Monday 18 November 2019

ರೋಮ್ ಕೊಲೋಸಿಯಂನಲ್ಲಿ ಒಂದು ದಿನ

ಕೊಲೋಸಿಯಂನ ಎದುರು ನಾನು
ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ರೋಮ್ ಸಾಮ್ರಾಜ್ಯದ ಸುವರ್ಣಯುಗಕ್ಕೆ ಸಾಕ್ಷಿ ಎಂಬಂತೆ ಎದುರಿಗೆ ನಿಂತಿತ್ತು ಬೃಹತ್ ರಂಗಮಂದಿರ. ಪ್ಲಾವಿಯನ್ ಆಂಫಿಥಿಯೇಟರ್ ಎಂಬ ಹೆಸರಿದ್ದರೂ ಕೊಲೋಸಿಯಂ ಎಂದೇ ಕರೆಸಿಕೊಳ್ಳುವ ಜಗದ್ವಿಖ್ಯಾತ ಕಟ್ಟಡದ ಮುಂದೆ ಕುಬ್ಜರಂತೆ ನಿಂತಿದ್ದೆವು ನಾವು.ಚಳಿಗಾಲದ ಸಮಯ. ಶೀತಗಾಳಿ ರೊಯ್ಯನೆ ಬೀಸಿ ಮೈ ನಡುಗುವಂತೆ ಮಾಡುತಿತ್ತು.ಸೂರ್ಯ ಸಹ ಆಗಷ್ಟೇ ಕತ್ತಲಿನ ಹೊದಿಕೆಯೊಳಗಿಂದ ಹೊರದಾಟುತ್ತಿದ್ದ. ಮುಂಜಾನೆಯಲ್ಲಿ ಒಂದಷ್ಟು ಭದ್ರತಾ ಸಿಬ್ಬಂದಿಗಳನ್ನು ಬಿಟ್ಟರೆ ಬೇರಾರೂ ಇರದೆ ಪ್ರಶಾಂತವಾಗಿತ್ತು ಆ ಜಾಗ. ಬೆಳಕು ಬಿರಿದಂತೆಲ್ಲ ನಿಧಾನವಾಗಿ ಒಬ್ಬೊಬ್ಬರೇ ಹಾಜರಾಗತೊಡಗಿದರು.ಟಿಕೆಟ್ ನ ಸಾಲು ಬೆಳೆಯತೊಡಗಿತ್ತು.ನಾವು ಮೊದಲೇ ಗೈಡೆಡ್ ಟೂರ್ ಟಿಕೆಟ್ ಕೊಂಡುಕೊಂಡಿದ್ದರಿಂದ ಸರತಿಯಲ್ಲಿ ನಿಂತು ಕಾಯುವ ಪ್ರಮೇಯವೇ ಒದಗಲಿಲ್ಲ.

ಕೊಲೋಸಿಯಂನ ಪಕ್ಕದಲ್ಲಿ ಇರುವ ಆರ್ಚ್ ಆಫ್ ಕಾನ್ಸ್ಟೆಂಟೈನ್ 
ನಿಗಧಿತ ಸಮಯಕ್ಕೆ ಸರಿಯಾಗಿ ಕೈಲೊಂದು ಬಾವುಟ ಹಿಡಿದು ಎದುರಾದಳು ನಮ್ಮ ಮಾರ್ಗದರ್ಶಿ ಇಲಾರಿಯ.ಮುಂದಿನ ಸುಮಾರು ಒಂದೂವರೆ ಗಂಟೆಗಳ ಕಾಲ ಕೊಲೋಸಿಯಂನ  ರೋಚಕ ಹಾಗೂ ಭಯಾನಕ ಕಥೆಗಳಿಗೆ ಕಿವಿಯಾಗಲಿದ್ದೆವು ನಾವು. ಮೊದಲಿಗೆ ಇಲಾರಿಯ ನಮ್ಮನ್ನು ಮಧ್ಯ ವೇದಿಕೆಗೆ ಕರೆದೊಯ್ದಳು. ಅದನ್ನು ಅರೀನಾ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಅರೀನಾ ಎಂದರೆ ಮರಳು ಎಂದರ್ಥ. ಹಿಂದೆ ಗ್ಲಾಡಿಯೇಟರ್ ಕಾಳಗಗಳು ನಡೆದಾಗ ಸುರಿದ ರಕ್ತ ಇಂಗಿಹೋಗಲೆಂದು  ಅಂಕಣದ ತುಂಬ ಮರಳು ಚೆಲ್ಲುತ್ತಿದ್ದರಂತೆ. ಹಾಗಾಗಿ ಈ ಹೆಸರಂತೆ. ಕೊಲೋಸಿಯಂ ಖೈದಿಗಳನ್ನಿಡುವ ಬಂದೀಖಾನೆಯಲ್ಲ.ಅಲ್ಲಿ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತಿದ್ದವೇ ಹೊರತು ಯಾರೂ ವಾಸವಾಗಿರಲಿಲ್ಲ. ಆದರೆ ಕೊಲೋಸಿಯಂ ಎಷ್ಟು ಭವ್ಯವಾಗಿತ್ತು, ಅಗಾಧವಾಗಿತ್ತು ಎಂದರೆ ಸುಮಾರು ೫೦೦೦೦ ಜನರಿಗೆ ಅಲ್ಲಿ ಒಮ್ಮೆಗೆ ಕೂರಲು ಸ್ಥಳಾವಕಾಶ ಇತ್ತು. ಸಮಾಜದ ಸ್ಥಿತಿಗತಿಗಳಿಗೆ ಅನುಗುಣವಾಗಿ ಐದು ಸ್ಥರಗಳಲ್ಲಿ ಆಸನದ  ವ್ಯವಸ್ಥೆ ಮಾಡಲಾಗಿತ್ತು. ಅತೀ ಗಣ್ಯ ವ್ಯಕ್ತಿಗಳ ಆಸನ ವೇದಿಕೆಗೆ ತೀರಾ ಸಮೀಪವಾಗಿದ್ದರೆ ಜನಸಾಮಾನ್ಯರು ಕೊನೆಯ ಹಂತದಲ್ಲಿ ಕುಳಿತುಕೊಳ್ಳಬೇಕಾಗಿತ್ತು. 

ಕ್ರಿಸ್ತ ಪೂರ್ವದಲ್ಲಿ ಪ್ರಾರಂಭವಾದ ಈ ಗ್ಲಾಡಿಯೇಟರ್ ಕಾಳಗಗಳು ಸಾಮಾನ್ಯವಾಗಿ ವಿದೇಶಗಳಿಂದ ಆಮದಾದ ಜೀತದಾಳುಗಳ ಮಧ್ಯೆ ನಡೆಯಲ್ಪಡುತಿತ್ತು. ಇದಕ್ಕಾಗಿ ವರ್ಷಗಟ್ಟಲೆ ತರಬೇತಿಯನ್ನು ಸಹ ನೀಡಲಾಗುತಿತ್ತು. ಮಾಡು ಇಲ್ಲವೇ ಮಡಿ ಎಂಬಂತೆ ಹೆಚ್ಚಿನ ಹೊಡೆದಾಟಗಳು ಸಾವಿನಲ್ಲಿ ಅಂತ್ಯವಾಗುತಿತ್ತು. ಗೆದ್ದವನಿಗೆ ಗ್ಲಾಡಿಯೇಟರ್ ಎಂಬ ಬಿರುದು ನೀಡಲಾಗುತ್ತಿತ್ತು. ನಂತರದ ಶತಮಾನಗಳಲ್ಲಿ ಈ ರೀತಿಯ ಸ್ಪರ್ಧೆಗಳು ಅಮಾನವೀಯವೆನಿಸಿ ಅವುಗಳನ್ನು ನಿರ್ಬಂಧಿಸಲಾಯಿತು. ಆದರೆ ಮನರಂಜನೆಗೆ ಬೇರೇನಾದರೂ ಬೇಕಲ್ಲ! ಹಾಗಾಗಿ ಕ್ರೂರ ಪ್ರಾಣಿಗಳ ನಡುವೆ ಕಾಳಗಗಳನ್ನು ಏರ್ಪಡಿಸುತ್ತಿದ್ದರು. ಯೂರೋಪಿಯನ್ನರು ಕಂಡರಿಯದ ಬೃಹತ್ ಪ್ರಾಣಿಗಳನ್ನು ಆಫ್ರಿಕಾದ ಕಾಡುಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ವೇದಿಕೆಯ ಕೆಳಭಾಗದಲ್ಲಿ ಈ ವನ್ಯಮೃಗಗಳನ್ನು ಬಂದಿಸಿಡಲೆಂದೇ ಕೊಠಡಿಗಳ ನಿರ್ಮಾಣ ಮಾಡಲಾಗಿತ್ತು. ಆದರೆ ಇದನ್ನು ಉಪಯೋಗಿಸುತ್ತಿದ್ದದ್ದು ಕೇವಲ ಸ್ಪರ್ಧೆಯ ಸಂದರ್ಭಗಳಲ್ಲಿ ಮಾತ್ರ. ಅಲ್ಲಿದ್ದ ರಾಟೆಗಳ ಮೂಲಕ ಬಂದಿಸಿಡುತ್ತಿದ್ದ ಪ್ರಾಣಿಗಳನ್ನು ಮೇಲೆಳೆದು ವೇದಿಕೆಗೆ ಬಿಡಲಾಗುತ್ತಿತ್ತು. ಇದಲ್ಲದೆ ಕೊಳಚೆ ನೀರು, ತ್ಯಾಜ್ಯ ವಸ್ತುಗಳು  ಹೊರಹೋಗಲು ಕಾಲುವೆಗಳ ವ್ಯವಸ್ಥೆ ಮಾಡಲಾಗಿತ್ತು.
ಕೊಲೋಸಿಯಂನ ಎದುರಿರುವ ವೀನಸ್ ಮತ್ತು ರೋಮಾ ದೇವಾಲಯ 
ನಂತರದ ಕೆಲ ಶತಮಾನಗಳಲ್ಲಿ ಈ ರಂಗಮಂದಿರ ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಮಧ್ಯಯುಗದ ಹೊತ್ತಿಗೆ ಇದನ್ನು ಸ್ಮಾರಕವೆಂದು ಸಂರಕ್ಷಿಸದೆ, ಇಲ್ಲಿದ್ದ ಕಲ್ಲುಗಳನ್ನು ಹೊತ್ತೊಯ್ದು ಇನ್ನಿತರ ದೇವಾಲಯಗಳ ನಿರ್ಮಾಣಕ್ಕಾಗಿ ಬಳಸಲಾಗುತ್ತಿತ್ತು. ೧೮ನೇ ಶತಮಾನದಲ್ಲಿ ಧರ್ಮಗುರುಗಳು, ಅಲ್ಲಿನ ಕಲ್ಲುಗಳನ್ನು ಬೇರೆ ಯಾವುದಕ್ಕೂ ಬಳಸದಂತೆ ಕಟ್ಟಳೆ ನಿರ್ಮಿಸುವ ವರೆಗೂ   ಪ್ಲಾವಿಯನ್ ಆಂಫಿಥಿಯೇಟರ್  ಕೇವಲ ಕ್ವಾರಿಯಾಗಿತ್ತು.

ಕೊಲೋಸಿಯಂನ ಒಳಭಾಗ ಮೇಲಂತಸ್ತಿನಿಂದ ಕಂಡದ್ದು ಹೀಗೆ
ಕೊನೆಯಲ್ಲಿ ನಮ್ಮ ಗೈಡ್ ಇಲಾರಿಯ, ನಮ್ಮನ್ನು ಮೇಲಂತಸ್ತಿಗೆ ಕರೆದೊಯ್ದಳು. ಅಲ್ಲಿ ಕೊಲೋಸಿಯಂ ಪೂರ್ಣ ದರ್ಶನ ಪ್ರಾಪ್ತವಾಯಿತು. ಅದೆಷ್ಟೋ ವೈಭವಗಳಿಗೆ, ನೋವುಗಳಿಗೆ, ಕರುಣಾಜನಕ ಕಥೆಗಳಿಗೆ ಮೂಕಸಾಕ್ಷಿಯಾಗಿ ಶತಶತಮಾನಗಳಿಂದ ನಿಂತಿದ್ದ ಆ ವೈಭವೋಪೇತ ಕಟ್ಟಡವನ್ನು ದರ್ಶಿಸಿದ ಧನ್ಯತಾಭಾವವೊಂದು ನಮ್ಮನ್ನು ಆವರಿಸಿತು.

No comments:

Post a Comment