Thursday 20 March 2014

ಹಕ್ಕಿಯ ಹಾಡಿಗೆ...


ಯಾಕೋ ಇವತ್ತು ಸುಭದ್ರಾ ಕುಮಾರಿ ಚೌಹಾನ್ ರವರ ಪದ್ಯದ ಸಾಲುಗಳು ಮತ್ತೆ ಮತ್ತೆ ನೆನಪಾಗುತ್ತಿವೆ.   
                                 बार-बार आती है मुझको मधुर याद बचपन तेरी।
                                 गया ले गया तू जीवन की सबसे मस्त खुशी मेरी॥
ನನ್ನ ಬಾಲ್ಯ ಬಹಳ ವೇಗವಾಗಿ ಕಳೆದು ಹೋಯಿತು  ಎಂದು ನನ್ನ ಭಾವನೆ.ಈಗ ಉಳಿದಿರುವುದು ಅದರ ಮಧುರ ಸ್ಮೃತಿ ಮಾತ್ರವೇ. 

ಗಿಡ ಮರಗಳು,ನೀರು ,ನದಿ ,ಹಕ್ಕಿ ,ಹಣ್ಣು  ಇವೇ ನನ್ನ ಬಾಲ್ಯದ ಒಡನಾಡಿಗಳು.ನಮ್ಮ ಶಾಲೆ ಇದ್ದದ್ದು ಮನೆಯಿಂದ ಸುಮಾರು ೬ ಕಿ. ಮೀ ದೂರದ ತೀರ್ಥಹಳ್ಳಿಯಲ್ಲಿ. ನಮ್ಮ ಮನೆಯ ಮುಂದಿನ ತೋಟದ ಸಾಲುಗಳನ್ನೆಲ್ಲ ದಾಟಿಕೊಂಡು,ಮುಂದೆ ಇದ್ದ ಮಲೆಸಾಲುಗಳನ್ನೂ ಕ್ರಮಿಸಿ,ಮತ್ತೆ ಅಡಿಕೆ ತೋಟಗಳ ಮದ್ಯದಲ್ಲಿ ನುಸುಳಿಕೊಂಡು ಹೋಗಬೇಕಾಗಿತ್ತು.ಅರ್ಧ ಗಂಟೆಯ ದಾರಿಯದು. ದಾರಿಯಲ್ಲೊಂದು ಒಂಟಿ ಮನೆ. ಬೇರೆ ಎಲ್ಲಿಯೂ ಜನವಸತಿ ಇರಲಿಲ್ಲ. ನಿರ್ಜನ ಪ್ರದೇಶ. ಅಲ್ಲೊಂದು ಗೇರು ಮರ. ಅದರಡಿಯಲ್ಲಿ ದಿನವೂ ಕುಳಿತು ಹರಟೆ ಹೊಡೆಯುತ್ತಿದ್ದೆವು. ಸಾಯಂಕಾಲ ಊಟದ ಡಬ್ಬಿಯಲ್ಲಿ ಏನಾದರೂ ಉಳಿದದ್ದಿದ್ದರೆ ಅಲ್ಲಿ ನಮ್ಮ ವನಭೋಜನ . ಅಲ್ಲಿಂದ ಮುಂದೆ  ಸ್ವಲ್ಪ  ದೂರ ನಡೆದರೆ ಆಟೋ ರಿಕ್ಷಾ ಬರುವ ಜಾಗ. 

ನಾನೀಗ ಹೇಳಹೊರಟಿರುವುದು ಪುಟ್ಟ ಹಕ್ಕಿಯ ಬಗ್ಗೆ.ಆ ಒಂಟಿ ಮನೆಯ ನೆನಪು ಬಂದಾಗೆಲ್ಲ ಜೊತೆಗೇ ಮನಸ್ಸಿಗೆ ಬರುವುದು ಅಲ್ಲಿಯ ಹೂತೋಟ. ಆ ಮನೆಯವರು ತುಂಬಾ ಆಸ್ಥೆಯಿಂದ ಬೆಳೆಸಿದ್ದ ತೋಟವದು. ಕೆಂಪು,ಹಳದಿ,ಬಿಳಿ ಬಣ್ಣದ ಗುಲಾಬಿಗಳು,ಸೇವಂತಿಗೆ,ಮಲ್ಲಿಗೆ,ಕನಕಾಂಬರ ಹೀಗೆ ತರಹೇವಾರಿ ಗಿಡಗಳು. ನನಗೆ ಆ ಹೂವುಗಳನ್ನು ದಿನಾ ನೋಡುವಾಸೆ. ಒಂದು ದಿನ ಹೀಗೆ ಹೂವುಗಳನ್ನೆಲ್ಲ ನೋಡುತ್ತಿದ್ದಾಗ ಗಿಡಗಳ ಮದ್ಯದಲ್ಲಿ ಏನೋ ಕಾಣಿಸಿತು ಅದೇನು ಅಂತ ಕುತೂಹಲದಿಂದ ನೋಡಿದೆ. ಪುಟ್ಟ ಹಕ್ಕಿಯೊಂದರ ಮನೆ  ಅದು. ನಾನು ಆಗಿನ್ನೂ ೬ ವರ್ಷದ ಹುಡುಗಿ. ಆ ಹಕ್ಕಿಯ ಗೂಡು ನನಗೆ ಆಕರ್ಷಣೀಯವಾಗಿ ಕಂಡಿತು. ಗೂಡಿನ ಒಳಗೇನಿದೆ ಎಂದು ನೋಡುವಾಸೆಯಾಯಿತು. ಏನೂ ಕಾಣಲಿಲ್ಲ. ಕುತೂಹಲವನ್ನು ಹತ್ತಿಕ್ಕಲಾರದೆ ಕೈಯಲ್ಲಿ ಮುಟ್ಟಿ ನೋಡಿದೆ. ಮೆತ್ತನೆಯ ಸ್ಪರ್ಶಾನುಭವ.!!!ಆಗ ನನಗೆ ಹಕ್ಕಿ ಮರಿಗಳಿವೆ ಒಳಗೆ ಎಂದು ತಿಳಿಯಿತು.ಮುದ್ದಾದ ಎರಡು ಹಕ್ಕಿ ಮರಿಗಳು.!ಮನಸ್ಸು ಮುದಗೊಂಡಿತು. 

ನನಗೆ ಸಂಗಾತಿಯಾಗಿ, ನನ್ನ ಕಾರುಬಾರುಗಳಿಗೆ ಸ್ಫೂರ್ತಿಯಾಗಿ ನನ್ನ ಬಾಲ್ಯ ಸ್ನೇಹಿತೆ "ಸ್ಫೂರ್ತಿ " ನನ್ನೊಂದಿಗಿದ್ದಳು. ತನ್ನ ಧೈರ್ಯವನ್ನು ನನಗೆ ತುಂಬಿ ತಾನು ಎಲೆ ಮರೆಯ ಕಾಯಿಯಂತೆ ಇದ್ದು ಬಿಡುತ್ತಿದ್ದಳು. ಹಕ್ಕಿ ಮರಿಗಳನ್ನು ನೋಡಿದ ಕೂಡಲೇ ಸಾಕುವ ಯೋಚನೇ ಜೊತೆಗೇ ಬಂತು. ಸರಿ ತಪ್ಪುಗಳೊಂದೂ ತಿಳಿಯದ ಮುಗ್ಧ ಮನಸ್ಸು. ಸ್ಫೂರ್ತಿಯ ಬೆಂಬಲವೂ ಜೊತೆಗಿತ್ತು. ಸರಿ ಇನ್ನೇನು ಬೇಕು? ನಾನು ಹಕ್ಕಿ ಗೂಡನ್ನೇ ಮನೆಗೆ ತಂದೆ. ನನ್ನ ಸಾಹಸ ನೋಡಿ ಎಲ್ಲರೂ ಪ್ರಶಂಸಿಸುತ್ತಾರೆ ಎಂದುಕೊಂಡಿದ್ದೆ. ಏನೋ ಸಾಧಿಸಿದ ತೃಪ್ತಿಯಿಂದ ಮನೆಗೆ ಬಂದು,ಅಪ್ಪ ಅಮ್ಮನಿಗೆ ತೋರಿಸಿದೆ. ಆದರೆ ಬೈಗುಳವಷ್ಟೇ ದೊರಕಿತು.ಆಮೇಲೆ ನನಗೆ ಕಷ್ಟಗಳ ಸರಮಾಲೆ. 

ಸ್ವಲ್ಪ ಹೊತ್ತಿನ ನಂತರ ಹಕ್ಕಿ ಮರಿಗಳ ಆರ್ಭಟ ಮೊದಲುಗೊಂಡಿತು. ಅಮ್ಮನ ಗುಟುಕಿಗಾಗಿ ಪರಿತಪಿಸುತ್ತಿದ್ದವು ಅವು. ನನಗೆ ಅವುಗಳ ಹಸಿವಿನ ಅರಿವಾಯಿತಾದರೂ ಹೇಗೆ ಊಟ ಮಾಡಿಸಬೇಕೆಂದು ತಿಳಿದಿರಲಿಲ್ಲ. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ನಾನು ತಿನ್ನುತ್ತಿದ್ದ ಅನ್ನವನ್ನೇ ತಿನ್ನಿಸಲು ಯತ್ನಿಸಿದೆ. ಚಿಕ್ಕ ಮರಿಗಳಿಗೇನು ಗೊತ್ತು ಹೇಗೆ ತಿನ್ನಬೇಕೆಂದು .?ತಿನ್ನಲಾರದೆ ಅವುಗಳ ಕೂಗು ಹೆಚ್ಚಾಯಿತು. ನನಗೆ ನಿದ್ರೆ ಬರುವ ಹೊತ್ತಾಗಿತ್ತು. ಅಮ್ಮನ ಜೊತೆ ಬೆಚ್ಚಗೆ ಮಲಗಿದೆ. ಆ ಪಾಪದ ಮರಿಗಳನ್ನು ಅವುಗಳ ಅಮ್ಮನಿಂದ ದೂರ ಮಾಡಿ. ಪಾಪ ಆ ತಾಯಿ ಹಕ್ಕಿ ತನ್ನ ಮರಿಗಳಿಗೋಸ್ಕರ ಎಷ್ಟು ಪರಿತಪಿಸಿತೋ ಎನೊ.?

ಬೆಳಿಗ್ಗೆ ಅವುಗಳಿಗೆ ಕೂಗಲೂ ಶಕ್ತಿ ಇರಲಿಲ್ಲ. ನಾನು ದಿನ ಬೆಳಿಗ್ಗೆ ಸ್ನಾನ ಮಾಡುತ್ತಿದ್ದೆನ್ನಲ್ಲ. ಅವುಗಳಿಗೂ ಸ್ನಾನ ಮಾಡಿಸಿದೆ. ಅವುಗಳಿಗೆ ಸ್ನಾನ ಮಾಡಿಸಬೇಕೆಂಬ ಯೋಚನೆ ನನಗಿರಲಿಲ್ಲ. ಅದು ಹೊಳೆದಿದ್ದು ನಮ್ಮ ಜಾಣೆ  ಸ್ಫೂರ್ತಿಗೆ.ಬಿಸಿನೀರಿನ ಅಭ್ಯಂಜನವೂ ಜರುಗಿತು. ಮದ್ಯಾಹ್ನದ ಹೊತ್ತಿಗೆ ಒಂದು ಮರಿ ಕೊನೆಯುಸಿರೆಳೆದಿತ್ತು. ಇನ್ನೊಂದು ಅರೆಜೀವವಾಗಿತ್ತು. ಮರುದಿನ ಇನ್ನೊಂದು ಮರಿಯು ಹಸಿವಿನಿಂದ ಸಾವನ್ನಪ್ಪಿತ್ತು. ಈ ಘಟನೆ ಯಾವಾಗಲೂ ಮನಸ್ಸಿನಾಳದಲ್ಲಿ ಅಚ್ಚೊತ್ತಿದಂತಿದೆ. ಆ ತಾಯಿ ಹಕ್ಕಿಯ ನೋವಿಗೆ,ಮರಿಗಳ ಸಾವಿಗೆ ನಾನೇ ಕಾರಣನಾದೆನಲ್ಲ ಎಂಬ ಪಶ್ಚಾತ್ತಾಪದ ನಿಟ್ಟುಸಿರು ಬರುತ್ತದೆ.ಇವತ್ತಿಗೂ ಆ ಮರಿಗಳ ಆರ್ತನಾದ ಕಿವಿಯಲ್ಲಿ ಅನುರಣಿಸುತ್ತದೆ. 

ಎಂದಾದರೂ ಪುಟ್ಟ ತಾಯಿ ಹಕ್ಕಿ ಸಿಕ್ಕಿದರೆ, ಚಿಕ್ಕ ವಯಸ್ಸು,ತಿಳಿಯದೇ ಆದ ಪ್ರಮಾದ ಕ್ಷಮಿಸು ಎಂದು ಕೇಳಬೇಕು ಎಂದುಕೊಂಡಿದ್ದೇನೆ. ನಿಮಗೆ ಯಾವಾಗಲಾದರೂ,ಅದು ಮಾತಿಗೆ ಸಿಕ್ಕಿದರೆ ನನ್ನ ಪರವಾಗಿ ಕ್ಷಮೆ ಯಾಚಿಸಿ please...


7 comments:

  1. Good 1 dear :) .. Keep it up !! :)

    ReplyDelete
  2. ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿ,ಮುದ್ದಾಗಿ ನಮ್ಮ ಮಲೆನಾಡಿನವರ ಮುಗ್ಧಮನಸ್ಸಿನ ಪ್ರತಿಬಿಂಬವಾಗಿ ಮೂಡಿಬಂದಿದೆ....ನನಗೂ ಬ್ಲಾಗ್ ಬರೆಯಬೇಕು ಅಂತ ಆಸೆ..ಅದಕ್ಕೆ ನಿಮ್ಮ ಬ್ಲಾಗ್ ಮೇಲೆ ಪುಟ್ಟ ಬ್ಲಾಗ್ ಬರೆದೆ...ನನ್ನ ರೂಮೆಂಬ ಪುಟ್ಟ ಗೂಡಿನಲ್ಲಿ ಕುಳಿತು ನಿಮ್ಮ "ಬ್ಲಾಗ್" ನ್ನು ಓದುತ್ತಿರುವಾಗ ಬಾಗಿಲಿನ ಹತ್ತಿರ ಚೀ೦ವ್ ಚೀ೦ವ್ ಕೂಗು ಕೇಳಿ ನೋಡಲಾಗಿ ಎರಡು "ಭಾರಧ್ವಾಜ " ಪಕ್ಷಿಗಳು ಕುಳಿತಿದ್ದವು. ನಾ ನಿಮ್ಮ ಬ್ಲಾಗಿನ ಕತೆ ಹೇಳಿ , ಕೇಳಿದೆ " ..ಹೀಗೆ ಅವರು ತುಂಬಾ ಬೇಜಾರಿನಲ್ಲಿದ್ದಾರೆ..ಆ ಹಕ್ಕಿಗಳು ನೀವೇನಾ ?" ಅದಕ್ಕವು ಮರುನುಡಿದವು" ಅಹುದಹುದು, ಆ ಘಟನೆಯ ನಂತರ ನಾವೂ ಇಲ್ಲಿ ಜನ್ಮ ತಾಳಿದೆವು..... ಅರಿಯದೆ ಮಾಡಿದ ಪಾಪಕಾರ್ಯಕ್ಕೆ- ಅದೂ ಆ ಮುಗ್ಧವಯಸ್ಸಿನಲ್ಲಿ- ಮರುಗದೆ "ಸುಚೇತ "ರಾಗಿ ಪಾಪಪ್ರಜ್ನೆಯಿಂದ ಚೇತರಿಸಿಕೊಳ್ಳಲಿ " ಎಂದು ಹೇಳಿ ಪುರ್ರನೆ ಹಾರಿ ಹೋದವು

    ReplyDelete
    Replies
    1. ಓಹ್!! ಧನ್ಯವಾದಗಳು..
      ನಿಮ್ಮ ಸಹಾಯಕ್ಕೆ ನನ್ನ ಕೃತಜ್ಞತೆಗಳು ಕೂಡ..

      Delete
    2. ಒಳ್ಳೆಯ ಬರಹ ಶೈಲಿ :-) Keep it up :)

      ನಿನ್ನ ಈ ಲೇಖನ ಓದಿ .. ನಾನು ನನ್ನ ಬಾಲ್ಯದಲ್ಲಿ ಬೆಕ್ಕಿನ ಮರಿಗೆ ಸ್ನಾನ ಮಾಡಿಸಿ ಕೊಂದ ಘಟನೆ ನೆನಪಾಯಿತು ...

      Delete
    3. ಧನ್ಯವಾದಗಳು ಅಶ್ವಥ್ ಅಣ್ಣ..:)
      ನಾನು ಈ ಘಟನೆ ಬರೆಯಬೇಕಾದರೆ ತಪ್ಪಿತಸ್ತ ಭಾವನೆ ಕಾಡುತ್ತಿತ್ತು. ಆದ್ರೆ ಇದನ್ನ ಬರೆದ ನಂತರ ತುಂಬಾ ಜನ ಇಂತಹ ಕೆಲಸಗಳನ್ನು ನಾವೂ ಮಾಡಿದ್ದೇವೆಂದರು..:)

      Delete