Saturday 10 May 2014

ನೆನಪಿನ ಪುಟಗಳಲ್ಲಿ..

ಎಷ್ಟೋ ನೆನಪುಗಳು ಬರೆಯದೇ ಹಾಗೇ ಉಳಿದುಬಿಟ್ಟಿವೆ.ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ,ಬೀಳುವ ತುಂತುರು ಮಳೆ ಮತ್ತೆ ಮತ್ತೆ ತೀರ್ಥಹಳ್ಳಿಗೆ ಕರೆದೊಯ್ಯುತ್ತಿದೆ. ಏನಾದರೂ ಬರೆಯಬೇಕು ಎಂದುಕೊಂಡಾಗ ನೆನಪಾದದ್ದು ಇದು. 


ದಿನಾ ೪:೩೦ ಕ್ಕೆ  ಬಿಡುವ ನಮ್ಮ St.Mary's ಶಾಲೆಯಲ್ಲಿ ಅವತ್ತೊಂದು ದಿನ ಬೇಗ ಬಿಟ್ಟಿದ್ದರು.ಅವತ್ತು ೧೨:೩೦ ಕ್ಕೆ  ರಜ ಘೋಷಿಸಲಾಗಿತ್ತು. ಎಷ್ಟು ಸಂಭ್ರಮವೋ ಆ ದಿನ. ನೀಲಿ ನೀಲಿ ಬಣ್ಣದ ಸಮವಸ್ತ್ರ ಧರಿಸಿದ ಮಕ್ಕಳೆಲ್ಲ ಮನೆಗೆ ಓಡುತ್ತಿದ್ದರು. ಶಾಲೆಗೆ ರಜ ಕೋಳಿ ಮಜ ಅಂತ ಕೂಗುತ್ತಿದ್ದರು.ನಾವೂ ಅವರೊಂದಿಗೆ ದನಿಗೂಡಿಸಿದೆವು.ದಿನವೂ ಆಟೋದಲ್ಲಿ ಮನೆಗೆ ಹೋಗುತ್ತಿದ್ದೆವಾದರೂ ಅವತ್ತು ಮದ್ಯಾಹ್ನ ಶಾಲೆಗೆ ರಜ ಕೊಡ್ತಾರೆ ಅಂತ ಯಾರಿಗೆ ಗೊತ್ತಿತ್ತು.? ದಿನಾ ಆಟೋ ಬಂದಾಗ ನಮ್ಮಾಟೋ ಬಂತು ನಮ್ಮಾಟೋ ಬಂತು ಅಂತ ಕೂಗುವುದು ಅಭ್ಯಾಸ.ಆದರೆ ಅವತ್ತು ಆಟೋ ಬರಲೇ ಇಲ್ಲ. ಮನೆಗೆ ಫೋನ್ ಮಾಡೋಕೆ coin ಫೋನ್ ಗಳಾಗಲಿ,cell ಫೋನ್ ಗಳಾಗಲಿ ಇರಲಿಲ್ಲ. ಒಂದೇ ಆಟೋದಲ್ಲಿ ಹೋಗುವ ನಾವು ನಾಲ್ಕೈದು ಜನ ನಡೆದುಕೊಂಡು ಹೋಗೋಣ ಎಂದು ತೀರ್ಮಾನಿಸಿಕೊಂಡೆವು.ಗಣೇಶ ಬಸ್ ನಮಗೋಸ್ಕರವೇ ಎಂಬಂತೆ ಕಾಯುತ್ತಿತ್ತು.ಬಸ್ ಚಾರ್ಜ್ ಹೆಚ್ಚೇನು ಇರುತ್ತಿರಲಿಲ್ಲ. ಆದರೂ ಇನ್ನೂ ಮಳೆಗಾಲ ಮುಗಿದಿರಲಿಲ್ಲ.ಮಳೆಗಾಲದಲ್ಲಿ ನಡೆಯುವ ಅನುಭವವನ್ನು ಕಳೆದುಕೊಳ್ಳಲು ಇಷ್ಟಪಡದೆ  ನಾನು,ಸ್ಪೂರ್ತಿ,ಅರ್ಚನ,ಅನುಪಮ,ಅಮೃತ ಇಷ್ಟು ಜನ ಒಟ್ಟಿಗೆ ನಡೆಯುತ್ತಾ ಮನೆಕಡೆ ಹೊರಟೆವು. 

ಸುಮ್ನೆ ನಡೆಯೋದು ನಮಗೆ ಗೊತ್ತೇ ಇರ್ಲಿಲ್ಲ. ಅಂತ್ಯಾಕ್ಷರಿ ಆಟ ಆಡುತ್ತಾ,ಮಳೆಯಲ್ಲಿ ನೆನೆಯುತ್ತಾ,ಹಾರುತ್ತಾ ,ಕೂಗುತ್ತಾ ಮುಂದುವರೆಯುತ್ತಿದ್ದೆವು. ನೋಡಿದವರೆಲ್ಲ ವಾನರ ಸೈನ್ಯ ಅಂತಾನೆ ಅಂದುಕೊಳ್ಳುತ್ತಿದ್ದರೆನೋ!! ಅಷ್ಟೇ ಅಲ್ಲ, ಯಾವ ಬಾವೀಲಿ ಎಷ್ಟು ನೀರಿದೆ ಅಂತ ಇಣುಕಿ ನೋಡೋದು. ಬಾವಿ ನೀರು ಪ್ರಶಾಂತವಾಗಿದ್ದರೆ ದೊಡ್ಡ ಕಲ್ಲು ಎತ್ತಿ ಬಾವಿಗೆ ಹಾಕೋದು. ದಾರಿಯಲ್ಲಿ ಬರುವ ಹೊಳೆ ಎಷ್ಟು ತುಂಬಿದೆ ಅಂತ ಪರೀಕ್ಷೆ ಮಾಡೋದು,ಚಂದದ ಕಾರುಗಳನ್ನ ಕಣ್ಣರಳಿಸಿ ನೋಡುವುದು. ಹಳ್ಳಗಳಲ್ಲಿ ಎಲೆಗಳನ್ನ ತೇಲಿ ಬಿಡೋದು. ನೀರಲ್ಲಿ ಯಾವುದಾದರೂ ಹುಳ ಬಿದ್ದಿದ್ದರೆ ಎಲೆಗಳ ಸಹಾಯದಿಂದ ಮೇಲೆತ್ತುವುದು. ಹೀಗೆ ಮಾಡದ ತರಲೆಗಳೇ ಇಲ್ಲವೇನೋ..!!
                                      

ಅವತ್ತೂ ಹಾಗೆಲ್ಲ ತರಲೆಗಳನ್ನು ಮಾಡುತ್ತಲೇ ಮನೆಯ ದಾರಿ ಹಿಡಿದೆವು.ಆದರೂ ಮನೆಗೆ ಹೋಗಲು ಮನಸಿಲ್ಲ. ಹೇಗಿದ್ದರೂ ಶಾಲೆ  ಬೇಗ ಮುಗಿದಿದೆ ಎಂದು ಮನೆಯವರಿಗೆ ಗೊತ್ತೇ ಇಲ್ವಲ್ಲ.! ಇಲ್ಲೇ ಸಾಯಂಕಾಲದವರೆಗೂ ಆಟ ಆಡ್ತಾ ಇದ್ಬಿಡೋಣ. ದಿನಾ ಮನೆಗೆ ಹೋಗೋ ಹೊತ್ತಿಗೆ ಹೋದ್ರಾಯ್ತು ಅಂತ ಮಾತನಾಡಿಕೊಂಡೆವು. ದಾರಿಯಲ್ಲಿ ಯಾವುದೊ ಒಂದು ಹಳ್ಳ ಇತ್ತು. ಅಲ್ಲಿ ನೀರಾಡಿದ್ದು ಆಡಿದ್ದೇ. ಹೇಳುವವರು ಕೇಳುವವರು ಯಾರೂ ಇರಲಿಲ್ಲ. ಮದ್ಯಾಹ್ನ ಊಟಕ್ಕೆಂದು ತಂದ ಡಬ್ಬಿಗಳಿಂದ ವನಭೋಜನ ನಡೆಸಿದೆವು. ಹಾಗೆ ಸಾಯಂಕಾಲ ಆಗಿದ್ದೇ ಗೊತ್ತಾಗ್ಲಿಲ್ಲ.ಇನ್ನೂ ತಡವಾದರೆ ಮನೆಯಲ್ಲಿ ಕೋಲು ತೆಗೆದುಕೊಳ್ಳುತ್ತಾರೆಂದು ಭಯದಿಂದ ಬೇಗ ಮನೆ ಕಡೆ ನಡೆದೆವು. 


ಸ್ವಲ್ಪ ದೂರ ನಡೆದಿಲ್ಲ ,ಅಷ್ಟರಲ್ಲೇ ಚಿಕ್ಕಮ್ಮ ಬರುತ್ತಿರುವುದು ಕಾಣಿಸಿತು.ಅವರನ್ನ ನೋಡಿದಾಗ ಗಾಬರಿ ಆಯಿತು. ಯಾಕೋ ಏನೋ ಎಡವಟ್ಟು ಆಗಿದೆ ಅಂತ ಅನ್ನಿಸಿತು. ಚಿಕ್ಕಿ ಏನೀಕಡೆ ಬಂದ್ರಿ ಅಂತ ಕೇಳಿದೆವು. ಅದಕ್ಕೆ ಅವ್ರು ಏನು ಇಲ್ಲ ನಡೀರಿ ಮನೆಗೆ ಅಂದ್ರು. ನಾವು ಏನು ಕಾದಿದೆಯೋ ಮನೆಯಲ್ಲಿ ಅಂತ ಭಯದಿಂದ ಮನೆ ಕಡೆ ಹೆಜ್ಜೆ ಹಾಕಿದೆವು.ಮನೆಯಲ್ಲಿ ನೋಡಿದರೆ ಅಪ್ಪ ಕೋಲು ಹಿಡ್ಕೊಂಡು ಕಾಯ್ತಿದಾರೆ!! ಎಲ್ಲಿಗೆ ಹೋಗಿದ್ರಿ ಇಷ್ಟೊತ್ತು ಅಂತ ಜೋರಾಗಿ ಕೇಳಿದರು. ನಾವು ಎನೂ ಮಾತಾಡದೆ ಸುಮ್ನೆ ಇದ್ವಿ. ಒಂದಿಷ್ಟು ಬೈದು ಒಳಗೆ ಕಳಿಸಿದರು. ಶಾಲೆ ಬೇಗ ಬಿಟ್ಟಿದ್ದು ಅವರಿಗೆ ಹೇಗೆ ಗೊತ್ತಾಯ್ತು ಅನ್ನೋದು ನಮಗಿದ್ದ ಪ್ರಶ್ನೆ. ತೀರ್ಥಹಳ್ಳಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ದೊಡ್ಡಪ್ಪ ಶಾಲೆ ಬಿಟ್ಟ ತಕ್ಷಣ ಮನೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದರಂತೆ. ಸಾಲದೆಂಬಂತೆ ಸ್ವಲ್ಪ ಹೊತ್ತಾದ ಮೇಲೆ ಮಕ್ಕಳು ಇನ್ನೂ ಮನೆಗೆ ಬಂದಿಲ್ವಾ!! ಅಂತ ಇನ್ನೊಂದು ಸಲ ಫೋನ್ ಮಾಡಿದ್ದರಂತೆ. ಅದ್ಕೆ ಅಪ್ಪಂಗೆ ಸ್ವಲ್ಪ ಸಿಟ್ಟು ಜಾಸ್ತಿನೇ ಬಂದಿತ್ತು.ಮನೇಲಿ ಬೈಸ್ಕೊಳೋ ಹಾಗೆ ಮಾಡಿದ್ರಲ್ಲ ಅಂತ ನಮಗೂ ಅವತ್ತು ದೊಡ್ಡಪ್ಪನ ಮೇಲೆ ಸಿಟ್ಟು ಬಂದಿತ್ತು.

ಇದೆಲ್ಲ ಇವಾಗ ನೆನೆಸಿಕೊಂಡರೆ ಖುಷಿ ಆಗತ್ತೆ. ಎಷ್ಟು ಚನ್ನಾಗಿತ್ತು ಆ ದಿನಗಳು ಅಂತ ಅನ್ಸತ್ತೆ. ಮತ್ತೆ ಆ ಸಮಯ ಬರಬಾರದೇ ಅಂತ ಮನಸ್ಸು ಚಡಪಡಿಸತ್ತೆ.


7 comments:

  1. Sweeeeeet memoriesssss :-)

    ReplyDelete
  2. ಒಳ್ಳೆಯ ಲೇಖನ ಶೈಲಿ :-) ಇದನ್ನು ಓದಿದ ನಂತರ ನನ್ನ ಮನಸ್ಸು ನನ್ನೂರಿನ ಕಡೆ ಮುಖ ಮಾಡಿ ನಿಂತಿದೆ

    ReplyDelete
    Replies
    1. ಧನ್ಯವಾದಗಳು.
      ಓ..ಹಾಗಿದ್ದರೆ ಹೋಗಿ ಬನ್ನಿ ಊರಿಗೆ..:)

      Delete
  3. Those sweet memories are valuable....

    ReplyDelete
  4. ತೀರ್ಥಹಳ್ಳಿ ಯ ಲೇಖನದ ಸಿಹಿ ಇದೆ...ಚೆನ್ನಾಗಿದೆ....

    ReplyDelete