Tuesday 24 June 2014

ನೀನಿಲ್ಲದೇ...


 ಗೆಳೆಯಾ ,
      ಕಾಣದಷ್ಟು ದೂರದಲ್ಲಿರುವ, ಕರೆದರೂ ಬಾರದ,ಕಾಯುತ್ತಿದ್ದರೂ ಕನಿಕರಿಸದ ನಿನಗೆ..

ಕಾಡುತ್ತಿದೆ ನಿನ್ನ ನೆನಪು.ಮಳೆಗಾಲ ಪ್ರಾರಂಭವಾಗಿದೆ.ನೆನೆಯಲು ಆಸೆಯಾದರೂ ನೀನಿಲ್ಲವೆಂದು ಸುಮ್ಮನಾಗಿದ್ದೇನೆ. ಇಂದು ಬರುವೆ,ನಾಳೆ ಬರುವೆ ಎಂದು ನೀನು ನಡೆದು ಹೋದ ದಾರಿಯನ್ನೇ ನೋಡುತ್ತಿದ್ದೇನೆ. ಆದರೆ ಅದರ ಸೂಚನೆಯೇ ಕಾಣುತ್ತಿಲ್ಲವಲ್ಲ ಗೆಳೆಯ.!ಸೂರ್ಯ ದಿನಕ್ಕೊಮ್ಮೆ ಬರುವ.ಪೌರ್ಣಮಿ ತಿಂಗಳಿಗೊಮ್ಮೆ. ಸ್ವಾತಿ ಮಳೆ ವರ್ಷಕ್ಕೊಮ್ಮೆ. ಆದರೆ ನೀನು ವರ್ಷವೇ ಕಳೆದರೂ ಬರಲಿಲ್ಲ... 

ನೀನಿಲ್ಲದೇ ನನಗೇನಿದೆ ಅನ್ನೋ ಹಾಡು ನೆನಪಾಗುತ್ತದೆ. ಕೇಳಲು ಮತ್ತೆ ನೀನಿಲ್ಲ ಇಲ್ಲಿ.ನಿನ್ನೊಂದಿಗೆ ಕಳೆದ ಗಳಿಗೆಗಳ  ನೆನಪುಗಳನ್ನು ಚಿತ್ರಗಳಾಗಿ ಮೂಡಿಸಿ ಬಣ್ಣಗಳಿಂದ ನವೀಕರಿಸುವಾಸೆ. ಆದರೆ ಅಂತಹ ಗಳಿಗೆಯೊಂದೂ ನೆನಪಾಗುತ್ತಿಲ್ಲ. ಜೊತೆಗೆ ತೆಗೆದ ಒಂದು ಭಾವಚಿತ್ರವೂ ಇಲ್ಲ, ಪುಸ್ತಕದೊಳಗೆ ಅಡಗಿಸೋಣವೆಂದರೆ. ಕೈ ಹಿಡಿದು ನಡೆದ ಮಧುರ ಅನುಭೂತಿಯೂ ಇಲ್ಲ ಸ್ಮರಿಸೋಣವೆಂದರೆ.whatsapp  ಸ್ಟೇಟಸ್  ಬದಲಾಯಿಸಿದ್ದೇನೆ.ನಿನಗೋ ಅದು ಕಾಣದು.. ಒಂಟಿಯೆಂಬ ಭಾವನೆ ಬಹಳವಾಗಿ ಕಾಡುತ್ತದೆ. ಒಮ್ಮೊಮ್ಮೆ ನೀನು ನನ್ನ ಕಲ್ಪನೆಯೇನೋ ಎಂದೆನಿಸುತ್ತದೆ. 

ಆದರೇನು..!! ನಿನ್ನ ನವಿರಾದ ನೆನಪುಗಳಿವೆ. ನೀನೆಷ್ಟು ನೆನಪಾಗುವೆ ಎಂದು ಗೊತ್ತೇ ನಿನಗೆ.? ಬಿರಿದ ದುಂಡು ಮಲ್ಲಿಗೆ ಮುಡಿಯೇರಿ ಸೂಸಿದ ಸುವಾಸನೆಯಲ್ಲಿ ನಿನ್ನ ನೆನಪಿತ್ತು. ಮಳೆಗಾಲದ ಸಾಯಂಕಾಲದಲ್ಲಿ ಕೈಯಲ್ಲಿ  ಹಿಡಿದು ಕುಳಿತ coffee ಯ ಘಮದಲ್ಲಿ ನಿನ್ನ ನೆನಪಿತ್ತು. ದೂರದಲ್ಲೆಲ್ಲೋ ಕಾಣುವ ನೀಲಿ ಬೆಟ್ಟ, ಅದರ ನೆತ್ತಿಯಲ್ಲಿನ ಪುಟ್ಟ ದೇವಸ್ಥಾನ ನಿನ್ನ ನೆನಪು ತಂದಿತ್ತು. ಒಬ್ಬಳೇ ಕುಳಿತಾಗ ಪಕ್ಕದಲ್ಲಿದ್ದ ಖಾಲಿ ಜಾಗವೂ ನಿನ್ನ ನೆನಪನ್ನೇ ಹೊತ್ತು ಬಂದಿತ್ತು. ಕಾದ ನೆಲದ ಮೇಲೆ ಬಿದ್ದ ಹನಿ ತಂದ ಮೂಗರಳಿಸುವ ಪರಿಮಳದಲ್ಲಿ ಕೂಡ ಇದ್ದದ್ದು ನಿನ್ನದೇ ನೆನಪು ಗೊತ್ತೇ ಗೆಳೆಯ.ಎಷ್ಟೊಂದು ನೆನಪುಗಳು. ಅವುಗಳನ್ನೆಲ್ಲ ನನ್ನ ದಿನಚರಿಯ ಪುಟ ಪುಟ ಗಳಲ್ಲಿ ಬರೆದಿಡುತ್ತಿದ್ದೇನೆ.ನೀನು ಮರಳಿ ಬಂದ ದಿನ ನಿನ್ನ ಕೈಗಿರಿಸುತ್ತೇನೆ ಅದನ್ನು.. 

ನೀನಿರುವೆಯೆಂದು ನೆನಪಿಸಲು ನೀನಿತ್ತ ಹಸಿರು ಹರಳಿನ ಕಿವಿಯೋಲೆಯಿದೆ. ತಿಂದು ಮುಗಿಸಿದ chocolate ನ wrapper ಇದೆ. ನೀನು ಬಿಡಿಸಿ ಕಳಿಸಿದ ನನ್ನ ಚಿತ್ರವಿದೆ.ಅರ್ಥವಿಲ್ಲದೆ ಆಗುವ ಜಗಳಗಳಲ್ಲಿ ಅಸಹಾಯಕತೆಯಿದೆ.ಬರುವ ಕಣ್ಣೀರನ್ನು ಒರೆಸಲು ಮಾತ್ರ ನೀನಿಲ್ಲ.ಆಗ ನಿಜವಾಗಿಯೂ ಅನಿಸುತ್ತದೆ,ಯಾವುದಿದ್ದರೂ ನೀನಿಲ್ಲವಲ್ಲ..!ನೀನಿಲ್ಲದೆ ನಿಜವಾಗಿಯೂ ಏನೂ ಇಲ್ಲ..ಕಳೆದ ದಿನಗಳ ಮೆಲುಕು ಹಾಕುತ್ತ, ಬರುವ ದಿನಗಳನ್ನು ನಿನ್ನೊಂದಿಗೆ ಕಳೆಯುವ ಹಾರೈಕೆಯಲ್ಲಿ 

ಪ್ರೀತಿಯಿಂದ... 
ನಿನ್ನ ಗೆಳತಿ.

Monday 16 June 2014

ಶುಭಾಶಯಗಳೊಂದಿಗೆ..

ಕೆಲವಾರು ಸಂವತ್ಸರಗಳ ಹಿಂದೆ ಜೂನ್ ೧೬ ರಂದು  ನಮ್ಮ ಮನೆಗೊಂದು ಪುಟ್ಟ ಪಾಪು ಬಂದಿತ್ತು . ಆ ಪುಟ್ಟ ಪಾಪುವಿನ ೧೬ ನೆ ಹುಟ್ಟಿದ ಹಬ್ಬ ಇವತ್ತು ( ದೊಡ್ಡವನಾದರೂ ನನಗಿನ್ನೂ ಚಿಕ್ಕ ತಮ್ಮ..). ಅವನಿಗೆ ಶುಭಾಶಯ ಕೋರುವ ಸಲುವಾಗಿ ಈ ಲೇಖನ..                                           


೧೯೯೯ ರ ಜೂನ್ ತಿಂಗಳು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ ನಾನು ಆಗ.ಮಳೆಗಾಲ ಆಗಲೇ ಕಾಲಿಟ್ಟಿತ್ತು ಮಲೆನಾಡಿನಲ್ಲಿ.ರಸ್ತೆಗಳೆಲ್ಲ ಕೆಸರುಮಯ. ಹಳ್ಳ ಗುಂಡಿಗಳಲ್ಲಿ ಕೆಂಪು ನೀರು.ಅವತ್ತೊಂದಿನ ಬೆಳಿಗ್ಗೆ ಎದ್ದಾಗ "ನಿಂಗೆ ತಮ್ಮ ಹುಟ್ಟಿದ್ದಾನೆ ಕಣೇ" ಅಂತ ಅಪ್ಪ ಖುಷಿಯಿಂದ ಹೇಳಿದ್ದರು."ನನ್ನೂ ಕರ್ಕೊಂಡು ಹೋಗಿ ಪಾಪು ನೋಡೋಕೆ" ಅಂದಿದ್ದೆ ಅಪ್ಪಂಗೆ. "ಬೇಡ ಕಣೇ ಮಳೆ ಜಾಸ್ತಿ ಇದೆ.ನೀನು ಶಾಲೆಗೆ ಹೋಗು. ಅಜ್ಜನ ಮನೆಗೆ ಹೋಗಿ ನೋಡ್ಕೊಂಡು ಬಂದ್ರಾಯ್ತು" ಅಂದರು ಅಪ್ಪ.
ನಿನಗೊಂದು ಉಡುಗೊರೆ ಇದೆ ಅಂತ ಹೇಳಿ, ಏನು? ಹೇಗಿದೆ ? ಅಂತ ನೋಡೋಕೆ ಬಿಡದೆ ಇದ್ದಾಗ , ನೋಡ್ಬೇಕು ಅನ್ನೋ ಕುತೂಹಲ, ಯಾವಾಗ ನೋಡ್ತಿನೋ ? ಅನ್ನೋ ಹಪಹಪಿ ಎಲ್ಲಾ ಇರುತ್ತಲ್ಲಾ  ಹಾಗೆ ಆಗಿತ್ತು ನಂಗೆ. ತಮ್ಮ ಹುಟ್ಟಿದಾನೆ ಅಂತಿದಾರೆ ಆದ್ರೆ  ತೋರಿಸ್ತಿಲ್ಲ ಅಂತ ಬೇಜಾರಾಗಿತ್ತು. ಶಾಲೆಗೆ ಹೋದ ಮೇಲೆ ಎಲ್ಲರಿಗೂ ಈ ವಿಷಯ ಹೇಳಿದೆ.(ನಮ್ಮ ಟೀಚರ್ ಗೂ ಸಹ ಹೇಳಿದ್ದೆ..) . ಅದೇ ಸಂಭ್ರಮದಲ್ಲಿ ಮದ್ಯಾಹ್ನ ಊಟದ ಘಂಟೆ ಬಾರಿಸಿತು. 
 
ನನ್ನ ಗೆಳತಿ ಒಬ್ಬಳು ರೆಜಿನಾ ಅಂತ.ಊಟದ ಸಮಯದಲ್ಲಿ ಅವಳು ಕೇಳಿದಳು "ಯಾವ ಆಸ್ಪತ್ರೇಲಿ ಇದ್ದಾರೆ ಗೊತ್ತಾ" ಅಂತ. ಬೆಳಿಗ್ಗೆ ಎಲ್ಲ ಮಾತಾಡ್ಕೊಳೋದು  ಕೇಳಿದ್ದ ನಾನು "ಗವರ್ನಮೆಂಟ್ ಹಾಸ್ಪಿಟಲ್ ಅಂತೆ" ಅಂದಿದ್ದೆ . ಅಷ್ಟೇ! ಅವಳು ನನ್ನನ್ನು ಇಲ್ಲೇ ಹತ್ತಿರ ಬಾ ಹೋಗೋಣ ಅಂತ ಕರೆದೊಯ್ದಳು. ಅವಳ ದೊಡ್ಡ ಕೊಡೆಯಲ್ಲಿ ತೂರಿಕೊಂಡು ಬಟ್ಟೆ ಎಲ್ಲ ತೋಯಿಸಿಕೊಂಡು ಅಂತೂ ಆಸ್ಪತ್ರೆ ತಲುಪಿಕೊಂಡೆವು.ಆದರೆ ಅಲ್ಲಿ ಎಲ್ಲಿ ಅಂತ ಹುಡುಕುವುದು.! ಆದರೆ ಅದು ನಮಗೆ ಸಮಸ್ಯೆಯಾಗಲೇ ಇಲ್ಲ. ಏನೋ ತರಲು ಹೊರಬಂದ ಅಪ್ಪ,ನಮ್ಮನ್ನು ನೋಡಿ ಆಶ್ಚರ್ಯದಿಂದ "ನೀವಿಬ್ರು ಹೇಗೆ ಬಂದ್ರಿ" ಅಂತ ಕೇಳಿ ಒಳಗೆ ಕರೆದುಕೊಂಡು ಹೋದರು. 

ಒಳಗೆ ಹೋದ ನಾನು ಮೊದಲು ನೋಡಿದ್ದು ಮಂಚದ ಮೇಲೆ ಮಲಗಿದ್ದ ಅಮ್ಮನನ್ನು. ಅವಳಿಗೂ, ನಾನು ಬರುತ್ತೇನೆ ಎಂದು ಗೊತ್ತಿರದೇ ಇದ್ದುದರಿಂದ ಆಶ್ಚರ್ಯವಾಯಿತು.ನಾನೆಷ್ಟು ಎತ್ತರವಾಗಿದ್ದೆ ಎಂದರೆ ಮಂಚದ ಮೇಲೆ ಮಲಗಿದ್ದ ಮಗು ಕಾಣುತ್ತಲೇ  ಇರಲಿಲ್ಲ. ಅಪ್ಪ ನನ್ನನ್ನು ಎತ್ತಿಕೊಂಡು ನೋಡಲು ಹೇಳಿದರು. ಹೇಗಿತ್ತು ಮಗು ಅದೇನೂ ನೆನಪಿಲ್ಲ ನನಗೆ. ಆದರೆ ಅದರ  ಪುಟ್ಟ ಕೈ ಮಾತ್ರ ಸುತ್ತಿದ ಬಟ್ಟೆಯಿಂದ ಹೊರಗೆ ಬಂದಿತ್ತು.ಮೃದುವಾದ ಕೈ. ಚಿಕ್ಕಚಿಕ್ಕ ಬೆರಳುಗಳು.ಮೆತ್ತಗಿನ ಉಗುರುಗಳು. ಅದರ ಕೈ ಬೆರಳುಗಳನ್ನು ಹಿಡಿದುಕೊಂಡಾಗ ಆ ಮಗು ಕೂಡ ನನ್ನ ಬೆರಳನ್ನು ಹಿಡಿದುಕೊಂಡಿತ್ತು. ಒಂದು ಮುತ್ತು ಕೊಟ್ಟಿದ್ದೆ ಅದರ  ಕೈಗೆ ಎನ್ನುವುದು ಮಾತ್ರ ನೆನಪಿದೆ.ಇದು ನನ್ನ ತಮ್ಮನನ್ನ ಮೊದಲ ಬಾರಿಗೆ ನೋಡಿದ್ದು ನಾನು. 

ಶಾಲೆಗೆ ತಡವಾಗುತ್ತದೆ ಎಂದುಕೊಂಡು,ಅಮ್ಮನಿಗೆ ನಾಳೆ ಬರುತ್ತೇವೆ ನೋಡಲು ಎಂದೆ. ಅಮ್ಮ "ನಾವು ಇವತ್ತು ಅಜ್ಜನ ಮನೆಗೆ ಹೋಗ್ತಿದೀವಿ. ನೀನು ನಾಳೆ ಬರಬೇಡ. ಶನಿವಾರ ಹೇಗಿದ್ದರೂ ರಜಾ ಇರುತ್ತದೆಯಲ್ಲ, ಆಗ ಅಜ್ಜನ ಮನೆಗೆ ಬರುವೆಯಂತೆ" ಎಂದಿದ್ದಳು. ಸರಿ ಎಂದು ಹೊರಟು  ಶಾಲೆ ತಲುಪಿಕೊಂಡಿದ್ದೆವು ನಾವು. ಶನಿವಾರ ಬಂದ  ತಕ್ಷಣ ಅಪ್ಪ ,ನಾನು ಅಜ್ಜನ ಮನೆಗೆ ಹೋಗುತ್ತಿದ್ದೆವು ೫:೩೦ ಕ್ಕೆ ಬರುತ್ತಿದ್ದ ದುರ್ಗಾಂಬಿಕ ಬಸ್ಸಿನಲ್ಲಿ. ಬಿಳಿ ಬಟ್ಟೆಯಲ್ಲಿ ಸುತ್ತಿಸಿಕೊಂಡು ನನ್ನ ತಮ್ಮ ಮಲಗಿರುತ್ತಿದ್ದ.ನಾನು ನಿಧಾನಕ್ಕೆ ಕಾಲ ಮೇಲೆ ಮಲಗಿಸಿಕೊಳ್ಳುತ್ತಿದ್ದೆ. ಆಟ ಆಡಿಸುತ್ತಿದ್ದೆ.ಪ್ರತಿ ವಾರವೂ ಹಾಗೇ ಕಳೆಯುತ್ತಿತ್ತು.ಅವನ ಹೆಸರು ಇಡುವಾಗ ನಾನು ಹಟ  ಮಾಡಿದ್ದೆ ಸ್ವರೂಪ್ ಅಂತಾನೆ ಇಡಬೇಕು ಅಂತ. ಮನೆಯವರೆಲ್ಲರೂ ಅದಕ್ಕಿಂತ ಚಂದದ ಹೆಸರು ಹುಡುಕಿದ್ದರು ಆದರೂ ನನ್ನ ಮಾತು ನಡೆಯಬೇಕೆಂದು ಹಟ  ಮಾಡಿ ಸ್ವರೂಪ್ ಅಂತ ಹೆಸರಿಡಿಸಿದೆ. 

ನಡೆಯಲು ಕಲಿತ ಮೇಲೆ ನನ್ನ ಹಿಂದೆಯೇ ಬರುತ್ತಿದ್ದ.ಒಂದು ದಿನ ಯಾವುದೋ ಹಕ್ಕಿ ಹಾರುವುದನ್ನು ನೋಡುತ್ತಾ ಹೋಗುತ್ತಿದ್ದ ನನಗೆ ಅವನು ಬಂದಿದ್ದು ಗೊತ್ತೇ ಆಗಿರಲಿಲ್ಲ.ಬರಿಗಾಲಲ್ಲಿ ಬಂದಿದ್ದ ಅವನಿಗೆ ಒಂದು ದೊಡ್ಡ ಮುಳ್ಳು ಚುಚ್ಚಿತು.ಜೋರಾಗಿ ಕೂಗಲು ಪ್ರಾರಂಬಿಸಿದ. ನನಗೆ ಭಯ, ಸಿಟ್ಟು ಒಟ್ಟಿಗೆ ಬಂತು. "ನನ್ನ ಹಿಂದೆ ಬಾ ಅಂತ ನಾನು ಹೇಳಿದ್ನಾ ನಿಂಗೆ" ಅಂತ ಬೈದು ಅಂತ ಎತ್ತಿಕೊಂಡು ಮನೆಗೆ ಹೋದೆ. ತುಂಬಾ ದೊಡ್ಡ ಮುಳ್ಳು! ಪುಟ್ಟ ಪಾದಕ್ಕೆ ಆಳವಾಗಿ ಹೊಕ್ಕಿತ್ತು . ನಾವು ಎಷ್ಟು ಪ್ರಯತ್ನಿಸಿದರೂ ಹೊರ ತೆಗೆಯಲಾಗದೆ ಕೊನೆಗೆ ಡಾಕ್ಟರ್  ಹತ್ರ ಕರೆದುಕೊಂಡು  ಹೋಗಬೇಕಾಯಿತು.ಅವತ್ತು ಒಂದು ದಿನ ನಡೆಯಲಾಗದೆ ಇದ್ದುದರಿಂದ ನನ್ನ ಹಿಂದೆ ಬಂದಿರಲಿಲ್ಲ.!


ಎಷ್ಟೋ ಜಗಳ ಗಳು ನಮ್ಮ ಮಧ್ಯೆ. ದಿನಾ ಕಚ್ಚಾಟ. ಏನಾದರೂ,"ನೀನು ದೊಡ್ಡವಳು ಸುಮ್ನಿರು" ಅಂತಿದ್ರು.ನಂಗೆ ಸಿಟ್ಟು ಬರುತ್ತಿತ್ತು. ಆದರೆ ಎಲ್ಲ ಕೆಲಸಗಳಲ್ಲಿ ನನಗೆ ಸಹಾಯ ಮಾಡುತ್ತಿದ್ದ. ಬೇಗ ಕೆಲಸ ಮುಗಿದರೆ ಉಳಿದ ಸಮಯದಲ್ಲಿ ನಾವು ಆಟ ಆಡಬಹುದು ಅಂತ.ಇವಾಗ್ಲೂ "ಅಕ್ಕ ನನ್ನ ಪುಸ್ತಕಕ್ಕೆ ಬೈಂಡ್ ಹಾಕಿ ಕೊಡು, ಹೆಸರು ಬರೆದು ಕೊಡು,ಅಕ್ಕ ಬಾರೆ ಕರ್ಜಿ  ಹಣ್ಣು ತಿನ್ನೋಕೆ ಹೋಗೋಣ, ಬೈಕ್ ಅಲ್ಲಿ ಅಜ್ಜನ ಮನೆಗೆ ಕರ್ಕೊಂಡು ಹೋಗ್ತೀನಿ ಬಾ" ಅಂತ ಕೇಳ್ತಾನೆ. "ಯಾವತ್ತು ಮನೆಗೆ ಬರ್ತೀಯ .?ನಂಗೆ ಆ ಮೂವಿ ತಗೊಂಡು ಬಾ. pen drive ತಗೊಂಡು ಬಾ" ಅಂತೆಲ್ಲಾ ಮೆಸೇಜ್ ಮಾಡ್ತಾನೆ.ಮನೆಗೆ ಹೋದ ತಕ್ಷಣ ನನ್ನ ಚೀಲವನ್ನೆಲ್ಲ ಕೆದಕಿ ನನಗೇನು ತಂದಿದೀಯ ಅಂತ ಹುಡುಕುತ್ತಾನೆ. 

 
                                              
ಇವತ್ತು ನನ್ನ ಪುಟ್ಟ ತಮ್ಮ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಅವನ ಜೊತೆಗಿನ ನೆನಪುಗಳು ಬರೆದು ಮುಗಿಯದ ಅವನಿಗೆ ಮತ್ತೊಮ್ಮೆನಮ್ಮೆಲ್ಲರ ಹಾರೈಕೆಗಳು. 

 
ಪ್ರೀತಿಯ ಸ್ವರೂಪ್,

ಇವತ್ತು ನಿನ್ನ ಹುಟ್ಟಿದ ದಿನ. ಹುಟ್ಟಿದ ಹಬ್ಬದ ಹಾರ್ದಿಕ ಶುಭಾಷಯಗಳು.ನಿನ್ನೆಲ್ಲ ಕನಸುಗಳು ಸಾಕಾರಗೊಳ್ಳಲಿ ಎಂದು ಆಶಿಸುತ್ತಾ...

                             


ಶುಭಾಶಯಗಳೊಂದಿಗೆ ,
ಸುಚೇತ..

Tuesday 10 June 2014

ಎರಡು ರೂಪಾಯಿ..!!

ಇಂತಹದೇ ಘಟನೆಯೊಂದನ್ನು ಬಹಳ ವರ್ಷಗಳ ಹಿಂದೆ ಎಲ್ಲೋ  ಓದಿದ ನೆನಪು.ಇದು ನನ್ನ ಅನುಭವಕ್ಕೂ ಬಂದಿರುವುದು ಕಾಕತಾಳೀಯ.
 
ನಾನು  ಆಫೀಸ್ ಗೆ ಹೊರಟಿದ್ದ ಒಂದು ಬೆಳಿಗ್ಗೆ. ಕುಂದಲಹಳ್ಳಿಯಿಂದ ವೈದೇಹಿಗೆ ಹೋಗಬೇಕಾಗಿತ್ತು.ವೋಲ್ವೋ ಬಸ್ ಗೆ ದಿನವೂ ೭೦ ರೂಪಾಯಿ ಮೀಸಲಿಡಬೇಕು. ಅದಕ್ಕಾಗಿ ಅವತ್ತು ವೋಲ್ವೋ ಬೇಡವೆಂದು ತೀರ್ಮಾನಿಸಿ ಬೇರೆ ಬಸ್ ಹತ್ತಿದ್ದೆ.ವೈದೇಹಿಗೆ ಕುಂದಲಹಳ್ಳಿಯಿಂದ ೧೩ ರೂಪಾಯಿ ಎಂದ ಕಂಡಕ್ಟರ್. ಚಿಲ್ಲರೆ ಇಲ್ಲವೆಂದು ಹತ್ತು ರೂಪಾಯಿಯ ನೋಟೊಂದನ್ನು, ೫ ರೂಪಾಯಿಯ ನಾಣ್ಯವೊಂದನ್ನು ಕೊಟ್ಟೆ. ೨ ರೂಪಾಯಿ ಚಿಲ್ಲರೆ ಕೊಡಬೇಕಾಗಿದ್ದ ನಿರ್ವಾಹಕ ಅದು ದೊಡ್ಡ ಮೊತ್ತವೇ ಅಲ್ಲವೆಂಬಂತೆ ಮುಂದೆ ಹೋದ, "ಯಾರ್ರೀ ಟಿಕೆಟ್ ಅಲ್ಲಿ" ಎಂದೆನ್ನುತ್ತಾ..!
 
ಮುಂದಿನ ಒಂದು ಸ್ಟಾಪ್ ನಲ್ಲಿ  ಹತ್ತಿದ ಮಹಿಳೆಯೊಬ್ಬಳು ೧೦ ರೂಪಾಯಿಯ ಒಂದು ನೋಟ್ ಒಂದನ್ನು ಕೊಟ್ಟು ಎಲ್ಲಿಗೆ ಟಿಕೆಟ್ ಬೇಕೆಂದು ಕೇಳಿದಳು.ಅಲ್ಲಿಗೆ ೧೨ ರೂಪಾಯಿ,ಇನ್ನೆರಡು ರೂಪಾಯಿ ಕೊಡಮ್ಮ ಎಂದು ಕೇಳಿದ ಕಂಡಕ್ಟರ್. ಅವಳು ಇಲ್ಲಿಂದ ಅಲ್ಲಿಗೆ ಹತ್ತೇ ರೂಪಾಯಿ.ಹನ್ನೆರಡಲ್ಲ.! ನಾನು ಇನ್ನೆರಡು ರೂಪಾಯಿ ಕೊಡಲ್ಲ ಎಂದಳು.ಕಂಡಕ್ಟರ್ ಬಿಡುತ್ತಾನೆಯೇ .? ಏನೇನೋ ಒಂದಿಷ್ಟು ಬೈಗುಳಗಳನ್ನು ಬೈದು ಎರಡು ರೂಪಾಯಿ ಕೊಡದಿದ್ದರೆ ಇಳಿ ಕೆಳಗೆ ಎಂದು ಕೂಗಿದ.ಆದರೂ ಅವಳು ಜಗ್ಗಲಿಲ್ಲ.ಅವಳ ಹಟಕ್ಕೆ ಸೊಪ್ಪು ಹಾಕದೆ, ಡ್ರೈವರ್ ಬಸ್ ನಿಲ್ಲಿಸಿ ಕೆಳಗಿಳಿಯಲು ಹೇಳಿದ.ಆ ಮಹಿಳೆ ಕೊನೆಯಲ್ಲಿ ನಿರ್ವಾಹವಿಲ್ಲದೆ ಕೊಡಬೇಕಾಯಿತು.

ನಾನು ಇಳಿಯುವ ವೈದೇಹಿ ಸ್ಟಾಪ್ ಬಂದಿತು. ೨ ರೂಪಾಯಿ ಚಿಲ್ಲರೆ ನನಗೆ ಬರಬೇಕಾಗಿದ್ದುದರಿಂದ ಹೋಗಿ ಕೇಳಿದರೆ, ಕಂಡಕ್ಟರ್ ಎರಡೇ ರೂಪಾಯಿ ಎಂಬ ಅಸಡ್ಡೆಯಿಂದ ಸ್ವಲ್ಪ ಜೋರಾಗೆ ಚಿಲ್ಲರೆ ಇಲ್ಲಾರೀ ಅಂತ ಹೇಳಿಕೊಂಡು ಹೊರಟೇ  ಹೋದ. ಬೆಳಿಗ್ಗೆ ಬೆಳಿಗ್ಗೆ ಎರಡು ರೂಪಾಯಿಗೋಸ್ಕರ ಅವನ ಬೈಗುಳ ಕೇಳುವ ಮನಸಿಲ್ಲದೆ, ವೋಲ್ವೋ ಬಸ್ ಹತ್ತಿದ್ದರೆ ಮೂವತ್ತೈದು ಕೊಡಬೇಕಾಗಿತ್ತು, ಇದು ಹದಿನೈದು ರೂಪಾಯಿಯಲ್ಲೇ ಮುಗಿಯಿತು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ.ಆದರೂ  ಅವರಿಗೆ ಬರಬೇಕಾಗಿದ್ದ ಎರಡು ರೂಪಾಯಿಗೆ ಅಷ್ಟು ರಾದ್ದಾಂತ ಮಾಡಿದ ಅವರು ನನಗೇಕೆ ಎರಡು ರೂಪಾಯಿ ಕೊಡಲಿಲ್ಲವೋ ತಿಳಿಯಲಿಲ್ಲ. 

Friday 6 June 2014

ತಿಗಣೆ ಪುರಾಣ

ಈಗ್ಗೆ ಆರು ಸಂವತ್ಸರಗಳ ಹಿಂದೆ ಗುಡ್ಡಟ್ಟು ಶ್ರೀ ವಿನಾಯಕ ದೇವಸ್ಥಾನದಲ್ಲಿ ದೇವರೆದುರು ನಿಂತು ಕಣ್ಮುಚ್ಚಿ ಕೈ ಮುಗಿದು ಪರಮ ಭಕ್ತಿ ಇಂದ ಕೇಳಿಕೊಂಡಿದ್ದೆ, "ಇಂಜಿನಿಯರಿಂಗ್ ಬೇಗ ಮುಗಿದು ಒಂದು ಕೆಲಸ ಅಂತ ಸಿಕ್ಕಿಬಿಟ್ಟರೆ ಸಾಕು ಇನ್ನೇನು ಆಸೆ ಇಲ್ಲ ದೇವರೇ. ನೀನು ಇದೊಂದು ಬೇಡಿಕೆ ಪೂರ್ತಿ ಮಾಡಿದ್ರೆ ನಾನು ನಿಂಗೆ ಆಯುರ್ಕೊಡ ಮಾಡಿಸ್ತೀವಿ" ಅಂತ. (ಆಯುರ್ಕೊಡ :ಸಾವಿರ ಕೊಡಗಳ ನೀರಿನಿಂದ ದೇವರಿಗೆ ಮಾಡುವ  ಅಭಿಷೇಕ).ಆಸೆ ಎನ್ನುವುದು ಆ ಕ್ಷಣಕ್ಕೆ ಅದೊಂದೇ ಆಗಿತ್ತು. ಇನ್ನೊಂದೇ ಮತ್ತೊಂದೇ ಅಂತ  ಪ್ರತಿ ಬಾರಿ ದೇವರೆದುರು ಅರ್ಜಿ ಹಾಕುವಾಗಲೂ ಇದು ಕೊನೆಯದು ಅಂತಲೇ ಪ್ರಾರ್ಥಿಸುತ್ತೇನೆ. (ಸುಳ್ಳು ಎಂದು ಅರಿವಿದ್ದರೂ ಸಹ !!) ಬೇಡಿಕೆ ಎಷ್ಟು ದೊಡ್ಡದು ಎನ್ನುವುದರ ಮೇಲೆ ಹಣ್ಣುಕಾಯಿ ಮಾಡಿಸುವುದೋ, ಕಾಣಿಕೆ ಹಾಕುವುದೋ ಅಥವಾ ಆಯುರ್ಕೊಡದಂತಹ ಅಭಿಷೇಕ ಮಾಡಿಸುವುದೋ ಎಂಬುದು  ನಿರ್ಧಾರವಾಗುತ್ತದೆ.ಇದು ಲಂಚದ ಅವತಾರ.ಹಾಗೆ ಕೇಳಿಕೊಂಡ ಅವತ್ತು  ದೇವರಿಗೆ ನನ್ನ ಮೊರೆ ಕೇಳಿಸಿತೇನೋ.! ಕೃತಯುಗ, ತ್ರೇತಾಯುಗವಾಗಿದ್ದ ಪಕ್ಷದಲ್ಲಿ ಪ್ರತ್ಯಕ್ಷವಾಗುತ್ತಿದ್ದ ದೇವರು ಕಲಿಯುಗವೆಂದು ಅಲ್ಲಿಂದಲೇ ನನ್ನ ಬೇಡಿಕೆಗೆ ಅಸ್ತು ಎಂದಿದ್ದನೆನಿಸುತ್ತದೆ. ಅಂದುಕೊಂಡಿದ್ದೆಲ್ಲ ಆಗಿದ್ದರೂ ಇವತ್ತಿನವರೆಗೂ ಆ ಹರಕೆ ತೀರಿಸಲಾಗಿಲ್ಲ ನನಗೆ. 


ಎರಡು ವರುಷಗಳ ಹಿಂದೆ ಇಂಜಿನಿಯರಿಂಗ್ ಮುಗಿದಿತ್ತು. ಯಾವುದೇ ಯೋಚನೆ ಇಲ್ಲದೆ ಮೂರು ತಿಂಗಳು ಕಳೆದ ಮೇಲೆ ಕೆಲಸಕ್ಕೆ ಕರೆ ಬಂದಿತ್ತು.ಕೆಲಸ ದೂರದ ಹೈದರಾಬಾದಿನಲ್ಲಿ.ಅಪ್ಪ,ಅಮ್ಮನಿಗೆ ಚಿಂತೆಯಾದರೆ ನನಗೋ ಸಂಭ್ರಮ.ಬೇರೆ ರಾಜ್ಯ,ಅದರಲ್ಲೂ  ಆಂಧ್ರ ಪ್ರದೇಶ. ನಾಲ್ಕು ವರ್ಷ  ಹಾಸ್ಟೆಲ್ನಲ್ಲಿ ಲೆಕ್ಕವಿಲ್ಲದಷ್ಟು ತೆಲುಗು ಸಿನಿಮಾ ನೋಡಿ, ತೆಲುಗು ಕಲಿತುಕೊಂಡಿದ್ದ ನನಗೆ ಅದನ್ನು  ಮಾತನಾಡುವವರ  ಜೊತೆ ನನ್ನ ಭಾಷಾಪ್ರಾವಿಣ್ಯತೆಯ ಪ್ರದರ್ಶನ ಮಾಡಬೇಕೆಂಬ ಹಂಬಲವಿತ್ತು.ಅದಕ್ಕಾಗಿ ಸಿಕ್ಕ ಅವಕಾಶಕ್ಕೆ ಖುಷಿ ಪಟ್ಟಿದ್ದೆ.ನನ್ನ ಧೈರ್ಯ ನೋಡಿ ಅಪ್ಪ,ಅಮ್ಮನಿಗೂ ಧೈರ್ಯ ಬಂದಿರಬೇಕು.ಸರಿ ಹೊರಡಲು ಎಲ್ಲ ತಯಾರಿಯೂ ನಡೆಯಿತು.ತೀರ್ಥಹಳ್ಳಿಯಿಂದ  ಹೈದರಾಬಾದ್ ಗೆ  ರಾಜಹಂಸ ಬಸ್ ಇದೆ.ಅದರಲ್ಲಿ ಹೈದರಾಬಾದ್ ಹೋಗುವುದೆಂದೂ,ಮೊದಲ ಬಾರಿಯ ಪ್ರಯಾಣವಾದ್ದರಿಂದ ಅಪ್ಪ,ತಮ್ಮ ಜೊತೆಗೆ ಬರುವುದೆಂದೂ ಒಟ್ಟಿಗೆ ಮೂರು ಟಿಕೆಟ್ ತೆಗೆದುಕೊಂಡದ್ದಾಯಿತು.ಹೊರಡುವ ಕೊನೆ ದಿನದವರೆಗೂ ಇದ್ದ ಉತ್ಸಾಹ ಹೊರಡುವ ದಿನ ಮಾತ್ರ ಬತ್ತಿಹೋಗಿತ್ತು.ಏನೋ ಹೇಳಲಾಗದ ಚಡಪಡಿಕೆ.ಮತ್ತೆ ಬರುವುದೇ ಇಲ್ಲವೇನೋ ಹಿಂದಿರುಗಿ ಎನ್ನುವ ಭಾವ.ಬಸ್ ಸ್ಟಾಂಡ್ ಗೆ ಬಂದ ಎಲ್ಲರಿಂದ ಬೀಳ್ಕೊಂಡು ಹೊರಡುವಾಗ ಮನಸ್ಸು ಖಾಲಿ ಖಾಲಿ .. 

ಹೊರಡುವ ಮೊದಲು ಮನೆಯಲ್ಲಿ ಅಮ್ಮ ಹೇಳಿದ್ದರು "ಬಸ್ನಲ್ಲಿ ತಿಗಣೆಗಳು ಇರ್ತವೆ ಕಣೇ. ಅಲ್ಲಿಗೆ ಹೋದಮೇಲೆ ಸ್ವಲ್ಪ ಬ್ಯಾಗ್ ಎಲ್ಲ ಸರಿಯಾಗಿ ನೋಡಿಕೋ. ಒಂದು ಸಲ ರೂಂನಲ್ಲಿ ಸೇರಿಕೊಂಡರೆ ಮತ್ತೆ ಅವು ಹಾಗೆ ಜಾಸ್ತಿ ಆಗ್ತಾವೆ" ಅಂತ. "ಸರಿ ಅಮ್ಮ ಹೋದ ತಕ್ಷಣ ಎಲ್ಲ ನೋಡಿ ಜೋಡಿಸಿ ಇಟ್ಕೊಳ್ತಿನಿ " ಅಂತ ಅಂದಿದ್ದೆ ನಾನು.ಬಸ್ನಲ್ಲಿ ನಂಗೆ ತಿಗಣೆಗಳದ್ದೇ ಚಿಂತೆ. ಎಷ್ಟು ಸೇರಿಕೊಂಡಿದೆಯೋ ಬ್ಯಾಗಿನಲ್ಲಿ ಅಂತ. ಶುಕ್ರವಾರ ೩:೩೦ಗೆ ಬಸ್ ಹತ್ತಿದ್ದ ನಾವು ಹೈದರಾಬಾದ್ ತಲುಪುವಷ್ಟರಲ್ಲಿ ಮಾರನೇ ದಿನ ಬೆಳಿಗ್ಗೆ ಸರಿಯಾಗಿ ೮ ಗಂಟೆ.ಹಾಸ್ಟೆಲ್ ಇನ್ನು ಹುಡುಕಿರಲಿಲ್ಲವಾದ್ದರಿಂದ ಎರಡು ದಿನ ಮುಂಚಿತವಾಗಿಯೇ ಹೊರಟು ಒಂದು ವಸತಿಗೃಹದಲ್ಲಿ ಕೊಠಡಿಯೊಂದನ್ನು ತೆಗೆದುಕೊಂಡಿದ್ದೆವು.ಎಲ್ಲ ವಸ್ತುಗಳನ್ನು ಎಸೆದು  ಹಾಸಿಗೆಯ ಮೇಲೆ ಮೈಚೆಲ್ಲಿದವಳಿಗೆ ಮತ್ತೆ ಬಂತು ತಿಗಣೆಯ ಯೋಚನೆ. ತಕ್ಷಣ ಎಲ್ಲ  ಬ್ಯಾಗ್ ಗಳನ್ನೂ ಪರಿಶೀಲಿಸಿದೆ.ಅಲ್ಲಲ್ಲಿ ಒಂದೊಂದು ನಾವಿರುವುದು ನಿಜವೆಂದು ಹೇಳುವಂತೆ ಹರಿಯುತ್ತಿದ್ದವು.ಅಪ್ಪನ ಕೈ ಗಡಿಯಾರದಲ್ಲೊಂದು,ಬ್ಯಾಗಿನ ಅಂಚಿನಲ್ಲೊಂದು ಅವಿತು ಮಲಗಿದ್ದವು. ಅವನ್ನೆಲ್ಲ ಹುಡುಕಿ ಹುಡುಕಿ ಕೊಂದ ಮೇಲೆ ಮನಸ್ಸಿಗೆ ನಿರಾಳವೆನಿಸಿತ್ತು. 



ನಮ್ಮ ಆಫೀಸ್ ಇದ್ದದ್ದು ವಿಪ್ರೊ ಸರ್ಕಲ್ ಹತ್ತಿರದ  ಕ್ಯು ಸಿಟಿ (Qcity ) ಯಲ್ಲಿ.ನನ್ನ ಸ್ನೇಹಿತೆಯರೆಲ್ಲ ಮೊದಲೇ ಹೈದರಾಬಾದಿಗೆ ಬಂದಿಳಿದಿದ್ದರು. ಆಫೀಸ್ ಹತ್ತಿರದಲ್ಲೇ ಯಾವುದಾದರೂ PG ಹುಡುಕುವುದೆಂದು ಅವರ ಜೊತೆಯಾಗಿ ನಾವೂ, ಸುತ್ತ ಮುತ್ತ ಒಂದಿಷ್ಟು PG ಎಂದು ಹೆಸರಿಟ್ಟುಕೊಂಡ ಕಟ್ಟಡಗಳನ್ನು ನೋಡಿದೆವು.ಇದ್ದುದರಲ್ಲಿ ಒಂದು ಚನ್ನಾಗಿತ್ತು.ಎಲ್ಲರಿಗೂ ಹಿಡಿಸಿತ್ತು.ಅಲ್ಲೇ ಸೇರಿಕೊಳ್ಳೋಣವೆಂದರೆ ಅಲ್ಲಿ ಖಾಲಿ ಕೊಠಡಿ ಇರಲಿಲ್ಲ.ಆಗ ಅಲ್ಲಿನ ಮ್ಯಾನೇಜರ್ ನಮ್ಮದೇ ಇನ್ನೊಂದು PG ಇದೆ. ಅಲ್ಲಿ ಒಂದು ವಾರ ಇರಿ. ಆಮೇಲೆ ಇಲ್ಲಿ  ನಿಮಗೆ ವ್ಯವಸ್ತೆ ಮಾಡುತ್ತೇನೆ ಎಂದರು. ಅವರು ಹೇಳಿದ ಇನ್ನೊಂದು PG ನೋಡಲು ಸುಮಾರಾಗಿ ಇತ್ತು.ಸರಿ ಒಂದು ಹತ್ತು ದಿನಗಳೇ ತಾನೇ ಅಂತ ಒಪ್ಪಿಕೊಂಡು ನಮ್ಮ ವಸ್ತುಗಳನ್ನೆಲ್ಲ ಅಲ್ಲಿಗೆ ತಂದಿಟ್ಟುಕೊಂಡ ಮೇಲೆ  ಅಪ್ಪ,ತಮ್ಮ ಹೊರಡುತ್ತೇವೆಂದರು.ಅವರನ್ನು ಕಳಿಸಿ ವಾಪಾಸು ಬಂದಾಗ ರಾತ್ರಿ ಆಗಿತ್ತು. ಊಟ ಮಾಡಿ ಎಲ್ಲವನ್ನೂ ಜೋಡಿಸಿಟ್ಟುಕೊಳ್ಳಲು ರೂಮಿಗೆ ಹೋದೆ. 


ಇಲ್ಲೇ ಇರುವುದು ನಾನು ಇಷ್ಟೊತ್ತು ಹೇಳಿದ ಕಥೆಯ ಸ್ವಾರಸ್ಯ.ರೂಮಿಗೆ ತೆರಳಿ ಲೈಟ್ ಹಾಕಿ ನೋಡಿದವಳು ಬೆಚ್ಚಿಬಿದ್ದೆ.ನಾನು ನನ್ನ ಗೆಳತಿ ಮಲಗುವ ಮಂಚದ ಮೇಲೆಲ್ಲಾ ರಾಶಿ ರಾಶಿ ತಿಗಣೆಗಳು.ಎಲ್ಲೆಲ್ಲಿ ನೋಡಿದರೂ ತಿಗಣೆ.ನಾನು ಅಷ್ಟು ಮುತುವರ್ಜಿಯಿಂದ ನನ್ನ ಬ್ಯಾಗ್ ಗಳ ಸಂದಿಗೊಂದಿಗಳನೆಲ್ಲ ಹುಡುಕಿ, ಇದ್ದ ಕ್ರಿಮಿಗಳನ್ನೆಲ್ಲ ಸಾಯಿಸಿದ್ದೆ. ಆದರೆ ಇಲ್ಲಿ ನೋಡಿದರೆ ಸಾವಿರಾರು ತಿಗಣೆಗಳು. !! ರಣರಂಗದಲ್ಲಿ ಬಡಪಾಯಿ ಸೈನಿಕನೊಬ್ಬ ಒಮ್ಮೆಗೇ ಮೂರು ನಾಲ್ಕು ಎದುರಾಳಿಗಳೊಂದಿಗೆ ಸೆಣಸಿ ಗೆದ್ದು ಹಮ್ಮಿನಿಂದ ಮುಂದುವರೆಯುವಾಗ ಕಣ್ಣ ಮುಂದೆ ಸಾವಿರಾರು ಶತ್ರುಗಳು ಬಂದಂತೆ ಆಗಿತ್ತು ನನಗೆ.ಏನು ಮಾಡಲೂ ತೋಚದೆ ಸುಮ್ಮನೆ ನಿಂತುಬಿಟ್ಟೆ.ಸ್ವಲ್ಪ ಹೊತ್ತಾದ ಮೇಲೆ ಅಲ್ಲಿ ಕಸ ಗುಡಿಸಲು ಇದ್ದ ಹೆಂಗಸನ್ನು ಕರೆದು ಅವುಗಳನ್ನು ಹೊರಹಾಕಲು ಹೇಳಿದೆನಾದರೂ ಹಾಸಿಗೆಯ ಕೆಳಗೆ,ಕಿಟಕಿ,ಬಾಗಿಲು ಎಲ್ಲೆಂದರಲ್ಲಿ ಅಷ್ಟೇಕೆ  ಇದ್ದ ದೇವರ ಗೂಡಿನಲ್ಲೂ ಅವೇ ಇರುವಾಗ ಅವುಗಳನ್ನು ನಿರ್ನಾಮ ಮಾಡುವುದಾದರೂ ಹೇಗೆ.?? ಅವತ್ತು ರಾತ್ರಿ ತಿಗಣೆ ಕೊಂದ ಜಾಣೆಗೆ ಜಾಗರಣೆ.!

ಒಂದೆರಡು ದಿನ ಹಾಗೇ ಕಳೆಯಿತು.ಬರುಬರುತ್ತಾ ಆ ತಿಗಣೆಗಳ ಇರುವಿಕೆ ಅಭ್ಯಾಸವಾಗಿ ಹೋಯಿತು. ಅವುಗಳ ಕೋಣೆಗೆ ನಾವು ಹೋಗಿ ಇದ್ದುದರಿಂದ ಎಲ್ಲಾ  ಉಪಟಳವನ್ನೂ ಸಹಿಸಲೇಬೇಕಾಗಿತ್ತು. ಶತ್ರುವನ್ನು ಗೆಲ್ಲಲಾಗದಿದ್ದಲ್ಲಿ ರಾಜಿಯಾಗುವುದು ಜಾಣತನ. ಹಾಗೆ ನಡೆದುಕೊಂಡೆವು ಕೂಡ. ೫-೬ ದಿನಗಳಲ್ಲಿ ನಮಗೆ ಹೊಸ PG ಯಲ್ಲಿ ರೂಂ ಸಿಕ್ಕಿತು. ಅಂತೂ ಬಿಡುಗಡೆ ಹೊಂದಿ ಹೊಸ PG ಯಲ್ಲಿ ಸೇರಿಕೊಂಡ ಮೇಲೆ ಒಂದು ತಿಗಣೆಯೂ ಕಾಣಲಿಲ್ಲ ನನಗೆ. 

ಅಪರೂಪಕ್ಕೊಮ್ಮೆ ಇದು ನೆನಪಾಗುತ್ತದೆ.ಕೆಲವೊಮ್ಮೆ ಜೀವನದಲ್ಲಿ ನಾವು ಬೇಡವೆಂದುಕೊಂಡಿದ್ದು ಆಗಿರುತ್ತದೆ.ಅದಕ್ಕೆ ಈ ತಿಗಣೆ ಕಥೆಯೇ ಉದಾಹರಣೆ. ಬೇಡ ಬೇಡ ಎಂದುಕೊಂಡು ಅವುಗಳೊಂದಿಗೇ ಹೊಂದಿಕೊಂಡದ್ದು ಯೋಚಿಸಿದಾಗ ಮಾತ್ರ ಸಣ್ಣ ಮೆಚ್ಚುಗೆಯೊಂದು ಮೂಡುತ್ತದೆ.