Monday 23 February 2015

ನುಡಿ ನಮನ

ಕಾಲೇಜು ಜೀವನ, ಪ್ರತಿಯೊಬ್ಬರ ಬದುಕಿನಲ್ಲೂ ನವಿರಾದ ನೆನಪುಗಳನ್ನು ಉಳಿಸಿರುತ್ತದೆ.ಆ ನೆನಪುಗಳು ಮೊದಲ ಮಳೆಯಿಂದ ನೆಂದ ಮಣ್ಣಿನ ನೆಲದಿಂದ ಬರುವ ಪರಿಮಳದಷ್ಟೇ ಘಮ ಘಮ.ಮತ್ತೆ ಮತ್ತೆ  ಮೆಲುಕು ಹಾಕಬೇಕಿನ್ನಿಸುವ ಮಧುರ ಕವಿತೆಯಂತೆ ಅದು.

ಇಂಜಿನಿಯರಿಂಗ್  ಸೇರಿದ ಮೊದಮೊದಲು ಅಪ್ಪ,ಅಮ್ಮನಿಂದ ದೂರವಾಗಿ ಇರಬೇಕಾದ ಅನಿವಾರ್ಯತೆ.ಭಯ, ದುಗುಡ ಎಲ್ಲವೂ ಇತ್ತು.ಆದರೆ ಆಮೇಲೆ ದಿನ ಕಳೆದದ್ದು ಗೊತ್ತಾಗಲೇ ಇಲ್ಲ.ಕಾಲೇಜಿಗೆ ಹೊಸಬರಾಗಿದ್ದ ನಾವು ಸೀನಿಯರ್ಸ್ ಆದೆವು.ಅಲ್ಲಿ ನಮಗೊಬ್ಬರು ಪ್ರೊಫೆಸರ್. ತಮ್ಮ ನಡೆ ನುಡಿಯಲ್ಲಿ ಅತಿಯಾದ  ಶಿಸ್ತನ್ನು ಪಾಲಿಸುವ,ಯಾವಾಗಲೂ ನಗದ ಅಪರೂಪದ ವ್ಯಕ್ತಿ. ಎಲ್ಲವೂ ಕರಾರುವಾಕ್ಕಾಗಿ ನಡೆಯಬೇಕೇಂದು ಬಯಸುತ್ತಿದ್ದರು.ಪ್ರತಿ ಸೆಮಿಸ್ಟರ್ನಲ್ಲೂ ಒಂದೊಂದು ವಿಷಯ ಕಲಿಸಲು ಬರುತ್ತಿದ್ದ ಅವರ ಕ್ಲಾಸ್ ಯಾವಾಗ ಆರಂಭವಾಗುತ್ತದೆ ಎಂಬುದು ಮಾತ್ರ ನಮಗೆ ತಿಳಿದಿರುತ್ತಿತ್ತು. ಮುಗಿಯುವುದು ೩-೪ ಗಂಟೆಗಳಾದ ಮೇಲೆಯೇ.! ಬೇರೆ ಎಲ್ಲಾ ಅಧ್ಯಾಪಕರ ಕ್ಲಾಸ್ ಬಿಟ್ಟು ಅಡ್ಡಾಡಿ ರೂಢಿಯಾಗಿದ್ದ ನಮಗೆ ಇವರ ಉಪನ್ಯಾಸ ಕೇಳುವುದು ಕಷ್ಟವಾಗುತ್ತಿತ್ತು.ಬಿಸಿ ಕಲ್ಲಿನ ಮೇಲೆ ಕುಳಿತಂತೆ ಯಾವಾಗ ಮುಗಿಯುವುದೋ ಎಂದು ಕಾಯುತ್ತಾ ಕುಳಿತಿರುತ್ತಿದ್ದೆವು.

ಒಂದು ದಿನ ೮ ಗಂಟೆಯ ಮೊದಲ ಪಿರಿಯಡ್ ಗೆ ಬಂದ ಪ್ರೊಫೆಸರ್ ಅವರನ್ನು  ನೋಡಿ ನಾವೆಲ್ಲ ಇವರು ಯಾಕೆ ಬಂದರು ಈಗ ಗಂಟೆ ಹನ್ನೊಂದಾದರೂ ನಮ್ಮನ್ನ ಬಿಡುವುದಿಲ್ಲ ಎಂದುಕೊಂಡೆವು.ಅಸ್ತು ದೇವತೆಗಳು ಕೇಳಿಸಿಕೊಂಡಿರಬೇಕು.! ೧೦ ರಿಂದ ೧೦:೩೦ರ ಇಂಟರ್ವಲ್ ನಲ್ಲೂ ಬಿಡದೆ ೧೨ ಗಂಟೆಯ ವರೆಗೂ ಅವರ ವಾಗ್ಝರಿ ಸಾಗಿತು.ಆಮೇಲೆ ನಾವು ಕೇಳಲಾಗದೆ ಸರ್,ಸರ್ ಎಂದು ಕರೆಯಲಾರಂಬಿಸಿದೆವು. ನಮ್ಮ ಅವಿಧೇಯ ವರ್ತನೆ ಅವರಿಗೆ ಸಿಟ್ಟು ತರಿಸಿತು. ಇವತ್ತು ನಿಮಗೆ ಊಟಾನೂ ಬೇಡ ಏನೂ ಬೇಡ,ಆಗ ನಿಮಗೆ ಬುದ್ದಿ ಬರುತ್ತದೆ ಅಂತ ೨ ಗಂಟೆಯವರೆಗೂ ಉಪನ್ಯಾಸ ಮುಂದುವರೆಸಿದರು.ಅವತ್ತು  ಕ್ಲಾಸ್ ಮುಗಿಸಿ ಹೊರಬಂದಾಗ ಮಾತ್ರ ಪಂಜರದಿಂದ  ಹೊರಬಂದ ಹಕ್ಕಿಯಂತಾಗಿತ್ತು ಮನಸ್ಸು.

 ನಮ್ಮ ಕೊನೆಯ ವರ್ಷದ ಪ್ರಾಜೆಕ್ಟ್ ಗೆ ಅವರನ್ನೇ  ಗೈಡ್  ಆಗಿ ಆರಿಸಿಕೊಂಡಿದ್ದೆವು ನಾವು. ನಾಲ್ಕು ತಿಂಗಳು ಸಾಕಪ್ಪಾ ಸಾಕು ಎನ್ನಿಸುವಷ್ಟು ಬೈಗುಳಗಳು.ಅದು ಸರಿಯಾಗಿಲ್ಲ,ಇದನ್ನ ಮಾಡಿಲ್ಲ ಯಾಕೆ.?ಹೀಗೇನಾ ರಿಪೋರ್ಟ್ ಬರೆಯೋದು ಅಂತ ಬೈತಿದ್ರು.ನಮಗೆ ಅದು ಅಭ್ಯಾಸವಾಗಿತ್ತು.ಕೊನೆಯ ದಿನ ಮಾತ್ರ ನಮ್ಮ ಪ್ರಾಜೆಕ್ಟ್ ನೋಡಿ, ಚನ್ನಾಗಿ ಮಾಡಿದ್ದೀರಿ ಎಂಬ ಮಾತಿನೊಂದಿಗೆ ಸಹಿ ಹಾಕಿದ್ದರು.ಅದೇ ಕೊನೆ ನಾನವರನ್ನು ನೋಡಿದ್ದು. ನಂತರ ಪರೀಕ್ಷೆಗಳು ಮುಗಿದವು. ಇಂಜಿನಿಯರಿಂಗ್ ನಾಲ್ಕು ವರ್ಷಗಳು ಕೂಡ ಒಂದಿಷ್ಟು ನೆನಪುಗಳನ್ನುಳಿಸಿ ಮುಗಿದೇ ಹೋಯಿತು. ಇನ್ನೇನು ಹಾಸ್ಟೆಲ್ ಖಾಲಿ ಮಾಡಿಕೊಂಡು  ಮನೆಗೆ ಬಂದದ್ದಾಯಿತು.

ಇದಾದ ಸುಮಾರು ಒಂದು ವರ್ಷದ ನಂತರ ಫೇಸ್ ಬುಕ್ ನ ಅವರ ಪ್ರೊಫೈಲ್ ನಲ್ಲಿ ರೆಸ್ಟ್ ಇನ್ ಪೀಸ್ ಎನ್ನುವ ಕಾಮೆಂಟ್ ಗಳು.ಅದನ್ನು ನೋಡಿ ನಂಬಿಕೆಯೇ ಬರಲಿಲ್ಲ. ಕಣ್ಣು ತೇವವಾಗಿತ್ತು. ಎಲ್ಲ ಸ್ನೇಹಿತರಿಗೆ ಕಾಲ್ ಮಾಡಿ ವಿಚಾರಿಸಿದೆ.ನನ್ನಂತೆಯೇ ಕೆಲವರು ನಂಬಲಾಗದ ಸ್ಥಿತಿಯಲ್ಲಿ ಇದ್ದರೆ ಇನ್ನು ಕೆಲವರು ರಾತ್ರಿ ಎಲ್ಲಾ ನಿದ್ರೆ ಮಾಡದೆ ಕಳೆದಿದ್ದರು.ನನ್ನ ಸ್ನೇಹಿತನೊಬ್ಬ ಕಣ್ಣು ಮುಚ್ಚಿದರೆ ಅವರೇ ನೆನಪಾಗುತ್ತಾರೆ ಎಂದಿದ್ದ.

ಇದಾಗಿ ತುಂಬ ದಿನ ಕಳೆದಿದ್ದರೂ ಅವರಿನ್ನೂ ಆ ಕ್ಲಾಸ್ ರೂಂ ಗಳಲ್ಲಿ ದಿನಕ್ಕೆ ೩-೪ ಗಂಟೆಗಳ ಕಾಲ ನಿಂತುಕೊಂಡು ಪಾಠ ಹೇಳಿಕೊಡುತ್ತಾ, ಲ್ಯಾಬ್ ಗಳಲ್ಲಿ   ಪ್ರೋಗ್ರಾಮ್ ಗಳನ್ನು ವಿವರಿಸುತ್ತಾ ಇನ್ನೂ ಅಲ್ಲಿಯೇ ಇದ್ದಾರೆ ಎಂದೆನಿಸುತ್ತದೆ.ಇನ್ನೊಮ್ಮೆ ಆ ದಿನಗಳು ಮರಳಿ ಬಾರದೇ ಎಂದೆನಿಸುತ್ತದೆ.ಅವರ ನೆನಪು ಇಂದಿಗೂ ಎಲ್ಲರ ಮನದಲ್ಲೂ ಹಸಿರಾಗಿದೆ.