Friday 15 September 2017

ಗೊಥೆನ್ ಬರ್ಗ್ ನ ಸಾಂಸ್ಕೃತಿಕ ಹಬ್ಬ

ಎರಡು ವಾರಗಳ ಹಿಂದೆ ಗೊಥೆನ್ ಬರ್ಗ್ ನಲ್ಲಿ ಕಲ್ಚರ್  ಕಲಾಸೆಟ್ ನ ಸಂಭ್ರಮ. ನಾಲ್ಕು ದಿನಗಳ ಕಾಲ ವಿವಿಧ ಮಳಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಾರ್ನಿವಲ್ ಗಳು ಜನಮನ ರಂಜಿಸಿದ್ದವು.ಇದು ಪ್ರಾರಂಭವಾಗಿದ್ದು ಗುರುವಾರವಾದರೂ, ವಾರದ ಮಧ್ಯದಲ್ಲಿ ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುವುದರಿಂದ ಕೆಲವು ಮಳಿಗೆಗಳನ್ನು ಬಿಟ್ಟರೆ ನೋಡುವಂತದ್ದೇನಿರಲಿಲ್ಲ. ಹಬ್ಬದ ಕೊನೆಯ ದಿನವಾಗಿದ್ದ ಭಾನುವಾರದಂದು ಮಾತ್ರ ಇಡಿಯ ಪಟ್ಟಣಕ್ಕೆ ಹೊಸ ಮೆರುಗು ಬಂದಿತ್ತು. ಎತ್ತ ನೋಡಿದರೂ ಜನವೋ ಜನ. ಸಾಮಾನ್ಯವಾಗಿ ಹೆಚ್ಚು ಜನರಿಲ್ಲದೆ ಖಾಲಿ ಎಂದೆನಿಸುವ ಬೀದಿಗಳು ಅಂದು ಮಾತ್ರ ಗಿಜಿಗಿಜಿಗುಟ್ಟುತ್ತಿದ್ದವು.

ಮಳೆಯ ಮುನ್ಸೂಚನೆ ಇದ್ದುದರಿಂದ ಜೊತೆಗೊಂದು ಕೊಡೆಯನ್ನು ಎತ್ತಿಕೊಂಡೇ ಭಾನುವಾರ ಮಧ್ಯಾಹ್ನ ಹೊರಹೊರಟೆವು. ಮೊದಲು ಭೇಟಿ ನೀಡಿದ್ದು ಪಟ್ಟಣದ ಮಧ್ಯದಲ್ಲಿಯೇ ಇದ್ದ ಅಂತರರಾಷ್ಟ್ರೀಯ ತಿಂಡಿ ತಿನಿಸುಗಳ ಮಾರುಕಟ್ಟೆ. ಹಾಲೆಂಡ್ , ಫ್ರಾನ್ಸ್, ಗ್ರೀಸ್ , ಥೈಲ್ಯಾಂಡ್ ಮುಂತಾದ ಹಲವು ದೇಶಗಳ ತಿನಿಸುಗಳು ಅಲ್ಲಿದ್ದವು. ಹೆಚ್ಚಿನವು ಮಾಂಸಾಹಾರವಾಗಿದ್ದರೂ, ಸಸ್ಯಾಹಾರಿಗಳಿಗೂ ಬಹಳಷ್ಟು ಆಯ್ಕೆಗಳಿದ್ದವು. ರಾಶಿ ರಾಶಿ ಸುರಿದುಕೊಂಡಿದ್ದ ಟ್ರಫಲ್ ಗಳು ಬಾಯಲ್ಲಿ ನೀರೂರಿಸಿದ್ದು ಸುಳ್ಳಲ್ಲ.ವೆನಿಲ್ಲಾ, ಚಾಕಲೇಟ್, ಲೆಮನ್, ರೋಸ್, ಆಪಲ್ ಹೀಗೆ ಅದೆಷ್ಟೋ ಬಗೆಯ , ನಾನಾ ವರ್ಣದ  ಮಕರೂನ್ ಗಳನ್ನು ಪೇರಿಸಿಟ್ಟಿದ್ದರು.ಬಣ್ಣ ಬಣ್ಣದ ಹೂಗಿಡಗಳು, ಬೋನ್ಸಾಯ್ ಗಿಡಗಳು, ಟುಲಿಪ್ ತಳಿಗಳು ಮುಂತಾದ ಬಹಳಷ್ಟು ಸಸಿಗಳು ಮಾರಾಟಕ್ಕಿದ್ದವು. ಹೂವು ಹಣ್ಣಿನ ಪರಿಮಳಯುಕ್ತ ಸೋಪುಗಳು ಸಹ ಮಾರಾಟಕ್ಕಿದ್ದವು



ಕಾರ್ನಿವಲ್ ನ ಸೊಬಗು 
ಸ್ವಲ್ಪ ಹೊತ್ತು ಅಲ್ಲಿ ಕಳೆದು ನಂತರ ಅಂದಿನ ಮುಖ್ಯ ಆಕರ್ಷಣೆಗಳಲ್ಲಿ ಒಂದಾದ ಕಾರ್ನಿವಲ್ ನೋಡಲು ಹೋದೆವು. ಬ್ರೆಜಿಲ್ ನಲ್ಲಿ ನಡೆಯುವ ಕಾರ್ನಿವಲ್ ಗೆ ಯಾವ ರೀತಿಯಲ್ಲೂ ಸಾಟಿ ಎನಿಸದಿದ್ದರೂ ಚಿಕ್ಕದಾಗಿ ಕೆಲದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯಗಳನ್ನು ಪ್ರದರ್ಶಿಸುತ್ತಾ ರಂಗುರಂಗಿನ ಉಡುಪುಗಳನ್ನು ತೊಟ್ಟ ಯುವಕ ಯುವತಿಯರು ಮೆರವಣಿಗೆ ನಡೆಸಿದರು. ರೆಕ್ಕೆ ಪುಕ್ಕಗಳಿಂದ, ಚಿತ್ರವಿಚಿತ್ರ ಮುಖವಾಡಗಳಿಂದ ವರ್ಣರಂಜಿತವಾಗಿದ್ದ ವಸ್ತ್ರಗಳನ್ನು ಧರಿಸಿ ನಡೆಯುತ್ತಿದ್ದ ಅವರನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗಿತ್ತು. 

ಕಥಕ್ ನೃತ್ಯ ಪ್ರದರ್ಶನ
ಭರತನಾಟ್ಯ ಪ್ರದರ್ಶನ ಗೀತಾ ಚಂದ್ರನ್ ಅವರಿಂದ 
ಕೊನೆಯದಾಗಿ ನಮ್ಮ ಪಟ್ಟಿಯಲ್ಲಿದ್ದದ್ದು ಭಾರತೀಯ ನೃತ್ಯ ಪ್ರದರ್ಶನ. ಮೊದಲಿಗೆ ಕಥಕ್ ನೃತ್ಯ ಪ್ರದರ್ಶನವಿತ್ತು. ನಾಲ್ವರು ನೀಲವರ್ಣದ ಉಡುಗೆ ಧರಿಸಿದ್ದ ನೀರೆಯರು ಅದ್ಭುತ ಪ್ರದರ್ಶನವನ್ನು ನೀಡಿದರು. ನಂತರದಲ್ಲಿ ಭರತನಾಟ್ಯ ಪ್ರದರ್ಶನ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಗೀತಾ ಚಂದ್ರನ್ ರವರಿಂದ ನೃತ್ಯ ಪ್ರದರ್ಶನವಿತ್ತು. ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ನೆನಪಿಸಲು ವಂದೇ ಮಾತರಂ ಎಂಬ ಗೀತೆಯನ್ನು ಮೊದಲಿಗೆ ಪ್ರಸ್ತುತ ಪಡಿಸಿದರು. ನಂತರದಲ್ಲಿ ಶಿವನ ಕುರಿತಾದ, ಕೃಷ್ಣ ನ ಕುರಿತಾದ ರೂಪಕ ಗಳನ್ನು ತೋರಿಸಿದರು. ಕೊನೆಯಲ್ಲಿ ಅಯಿಗಿರಿ ನಂದಿನಿ ಹಾಡಿಗೆ ನೃತ್ಯ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು. ಕೊನೆಯಲ್ಲಿ ರಾಜಸ್ಥಾನದ ತಂಡವೊಂದರಿಂದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 

ಇವಿಷ್ಟಲ್ಲದೆ  ಕೆಲವೆಡೆ ಉಚಿತವಾಗಿ ಬೋಟಿಂಗ್ ಕರೆದುಕೊಂಡು ಹೋಗಲಾಗುತಿತ್ತು. ಉಚಿತವಾಗಿ ಪರಿಣಿತರಿಂದ ೧೦ ನಿಮಿಷಗಳ ಸೇಲಿಂಗ್ ಕೂಡ ನಡೆಸಲಾಗುತ್ತಿತ್ತು. ವರ್ಚುಯಲ್ ರಿಯಾಲಿಟಿಯಾ ವಿಡಿಯೋ ಗಳನ್ನು ನೋಡಬಹುದಾಗಿತ್ತು. ಇನ್ನು ಮುಂತಾದ ಹಲವು ಆಕರ್ಷಣೆಗಳು ಅಲ್ಲಿದ್ದವು. ಇವೆಲ್ಲವನ್ನೂ ನೋಡಿಕೊಂಡು ಬಿಸಿಬಿಸಿಯಾಗಿ ಫಲಾಫಲ್ , ತಣ್ಣಗಿನ ಐಸ್ ಕ್ರೀಮ್ ತಿಂದು ಮನೆಗೆ ಬರುವಷ್ಟರಲ್ಲಿ ರಾತ್ರಿಯಾಗಿತ್ತು.


Sunday 6 August 2017

ಫ್ರಿಡಾ ಕಾಹ್ಲೋ

ಆಕೆ ಕುಂಚಗಳೊಂದಿಗೆ ಬದುಕ ಕಳೆದವಳು. ಬಣ್ಣಗಳನ್ನೇ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡವಳು. ತನ್ನನ್ನೇ ತಾನು ಚಿತ್ರಿಸಿಕೊಂಡು ಜನ ಮಾನಸವನ್ನು ತಲುಪಿದವಳು. ಬದುಕು ಬಳುವಳಿಯಾಗಿ ನೀಡಿದ ಸಂಕಷ್ಟಗಳ ಸರಮಾಲೆಗೆ ಎದೆಗೆಡದೆ ಕೊರಳು ನೀಡಿದ ಗಟ್ಟಿಗಿತ್ತಿಯವಳು.ಅವಳ ಮನೋಸ್ಥೈರ್ಯ ,ಆತ್ಮವಿಶ್ವಾಸವನ್ನು ಹತ್ತಿರದಿಂದ ಕಂಡ ಜನ ಅವಳನ್ನು"ಲಾ ಹೀರೋಯಿನಾ ಡೆಲ್ ಡೊಲೊರ್ " ಎಂದು  ಕರೆದರು. ಹಾಗೆಂದರೆ ನೋವಿಗೇ ನಾಯಕಿಯಾದವಳು ಎಂಬರ್ಥ. ಹೀಗೆ ತನ್ನ ಬದುಕನ್ನೇ ಅನ್ಯರಿಗೆ ಮಾದರಿಯಾಗಿಸಿ ಜನಪ್ರಿಯಳಾದವಳು ಮತ್ಯಾರೂ ಅಲ್ಲ ಖ್ಯಾತ ಚಿತ್ರಕಾರ್ತಿ ಫ್ರಿಡಾ ಕಾಹ್ಲೋ. ಅವಳ ಜೀವನದ ಯಶೋಗಾಥೆ ಇಲ್ಲಿದೆ. 

ಜನನ ಮತ್ತು ಬಾಲ್ಯ 

ಫ್ರಿಡಾ ಕಾಹ್ಲೋ ಹುಟ್ಟಿದ್ದು ಜುಲೈ ೬ , ೧೯೦೭ ನೇ ಇಸವಿಯಲ್ಲಿ, ಮೆಕ್ಸಿಕೋ ದೇಶದ ಕೋಯೋಅಕನ್ ಎಂಬ ಸ್ಥಳದಲ್ಲಿ. ಅವಳ ತಂದೆ ವಿಲ್ ಹೆಲ್ಮ್ ಕಾಹ್ಲೋ, ಮೂಲತಃ ಜರ್ಮನಿಯವರು. ಮೆಕ್ಸಿಕೋ ದೇಶಕ್ಕೆ ವಲಸೆ ಬಂದು, ಫ್ರಿಡಾಳ ತಾಯಿಯಾದ ಮಟಿಲ್ಡೆ ಕಾಲ್ಡೆರೋನ್ ನನ್ನು ವರಿಸುತ್ತಾರೆ. ಮಟಿಲ್ಡೆ ಮಕ್ಕಳನ್ನು ಧಾರ್ಮಿಕ ಕಟ್ಟಳೆಗಳಿಗೆ ,ನೇಮಗಳಿಗೆ ಒಳಪಡುವಂತೆ ಬಹಳ ಶಿಸ್ತಿನಿಂದ ಬೆಳೆಸಿರುತ್ತಾರೆ. ಫ್ರಿಡಾ ಕಾಹ್ಲೋ ಆರು ವರ್ಷದವಳಿದ್ದಾಗ ಪೋಲಿಯೊ ಖಾಯಿಲೆಗೆ ತುತ್ತಾಗುತ್ತಾಳೆ. ಇದರಿಂದಾಗಿ ಒಂಬತ್ತು ತಿಂಗಳುಗಳ ಕಾಲ ಹಾಸಿಗೆ ಹಿಡಿಯಬೇಕಾಗುತ್ತದೆ. ನಿಧಾನವಾಗಿ ಅದರಿಂದ ಚೇತರಿಸಿಕೊಂಡರೂ ಬಲಗಾಲು, ಎಡಗಾಲಿಗಿಂತ  ಚಿಕ್ಕದಾಗಿ ದುರ್ಬಲವಾಗಿರುತ್ತದೆ.ಫ್ರಿಡಾಳಿಗೆ ಇದೊಂದು ಅಡಚಣೆಯೇ ಆದರೂ ತಂದೆಯ ಬೆಂಬಲದಿಂದ ಆಗಿನ ಕಾಲದ ಹುಡುಗಿಯರಿಗೆ ಅಪರೂಪವೆನ್ನಬಹುದಾಗಿದ್ದ ಕಾಲ್ಚೆಂಡಿನಾಟ, ಈಜು, ಕುಸ್ತಿ ಮುಂತಾದ ಆಟಗಳನ್ನು ಕಲಿತು ದೈಹಿಕ ನ್ಯೂನತೆಯನ್ನು ಮೆಟ್ಟಿ ನಿಲ್ಲುತ್ತಾಳೆ. ಈ ಎಲ್ಲ ಅನುಭವಗಳು ಅವಳ ಮನಸಿನ ಮೇಲೆ ಮಾಸದ ಮುದ್ರೆಯೊತ್ತಿ ಮುಂಬರುವ ಬದುಕಿನ ಯುದ್ಧಗಳಿಗೆ ಅಣಿಗೊಳಿಸಿರುತ್ತವೆ. 

ಫ್ರಿಡಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ೧೯೨೨ರಲ್ಲಿ ಮೆಕ್ಸಿಕೋ ಸಿಟಿಯ ಪ್ರಖ್ಯಾತ ವಿದ್ಯಾಸಂಸ್ಥೆಯಾಗಿದ್ದ  ನ್ಯಾಷನಲ್ ಪ್ರಿಪರೇಟರಿ ಸ್ಕೂಲ್  ಸೇರಿಕೊಳ್ಳುತ್ತಾಳೆ.೨೦೦೦ ಜನ ವಿದ್ಯಾರ್ಥಿಗಳಿದ್ದ ಆ ಶಾಲೆಯಲ್ಲಿ ಹುಡುಗಿಯರ ಸಂಖ್ಯೆ ಕೇವಲ ಮೂವತ್ತೈದು! ಅವರಲ್ಲೊಬ್ಬಳಾಗುತ್ತಾಳೆ ಫ್ರಿಡಾ ಕಾಹ್ಲೋ.ವಿಜ್ಞಾನದಲ್ಲಿ ಅವಳಿಗೆ ಹೆಚ್ಚಿನ ಆಸಕ್ತಿ. ಸಸ್ಯಶಾಸ್ತ್ರ ಮತ್ತು ವೈದ್ಯಕೀಯವನ್ನು ತನ್ನ ಮುಂದಿನ ಅಭ್ಯಾಸಕ್ಕಾಗಿ ಆಯ್ದುಕೊಳ್ಳಬೇಕೆಂಬ ಉಮೇದಿರುತ್ತದೆ.ಈ ಸಮಯದಲ್ಲಿ ಅಲೆಜಾಂಡ್ರೋ ಗೋಮೆಜ್ ಎನ್ನುವ ಸಹ ವಿದ್ಯಾರ್ಥಿಯ ಪರಿಚಯವಾಗಿ, ನಂತರದಲ್ಲಿ ಪರಿಚಯ ಪ್ರೇಮಕ್ಕೆ ತಿರುಗುತ್ತದೆ.ಒಂದು ದಿನ ಮಧ್ಯಾಹ್ನ ಅವರಿಬ್ಬರೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿಗೆ ಬಂದ ಕಾರೊಂದು ಇವರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಬಸ್ಸು ಅಪಘಾತಕ್ಕೀಡಾಗುತ್ತದೆ. ಈ ಸಮಯದಲ್ಲಿ ಫ್ರಿಡಾ ತೀವ್ರವಾಗಿ ಗಾಯಗೊಳ್ಳುತ್ತಾಳೆ. ಸ್ಟೀಲಿನ ಕೈಗಂಬಿಯೊಂದು ಅವಳ ಹಿಂಬಾಗದಿಂದ ಒಳಹೊಕ್ಕಿ ಬೆನ್ನುಮೂಳೆ, ಪೆಲ್ವಿಸ್, ಜನನಾಂಗವನ್ನು ಛೇದಿಸಿಕೊಂಡು ಮುಂದಿನಿಂದ ಹೊರಬಂದಿರುತ್ತದೆ. ದೇಹದ ಹಲವೆಡೆ ಮಾರಣಾಂತಿಕ ಗಾಯಗಳಾಗಿರುತ್ತವೆ. ಆಗವಳಿಗೆ ಕೇವಲ ಹದಿನೆಂಟು ವರ್ಷ. ತಿಂಗಳುಗಳ ಕಾಲ, ಪ್ಲಾಸ್ಟರಿನ ಪಟ್ಟಿ ಕಟ್ಟಿಕೊಂಡು ಅಲ್ಲಾಡದೆ ಮಲಗಿರಬೇಕಾದ ವಿಷಮ ಪರಿಸ್ಥಿತಿ ಎದುರಾಗುತ್ತದೆ. ಈ ಸಮಯದಲ್ಲಿ ಫ್ರಿಡಾ ತನ್ನ ನೋವು ಮರೆಯಲು ಚಿತ್ರ ಬಿಡಿಸಲು ಪ್ರಾರಂಭಿಸುತ್ತಾಳೆ. ತನ್ನ ಪ್ರಿಯತಮನಿಗೆ, ತನ್ನದೇ ಒಂದು ಸುಂದರ ಭಾವಚಿತ್ರವನ್ನು ಮಲಗಿದ್ದಲ್ಲೇ ರಚಿಸಿ ಕಾಣಿಕೆಯಾಗಿ ನೀಡುತ್ತಾಳೆ. ಅಷ್ಟರಲ್ಲಾಗಲೇ ಇವಳ ದೈಹಿಕ ಸ್ಥಿತಿ, ಅಲೆಜಾಂಡ್ರೋಗೆ ಬೇಸರ ಮೂಡಿಸಿರುತ್ತದೆ.ಅವರಿಬ್ಬರ ಸಂಬಂದ ಅಲ್ಲಿಗೆ ಕೊನೆಗೊಳ್ಳುತ್ತದೆ.ಆದರೆ ಬಣ್ಣಗಳೊಂದಿಗೆ ಫ್ರಿಡಾಳ ಗೆಳೆತನ ಆಗಷ್ಟೇ ಪ್ರಾರಂಭವಾಗುತ್ತದೆ.ಬೇರೆ ಎಲ್ಲ ವಿಷಯಗಳಿಗಿಂತ ಹೆಚ್ಚಾಗಿ ಫ್ರಿಡಾ ತನ್ನನ್ನೇ ತಾನು ಚಿತ್ರಿಸಿಕೊಳ್ಳುತ್ತಾಳೆ. ಹಾಗೇಕೆಂದು ಕೇಳಿದವರಿಗೆ ಅವಳೊಮ್ಮೆ ಹೀಗೆನ್ನುತ್ತಾಳೆ. "ನಾನು ನನ್ನನ್ನೇ ಚಿತ್ರಿಸಿಕೊಳ್ಳುತ್ತೇನೆ. ಏಕೆಂದರೆ ನಾನು ಯಾವಾಗಲೂ ಒಬ್ಬಂಟಿಯಾಗಿರುತ್ತೇನೆ ಮತ್ತು ನನಗೆ ಚೆನ್ನಾಗಿ ತಿಳಿದಿರುವ ವಿಷಯವೆಂದರೆ ಅದು ನಾನು ಮಾತ್ರ". 

ಚಿತ್ರಗಳೊಂದಿಗೆ  ಮಿತ್ರತ್ವ 

ಇಷ್ಟೊತ್ತಿಗಾಗಲೇ ವೈದ್ಯಕೀಯ ಅಧ್ಯಯನ ಮಾಡಬೇಕೆಂಬ ಆಸೆ ಫ್ರಿಡಾಳ ಮನಸಿನಿಂದ ದೂರವಾಗಿರುತ್ತದೆ. ಪ್ರಸಿದ್ಧ ಮ್ಯುರಲ್ ಚಿತ್ರಕಾರನಾಗಿದ್ದ ಡಿಯೆಗೊ ರಿವೆರಾ ಎನ್ನುವಾತನ ಬಳಿ ತನ್ನ ಚಿತ್ರಗಳನ್ನು ವಿಶ್ಲೇಷಿಸಲು ಕೋರುತ್ತಾಳೆ. ಡಿಯೆಗೊಗೆ ಇವಳ ಚಿತ್ರಗಳು ಬಹಳ ಹಿಡಿಸುತ್ತವೆ. ಹಾಗಾಗಿ ಅವನು ಚಿತ್ರಕಲೆಯನ್ನು ಮುಂದುವರೆಸುವಂತೆ ಫ್ರಿಡಾಗೆ ಪ್ರೋತ್ಸಾಹ ನೀಡುತ್ತಾನೆ. ಸಮಾನ ಆಸಕ್ತಿ ಇಬ್ಬರನ್ನು ಹತ್ತಿರಕ್ಕೆಳೆಯುತ್ತದೆ. ಮುಂದಿನ ಒಂದು ವರ್ಷದಲ್ಲಿ ಅವರಿಬ್ಬರೂ ಮದುವೆಯಾಗುತ್ತಾರೆ. ಫ್ರಿಡಾ ಒಂದು ಸಂದರ್ಭದಲ್ಲಿ ಡಿಯೆಗೊನನ್ನು ಭೇಟಿಯಾಗಿದ್ದನ್ನು ನೆನೆಸಿಕೊಳ್ಳುತ್ತಾ ಹೀಗೆನ್ನುತ್ತಾಳೆ "ನನ್ನ ಜೀವನದಲ್ಲಿ ಎರಡು ಅಪಘಾತಗಳು ಸಂಭವಿಸಿದವು. ಒಂದು ಬಸ್ಸಿನಲ್ಲಾದ ಅಪಘಾತ. ಇನ್ನೊಂದು ಡಿಯೆಗೊ ರಿವೆರಾ". ಅವರಿಬ್ಬರ ನಡುವೆ ಸುಮಾರು ಇಪ್ಪತ್ತು ವರ್ಷಗಳ ವಯಸ್ಸಿನ ಅಂತರವಿರುತ್ತದೆ. ಹಾಗಾಗಿ ಈ ಮದುವೆಯ ಬಗ್ಗೆ ಹಿರಿಯರ ಅಸಮ್ಮತಿ ಇರುತ್ತದೆ. ಈ ಜೋಡಿಯ ಕುರಿತು ಫ್ರಿಡಾಳ ತಾಯಿ "ಆನೆ ಮತ್ತು ಪಾರಿವಾಳದ ಜೋಡಿ" ಎಂದು ನಿಷ್ಠುರದ ಮಾತನಾಡುತ್ತಾಳೆ. 

ಮುಂದೆ ಫ್ರಿಡಾ ತನ್ನ ಮನದಾಳದ ಭಾವನೆಗಳನ್ನೆಲ್ಲ ಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಾಳೆ. ಆಕೆಗೆ ತನ್ನದೇ ಆದ ಮಗುವೊಂದು ಬೇಕೆಂಬ ಆಸೆ ಇದ್ದರೂ, ಎಳೆಯ ಪ್ರಾಯದಲ್ಲಿ ಆದ ಅಪಘಾತದಿಂದ ಅದು ಸಾಧ್ಯವಾಗುವುದೆ ಗರ್ಭಪಾತವಾಗುತ್ತದೆ. ಮತ್ತೆ ಮತ್ತೆ ಇದು ಮರುಕಳಿಸಿದಾಗ ಮನನೊಂದ ಫ್ರಿಡಾ ತನ್ನ ಹತಾಶೆಯನ್ನು "ಹೆನ್ರಿಫೋರ್ಡ್ ಹಾಸ್ಪಿಟಲ್" ಎಂಬ ಕಲಾಕೃತಿಯಲ್ಲಿ ತೋರಿಸಿಕೊಳ್ಳುತ್ತಾಳೆ. ಆಸ್ಪತ್ರೆಯ ಹಾಸಿಗೆಯಲ್ಲಿ ನಗ್ನವಾಗಿ ಮಲಗಿರುವ ಫ್ರಿಡಾಳ ಸುತ್ತ ಬ್ರೂಣ, ಹೂವು, ಪೆಲ್ವಿಸ್ , ಬಸವನ ಹುಳು ಮುಂತಾದವು ತೇಲುತ್ತಿರುತ್ತವೆ. ಇವೆಲ್ಲಾ ರಕ್ತ ನಾಳಗಳ ಮೂಲಕ ಅವಳ ದೇಹಕ್ಕೆ ತಗುಲಿಕೊಂಡಿರುತ್ತವೆ. ಬ್ರೂಣ ಹುಟ್ಟಲಿದ್ದ ಅವಳ ಮಗುವಿನ ಚಿತ್ರವಾದರೆ, ಪೆಲ್ವಿಸ್ ಅವಳಿಗಿದ್ದ ದೈಹಿಕ ಅಸಾಮರ್ಥ್ಯದ ಚಿತ್ರಣ ನೀಡುತ್ತದೆ. ಬಗ್ಗಿದವನಿಗೆ ಒಂದು ಗುದ್ದು ಎಂಬಂತೆ ಅವಳ ಕಷ್ಟಗಳು ಅಲ್ಲಿಗೆ ಮುಗಿಯುವುದಿಲ್ಲ. ಮುಂದೆ ತನ್ನ ಗಂಡ ಡಿಯೆಗೊಗೆ ವಿವಾಹೇತರ ಸಂಬಂಧವಿರುವುದು ತಿಳಿಯುತ್ತದೆ. ಇವಲ್ಲದೆ ತನ್ನ ಸ್ವಂತ ಸಹೋದರಿ ಕ್ರಿಸ್ಟಿನಾ ಜೊತೆ ಕೂಡ ಸಂಬಂಧವಿದೆಯೆಂದು ತಿಳಿದಾಗ ಫ್ರಿಡಾ ವ್ಯಗ್ರಳಾಗಿ ತನ್ನ ಉದ್ದದ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡು ತನ್ನ ಅಸಮಾಧಾನ ಸೂಚಿಸುತ್ತಾಳೆ.ಅವರ ವಿವಾಹ ಸಂಬಂಧಗಳು ಮತ್ತೂ ಹದಗೆಟ್ಟಾಗ, ನಿರ್ವಾಹವಿಲ್ಲದೆ ಇಬ್ಬರೂ ವಿಚ್ಛೇದನಕ್ಕೆ ಒಳಪಡುತ್ತಾರೆ.

ನಂತರದ ದಿನಗಳಲ್ಲಿ ಕೆಲವು ಮೇರು ಕೃತಿಗಳೆನ್ನಬಹುದಾದಂತಹ ಚಿತ್ರಗಳನ್ನು ಫ್ರಿಡಾ ರಚಿಸುತ್ತಾಳೆ. ಅದರಲ್ಲೊಂದು "ದಿ ಟು ಫ್ರಿಡಾಸ್ " ಎಂಬ ಚಿತ್ರ ಎಲ್ಲರ ಆಸಕ್ತಿ ಕೆರಳಿಸುತ್ತದೆ. ಈ ಕಲಾಕೃತಿಯಲ್ಲಿ ಒಂದು ಬಿಳಿಯ ತೆಹುನಾ (ಮೆಕ್ಸಿಕೋ ದೇಶದ ಸಾಂಪ್ರದಾಯಿಕ ಉಡುಪು) ಧರಿಸಿದ ಮತ್ತು ನೀಲಿ ಹಾಗು ಕಂದು ಬಣ್ಣವಿರುವ ತೆಹುನಾ ಧರಿಸಿರುವ ಫ್ರಿಡಾಳದ್ದೇ ಎರಡು ಬೇರೆ ಬೇರೆ ಚಿತ್ರವಿದೆ. ಎರಡರಲ್ಲಿಯೂ ಹೃದಯಗಳನ್ನು ಹೊರಗೆಳೆದು ತೋರಿಸಲಾಗಿದೆ. ಬಿಳಿಯ ಉಡುಗೆಯಲ್ಲಿರುವ ಫ್ರಿಡಾಳ ರಕ್ತನಾಳವೊಂದು ಕತ್ತರಿಸಲ್ಪಟ್ಟಿದ್ದು, ಬಟ್ಟೆಯ ಮೇಲೆ ರಕ್ತದ ಕಲೆಗಳಿವೆ. ಇದು ಡಿಯೆಗೊ ನಿಂದ ದೂರವಾದ ಮೇಲೆ ಅವಳ ಮನಸಿಗೆ ಆದ ಆಘಾತದ ಚಿತ್ರಣ ನೀಡುತ್ತದೆ. ೧೯೩೮ರಲ್ಲಿ ಆಂಡ್ರೆ ಬ್ರೆಟನ್ ಎನ್ನುವ ಪ್ರಸಿದ್ಧ ಚಿತ್ರಕಾರ ಇವಳ ಕೃತಿಗಳನ್ನು ಬಹಳವಾಗಿ ಮೆಚ್ಚಿಕೊಂಡು ನ್ಯೂಯಾರ್ಕ್ ನಲ್ಲಿ ಅವುಗಳ ಪ್ರದರ್ಶನವನ್ನೇ ಏರ್ಪಡಿಸುತ್ತಾನೆ. ಇದು ಫ್ರಿಡಾ ಜೀವನದ ಮೊದಲ ಸಾರ್ವಜನಿಕ ಪ್ರದರ್ಶನ. ನಂತರದಲ್ಲಿ ಪ್ಯಾರಿಸ್ ನಲ್ಲಿ ಸಹ ಅವಳ ಚಿತ್ರಪ್ರದರ್ಶನವೇರ್ಪಡುತ್ತದೆ. ಫ್ರಿಡಾ ಅಲ್ಲಿಗೆ ತೆರಳಿ ಪಿಕಾಸೋ ಮುಂತಾದ ಹಲವು ಪ್ರಸಿದ್ಧ ಚಿತ್ರಕಾರರ ಪರಿಚಯ ಬೆಳೆಸಿಕೊಳ್ಳುತ್ತಾಳೆ. ಪ್ಯಾರಿಸ್ ನಿಂದ ಮೆಕ್ಸಿಕೋಗೆ ವಾಪಸಾದ ಮೇಲೆ ೧೯೪೦ರಲ್ಲಿ ಫ್ರಿಡಾ ಮತ್ತು  ಡಿಯೆಗೊ ರಿವೆರಾ ಮರುಮದುವೆಯಾಗುತ್ತಾರೆ. ಆದರೆ ಇಬ್ಬರೂ ಬೇರೆ ಬೇರೆ ಯಾಗಿ ಬದುಕುತ್ತಾರೆ. ಅಲ್ಲದೆ ವಿವಾಹೇತರ ಸಂಬಂಧವನ್ನೂ ಹೊಂದಿರುತ್ತಾರೆ.   

೧೯೪೪ ರಲ್ಲಿ ಅವಳ ಚಿತ್ರ "ಮೋಸೆಸ್" ಎಂಬ ಕೃತಿಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ. ಅದೇ ವರ್ಷ ಆಕೆ ಬೆನ್ನುಹುರಿಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾಳೆ. ಮುಂದಿನ ಹಂತಗಳಲ್ಲಿ ಫ್ರಿಡಾ ಬಹಳಷ್ಟು ದೈಹಿಕ ತೊಂದರೆಗಳನ್ನು ಅನುಭವಿಸುತ್ತಾಳೆ. ದೇಹಸ್ಥಿತಿ ಹದಗೆಡುತ್ತಾ ಹೋಗುತ್ತದೆ. ಕಾಹ್ಲೋ ರಚಿಸಿದ "ದಿ ಬ್ರೋಕನ್ ಕಾಲಂ" ಎಂಬ ಕಲಾಕೃತಿಯಲ್ಲಿ, ಎದೆಯನ್ನು ಬಗೆದು ಬೆನ್ನುಮೂಳೆಯನ್ನು ತೋರಿಸಲಾಗಿದೆ.ಪದೇ ಪದೇ ಕಾಡುತ್ತಿದ್ದ ಈ ನೋವು, ಯಾತನೆಗಳು ಅವಳನ್ನೆಷ್ಟು  ನುಜ್ಜುಗುಜ್ಜಾಗಿಸಿದ್ದವು ಎಂಬುದರ ಅರಿವನ್ನು ಈ ಕೃತಿ  ಉಂಟುಮಾಡುತ್ತದೆ. ಆದರೆ ಅವಳನ್ನು ವಿಮುಖಳಾನ್ನಾಗಿ ಮಾಡಲು ಬಂದ ಅಡೆತಡೆಗಳನ್ನೆಲ್ಲ ಎದುರಿಸಿ ಛಲಬಿಡದೆ ತನ್ನ ಸಾಧನೆಯನ್ನು ಮುಂದುವರಿಸುತ್ತಾಳೆ ಫ್ರಿಡಾ. "ವಿಥೌಟ್ ಹೋಪ್", "ದಿ ವೂಂಡೆಡ್ ಡೀರ್ " ಮುಂತಾದ ಸುಂದರ ಕೃತಿಗಳು ಈ ಸಮಯದಲ್ಲಿ ಅವಳಿಂದ ರಚಿಸಲ್ಪಡುತ್ತವೆ. ೧೯೫೦ ರಲ್ಲಿ ಅವಳ ಬಲಗಾಲು ಗ್ಯಾಂಗ್ರೀನ್ ಕಾಯಿಲೆಗೆ ತುತ್ತಾಗುತ್ತದೆ. ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ ಫ್ರಿಡಾ ಕೆಲವು ಆಂದೋಲನಗಳಲ್ಲಿ ಭಾಗವಹಿಸುತ್ತಾಳೆ. ಮೆಕ್ಸಿಕೋದ ಶಾಂತಿ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾಳೆ. 


ಕೊನೆಯ ಎರಡು ವರ್ಷಗಳು.. 

೧೯೫೩ ರಲ್ಲಿ ಗ್ಯಾಂಗ್ರೀನ್ ಖಾಯಿಲೆ ಉಲ್ಬಣಗೊಂಡು ಬಲಗಾಲನ್ನು ಫ್ರಿಡಾ ಕಳೆದುಕೊಳ್ಳಬೇಕಾಗುತ್ತದೆ.ಅದೇ ವರ್ಷ ಪ್ರಥಮ ಬಾರಿಗೆ ಅವಳ ಚಿತ್ರ ಪ್ರದರ್ಶನ  ಮೆಕ್ಸಿಕೋದಲ್ಲಿ ನಡೆಯುತ್ತದೆ. ಬ್ರೊನ್ಕಿಯಲ್ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಾ ಹಾಸಿಗೆ ಹಿಡಿದಿದ್ದ ಫ್ರಿಡಾ ತಾನು ಪ್ರದರ್ಶನಕ್ಕೆ ಹೋಗಲೇ ಬೇಕೆಂದು ಹಠ ಹಿಡಿಯುತ್ತಾಳೆ. ವೈದ್ಯರು ಈ ಸ್ಥಿತಿಯಲ್ಲಿ ಅಲ್ಲಿಗೆ ಹೋಗುವುದು ಒಳ್ಳೆಯದಲ್ಲವೆಂದರೂ ಆಂಬುಲೆನ್ಸ್ ನಲ್ಲಿ ತಾನು ಮಲಗಿದ್ದ ಮಂಚದ ಸಮೇತ ಆ ಸ್ಥಳ ತಲುಪಿ ಬಂದವರೆಲ್ಲರ ಜೊತೆ ಬೆರೆಯುತ್ತಾಳೆ. ೧೯೫೪ ಕಾಹ್ಲೋ ಬದುಕಿನ ಕೊನೆಯ ವರ್ಷ.ನೋವಿನ ಬದುಕಿನಿಂದ ಬಿಡಿಸಿಕೊಂಡು, ಜುಲೈ ೧೩ ರಂದು ತಾನು ಹುಟ್ಟಿ ಬೆಳೆದ ಮನೆಯಾದ "ದಿ ಬ್ಲೂ ಹೌಸ್ " ನಲ್ಲಿ ಚಿರನಿದ್ರೆಗೆ ಜಾರುತ್ತಾಳೆ. ನೂರಾರು ಜನ ಅಭಿಮಾನಿಗಳು ಅವಳ ಮನೆಗೆ ತೆರಳಿ ಅಂತಿಮ ದರ್ಶನ ಪಡೆಯುತ್ತಾರೆ. ಸಾವಿಗೆ ಕಾರಣ ಪಲ್ಮನರಿ ಎಂಬೋಲಿಸಂ ಎಂದು ಅಧಿಕೃತವಾಗಿ ದಾಖಲೆಯಾಗಿದೆಯಾದರೂ ಅವಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ  ಗುಮಾನಿಯೂ ಇಲ್ಲದಿಲ್ಲ. 

ಸಾವಿನ ನಂತರದ ದಿನಗಳಲ್ಲಿ ಫ್ರಿಡಾ ಳ ಜನಪ್ರಿಯತೆ ಹೆಚ್ಚುತ್ತಾ ಹೋಗಿದೆ. ಅವಳು ಹುಟ್ಟಿ ಬೆಳೆದ ಬ್ಲೂ ಹೌಸ್ ಇದೀಗ ಮ್ಯೂಸಿಯಂ ಆಗಿ ಪರಿವರ್ತನೆಯಾಗಿದೆ. ಮೊದಲೆಲ್ಲ ಖ್ಯಾತ ಮ್ಯುರಲ್ ಚಿತ್ರಕಾರ ಡಿಯೆಗೊ ಪತ್ನಿ ಫ್ರಿಡಾ ಎಂದು ಗುರುತಿಸಿಕೊಳ್ಳುತ್ತಿದ್ದ ಮಟ್ಟದಿಂದ ಬೆಳೆದು, ಫ್ರಿಡಾಳ ಪತಿ ಡಿಯೆಗೊ ಎಂದು ಹೇಳಿಸಿಕೊಳ್ಳುವ ಮಟ್ಟಕ್ಕೆ ಅವಳ ಖ್ಯಾತಿ ಬೆಳೆದಿದೆ. ೧೯೮೩ ರಲ್ಲಿ ಹೇಡನ್ ಹೆರೆರಾ ಬರೆದ "ಎ ಬಯಾಗ್ರಫಿ ಆ ಫ್ರಿಡಾ ಕಾಹ್ಲೋ " ಎಂಬ ಪುಸ್ತಕ, ಓದುಗರಲ್ಲಿ ಇವಳೆಡೆಗೆ ಆಸಕ್ತಿ ಮೂಡಿಸಿತು. ೨೦೦೨ ರಲ್ಲಿ ಸಲ್ಮಾ ಹಯೆಕ್ ನಾಯಕಿಯಾಗಿ ನಟಿಸಿದ "ಫ್ರಿಡಾ" ಚಲನಚಿತ್ರ ಹಲವು ಪ್ರಶಸ್ತಿಗಳಿಗೆ ಭಾಜನವಾಯಿತು. 

ಸುಮಾರು ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೇಲಿಂದ ಮೇಲೆ ಅನಾರೋಗ್ಯವನ್ನೆದುರಿಸುತ್ತಾ, ಸಂಕಷ್ಟಗಳನ್ನೆಲ್ಲ ಶೌರ್ಯದಿಂದ ಎದುರಿಸಿ ಕಣ್ಮರೆಯಾದ ಈ ಧೀರೆ ಫ್ರಿಡಾ ನಿಜಕ್ಕೂ "ಲಾ ಹೀರೋಯಿನಾ ಡೆಲ್ ಡೊಲೊರ್ " , ನೋವಿಗೇ ನಾಯಕಿಯಾದವಳು. 














Monday 26 June 2017

ಮನಸೆಳೆದ ಮೊಸ್ಟಾರ್

ಯುಗೊಸ್ಲಾವಿಯ ಎಂಬ ಹೆಸರಿನಿಂದ ಒಟ್ಟಾಗಿದ್ದ ಪ್ರಾಂತ್ಯಗಳು, ೧೯೯೩ ರ ಹೊತ್ತಿಗೆ ಸಮರಕ್ಕಿಳಿದು ಹರಿದು ಚೂರಾದದ್ದು ಈಗ ಇತಿಹಾಸ.ಅವುಗಳಲ್ಲಿ ಒಂದಾದ ಬೋಸ್ನಿಯಾ ಮತ್ತು ಹೆರ್ಝಿಗೋವಿನಿಯ ದೇಶವನ್ನು ವೀಕ್ಷಿಸುವ ಯೋಜನೆ ನಮ್ಮದಾಗಿತ್ತು.ಅಲ್ಲಿಗೆ ಹೋಗುತ್ತೇವೆಂದು ಹೇಳಿದಾಗ, ಅಲ್ಲೇನಿದೆ! ಎಂದು ಮೂಗು ಮುರಿದವರೇ ಹೆಚ್ಚು.ಅಲ್ಲಿನ ಜನರು ಬಡವರು.ನೀವು ಓಡಾಡುತ್ತಿದ್ದರೆ ನಿಮ್ಮ ವಸ್ತುಗಳನ್ನೆಲ್ಲ ಕಿತ್ತುಕೊಂಡಾರು.ಬಾಲ್ಕನ್ ಯುದ್ಧದ ಅಡ್ಡ ಪರಿಣಾಮಗಳು ಇನ್ನೂ ಮಾಸಿಲ್ಲ. ಲ್ಯಾಂಡ್ ಮೈನ್ಸ್ ಗಳ ಭೀತಿ ಇದೆ.ಅಲ್ಲಿಗೆ ಹೋಗದಿದ್ದರೆ ಒಳಿತು ಎಂದು ಉಪದೇಶಿಸಿದವರೂ  ಇದ್ದರು.ಇಷ್ಟೆಲ್ಲಾ ಕೇಳಿ ನಮ್ಮ ಮನದಲ್ಲೂ ಅಳುಕು ಟಿಸಿಲೊಡೆದಿತ್ತು.ಆದರೆ ನಮ್ಮ ಪ್ರಯಾಣವನ್ನು ನಿಲ್ಲಿಸಲಿಚ್ಛಿಸದೆ ಬಂದದ್ದು ಬರಲಿ ಎಂದುಕೊಂಡೇ ಹೊರಟಿದ್ದೆವು. ಸ್ವೀಡನ್ ನಿಂದ ಹೊರಡುವಾಗಲೂ ಇಮಿಗ್ರೇಷನ್ ಕೌಂಟರ್ ನಲ್ಲಿ ಕುಳಿತಿದ್ದವನಿಗೆ ಆಶ್ಚರ್ಯ. ಅಲ್ಲಿಗೇಕೆ ಹೋಗುತ್ತಿರುವಿರಿ? ಮೊದಲ ಬಾರಿಯ ಪ್ರಯಾಣವೇ? ವೀಸಾದ  ನಿಯಮಗಳನ್ನೆಲ್ಲ ನೋಡಿಕೊಂಡಿರುವಿರಿ ತಾನೇ ಎಂದೆಲ್ಲ ಪ್ರಶ್ನಿಸಿಯೇ ನಮ್ಮ ಪಾಸ್ ಪೋರ್ಟ್ ನ ಮೇಲೆ ಅಚ್ಚೊತ್ತಿ ಮುಂದೆ ಹೋಗಲು ರಹದಾರಿ ನೀಡಿದ್ದ.



ಸ್ವೀಡನ್ ನಿಂದ ಹೊರಟು ಕೇವಲ ೩ ಗಂಟೆಯೊಳಗಾಗಿ ವಿಮಾನ ತುಜ್ಲಾ ಇಂಟರ್ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಇಳಿಯಿತು.ಒಂದು ಭಾರಿ ಮನೆಯಷ್ಟೇ ದೊಡ್ಡದಿತ್ತು ತುಜ್ಲಾ ವಿಮಾನ ನಿಲ್ದಾಣ. ಅಲ್ಲಿಂದ ಮೊಸ್ಟಾರ್ ತಲುಪುವುದು ನಮ್ಮ ಯೋಜನೆಯಾಗಿತ್ತದ್ದರಿಂದ ತುಜ್ಲಾದಿಂದ ಸರಯೇವೋ ಮುಖಾಂತರವಾಗಿ ಮೊಸ್ಟಾರ್ ನೆಡೆಗೆ ನಮ್ಮ ಪ್ರಯಾಣ ಪ್ರಾರಂಭಿಸಿದೆವು. ರಸ್ತೆಯ ಪಕ್ಕೆಲದಲ್ಲಿ ಗುಡ್ಡಗಳು,ಮೇಲಣ ಹಸುರ ಹೊದಿಕೆ,ಗುಡ್ಡಗಳ ತುದಿಯಲ್ಲಿ ಒಂದೊಂದೇ ಮನೆ, ಮನೆಯ ಮುಂದೆ ಮಣ್ಣಿನ ಕಾಲುದಾರಿ, ಎಷ್ಟೋ ದೂರ ನಡೆದರೆ ಒಂದು ಬಸ್ ನಿಲ್ದಾಣ,ಅಲ್ಲಲ್ಲಿ ಜುಳು ಜುಳು ಹರಿಯುವ ತೊರೆಗಳು ಇದು ಯೂರೋಪಿನ ಇತರೆ ಮುಂದುವರಿದ ದೇಶಗಳಂತಿರದೆ ಬೇರೆಯದೇ ಛಾಪು ಮೂಡಿಸಿತ್ತು.ಒಮ್ಮೊಮ್ಮೆ ನಮ್ಮೂರಲ್ಲೇ ನಾನಿದ್ದೇನೆ ಎಂದೆನಿಸಿಬಿಡುತಿತ್ತು.ಅಂತೂ ಗಂಟೆಗಟ್ಟಲೆ ಬಸ್ಸಿನಲ್ಲಿ ಪ್ರಯಾಣ ಮಾಡಿ ರಾತ್ರಿಯ ವೇಳೆಗೆ ಹೆರ್ಝಿಗೋವಿನಿಯ ಪ್ರಾಂತ್ಯದ ಮೊಸ್ಟಾರ್ ಪಟ್ಟಣ ತಲುಪಿಕೊಂಡೆವು


ಮೊಸ್ಟಾರ್  ನೆರೇತ್ವಾ ನದಿಯ ಮಡಿಲಲ್ಲಿ ಬೆಳೆದು ನಿಂತ ನಗರಿ. ಆ ನದಿಗೆ ೧೬ ನೇ ಶತಮಾನದಲ್ಲಿ ಕಟ್ಟಲಾದ ಸೇತುವೆಯೇ ಸ್ಟಾರಿ ಮೋಸ್ಟ್. "ಸ್ಟಾರಿ ಮೋಸ್ಟ್ " ಎಂಬ ಪದವನ್ನು ಅನುವಾದಿಸಿದರೆ ಹಳೆಯ ಸೇತುವೆ ಎಂಬರ್ಥ ಬರುತ್ತದೆ. ಈ ಹೆಸರನ್ನೇ ತನ್ನದಾಗಿಸಿಕೊಂಡಿದೆ ಮೊಸ್ಟಾರ್ ಪಟ್ಟಣ. ೧೯೯೩ ರ ಬಾಲ್ಕನ್ ಯುದ್ಧದ ಸಮಯದಲ್ಲಿ ಈ ಸೇತುವೆ ನಾಶಹೊಂದಿತ್ತು.ಆದರೆ ೨೦೦೪ ರ ವೇಳೆಗೆ ಪುನರ್ನಿರ್ಮಾಣ ಮಾಡಲಾಗಿ ಅದೀಗ ಮೊಸ್ಟಾರಿಗರ  ಹೆಮ್ಮೆಯ ಪ್ರತೀಕವಾಗಿ ತಲೆ ಎತ್ತಿ ನಿಂತಿದೆ. ವರ್ಷವೂ ಅದನ್ನು ವೀಕ್ಷಿಸಲು ಪ್ರಪಂಚದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಾರೆ.ನಾವೂ ಬೆಳಗ್ಗೆ ಬೇಗನೆ ಎದ್ದು ಆ ಸೇತುವೆಯೆಡೆ ನಡೆದೆವು.ಆಗಿನ್ನೂ ಮುಂಜಾನೆಯ ಹಿತವಾದ ಬಿಸಿಲು ಅಲ್ಲಲ್ಲಿ ಹರಡಿತ್ತು.ಸುವೆನೀರ್ ಅಂಗಡಿಗಳು ಒಂದೊಂದಾಗೆ ತೆರೆದುಕೊಳ್ಳುತ್ತಿದ್ದವು.ನೆರೇತ್ವಾ ನದಿ ಹೆಚ್ಚು ಸೆಳವಿಲ್ಲದೆ ಶಾಂತವಾಗಿ ಹರಿಯುತಿತ್ತು. ಮಧ್ಯದಲ್ಲಿ ಕಮಾನಿನ ಆಕಾರದ ಸೇತುವೆ ಜನರ ಮನಸ್ಸನ್ನು ಬೆಸೆಯುವ ಸ್ನೇಹದ ಕೊಂಡಿಯಾಗಿ ನಿಂತಂತಿತ್ತು.ನಾವು ಮುಂಚಿತವಾಗಿ ಅಲ್ಲಿದ್ದುದರಿಂದ ನಮ್ಮನ್ನು ಹೊರತು ಪಡಿಸಿ ಬೇರೆ ಯಾವ ಪ್ರವಾಸಿಗರೂ ಇರಲಿಲ್ಲ. ಆಗಾಗ ಸೇತುವೆಯ ಮೇಲೆ ನಿಂತು ನದಿಗೆ ಹಾರುವ ಗಟ್ಟಿ ಗುಂಡಿಗೆಯ ಜನರನ್ನು ನೋಡಬಹುದು. ನದಿಯ ಆಚೆ ದಡ ಮೊಸ್ಟಾರ್ ನ ಇನ್ನೊಂದು ಮುಖ. ಹೊಸ ಕಟ್ಟಡಗಳು, ಪಾರ್ಕ್ ಗಳು, ಅಗಲವಾದ ರಸ್ತೆಗಳು,ಸಿಗ್ನಲ್ ಲೈಟುಗಳು ಹೀಗೆ ಆ ಸ್ಥಳ ನಾವಿನ್ಯತೆಯಿಂದ ತುಂಬಿತ್ತು. ಆದರೂ ಅಲ್ಲಲ್ಲಿ ಪಾಳುಬಿದ್ದ ಕಟ್ಟಡಗಳು, ಸ್ಮಶಾನಗಳು, ಡೋಂಟ್ ಫಾರ್ಗೆಟ್ ೯೩ ಎಂಬ ನಾಮ ಫಲಕಗಳು ಯುದ್ಧದ ಕರಾಳತೆಯನ್ನು ಎತ್ತಿ ತೋರಿಸುತಿತ್ತು.


ಅಲ್ಲಿಂದ ಒಂದು ಟ್ಯಾಕ್ಸಿ ತೆಗೆದುಕೊಂಡು ಕ್ರಾವಿಚ ಜಲಪಾತ ನೋಡಲು ಹೋದೆವು.ಎಲ್ಲೆಲ್ಲೂ ಚೆರ್ರಿ ಹಣ್ಣಿನ ಗಿಡಗಳು,ಕೆಂಪಾದ ಚಿಕ್ಕ ಚಿಕ್ಕ ಹಣ್ಣುಗಳನ್ನು ಹೊತ್ತುಕೊಂಡು ನಿಂತಿದ್ದವು.ಅಲ್ಲಲ್ಲಿ ದಾಳಿಂಬೆಯ ಗಿಡಗಳೂ ಕಂಡವು. ಎಲ್ಲಕ್ಕಿಂತ ಹೆಚ್ಚಿನ ಗಮನ ಸೆಳೆದದ್ದು, ವಿಶಾಲವಾದ ದ್ರಾಕ್ಷಿ ತೋಪುಗಳು.ಆ ಜಾಗಗಳೆಲ್ಲ ದ್ರಾಕ್ಷಾರಸ ತಯಾರಿಕೆಗೆ ಪ್ರಸಿದ್ದಿ.ಕಪ್ಪು ದ್ರಾಕ್ಷಿ ಹಣ್ಣುಗಳನ್ನು ಕೊಯ್ದು ದೊಡ್ಡ ಪ್ರಮಾಣದಲ್ಲಿ ವೈನ್ ತಯಾರಿಸಿ ಮಾರುತ್ತಾರೆ. ಪ್ರವಾಸಿಗರು ಲೀಟರುಗಟ್ಟಲೆ ವೈನ್ ಗಳನ್ನು ಅಲ್ಲಿಂದ ಹೊರುತ್ತಾರಂತೆ. ನಾವು ಕ್ರಾವಿಚ ಜಲಪಾತ ತಲುಪುವಷ್ಟರಲ್ಲಿ ಬಹಳಷ್ಟು ಜನ ಆಗಲೇ ಅಲ್ಲಿದ್ದರು. ಕೆಲವರಂತೂ  ಕೊರೆಯುವ ನೀರಿನಲ್ಲಿ ಈಜುವ ಸಾಹಸಕ್ಕಿಳಿದಿದ್ದರು. ಬಹಳ ಎತ್ತರದಿಂದ ಭೋರ್ಗರೆದು ಧುಮುಕುವ ಜಲಪಾತವಲ್ಲ ಅದು. ಆದರೆ ಇಷ್ಟಗಲ ಹರಡಿಕೊಂಡು ಗಿಡಗಂಟಿಗಳ ನಡುವಿನಿಂದ ಜಾರುತ್ತ ನೋಡಲು ಅಮೋಘವೆನಿಸುತ್ತದೆ. ಚಳಿಗಾಲದಲ್ಲಿ ಇಲ್ಲಿನ ಗಿಡಗಳೆಲ್ಲ ಎಲೆಯುದುರಿಸಿಕೊಂಡು ಬೋಳಾಗಿದ್ದರೆ, ವಸಂತದಲ್ಲಿ ಪೂರ್ತಿ ಹಸಿರಸಿರು. ಶರದೃತು ಬಂತೆಂದರೆ ಹಳದಿ,ಕೇಸರಿ,ಕೆಂಪು ಬಣ್ಣಗಳ ಮೇಳ. ಮೊಸ್ಟಾರ್ ನಿಂದ ಇಲ್ಲಿಗೆ ತಲುಪಲು ಯಾವುದೇ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಳಿಲ್ಲ. ಹಾಗಾಗಿ ಟ್ಯಾಕ್ಸಿ ಕಾಯ್ದಿರಿಸಿಕೊಂಡು ಹೋದರೆ ಒಳಿತು.



ನಮ್ಮ ಮುಂದಿನ ಪಯಣ ಮೊಸ್ಟಾರ್ ನಿಂದ ಸುಮಾರು ಮೂವತ್ತು ಕಿ. ಮೀ ದೂರದಲ್ಲಿದ್ದ ಪೋಚಿಟೆಲಿ ಎಂಬ ಮಧ್ಯಕಾಲೀನ ಪಟ್ಟಣದೆಡೆಗೆ ಸಾಗಿತ್ತು.ನೆರೇತ್ವಾ ನದಿಯೇ ಇವರಿಗೆ ಜೀವದಾತೆ. ಈ ನದಿಯ ದಡದಲ್ಲಿ ನಿರ್ಮಿತಗೊಂಡು ಇವತ್ತಿಗೂ ಪ್ರಾಚೀನ ವಾಸ್ತುಶಿಲ್ಪದ ಕುರುಹಾಗಿ ನಿಂತಿದೆ ಪೋಚಿಟೆಲಿ.ಮಧ್ಯಾಹ್ನದ ಬಿಸಿಲು ನೆತ್ತಿಯನ್ನು ಸುಡುತಿತ್ತು.ನಮ್ಮ ಟ್ಯಾಕ್ಸಿ ಚಾಲಕ ಅರ್ಥವಾಗದ ಇಂಗ್ಲಿಷ್ ನಲ್ಲಿ ಗುಡ್ಡದ ತುದಿಯೆಡೆ ಕೈ ತೋರಿಸಿ ಅಲ್ಲಿಗೆ ಹತ್ತಿ ಹೋಗಬೇಕೆಂದು ಹೇಳಿದ.ತಾನಿಲ್ಲೇ ಕೂತಿರುವೆನೆಂದು,ನೀವು ಹೋಗಿ ಬನ್ನಿರೆಂದು ನಮ್ಮನ್ನು ಬೀಳ್ಕೊಟ್ಟ.ನಾವು ಕಾಲೆಳೆಯುತ್ತಾ ಒಂದೊಂದೇ ಮೆಟ್ಟಿಲು ಹತ್ತತೊಡಗಿದೆವು.ಇಡಿಯ ಸಂಕೀರ್ಣವನ್ನು ಕಲ್ಲಿನ ಗೋಡೆಯೊಂದು ಆವರಿಸಿತ್ತು.ಅಲ್ಲಲ್ಲಿ ಹಾಳಾಗಿದ್ದರೂ ಬಹುಪಾಲು ಕೋಟೆಯ ಗೋಡೆಗಳು, ಬುರುಜುಗಳು, ಕಲ್ಲಿನ ಮನೆಗಳು ಎಲ್ಲವನ್ನೂ ಕಾಣಬಹುದಿತ್ತು.ಒಟ್ಟೋಮನ್ ತುರ್ಕರ ಕಾಲದಲ್ಲಿ ನಿರ್ಮಾಣವಾದ ಮಸೀದಿಗಳು, ಸ್ನಾನ ಗೃಹಗಳು (ಹಮ್ಮಾಮ್), ಮದರಸಾ ಗಳು ಹಾಳಾಗದೆ ಉಳಿದಿದ್ದವು.ಅಲ್ಲಿನ ಮನೆಗಳಲ್ಲಿ ಈಗಲೂ ಜನ ವಾಸವಾಗಿದ್ದಾರೆ. ಬೆಟ್ಟದ ತುದಿಯಲ್ಲಿ ನಿಂತು ನೋಡಿದರೆ ಕೆಳಗೆ ಹತ್ತಿರದ ಊರುಗಳೆಲ್ಲ ಮಲಗಿದ್ದವು. ನೆರೇತ್ವಾ ನದಿ ಮಂದವಾಗಿ ಹರಿಯುತಿತ್ತು.ಪೂರ್ತಿಯಾಗಿ ನೋಡಿ ಮುಗಿಸುವಷ್ಟರಲ್ಲಿ ಎರಡು ಗಂಟೆಗಿಂತ ಹೆಚ್ಚೇ ಸಮಯ ಬೇಕಾಯಿತು.ಕೆಳಗೆ ಬಂದಾಗ ಚೆರ್ರಿ ಹಣ್ಣುಗಳನ್ನು ಮಾರುತ್ತಿರುವುದು ಕಂಡು ಹಸಿವಿನ ನೆನಪಾಗಿ ಒಂದು ಕೆಜಿ ಯಷ್ಟು ಹಣ್ಣನ್ನು ಕೊಂಡುಕೊಂಡೆವು. ಕೆಂಪಗೆ ಗುಂಡಗಿದ್ದ ಹಣ್ಣುಗಳು ಬಹಳ ಸಿಹಿಯಾಗಿದ್ದವು. ಹಸಿವಿನ ಮಹಿಮೆಯೋ ಅಥವಾ ಆ ಹಣ್ಣು ನಿಜಕ್ಕೂ ಅಷ್ಟು ರುಚಿಯಾಗಿತ್ತೋ  ನನಗಂತೂ ಚೆರ್ರಿ ಹಣ್ಣೆಂದರೆ ಇಷ್ಟ ಎನ್ನುವಂತಾಯಿತು. 





ಬ್ಲಾಗಾಯ್ ಎನ್ನುವ ಸ್ಥಳ ನಮ್ಮ ಕೊನೆಯ ನಿಲ್ದಾಣ.  ಅದು ಬ್ಯುನ ನದಿಯ ಉಗಮ ಸ್ಥಾನ. ಬಾನೆತ್ತರಕ್ಕೆ ಎದ್ದು ನಿಂತ ಕಲ್ಲು ಪರ್ವತಗಳ ಬುಡದಲ್ಲಿ ಒಂದು ಸಣ್ಣ ಗುಹೆಯಿಂದ ನೀರು ಹೊರಬಂದು ಹಳ್ಳವಾಗಿ ಹರಿಯುತ್ತಿತ್ತು. ಬ್ಯುನ ಒಂದು ಚಿಕ್ಕ ನದಿ. ಬಹಳ ದೂರ ಒಬ್ಬಂಟಿಯಾಗಿ ಸಾಗಲಿಚ್ಛಿಸದೆ ಬ್ಯುನ ಎಂಬ ಹಳ್ಳಿಯಲ್ಲಿ ನೆರೇತ್ವಾ ನದಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ.ಅಲ್ಲಿ ಹರಿಯುತ್ತಿದ್ದ ನೀರು ಒಂದೊಂದೆಡೆ  ಮೈಲು ತುತ್ತದ ನೀಲಿ ಬಣ್ಣದಲ್ಲಿ ಕಂಡರೆ ಇನ್ನೊಂದೆಡೆ ಪಾಚಿ ಹಸಿರು ಬಣ್ಣದಲ್ಲಿದ್ದಂತೆ ಕಾಣುತ್ತಿತ್ತು.ಹಾಗಾಗಿ ನೀರು ನೀಲಿಯೊ ಹಸಿರೋ ಎಂದು ಗೊತ್ತಾಗದೆ ಗೊಂದಲದಲ್ಲಿದ್ದೆ ನಾನು. ನದಿಯ ಪಕ್ಕದಲ್ಲೇ ಬ್ಲಾಗಾಯ್ ತೆಕ್ಕೆ ಎನ್ನುವ ಹೆಸರಿನ ಡೆರ್ವಿಶ್ ಮೊನಾಸ್ಟರಿ ಇದೆ.೧೬ ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಯಿತು ಎನ್ನುವ ಅಂಶವನ್ನು ಹೊರತು ಪಡಿಸಿ ಅಲ್ಲಿ ನೋಡುವಂತದ್ದು ನನಗೇನೂ ಕಾಣಲಿಲ್ಲ. ಸುಮ್ಮನೆ ಇದ್ದ ಕೋಣೆಗಳನ್ನೆಲ್ಲ ಹೊಕ್ಕು ಹೊರಬಂದೆವು. ಇದನ್ನೊಂದು ಸ್ಮಾರಕವೆಂದು ಗುರುತಿಸಿ ಇಂದಿಗೂ ಸಂರಕ್ಷಿಸಲಾಗಿದೆ. 


ಅಲ್ಲಿಂದ ವಾಪಸು ಕರೆತಂದ ಟ್ಯಾಕ್ಸಿ ಡ್ರೈವರ್ ನಮ್ಮನ್ನು ಹೋಟೆಲ್ ಎದುರು ಇಳಿಸಿದ. ಇನ್ನು ಕತ್ತಲಾಗಲು ಬಹಳ ಸಮಯವಿತ್ತು. ಹಾಗಾಗಿ ಮೊಸ್ಟಾರ್ ನಲ್ಲಿರುವ ಹಳೆಯ ಟರ್ಕಿಷ್ ಹೌಸ್ ಎಂದೇ ಹೆಸರಾದ ಕೈತಾಜ್ ಹೌಸ್ ನೋಡಲು ಹೊರಟೆವು.ಇದು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿದೆ.ಆದರೆ ಇಂದಿಗೂ ಇದರ ಒಡೆತನ ಕೈತಾಜ್ ಮನೆತನದ ಸೊತ್ತು.ಕೈತಾಜ್ ಮನೆ ಅಲ್ಲಿನ ನ್ಯಾಯಾಧೀಶರೊಬ್ಬರ ನಾಲ್ಕು ಜನ ಹೆಂಡತಿಯರಿಗೆ ಸೇರಿತ್ತು. ಯಾವುದೋ ಸಂದಿಮೂಲೆಯಲ್ಲಿ ಅಲೆದು ದಾರಿಯಲ್ಲಿ ಸಿಕ್ಕವರನ್ನು ವಿಚಾರಿಸುತ್ತಾ ಆ ಮನೆಯನ್ನು ತಲುಪಿದೆವು. ಹೊರಾಂಗಣವನ್ನು ಸುತ್ತುವರಿದಿದ್ದ ಎತ್ತರೆತ್ತರದ ಗೋಡೆಗಳಿಗೆ ಬೃಹತ್ ಬಾಗಿಲೊಂದಿತ್ತು.ಕರೆಗಂಟೆಯ ಶಬ್ದ ಕೇಳಿ ಒಬ್ಬಾಕೆ ಬಂದು ಬಾಗಿಲು ತೆಗೆದಳು.ನಮ್ಮನ್ನು ಒಳಗೆ ಕರೆದು ಕೂರಲು ಹೇಳಿ ಗುಲಾಬಿ ಹೂವಿನ ಎಸಳಿನಿಂದ ಮನೆಯಲ್ಲೇ ಮಾಡಿದ ಪಾನಕ ತಂದುಕೊಟ್ಟಳು.ಬಿಸಿಲಲ್ಲಿ ಬಂದವರಿಗೆ ಅಮೃತ ಕೊಟ್ಟಷ್ಟು ತಂಪೆನಿಸಿತು. ಆಕೆಯ ಹೆಸರು ಇಂದಿರಾ. ತನ್ನ ತಂದೆಗೆ ಇಂದಿರಾ ಎನ್ನುವ ಹೆಸರು ಇಷ್ಟವೆನಿಸಿ ಅದನ್ನು ತನಗಿಟ್ಟರೆಂದು ತಿಳಿಸಿದಳು. ಮುಂದೆ ಮನೆಯನ್ನೊಮ್ಮೆ ಸುತ್ತಾಡಿಸಿ ನಮಗೆ ಅಲ್ಲಿದ್ದ ಪ್ರತಿಯೊಂದು ವಸ್ತುಗಳ ಬಗ್ಗೆಯೂ ಮಾಹಿತಿ ನೀಡಿದಳು. ನ್ಯಾಯಾಧೀಶರ ನಾಲ್ವರು ಹೆಂಡತಿಯರಿಗೆ ಪ್ರತ್ಯೇಕವಾದ ಒಂದೊಂದು ಕೋಣೆಗಳು,ಅದಕ್ಕೆ ಸೇರಿಕೊಂಡಿದ್ದ ಸ್ನಾನಗೃಹಗಳಿದ್ದವು. ಆದರೆ ಅವರಲ್ಲೊಬ್ಬಳಿಗೆ ಮೇಲಿನ ಸ್ಥಾನ. ಆಕೆಗೆ ಹೆಚ್ಚಿನ ಉಪಚಾರವನ್ನು ಉಳಿದವರು ಮಾಡಬೇಕಿತ್ತಂತೆ. ಅವಳ ಆಣತಿಯಂತೆ ಮನೆಯ ಆಗುಹೋಗುಗಳು ನಿರ್ಧಾರವಾಗುತ್ತಿದ್ದವಂತೆ. ಊಟೋಪಚಾರ, ಉಡುಗೆ ತೊಡುಗೆ ಎಲ್ಲದರಲ್ಲೂ ಅವಳದ್ದು ಮೇಲುಗೈ.ಇದೆಲ್ಲವನ್ನು ಇಂದಿರೆಯಿಂದ ಕೇಳಿ ತಿಳಿದುಕೊಂಡೆವು. ಕಲ್ಲಿನ ಮನೆಯಾದ್ದರಿಂದ ಬೇಸಿಗೆಯಲ್ಲಿ ಧಗೆಯಿಂದ ರಕ್ಷಣೆ ನೀಡುತಿತ್ತು. ಅಡಿಗೆ ಮನೆಯನ್ನು ಉಳಿದೆಲ್ಲ ಕೋಣೆಗಳಿಗಿಂತ ಹೆಚ್ಚಿಗೆ ತಂಪಾಗಿರುವಂತೆ ಮಾಡಲಾಗಿತ್ತು. ಇದಲ್ಲದೆ ಅವರು ಬಳಸುತ್ತಿದ್ದ ಬಟ್ಟೆಗಳು, ಚಪ್ಪಲಿ, ತಲೆಗೇರಿಸುತ್ತಿದ್ದ ಟೊಪ್ಪಿ,ಮಗುವನ್ನು ತೂಗುವ ತೊಟ್ಟಿಲು,ಕಾಫಿ ಬಟ್ಟಲು ಇವೆಲ್ಲವನ್ನೂ ನೋಡುವ ಅವಕಾಶ ಸಿಕ್ಕಿತು. 



ಇಂದಿರಾ ಸಣ್ಣವಳಿದ್ದಾಗಿನಿಂದ ಅಲ್ಲೇ ಪಕ್ಕದ ಮನೆಯಲ್ಲಿ ಬೆಳೆದವಳಂತೆ.ಯುದ್ಧದ ಭೀಕರತೆಯನ್ನು ವಿವರಿಸುತ್ತಾ ಹೀಗೆಂದಳು. ಒಂದು ದಿನ ಅವಳ ತಂಗಿ ಮಧ್ಯ ರಾತ್ರಿ ಏನೋ ಸದ್ದಾಯಿತು ಎಂದು ಮಲಗಿದ್ದ ಕೊಠಡಿಯ ಬಾಗಿಲು ತೆಗೆದರೆ,ಮನೆಯ ಅರ್ಧ ಭಾಗ ಹತ್ತಿ ಉರಿಯುತ್ತಿತ್ತಂತೆ. ಎಲ್ಲರೂ ಹೊರಗೆ ಬಂದು ಬೀದಿಯಲ್ಲಿ ನಿಲ್ಲಬೇಕಾಯಿತಂತೆ.ಆ ಘಟನೆ ನಡೆದ ಮೇಲೆ ಅವರ ತಂದೆ ಹೆಣ್ಣು ಮಕ್ಕಳಿಬ್ಬರನ್ನು ಬಸ್ಸಿನಲ್ಲಿ ಜರ್ಮನಿಗೆ ಕಳಿಸಿದರಂತೆ.ಆ ದಿನದ ನೆನಪು ಅವಳಿಗಿನ್ನೂ ಮಾಸಿರಲಿಲ್ಲ.ಬೆಳಿಗ್ಗೆ ಬಸ್ಸಿನಲ್ಲಿ ಕೂತವಳಿಗೆ ತಂದೆ ಹೇಳುತ್ತಿದ್ದರಂತೆ, ಇನ್ನೊಂದು ವಾರವಷ್ಟೇ ಯುದ್ಧ ಮುಗಿಯುತ್ತದೆ.ಎಲ್ಲರೂ ಜೊತೆಯಾಗಿ ಅದೇ ಮನೆಯಲ್ಲಿ ಇರಬಹುದು ಎಂದು.ಆದರೆ ನಾವು ಇನ್ನೊಂದು ವಾರದಲ್ಲಿ ವಾಪಸಾಗಲಾರೆವು ಎಂದು ಅವಳ ಮನಸಿಗೆ ಖಚಿತವಾಗಿತ್ತು.ಬಸ್ಸಿನಲ್ಲಿ ಕುಳಿತ ಪ್ರತಿಯೊಬ್ಬರೂ ರೋಧಿಸುತ್ತಿದ್ದರಂತೆ.ಅಂದು  ನನ್ನ ತಂದೆಯ ಕಣ್ಣಲ್ಲೂ ನೀರಿತ್ತು.ಈಗ ಯುದ್ದವೆಲ್ಲ ಮುಗಿದು ನಾವು ವಾಪಾಸಾದರೂ ನನ್ನ ಎಷ್ಟೋ ಸ್ನೇಹಿತರನ್ನು, ಪರಿಚಯಸ್ಥರನ್ನು ಕಳೆದುಕೊಂಡಿದ್ದೇನೆ.ನಮ್ಮವರು ಮಾನವೀಯತೆ, ಪ್ರೀತಿ, ಅಭಿಮಾನವನ್ನು ಕಳೆದುಕೊಂಡಿದ್ದಾರೆ. ಈಗ ನಮ್ಮಲ್ಲೇನೂ ಉಳಿದಿಲ್ಲ ಎಂದು ಹನಿಗಣ್ಣಾದಳು. ಅವಳ ದುಃಖದ ಕಥೆ ಕೇಳಿ ನಮಗೂ ಬೇಸರವಾಯಿತು. 




ಮಾರನೆಯ ದಿನ ಬೆಳಿಗ್ಗೆಯೇ ಹೊರಡಬೇಕಿದ್ದರಿಂದ ಇನ್ನೊಮ್ಮೆ ಸ್ಟಾರಿ ಮೋಸ್ಟ್ ಕಡೆಗೆ ಹೋದೆವು. ಮುಂಜಾನೆ ಜನರಿಲ್ಲದೆ ಖಾಲಿ ಖಾಲಿಯಾಗಿದ್ದ ಸೇತುವೆ ಸಂಜೆಯ ವೇಳೆಗೆ ಗಿಜಿಗಿಜಿಗುಡುತಿತ್ತು. ಎಲ್ಲ ಅಂಗಡಿಗಳು, ಹೋಟೆಲ್ ಗಳಲ್ಲಿ ಜನವೋ ಜನ. ಅಲ್ಲಾಉದ್ ದೀನನ ಅದ್ಭುತ ದೀಪಗಳು, ಹೂದಾನಿಗಳು, ತುರ್ಕರ ಮಾದರಿಯ ಕಾಫಿ ಹೂಜಿಗಳು, ಬಟ್ಟಲುಗಳು, ಹರಳಿನಿಂದ ಸಿಂಗರಿಸಿದ ಆಭರಣದ ಪೆಟ್ಟಿಗೆಗಳು, ಹೊಳೆಹೊಳೆವ ಸರಗಳು, ಹಳೆಯ ಅಂಚೆ ಚೀಟಿಗಳು, ನಾಣ್ಯಗಳು, ವಿದ್ಯುತ್ ತೂಗುದೀಪಗಳು ಎಲ್ಲವೂ  ಆ ಬೀದಿಯನ್ನು ಬಣ್ಣಬಣ್ಣದಿಂದ ಸಿಂಗರಿಸಿ ಅದಕ್ಕೊಂದು ನವವಧುವಿನ ಕಳೆಯನ್ನೇ ತಂದಿದ್ದವು.ನಾವೂ ಸಹ  ಮೊಸ್ಟಾರ್ ನ ನೆನಪಿಗೆಂದು ಒಂದೆರಡು ವಸ್ತುಗಳನ್ನು ಖರೀದಿಸಿ ವಾಪಾಸಾದೆವು. 





  

Wednesday 17 May 2017

ಆಸ್ಟಿಯ ಆಂಟಿಕ





ರಾತ್ರಿಯ ಆಕಾಶದಲ್ಲಿ ಹಾರುತ್ತಿದ್ದ ವಿಮಾನ ಇನ್ನೇನು ಕೆಳಗಿಳಿಯಿತು. ಕಿಟಕಿಯಿಂದ ಇಣುಕಿದರೆ ದೀಪಾಲಂಕಾರ ಮಾಡಿಸಿಕೊಂಡ ರೋಮ್ ನಗರಿ ಜಗಮಗಿಸುತಿತ್ತು.ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿರುವ ರೋಮನ್ ಸಾಮ್ರಾಜ್ಯದ ಪಳೆಯುಳಿಕೆಗಳನ್ನು ನೋಡುವ, ಆ ವೈಭವೋಪೇತ ನಾಡಿನಲ್ಲಿ ನಾಲ್ಕು ದಿನ ಅಲೆಯುವ ಹುಮ್ಮಸ್ಸಿನೊಂದಿಗೆ ರೋಮ್ ನಗರಿಯ ಫ್ಯೂಮಿಚ್ಚಿನೋ ವಿಮಾನ ನಿಲ್ದಾಣದಲ್ಲಿ ನಾನು ಮತ್ತು ಅನೂಪ್ ಬಂದಿಳಿದಿದ್ದೆವು. ತಡವಾಗಿದ್ದರಿಂದ ಪಟ್ಟಣ ತಲುಪಲು ಇರುವ ಕೊನೆಯ ರೈಲು ಸಹ ಹೊರಟುಹೋಗಿತ್ತು. ಏನೂ ತೋಚದೆ ಕೊನೆಗೆ ಟ್ಯಾಕ್ಸಿ ಹಿಡಿದು ರೋಮ್ ನ ಬಸ್, ರೈಲು ಹಾಗೂ ಮೆಟ್ರೋ ಮುಖ್ಯನಿಲ್ದಾಣವಾದ ರೋಮಾ ಟರ್ಮಿನಿಗೆ ಸಮೀಪದಲ್ಲಿ ನಾವು ಕಾಯ್ದಿರಿಸಿದ್ದ ಹೋಟೆಲ್ ತಲುಪಿಕೊಂಡೆವು.

ರೋಮ್ ನಲ್ಲಿ ಮೊದಲೆರಡು  ದಿನಗಳು ಕೊಲೋಸಿಯಂ, ರೋಮನ್ ಫೋರಮ್, ಬೆಸಿಲಿಕಾ ಗಳನ್ನು ನೋಡುವುದರಲ್ಲಿ ಕಳೆಯಿತು.ವಿಶ್ವ ಪ್ರಸಿದ್ಧ ಕೊಲೋಸಿಯಂ ಎದುರು ಕಣ್ಣರಳಿಸಿಕೊಂಡು ನಿಂತಾಗ ಎಂದೋ ನೋಡಿದ  ಪುಸ್ತಕದಲ್ಲಿದ್ದ ಚಿತ್ರಕ್ಕೆ ಅಕ್ಷರಶಃ ಜೀವ ಬಂದಂತಿತ್ತು.ಮೂರು ದಿನದ ಪಾಸ್ ಕೊಂಡುಕೊಂಡಿದ್ದರಿಂದ ಆದಷ್ಟು ಬಸ್ ಗಳನ್ನು ಹತ್ತಿಳಿದು ಅಲ್ಲಿದ್ದ ಮಾರುಕಟ್ಟೆ, ಚರ್ಚ್, ವಸ್ತುಸಂಗ್ರಹಾಲಯ, ಪಿಯಾಜಗಳನ್ನೆಲ್ಲ ಪಟ್ಟಿಮಾಡಿಕೊಂಡು ನೋಡಿಬಂದೆವು. ಊರಿನ ಮಧ್ಯದಲ್ಲಿ ಯಾವುದೇ ಅಬ್ಬರವಿಲ್ಲದೆ, ಸೆಳವಿಲ್ಲದೆ, ಏರುತಗ್ಗುಗಳಿಲ್ಲದೆ ಪ್ರಶಾಂತವಾಗಿ ಹರಿಯುತ್ತಿದ್ದ ಟೈಬರ್ ನದಿಯನ್ನು ದಾಟಿ  ವ್ಯಾಟಿಕನ್ ಸಿಟಿ ಎಂಬ ಪುಟ್ಟ ದೇಶಕ್ಕೂ ಹೋಗಿ ಬಂದೆವು. ಅಲ್ಲಿನ ಸಂತ ಪೀಟರ್ ಬೆಸಿಲಿಕಾ, ವ್ಯಾಟಿಕನ್ ಮ್ಯೂಸಿಯಂ ಎದುರಿದ್ದ ಉದ್ದುದ್ದದ ಸರತಿ ಸಾಲು ಕಂಡು ಬೆರಗಾಗಿದ್ದೆವು. ಬಿಡುವಿಲ್ಲದೆ ಪ್ರವಾಸಿಗರನ್ನು ಅತ್ತಿಂದಿತ್ತ ಹೊತ್ತೊಯ್ಯುತ್ತಿದ್ದ ಬಸ್ಸುಗಳು, ಮೆಟ್ರೋ ಗಾಡಿಗಳು, ಜನನಿಬಿಡ ಮಾರುಕಟ್ಟೆಗಳು, ಹೋಟೆಲ್ ಗಳನ್ನು ಕಂಡು ನನಗೆ ಎಲ್ಲಾ ದಾರಿಗಳೂ ರೋಮನ್ನೇ ಸೇರುತ್ತವೆ ಎಂಬ ಮಾತು ನಿಜವೆನಿಸಿಬಿಟ್ಟಿತ್ತು. ಅಂತೂ ಆ ಮೈಕೊರೆಯುವ ಚಳಿಗಾಲದಲ್ಲೂ ಜನಸಾಗರವೇ ಹರಿದು ಬಂದಿತ್ತು. 


ಮೂರನೆಯ ದಿನ ಹೊರಟಿದ್ದು ರೋಮ್ ನಗರಿಯಿಂದ ಸುಮಾರು ಮೂವತ್ತು ಕಿ.ಮೀ ದೂರದಲ್ಲಿರುವ  ಆಸ್ಟಿಯ ಆಂಟಿಕ ಎಂಬ ಸ್ಥಳಕ್ಕೆ.ಚಳಿಗಾಲದ ಮುಂಜಾನೆಯಲ್ಲಿ ಸೂರ್ಯ ಸಹ ಹೊದ್ದಿಕೆ ಹೊದ್ದು ಮಲಗಿರುತ್ತಾನೆ. ಹಾಗಾಗಿ ಹಗಲು ಹರಿಯುವುದು ತಡವಾಗಿಯೇ.ಬೆಳಕಿಗಾಗಿ ಕಾಯದೆ ಆದಷ್ಟು ಬೇಗ ಹೊರಟು ರೋಮಾ ಟರ್ಮಿನಿ ಸ್ಟೇಷನ್ ಸೇರಿಕೊಂಡೆವು.ಬೋಂಜೋರ್ನೋ ಎಂದು ನಗುತ್ತಾ ಸ್ವಾಗತಿಸಿದ ಹುಡುಗಿಯೊಬ್ಬಳ ಅಂಗಡಿಯಲ್ಲಿ,ಕ್ರೊಸಾಂಟ್ ಜೊತೆಗೆ ಕಾಫಿ ಕುಡಿದು ಹೊಟ್ಟೆ ತುಂಬಿಸಿಕೊಂಡೆವು.ಅಲ್ಲಿಂದ ರೈಲು ಹಿಡಿದು ಆಸ್ಟಿಯ ಆಂಟಿಕ ತಲುಪಿಕೊಂಡಾಗ ಹತ್ತು ಗಂಟೆ. ಆಸ್ಟಿಯ ಆಂಟಿಕ ಈಗ ಉತ್ಖನನ ನಡೆದ ಸ್ಥಳ.ಟೈಬರ್ ನದಿ, ಸಮುದ್ರ ಸೇರುವ ಜಾಗಕ್ಕೆ ತೀರಾ ಸಮೀಪದಲ್ಲಿ ಇದೆ.ರೋಮನ್ನರ ಕಾಲದ ಪ್ರಮುಖ ಬಂದರು ಪಟ್ಟಣವಾಗಿತ್ತು.ಆಮದು ರಪ್ತುಗಳ ವ್ಯಾಪಾರ ಕೇಂದ್ರವೂ ಆಗಿತ್ತು.ರೋಮನ್ ಸಾಮ್ರಾಜ್ಯದ ಪತನಾನಂತರ ಇದು ಸಹ ಮೂಲೆಗುಂಪಾಗಿ ಕಾಲದ ಒಡಲಲ್ಲಿ ಹೂತು ಹೋಯಿತು. ಸಾವಿರಾರು ವರ್ಷಗಳಿಂದ ನದಿ ಸಮುದ್ರಗಳು ಹೊತ್ತು ತರುವ  ಮರಳು, ಮಣ್ಣುಗಳು ಕಡಲ ದಡದಲ್ಲಿ ರೂಪುಗೊಂಡಿದ್ದ ಈ ಪಟ್ಟಣವನ್ನು ಇಂದು ಅಲ್ಲಿಂದ  ೩ ಕಿ.ಮೀ ಗಳಷ್ಟು ದೂರಕ್ಕೆ ತಂದು ನಿಲ್ಲಿಸಿವೆ.ರೋಮ್ ನಗರಕ್ಕೆ ಬರುವ ಪ್ರವಾಸಿಗರಲ್ಲಿ ಶೇಕಡಾ ಒಂದು ಭಾಗದ ಜನರೂ ಇಲ್ಲಿಗೆ ಬರುವುದಿಲ್ಲ.ಹಾಗಾಗಿ ಟಿಕೆಟ್ ಗಾಗಿ ಸರತಿಯಲ್ಲಿ ನಿಲ್ಲುವ ಪ್ರಮೇಯವೇ ಒದಗಲಿಲ್ಲ.ಎರಡು ಟಿಕೆಟ್ ಖರೀದಿಸಿ, ಅಲ್ಲಿನ ನಕಾಶೆ ಹಿಡಿದು ಒಳಹೊಕ್ಕೆವು.
ನೆಪ್ಟ್ಯೂನನ ಸ್ನಾನಗೃಹ

ಗೇಟು ದಾಟುತ್ತಿದ್ದಂತೆಯೇ ಕಾಲವೇ  ಹಿಂದೆ ಸರಿದಿದೆಯೇನೋ ಎಂಬಂತೆ ಸಹಸ್ರಮಾನಗಳಷ್ಟು ಹಳೆಯದಾದ ಕಟ್ಟಡಗಳು ಉದ್ದಕ್ಕೂ ಎದುರಾದವು.ಮಧ್ಯದಲ್ಲಿ ಹಾದುಹೋಗಿದ್ದ ಮುಖ್ಯ ರಸ್ತೆಯಾದ "ಡೆಕ್ಯೂಮೆನುಸ್  ಮ್ಯಾಕ್ಸಿಮಸ್" ಪೋರ್ಟ ರೊಮಾನ (ರೋಮನ್ ಗೇಟ್) ಮತ್ತು ಪೋರ್ಟ ಮರೀನಾ (ಸೀ ಗೇಟ್) ಗಳನ್ನು ಸೇರಿಸುವ ದಾರಿಯಾಗಿತ್ತು.ಈ ಎರಡು ದ್ವಾರಗಳ ನಡುವೆ ಹೆದ್ದಾರಿಯ ಇಕ್ಕೆಲಗಳಲ್ಲಿ ಇಟ್ಟಿಗೆಗಳಿಂದ ನಿರ್ಮಿತವಾದ ಇಡಿಯ ಊರು ಹರಡಿತ್ತು.ಆದರೆ ಯಾರೋ ಕಟ್ಟುತ್ತಿದ್ದ ಕಟ್ಟಡಗಳನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೇನೋ ಎಂಬಂತೆ ಎಲ್ಲ ಅರೆಪೂರ್ಣವಾಗಿತ್ತು. ಮೊದಲಿಗೆ ಕಂಡದ್ದು ಊರಿನ ಪ್ರವೇಶ ದ್ವಾರದ ಹೊರಗಿದ್ದ ಸ್ಮಶಾನ. ಮುಂದೆ ಎದುರಾದ ಸ್ನಾನಗೃಹಗಳು, ಮಾರುಕಟ್ಟೆಗಳು, ದೇವಾಲಯಗಳು, ಗೋದಾಮುಗಳು ಯಾವುದೋ  ಹರಪ್ಪ ಮೊಹೆಂಜೋದಾರೋ ಕಾಲದ ನಾಗರೀಕತೆಯನ್ನು ನೆನಪಿಸಿದ್ದವು.ನೆಪ್ಟ್ಯೂನನ ಸ್ನಾನಗೃಹದಲ್ಲಿ(ಬಾತ್ಸ್ ಆಫ್ ನೆಪ್ಟ್ಯೂನ್) ಮೊಸಾಯಿಕ್ ನ ಮೇಲೆ  ರಥಾರೂಢನಾಗಿರುವ ಸಮುದ್ರ ದೇವತೆಯ ಚಿತ್ರವಿರುವುದನ್ನು ಕಾಣಬಹುದಿತ್ತು.ಅಷ್ಟು ಶತಮಾನಗಳು ಕಳೆದರೂ ಆ ಚಿತ್ರ ಹಾಳಾಗದೆ ಉಳಿದಿರುವುದು ಆಶ್ಚರ್ಯವೇ ಸರಿ. ಅಲ್ಲಿನ ಇನ್ನೊಂದು ಮುಖ್ಯ ಆಕರ್ಷಣೆ ಎಂದರೆ ಅರ್ಧ ವರ್ತುಲಾಕಾರದ  ಸಭಾಗೃಹ. ಸುಮಾರು ೩೦೦೦ ಜನರು ಕುಳಿತುಕೊಳ್ಳಲು ಸ್ಥಳಾವಕಾಶವಿದೆ ಇಲ್ಲಿ. ಒಂದೇ ಚೌಕಟ್ಟಿನಲ್ಲಿ ಇದರ ಪೂರ್ತಿ ಚಿತ್ರವನ್ನು ಸೆರೆಹಿಡಿಯಲು, ಎಷ್ಟೇ ಪ್ರಯತ್ನಿಸಿದರೂ ನನಗೆ ಸಾಧ್ಯವಾಗಲಿಲ್ಲ.ನಕಾಶೆಯಲ್ಲಿನ ಚಿತ್ರಗಳಿಗೆ ತುಲನೆ ಮಾಡುತ್ತಾ ಒಂದೊಂದನ್ನೇ ನೋಡುತ್ತಾ ಮುಂದೆ ಸಾಗಿದೆವು.ನಡೆದು ನಡೆದು ಹಸಿವು ಹೆಚ್ಚಾದ ಮೇಲೆ ನೋಡಿದರೆ ಗಂಟೆ ಮೂರಕ್ಕೆ ಹತ್ತಿರವಿತ್ತು.ಒಂದಾನೊಂದು ಕಾಲದಲ್ಲಿ ಜ್ಯೂಪಿಟರ್, ಜೂನೋ, ಮಿನರ್ವ ದೇವತೆಗಳಿಗಾಗಿ ಕಟ್ಟಲಾಗಿದ್ದ ಕ್ಯಾಪಿಟೋಲಿಯಂ ದೇವಾಲಯದ ಎದುರು ಕುಳಿತು ಹಿಂದಿನ ದಿನ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಕಟ್ಟಿಸಿಕೊಂಡು ತಂದಿದ್ದ ಫ್ರೈಡ್ ರೈಸ್ ತಿಂದು ಮುಗಿಸಿದೆವು. ಅಲ್ಲಲ್ಲಿ ಕೆಲವೆಡೆ ಮುಖ್ಯ ರಸ್ತೆ ಕವಲೊಡೆದು ಚಿಕ್ಕ ರಸ್ತೆಗಳಾಗಿ ಬದಲಾಗಿದ್ದವು. ಸಣ್ಣದಾಗಿ ಹಿಮ ಸುರಿದು ಎಲ್ಲೆಡೆ ತೆಳುವಾದ ಬಿಳಿಯ ಮುತ್ತನ್ನು ಉದುರಿಸಿತ್ತು. ಇಷ್ಟಲ್ಲದೆ ಯೆಹೂದಿಗಳ ಸಿನಗಾಗ್, ಮದ್ಯದ ಅಂಗಡಿಗಳು, ಹೋಟೆಲ್ ಗಳು , ಸಾರ್ವಜನಿಕ ಶೌಚಾಲಯಗಳು,ಗೋಡೆಯ ಮೇಲಿನ  ಪೇಂಟಿಂಗ್ ಗಳು, ಮೀನು, ಮಾಂಸ ಬಿಕರಿಯಾಗುವ ಸ್ಥಳಗಳು, ಗೋದಾಮುಗಳು  ಮುಂತಾದವುಗಳನ್ನು ಗುರುತಿಸಿ ಸಂರಕ್ಷಿಸಲಾಗಿದೆ.ಉತ್ಖನನ ಸಮಯದಲ್ಲಿ ಸಿಕ್ಕ ಹಲವು ಅವಶೇಷಗಳನ್ನು ಅಲ್ಲಿನ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.ಹಸಿರಾದ ಮರಗಿಡಗಳು, ಬಣ್ಣಬಣ್ಣದ ಹಕ್ಕಿಗಳು ತುಂಬಿದ್ದು,ಅಷ್ಟೇನೂ ಪ್ರವಾಸಿಗರಿಲ್ಲದೆ ಶಾಂತವಾಗಿದ್ದ ಆ ಜಾಗ ತುಂಬಾ ಆತ್ಮೀಯವೆನಿಸಿತ್ತು.ಅತಿಯಾದ ಪ್ರಸಿದ್ದಿ ಪಡೆಯದಿದ್ದರೂ ರೋಮ್ ಗೆ ಹೋದವರು ನೋಡಲೇಬೇಕಾದಂತಹ ಜಾಗಗಳಲ್ಲಿ ಇದು ಒಂದು.
ಆಂಫಿಥಿಯೇಟರ್
ಕಟ್ಟಡಗಳ ಸಮುಚ್ಚಯ.. 


ರೋಮ್ ನಗರಿಗೆ ಬೇಕಾದ ಧವಸ ಧಾನ್ಯಗಳು, ಸಕ್ಕರೆ ಮುಂತಾದವುಗಳೆಲ್ಲ ಆಸ್ಟಿಯ ಆಂಟಿಕದ ಮೂಲಕವೇ ಸರಬರಾಜಾಗುತ್ತಿತ್ತು.ಇದಲ್ಲದೆ ಬೇರೆ ಬೇರೆ ದೇಶಗಳಿಂದ ಗುಲಾಮರನ್ನು ಸಹ ಆಮದು ಮಾಡಿಕೊಳ್ಳಲಾಗುತ್ತಿತ್ತು.ಕ್ರಿಸ್ತಶಖೆಯ ಪ್ರಾರಂಭದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಈ ಪಟ್ಟಣದಲ್ಲಿ ಸರಿಸುಮಾರು ೫೦೦೦೦ ಜನರು ವಾಸವಾಗಿದ್ದರಂತೆ.ಆದರೆ ಕಾಲಕ್ರಮೇಣ ಇದು ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ಉಸುಕನ್ನು ತಂದು ಇದರ ಮಡಿಲಿಗೆ ಸುರಿಯುತ್ತಿದ್ದ ಸಮುದ್ರ,ನಿಧಾನವಾಗಿ ಇದರಿಂದ ದೂರ ಸರಿಯಲಾರಂಭಿಸಿತು.ಈ ರೇವು ಪಟ್ಟಣದ ಪುನರುಜ್ಜೀವನಕ್ಕಿಂತ ಹೊಸ ಬಂದರು ನಿರ್ಮಾಣವೇ ಸುಲಭವೆನಿಸಿ ರೋಮನ್ನರು ಹತ್ತಿರದಲ್ಲೇ ನೂತನ ಹಡಗು ನಿಲ್ದಾಣಗಳನ್ನು ಸ್ಥಾಪಿಸಿದರು. ಹಾಗಾಗಿ ನಮ್ಮ ಆಸ್ಟಿಯ ಆಂಟಿಕ ಅಳಿದು ಸಮಯ ಕಳೆದಂತೆಲ್ಲ  ಭೂಗರ್ಭದಲ್ಲಿ ಅಡಗಿತು.

ಫೋರಮ್ ಆಫ್ ಕಾರ್ಪೋರೇಶನ್ 

ಕತ್ತಲೆ ಕವಿಯಲು ಇನ್ನೇನು ಸ್ವಲ್ಪ ಹೊತ್ತಿತ್ತು.ಒಬ್ಬೊಬ್ಬರಾಗೆ ಪ್ರವಾಸಿಗರೆಲ್ಲ ಜಾಗ ಖಾಲಿ ಮಾಡಿದ್ದರು. ಕೊನೆಯಲ್ಲಿ ಉಳಿದವರು ನಾನು ಮತ್ತು ಅನೂಪ್ ಇಬ್ಬರೇ! ನಿಧಾನವಾಗಿ ನಡೆಯುತ್ತಿದ್ದವರು ಎಚ್ಚೆತ್ತುಕೊಂಡು ಬೇಗ ಬೇಗ ಹೆಜ್ಜೆ ಹಾಕಿದೆವು.ಅಲ್ಲಲ್ಲಿ ಬ್ಲಾಕ್ ಬರ್ಡ್ ಗಳು, ಮಾಂಕ್ ಪ್ಯಾರಾಕೀಟ್ ಗಳು, ಸ್ಟಾರ್ಲಿಂಗ್ ಗಳು,ರಾಬಿನ್ ಗಳು ಕಂಡುಬಂದವು.ಸಮೀಪದಲ್ಲೇ ವಿಮಾನ ನಿಲ್ದಾಣ ಸಹ ಇದ್ದುದರಿಂದ  ಕೆಳಕ್ಕಿಳಿಯುವ, ಮೇಲೆ ಹಾರುವ ಸನ್ನಾಹದಲ್ಲಿದ್ದ ಲೋಹದ ಹಕ್ಕಿಗಳೂ ಕಾಣಸಿಕ್ಕವು.ಅಲ್ಲಿಂದ ರೈಲು ಹತ್ತಿ ರೋಮಾ ಟರ್ಮಿನಿ ಸ್ಟೇಷನ್ ತಲುಪಿಕೊಂಡಾಗ ರಾತ್ರಿಯಾಗಿತ್ತು. ಎಂದಿನಂತೆ ಹತ್ತಿರದಲ್ಲಿದ್ದ ಇಂಡಿಯನ್ ರೆಸ್ಟೋರೆಂಟ್ ನಲ್ಲಿ ಊಟ ಮುಗಿಸಿ  ನಮ್ಮ ಅಂದಿನ ದಿನದ ಅದ್ಭುತ  ಅನುಭವವನ್ನು ಮೆಲುಕು ಹಾಕುತ್ತಾ ಹೋಟೆಲ್ ಸೇರಿಕೊಂಡೆವು.



ರೋಮ್ ಪ್ರವಾಸ ಮಾಡುವಿರಾದರೆ ಈ ಸಲಹೆಗಳನ್ನು ಗಮನದಲ್ಲಿಡಿ

* ಕನಿಷ್ಠ ೩ ದಿನಗಳನ್ನಾದರೂ ರೋಮ್ ನಲ್ಲಿ ಕಳೆಯಿರಿ.ರೋಮ್ ಮತ್ತು ವ್ಯಾಟಿಕನ್ ಸಿಟಿ ನೋಡಲು ಮೂರು ದಿನಗಳಾದರೂ ಬೇಕು.
*   ಉಳಿದುಕೊಳ್ಳುವ ವ್ಯವಸ್ಥೆಗಾಗಿ ಹೋಟೆಲ್ ಗಳನ್ನು ರೋಮಾ ಟರ್ಮಿನಿ ಸ್ಟೇಷನ್ ಗೆ ಹತ್ತಿರದಲ್ಲೇ ಹುಡುಕಿಕೊಂಡರೆ ಒಳಿತು. ಏಕೆಂದರೆ ಓಡಾಡಲು ಬಸ್, ಮೆಟ್ರೋ, ಟ್ರೈನ್ ಗಳು ಅಲ್ಲಿಂದಲೇ ಲಭ್ಯವಿವೆ.
*  ರೋಮಾ ಟರ್ಮಿನಿಯ ಬಳಿ ಇರುವ ಹೋಟೆಲ್ ಗಳಿಗೆ ಬೇಡಿಕೆ ಹೆಚ್ಚಿರುತ್ತದೆ, ಹಾಗಾಗಿ ಬೆಲೆಯೂ ವಿಪರೀತ. ಆದರೆ ಅಲ್ಲಲ್ಲಿ ಇರುವ ಹಾಸ್ಟೆಲ್ ಗಳಲ್ಲಿ ಕಡಿಮೆ ಬೆಲೆಯ ಬಂಕರ್ಸ್ ಇರುವ  ೬-೮ ಜನರೊಂದಿಗೆ ಹಂಚಿಕೊಂಡಿರಬಹುದಾದ ಕೊಠಡಿಗಳು ಸಿಗುತ್ತವೆ.
* ಯಾವುದೇ ಪ್ರೇಕ್ಷಣೀಯ ಸ್ಥಳ ವೀಕ್ಷಿಸುವ ಮೊದಲು ಮಾಡಬೇಕಾದ ಕೆಲಸ ಎಂದರೆ ಮೂರು ದಿನದ ರೋಮಾ ಪಾಸ್  ಕೊಂಡುಕೊಳ್ಳುವುದು. ಈ ಪಾಸ್ ನಿಂದ ಮೂರು ದಿನಗಳು ಉಚಿತವಾಗಿ ಬಸ್. ಮೆಟ್ರೋ ಗಳಲ್ಲಿ ಪ್ರಯಾಣಿಸಬಹುದು. ಇದಲ್ಲದೆ ಪಾಸ್ ಇದ್ದಲ್ಲಿ ಮೊದಲೆರಡು ಪ್ರೇಕ್ಷಣೀಯ ಸ್ಥಳಗಳಿಗೆ ಉಚಿತ ಪ್ರವೇಶ ಹಾಗು ನಂತರದ ಸ್ಥಳಗಳಿಗೆ ರಿಯಾಯಿತಿ ಸಿಗುತ್ತದೆ.
* ರೋಮ್ ನಲ್ಲಿ ಪ್ರವಾಸಿಗರ ಸಂಖ್ಯೆ ವಿಪರೀತ. ಎಲ್ಲೆಡೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಜುಲೈ- ಆಗಸ್ಟ್ ತಿಂಗಳು ಯುರೋಪಿಯನ್ನರಿಗೆ ರಜೆಯ ದಿನಗಳು. ಹಾಗಾಗಿ ಮತ್ತಷ್ಟು ಹೆಚ್ಚಿನ ಜನರನ್ನು ಆ ಸಮಯದಲ್ಲಿ ಕಾಣಬಹುದು. ಕೋಲೋಸಿಯಂ, ವ್ಯಾಟಿಕನ್ ಮ್ಯೂಸಿಯಂ,ಸಂತ ಪೀಟರ್ ಬೆಸಿಲಿಕಾ ಇಲ್ಲೆಲ್ಲಾ ಟಿಕೆಟ್ ಗಾಗಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಿಕೊಳ್ಳಲು ಆದಷ್ಟು ಬೇಗ ದಿನವನ್ನು ಪ್ರಾರಂಭಿಸಿ. ಬೆಳಿಗ್ಗೆ ಅವು ತೆರೆಯುವ ಮೊದಲೇ ಅಲ್ಲಿರಿ.ಕಾಯುವ ಸಮಯ ಉಳಿಯುವುದರ ಜೊತೆಗೆ, ಬೇರೆ ಸ್ಥಳಗಳನ್ನೂ ನೋಡಬಹುದು. ರೋಮಾ ಪಾಸ್ ಇದ್ದಲ್ಲಿ, ಕೋಲೋಸಿಯಂನ ಟಿಕೆಟ್ ಕೊಂಡುಕೊಳ್ಳುವ ಅವಶ್ಯಕತೆ ಇರದು ( ಮೊದಲ ಎರಡು ಸ್ಥಳಗಳಿಗೆ ಮಾತ್ರ ಅನ್ವಯ.).ವ್ಯಾಟಿಕನ್ ಮ್ಯೂಸಿಯಂನ ಟಿಕೆಟ್ ಆನ್ಲೈನ್ ನಲ್ಲಿ ಕಾಯ್ದಿರಿಸಿಕೊಂಡರೆ ಒಳ್ಳೆಯದು.
*ಏನೇನು ನೋಡಬೇಕೆಂಬ ಪಟ್ಟಿ ಮೊದಲೇ ತಯಾರಿಸಿಕೊಳ್ಳಿ. ಒಂದೆರಡು ವಸ್ತು ಸಂಗ್ರಹಾಲಯಗಳು, ಬೆಸಿಲಿಕಾಗಳು, ರೋಮನ್ ಫೋರಮ್, ಕೋಲೋಸಿಯಂ, ಪಿಯಾಜಗಳು, ಪ್ಯಾಂಥಿಯಾನ್,ಸಂತ ಏಂಜೆಲೋ ಕಾಸಲ್, ವ್ಯಾಟಿಕನ್ ಸಿಟಿ, ಟ್ರೆವಿ ಫೌಂಟೇನ್ ಇವೆಲ್ಲವನ್ನು ಮರೆಯದೆ ನೋಡಿಬನ್ನಿ.
* ಇಲ್ಲಿ ಇಂಡಿಯನ್ ರೆಸ್ಟೋರೆಂಟ್ ಗಳು ಬಹಳಷ್ಟಿವೆ. ಹಾಗಾಗಿ ಊಟದ ಸಮಸ್ಯೆ ಅಷ್ಟಾಗಿ ಎದುರಾಗದು.
* ಪ್ರತಿದಿನ ಸಾವಿರಾರು ಜನರು ಬಂದಿಳಿಯುವ ಆ ಊರಿನಲ್ಲಿ ದುಡ್ಡು, ಪಾಸ್ ಪೋರ್ಟ್, ವೀಸಾಗಳ ಬಗ್ಗೆ ಜಾಗ್ರತೆಯಾಗಿರಿ. 

Friday 24 March 2017

ನಾರ್ವೆಯಲ್ಲಿ ನಾವು..



ನಾವು ಕುಳಿತಿರುವ ರೈಲು,ನಾರ್ವೆಯ ಕಡಲ ತೀರದಲ್ಲಿರುವ ಬಂದರು ಪಟ್ಟಣವಾದ  ಬರ್ಗೆನ್ ನ ನಸುಗತ್ತಲ ಬೀದಿಗಳನ್ನು ದಾಟಿ,ರಾಜಧಾನಿ ಓಸ್ಲೋ ಕಡೆಗೆ ಚಲಿಸುತ್ತಿದೆ.ಗಂಟೆ ಒಂಭತ್ತಾಗುತ್ತಾ ಬಂತು.ಈಗಷ್ಟೇ ನಿಧಾನವಾಗಿ ಬೆಳಕಾಗುತ್ತಿದೆ.ನೆಲದ ತುಂಬೆಲ್ಲಾ ಬಿಳಿಯ ಜಮಖಾನ ಹಾಸಿದಂತೆ ಬೆಳ್ಮಂಜು,ಚಳಿರಾಯನ ಹೊಡೆತಕ್ಕೆ ಹೆದರಿ ತಮ್ಮೆಲ್ಲಾ ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ನಿಂತ ಕಪ್ಪು ಕಪ್ಪು ಮರಗಳು ಕಣ್ಣಿಗೆ ಬೀಳುತ್ತಿವೆ.ಹತ್ತಿರತ್ತಿರವಾಗಿ ಹರಡಿಕೊಂಡಿರುವ ಗುಡ್ಡಗಳ ಮದ್ಯದಲ್ಲಿ ನಮ್ಮ ಪುಟ್ಟ ರೈಲು ಹೆಚ್ಚು ಸದ್ದಿಲ್ಲದೇ ಸಾಗುತ್ತಿದೆ.ಎಲ್ಲವೂ ಹಿಮದ ಹೊದಿಕೆಯಡಿ ಹೂತು ಹೋಗಿವೆ. ಹಲವೆಡೆ ಮೇಲಿಂದ ಕೆಳಗೆ ಧುಮುಕಲೆತ್ನಿಸಿದ್ದ ನೀರ ಹನಿಗಳು,ನೆಲ ತಲುಪಲಾಗದೆ ಸೋತು ಅಲ್ಲೇ ಹರಳುಗಟ್ಟಿ ಚೂಪಾದ ಕೋನಾಕೃತಿಗಳನ್ನು ನಿರ್ಮಿಸಿವೆ.ಆದರೂ ಅಪರೂಪಕ್ಕೊಮ್ಮೆ ಸುಂದರ ಜಲಪಾತಗಳ ದರ್ಶನವಾಗುತ್ತಿದೆ.ಈಗ ವಾಸ್ಸ್ ಎಂಬ ನಿಲ್ದಾಣದಲ್ಲಿ ರೈಲು ನಿಂತಿದೆ.ಹೊರಗೆ ಮಂಜಿನ ಮಳೆಯಾಗುತ್ತಿದೆ.ಒಳಗೆ ಹತ್ತಿದವರು ತಮ್ಮ ಬೂಟಿಗೆ, ಕೋಟಿಗೆ, ಹ್ಯಾಟಿಗೆ ಅಂಟಿಕೊಂಡ ಹಿಮದ ಹರಳುಗಳನ್ನು ಕೊಡವಿಕೊಳ್ಳುತ್ತಿದ್ದಾರೆ.
ಫಿಯೋರ್ಡ್
ನಿನ್ನೆ ಕೂಡ ಇದೇ ರೈಲಿನಲ್ಲಿ ಪ್ರಯಾಣಿಸಿ ವಾಸ್ಸ್ ನಲ್ಲಿಳಿದು ಫಿಯೋರ್ಡ್ ಪ್ರವಾಸ ಹೊರಟಿದ್ದೆವು. ನಮ್ಮ ಜೊತೆಗೇ ಇಲ್ಲಿ ಇಳಿದವರು ಅದೆಷ್ಟೋ ಮಂದಿ.ಆದರೆ ಹೆಚ್ಚಿನವರು ಸ್ಕೀಯಿಂಗ್ ಮಾಡಲು ಬಂದವರಾಗಿದ್ದರು.ನಾವು ಅಲ್ಲಿಂದ ಬಸ್ ಹತ್ತಿಕೊಂಡು ಗುಡ್ ವಾಂಗೇನ್ ಎನ್ನುವ ಸ್ಥಳ ತಲುಪಬೇಕಿತ್ತು.ಮೊದಲೇ ಬುಕ್ ಮಾಡಿಕೊಂಡು ಹೋಗಿದ್ದರಿಂದ ಬಸ್ ಸಿಗುವುದು ಕಷ್ಟವಾಗಲಿಲ್ಲ.ಬಸ್ ಚಾಲಕನಿಗೆ ಟಿಕೆಟ್ ತೋರಿಸಿ ಒಳಹೊಕ್ಕು ಆರಾಮಾಗಿ ಆಸೀನರಾಗಿ,ಮುಂದಿನ ಪ್ರಯಾಣದ ಆರಂಭಕ್ಕಾಗಿ ಕಾಯುತ್ತಾ ಕುಳಿತೆವು.ಸುತ್ತಲೂ ಹತ್ತಿ ಮೆತ್ತಿದಂತಹ ಬಟ್ಟಬಯಲುಗಳ ನಡುವೆ, ಸ್ವಚ್ಛಗೊಳಿಸಿದ್ದ ಡಾಂಬರು ರಸ್ತೆಯಲ್ಲಿ ಬಸ್ಸು ಹೊರಟಿತು.ಇಲ್ಲಿನ ವಾಹನಗಳ ಒಳಗೆ ಹೀಟರ್ ಗಳು ಇರುತ್ತದೆಯಾದ್ದರಿಂದ ಎಲ್ಲೂ ಚಳಿಯ ಅನುಭವವಾಗಲಿಲ್ಲ.ಅಲ್ಲಲ್ಲಿ ಇದ್ದ ಸರೋವರಗಳು ಗಡ್ಡೆಕಟ್ಟಿಕೊಂಡು ಗಟ್ಟಿಯಾಗಿದ್ದವು.ನಮ್ಮ ಪಠ್ಯ ಪುಸ್ತಕದಲ್ಲಿದ್ದ ಒಂದು ಪದ್ಯ ನೆನಪಾಯಿತು.ಧುರ್ಯೋಧನ ಭೀಮಸೇನನಿಂದ ತಪ್ಪಿಸಿಕೊಳ್ಳಲು ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಾಗ ಅದನ್ನು ತಿಳಿದ ಭೀಮಾರ್ಜುನರು ಅವನನ್ನು ಹೀಯಾಳಿಸುತ್ತಾರೆ.ಇದರಿಂದ ಸುಯೋಧನ ಕುಪಿತನಾಗುತ್ತಾನೆ.ಅವನ ಸಿಟ್ಟಿನ ಬಿಸಿಗೆ,ನೀರು ಕುದಿಯಲಾರಂಭಿಸಿ ಅಲ್ಲಿದ್ದ ಜಲಚರಗಳೆಲ್ಲ ಬೆಂದುಹೋಗುತ್ತವಂತೆ.ಈ ಕೊಳಗಳಲ್ಲಿ ನೀರು ಪೂರ್ತಿ ಹೆಪ್ಪುಗಟ್ಟಿದರೆ ಮೀನುಗಳ ಕಥೆ ಏನಾಗಬಹುದೆಂಬ ಯೋಚನೆ ಬಂತು.ಆದರೆ ಇಲ್ಲಿ ನೀರಿನ ಮೇಲ್ಪದರವಷ್ಟೇ ಗಟ್ಟಿಯಾಗಿರುತ್ತದೆ, ಒಳಗೆ ತಕ್ಕ ಮಟ್ಟಿಗೆ ಬೆಚ್ಚಗಿದ್ದು ನೀರು ದ್ರವರೂಪದಲ್ಲೇ ಇರುತ್ತದೆ.

ಗುಡ್ ವಾಂಗೇನ್ ನಲ್ಲಿ ಅನೂಪ್ 

ಗುಡ್ ವಾಂಗೇನ್ ಬೆಟ್ಟಗುಡ್ಡಗಳಿಂದ ಆವೃತವಾದ,ಪುಟ್ಟ ಹಳ್ಳಿ.ಕೆಲವು ಚಿಕ್ಕ ಮನೆಗಳು,ಸುವೆನೀರ್ ಅಂಗಡಿ ಕಂಡದ್ದು ಬಿಟ್ಟರೆ ಬೇರೇನಿಲ್ಲ.ನಮ್ಮ ಮುಂದಿನ ಫಿಯೋರ್ಡ್  ಪ್ರವಾಸ ಅಲ್ಲಿಂದಲೇ ಪ್ರಾರಂಭವಾಗುತ್ತಿತ್ತು.ಫಿಯೋರ್ಡ್ ಎಂದರೆ ಕಡಿದಾದ ಪರ್ವತ ಶ್ರೇಣಿಗಳ ನಡುವಿನ ಕಿರಿದಾದ ಜಾಗಗಳಲ್ಲಿ ಸಮುದ್ರದ ನೀರು ಒಳಪ್ರವೇಶಿಸಿ ಖಾರಿಗಳನ್ನು ನಿರ್ಮಿಸಿರುತ್ತದೆ.ನಾರ್ವೆಯಲ್ಲಿ ಇಂತಹ ಖಾರಿಗಳು ಬಹಳಷ್ಟಿವೆ ಮತ್ತು ಪ್ರವಾಸಿಗರು ಅವುಗಳ ಸೌಂದರ್ಯ ಸವಿಯಲೆಂದು ಬೋಟುಗಳ ವ್ಯವಸ್ಥೆ ಮಾಡಲಾಗಿದೆ. ಸುವೆನೀರ್ ಅಂಗಡಿಯಲ್ಲಿ ಸುಮ್ಮನೆ ಒಂದು ಸುತ್ತು ಹಾಕಿ, ಅಲ್ಲಲ್ಲಿ ಛಾಯಾಚಿತ್ರಗಳ ಸೆರೆ ಹಿಡಿಯುತ್ತಾ ಅಡ್ಡಾಡುವಷ್ಟರಲ್ಲಿ ಬೋಟ್  ಬಂದು ನಿಂತಿತು. ನಮ್ಮ ಟಿಕೆಟ್ ನೋಡಿ ಒಳಗೆ ಹೋಗಲು ಅನುಮತಿ ನೀಡಿದ ಬಾಗಿಲಲ್ಲಿ ನಿಂತಿದ್ದಾತ. ಎತ್ತರದ ಜಾಗದಲ್ಲಿ ಹೋಗಿ ನಿಂತುಕೊಂಡೆವು.ನೆರೊಯ್ ಫಿಯೋರ್ಡ್ ನಮ್ಮೆದುರು ಉದ್ದಕ್ಕೆ ಹರಡಿತ್ತು.ನಿಧಾನವಾಗಿ ನೀರಲೆಗಳನ್ನು ಹಿಂದೆ ಜೀಕಿ ನಮ್ಮ ಜಲ ಸಾರಿಗೆ ಮುಂದಡಿಯಿಡುತಿತ್ತು.ಬಕ್ಕನೋಸಿ ಎನ್ನುವ ಪರ್ವತದ ತಪ್ಪಲಿನಲ್ಲಿ ಇದ್ದ ಬಕ್ಕ ಎನ್ನುವ ಪುಟ್ಟ ಹಳ್ಳಿ ಮೊದಲಿಗೆ ಎದುರಾಯಿತು.ಸುಮಾರು ಹತ್ತು ಜನರು ವಾಸವಾಗಿದ್ದಾರಂತೆ ಇಲ್ಲಿ. ಮುಂದೆ ಹೋದಂತೆಲ್ಲ ಹಿಮಾಚ್ಚಾದಿತ ಪರ್ವತ ಶ್ರೇಣಿಗಳು,ಒಂದೆರಡು ಸಣ್ಣ ಹಳ್ಳಿಗಳು ಕಂಡವು.ಕುಳಿರ್ಗಾಳಿ ಜೋರಾಗಿ ಬೀಸುತಿತ್ತು,ಚಳಿ ಹೆಚ್ಚಾಯಿತು.ಬೆರಳುಗಳೆಲ್ಲ ನೋಯಲು ಪ್ರಾರಂಭವಾಯಿತು.ಕೈಚೀಲ ಧರಿಸಿ ಬೆಚ್ಚಗೆ ಒಂದೆಡೆ ಕುಳಿತೆ.ನಂತರದಲ್ಲಿ ನಮ್ಮ ಎಡ ಭಾಗದಲ್ಲಿದ್ದ  ಸುಮಾರು ೫೦೦ ಮೀಟರ್ ಎತ್ತರದ ಸಾಗ್ ಫಾಸ್ಸೆನ್ ಜಲಪಾತ  ಜಾರಿ ಕೆಳಗಿದ್ದ ಖಾರಿಗೆ ಸೇರುತಿದ್ದ ನೋಟ ಕಣ್ಮನ ಸೆಳೆಯಿತು.ಹಲವು ಕ್ಯಾಮೆರಾ ಗಳು ಕ್ಲಿಕ್ ಕ್ಲಿಕ್ ಎಂದು ಸದ್ದು ಮಾಡಿದವು. ಮುಂದೆ ಪುಟ್ಟ ತಿರುವಿನಲ್ಲಿ ನೆರೊಯ್ ಫಿಯೋರ್ಡ್ ಮತ್ತು ಆರ್ಲ್ಯಾಂಡ್ಸ್ ಫಿಯೋರ್ಡ್ ಸಂಗಮವಾಗುತಿತ್ತು.ಬೋಟು ತನ್ನ ದಿಕ್ಕು ಬದಲಿಸಿ ಆರ್ಲ್ಯಾಂಡ್ಸ್ ಫಿಯೋರ್ಡ್ ನೆಡೆ ಸಾಗಿತು.ಮತ್ತದೇ ಧವಳಗಿರಿಗಳ ಸಾಲು, ಅಗಾಧ ಜಲರಾಶಿ,ಹಿಮಕರಗಿ ಧುಮುಕುತ್ತಿದ್ದ ಅಲ್ಪಕಾಲದ ಜಲಧಾರೆಗಳು ನಮ್ಮನ್ನು ಮೂಕವಿಸ್ಮಿತರಾಗುವಂತೆ ಮಾಡಿದ್ದವು.

ಶಿಯೋಸ್ ಫಾಸ್ಸೆನ್
ಎರಡು ಗಂಟೆಗಳ ಕಾಲ ನೀರಿನಲ್ಲಿ ತೇಲುತ್ತಾ ಫ್ಲ್ಯಾಮ್ ಎನ್ನುವ ಸ್ಥಳ ಸೇರಿದೆವು. ಅಲ್ಲಿಂದ ಫ್ಲ್ಯಾಮ್ ರೈಲಿನಲ್ಲಿ ಸುಮಾರು ೨೮೦೦ ಅಡಿಗಳಷ್ಟು ಮೇಲೆ ಇರುವ ಮಿರ್ಡಾಲ್  ಎನ್ನುವ ಊರು ತಲುಪಬೇಕಿತ್ತು.ಇದ್ದ ಅರ್ಧ ಗಂಟೆಯನ್ನು ಊರು ನೋಡುತ್ತಾ ಕಳೆದು ಕೊನೆಗೆ ಊಟಕ್ಕೆ ಸಮಯ ಸಿಗದೇ ರೈಲಿನಲ್ಲಿ ಕುಳಿತು ತಂದಿದ್ದ ಹಣ್ಣು ಹಂಪಲು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕಾಯಿತು.ಮುಂದಿನ ಒಂದು ಗಂಟೆಗಳ ಕಾಲ ಅಪೂರ್ವ ಅನುಭವವೊಂದು ನಮ್ಮದಾಗಲಿತ್ತು.ಇದನ್ನು ಮಾತಲ್ಲಿ ಹೇಳಿದರೆ ಅಪೂರ್ಣವೆನಿಸುತ್ತದೆ. ಬರೆಯುವುದಕ್ಕೆ ಪದಗಳನ್ನು ಹುಡುಕಬೇಕಾಗಿದೆ. ಚಿತ್ರ, ಫೋಟೋಗಳಿಂದಲೂ  ಇದರ ಮೋಹಕತೆಯನ್ನು ಸೆರೆಹಿಡಿಯಲು ಸಾಧ್ಯವಿಲ್ಲ. ಕೇವಲ ಅನುಭವಕ್ಕಷ್ಟೇ ಸೀಮಿತ ಇದು.ಕಣಿವೆಗಳ ನಡುವಲ್ಲೆಲ್ಲೋ ನಮ್ಮ ಬಂಡಿ ಸಾಗುತಿತ್ತು.ಆಕಾಶವೇ ಬಾಯ್ತೆರೆದು ನುಂಗುತ್ತಿದೆಯೇನೋ ಎಂಬಂತೆ ಬೆಟ್ಟಗಳ ತುದಿಗಳೆಲ್ಲವೂ ಕಾಣೆಯಾಗಿದ್ದವು.ಮರಗಿಡಗಳೆಲ್ಲ ಶ್ವೇತಧಾರಿಗಳಾಗಿದ್ದವು.ಅಲ್ಲಲ್ಲಿ ಕೆಲವರು ಸ್ಕೀಯಿಂಗ್ ಮಾಡುತ್ತಿದ್ದುದನ್ನು ಕಂಡೆ.ಮುಂದೆ ದಾರಿಯಲ್ಲಿ ಶಿಯೋಸ್ ಫಾಸ್ಸೆನ್ ಎನ್ನುವ ಜಲಪಾತದೆದುರು ರೈಲು ನಿಂತಿತು.ಬೇರೆ ಸಮಯದಲ್ಲಾದರೆ ಭೋರ್ಗರೆಯುತ್ತಾ ಧುಮುಕುವ ಈ ಜಲಪಾತ, ಚಳಿಗೆ ಮರಗಟ್ಟಿ ನಿಧಾನವಾಗಿ ಜಾರುತ್ತಿತ್ತು.ಅಲ್ಲೊಂದಷ್ಟು ಫೋಟೋ ತೆಗೆಯುವ ಪ್ರಯತ್ನ ಮಾಡಿದೆ. ನಾಲ್ಕು ಗಂಟೆಯ ಹೊತ್ತಿಗೆ ಮಿರ್ಡಾಲ್ ತಲುಪಿದ್ದೆವು. ಆಗಲೇ ಸೂರ್ಯಾಸ್ತವಾಗುವ ಸಮಯವಾಗಿತ್ತು.ಇಲ್ಲಿನ ಜನರಿಗೆ ಬದುಕಲು ಪ್ರಕೃತಿ ಪೂರಕವಾಗಿಲ್ಲ. ವಿಪರೀತ ಚಳಿ, ಬಿಟ್ಟೂ ಬಿಡದೆ ಸುರಿಯುವ ಹಿಮ,ಸೂರ್ಯನ ಬೆಳಕಿಗೆ ಪರಿತಪಿಸಬೇಕಾದ ಪರಿಸ್ಥಿತಿ ಚಳಿಗಾಲದಲ್ಲಾದರೆ  ಬೇಸಿಗೆಯಲ್ಲಿ ರಾತ್ರಿಯಲ್ಲೂ ಬೆಳಕು ಇರುತ್ತದೆ. ಮಧ್ಯರಾತ್ರಿಯಲ್ಲಿ  ಸೂರ್ಯೋದಯವಾಗುವ ನಾಡು ನಾರ್ವೇಯಲ್ಲವೇ.! ಈ ಕಷ್ಟದಲ್ಲೂ ಜನ ಬದುಕಿದ್ದಾರೆ. ಅವುಗಳಿಗೆ ಸವಾಲೆನ್ನುವಂತೆ ಬೆಳೆದಿದ್ದಾರೆ.ಬಂಡೆಗಳನ್ನೂ ಕೊರೆದು ಸುರಂಗಮಾರ್ಗ ನಿರ್ಮಿಸಿಕೊಂಡು ದಾರಿ ಮಾಡಿಕೊಂಡಿದ್ದಾರೆ.ಅವರ ಕಷ್ಟ ಸಹಿಷ್ಣುತೆಯನ್ನು ಮೆಚ್ಚಲೇಬೇಕು.
ಮಿರ್ಡಾಲ್ ನಲ್ಲಿ ನಾವಿಬ್ಬರು.. 
ಮಂಜು ಮುಸುಕಿದ  ಹಾದಿ 
               
ನಿನ್ನೆ ಮಿರ್ಡಾಲ್ ನಿಂದ ಬರ್ಗೆನ್ ನ ದಾರಿ ಹಿಡಿದಾಗಲೇ ಕತ್ತಲಾಗಿತ್ತು.ಏನೂ ನೋಡಲು ಸಾಧ್ಯವಾಗಿರಲಿಲ್ಲ.ಆದರೆ ಇಂದು ಅದೇ ದಾರಿಯಲ್ಲಿ ಮತ್ತೆ ಪಯಣ.ಕಿಟಕಿಯಾಚೆಗಿನ  ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಬೆಚ್ಚಗೆ ಒಳಗೆ ಕುಳಿತು, ಬರೆಯುತ್ತಿದ್ದೇನೆ.ಹೊರಗೆ ದೊಡ್ಡ ಹತ್ತಿಯ ಉಂಡೆಗಳಂತೆ ಕಾಣುತ್ತಿರುವ ಮಂಜು ಎಷ್ಟು ಢಾಳಾಗಿ ಸುರಿಯುತ್ತಿದೆಯೆಂದರೆ,ರೈಲು ಹಳಿಯ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳ ಕೂಡ ಮುಚ್ಚಿಹೋಗಿದೆ.ಸೇತುವೆಗಳ ಮೇಲೆ ಪದರ ಪದರಗಳಾಗಿ ಶೇಖರವಾದ ಹಿಮ ಮನುಷ್ಯರ ಹೆಜ್ಜೆ ಗುರುತೂ ಕಾಣದಂತೆ ಎಲ್ಲವನ್ನೂ ಅಳಿಸಿ ಹಾಕಿದೆ.ಎದುರು ಕಾಣುತ್ತಿರುವ ಮನೆಗಳ ಬಾಗಿಲುಗಳು ತೆರೆಯಲಾಗದಂತೆ ಹುಗಿದು ಹೋಗಿವೆ.ಹಿಮ ಪಾತ ತಡೆಯಲು ಗುಡ್ಡಗಳ ಇಳಿಜಾರಿನಲ್ಲಿ ಕೆಲವೆಡೆ ತಡೆಗಳನ್ನು ನಿರ್ಮಿಸಲಾಗಿದೆ.ಅವೂ ಭಾರಕ್ಕೆ ಕೆಳಗೆ ಬಾಗಿದಂತೆ ಕಾಣುತ್ತಿದೆ.ಈಗ ಮತ್ತೆ ಮಿರ್ಡಾಲ್ ನಿಲ್ದಾಣದಲ್ಲಿದ್ದೇವೆ.ಇಳಿಯುವವರು,ಇಳಿದಾಯಿತು. ಹತ್ತುವವರು ಹತ್ತುತ್ತಿದ್ದಾರೆ.ಬಾಗಿಲಲ್ಲಿ ನಿಂತು ಹೊರಗೊಮ್ಮೆ ನೋಡುತ್ತಿದ್ದೇನೆ.ಕೆಳಗೆ ಇಳಿದು ಆಡುವ ಮನಸ್ಸಾದರೂ ಅದು ಸಾಧ್ಯವಾಗದು.ಖಂಡಿತ ಮತ್ತೊಮ್ಮೆ ಬರುವೆ ಎಂದು ಆ ಊರಿಗೆ ವಿದಾಯ ಹೇಳಿದೆ.ಈಗ ಉಗಿಬಂಡಿ ಹೊರಟಿದೆ ಓಸ್ಲೋ ನಗರಿಯೆಡೆಗೆ...



Friday 20 January 2017

ಚಿಟ್ಟು ಕುಟುರ..

ಚಿಟ್ಟು ಕುಟುರ..
ನಮ್ಮ ಮನೆಯ ಹಿತ್ತಲಲ್ಲಿ ಇರುವ ಸಪೋಟಾ ಗಿಡಗಳ ತುಂಬ ಹೂವರಳಿ ಕಾಯಾಗುವುದನ್ನು ನೋಡಿದ್ದೇನೆ. ಆದರೆ ನಮ್ಮ ಕೈಯ್ಯಿಗೆ, ಬಾಯಿಗೆ ಸಿಗುವುದು ಮಾತ್ರ ಎಲ್ಲೋ ಒಂದೆರಡು ಹಣ್ಣುಗಳು. ಅದೇಕೆ ಗೊತ್ತೇ? ಚಿಗುರು ಕಾಯಿಗಳಾಗುವುದೇ ತಡ, ಹಲವಾರು ಹಕ್ಕಿಗಳು ತಮ್ಮ ಬಳಗದ ಸಮೇತ ಲಗ್ಗೆ ಇಟ್ಟು ನಾ ಮುಂದು, ತಾ ಮುಂದು ಎಂದು ಇನ್ನೂ ಬಲಿಯದ ಮಿಡಿಗಾಯಿಗಳನ್ನೇ ಕುಕ್ಕುತ್ತಾ ಕುಳಿತಿರುತ್ತವೆ. ಕೊನೆಯಲ್ಲಿ ಈ ಹಕ್ಕಿಗಳಿಂದ ತಪ್ಪಿಸಿಕೊಂಡ ಬೆರಳೆಣಿಕೆಯಷ್ಟು ಕಾಯಿಗಳು ಹಣ್ಣಾಗಿ ಅಪರೂಪವಾಗಿ ನಮಗೆ ತಿನ್ನಲು ಸಿಗುತ್ತವೆ. 

ಈ ಫಲಭಕ್ಷಕ ಹಕ್ಕಿಗಳಲ್ಲಿ ಮುಖ್ಯವಾಗಿ ನಾನು ಗಮನಿಸಿದ್ದು ವೈಟ್ ಚೀಕ್ಡ್ ಬಾರ್ಬೆಟ್. ಇದರ ವೈಜ್ಞಾನಿಕ ಹೆಸರು ಮೆಗಾಲೈಮ ವಿರ್ಡಿಸ್. ಕನ್ನಡದಲ್ಲಿ ಇದನ್ನು ಚಿಟ್ಟು ಕುಟುರ ಅಥವಾ ಸಣ್ಣ ಕುಟುರ ಎಂದು ಕರೆಯುತ್ತಾರೆ. ಇವು ಆಗಾಗ ಕುಟ್ರು.. ಕುಟ್ರು.. ಎಂದು ಶಬ್ದ ಹೊರಡಿಸುವುದರಿಂದ ಈ ಹೆಸರು ಬಂದಿದೆ. ಪೇರಳೆ, ನೇರಳೆ, ಗೇರು ಹೀಗೆ ಯಾವುದೇ ಮರದಲ್ಲಿ ಹಣ್ಣುಗಳಾದರೂ, ಆಮಂತ್ರಣವೇ ಇಲ್ಲದೆ ಇವು ಹಾಜರಾಗುತ್ತವೆ. ಹಣ್ಣು ತಿನ್ನಲು ಬರುವ ಬೇರೆ ಸಣ್ಣ ಹಕ್ಕಿಗಳನ್ನು ಹೆದರಿಸಿ, ದೂರ ಕಳಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಕಂಡಿದ್ದೇನೆ. ಚಿಕ್ಕ ಹಕ್ಕಿಗಳೆದುರು ಪರಾಕ್ರಮ ತೋರಿಸುವ ಇವು ದೊಡ್ಡ ಗಾತ್ರದ ಹಕ್ಕಿಗಳು ಬಂದರೆ ಗಪ್ ಚುಪ್. ಮನುಷ್ಯರು ಕಂಡರೆ ಸಾಕು, ಹೆದರಿ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ಸ್ವಲ್ಪ ಹೊತ್ತು ಅಲ್ಲೇ ಎಲ್ಲೋ ಅವಿತು ಕುಳಿತು ಯಾರೂ ಇಲ್ಲವೆಂದು ಖಾತ್ರಿಯಾದಮೇಲೆ ಮತ್ತೆ ಮರಳಿ ತಮ್ಮ ಭೋಜನ ಮುಂದುವರಿಸುತ್ತವೆ.

ಪಶ್ಚಿಮ ಘಟ್ಟಗಳಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಿವು. ಮುಖ್ಯ ಆಹಾರ ಹಣ್ಣುಗಳೇ ಆದರೂ ಕೆಲವೊಮ್ಮೆ ಹುಳು ಹುಪ್ಪಟೆಗಳನ್ನು ತಿನ್ನುವುದುಂಟು. ಇದರ ಮೈ ಬಣ್ಣ ಎಲೆ ಹಸಿರು. ಕಂದು ಬಣ್ಣದ ತಲೆ. ಕತ್ತಿನ ಮೇಲೆ ಬಿಳಿಯ ಗೆರೆಗಳಿದ್ದರೂ ಹಸಿರೇ ಪ್ರಧಾನವಾಗಿ ಕಾಣುವುದರಿಂದ ಗಿಡಗಳ ಮರೆಯಲ್ಲಿ ಇವುಗಳನ್ನು ಗುರುತಿಸುವುದು ಕಷ್ಟ. ಮರಕುಟಿಕಗಳಂತೆ ಗಟ್ಟಿ ಕಾಂಡವನ್ನು ಕೊರೆದು ರಂದ್ರ ಮಾಡಿ ಗೂಡು ನಿರ್ಮಿಸಿಕೊಳ್ಳುತ್ತವೆ. ಅದಕ್ಕೆ ಬೇಕಾಗುವ ದಪ್ಪ ಹಾಗೂ ಬಲಿಷ್ಟವಾದ ಕೊಕ್ಕು ಪ್ರಕೃತಿದತ್ತವಾಗಿ ಇವುಗಳಿಗೆ ಬಂದಿದೆ. ಡಿಸೆಂಬರನಿಂದ ಜೂನ್ ತಿಂಗಳುಗಳವರೆಗೂ ಇವುಗಳಿಗೆ ಸಂತಾನಾಭಿವೃದ್ಧಿಯ ಕಾಲ. ಸಂಗಾತಿಗಾಗಿ ಹುಡುಕುವ ಆ ಸಮಯದಲ್ಲಿ ಕುಟ್ರು.. ಕುಟ್ರು.. ಶಬ್ಧ ಜೋರಾಗಿಯೇ ಇರುತ್ತದೆ. ೨-೧೦ ಮೀ ಎತ್ತರದ ಮರದ ಪೊಟರೆಗಳಲ್ಲಿ ಮರಿಗಳಿಗಾಗಿ ಬೆಚ್ಚನೆಯ ಗೂಡು ನಿರ್ಮಿಸಿಕೊಳ್ಳುತ್ತವೆ. ಒಮ್ಮೆಗೆ ಮೂರು ಮೊಟ್ಟೆಗಳನ್ನಿಡುವುದನ್ನು ಕಾಣಬಹುದು. ಕಾವು ಕೊಟ್ಟು ಮೊಟ್ಟೆಯನ್ನು ಮರಿಯಾಗಿಸುವ, ಅಳಿಲು ಹಾವು ಮುಂತಾದ ಶತ್ರುಗಳಿಂದ ತಮ್ಮ ಮರಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಗಂಡು ಮತ್ತು ಹೆಣ್ಣು ಹಕ್ಕಿಗಳು ಜೊತೆಯಾಗಿಯೇ ನಿರ್ವಹಿಸುತ್ತವೆ. 

Photo Courtesy : ಗಣೇಶ್ ಹೆಗ್ಡೆ