Sunday 12 April 2020

ಮಿಂಚುಳ್ಳಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೧), ಹೆಜ್ಜೆ ಮೂಡದ ಹಾದಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೨)




ಚಿಕ್ಕಂದಿನಿಂದಲೂ ನನಗೆ ಪಕ್ಷಿಗಳೆಂದರೆ ಏನೋ ಕುತೂಹಲ. ನಮ್ಮನೆಯ ಎದುರಿಗಿದ್ದ ಟೊಳ್ಳಾದ ನಂದಿ ಮರದಲ್ಲಿ ಗುಂಪಾಗಿ ವಾಸವಾಗಿದ್ದ ಗಿಳಿಗಳು, ಜೊತೆಗೇ ಸಹಜೀವನ ನಡೆಸುತ್ತಿದ್ದ ಮೈನಾ ಹಕ್ಕಿಗಳು, ಗದ್ದೆ ಬದಿಯಲ್ಲಿ ಅಲೆದಾಡುತ್ತಿದ್ದ ಕೊಕ್ಕರೆಗಳು, ಕೆರೆಯಂಚಿನ ಕೊಂಬೆಯೊಂದರ ಮೇಲೆ ಕುಳಿತಿರುತ್ತಿದ್ದ ಮಿಂಚುಳ್ಳಿಗಳು ಇವೆಲ್ಲವನ್ನೂ ಕಣ್ಣರಳಿಸಿಕೊಂಡು ನೋಡುತ್ತಿದ್ದೆ. ವಾರಾಂತ್ಯದಲ್ಲಿ ಹಕ್ಕಿ ಗೂಡು ಹುಡುಕುವುದೇ ಕೆಲಸ. ಸಿಕ್ಕ ಖಾಲಿ ಗೂಡುಗಳನ್ನೆಲ್ಲ ಮನೆಯಲ್ಲಿ ಮಾವಿನ ಮರಕ್ಕೋ, ದಾಸವಾಳದ ಗಿಡಕ್ಕೋ ಸಿಕ್ಕಿಸಿ ಯಾವುದಾದರೂ ಹಕ್ಕಿ ಬಂದು ಮರಿಮಾಡುತ್ತದೆಂದು ಕಾಯುತ್ತಿದ್ದೆ!

ಎಂಟನೆಯ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಗೀಜುಗನ ಗೂಡು ಎಂಬ ಪಾಠವೊಂದಿತ್ತು. ಪೂರ್ಣಚಂದ್ರ ತೇಜಸ್ವಿಯವರ ಹೆಜ್ಜೆ ಮೂಡದ ಹಾದಿ ಎಂಬ ಅನುಭವ ಕಥನದಿಂದ ಆಯ್ದುದಾಗಿತ್ತು. ತೇಜಸ್ವಿ, ಗೀಜುಗ ಹಕ್ಕಿಯ ಬಗ್ಗೆ ಚಂದದ ವಿವರಣೆ ನೀಡಿದ್ದರು. ಅದಕ್ಕೆ ಸಮವಾಗಿ ನಮ್ಮ ಕನ್ನಡ ಮೇಷ್ಟ್ರು ಅದೆಷ್ಟು ಚನ್ನಾಗಿ ಪಾಠ ಮಾಡಿದ್ದರೆಂದರೆ ಆ ವರ್ಷದ ತೀರ್ಥಹಳ್ಳಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಹೆಜ್ಜೆ ಮೂಡದ ಹಾದಿ ಪುಸ್ತಕವನ್ನ ತೆಗೆದುಕೊಂಡೆ. ಅದನ್ನು ಓದುತ್ತಾ ಹೋದಂತೆ ಹೊಸದೊಂದು ಪರಿಸರ ನನ್ನೆದುರು ತೆರೆದುಕೊಂಡಿತು. ಅಲ್ಲಿಂದ ಹಕ್ಕಿಗಳ ಬಗೆಗಿನ ಆಸಕ್ತಿ ಹೆಚ್ಚಾಯಿತು. ತೇಜಸ್ವಿಯವರಂತೆ ನಾನು ಕೆರೆ ದಂಡೆಗಳಲ್ಲಿ ಗಂಟೆಗಟ್ಟಲೆ ಕೂರಲು ಶುರು ಮಾಡಿದೆ. ಕಾಗೆ, ಗಿಳಿ, ಗುಬ್ಬಿಗಳಲ್ಲದೆ ಮುನಿಯ, ಪಿಕಳಾರ, ಸೂರಕ್ಕಿ, ಮಡಿವಾಳ ಅವುಗಳ ಭಿನ್ನತೆ, ಸಾಮ್ಯತೆಗಳನ್ನು ಗುರುತಿಸಲು ಕಲಿತೆ. ಕೆಲಸ ಸಿಕ್ಕ ಮೇಲೆ ಒಂದು ದುರ್ಬೀನು ಕೊಂಡುಕೊಂಡು ಪಕ್ಷಿವೀಕ್ಷಣೆಯ ಹವ್ಯಾಸವನ್ನು ಮುಂದುವರೆಸಿದೆ. ಇವಳಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಇದೇನು ಊಟ ಹಾಕತ್ತಾ ಅಂತ ಎಷ್ಟೋ ಜನ ಬೈದದ್ದಿದೆ. 

ಕನ್ನಡ ನಾಡಿನ ಹಕ್ಕಿಗಳ ಬಗ್ಗೆ ಕನ್ನಡದಲ್ಲಿ ಬರೆದ ಬೆರಳೆಣಿಕೆಯಷ್ಟು ಜನರಲ್ಲಿ ತೇಜಸ್ವಿಯವರು ಅಗ್ರಗಣ್ಯರು. ಅವರ ಮಿಂಚುಳ್ಳಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೧), ಹೆಜ್ಜೆ ಮೂಡದ ಹಾದಿ (ಕನ್ನಡ ನಾಡಿನ ಹಕ್ಕಿಗಳು- ಭಾಗ ೨) ಈ ಎರಡು ಪುಸ್ತಕಗಳೂ ವಿಶಿಷ್ಟವಾಗಿವೆ. ನಮ್ಮೊಂದಿಗೇ ಇದ್ದು ನಾವು ಗಮನಿಸದೇ ಇರುವ ನೆರೆಹೊರೆಯವರ ಬಗ್ಗೆ ಮಾಹಿತಿ ನೀಡುತ್ತವೆ ಇವು. ತೇಜಸ್ವಿ ನದಿ ದಡಗಳಲ್ಲಿ ಮೀನು ಹಿಡಿಯಲು  ಕುಳಿತಾಗ ಕಂಡ ನೀರಿನ ಹಕ್ಕಿಗಳು, ಜವುಗಿನ ಹಕ್ಕಿಗಳು, ಹೂವಿನ ಗಿಡಗಳಲ್ಲಿ ಗೂಡು ಕಟ್ಟಿದ್ದ ಸೂರಕ್ಕಿಗಳು, ಪಿಕಳಾರಗಳು, ಜಗಳ ಕಾಯುವ ಕಾಜಾಣಗಳು, ಯಾರದೋ ಕೋವಿಯ ಗುಂಡಿಗೆ ಬಲಿಯಾದ ಟ್ರೊಗನ್ ಹಕ್ಕಿ, ತೇಜಸ್ವಿಯವರು ಹಕ್ಕಿ ಸಾಕಲು ಪ್ರಯತ್ನಿಸಿದ್ದು, ಜೇನುಮಗರೆ ಹಕ್ಕಿಗಳ ಕಿತಾಪತಿ, ಪಿಕಳಾರ ಸೂರಕ್ಕಿಗಳ ನಡುವಿನ ಜಗಳ ಇವೆಲ್ಲವೂ ಅವರ ನಿತ್ಯದ ಜೀವನದಿಂದ ಆಯ್ದ ಘಟನೆಗಳೇ. ಓದುಗರನ್ನು ಮೈಮರೆಯುವಂತೆ ಮಾಡುವ ಇಂತಹ ಪ್ರಸಂಗಳೆಷ್ಟೋ ಇವೆ  ಅದರಲ್ಲಿ. 

ಇನ್ನು ಈ ಪುಸ್ತಕಗಳ ಕೊರತೆಯ ಬಗ್ಗೆ ಹೇಳುವುದಾದರೆ ತೇಜಸ್ವಿಯವರೇ ಹೇಳುವಂತೆ ಈ ಪುಸ್ತಕಗಳು  ಪಕ್ಷಿವೀಕ್ಷಕರ ಮಾರ್ಗದರ್ಶಿಯಲ್ಲ. ಬದಲಿಗೆ  ಓದುಗರಲ್ಲಿ ಪಕ್ಷಿಪ್ರಪಂಚದೆಡೆಗೆ ಆಸಕ್ತಿ ಹುಟ್ಟುವಂತೆ ಮಾಡುವ ಒಂದು ಪ್ರಯತ್ನವಷ್ಟೇ. ಇದರಲ್ಲಿ ಹಕ್ಕಿಗಳ ಪ್ರಬೇಧಗಳ ಸ್ಥೂಲ ಹೆಸರುಗಳನ್ನು ನೀಡಲಾಗಿದೆಯೇ ಹೊರತು ಒಳಪ್ರಬೇಧಗಳನ್ನು ಗುರುತಿಸಲು, ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅವಕಾಶವಿಲ್ಲ. ಅದರಲ್ಲಿನ ವಿಷಯಗಳೂ ಅವರು ನಿತ್ಯ ಕಂಡ ಹಕ್ಕಿಗಳ ಬಗೆಗೆ ಮಾತ್ರ ಸೀಮಿತವಾಗಿವೆ. ಇದಲ್ಲದೆ ಬಹಳಷ್ಟು ಹಕ್ಕಿಗಳಿಗೆ ಕನ್ನಡದಲ್ಲಿ ಸರಿಯಾದ ಹೆಸರುಗಳಿಲ್ಲ. ಹಾಗಾಗಿ ಅವರು ಕನ್ನಡದಲ್ಲಿ ಹೆಸರಿಸಲು ಪ್ರಯತ್ನಿಸುವಾಗ ಕೆಲವಷ್ಟು ತಪ್ಪುಗಳು ನುಸುಳಿವೆ.ಇವುಗಳನ್ನು ಪಕ್ಷಿವೀಕ್ಷಣೆಯ ಗೈಡ್ ಬುಕ್ ಆಗಿ ಬಳಸಿಕೊಂಡಲ್ಲಿ ಗೊಂದಲಗಳೇಳುತ್ತವೆ. 

ಆದಾಗ್ಯೂ ಪರಿಸರ ಪ್ರೇಮಿಗಳಿಗೂ, ಪಕ್ಷಿಪ್ರೇಮಿಗಳಿಗೂ ಈ ಎರಡು ಪುಸ್ತಕಗಳು ಮುದ ನೀಡುವುದರಲ್ಲಿ ಸಂದೇಹವಿಲ್ಲ. ದಿನನಿತ್ಯದ ನಮ್ಮ ಧಾವಂತದ ಬದುಕಿನಲ್ಲಿ ನಿಮಿಷಗಳನ್ನೂ ಎಣಿಸಿ ಬದುಕುವಾಗ, ಕೆರೆಯ ದಂಡೆಯ ಮೇಲೆ ದಿನವಿಡೀ ಕುಳಿತು ಕಥೆ ಹೇಳುವ ತೇಜಸ್ವಿ ಅಚ್ಚರಿ ಹುಟ್ಟಿಸುತ್ತಾರೆ. ನಾವು ಕಾಣದ ಬೆರಗಿನ ಲೋಕವೊಂದನ್ನು ಅವರ ಕಣ್ಣುಗಳಲ್ಲಿ ಕಟ್ಟಿಕೊಡುತ್ತಾರೆ.