Saturday 22 February 2020

ಗಲಿವರ್ಸ್ ಟ್ರಾವೆಲ್ಸ್ - ಜೊನಾಥನ್ ಸ್ವಿಫ್ಟ್



ಅಮ್ಮ ಅಮ್ಮ ಗಲಿವರ ಮತ್ತು ಲಿಲ್ಲಿಪುಟ್ ಗಳ ಕಥೆ ಹೇಳಮ್ಮ ಅಂತ ಆಗಾಗ ಅಮ್ಮನನ್ನು ಕೇಳುತ್ತಿದ್ದೆ ನಾನು. ಗಲಿವರನೆಂಬ ನಾವಿಕ ತನ್ನ ಸಮುದ್ರಯಾನದ ಸಮಯದಲ್ಲಿ ದಿಕ್ಕುತಪ್ಪಿ ಲಿಲ್ಲಿಪುಟ್ ಗಳೆಂಬ ಬೆರಳೆತ್ತರದ ಮನುಷ್ಯರ ನಾಡನ್ನು ತಲುಪುವ ಕಥೆ ಎಂದಿಗೂ ಸೋಜಿಗವನ್ನುಂಟುಮಾಡುತ್ತಿತ್ತು. ಗಲಿವರ, ಲಿಲ್ಲಿಪುಟ್ ಗಳು ನಮ್ಮವರೇ ಏನೋ ಎನ್ನುವಷ್ಟು ಆಳವಾಗಿ ನಮ್ಮ ಭಾಷೆಯಲ್ಲಿ ಆ ಪದಗಳು ಬೆರೆತುಹೋಗಿವೆ.  

ಗಲಿವರನ ಸಾಹಸಗಳನ್ನು ಮಕ್ಕಳ ಕಥೆಗಳೆಂದೇ ತಿಳಿದಿದ್ದ ನನಗೆ ಈಗ್ಗೆ ಹತ್ತು ವರ್ಷಗಳ ಹಿಂದೆ ಕನ್ನಡ ಅನುವಾದಿತ ಪುಸ್ತಕವೊಂದು ಸಿಕ್ಕಿತ್ತು ( ಹೆಸರು ಮರೆತಿದ್ದೇನೆ. ಗೆಳೆಯರೊಬ್ಬರು ಓದಲು ಕೊಂಡುಹೋಗಿದ್ದ ಪುಸ್ತಕ ವಾಪಸು ಬರಲೇ ಇಲ್ಲ) . ಅದನ್ನು ಓದಿದ ಮೇಲೆಯೇ ತಿಳಿದದ್ದು, ಅದು ಮಕ್ಕಳಿಗೆಂದು ಬರೆದ ಕಥೆಗಳಲ್ಲವೇ ಅಲ್ಲ. ಆಗಿನ ಬ್ರಿಟಿಷ್ ದೇಶದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ನಿಲುವುಗಳನ್ನು ಪ್ರಶ್ನಿಸುವ, ಅಲ್ಲಿನ ಕುಂದುಕೊರತೆಗಳನ್ನು ಎತ್ತಿ ಹಿಡಿಯುವ ವಿಡಂಬನಾತ್ಮಕ ಪುಸ್ತಕ ಎಂದು. ಕನ್ನಡದಲ್ಲಿ ಓದಿದ ಮೇಲೆ ಇಂಗ್ಲಿಷ್ನಲ್ಲೂ ಓದಿ ನೋಡೋಣವೆಂದು ಇತ್ತೀಚೆಗೆ ಕಿಂಡಲ್ ನಲ್ಲಿ ಉಚಿತವಾಗಿ ದೊರೆತ ಗಲಿವರ್ಸ್ ಟ್ರಾವೆಲ್ಸ್  ಪುಸ್ತಕ ಓದಿದೆ. ಗಲಿವರ್ಸ್ ಟ್ರಾವೆಲ್ಸ್ ಹೊತ್ತಿಗೆ ಓದುಗರ ಕೈಸೇರಿ ಶತಮಾನಗಳೇ ಕಳೆದರೂ ಅದರ ಸೊಗಸು ಪ್ರಸ್ತುತಕ್ಕೂ ಮಾಸಿಲ್ಲ. 

ಗಲಿವರನ ಕಡಲಯಾನದ ಸಾಹಸಗಳನ್ನು ನಾವು  ಓದಿಯೇ ಸವಿಯಬೇಕು. ಮೊದಲ ಪರ್ಯಟನೆಯ ಸಮಯದಲ್ಲಿ ಅವನಿದ್ದ ಹಡಗು ಮುಳುಗಿ ಲಿಲ್ಲಿಪುಟ್ ಗಳ ಕೈಸೆರೆಯಾಗುತ್ತಾನೆ. ಅವರ ಪುಟ್ಟ ಕಣ್ಣುಗಳಿಗೆ ಗಲಿವರ ಬೆಟ್ಟಪ್ಪ. ಅಲ್ಲಿನ ರಾಜನ, ಪ್ರಜೆಗಳೊಂದಿಗಿನ ಒಡನಾಟ, ಬೆಂಕಿಪೊಟ್ಟಣಗನ್ನು ಜೋಡಿಸಿಟ್ಟಂತೆ ಪುಟ್ಟ ಕಟ್ಟಡಗಳು, ಪಾಳುಬಿದ್ದ ದೇವಸ್ಥಾನದಲ್ಲಿ ಇವನ ವಾಸ, ಅವರ ನಂಬಿಕೆಗಳು, ಆಚರಣೆಗಳು ಇವೆಲ್ಲವುಗಳ ವಿವರಣೆ ಇದೆ. ಮೊಟ್ಟೆಯನ್ನು ಯಾವ ತುದಿಯಿಂದ ಒಡೆಯಬೇಕೆಂಬ ವಿಚಾರಕ್ಕೆ ಪಕ್ಕದ ರಾಜ್ಯವಾದ ಬ್ಲೇಫುಸ್ಕು ಗಳೊಂದಿಗೆ ಲಿಲ್ಲಿಪುಟ್ ಗಳ ಕಾದಾಟ, ಕೆಲವೊಮ್ಮೆಕಾರಣವೇ ಇಲ್ಲದೆ ಹೊಡೆದಾಡುವ ನಮ್ಮನ್ನೇ ನೆನಪಿಸುತ್ತದೆ. ಕೊನೆಯಲ್ಲಿ ಗಲಿವರನ ವಿರುದ್ಧವೇ ಪಿತೂರಿ ನಡೆದು, ಅಲ್ಲಿನ ದೊರೆ ಅವನ ಕಣ್ಣುಗಳನ್ನು ಕೀಳುವ ಆಜ್ಞೆನೀಡಿದಾಗ ಬೆಟ್ಟಪ್ಪ ಸಣ್ಣ ಬೋಟಿನ ಸಹಾಯದಿಂದ ಪರಾರಿಯಾಗುತ್ತಾನೆ.  

ಇವನ ಪ್ರಯಾಣಗಳು ಕೇವಲ ಲಿಲ್ಲಿಪುಟ್ ಗಳ ನಾಡಿಗೆ ಸೀಮಿತವಲ್ಲ. ಅಲ್ಲಿಂದ ಮುಂದೆ ಬ್ರಾಬ್ದಿನ್ಗ್ ನಾಗ್ ದ್ವೀಪದಲ್ಲಿ ೫೦ ಅಡಿಗಳಿಗೂ ಎತ್ತರದ ಬೃಹತ್ ಮನುಷ್ಯರ ಕೈಗೆ ಸಿಕ್ಕಿಕೊಳ್ಳುವ ಸಂಗತಿ ಇದೆ. ಅಲ್ಲಿ ಗಲಿವರ ಅವರ ಪ್ರದರ್ಶನದ ಬೊಂಬೆಯಾಗುತ್ತಾನೆ. ಬೀದಿ ಬೀದಿಯಲ್ಲಿ ಇವನನ್ನು ನೋಡಲು ಬರುವ ಜನರೆದುರು ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಪ್ರದರ್ಶನಗಳನ್ನು ನೀಡುತ್ತಾ ಬಹಳ ಬಳಲುತ್ತಾನೆ. ಪ್ರಾಣಿಗಳನ್ನು ನಮ್ಮ ಹೊಟ್ಟೆಪಾಡಿಗಾಗಿ ದುಡಿಸಿಕೊಳ್ಳುವ ನಮ್ಮದೇ ಕಥೆ ಅದು ಎಂದೆನಿಸದೇ ಇರಲಾರದು. ಅದೃಷ್ಟವಶಾತ್ ಅಲ್ಲಿನ ರಾಣಿ ಹೆಚ್ಚಿನ ಬೆಲೆ ತೆತ್ತು ಇವನ್ನನ್ನು ಕೊಂಡುಕೊಂಡು ಜೊತೆಯಲ್ಲಿರಿಸಿಕೊಳ್ಳುತ್ತಾಳೆ. ಮುಂದೆ ಅರಮನೆಯಲ್ಲಿನ ಕುಬ್ಜನೊಬ್ಬನ ಕುತಂತ್ರಗಳು,  ಹೆಜ್ಜೇನುಗಳೊಂದಿಗೆ ಕಾದಾಟ, ಮಂಗನ ಕೈಗೆ ಸಿಕ್ಕಿಕೊಳ್ಳುವ ಕಥೆ, ಅಲ್ಲಿನ ರಾಜನ ಜೊತೆ ನಡೆವ ಮಾತು ಕಥೆಗಳು, ಯೂರೋಪಿನ ಜನರ ಯುದ್ದೋತ್ಸಾಹ, ಕೋವಿ ಫಿರಂಗಿಗಳ ಬಳಕೆಯ ಬಗ್ಗೆ ರಾಜನ ಅಸಮ್ಮತಿ ಎಲ್ಲವೂ ರಸಗವಳವೇ ಸರಿ. 

ಮೂರನೇ ಯಾನದಲ್ಲಿ ಕಡಲ್ಗಳ್ಳರ ಕೈಗೆ ಸಿಕ್ಕಿ ತೊಂದರೆಗೊಳಗಾಗಿ ಲ್ಯಾಪುಟ ಎಂಬ ತೇಲುವ ದ್ವೀಪ ಸೇರುತ್ತಾನೆ ಗಲಿವರ. ಆ ನಾಡಿನ ಪ್ರವಾಸದ ಸಂದರ್ಭದಲ್ಲಿ ಲಗಾಡೋ ಎಂಬಲ್ಲಿನ ಗ್ರಾಂಡ್ ಅಕಾಡೆಮಿಯಲ್ಲಿ ನಡೆಯುತ್ತಿದ್ದ ಸೌತೆಕಾಯಿಗಳಿಂದ ಸೂರ್ಯಕಿರಣಗಳನ್ನು ಹೊರತೆಗೆಯುವ ಬಗೆ ಹೇಗೆ, ಕಲ್ಲುಗಳನ್ನು ಮೃದುವಾಗಿಸಿ ದಿಂಬುಗಳನ್ನಾಗಿ ಉಪಯೋಗಿಸುವ ಮಾರ್ಗ, ಸಂಶಯಾಸ್ಪದ ವ್ಯಕ್ತಿಯ  ಮಲವಿಸರ್ಜನೆಯನ್ನು ಪರೀಕ್ಷಿಸಿ ಆತನ ಉದ್ದೇಶಗಳನ್ನು ತಿಳಿಯುವ ಬಗೆ ಮುಂತಾದ  ಅರ್ಥಹೀನ ವೈಜ್ಞಾನಿಕ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ, ಬ್ರಿಟಿಷರ ಅಂಧಶ್ರದ್ಧೆಯನ್ನು ಟೀಕಿಸುತ್ತಾನೆ. ಲುಗ್ಗ್ ನಾಗ್ಗ್ ದ್ವೀಪದಲ್ಲಿನ ಸ್ಟ್ರುಲ್ಡ್ ಬ್ರುಗ್ಸ್ ಗಳೆಂಬ ಸಾವಿಲ್ಲದ ಜನರ ಶೋಚನೀಯ ಸ್ಥಿತಿ, ಗ್ಲುಬ್ ಡುಬ್ ಡ್ರಿಬ್ ನಲ್ಲಿ ಜೂಲಿಯಸ್ ಸೀಸರ್, ಬ್ರುಟಸ್, ಅರಿಸ್ಟಾಟಲ್ ಮುಂತಾದ ಆತ್ಮಗಳ ಜೊತೆ ಸಂವಾದ ಇವನ ಪ್ರವಾಸದ ಮುಖ್ಯಾಂಶಗಳು. 

ಕೊನೆಯ ಭಾಗದಲ್ಲಿ ಕುದುರೆಗಳ ನಾಡಿನಲ್ಲಿ ಹ್ವಿನ್ ಹನ್ಮ್ಸ್ ಗಳ ಜೊತೆ ಕಳೆಯುವ ೫ ವರ್ಷಗಳ ರಸವತ್ತಾದ ವಿವರಣೆ ಇದೆ. ಮನುಷ್ಯರನ್ನೇ ಹೋಲುವ ಯಾಹೂಗಳೆಂಬ ಪ್ರಾಣಿಗಳು, ಮಣ್ಣಿನಲ್ಲಿ ಸಿಗುವ ಯಾವುದೋ ಬಣ್ಣದ ಕಲ್ಲಿಗಾಗಿ ಅವುಗಳ ಹೊಡೆದಾಟ, ಹೊಟ್ಟೆ ತುಂಬುವಷ್ಟು ಊಟ ಕೊಟ್ಟರೂ ಪಕ್ಕದವರ ತಟ್ಟೆಗೆ ಕೈಹಾಕುವ ಅತ್ಯಾಸೆ, ಅತಿಯಾಗಿ ತಿಂದು ಖಾಯಿಲೆ ಬರಿಸಿಕೊಂಡು ಒದ್ದಾಡುವ ಅವುಗಳ ಗುಣ ಅಲ್ಲಿನ ಕುದುರೆಗಳಿಗೆ ಅಸಹ್ಯ ಹುಟ್ಟಿಸಿರುತ್ತವೆ. ಅಲ್ಲಿ ಯಾಹೂಗಳೇ ಕೆಲಸಗಾರರು. ಇಲ್ಲಿನ ಕುದುರೆಗಳು ಮನುಷ್ಯರನ್ನು ಹೊತ್ತೊಯ್ಯುವಂತೆ ಅಲ್ಲಿ ಯಾಹೂಗಳು ಕುದುರೆಗಳ ಸೇವೆ ಮಾಡುತ್ತಿರುತ್ತವೆ. ಕೆಲ ವರ್ಷಗಳನ್ನು ಅಲ್ಲಿ ಕಳೆದ ಗಲಿವರನೂ ಒಬ್ಬ ಯಾಹೂ ಎಂದು ತಿಳಿದು ಅಲ್ಲಿನ ಕುದುರೆಗಳು ಅವನಿಗೆ ನಿನ್ನ ನಾಡಿಗೆ ವಾಪಸಾಗೆಂದು ಹೇಳುತ್ತವೆ. ಇಷ್ಟವಿಲ್ಲದಿದ್ದರೂ ಅವರಿಗೆ ವಿದಾಯ ಹೇಳಿ ಅಲ್ಲಿ ಇಲ್ಲಿ ಅಲೆದಾಡುತ್ತಾ ಕೊನೆಗೆ ಇಂಗ್ಲೆಂಡ್ ತಲುಪಿಕೊಳ್ಳುತ್ತಾನೆ. ಮನುಷ್ಯರೆಂಬ ಯಾಹೂಗಳೊಂದಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಾ, ಹೆಂಡತಿ ಮಕ್ಕಳನ್ನೇ ದೂರವಿಟ್ಟು ಕುದುರೆಗಳೊಂದಿಗೆ ಸಮಯ ಕಳೆಯುತ್ತಾ ತನ್ನ ಮುಂದಿನ ದಿನಗಳನ್ನು ಕಳೆಯುವ ಗಲಿವರನ ಮಾತುಗಳೊಂದಿಗೆ ಈ ಪುಸ್ತಕ ಕೊನೆಯಾಗುತ್ತದೆ.  

Saturday 1 February 2020

ಕ್ಯಾರಿ - ಸ್ಟೆಫೆನ್ ಕಿಂಗ್


ಹಾರರ್ , ಥ್ರಿಲ್ಲರ್  ಕಥೆಗಳ ಮೂಲಕ  ಪ್ರಸಿದ್ದಿ ಪಡೆದ ಸ್ಟೆಫೆನ್ ಕಿಂಗ್ ರ ಕ್ಯಾರಿ ಪುಸ್ತಕವನ್ನ ಕೈಗೆತ್ತಿಕೊಂಡಿದ್ದೆ. ಕೆಲವು ಪುಟಗಳನ್ನ ತಿರುವಿಹಾಕುವುದರೊಳಗಾಗಿ ಪೂರ್ತಿ ಕಥೆಯ ಹಿಡಿತ ಸಿಕ್ಕಿಬಿಡುತ್ತದೆ. ಆದರೂ ಮುಂದೆ ಓದಿಸಿಕೊಂಡು ಹೋಗುತ್ತದೆಂಬುದು ಇದರ ಧನಾತ್ಮಕ ಅಂಶ. 

ಇದು ಅವರ ಮೊದಲ ಪುಸ್ತಕ. ಕ್ಯಾರಿ ಎನ್ನುವ ಪಾತ್ರದ ಸುತ್ತ ಸುತ್ತುವ ಕಥೆ. ತನ್ನ ತಾಯಿಯ ವಿಪರೀತ ಎನಿಸುವಂತಹ  ಧಾರ್ಮಿಕತೆಯ ಮಧ್ಯೆ ಬೆಳೆಯುವ ಆಕೆ, ಬೇರೆಲ್ಲ ಸ್ನೇಹ ಸಂಬಂಧಗಳಿಂದ ವಂಚಿತೆ. ನಿತ್ಯವೂ ಸಹಪಾಠಿಗಳಿಂದ ಕಿರುಕುಳ, ಅವಮಾನಕ್ಕೆ ಗುರಿಯಾಗುತ್ತಿರುತ್ತಾಳೆ. ಆದರೆ ಎಲ್ಲರಂತೆ ಸಾಮಾನ್ಯ ಹುಡುಗಿಯಲ್ಲ ಅವಳು. ತನ್ನ ಮನಸ್ಸಿನ ಮೂಲಕವೇ ವಸ್ತುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಬಲ್ಲ ಟೆಲಿಕೈನೆಟಿಕ್ ಶಕ್ತಿ ಆಕೆಗೊಲಿದಿರುತ್ತದೆ. 

ಹೈಸ್ಕೂಲು ಕೊನೆಯ ವರ್ಷದ ಪ್ರಾಮ್ ನೈಟ್ ಗೆ ಸಹಪಾಠಿಯೊಂದಿಗೆ ಕ್ಯಾರಿ ವೈಟ್ ಗೆ ಕನಸೋ, ನಿಜವೋ ಎನ್ನುವಷ್ಟು ಸುಂದರವೆನಿಸುತ್ತದೆ ಆ ರಾತ್ರಿ. ಆದರೆ ಅಲ್ಲಾಗಲೇ ಆಕೆಯ ವಿರುದ್ಧ ಸಂಚೊಂದು ರೂಪುಗೊಂಡಿರುತ್ತದೆ. ಅದರ ಸುಳಿಗೆ ಸಿಕ್ಕಿಬಿದ್ದು ಅವಮಾನಿತಳಾದಾಗ ಕ್ಯಾರಿ ತನ್ನ ಅತಿಮಾನುಷ ಶಕ್ತಿಯ ಮೊರೆಹೋಗುತ್ತಾಳೆ. ಮುಂದೆ ? ಓದಿ ನೋಡಿ. 

ಮೇಲೆ ಹೇಳಿದಂತೆ ಮೊದಲ ಕೆಲ ಪುಟಗಳಲ್ಲೇ ಪೂರ್ತಿ ಸಾರಾಂಶ ಅಡಗಿದ್ದರೂ, ಕ್ಯಾರಿ ಕಾಡುವ ನೆನಪಿನಲ್ಲುಳಿಯುವ ಪಾತ್ರ.