Friday 16 September 2016

ತುಮಕೂರಿನ ಶಿವಗಂಗೆ..

  ಶಿವಗಂಗೆಯ ನಂದಿ ಎದುರು 
ವಿರಾಮದ ಒಂದು ಶನಿವಾರ ಗೆಳೆಯರೆಲ್ಲ ಸೇರಿ ತುಮಕೂರಿನ ಶಿವಗಂಗೆಗೆ ಹೋಗಿ ಬರುವುದೆಂದು ತೀರ್ಮಾನವಾಯಿತು. ಬೆಳ್ಳಂಬೆಳಗ್ಗೆ ಎಲ್ಲರೂ ಜೊತೆಯಾಗಿ ಬಸ್ಸಿನಲ್ಲಿ ತುಮಕೂರಿನ ಕಡೆಗೆ ಹೊರಟೆವು. ಬೆಂಗಳೂರಿನಿಂದ ತುಮಕೂರಿಗೆ ತಲುಪಿ ಅಲ್ಲಿಂದ ಶಿವಗಂಗೆ ಬೆಟ್ಟದ ಬುಡ ಸೇರುವಷ್ಟರಲ್ಲಿ ಗಂಟೆ ಹತ್ತು ದಾಟಿತ್ತು. ಅಲ್ಲಿ ಇಲ್ಲಿ ಚಂದ ಕಂಡದ್ದನ್ನೆಲ್ಲ ಛಾಯಾಚಿತ್ರವಾಗಿ ಸೆರೆಹಿಡಿಯುತ್ತಾ ನಿಧಾನವಾಗಿ ಮೆಟ್ಟಿಲೇರತೊಡಗಿದ್ದೆವು. ಬಿಸಿಲು ನಿಧಾನವಾಗಿ ತನ್ನ ಚುರುಕು ಮುಟ್ಟಿಸುತ್ತಿತ್ತು.ಸೂರ್ಯ ನಡುನೆತ್ತಿಯೆಡೆಗೆ ಬರಲಾರಂಭಿಸಿದ್ದ.ದಾರಿಯಲ್ಲಿ, "ಮಜ್ಜಿಗೆ ಬೇಕೇ? ಕುಡಿಯುವ ನೀರು ಬೇಕೇ? ತಾಜಾ ತಾಜಾ ಕಬ್ಬಿನ  ಹಾಲು ತಗೊಳ್ಳಿ! ಬಿಸಿಲು ಜೋರಾಗಿದೆ, ಇಲ್ಲಿ ಕೂತು ದಣಿವಾರಿಸಿಕೊಳ್ಳಿ!" ಎಂದೆಲ್ಲ  ಹೇಳಿ ತಮ್ಮ ಅಂಗಡಿಗೆ ಕರೆಯುವ ವ್ಯಾಪಾರಿಗಳ ಸಾಲು ಬಹಳವಿತ್ತು. ಅಲ್ಲಲ್ಲಿ ಮಜ್ಜಿಗೆ ಕುಡಿದು, ಸೌತೆಕಾಯಿಯನ್ನು ಮೆಲ್ಲುತ್ತಾ ಸುಮಾರು ಅರ್ಧ ದೂರ ಕ್ರಮಿಸಿದೆವು. ಮುಂದೆ ಕಡಿದಾದ ಮೆಟ್ಟಿಲುಗಳು.ನಮ್ಮೆಲ್ಲರ ಬೆನ್ನಿನಲ್ಲಿದ್ದ ಚೀಲದಲ್ಲಿ ಅಗತ್ಯಕ್ಕೆ ಬೇಕಾದ ತಿನಿಸುಗಳು, ನೀರಿನ ಬಾಟಲಿಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿದ್ದೆವು.ಅಲ್ಲಿ ಸುತ್ತ ಮುತ್ತೆಲ್ಲ ಕೋತಿಗಳ ಹಿಂಡೇ ಇತ್ತು. ನೋಡನೋಡುತ್ತಿದ್ದಂತೆಯೇ ಒಂದು ಗಡವ ಕೋತಿ ಬೀಡುಬೀಸಾಗಿ ಬಂದು ನನ್ನ ಮುಂದೆ ನಡೆಯುತ್ತಿದ್ದ ನನ್ನ ಗೆಳತಿಯ ಚೀಲಕ್ಕೇ ಕೈ ಹಾಕಿತು. ಅವಳು ಮೊದಲೇ ಹೆದರಿದ್ದವಳು, ಆ ಕೋತಿ ಬಂದ ರಭಸವನ್ನು ಕಂಡು ಇನ್ನೂ ಭಯಗೊಂಡು ಕಿರುಚಾಡತೊಡಗಿದಳು. ಹಿಂದುಮುಂದಿದ್ದವರೆಲ್ಲ ನಮ್ಮನ್ನೇ ಗಮನಿಸಲಾರಂಭಿಸಿದರು. ಅವರೆಲ್ಲರಿಗೂ ಅದು ಮೋಜಿನ ಸಂಗತಿಯಾಗಿತ್ತು. ನಾನು ಏನು ಮಾಡಲು ತೋಚದೆ ಚೀಲ ಹಿಡಿದು ನನ್ನೆಡೆಗೆ ಎಳೆಯತೊಡಗಿದೆ. ಆ ಮಂಗವೂ ಸಹ  ನಾನೇನು ಕಡಿಮೆ ಎಂಬಂತೆ ಇನ್ನೂ ಜೋರಾಗಿ ಚೀಲವನ್ನು ಎಳೆದುಕೊಂಡು,ಅದರ ಒಳಗಿದ್ದ ನೀರಿನ ಬಾಟಲಿ ತೆಗೆದುಕೊಂಡು ಪರಾರಿಯಾಯಿತು.ಆಗ ಹೋದ ಜೀವ ಬಂದಂತಾಗಿ ಬದುಕಿದೆಯಾ ಬಡಜೀವವೇ ಎಂದು ಒಬ್ಬರಿಗೊಬ್ಬರು ಸಾಂತ್ವನ ಹೇಳಿಕೊಂಡೆವು. ಮುಂದೆ ಅಲ್ಲೇ ಇದ್ದ ಅಂಗಡಿಯ ಮಾಲೀಕರ ಸುಪರ್ದಿಯಲ್ಲಿ  ನಮ್ಮ ಸಾಮಾನುಗಳನ್ನೆಲ್ಲ  ಇರಿಸಿ ಧೈರ್ಯದಿಂದ ಚಾರಣ ಮುಂದುವರೆಸಿದೆವು. ಬೆಟ್ಟದ ತುದಿ ತಲುಪಿ ಅಲ್ಲಿಂದ ಕೆಳಗಿಳಿದು ಬರುವಾಗ ನಮ್ಮ ಕಣ್ಣೆದುರೇ ಒಂದು ಕೋತಿ  ಯಾರದೋ ದುಡ್ಡಿನ ಚೀಲವನ್ನೇ ಎತ್ತಿಕೊಂಡಿತ್ತು. ಸಧ್ಯ ನಮ್ಮ ಸ್ಥಿತಿ ಇದಕ್ಕಿಂತ ಎಷ್ಟೋ ಉತ್ತಮವೆಂದುಕೊಂಡು ಕೆಳಗಿಳಿದೆವು. ಎಂದಿಗೂ ಮರೆಯಲಾಗದಂತಹ ಪೇಚಿನ ಅನುಭವವಿದು. ನೆನೆಸಿಕೊಂಡಾಗೆಲ್ಲ ನಗೆ ತರಿಸುವ ಪ್ರಸಂಗವೂ ಹೌದು. 

ಮೇರ್ತಿ ಗುಡ್ಡ..

ಭಾನುವಾರ ಕಳೆದು ಸೋಮವಾರ ಬಂತೆಂದರೆ ಸಾಕು ಆಫೀಸ್ ಕೆಲಸಗಳು ಧುತ್ತೆಂದು ನೆನಪಾಗುತ್ತವೆ.ನಮಗೆ ಬೇಕೋ ಬೇಡವೋ ಅಂತೂ ಹೋಗಲೇಬೇಕು ಕಚೇರಿಗೆ. ಹಾಗೇ ಇನ್ನೆರಡು ದಿನ ಕಳೆಯುವಷ್ಟರಲ್ಲಿ ಅದೆಲ್ಲ ಬೋರ್ ಎನಿಸಿಬಿಡುತ್ತದೆ.ವಾಟ್ಸಪ್ಪ್ ಗುಂಪುಗಳಲ್ಲಿ ವಾರದ ಕೊನೆಯಲ್ಲಿ ಎಲ್ಲಿಗೆ ಹೋಗಬಹುದೆಂಬ ಚರ್ಚೆ ಪ್ರಾರಂಭವಾಗುತ್ತದೆ.ಇದು ಹೆಚ್ಚು ಕಡಿಮೆ ಪ್ರತೀ ವಾರದ ಕಥೆ. ಹೀಗೆ ಬೆಂಗಳೂರು ಬೇಜಾರೆನಿಸಿ ಎಲ್ಲಾದರೂ ಹೋಗೋಣವೆಂದುಕೊಂಡ ಸಮಯದಲ್ಲಿ ನಮ್ಮ ಗೆಳತಿ ಶಿಲ್ಪಳಿಂದ ಅವರ ಅಜ್ಜನ ಊರಾದ ಕವಿಲುಕುಡಿಗೆಗೆ ಹೋಗೋಣ ಎಂದು ಆಹ್ವಾನ ಬಂದಿತು.

ಮೇರ್ತಿ ಗುಡ್ಡ .. 
ಬಾಳೆಹೊನ್ನೂರಿನ ಸಮೀಪದ ಬಸಿರಿಕಟ್ಟೆಯ ಹತ್ತಿರದ ಊರು ಕವಿಲುಕುಡಿಗೆ.ಮೇರ್ತಿ ಗುಡ್ಡದ ಮಡಿಲಿನಲ್ಲಿದೆ.ಬಸಿರಿಕಟ್ಟೆಯಿಂದ ಅಲ್ಲೇ ತೋಟದಲ್ಲೆಲ್ಲೋ ಕೆಳಗೆ ಇಳಿದು,ಮತ್ಯಾವುದೋ ಗದ್ದೆ ಬಯಲ ದಾರಿ ದಾಟಿ ಸಾಗಿದರೆ ಸಾಕು ಶಿಲ್ಪನ ಅಜ್ಜನ ಮನೆ ಬರುತ್ತದೆ. ಅದು ಸಂದೀಪನ ಮನೆ ಕೂಡ ಹೌದು.ಸಂದೀಪ ಎಂದರೆ ನಮ್ಮ ಗೆಳೆಯರಲ್ಲೊಬ್ಬ.ಸಿಂಪಲ್ ಎನ್ನುವ ಹೆಸರಿನಿಂದ ಪ್ರಸಿದ್ದಿ ಇವನು. ಕಾರಣಾಂತರಗಳಿಂದ ಅವನು ನಮ್ಮೊಡನೆ ಬರಲಾಗಲಿಲ್ಲ.ಆದರೂ ನಾವು ೧೦ ಜನರ ಗುಂಪು ಶಿಲ್ಪನ ನೇತೃತ್ವದಲ್ಲಿ ಮೇರ್ತಿ ಗುಡ್ಡ ಹತ್ತುವ ತಯಾರಿಯೊಂದಿಗೆ ಕವಿಲುಕುಡಿಗೆಗೆ ಹೊರಟೆವು. ಅಂತಹ  ಸಂಭ್ರಮ ಏನಿರುತ್ತೆ ಚಾರಣದಲ್ಲಿ ಎಂದು ಹಲವರಿಗೆ ಅನ್ನಿಸಬಹುದು. ಎಲ್ಲ ಬೆಟ್ಟಗಳೂ ಹೆಚ್ಚು ಕಡಿಮೆ ಒಂದೇ ತರಹ ಇರುತ್ತದೆ.ಗುಡ್ಡ ಹತ್ತಿ ಇಳಿದಾಗ ಅದೇನು ಸಿಗುತ್ತದೆ ಎಂದೂ ಕೇಳಿದ್ದಾರೆ ಕೆಲವರು. ನಾವು ಗುಡ್ಡದ ತುದಿಯಲ್ಲಿ ಕಳೆಯುವುದು ಕೆಲವು ನಿಮಿಷಗಳು ಮಾತ್ರ ನಿಜ. ತುದಿ ಮುಟ್ಟಿದ ೧೫-೨೦ ನಿಮಿಷದಲ್ಲಿ ಕೆಳಗಿಳಿಯಲು ಪ್ರಾರಂಭಿಸಿರುತ್ತೇವೆ.ಆದರೆ ನಾವು ಗುರಿ ತಲುಪಲು ಸಾಗಿದ ಮಾರ್ಗ ಮಾತ್ರ ಪ್ರತಿ ಸಾರಿಯೂ ಭಿನ್ನ. ಅದು ಯಾವತ್ತೂ ನೆನಪಾಗಿ ಉಳಿಯುತ್ತದೆ.ಸೇರುವ ಗುರಿಗಿಂತ ಸಾಗುವ ದಾರಿಯಲ್ಲಿ ಸಿಗುವ ಅನುಭವಗಳ ಗುಚ್ಛವೇ ದೊಡ್ದದೆನಿಸುತ್ತದೆ. ಬೆಟ್ಟದ ತುದಿಯಲ್ಲಿ ನಿಂತಾಗ ಪಟ್ಟ ಕಷ್ಟಗಳೆಲ್ಲ ಮರೆಯಾಗಿ ಏನೋ ಸಾಧಿಸಿದ ಸಂತೃಪ್ತಿಯಿಂದ ಮನಸ್ಸು ಮುದಗೊಂಡಿರುತ್ತದೆ. ಇದಕ್ಕೇ ಏನೋ ಬೆಟ್ಟಗಳು ಸೂಜಿಗಲ್ಲಿನಂತೆ ನಮ್ಮನ್ನು ಸೆಳೆಯುವುದು. 

ಬೆಂಗಳೂರಿಂದ ಬಾಳೆಹೊನ್ನೂರು ಮಾರ್ಗವಾಗಿ ಬಸಿರಿಕಟ್ಟೆಗೆ ಹೊರಟಿದ್ದೆವು.ರಾತ್ರಿಯೆಲ್ಲಾ ಅಂತ್ಯಾಕ್ಷರಿ ಆಡುತ್ತಾ ಬೆಳಗಾಗಿದ್ದೆ ಗೊತ್ತಾಗಲಿಲ್ಲ.ಬೆಳಗಿನ ಜಾವದ ಹೊತ್ತಿಗೆ ಬಸಿರಿಕಟ್ಟೆ ತಲುಪಿದೆವು.ಅಲ್ಲಿಂದ ಕವಿಲುಕುಡಿಗೆಗೆ ಹೋಗುವ ದಾರಿಯನ್ನು ಶಿಲ್ಪ ಮರೆತಿದ್ದಳು(ಅವಳು ಪ್ರತೀ ವರ್ಷವೂ ಅಲ್ಲಿಗೆ ತಪ್ಪದೇ ಹೋಗುತ್ತಿದ್ದರೂ ಸಹ ದಾರಿ ತಪ್ಪಿತ್ತು).ಯಾವುದೋ ದಾರಿಯಲ್ಲಿ ನಮ್ಮ ಗಾಡಿಯನ್ನು ಕರೆದೊಯ್ದು,ಅಲ್ಲಿ ಮುಂದೆಲ್ಲೂ ಹೋಗಲಾರದೆ ವಾಹನದ ಚಾಲಕ ಎಲ್ಲರಿಗು ಬೈದುಕೊಳ್ಳುತ್ತಾ ಇಂತಹ ದಾರಿಯಲ್ಲಿ ನಾನು ಬರಲಾರೆ  ಎಂದು ಗೊಣಗುತ್ತಿದ್ದ. ಎಲ್ಲರಿಗೂ ಅವನ ಮಾತು ಕಿರಿಕಿರಿ ಎನಿಸಿತ್ತು. ಹಾಗು ಹೀಗೂ ಸರಿದಾರಿ ಸೇರಿ ಸಂದೀಪನ ಮನೆ ತಲುಪಿದೆವು.ಗುಡ್ಡದ  ತಪ್ಪಲಲ್ಲಿತ್ತು ಅವರ ಮನೆ.ಮನೆಯ ಮುಂದೆ ಅಡಿಕೆ ತೋಟ. ಸುತ್ತಲೂ ಹಸಿರು, ಇನ್ನೂ ಕೆಳಗಿಳಿದು ಸ್ವಲ್ಪ ಮುಂದೆ ಹೋದರೆ ಬತ್ತದ ಗದ್ದೆಗಳು.ತೆನೆಗಳು ಬಲಿತು ತೂಗಾಡುತ್ತಿದ್ದವು.ಅಲ್ಲಿ ಹೋದವರಿಗೆ ಸಂದೀಪನ ಅಪ್ಪ, ಅಮ್ಮನಿಂದ ಆತ್ಮೀಯ ಸ್ವಾಗತ ಸಿಕ್ಕಿತು.ಅಡಿಕೆ ಕುಯಿಲಿನ ಸಮಯ. ಆದರೂ ಆ ಕೆಲಸದ ಮಧ್ಯೆಯೂ  ಅವರು ನಮಗಾಗಿ ಅವಲಕ್ಕಿ ಕಲಿಸಿಕೊಟ್ಟರು.ಬೆಳಗಿನ ತಿಂಡಿಯ ಜೊತೆಗೆ ಚಿಕ್ಕಮಗಳೂರಿನ ಬೆಚ್ಚಗಿನ ಕಾಫಿ.ಮದ್ಯಾಹ್ನಕ್ಕೂ ಬುತ್ತಿ ತಯಾರಿಸಿ ನಮಗಾಗಿ ಕಟ್ಟಿಕೊಟ್ಟಿದ್ದರು. ಅಂತೂ ಹೊಟ್ಟೆಗೆ ಬಿದ್ದ ಮೇಲೆ ನಮ್ಮ  ಸೈನ್ಯ ಬೆಟ್ಟವನೇರಲು ಸನ್ನದ್ಧವಾಯಿತು.

ಮೊದಲೇ ದಾರಿ ತಪ್ಪಿಸಿದ್ದ ಶಿಲ್ಪನನ್ನ ನಂಬಿಕೊಂಡು ಗುಡ್ಡ ಹತ್ತಿ ಇಳಿಯುತ್ತೇವೆಂಬ ನಂಬಿಕೆ ಇದ್ದರೂ ಮೇರ್ತಿ ಗುಡ್ಡಕ್ಕೇ ಕರೆದೊಯ್ಯುತ್ತಾಳೆಂಬ ಭರವಸೆ ಎಳ್ಳಷ್ಟೂ ಇರಲಿಲ್ಲ. ಅದಕ್ಕಾಗಿ ಶಿಲ್ಪಳ ಮಾವ ಮಾರ್ಗದರ್ಶಿಯಾಗಿ ಬರುವರೆಂದಾಗ ನಾವು ಖುಷಿಯಾದೆವು.ಮೇರ್ತಿ ಚಿಕ್ಕ ಗುಡ್ಡ. ಒಟ್ಟು ಸುಮಾರು ೫ ಕಿ. ಮೀ ಅಷ್ಟೇ ಕ್ರಮಿಸಬೇಕಾಗಿದ್ದ ದೂರ.ಗುಡ್ಡ ಹತ್ತಲು ಅನುಮತಿ ಪತ್ರ ಬೇಕು.ಪ್ರಾರಂಭದಲ್ಲಿ ಎತ್ತ ನೋಡಿದರೆ ಅತ್ತ ಟೀ ಎಸ್ಟೇಟ್ ಗಳು.ಸ್ವಲ್ಪ ದೂರ ಸಮತಟ್ಟಾದ ದಾರಿಯಲ್ಲಿ ಟೀ ಗಿಡಗಳ ನಡುವೆ ಸಾಗಿದ ಮೇಲೆ ಅಲ್ಲಿದ್ದ ಕಚೇರಿಯಲ್ಲಿ ಮುಂದೆ ಸಾಗಲು ರಹದಾರಿ ಪಡೆದು ಚಾರಣ ಪ್ರಾರಂಭಿಸಿದೆವು.ಚಳಿಗಾಲ ಜೊತೆಗೇ ಬಿಸಿಲು ಪ್ರಖರವಾಗಿತ್ತು.ಅದು ಇದು ಹರಟೆ ಕೊಚ್ಚುತ್ತಾ ಸಾಗಿದವರಿಗೆ ಎದುರಾಯಿತೊಂದು ಚಿಕ್ಕ ಗುಹೆ.ಆ ಸ್ಥಳದ ಹೆಸರು ತಪಸಾಣ. ಗುಹೆಯ ಒಳಗೆ ಹೋದರೆ ಅಲ್ಲೊಂದು ಗಣಪತಿಯ ವಿಗ್ರಹ.ಯಾವ ಕಾಲದಲ್ಲಿ ಯಾರು ಪ್ರತಿಷ್ಟಾಪಿಸಿದ್ದೋ ಏನೋ.ಆ ಗುಹೆಯ ಒಳಗೆ ಯಾವುದೋ ಸುರಂಗ ಮಾರ್ಗವಿದೆಯಂತೆ. ನೋಡೋಣವೆಂದರೆ ಅಲ್ಲಿಂದ ಮುಂದೆ  ಸಾಗುವ ದಾರಿ ಮುಚ್ಚಿತ್ತು.ತಪಾಸಾಣದ ಬಳಿಯೊಂದು ನೀರಿನ ಚಿಲುಮೆ.ಮುಂದೆ ಎಲ್ಲೂ ನೀರು ಸಿಗುವುದಿಲ್ಲವಾದ್ದರಿಂದ ಅಲ್ಲೇ ನೀರು ತುಂಬಿಕೊಳ್ಳುವುದು ಒಳಿತು.ಅಲ್ಲಿ ಚಿಕ್ಕ ಚಿಕ್ಕ ಜಿಗಳೆಗಳು ಇದ್ದವು.ಸರಿಯಾಗಿ ಗಮನಿಸಿದರೆ ಮಾತ್ರ ಕಾಣುವಂತಹ ಗಾತ್ರದವು.ರಕ್ತ ಕುಡಿದು ಬೃಹದಾಕಾರಕ್ಕೆ ಬೆಳೆಯುವ ತ್ರಾಣ ಉಳ್ಳವು. ಜಾಗ್ರತೆಯಿಂದ ಅವುಗಳ ಆಹಾರವಾಗದೆ ಅಲ್ಲಲ್ಲಿ ನಮ್ಮ ನೆನಪನ್ನು  ಹಸಿರಾಗಿರಿಸುವ ಚಿತ್ರಗಳನ್ನು ತೆಗೆಯುತ್ತಾ, ಸೆಲ್ಫಿ ಅಂತ ಗುಂಪಿನಲ್ಲಿ ನಿಂತು ಚಿತ್ರಪಟಗಳಿಗೆ ಪೋಸು ಕೊಡುತ್ತಾ ಸಾಗಿದೆವು. ಚಿಕ್ಕ ಚಾರಣ ಆಗಿದ್ದರಿಂದ ಬೇಗ ಗುಡ್ಡದ ತುದಿ ತಲುಪಲು ಹೆಚ್ಚು ಹೊತ್ತಾಗಲಿಲ್ಲ.ಆದರೆ ಬಿಸಿಲು ಮಾತ್ರ ತೀಕ್ಷ್ಣವಾಗಿತ್ತು.ಕವಿಲುಕುಡಿಗೆಯ ಊರಿನ ಜಾತ್ರೆಯ ಸಮಯದಲ್ಲಿ  ಶಿಲ್ಪ,ಸಂದೀಪ ಎಲ್ಲರೂ ಮೇರ್ತಿ ಗುಡ್ಡ ಹತ್ತುತ್ತಾರಂತೆ (ಆದರೂ ಶಿಲ್ಪ ದಾರಿ ತಪ್ಪಿದ್ದು ಸೋಜಿಗದ ಸಂಗತಿ ). ಮೇಲೊಂದು ಚಿಕ್ಕ ಗಣಪತಿ ವಿಗ್ರಹ ಇದೆ. ದೇವರಿಗೊಂದು ನಮಸ್ಕಾರ ಮಾಡಿ ಸುಸ್ತಾಗಿ ಕುಳಿತು ಖರ್ಜೂರ ಮತ್ತು ಕಟ್ಟಿ ತಂದಿದ್ದ ಬುತ್ತಿಯನ್ನು ತಿಂದೆವು.ನೀರನ್ನು ದಾರಿಯಲ್ಲೇ ಖಾಲಿ ಮಾಡಿಕೊಂಡಿದ್ದರಿಂದ ಕೆಳಗಿಳಿದು ತಪಸಾಣ ತಲುಪುವಷ್ಟರಲ್ಲಿ ಎಲ್ಲರೂ ಬಾಯಾರಿ ನೀರು ಸಿಕ್ಕಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದರು. ಅಲ್ಲಿ ಹರಿಯುತ್ತಿದ್ದ ನೀರು ನೋಡಿ ಎಲ್ಲರಿಗೂ ಹೋದ ಜೀವ ಬಂದಂತಾಯಿತು.ಮನಸೋ ಇಚ್ಛೆ ನೀರು ಕುಡಿದು ಸುಧಾರಿಸಿಕೊಂಡು ಟೀ ಎಸ್ಟೇಟ್ಗಳಲ್ಲಿ ಸುತ್ತಾಡುತ್ತಾ ನಿಧಾನಕ್ಕೆ ಸಂದೀಪನ ಮನೆಗೆ ನಮ್ಮ ಸವಾರಿ ಸಾಗಿತು.

ತಪಸಾಣ.. 
 ನೆನಪಿನಂಗಳದಿಂದ.. 
ಟೀ ಎಸ್ಟೇಟುಗಳು..

ಅವರ ಮನೆಯಲ್ಲಿ ಆ ರಾತ್ರಿ ಬಾಳೆ ಎಲೆಯಲ್ಲಿ ಭರ್ಜರಿ ಊಟ.ಪಾಯಸದ ಸವಿ ನೆನೆದಾಗ ಇಂದು ಕೂಡ ಬಾಯಲ್ಲಿ ನೀರೂರುತ್ತದೆ. ಚಾರಣ ಮುಗಿಸಿ ವರ್ಷವೇ ಕಳೆದರೂ ಚಿಕ್ಕಮಗಳೂರು, ಮಲೆನಾಡು,ನಮ್ಮ ಗೆಳೆಯರ ಗುಂಪು, ಸಂದೀಪನ ಮನೆ, ಅವರ ತಂದೆ ತಾಯಿಯ ಆತ್ಮೀಯತೆ, ಮೇರ್ತಿ ಗುಡ್ಡದ  ಚಾರಣ, ಎಲ್ಲರ ಜೊತೆಯಲ್ಲಿ ನಲಿದ ಕ್ಷಣಗಳು  ಇದೆಲ್ಲವೂ ನಿನ್ನೆ ಮೊನ್ನೆಯದೇನೋ ಎಂಬಂತೆ ನೆನಪಿನ ಹಾಳೆಯಲ್ಲಿ ದಾಖಲಾಗಿವೆ.