಿ-ಇಂಪ್ಲಾಂಟೇಷನ್ ಜೆನೆಟಿಕ್ ಡಯಾಗ್ನೋಸಿಸ್ ) ಎಂಬೊಂದು ವಿಧಾನ. ಬಹಳಷ್ಟು ಯಶಸ್ಸು ಕಂಡಿರುವ, ಕೆಲ ಮುಂದುವರಿದ ದೇಶಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಪ್ರಕ್ರಿಯೆ ಇದಾಗಿದೆ. ಇಲ್ಲಿ ತಂದೆ ತಾಯಿಯರ ಅಂಡಾಣು ವೀರ್ಯಾಣುಗಳನ್ನು ಪ್ರನಾಳಿಕೆಗಳಲ್ಲಿ ವಿಧವಿಧವಾಗಿ ಸಂಯೋಜನೆಗೊಳಪಡಿಸಿ ಕೆಲ ವಾರಗಳ ನಂತರ ಆ ಬ್ರೂಣವನ್ನು ತಪಾಸಣೆಗೊಳಪಡಿಸಲಾಗುತ್ತದೆ. ಮಗು ಹುಟ್ಟುವುದಕ್ಕೆ ಮೊದಲೇ ಜೀನ್ಸ್ ಗಳ ಮೂಲಕ ವಂಶವಾಹಿನಿಯಲ್ಲಿ ಹರಿದು ಬರಬಲ್ಲ ಸಿಕಲ್ ಸೆಲ್ ಅನೀಮಿಯಾ, ಥ್ಯಾಲ್ಲಸೆಮಿಯಾ ದಂತಹ ಕೆಲವು ವಿರಳ ರೋಗಗಳನ್ನು ಗುರುತಿಸಿ, ಅಂತಹ ಜೀವಧಾತುಗಳನ್ನು ಹೊಂದಿರುವ ಬ್ರೂಣಗಳನ್ನು ಬದಿಗಿರಿಸಿ ಆರೋಗ್ಯಕರವಾಗಿರುವ ಮಗುವನ್ನು ಆಯ್ದುಕೊಳ್ಳುವ ಅವಕಾಶ ತಂದೆತಾಯಿಯರಿಗಿರುತ್ತದೆ. ಹೀಗೆ ಆಯ್ಕೆಗೊಂಡ ಬ್ರೂಣವನ್ನು ತಾಯಿಯ ಗರ್ಭದಲ್ಲಿರಿಸಲಾಗುತ್ತದೆ. ಮಗುವಿನ ಲಿಂಗವನ್ನು ಸಹ ಇಲ್ಲಿ ಪೋಷಕರು ಆರಿಸಿಕೊಳ್ಳಬಹುದೆಂಬುದು ಗಮನಾರ್ಹ ಸಂಗತಿ.

ಕೆಲ ವರ್ಷಗಳ ಹಿಂದೆ ಸೇವಿಯರ್ ಸಿಬ್ಲಿಂಗ್ಸ್ ಎನ್ನುವ ಪದ ಬಹಳಷ್ಟು ಸುದ್ದಿ ಮಾಡಿತ್ತು. ತನ್ನ ಸಹೋದರ ಅಥವಾ ಸಹೋದರಿಯ ಬೀಟಾ-ಥ್ಯಾಲ್ಲಸೆಮಿಯಾ, ಲ್ಯೂಕೆಮಿಯಾದಂತಹ ಮಾರಣಾಂತಿಕ ಖಾಯಿಲೆಯನ್ನು ಗುಣಪಡಿಸಲೆಂದು ಜನ್ಮ ತಾಳುವ ಮಕ್ಕಳೇ ಸೇವಿಯರ್ ಸಿಬ್ಲಿಂಗ್ಸ್. ಆರೋಗ್ಯವಂತ ವ್ಯಕ್ತಿಯ ಕೆಲ ಜೀವಕೋಶಗಳನ್ನು ಬಳಸಿ ಇಂತಹ ಬೇನೆಗಳನ್ನು ಗುಣಪಡಿಸಬಹುದಂತೆ. ಆದರೆ ಅದಕ್ಕೆ ಆ ಜೀವಕೋಶಗಳಲ್ಲಿ ಅತಿ ಹೆಚ್ಚಿನ ಸಾಮ್ಯತೆ ಇರಬೇಕು. ತಮ್ಮ ಮಕ್ಕಳನ್ನುಳಿಸಲು ತಂದೆ ತಾಯಿಗಳು ಪಿಜಿಡಿ ತಂತ್ರಜ್ಞಾನದ ಮೂಲಕ ತಮಗೆ ಬೇಕಾದ ಬ್ರೂಣವನ್ನೇ ಮಗುವಾಗಿ ಪಡೆಯುತ್ತಾರೆ. ಇಂತಹ ಉದಾಹರಣೆಗಳು ಬಹಳಷ್ಟಿವೆ. ಪ್ರಪಂಚದ ಮೊದಲ ಸೇವಿಯರ್ ಸಿಬ್ಲಿಂಗ್ ಎಂದೇ ಹೆಸರು ಪಡೆದ ಆಡಮ್ ನ್ಯಾಶ್ ಹುಟ್ಟಿದ್ದು ಸಹ ತನ್ನ ಅಕ್ಕನಿಗಾಗಿ. ತಮ್ಮ ಮಗಳು ಮೋಲಿ ನ್ಯಾಶ್  ಫ್ಯಾಂಕೋನಿ-ಅನೀಮಿಯಾ ಎಂಬ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾಳೆ ಎಂಬ ವಿಷಯ, ಜಾಕ್ ಮತ್ತು ಲೀಸಾ ನ್ಯಾಶ್ ದಂಪತಿಗಳಿಗೆ ತಿಳಿದಾಗ ಇಬ್ಬರೂ ಆಘಾತಕ್ಕೊಳಗಾಗುತ್ತಾರೆ. ಫ್ಯಾಂಕೋನಿ-ಅನೀಮಿಯಾ ಅನುವಂಶಿಕವಾಗಿ ಬರುವ ವಿಚಿತ್ರ ರೋಗ. ಮೂಳೆ ಮಜ್ಜೆಯನ್ನು(ಬೋನ್ ಮ್ಯಾರೋ) ಗುರಿಯಾಗಿಸುವ ಇದು ರಕ್ತ ಕಣಗಳ ಉತ್ಪಾದನೆಯನ್ನೇ ಗಣನೀಯವಾಗಿ ಕಡಿಮೆಗೊಳಿಸುತ್ತದೆ. ಅಂತಿಮ ಸ್ಥರದಲ್ಲಿ ರೋಗಿ ಅಂಗವೈಕಲ್ಯ, ಮೂಳೆ ಮಜ್ಜೆಯ ಪೂರ್ಣ ವೈಫಲ್ಯ ಅಥವಾ ಲ್ಯೂಕೆಮಿಯಾದಂತಹ ಮಾರಣಾಂತಿಕ ಖಾಯಿಲೆಗಳಿಗೆ ಬಲಿಯಾಗಬಹುದು. ಇದಕ್ಕೆ ಮದ್ದು ಎಂದರೆ ಬೋನ್ ಮ್ಯಾರೋದ ಜೀವಕೋಶಗಳನ್ನು ಪುನರುಜ್ಜೀವನಗೊಳಿಸುವುದು. ರೋಗಿಯ ಜೀವಕಣಗಳಿಗೆ ಅತೀ ಸಮೀಪವಾಗಿ ಹೊಂದಾಣಿಕೆ ಆಗುವಂತಹ ಬೇರೆ ವ್ಯಕ್ತಿಯ ಬೋನ್ ಮ್ಯಾರೋದಿಂದ ತೆಗೆದ ಜೀವಕೋಶಗಳನ್ನು ವರ್ಗಾವಣೆ ಮಾಡುವುದರಿಂದ ಆ ಖಾಯಿಲೆಯನ್ನು ತಕ್ಕ ಮಟ್ಟಿಗೆ ಗುಣಪಡಿಸಬಹುದು. ಹೊಂದಾಣಿಕೆ ಇಲ್ಲದ ಪಕ್ಷದಲ್ಲಿ ಹೊಸ  ಜೀವಕೋಶಗಳನ್ನು ರೋಗಿಯ ದೇಹ ತನ್ನದೆಂದು ಒಪ್ಪಿಕೊಳ್ಳುವುದಿಲ್ಲ. ತಮ್ಮ ಮುದ್ದು ಮಗಳು ದಿನ ದಿನವೂ ಸಾವಿಗೆ ಸಮೀಪವಾಗುವುದನ್ನು ನೋಡಲಾರದೆ ಒದ್ದಾಡುತ್ತಿದ್ದ ಅಪ್ಪ ಅಮ್ಮನಿಗೆ ಆಶಾಕಿರಣವಾಗಿ ಬಂದಿದ್ದು ಡಿಸೈನರ್  ಬೇಬೀಸ್  ತಂತ್ರಜ್ಞಾನ. ಡಾಕ್ಟರ್ ನ ಸಲಹೆಯಂತೆ ಗಂಡ ಹೆಂಡತಿ ಇಬ್ಬರೂ ಮೋಲಿ ನ್ಯಾಶ್ ಗೆ  ಬೇಕಾಗುವ ಜೀವಕೋಶಗಳಿರುವ ಮಗುವನ್ನು ಹೆರಲು ಮುಂದಾದರು. ಕೆಲ ಬ್ರೂಣಗಳನ್ನು ಪರೀಕ್ಷಿಸಿದ ಮೇಲೆ ಇವರಿಗೆ ಬೇಕಾಗಿದ್ದಂತಹ ಮಗು ಸಿಕ್ಕಿತು. ಅದನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡ ಲೀಸಾ ನ್ಯಾಶ್ ಕೆಲ ತಿಂಗಳುಗಳ ನಂತರ ಮಗುವನ್ನು ಹೆತ್ತಳು. ಈ ಮಗುವೇ ಆಡಮ್ ನ್ಯಾಶ್. ಆಡಮ್ ನ್ಯಾಶ್ ನ ಜೀವಕಣಗಳು ಮೋಲಿ ಗೆ ಹೊಸ ಹುಟ್ಟು ನೀಡಿದ್ದು ಈಗ ಹಳೆಯ ಸಂಗತಿ.

ಕೆಲ ಅನುವಂಶಿಕ ಖಾಯಿಲೆಗಳಿಂದ ಮುಂದಿನ ಪೀಳಿಗೆಯನ್ನು ರಕ್ಷಿಸಲು ಪಿಜಿಡಿ ವಿಧಾನ ಸಹಾಯಕಾರಿ. ಆದರೆ ಪಿಜಿಡಿ ಇದ್ದುದರಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡುತ್ತದೆಯೇ ಹೊರತು ಹೊಸದನ್ನು ಸೃಷ್ಟಿಮಾಡಲಲ್ಲ. ಮಕ್ಕಳ ಎತ್ತರ, ಬಣ್ಣ, ರೂಪ ಯಾವೊಂದನ್ನೂ ಇಲ್ಲಿ ಬದಲಾಯಿಸಲಾಗದು. ಮತ್ತು ಎಲ್ಲ ಖಾಯಿಲೆಗಳನ್ನೂ ಮುಂದಿನ ಪೀಳಿಗೆಗೆ ಜಾರದಂತೆ ತಡೆಯಲಾಗದು. ಪ್ರಪಂಚದೆಲ್ಲೆಡೆ  ಇದರ ಉಪಯೋಗ ನೈತಿಕ ಪ್ರಶ್ನೆಗೆ ಒಳಗಾಗಿದ್ದರೂ ಬ್ರಿಟನ್, ಜರ್ಮನಿಯಂತಹ ದೇಶಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಇದರ ಬಳಕೆಯನ್ನು ಸೀಮಿತಗೊಳಿಸಲಾಗಿದೆ. ಖಾಯಿಲೆಗೆ ಉತ್ತರವೆಂಬಂತೆ ಮಕ್ಕಳನ್ನು ಹೆರುವ ಮನಸ್ಥಿತಿಯ ತಂದೆ ತಾಯಿಯರು ನಾಳೆ ತಮ್ಮ ಮಕ್ಕಳಿಗೆ ಯಾವುದಾದರು ಅಂಗ ಬೇಕಾದಲ್ಲಿ ಇನ್ನೊಂದು ಬ್ರೂಣವನ್ನು ಬೆಳೆಸಿ ಅದರ ಅಂಗವನ್ನು ತಮ್ಮ ಮಕ್ಕಳಿಗೆ ಕೊಡಬಲ್ಲ ಸಾಧ್ಯತೆ ಇಲ್ಲವೇ ಎಂಬುದು ಹಲವರ ಪ್ರಶ್ನೆ! ಇದೇ ಪರಿಕಲ್ಪನೆಯನ್ನು ಆಧರಿಸಿ ೨೦೦೯ರಲ್ಲಿ  ಮೈ ಸಿಸ್ಟರ್ಸ್ ಕೀಪರ್ ಎನ್ನುವ ಚಲನಚಿತ್ರವೊಂದು ಬಂದಿದೆ.

ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್
ಇದಲ್ಲದೆ ಇನ್ನೂ ಮುಂದುವರೆದ, ಡಿಸೈನರ್ ಬೇಬೀಸ್ ಗಳ ಹುಟ್ಟಿಗೆ ಇಂಬು ಕೊಡಲೋಸುಗ ಕಂಡುಹಿಡಿದ ಬಹಳಷ್ಟು ಬಿಸಿ ಚರ್ಚೆಗೆ ಗುರಿಯಾಗುತ್ತಿರುವ ವಿಧಾನವೊಂದಿದೆ.   ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ಎಂದು ಕರೆಸಿಕೊಳ್ಳುವ ಇದರಲ್ಲಿ ಅಂಡಾಣು, ವೀರ್ಯಾಣುಗಳಲ್ಲಿನ ಜೀವಕೋಶಗಳ ಡಿಎನ್ಎ ಸೀಕ್ವೆನ್ಸ್ ಗಳನ್ನು ಬದಲಿಸಿ ಬೇಡದ ಜೀನ್ ಗಳನ್ನು ಕತ್ತರಿಸಿ ಹೊಸದನ್ನು  ಜೋಡಿಸಲಾಗುತ್ತದೆ. ಇದರ ಸಹಾಯದಿಂದ ಏಡ್ಸ್ ನಂತಹ ಗುಣಪಡಿಸಲಾಗದೆ ಉಳಿದ ಎಷ್ಟೋ ರೋಗಗಳನ್ನು ವಾಸಿಮಾಡಬಹುದೆಂಬ ನಂಬಿಕೆ ಇದೆ. ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ನ  ಮತ್ತೊಂದು ಸಂಭವನೀಯ ಬಳಕೆ ಎಂದರೆ ಈ ಕಾಲಕ್ಕೆ ಕಾಲ್ಪನಿಕ ಎನಿಸಿದರೂ ಮನುಷ್ಯರ ಗುಣಗಳನ್ನೇ ಬದಲಾಯಿಸಬಹುದಾದಂತಹ ಪ್ರಕ್ರಿಯೆ. ಉದಾಹರಣೆಗೆ ಉತ್ತಮ ದೇಹಧಾರ್ಡ್ಯ ಹೊಂದಿರುವ ಆರೋಗ್ಯವಂತ ಮನುಷ್ಯರನ್ನು ತಯಾರು ಮಾಡುವುದು ಅಥವಾ ಚರ್ಮದ, ಕೂದಲಿನ ಬಣ್ಣದ  ಆಯ್ಕೆ, ಹುಟ್ಟುವ ಮಕ್ಕಳ ಬುದ್ಧಿಶಕ್ತಿ ಹೆಚ್ಚುವಂತೆ ಮಾಡುವುದು ಇತ್ಯಾದಿ! ಜೀನ್ ಥೆರಪಿ ಎಂಬ ವಿಧಾನ ಹೆಚ್ಚು ಕಡಿಮೆ ಜೆರ್ಮ್ ಲೈನ್ ಇಂಜಿನಿಯರಿಂಗ್ ನಂತೆಯೇ ಇದ್ದರೂ ಜೀನ್ ಥೆರಪಿಯಲ್ಲಿ ಸಂತಾನೋತ್ಪತ್ತಿಯಲ್ಲಿ ಭಾಗವಹಿಸದ ಜೀವಕೋಶಗಳನ್ನು ಮಾರ್ಪಡಿಸುವ ಕಾರಣ ಅವುಗಳು ತರುವ ಬದಲಾವಣೆಗಳು ಕೇವಲ ಆ ವ್ಯಕ್ತಿಗೆ ಸೀಮಿತವಾಗಿರುತ್ತವೆಯೇ ಹೊರತು ಮುಂದಿನ ಮಕ್ಕಳಿಗೆ ದಾಟಲಾರವು.

ಕ್ರಿಸ್ಪರ್ /ಕ್ಯಾಸ್ ೯ (CRISPR /cas9)
ಡಿಎನ್ಎಗಳನ್ನು ನಮಗೆ ಬೇಕಾದಂತೆ ತಿದ್ದುವುದು ಅಷ್ಟು ಸುಲಭವಲ್ಲ. ಮೊದಲಿಗೆ ಎದುರಾಗುವ ಸಮಸ್ಯೆ ಎಂದರೆ ಇನ್ನೂ ಜೀವಧಾತುಗಳು ಮನುಷ್ಯನ ಹಿಡಿತಕ್ಕೆ ಸಂಪೂರ್ಣವಾಗಿ ಸಿಕ್ಕಿಲ್ಲ. ಆ ವರ್ಣತಂತುವೆಂಬ ಕಪ್ಪು ಪೆಟ್ಟಿಗೆಯ ಒಳಗೇನಿದೆ ಎಂದು ಸರಿಯಾಗಿ ತಿಳಿಯದೆ ಹೆಚ್ಚೇನನ್ನೂ ಮಾಡಲಾಗದು. ಆದರೂ ಛಲಬಿಡದ ತ್ರಿವಿಕ್ರಮರು ಇವುಗಳ ಗುಟ್ಟನ್ನು ಅರಿಯುವ ಸತತ ಪ್ರಯತ್ನದಲ್ಲಿದ್ದಾರೆ. ಈ ರೀತಿ ಡಿಎನ್ಎ ಗಳ ತಿದ್ದುಪಡಿ ಮಾಡಲೆಂದೇ ಕ್ರಿಸ್ಪರ್/ಕ್ಯಾಸ್೯ ಎಂಬ ಕ್ಲಿಷ್ಟಕರವಾದ ಆದರೆ ಕರಾರುವಾಕ್ಕಾದ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ. ಕ್ರಿಸ್ಪರ್/ಕ್ಯಾಸ್೯ ಎಂಬುದು ಕಿಣ್ವಗಳ(ಎನ್ಜೈಮ್) ಗುಂಪು. ಕ್ರಿಸ್ಪರ್ ಎಂದರೆ ಯಾವ ಜೀನ್ ಗಳನ್ನು ಬದಲಿಸಬೇಕಿದೆಯೋ ಅವುಗಳ ಸೀಕ್ವೆನ್ಸ್ ಗೆ ಹೊಂದಾಣಿಕೆಯಾಗುವಂತಹ ಚಿಕ್ಕ ಆರ್ ಎನ್ಎ ತುಂಡು. ಕ್ಯಾಸ್೯ ಕಿಣ್ವ ಬದಲಿಸಬೇಕಾದ ಡಿಎನ್ಎ ಯನ್ನು ಕತ್ತರಿಸಲು ನೆರವಾಗುತ್ತದೆ. ಕ್ರಿಸ್ಪರ್/ಕ್ಯಾಸ್೯ ಸಂಕೀರ್ಣವು(ಕಾಂಪ್ಲೆಕ್ಸ್) ಮೊದಲಿಗೆ ಇಡಿಯ ಡಿಎನ್ಎ ಯನ್ನು ಹುಡುಕಿ ಕ್ರಿಸ್ಪರ್ ಆರ್ ಎನ್ಎ ಹೊಂದಿಕೆಯಾಗುವಂತಹ ಸೀಕ್ವೆನ್ಸ್ ಅನ್ನು ಗುರುತಿಸುತ್ತದೆ. ಕ್ಯಾಸ್೯ ಆ ಬೇಡದ ಡಿಎನ್ಎ ಯನ್ನು ಕತ್ತರಿಸಿ ತೆಗೆಯುತ್ತದೆ. ನಂತರದಲ್ಲಿ ಬೇಕೆಂದ ಹೊಸ ಡಿಎನ್ಎಯನ್ನು ಆ ಜಾಗದಲ್ಲಿ ಕೂರಿಸಲಾಗುತ್ತದೆ. ಕ್ರಿಸ್ಪರ್/ಕ್ಯಾಸ್೯ ನ ಮುಖ್ಯ ಉಪಯೋಗ ಪ್ರಯೋಗಾತ್ಮಕವಾಗಿದ್ದು ಡಿಎನ್ಎ ಗಳಲ್ಲಿನ ಬೇರೆ ಬೇರೆ ಜೀವಕೋಶಗಳನ್ನು ತೆಗೆದುಹಾಕಿ ಅವು ಯಾವ ಗುಣಗಳ ಮೇಲೆ ಪರಿಣಾಮ ಬೀರುತ್ತವೆ ಎಂದು ನೋಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನುವಂಶಿಕ ಖಾಯಿಲೆಗಳಿಗೆ ಕಾರಣವಾಗುವ ಧಾತುಗಳನ್ನು ಗುರುತಿಸಿ ಅವುಗಳನ್ನು ಬೇರ್ಪಡಿಸಿ ಆರೋಗ್ಯವಂತ ಸಮಾಜದ ನಿರ್ಮಾಣ ಮಾಡುವುದೇ ಹ್ಯೂಮನ್ ಜೆರ್ಮ್ ಲೈನ್ ಇಂಜಿನಿಯರಿಂಗ್ ನ ಸಧ್ಯದ ಗುರಿ ಎಂದು ಹೇಳಬಹುದು.

ಈ ವಿಧಾನ ಸದ್ಯದ ಪರಿಸ್ಥಿತಿಯಲ್ಲಿ ಹೇಳಿಕೊಳ್ಳುವಂತಹ ಗೆಲುವನ್ನೇನೂ ಸಾಧಿಸದಿದ್ದರೂ ತೀವ್ರವಾಗಿ ಸಂಶೋಧನೆಗೊಳಗಾಗುತ್ತಿರುವುದಂತೂ ನಿಜ. ಈ ಹಾದಿಯಲ್ಲಿ ಮುಂಚೂಣಿಯಲ್ಲಿರುವ ಚೈನಾದ ವಿಜ್ಞಾನಿಗಳು ಕ್ರಿಸ್ಪರ್/ಕ್ಯಾಸ್೯ ವಿಧಾನ ಬಳಸಿ ಜೀನ್ ಗಳನ್ನು ಬದಲಿಸಲು ಪ್ರಯತ್ನಪಟ್ಟಿದ್ದಾರಾದರೂ ಪ್ರತಿಬಾರಿಯೂ ಪ್ರಯೋಗ ವಿಫಲವಾಗಿದೆ. ಮುಂದೊಂದು ದಿನ ಗಮ್ಯ ತಲುಪಿಯೇ ತೀರುತ್ತೇವೆ ಎನ್ನುವ ಆಶಾಭಾವನೆಯಿಂದ ವಿಜ್ಞಾನಿಗಳು ಮೇಲಿಂದ ಮೇಲೆ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ.

ಲುಲು ಮತ್ತು ನಾನಾ :
೨೦೧೮ ರ ನವೆಂಬರ್ ತಿಂಗಳಲ್ಲಿ ಚೈನಾ ದೇಶದ ವಿಜ್ಞಾನಿ ಹೇ ಜಿಯಾನ್ಕ್ಯೂಯಿ ಎಂಬಾತ ತಾನು ಈಗಾಗಲೇ ಅವಳಿ ಹೆಣ್ಣುಮಕ್ಕಳಾದ ಲುಲು ಮತ್ತು ನಾನಾ ಎಂಬ ಹೆಸರಿನ ಡಿಸೈನರ್  ಬೇಬೀಸ್ ಗಳನ್ನು ತಯಾರು ಮಾಡಿದ್ದೇನೆ ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟ. ಉಳಿದೆಲ್ಲ ವಿವರಗಳನ್ನೂ ಗೌಪ್ಯವಾಗಿಟ್ಟ. ಇದು ಸತ್ಯವೆಂದು ಸಾಬೀತಾಗಲಿಲ್ಲ. ಆದರೆ ಸುಳ್ಳೆಂದು ಅಲ್ಲಗಳೆಯಲು ಪುರಾವೆಗಳೂ ಇಲ್ಲ. ಇದು ಎಲ್ಲೆಡೆ ವ್ಯಾಪಕವಾಗಿ ಟೀಕೆಗೆ ಒಳಗಾಯಿತು. ಚೈನಾದ ಸರಕಾರ ಕಾನೂನು ಉಲ್ಲಂಘನೆ ಮಾಡಿದನೆಂದು ಆತನ ಎಲ್ಲ ಸಂಶೋಧನೆಗಳನ್ನು ಮುಂದುವರೆಸದಂತೆ ತಡೆಹಿಡಿಯಿತು. ಆ ದೇಶದ ಸರಕಾರದಿಂದಲೇ ಈ ಸಂಶೋಧನೆಗೆ ಹಣ ಸಂದಾಯವಾಗಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದವು.

ಪಿಜಿಡಿಯ ಮೂಲಕ ತಂದೆ ತಾಯಿಗಳು ತಮ್ಮದೇ ಬ್ರೂಣಗಳಲ್ಲಿ ಆರೋಗ್ಯವಂತ ಬ್ರೂಣವೊಂದನ್ನು ಆಯ್ಕೆಮಾಡಿಕೊಳ್ಳಲು ಮಾತ್ರ ಸಾಧ್ಯ. ಅಕಸ್ಮಾತ್ ಎಲ್ಲ ಬ್ರೂಣಗಳಲ್ಲೂ ಅವರಿಗಿರುವ ಖಾಯಿಲೆ ಅನುವಂಶಿಕವಾಗಿ ಬಂದಿದ್ದಲ್ಲಿ ಅವರೇನೂ ಮಾಡುವ ಹಾಗಿಲ್ಲ. ಆದರೆ ಕ್ರಿಸ್ಪರ್/ಕ್ಯಾಸ್೯ ನ ಮುಖಾಂತರ ಅಂತಹ ಜೀನ್ ಗಳನ್ನೇ ತುಂಡರಿಸಿ ಎಸೆಯುವ ಮೂಲಕ ಮುಂದಿನ ಕೆಲ ಪೀಳಿಗೆಗಳಲ್ಲಿ ಈ ಪಿಡುಗುಗಳನ್ನೇ ನಾಮಾವಶೇಷ ಮಾಡುವ ಕನಸು ಕಾಣಲಾಗುತ್ತಿದೆ. ಆದರೆ ಇದು ಮೇಲ್ನೋಟಕ್ಕೆ ಕಾಣುವಷ್ಟು ಸುಲಭವಲ್ಲ. ವಂಶವಾಹಿಗಳು ಅತೀ ಸಂಕೀರ್ಣವಾಗಿದ್ದು ಅವುಗಳನ್ನು ಬದಲಿಸುವ ಮೊದಲು ಅದರ ಒಳಹೊರಗನ್ನು ಅರಿತಿರಬೇಕು. ಈ ಬದಲಾವಣೆಗಳು ಕೇವಲ ಆ ವ್ಯಕ್ತಿಗಷ್ಟೇ ಸೀಮಿತವಾಗದೆ ಮುಂದಿನವರಿಗೂ ಹರಿಯುವುದರಿಂದ ಪ್ರಯೋಗದಲ್ಲಿ ಸ್ವಲ್ಪ ಎಡವಟ್ಟಾದರೂ ಅದು ಬಹಳಷ್ಟು ಜೀವಗಳನ್ನು ಆಹುತಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

ಇದನ್ನೆಲ್ಲಾ ಮಾಡಲು ಸಾಧ್ಯವೇ ಎನ್ನುವುದಕ್ಕಿಂತ ಇಂತಹ ಪ್ರಯೋಗಗಳನ್ನು ಮಾಡಬೇಕೆ ಬೇಡವೇ ಎನ್ನುವುದೇ ಇಂದಿನ ದೊಡ್ಡ ಸವಾಲು? ವೈದ್ಯಕೀಯ ವಲಯದಲ್ಲಿ ಇದು ಒಂದು ಅದ್ಭುತವನ್ನೇ ಮಾಡಬಹುದಾದರೂ ಸಮಾಜದ ಸ್ವಾಸ್ತ್ಯ ಕೆಡಿಸುವಲ್ಲಿಯೂ ಇದರ ಪ್ರಯೋಗವಾಗುವ ಸಾಧ್ಯತೆ ಇದೆ. ಹರಿತವಾದ ಕತ್ತಿಯಲುಗಿನಂತೆ ಬಳಸುವವರ ಕೈಗೊಂಬೆಯಾಗಬಲ್ಲದು. ಹಣ ಮಾಡುವ ಹೊಸ ದಾರಿಯಾಗಬಲ್ಲದು. ಇನ್ನು ಗುಣಗಳನ್ನು ಬದಲಾಯಿಸುವ ಪ್ರಯೋಗವಂತೂ ಮಾನವ ಸಂಕುಲವನ್ನು ಅಧಃಪತನದತ್ತ ಜಾರುವಂತೆ ಮಾಡುತ್ತದೆಯೇ? ಸಾವಿನ ಸಂಖ್ಯೆ ಇಳಿಮುಖವಾಗಿ ಜನಸಂಖ್ಯೆ ಇನ್ನಷ್ಟು ಏರುತ್ತದೆಯೇ? ಬಹಳಷ್ಟು ದೇಶಗಳಲ್ಲಿ ಇದರ ಬಳಕೆ ನಿಷೇಧವಿದ್ದರೂ, ತೀವ್ರ ವಿರೋಧ ವ್ಯಕ್ತವಾಗಿದ್ದರೂ ಕೆಲವಾರು ಕಂಪೆನಿಗಳು ಗುಟ್ಟಾಗಿ ತಮ್ಮ ಹಣವನ್ನು ಇಂತಹ ಸಂಶೋಧನೆಗಳಿಗೆ ಸುರಿಯುತ್ತಿವೆ. ಇದೊಂದು ಮಹತ್ಕಾರ್ಯ ಎಂಬ ಸಕಾರಾತ್ಮಕ ಭಾವನೆಯುಳ್ಳ ಹಲವರು ಈ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ನಮ್ಮೀ ಅತ್ಯಾಸೆ ಕೊನೆಗೆ ನಮ್ಮನ್ನು ಎಲ್ಲಿ ತಂದು ನಿಲ್ಲಿಸುವುದೋ ಕಾಲವೇ ಉತ್ತರಿಸಬೇಕಿದೆ.

[ ತರಂಗ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ ]