Monday 16 December 2013

ಜಲ ವಿಹಾರ..

ನಾನು ಬರೆಯುವ ನೆನಪುಗಳೆಲ್ಲ ತೀರ್ಥಹಳ್ಳಿಯ ಜೊತೆ ಬೆಸುಗೆ ಹಾಕಿಕೊಂಡಿರುತ್ತವೆ. ನಮ್ಮೂರು ಕೊಪ್ಪಲು..ಈ ಹೆಸರಿಗೆ ಹಳ್ಳಿ ಎಂಬ ಸಮಾನಾರ್ಥವಿದೆ.ಈ ಹೆಸರು ಹೇಗೆ ಬಂತು ಎಂಬ ಪ್ರಶ್ನೆಗೆ ಉತ್ತರ ನನಗೂ ದೊರೆತಿಲ್ಲ. ನಮ್ಮೂರಿನ ಎಲ್ಲ ಸ್ಥಳಗಳ ಪರಿಚಯ ಇನ್ನೊಮ್ಮೆ ಮಾಡಿಕೊಡುತ್ತೇನೆ.ನಮ್ಮುರೂ, ಮಲೆನಾಡಿನ ಎಲ್ಲ ಹಳ್ಳಿಗಳಂತೆ ಐದು ಆರು ಮನೆಗಳಿಗೆ ಸೀಮಿತಗೊಂಡಿದೆ.ಕೂಗಳತೆಯ ದೂರದಲ್ಲೊಂದು ಮನೆಯೂ ಸಿಗಲಾರದು. ಮಲೆನಾಡಿನ ಜನಜೀವನದ ಪರಿಚಯವಿಲ್ಲದವರು ಕುವೆಂಪುರವರ ಪುಸ್ತಕಗಳನ್ನು ಓದಿ. ನೀವೇ ಸ್ವತಃ ತಿಳಿದುಕೊಳ್ಳುವಿರಾದರೆ ಮಲೆನಾಡಿಗೆ ಬನ್ನಿ.

ನಮ್ಮೂರಿನಲ್ಲಿ ಒಂದು ಕೆರೆಯಿದೆ. ಇದರಲ್ಲೇನು ವಿಶೇಷ ಅಂತೀರಾ.? ಅದು ನಮ್ಮೆಲ್ಲರ ಈಜುಕೊಳ.!!ಕೆರೆಯ ದಡದಲ್ಲೊಂದು ದೊಡ್ಡ ಅರಳೀ ಮರ. ಅದರ ಕೆಳಗೊಂದು ಮಾರುತಿಯ ಮೂರುತಿ. ಅದಕ್ಕೊಂದು ಚಿಕ್ಕ ಮಂಟಪ. ಜೊತೆಯಲ್ಲಿ ನಾಗದೇವರಕಲ್ಲುಗಳು.ಅರಳಿ ಮರ ಅಂದಾಗೆಲ್ಲ ನನಗೆ  ಒಂದು ವಾಕ್ಯ ನೆನಪಾಗುತ್ತದೆ. "ಅಶ್ವತ್ಥರಳೀ ಮರದ ತಳಿರೊಡೆದೆರಡೆಳೆಯಾಯ್ತು". ಇದನ್ನು ವೇಗವಾಗಿ,ತಡವರಿಸದೆ ಉಚ್ಚರಿಸಲು ಪ್ರಯತ್ನಿಸಿ ಸೋತಿದ್ದೇನೆ.ನೀವೊಮ್ಮೆ ಪ್ರಯತ್ನಿಸಿ.!

ನಮ್ಮೂರ ಕೆರೆ 
                                                           
ಹನುಮಂತನ ಗುಡಿ 
                                                                             
ನನ್ನ ಅಣ್ಣಂದಿರು (ವಿಕಾಸ,ಪ್ರಣವ ) ದಿನವೂ ಕೆರೆಗೆ ಈಜು ಕಲಿಯಲು ಹೋಗುತ್ತಿದ್ದರು.ಆಗ ನನಗೆ ಸುಮಾರು ಐದು ವರ್ಷವಿರಬಹುದು.ಅವರ ಬಾಯಿಂದ ವಿವರಣೆಗಳನ್ನು ಕೇಳಿದ ನಂಗೆ ಈಜು ಕಲಿಯುವ ಮನಸ್ಸಾಯಿತು.ಇನ್ನೇನು ಎರಡು ಒಣಗಿದ ಸಣ್ಣ ತೆಂಗಿನ ಕಾಯಿಗಳನ್ನು ಕಟ್ಟಿಕೊಂಡು ಹೋಗಿ ಕೆರೆ ದಂಡೆಯ ಮೇಲೆ ನಿಲ್ಲುತ್ತಿದ್ದೆ.ಒಣಗಿದ ಕಾಯಿಗಳು ನೀರಿನಲ್ಲಿ ಮುಳುಗದಂತೆ ತಡೆಯುತ್ತವೆ.ಈಜು ಕಲಿಯಲು ಆರಂಭ ಶೂರತ್ವವೇನೋ ತೋರಿಸಿದ್ದೇನೋ ಸರಿ ನೀರಿಗಿಳಿಯಲು ಧೈರ್ಯ ಸಾಲಲಿಲ್ಲ. ಎಲ್ಲರೂ ನೀರಿಗಿಳಿಯಲು ಪ್ರೇರೇಪಿಸುತ್ತಿದ್ದರು. ನನಗೋ ಅಧೈರ್ಯ. ಸುಮ್ಮನೆ ಅವರು ಆಡುವುದನ್ನೇ ನೋಡುತ್ತಾ ಕುಳಿತುಕೊಳ್ಳುತ್ತಿದ್ದೆ. ಒಂದು ದಿನ ನನ್ನ ಅಣ್ಣ ನೀರಿಗೆ ತಳ್ಳಿ ಬಿಟ್ಟ. ನೀರು ಕುಡಿದಿದ್ದಾಯಿತು ಆದರೆ ಈಜು ಕಲಿಯುವ ಪ್ರಯತ್ನವನ್ನಂತೂ ಮಾಡಲಿಲ್ಲ. ಆ ಘಟನೆಯಾದ ಮೇಲೆ ನೀರಿನಿಂದ ದೂರವೇ ಉಳಿದದ್ದಾಯಿತು. ನೀರಿಗಿಳಿಯದೆ ಈಜು ಕಲಿಯಲು ಸಾಧ್ಯವೇ .? ಹೀಗೆ ನನ್ನ ಇರಾದೆಯೂ ಕೊನೆಗೊಂಡಿತು.

ಅದೇ ಸಮಯದಲ್ಲಿ ಅನಕೊಂಡ ಚಲನಚಿತ್ರ ತುಂಬ ಜನಪ್ರಿಯವಾಗಿತ್ತು. ಎಲ್ಲರೂ ಉತ್ಸಾಹಭರಿತರಾಗಿ ಚಿತ್ರ ನೋಡಿ ಬಂದದ್ದೇನೋ ಸರಿ ಪರಿಣಾಮ.? ನನ್ನ ಅಣ್ಣಂದಿರು ನೀರಿಗಿಳಿಯುವುದನ್ನೇ ಬಿಟ್ಟರು. ಕೆರೆಯ ಬಳಿ ಆಗಾಗ ಕಾಳಿಂಗ ಸರ್ಪಗಳು ಕಂಡು ಬರುತ್ತಿರುತ್ತವೆ. ಹಾವಿನ ಪ್ರತಾಪವನ್ನು ತೆರೆಯ ಮೇಲೆ ನೋಡಿದ್ದವರು, ಚಿಕ್ಕ ಚಿಕ್ಕ ಹಾವುಗಳನ್ನೂ ಕಂಡು ಭಯಪಡತೊಡಗಿದರು.ಅಲ್ಲಿಗೆ ನಮ್ಮ ಈಜು ಕಲಿಯುವ ಕತೆ ಮುಗಿಯಿತು.ಆದರೆ ಇತ್ತೀಚಿಗೆ ನನ್ನ ಅಣ್ಣಂದಿರು ಮತ್ತೆ ಕೆರೆಗಿಳಿಯಲು ಪ್ರಾರಂಭಿಸಿದ್ದಾರೆ.ಒಂದೇ ವ್ಯತ್ಯಾಸ ನನ್ನ ಜಾಗದಲ್ಲಿ ಇವತ್ತು ನನ್ನ ತಮ್ಮನಿದ್ದಾನೆ.!

ಕೆರೆಯ ಒಂದು ಪಾರ್ಶ್ವ
ನನಗೆ ಇವತ್ತಿಗೂ ಅನಿಸುತ್ತದೆ, ಛೆ.!ಆಗ ಸ್ವಲ್ಪ ಧೈರ್ಯದಿಂದ ಪ್ರವರ್ತಿಸಿದ್ದರೆ ಎಷ್ಟೋ ಚನ್ನಾಗಿರುತ್ತಿತ್ತೆಂದು. ನೀರೊಳಗಿನ ಬೇರೆ ಪ್ರಪಂಚವೊಂದು ನನ್ನೆದುರು ತೆರೆದುಕೊಳ್ಳುತ್ತಿತ್ತೇನೋ.? ಸ್ವಲ್ಪ ದೊಡ್ಡವಳಾದ ಮೇಲೆ ಪಕ್ಷಿ ವೀಕ್ಷಣೆಗೆಂದು ಕೆರೆಯ ಬಳಿ  ಹೋಗುತ್ತಿದ್ದೆ.ಪಕ್ಷಿ ವೀಕ್ಷಣೆ ನನ್ನ ನೆಚ್ಚಿನ ಹವ್ಯಾಸ. ತೇಜಸ್ವಿಯವರ "ಹೆಜ್ಜೆ ಮೂಡದ ಹಾದಿ", "ಕನ್ನಡ ನಾಡಿನ ಹಕ್ಕಿಗಳು" ಮುಂತಾದ ಪುಸ್ತಕಗಳ ಹೊರತಾಗಿ,ವಿವರಣೆಗಳನ್ನು ಬರೆದುಕೊಳ್ಳಲೊಂದು  ಪುಸ್ತಕ,ಲೇಖನಿ,ಜೊತೆಗೊಂದು  ದುರ್ಬೀನು ಹಿಡಿದುಕೊಂಡು ಹಕ್ಕಿಗಳ ಆಗಮನಕ್ಕಾಗಿ ಕಾಯುತ್ತ ಕುಳಿತಿರುತ್ತಿದ್ದೆ.ಎಷ್ಟೋ ಹಕ್ಕಿಗಳ ಬಗ್ಗೆ ತಿಳಿದುಕೊಂಡಿದ್ದೆ.ಸೂರಕ್ಕಿ,ಪಿಕಳಾರ,ಟ್ರೋಜನ್,ಮುನಿಯ ಹೀಗೆ ನಾನು ಗಮನಿಸುತ್ತಿದ್ದ ಹಕ್ಕಿಗಳ ಪಟ್ಟಿಯೇ ಇದೆ. ನನ್ನ ಬಳಿ  ಆಗ ಕ್ಯಾಮೆರಾ ಇರಲಿಲ್ಲವಾದ್ದರಿಂದ ಹೆಚ್ಚಿನ  ಛಾಯಾಚಿತ್ರಗಳಿಲ್ಲ.

ಟ್ರೋಜನ್ ಹಕ್ಕಿ
ಸೂರಕ್ಕಿ ಗೂಡು ( ಸನ್ ಬರ್ಡ್ )
ಪಿಕಳಾರ ಹಕ್ಕಿಯ ಮರಿ ( ಬುಲ್ ಬುಲ್ )
ಸಲೀಂ ಅಲಿಯವರ ಹಾಗೆ ನಾನು ಏನನ್ನಾದರೂ ಸಾಧಿಸಬೇಕೆಂದುಕೊಳ್ಳುತ್ತಿದ್ದೆ ಆಗ. ಪಕ್ಷಿ ವಿಜ್ಞಾನ ಲೋಕಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದೆಲ್ಲ ಕನಸು ಕಾಣುತ್ತಿದ್ದೆ.ಈಗಂತೂ ಆ ಕನಸನ್ನೇ ಮರೆತಿದ್ದೇನೆ. ಓದು,ಕೆಲಸ ಎಂದು ನನ್ನ ಹವ್ಯಾಸಗಳಿಗೆ ಸಮಯವೇ ಇಲ್ಲವಾಗಿದೆ.ಗಣಕಯಂತ್ರ ನನ್ನ ಸಮಯವನ್ನು ಅದಕ್ಕಾಗಿ ಮೀಸಲಿಡಬೇಕು ಎಂದು ಕೇಳಿತು. ಅದಕ್ಕೂ ಒಪ್ಪಿಕೊಂಡೆ. ಹಾಗಾಗಿ ಉಳಿದ ಹವ್ಯಾಸ,ಅಭ್ಯಾಸಗಳಿಗೆ ವಿದಾಯ ಹೇಳಬೇಕಾಯಿತು...


12 comments:

  1. good article.....n
    nice photos...........

    ReplyDelete
  2. just fantastic....keep it up..nanagu swalpa spoorthi bartha ide...

    ReplyDelete
    Replies
    1. ನಿಮಗೆ ಸ್ಫೂರ್ತಿ ಬರುವಂತಹ ಲೇಖನ ಬರೆದಿದ್ದಕ್ಕೆ ಸಂತೋಷವೆನಿಸುತ್ತಿದೆ..:)
      ಧನ್ಯವಾದಗಳು.

      Delete
  3. ಉತ್ತಮ ಲೇಖನ..
    ನನಗೆ ತಿಳಿದಂತೆ ಕೊಪ್ಪಲಲ್ಲಿ ಮೊದಲು ಹೇರಳವಾಗಿ ಹೂವು ಬೆಳೆಉಯುತಿತ್ತು. ಹೂವಿನ ತೊಪ್ಪಲು ಕ್ರಮೇಣ ಕೊಪ್ಪಲಾಯಿತು..

    ReplyDelete
    Replies
    1. ನನಗೆ ತಿಳಿದಿರಲಿಲ್ಲ..ಹಳ್ಳಿ ಎಂಬುದಕ್ಕೆ ಕೊಪ್ಪಲು ಎನ್ನುತ್ತಾರೆ.
      ಅದರಿಂದ ನಮ್ಮೂರಿಗೆ ಆ ಹೆಸರು ಬಂತು ಎಂದುಕೊಂಡಿದ್ದೆ.
      ಹೂವು ಹೆಚ್ಚಾಗಿ ಇರುತ್ತಿದ್ದದ್ದು ನಿಜವೇ.ಹೂವಿನ ಮರ ಅಂತ ಒಂದು ಜಾಗವೇ ಇದೆಯಲ್ಲ.!
      ಧನ್ಯವಾದಗಳು ನಿಮಗೆ..:)

      Delete
  4. ".....Ashvatarali marada talirodedereeleyaytu" embudanna 3ne prayatnadalli sputavagi odide..... nanagu bereyuvase ide., ninnate nanu malenadina kanda, ninna baravanige nanage, nannatavarige spoorthiyagali......"

    "Marutiya muruti" adbhutavagi padagala jodisurudatte putta udaharane.."

    Adhuta baravanige

    Inti

    "Lakshana na Lakshya galu "

    ReplyDelete
    Replies
    1. ನನಗೂ ಬರೆಯುವ ಹವ್ಯಾಸ ಇರಲಿಲ್ಲ..ಪುಸ್ತಕಗಳನ್ನು ಓದುತ್ತಿದ್ದೆ..ಆಮೇಲೆ ನನಗೆ ಪುಸ್ತಕಗಳನ್ನು ತಂದೊದಗಿಸಿ ಬೇಜಾರಾದ ಮನೆಯವರು ಬರೆಯಲು ಹೇಳಿದರು..ಆದರೆ ಇದು ನನ್ನ ಮೊದಲ ಪ್ರಯತ್ನ..:)
      ನೀವು ಆ ವಾಕ್ಯವನ್ನು ಸ್ಪಷ್ಟವಾಗಿ ಉಚ್ಚರಿಸಿದಿರಿ ಎಂದು ಕೇಳಿ ಸಂತೋಷವಾಯಿತು..
      ನಿಮ್ಮ ಪ್ರೋತ್ಸಾಹಕ್ಕೆಧನ್ಯವಾದಗಳು..:)

      Delete
  5. Good Start Sucheta !! All the very best for your future ventures :)

    ReplyDelete
    Replies
    1. ಧನ್ಯವಾದಗಳು ಅಕ್ಕ..ನೀವು ನಾನು ಬರೆದಿರುವುದನ್ನಓದುತ್ತೀರ ಅಂತ ಅಂದುಕೊಂಡಿರ್ಲಿಲ್ಲ...ಖುಷಿ ಆಯ್ತು..ಇನ್ನೂ ಮುಂದೆಯೂ ಹೀಗೆ ಓದಿ ನಿಮ್ಮ ಅನಿಸಿಕೆ ಹೇಳಿ.

      Delete