Saturday 5 September 2015

ಚಾರ್ಮಾಡಿ ಮುಡಿಯಲ್ಲಿ- ಭಾಗ ೨

ಏರಿಕಲ್ಲು ಹತ್ತಿಳಿದಿದ್ದು  ಒಂದು ಅದ್ಭುತ ಅನುಭವವಾಗಿತ್ತು.ಏನೋ ಸಾಧಿಸಿದ ಅನಿರ್ವಚನೀಯ ತೃಪ್ತಿಯಿತ್ತು . ಆದರೆ ಮರುದಿನದ ಚಾರಣಕ್ಕೆ ಮಾತ್ರ ಸ್ವಲ್ಪವೂ ಶಕ್ತಿ ಉಳಿದಿರಲಿಲ್ಲ. ಬಿದ್ದು ಕಾಲು ನೋವು ಮಾಡಿಕೊಂಡಿದ್ದೆ ನಾನು.ಇನ್ನು ಹೇಗೆ ನಡೆಯುವುದು..? ರಾತ್ರಿ ಊಟವಾದ ಮೇಲೆ ಅವರವರ ಮಲಗುವ ಚೀಲದ ಒಳಗೆ ಎಲ್ಲರೂ ತೂರಿಕೊಂಡಿದ್ದಾಗ ನಮ್ಮ ಚಾರಣದ ಸಂಘಟಕ  ಹರ್ಷ  ಕೇಳಿದ ನಾಳೆ  trek ಯಾರ್ಯಾರು ಬರ್ತೀರ ? ಅಂತ . ಎಲ್ಲೋ ಒಂದಿಬ್ಬರನ್ನ ಬಿಟ್ಟು ಯಾರೂ ದನಿ ಎತ್ತಲಿಲ್ಲ. ಅಷ್ಟು ಸುಸ್ತಾಗಿದ್ದರು ಎಲ್ಲರು.  

ಬೆಳಗಾಯಿತು.ಒಂದೇ ಒಂದು ಗಾಢ ನಿದ್ರೆ ಸಾಕಾಗಿತ್ತು  ಹಿಂದಿನ ದಿನದ ಸುಸ್ತನ್ನೆಲ್ಲ ಮಾಯ ಮಾಡೋಕೆ.ಹೆಚ್ಚು ಕಡಿಮೆ ಎಲ್ಲ ಗುಡ್ಡ ಹತ್ತಲು  ಹೊರಟು ನಿಂತಿದ್ದರು.ಹೊರಗೆ ಬಂದರೆ  ಚಾರ್ಮಾಡಿ ಬೆಟ್ಟಗಳ ಸಾಲು ಸಾಲು ಕೈ ಬೀಸಿ ಕರೆಯುತ್ತಿತ್ತು. ತಡ ಮಾಡದೆ ಬೇಕಾದ ವಸ್ತುಗಳನ್ನೆಲ್ಲ ತುಂಬಿಸಿಕೊಂಡು ಬೆಟ್ಟದ ತಪ್ಪಲಿನಲ್ಲಿ ಇರುವ  hotel ಒಂದರಲ್ಲಿ ನೀರು ದೋಸೆ ತಿಂದು, ಟೀ ಕುಡಿದು ಹೊರಡಲನುವಾದೆವು.ಇಂಬಳಗಳಿಂದ ರಕ್ಷಣೆಗೆ  ಬೇವಿನ ಎಣ್ಣೆ ,ನಶ್ಯವನ್ನು ಬೆರೆಸಿ ಲೇಪಿಸಿಕೊಂಡಿದ್ದಾಯಿತು.

group pic ..:)

ನಾವು ಎರಡನೇ ದಿನ ಹತ್ತಬೇಕಾಗಿದ್ದಿದ್ದು  ಕೊಡೆಕಲ್ಲು , ಬಾಳೆಕಲ್ಲು ಗುಡ್ಡ.ಸ್ವಲ್ಪ ದೂರ ಬಸ್ ನಲ್ಲಿ ಕ್ರಮಿಸಿ ಮುಂದೆ ಹತ್ತಬೇಕಾಗಿತ್ತು.ಒಂದೆರಡು ಗ್ರೂಪ್ ಪಿಕ್ ತೆಗೆದುಕೊಂಡು ನಮ್ಮ ತುದಿ ತಲುಪುವ ಯತ್ನ ಮೊದಲಾಯಿತು.ಮೊದಮೊದಲು ಕಷ್ಟದ ಹಾದಿ ಎಂದೆನಿಸಿದರೂ ಹೆಚ್ಚೇನೂ ತೊಂದರೆಗಳಾಗಲಿಲ್ಲ. ಸಣ್ಣಗೆ ಜಿನುಗೋ ಮಳೆ, ಜೊತೆಯಲ್ಲಿ ಚಳಿ, ಎತ್ತ ಕತ್ತೆತ್ತಿದರೂ ಕಾಣುವುದು ಕಾವಳ, ಕೆಳಗೆ ಹಸುರು ಹುಲ್ಲಿನ ಹೊದಿಕೆ,ಚಿಕ್ಕ ಕಾಲುದಾರಿ. ದೂರದಲ್ಲೆಲ್ಲೋ ಕಾಣುವ ,ತುಂಬಿ ಹರಿಯುವ ಜಲಪಾತಗಳು.! ಹೀಗಿತ್ತು ನಾವು ಹೊರಟಿದ್ದ ದಾರಿ. ಒಬ್ಬರ ಹಿಂದೆ ಒಬ್ಬರು ಸಾಲಾಗಿ ಇರುವೆಗಳಂತೆ ಸಾಗುತ್ತಿದ್ದೆವು.ಮುಂದೆ ಸಾಗುತ್ತಿದ್ದ ಒಂದೆರಡು ಜನರನ್ನು ಬಿಟ್ಟು ಬೇರೆ ಏನೂ ಕಾಣುತ್ತಿರಲಿಲ್ಲ.
     
ಮಳೆಯಲಿ ಜೊತೆಯಲಿ.. :)
ಕೊಡೆಕಲ್ಲು ಗುಡ್ಡದ ನೆತ್ತಿಯಲ್ಲಿ ನಾನು..:)
ಕೊಡೆಕಲ್ಲು ಗುಡ್ಡದ ನೆತ್ತಿಯಲ್ಲಿ ಗೆಳೆಯರೊಂದಿಗೆ .. 
ಹಾಗೆ ಮುಂದೆ ನಡೆದು  ಕೊಡೆಕಲ್ಲು ಗುಡ್ಡದ ನೆತ್ತಿ ಮುಟ್ಟಿದೆವು. ಅಲ್ಲೊಂದು ದೊಡ್ಡ ಬಂಡೆ. ಕೊಡೆಯಂತೆ ವಿಶಾಲವಾಗಿ ಅಷ್ಟೂ ಜನರನ್ನು ತನ್ನ ಕೆಳಗೆ ನಿಲ್ಲಲು ಅವಕಾಶ ಮಾಡಿಕೊಟ್ಟಿತ್ತು ಅದು. ಅಲ್ಲಿಂದ ಕೆಳಗೆ ನೋಡಿದರೆ ಪ್ರಪಾತ. ಮಂಜಿನ ಪರದೆ ಮುಸುಕಿತ್ತು.ಸ್ವಲ್ಪ ಹೊತ್ತು ಹಾಗೆ ಕುಳಿತು ನೋಡುತ್ತಿದ್ದೆ.ನಿಧಾನವಾಗಿ ಮಂಜಿನ ಪರದೆ ಸರಿಯತೊಡಗಿತ್ತು.ಅದರ ಕೆಳಗೆ ಅಡಗಿ ಕುಳಿತ ವನರಾಶಿ ದೃಗ್ಗೋಚರವಾಗಿತ್ತು.ಎಷ್ಟು camera ಗಳು ಛಾಯಾಚಿತ್ರ ಸೆರೆಹಿಡಿದವೋ ಏನೋ. ಆದರೆ ಆ ಅಸೀಮ ಸೌಂದರ್ಯಕ್ಕೆ ಚೌಕಟ್ಟು ಹಾಕಿ ಬಂದಿಸಲು ಸಾಧ್ಯವೇ.? ನಾವು ಮುಂದೆ ಹತ್ತಬೇಕಾಗಿದ್ದ ಬಾಳೆಕಲ್ಲು ಗುಡ್ಡ ಕಣ್ಣೆದುರೇ ಅಗಾಧವಾಗಿ ನಿಂತಿತ್ತು.  ಮಾತು ಬೇಡವಾಗಿತ್ತು. ಕುಳಿತಲ್ಲಿಂದ ಏಳಲು ಮನಸ್ಸಿರಲಿಲ್ಲ.ಹರ್ಷ ಬಿಡಲಿಲ್ಲ. ಊಟಕ್ಕೆ ತಡವಾಗುತ್ತದೆ ಎಂದು ಎಲ್ಲರನ್ನು ಮುಂದೆ ಕಳಿಸಿದ.
ಮಂಜಿನ ಪರದೆ ಸರಿದಾಗ..:)

ಬಾಳೆಕಲ್ಲು ಗುಡ್ಡ 

ಬಾಳೆಕಲ್ಲು ಗುಡ್ಡ ಎದುರಿಗೇ ಇತ್ತು.ಇನ್ನು ಹತ್ತುವುದೊಂದೇ ಬಾಕಿ. ಇಂಬಳಗಳ ತೊಂದರೆ ಇರಲಿಲ್ಲ.chocolate ತಿನ್ನುತ್ತಾ ಹರ್ಷನ ಹುರಿದುಂಬಿಸುವ ಮಾತು ಕೇಳುತ್ತ ಹೆಜ್ಜೆಗಳನ್ನೆಣಿಸುತ್ತಾ ದಾರಿ ಸಾಗಿದ್ದು ಗೊತ್ತೇ ಆಗಲಿಲ್ಲ.ಮಳೆ ಜೋರಾಗಿ ಅಲ್ಲದಿದ್ದರೂ ಹನಿಗರೆಯುತ್ತಿತ್ತು.ಮಂಜು ಮುಸುಕಿದ್ದರಿಂದ ಗುಡ್ಡದ ತುದಿಯಲ್ಲಿ ನಿಂತು ನೋಡಿದಾಗ ಏನು ಕಾಣಲಿಲ್ಲ.ಸ್ವಲ್ಪ ಹೊತ್ತಿನ ನಂತರ ಕೆಳಗಿಳಿಯಲು ಪ್ರಾರಂಭಿಸಿದೆವು.ಕೆಳಗಿಳಿದಿದ್ದು ಜೇನುಕಲ್ಲು ಗುಡ್ಡದ ಕಡೆಯಿಂದ.ಬಸ್ ನಮಗಾಗಿ ಕಾಯುತ್ತಿತ್ತು. ಅಂತ ಅದ್ಭುತ ಅನುಭವ ಕೊಟ್ಟ ಚಾರ್ಮಾಡಿ ಬೆಟ್ಟಗಳ ಸಾಲಿಗೆ, ಇಂಬಳಗಳಿಗೆ ,ಆ ಹಳ್ಳಿಯ ಜನರಿಗೆ, ಮಳೆಕಾಡಿಗೆ ,ಕಣ್ಮನ ತಣಿಸಿದ ಹಸುರಿಗೆ,ಸ್ವರ್ಗ ಸದೃಶ  ಮಲೆನಾಡಿಗೆ ಒಂದು ಮೌನ ವಿದಾಯ ಹೇಳಿ  ಕೊಟ್ಟಿಗೆಹಾರದ ಕಡೆಗೆ ಪ್ರಯಾಣಿಸಿದೆವು.   

  

2 comments: