Friday 20 January 2017

ಚಿಟ್ಟು ಕುಟುರ..

ಚಿಟ್ಟು ಕುಟುರ..
ನಮ್ಮ ಮನೆಯ ಹಿತ್ತಲಲ್ಲಿ ಇರುವ ಸಪೋಟಾ ಗಿಡಗಳ ತುಂಬ ಹೂವರಳಿ ಕಾಯಾಗುವುದನ್ನು ನೋಡಿದ್ದೇನೆ. ಆದರೆ ನಮ್ಮ ಕೈಯ್ಯಿಗೆ, ಬಾಯಿಗೆ ಸಿಗುವುದು ಮಾತ್ರ ಎಲ್ಲೋ ಒಂದೆರಡು ಹಣ್ಣುಗಳು. ಅದೇಕೆ ಗೊತ್ತೇ? ಚಿಗುರು ಕಾಯಿಗಳಾಗುವುದೇ ತಡ, ಹಲವಾರು ಹಕ್ಕಿಗಳು ತಮ್ಮ ಬಳಗದ ಸಮೇತ ಲಗ್ಗೆ ಇಟ್ಟು ನಾ ಮುಂದು, ತಾ ಮುಂದು ಎಂದು ಇನ್ನೂ ಬಲಿಯದ ಮಿಡಿಗಾಯಿಗಳನ್ನೇ ಕುಕ್ಕುತ್ತಾ ಕುಳಿತಿರುತ್ತವೆ. ಕೊನೆಯಲ್ಲಿ ಈ ಹಕ್ಕಿಗಳಿಂದ ತಪ್ಪಿಸಿಕೊಂಡ ಬೆರಳೆಣಿಕೆಯಷ್ಟು ಕಾಯಿಗಳು ಹಣ್ಣಾಗಿ ಅಪರೂಪವಾಗಿ ನಮಗೆ ತಿನ್ನಲು ಸಿಗುತ್ತವೆ. 

ಈ ಫಲಭಕ್ಷಕ ಹಕ್ಕಿಗಳಲ್ಲಿ ಮುಖ್ಯವಾಗಿ ನಾನು ಗಮನಿಸಿದ್ದು ವೈಟ್ ಚೀಕ್ಡ್ ಬಾರ್ಬೆಟ್. ಇದರ ವೈಜ್ಞಾನಿಕ ಹೆಸರು ಮೆಗಾಲೈಮ ವಿರ್ಡಿಸ್. ಕನ್ನಡದಲ್ಲಿ ಇದನ್ನು ಚಿಟ್ಟು ಕುಟುರ ಅಥವಾ ಸಣ್ಣ ಕುಟುರ ಎಂದು ಕರೆಯುತ್ತಾರೆ. ಇವು ಆಗಾಗ ಕುಟ್ರು.. ಕುಟ್ರು.. ಎಂದು ಶಬ್ದ ಹೊರಡಿಸುವುದರಿಂದ ಈ ಹೆಸರು ಬಂದಿದೆ. ಪೇರಳೆ, ನೇರಳೆ, ಗೇರು ಹೀಗೆ ಯಾವುದೇ ಮರದಲ್ಲಿ ಹಣ್ಣುಗಳಾದರೂ, ಆಮಂತ್ರಣವೇ ಇಲ್ಲದೆ ಇವು ಹಾಜರಾಗುತ್ತವೆ. ಹಣ್ಣು ತಿನ್ನಲು ಬರುವ ಬೇರೆ ಸಣ್ಣ ಹಕ್ಕಿಗಳನ್ನು ಹೆದರಿಸಿ, ದೂರ ಕಳಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಕಂಡಿದ್ದೇನೆ. ಚಿಕ್ಕ ಹಕ್ಕಿಗಳೆದುರು ಪರಾಕ್ರಮ ತೋರಿಸುವ ಇವು ದೊಡ್ಡ ಗಾತ್ರದ ಹಕ್ಕಿಗಳು ಬಂದರೆ ಗಪ್ ಚುಪ್. ಮನುಷ್ಯರು ಕಂಡರೆ ಸಾಕು, ಹೆದರಿ ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ಸ್ವಲ್ಪ ಹೊತ್ತು ಅಲ್ಲೇ ಎಲ್ಲೋ ಅವಿತು ಕುಳಿತು ಯಾರೂ ಇಲ್ಲವೆಂದು ಖಾತ್ರಿಯಾದಮೇಲೆ ಮತ್ತೆ ಮರಳಿ ತಮ್ಮ ಭೋಜನ ಮುಂದುವರಿಸುತ್ತವೆ.

ಪಶ್ಚಿಮ ಘಟ್ಟಗಳಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಹಕ್ಕಿಗಳಿವು. ಮುಖ್ಯ ಆಹಾರ ಹಣ್ಣುಗಳೇ ಆದರೂ ಕೆಲವೊಮ್ಮೆ ಹುಳು ಹುಪ್ಪಟೆಗಳನ್ನು ತಿನ್ನುವುದುಂಟು. ಇದರ ಮೈ ಬಣ್ಣ ಎಲೆ ಹಸಿರು. ಕಂದು ಬಣ್ಣದ ತಲೆ. ಕತ್ತಿನ ಮೇಲೆ ಬಿಳಿಯ ಗೆರೆಗಳಿದ್ದರೂ ಹಸಿರೇ ಪ್ರಧಾನವಾಗಿ ಕಾಣುವುದರಿಂದ ಗಿಡಗಳ ಮರೆಯಲ್ಲಿ ಇವುಗಳನ್ನು ಗುರುತಿಸುವುದು ಕಷ್ಟ. ಮರಕುಟಿಕಗಳಂತೆ ಗಟ್ಟಿ ಕಾಂಡವನ್ನು ಕೊರೆದು ರಂದ್ರ ಮಾಡಿ ಗೂಡು ನಿರ್ಮಿಸಿಕೊಳ್ಳುತ್ತವೆ. ಅದಕ್ಕೆ ಬೇಕಾಗುವ ದಪ್ಪ ಹಾಗೂ ಬಲಿಷ್ಟವಾದ ಕೊಕ್ಕು ಪ್ರಕೃತಿದತ್ತವಾಗಿ ಇವುಗಳಿಗೆ ಬಂದಿದೆ. ಡಿಸೆಂಬರನಿಂದ ಜೂನ್ ತಿಂಗಳುಗಳವರೆಗೂ ಇವುಗಳಿಗೆ ಸಂತಾನಾಭಿವೃದ್ಧಿಯ ಕಾಲ. ಸಂಗಾತಿಗಾಗಿ ಹುಡುಕುವ ಆ ಸಮಯದಲ್ಲಿ ಕುಟ್ರು.. ಕುಟ್ರು.. ಶಬ್ಧ ಜೋರಾಗಿಯೇ ಇರುತ್ತದೆ. ೨-೧೦ ಮೀ ಎತ್ತರದ ಮರದ ಪೊಟರೆಗಳಲ್ಲಿ ಮರಿಗಳಿಗಾಗಿ ಬೆಚ್ಚನೆಯ ಗೂಡು ನಿರ್ಮಿಸಿಕೊಳ್ಳುತ್ತವೆ. ಒಮ್ಮೆಗೆ ಮೂರು ಮೊಟ್ಟೆಗಳನ್ನಿಡುವುದನ್ನು ಕಾಣಬಹುದು. ಕಾವು ಕೊಟ್ಟು ಮೊಟ್ಟೆಯನ್ನು ಮರಿಯಾಗಿಸುವ, ಅಳಿಲು ಹಾವು ಮುಂತಾದ ಶತ್ರುಗಳಿಂದ ತಮ್ಮ ಮರಿಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಗಂಡು ಮತ್ತು ಹೆಣ್ಣು ಹಕ್ಕಿಗಳು ಜೊತೆಯಾಗಿಯೇ ನಿರ್ವಹಿಸುತ್ತವೆ. 

Photo Courtesy : ಗಣೇಶ್ ಹೆಗ್ಡೆ