Sunday 6 August 2017

ಫ್ರಿಡಾ ಕಾಹ್ಲೋ

ಆಕೆ ಕುಂಚಗಳೊಂದಿಗೆ ಬದುಕ ಕಳೆದವಳು. ಬಣ್ಣಗಳನ್ನೇ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡವಳು. ತನ್ನನ್ನೇ ತಾನು ಚಿತ್ರಿಸಿಕೊಂಡು ಜನ ಮಾನಸವನ್ನು ತಲುಪಿದವಳು. ಬದುಕು ಬಳುವಳಿಯಾಗಿ ನೀಡಿದ ಸಂಕಷ್ಟಗಳ ಸರಮಾಲೆಗೆ ಎದೆಗೆಡದೆ ಕೊರಳು ನೀಡಿದ ಗಟ್ಟಿಗಿತ್ತಿಯವಳು.ಅವಳ ಮನೋಸ್ಥೈರ್ಯ ,ಆತ್ಮವಿಶ್ವಾಸವನ್ನು ಹತ್ತಿರದಿಂದ ಕಂಡ ಜನ ಅವಳನ್ನು"ಲಾ ಹೀರೋಯಿನಾ ಡೆಲ್ ಡೊಲೊರ್ " ಎಂದು  ಕರೆದರು. ಹಾಗೆಂದರೆ ನೋವಿಗೇ ನಾಯಕಿಯಾದವಳು ಎಂಬರ್ಥ. ಹೀಗೆ ತನ್ನ ಬದುಕನ್ನೇ ಅನ್ಯರಿಗೆ ಮಾದರಿಯಾಗಿಸಿ ಜನಪ್ರಿಯಳಾದವಳು ಮತ್ಯಾರೂ ಅಲ್ಲ ಖ್ಯಾತ ಚಿತ್ರಕಾರ್ತಿ ಫ್ರಿಡಾ ಕಾಹ್ಲೋ. ಅವಳ ಜೀವನದ ಯಶೋಗಾಥೆ ಇಲ್ಲಿದೆ. 

ಜನನ ಮತ್ತು ಬಾಲ್ಯ 

ಫ್ರಿಡಾ ಕಾಹ್ಲೋ ಹುಟ್ಟಿದ್ದು ಜುಲೈ ೬ , ೧೯೦೭ ನೇ ಇಸವಿಯಲ್ಲಿ, ಮೆಕ್ಸಿಕೋ ದೇಶದ ಕೋಯೋಅಕನ್ ಎಂಬ ಸ್ಥಳದಲ್ಲಿ. ಅವಳ ತಂದೆ ವಿಲ್ ಹೆಲ್ಮ್ ಕಾಹ್ಲೋ, ಮೂಲತಃ ಜರ್ಮನಿಯವರು. ಮೆಕ್ಸಿಕೋ ದೇಶಕ್ಕೆ ವಲಸೆ ಬಂದು, ಫ್ರಿಡಾಳ ತಾಯಿಯಾದ ಮಟಿಲ್ಡೆ ಕಾಲ್ಡೆರೋನ್ ನನ್ನು ವರಿಸುತ್ತಾರೆ. ಮಟಿಲ್ಡೆ ಮಕ್ಕಳನ್ನು ಧಾರ್ಮಿಕ ಕಟ್ಟಳೆಗಳಿಗೆ ,ನೇಮಗಳಿಗೆ ಒಳಪಡುವಂತೆ ಬಹಳ ಶಿಸ್ತಿನಿಂದ ಬೆಳೆಸಿರುತ್ತಾರೆ. ಫ್ರಿಡಾ ಕಾಹ್ಲೋ ಆರು ವರ್ಷದವಳಿದ್ದಾಗ ಪೋಲಿಯೊ ಖಾಯಿಲೆಗೆ ತುತ್ತಾಗುತ್ತಾಳೆ. ಇದರಿಂದಾಗಿ ಒಂಬತ್ತು ತಿಂಗಳುಗಳ ಕಾಲ ಹಾಸಿಗೆ ಹಿಡಿಯಬೇಕಾಗುತ್ತದೆ. ನಿಧಾನವಾಗಿ ಅದರಿಂದ ಚೇತರಿಸಿಕೊಂಡರೂ ಬಲಗಾಲು, ಎಡಗಾಲಿಗಿಂತ  ಚಿಕ್ಕದಾಗಿ ದುರ್ಬಲವಾಗಿರುತ್ತದೆ.ಫ್ರಿಡಾಳಿಗೆ ಇದೊಂದು ಅಡಚಣೆಯೇ ಆದರೂ ತಂದೆಯ ಬೆಂಬಲದಿಂದ ಆಗಿನ ಕಾಲದ ಹುಡುಗಿಯರಿಗೆ ಅಪರೂಪವೆನ್ನಬಹುದಾಗಿದ್ದ ಕಾಲ್ಚೆಂಡಿನಾಟ, ಈಜು, ಕುಸ್ತಿ ಮುಂತಾದ ಆಟಗಳನ್ನು ಕಲಿತು ದೈಹಿಕ ನ್ಯೂನತೆಯನ್ನು ಮೆಟ್ಟಿ ನಿಲ್ಲುತ್ತಾಳೆ. ಈ ಎಲ್ಲ ಅನುಭವಗಳು ಅವಳ ಮನಸಿನ ಮೇಲೆ ಮಾಸದ ಮುದ್ರೆಯೊತ್ತಿ ಮುಂಬರುವ ಬದುಕಿನ ಯುದ್ಧಗಳಿಗೆ ಅಣಿಗೊಳಿಸಿರುತ್ತವೆ. 

ಫ್ರಿಡಾ ಮುಂದಿನ ವಿದ್ಯಾಭ್ಯಾಸಕ್ಕಾಗಿ ೧೯೨೨ರಲ್ಲಿ ಮೆಕ್ಸಿಕೋ ಸಿಟಿಯ ಪ್ರಖ್ಯಾತ ವಿದ್ಯಾಸಂಸ್ಥೆಯಾಗಿದ್ದ  ನ್ಯಾಷನಲ್ ಪ್ರಿಪರೇಟರಿ ಸ್ಕೂಲ್  ಸೇರಿಕೊಳ್ಳುತ್ತಾಳೆ.೨೦೦೦ ಜನ ವಿದ್ಯಾರ್ಥಿಗಳಿದ್ದ ಆ ಶಾಲೆಯಲ್ಲಿ ಹುಡುಗಿಯರ ಸಂಖ್ಯೆ ಕೇವಲ ಮೂವತ್ತೈದು! ಅವರಲ್ಲೊಬ್ಬಳಾಗುತ್ತಾಳೆ ಫ್ರಿಡಾ ಕಾಹ್ಲೋ.ವಿಜ್ಞಾನದಲ್ಲಿ ಅವಳಿಗೆ ಹೆಚ್ಚಿನ ಆಸಕ್ತಿ. ಸಸ್ಯಶಾಸ್ತ್ರ ಮತ್ತು ವೈದ್ಯಕೀಯವನ್ನು ತನ್ನ ಮುಂದಿನ ಅಭ್ಯಾಸಕ್ಕಾಗಿ ಆಯ್ದುಕೊಳ್ಳಬೇಕೆಂಬ ಉಮೇದಿರುತ್ತದೆ.ಈ ಸಮಯದಲ್ಲಿ ಅಲೆಜಾಂಡ್ರೋ ಗೋಮೆಜ್ ಎನ್ನುವ ಸಹ ವಿದ್ಯಾರ್ಥಿಯ ಪರಿಚಯವಾಗಿ, ನಂತರದಲ್ಲಿ ಪರಿಚಯ ಪ್ರೇಮಕ್ಕೆ ತಿರುಗುತ್ತದೆ.ಒಂದು ದಿನ ಮಧ್ಯಾಹ್ನ ಅವರಿಬ್ಬರೂ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿಗೆ ಬಂದ ಕಾರೊಂದು ಇವರಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಬಸ್ಸು ಅಪಘಾತಕ್ಕೀಡಾಗುತ್ತದೆ. ಈ ಸಮಯದಲ್ಲಿ ಫ್ರಿಡಾ ತೀವ್ರವಾಗಿ ಗಾಯಗೊಳ್ಳುತ್ತಾಳೆ. ಸ್ಟೀಲಿನ ಕೈಗಂಬಿಯೊಂದು ಅವಳ ಹಿಂಬಾಗದಿಂದ ಒಳಹೊಕ್ಕಿ ಬೆನ್ನುಮೂಳೆ, ಪೆಲ್ವಿಸ್, ಜನನಾಂಗವನ್ನು ಛೇದಿಸಿಕೊಂಡು ಮುಂದಿನಿಂದ ಹೊರಬಂದಿರುತ್ತದೆ. ದೇಹದ ಹಲವೆಡೆ ಮಾರಣಾಂತಿಕ ಗಾಯಗಳಾಗಿರುತ್ತವೆ. ಆಗವಳಿಗೆ ಕೇವಲ ಹದಿನೆಂಟು ವರ್ಷ. ತಿಂಗಳುಗಳ ಕಾಲ, ಪ್ಲಾಸ್ಟರಿನ ಪಟ್ಟಿ ಕಟ್ಟಿಕೊಂಡು ಅಲ್ಲಾಡದೆ ಮಲಗಿರಬೇಕಾದ ವಿಷಮ ಪರಿಸ್ಥಿತಿ ಎದುರಾಗುತ್ತದೆ. ಈ ಸಮಯದಲ್ಲಿ ಫ್ರಿಡಾ ತನ್ನ ನೋವು ಮರೆಯಲು ಚಿತ್ರ ಬಿಡಿಸಲು ಪ್ರಾರಂಭಿಸುತ್ತಾಳೆ. ತನ್ನ ಪ್ರಿಯತಮನಿಗೆ, ತನ್ನದೇ ಒಂದು ಸುಂದರ ಭಾವಚಿತ್ರವನ್ನು ಮಲಗಿದ್ದಲ್ಲೇ ರಚಿಸಿ ಕಾಣಿಕೆಯಾಗಿ ನೀಡುತ್ತಾಳೆ. ಅಷ್ಟರಲ್ಲಾಗಲೇ ಇವಳ ದೈಹಿಕ ಸ್ಥಿತಿ, ಅಲೆಜಾಂಡ್ರೋಗೆ ಬೇಸರ ಮೂಡಿಸಿರುತ್ತದೆ.ಅವರಿಬ್ಬರ ಸಂಬಂದ ಅಲ್ಲಿಗೆ ಕೊನೆಗೊಳ್ಳುತ್ತದೆ.ಆದರೆ ಬಣ್ಣಗಳೊಂದಿಗೆ ಫ್ರಿಡಾಳ ಗೆಳೆತನ ಆಗಷ್ಟೇ ಪ್ರಾರಂಭವಾಗುತ್ತದೆ.ಬೇರೆ ಎಲ್ಲ ವಿಷಯಗಳಿಗಿಂತ ಹೆಚ್ಚಾಗಿ ಫ್ರಿಡಾ ತನ್ನನ್ನೇ ತಾನು ಚಿತ್ರಿಸಿಕೊಳ್ಳುತ್ತಾಳೆ. ಹಾಗೇಕೆಂದು ಕೇಳಿದವರಿಗೆ ಅವಳೊಮ್ಮೆ ಹೀಗೆನ್ನುತ್ತಾಳೆ. "ನಾನು ನನ್ನನ್ನೇ ಚಿತ್ರಿಸಿಕೊಳ್ಳುತ್ತೇನೆ. ಏಕೆಂದರೆ ನಾನು ಯಾವಾಗಲೂ ಒಬ್ಬಂಟಿಯಾಗಿರುತ್ತೇನೆ ಮತ್ತು ನನಗೆ ಚೆನ್ನಾಗಿ ತಿಳಿದಿರುವ ವಿಷಯವೆಂದರೆ ಅದು ನಾನು ಮಾತ್ರ". 

ಚಿತ್ರಗಳೊಂದಿಗೆ  ಮಿತ್ರತ್ವ 

ಇಷ್ಟೊತ್ತಿಗಾಗಲೇ ವೈದ್ಯಕೀಯ ಅಧ್ಯಯನ ಮಾಡಬೇಕೆಂಬ ಆಸೆ ಫ್ರಿಡಾಳ ಮನಸಿನಿಂದ ದೂರವಾಗಿರುತ್ತದೆ. ಪ್ರಸಿದ್ಧ ಮ್ಯುರಲ್ ಚಿತ್ರಕಾರನಾಗಿದ್ದ ಡಿಯೆಗೊ ರಿವೆರಾ ಎನ್ನುವಾತನ ಬಳಿ ತನ್ನ ಚಿತ್ರಗಳನ್ನು ವಿಶ್ಲೇಷಿಸಲು ಕೋರುತ್ತಾಳೆ. ಡಿಯೆಗೊಗೆ ಇವಳ ಚಿತ್ರಗಳು ಬಹಳ ಹಿಡಿಸುತ್ತವೆ. ಹಾಗಾಗಿ ಅವನು ಚಿತ್ರಕಲೆಯನ್ನು ಮುಂದುವರೆಸುವಂತೆ ಫ್ರಿಡಾಗೆ ಪ್ರೋತ್ಸಾಹ ನೀಡುತ್ತಾನೆ. ಸಮಾನ ಆಸಕ್ತಿ ಇಬ್ಬರನ್ನು ಹತ್ತಿರಕ್ಕೆಳೆಯುತ್ತದೆ. ಮುಂದಿನ ಒಂದು ವರ್ಷದಲ್ಲಿ ಅವರಿಬ್ಬರೂ ಮದುವೆಯಾಗುತ್ತಾರೆ. ಫ್ರಿಡಾ ಒಂದು ಸಂದರ್ಭದಲ್ಲಿ ಡಿಯೆಗೊನನ್ನು ಭೇಟಿಯಾಗಿದ್ದನ್ನು ನೆನೆಸಿಕೊಳ್ಳುತ್ತಾ ಹೀಗೆನ್ನುತ್ತಾಳೆ "ನನ್ನ ಜೀವನದಲ್ಲಿ ಎರಡು ಅಪಘಾತಗಳು ಸಂಭವಿಸಿದವು. ಒಂದು ಬಸ್ಸಿನಲ್ಲಾದ ಅಪಘಾತ. ಇನ್ನೊಂದು ಡಿಯೆಗೊ ರಿವೆರಾ". ಅವರಿಬ್ಬರ ನಡುವೆ ಸುಮಾರು ಇಪ್ಪತ್ತು ವರ್ಷಗಳ ವಯಸ್ಸಿನ ಅಂತರವಿರುತ್ತದೆ. ಹಾಗಾಗಿ ಈ ಮದುವೆಯ ಬಗ್ಗೆ ಹಿರಿಯರ ಅಸಮ್ಮತಿ ಇರುತ್ತದೆ. ಈ ಜೋಡಿಯ ಕುರಿತು ಫ್ರಿಡಾಳ ತಾಯಿ "ಆನೆ ಮತ್ತು ಪಾರಿವಾಳದ ಜೋಡಿ" ಎಂದು ನಿಷ್ಠುರದ ಮಾತನಾಡುತ್ತಾಳೆ. 

ಮುಂದೆ ಫ್ರಿಡಾ ತನ್ನ ಮನದಾಳದ ಭಾವನೆಗಳನ್ನೆಲ್ಲ ಚಿತ್ರಗಳ ಮೂಲಕ ವ್ಯಕ್ತಪಡಿಸುತ್ತಾಳೆ. ಆಕೆಗೆ ತನ್ನದೇ ಆದ ಮಗುವೊಂದು ಬೇಕೆಂಬ ಆಸೆ ಇದ್ದರೂ, ಎಳೆಯ ಪ್ರಾಯದಲ್ಲಿ ಆದ ಅಪಘಾತದಿಂದ ಅದು ಸಾಧ್ಯವಾಗುವುದೆ ಗರ್ಭಪಾತವಾಗುತ್ತದೆ. ಮತ್ತೆ ಮತ್ತೆ ಇದು ಮರುಕಳಿಸಿದಾಗ ಮನನೊಂದ ಫ್ರಿಡಾ ತನ್ನ ಹತಾಶೆಯನ್ನು "ಹೆನ್ರಿಫೋರ್ಡ್ ಹಾಸ್ಪಿಟಲ್" ಎಂಬ ಕಲಾಕೃತಿಯಲ್ಲಿ ತೋರಿಸಿಕೊಳ್ಳುತ್ತಾಳೆ. ಆಸ್ಪತ್ರೆಯ ಹಾಸಿಗೆಯಲ್ಲಿ ನಗ್ನವಾಗಿ ಮಲಗಿರುವ ಫ್ರಿಡಾಳ ಸುತ್ತ ಬ್ರೂಣ, ಹೂವು, ಪೆಲ್ವಿಸ್ , ಬಸವನ ಹುಳು ಮುಂತಾದವು ತೇಲುತ್ತಿರುತ್ತವೆ. ಇವೆಲ್ಲಾ ರಕ್ತ ನಾಳಗಳ ಮೂಲಕ ಅವಳ ದೇಹಕ್ಕೆ ತಗುಲಿಕೊಂಡಿರುತ್ತವೆ. ಬ್ರೂಣ ಹುಟ್ಟಲಿದ್ದ ಅವಳ ಮಗುವಿನ ಚಿತ್ರವಾದರೆ, ಪೆಲ್ವಿಸ್ ಅವಳಿಗಿದ್ದ ದೈಹಿಕ ಅಸಾಮರ್ಥ್ಯದ ಚಿತ್ರಣ ನೀಡುತ್ತದೆ. ಬಗ್ಗಿದವನಿಗೆ ಒಂದು ಗುದ್ದು ಎಂಬಂತೆ ಅವಳ ಕಷ್ಟಗಳು ಅಲ್ಲಿಗೆ ಮುಗಿಯುವುದಿಲ್ಲ. ಮುಂದೆ ತನ್ನ ಗಂಡ ಡಿಯೆಗೊಗೆ ವಿವಾಹೇತರ ಸಂಬಂಧವಿರುವುದು ತಿಳಿಯುತ್ತದೆ. ಇವಲ್ಲದೆ ತನ್ನ ಸ್ವಂತ ಸಹೋದರಿ ಕ್ರಿಸ್ಟಿನಾ ಜೊತೆ ಕೂಡ ಸಂಬಂಧವಿದೆಯೆಂದು ತಿಳಿದಾಗ ಫ್ರಿಡಾ ವ್ಯಗ್ರಳಾಗಿ ತನ್ನ ಉದ್ದದ ಕೂದಲನ್ನು ಚಿಕ್ಕದಾಗಿ ಕತ್ತರಿಸಿಕೊಂಡು ತನ್ನ ಅಸಮಾಧಾನ ಸೂಚಿಸುತ್ತಾಳೆ.ಅವರ ವಿವಾಹ ಸಂಬಂಧಗಳು ಮತ್ತೂ ಹದಗೆಟ್ಟಾಗ, ನಿರ್ವಾಹವಿಲ್ಲದೆ ಇಬ್ಬರೂ ವಿಚ್ಛೇದನಕ್ಕೆ ಒಳಪಡುತ್ತಾರೆ.

ನಂತರದ ದಿನಗಳಲ್ಲಿ ಕೆಲವು ಮೇರು ಕೃತಿಗಳೆನ್ನಬಹುದಾದಂತಹ ಚಿತ್ರಗಳನ್ನು ಫ್ರಿಡಾ ರಚಿಸುತ್ತಾಳೆ. ಅದರಲ್ಲೊಂದು "ದಿ ಟು ಫ್ರಿಡಾಸ್ " ಎಂಬ ಚಿತ್ರ ಎಲ್ಲರ ಆಸಕ್ತಿ ಕೆರಳಿಸುತ್ತದೆ. ಈ ಕಲಾಕೃತಿಯಲ್ಲಿ ಒಂದು ಬಿಳಿಯ ತೆಹುನಾ (ಮೆಕ್ಸಿಕೋ ದೇಶದ ಸಾಂಪ್ರದಾಯಿಕ ಉಡುಪು) ಧರಿಸಿದ ಮತ್ತು ನೀಲಿ ಹಾಗು ಕಂದು ಬಣ್ಣವಿರುವ ತೆಹುನಾ ಧರಿಸಿರುವ ಫ್ರಿಡಾಳದ್ದೇ ಎರಡು ಬೇರೆ ಬೇರೆ ಚಿತ್ರವಿದೆ. ಎರಡರಲ್ಲಿಯೂ ಹೃದಯಗಳನ್ನು ಹೊರಗೆಳೆದು ತೋರಿಸಲಾಗಿದೆ. ಬಿಳಿಯ ಉಡುಗೆಯಲ್ಲಿರುವ ಫ್ರಿಡಾಳ ರಕ್ತನಾಳವೊಂದು ಕತ್ತರಿಸಲ್ಪಟ್ಟಿದ್ದು, ಬಟ್ಟೆಯ ಮೇಲೆ ರಕ್ತದ ಕಲೆಗಳಿವೆ. ಇದು ಡಿಯೆಗೊ ನಿಂದ ದೂರವಾದ ಮೇಲೆ ಅವಳ ಮನಸಿಗೆ ಆದ ಆಘಾತದ ಚಿತ್ರಣ ನೀಡುತ್ತದೆ. ೧೯೩೮ರಲ್ಲಿ ಆಂಡ್ರೆ ಬ್ರೆಟನ್ ಎನ್ನುವ ಪ್ರಸಿದ್ಧ ಚಿತ್ರಕಾರ ಇವಳ ಕೃತಿಗಳನ್ನು ಬಹಳವಾಗಿ ಮೆಚ್ಚಿಕೊಂಡು ನ್ಯೂಯಾರ್ಕ್ ನಲ್ಲಿ ಅವುಗಳ ಪ್ರದರ್ಶನವನ್ನೇ ಏರ್ಪಡಿಸುತ್ತಾನೆ. ಇದು ಫ್ರಿಡಾ ಜೀವನದ ಮೊದಲ ಸಾರ್ವಜನಿಕ ಪ್ರದರ್ಶನ. ನಂತರದಲ್ಲಿ ಪ್ಯಾರಿಸ್ ನಲ್ಲಿ ಸಹ ಅವಳ ಚಿತ್ರಪ್ರದರ್ಶನವೇರ್ಪಡುತ್ತದೆ. ಫ್ರಿಡಾ ಅಲ್ಲಿಗೆ ತೆರಳಿ ಪಿಕಾಸೋ ಮುಂತಾದ ಹಲವು ಪ್ರಸಿದ್ಧ ಚಿತ್ರಕಾರರ ಪರಿಚಯ ಬೆಳೆಸಿಕೊಳ್ಳುತ್ತಾಳೆ. ಪ್ಯಾರಿಸ್ ನಿಂದ ಮೆಕ್ಸಿಕೋಗೆ ವಾಪಸಾದ ಮೇಲೆ ೧೯೪೦ರಲ್ಲಿ ಫ್ರಿಡಾ ಮತ್ತು  ಡಿಯೆಗೊ ರಿವೆರಾ ಮರುಮದುವೆಯಾಗುತ್ತಾರೆ. ಆದರೆ ಇಬ್ಬರೂ ಬೇರೆ ಬೇರೆ ಯಾಗಿ ಬದುಕುತ್ತಾರೆ. ಅಲ್ಲದೆ ವಿವಾಹೇತರ ಸಂಬಂಧವನ್ನೂ ಹೊಂದಿರುತ್ತಾರೆ.   

೧೯೪೪ ರಲ್ಲಿ ಅವಳ ಚಿತ್ರ "ಮೋಸೆಸ್" ಎಂಬ ಕೃತಿಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ. ಅದೇ ವರ್ಷ ಆಕೆ ಬೆನ್ನುಹುರಿಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾಳೆ. ಮುಂದಿನ ಹಂತಗಳಲ್ಲಿ ಫ್ರಿಡಾ ಬಹಳಷ್ಟು ದೈಹಿಕ ತೊಂದರೆಗಳನ್ನು ಅನುಭವಿಸುತ್ತಾಳೆ. ದೇಹಸ್ಥಿತಿ ಹದಗೆಡುತ್ತಾ ಹೋಗುತ್ತದೆ. ಕಾಹ್ಲೋ ರಚಿಸಿದ "ದಿ ಬ್ರೋಕನ್ ಕಾಲಂ" ಎಂಬ ಕಲಾಕೃತಿಯಲ್ಲಿ, ಎದೆಯನ್ನು ಬಗೆದು ಬೆನ್ನುಮೂಳೆಯನ್ನು ತೋರಿಸಲಾಗಿದೆ.ಪದೇ ಪದೇ ಕಾಡುತ್ತಿದ್ದ ಈ ನೋವು, ಯಾತನೆಗಳು ಅವಳನ್ನೆಷ್ಟು  ನುಜ್ಜುಗುಜ್ಜಾಗಿಸಿದ್ದವು ಎಂಬುದರ ಅರಿವನ್ನು ಈ ಕೃತಿ  ಉಂಟುಮಾಡುತ್ತದೆ. ಆದರೆ ಅವಳನ್ನು ವಿಮುಖಳಾನ್ನಾಗಿ ಮಾಡಲು ಬಂದ ಅಡೆತಡೆಗಳನ್ನೆಲ್ಲ ಎದುರಿಸಿ ಛಲಬಿಡದೆ ತನ್ನ ಸಾಧನೆಯನ್ನು ಮುಂದುವರಿಸುತ್ತಾಳೆ ಫ್ರಿಡಾ. "ವಿಥೌಟ್ ಹೋಪ್", "ದಿ ವೂಂಡೆಡ್ ಡೀರ್ " ಮುಂತಾದ ಸುಂದರ ಕೃತಿಗಳು ಈ ಸಮಯದಲ್ಲಿ ಅವಳಿಂದ ರಚಿಸಲ್ಪಡುತ್ತವೆ. ೧೯೫೦ ರಲ್ಲಿ ಅವಳ ಬಲಗಾಲು ಗ್ಯಾಂಗ್ರೀನ್ ಕಾಯಿಲೆಗೆ ತುತ್ತಾಗುತ್ತದೆ. ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ ಫ್ರಿಡಾ ಕೆಲವು ಆಂದೋಲನಗಳಲ್ಲಿ ಭಾಗವಹಿಸುತ್ತಾಳೆ. ಮೆಕ್ಸಿಕೋದ ಶಾಂತಿ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾಳೆ. 


ಕೊನೆಯ ಎರಡು ವರ್ಷಗಳು.. 

೧೯೫೩ ರಲ್ಲಿ ಗ್ಯಾಂಗ್ರೀನ್ ಖಾಯಿಲೆ ಉಲ್ಬಣಗೊಂಡು ಬಲಗಾಲನ್ನು ಫ್ರಿಡಾ ಕಳೆದುಕೊಳ್ಳಬೇಕಾಗುತ್ತದೆ.ಅದೇ ವರ್ಷ ಪ್ರಥಮ ಬಾರಿಗೆ ಅವಳ ಚಿತ್ರ ಪ್ರದರ್ಶನ  ಮೆಕ್ಸಿಕೋದಲ್ಲಿ ನಡೆಯುತ್ತದೆ. ಬ್ರೊನ್ಕಿಯಲ್ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಾ ಹಾಸಿಗೆ ಹಿಡಿದಿದ್ದ ಫ್ರಿಡಾ ತಾನು ಪ್ರದರ್ಶನಕ್ಕೆ ಹೋಗಲೇ ಬೇಕೆಂದು ಹಠ ಹಿಡಿಯುತ್ತಾಳೆ. ವೈದ್ಯರು ಈ ಸ್ಥಿತಿಯಲ್ಲಿ ಅಲ್ಲಿಗೆ ಹೋಗುವುದು ಒಳ್ಳೆಯದಲ್ಲವೆಂದರೂ ಆಂಬುಲೆನ್ಸ್ ನಲ್ಲಿ ತಾನು ಮಲಗಿದ್ದ ಮಂಚದ ಸಮೇತ ಆ ಸ್ಥಳ ತಲುಪಿ ಬಂದವರೆಲ್ಲರ ಜೊತೆ ಬೆರೆಯುತ್ತಾಳೆ. ೧೯೫೪ ಕಾಹ್ಲೋ ಬದುಕಿನ ಕೊನೆಯ ವರ್ಷ.ನೋವಿನ ಬದುಕಿನಿಂದ ಬಿಡಿಸಿಕೊಂಡು, ಜುಲೈ ೧೩ ರಂದು ತಾನು ಹುಟ್ಟಿ ಬೆಳೆದ ಮನೆಯಾದ "ದಿ ಬ್ಲೂ ಹೌಸ್ " ನಲ್ಲಿ ಚಿರನಿದ್ರೆಗೆ ಜಾರುತ್ತಾಳೆ. ನೂರಾರು ಜನ ಅಭಿಮಾನಿಗಳು ಅವಳ ಮನೆಗೆ ತೆರಳಿ ಅಂತಿಮ ದರ್ಶನ ಪಡೆಯುತ್ತಾರೆ. ಸಾವಿಗೆ ಕಾರಣ ಪಲ್ಮನರಿ ಎಂಬೋಲಿಸಂ ಎಂದು ಅಧಿಕೃತವಾಗಿ ದಾಖಲೆಯಾಗಿದೆಯಾದರೂ ಅವಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ  ಗುಮಾನಿಯೂ ಇಲ್ಲದಿಲ್ಲ. 

ಸಾವಿನ ನಂತರದ ದಿನಗಳಲ್ಲಿ ಫ್ರಿಡಾ ಳ ಜನಪ್ರಿಯತೆ ಹೆಚ್ಚುತ್ತಾ ಹೋಗಿದೆ. ಅವಳು ಹುಟ್ಟಿ ಬೆಳೆದ ಬ್ಲೂ ಹೌಸ್ ಇದೀಗ ಮ್ಯೂಸಿಯಂ ಆಗಿ ಪರಿವರ್ತನೆಯಾಗಿದೆ. ಮೊದಲೆಲ್ಲ ಖ್ಯಾತ ಮ್ಯುರಲ್ ಚಿತ್ರಕಾರ ಡಿಯೆಗೊ ಪತ್ನಿ ಫ್ರಿಡಾ ಎಂದು ಗುರುತಿಸಿಕೊಳ್ಳುತ್ತಿದ್ದ ಮಟ್ಟದಿಂದ ಬೆಳೆದು, ಫ್ರಿಡಾಳ ಪತಿ ಡಿಯೆಗೊ ಎಂದು ಹೇಳಿಸಿಕೊಳ್ಳುವ ಮಟ್ಟಕ್ಕೆ ಅವಳ ಖ್ಯಾತಿ ಬೆಳೆದಿದೆ. ೧೯೮೩ ರಲ್ಲಿ ಹೇಡನ್ ಹೆರೆರಾ ಬರೆದ "ಎ ಬಯಾಗ್ರಫಿ ಆ ಫ್ರಿಡಾ ಕಾಹ್ಲೋ " ಎಂಬ ಪುಸ್ತಕ, ಓದುಗರಲ್ಲಿ ಇವಳೆಡೆಗೆ ಆಸಕ್ತಿ ಮೂಡಿಸಿತು. ೨೦೦೨ ರಲ್ಲಿ ಸಲ್ಮಾ ಹಯೆಕ್ ನಾಯಕಿಯಾಗಿ ನಟಿಸಿದ "ಫ್ರಿಡಾ" ಚಲನಚಿತ್ರ ಹಲವು ಪ್ರಶಸ್ತಿಗಳಿಗೆ ಭಾಜನವಾಯಿತು. 

ಸುಮಾರು ಮೂವತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೇಲಿಂದ ಮೇಲೆ ಅನಾರೋಗ್ಯವನ್ನೆದುರಿಸುತ್ತಾ, ಸಂಕಷ್ಟಗಳನ್ನೆಲ್ಲ ಶೌರ್ಯದಿಂದ ಎದುರಿಸಿ ಕಣ್ಮರೆಯಾದ ಈ ಧೀರೆ ಫ್ರಿಡಾ ನಿಜಕ್ಕೂ "ಲಾ ಹೀರೋಯಿನಾ ಡೆಲ್ ಡೊಲೊರ್ " , ನೋವಿಗೇ ನಾಯಕಿಯಾದವಳು.