Monday 2 December 2013

ಕಾಲಾಯ ತಸ್ಮೈ ನಮಃ..

ಸುಮಾರು ದಿನಗಳ ನಂತರ ದೀಪಾವಳಿ ಹಬ್ಬಕ್ಕೆಂದು ಮನೆಗೆ ಹೋಗಿದ್ದೆ. ಮೊದಲಿನಷ್ಟು ಸಂಭ್ರಮ ಇಲ್ಲದಿದ್ದರೂ ದೀಪಾವಳಿ ತನ್ನ ಸೊಗಡನ್ನು ಇನ್ನೂ ಉಳಿಸಿಕೊಂಡಿದೆ. ಹಬ್ಬ ಹೇಗೆ ಮುಗಿಯಿತೆಂದು ಗೊತ್ತೇ ಆಗಲಿಲ್ಲ. ಹೊರಡುವ ಮೊದಲು ಅಜ್ಜನಿಗೆ ಹುಷಾರಿಲ್ಲ ಅಂತ ಕೇಳಿ ನೋಡಿಕೊಂಡು ಬರೋಣವೆಂದು ಅಜ್ಜನ ಮನೆಗೆ ಹೊರಟೆವು. 

ತುಂಬಾ ದಿನಗಳ ನಂತರ ನನ್ನನ್ನು ನೋಡಿದ ಅಜ್ಜನ ಕಣ್ಣು ತುಂಬಿ ಬಂದಿತ್ತು. ಪ್ರೀತಿಯಿಂದ ನನಗೆ ಗುಬ್ಬಿ ಅಂತ ಕರೆದರು. ಅವರ ಆಪ್ಯಾಯತೆಗೆ ಮನಸು ಮುದಗೊಂಡಿತ್ತು. ಅವತ್ತು ಮಧ್ಯಾಹ್ನ ಭೂರಿ ಬೋಜನ.ಪಾಯಸ,ಸಾರು,ಹುಳಿ ,ಚಟ್ನಿ,ಸಾಸಿವೆ ಎಲ್ಲ ಮಾಡಿದ್ದರು ದೊಡ್ಡಮ್ಮ(ಅಮ್ಮನ ಅಮ್ಮ ). ಶಂಕರ ಪೊಳೆ,ಬೋಂಡ ,ಅತಿರಸ,ಹೋಳಿಗೆ ತಿಂದು ನನಗೆ ನಡೆಯಲು ಕಷ್ಟವಾಗುತ್ತಿತ್ತು. ನಿದ್ರೆ ಮಾಡುವುದು ಸರಿಯಲ್ಲವೆಂದು ಹೊರಗೆ ತಿರುಗಾಡಲು ನನ್ನ ತಮ್ಮನೊಂದಿಗೆ ಹೊರಟೆ. ಕೈಯಲ್ಲೊಂದು ಕ್ಯಾಮೆರಾ ಹಿಡಿದುಕೊಂಡು.. 

ಹಾಗೆ ಹೊರಗೆ ಹೊರಟವಳಿಗೆ ಹಳೆಯ ನೆನಪುಗಳು ಮರುಕಳಿಸಿದವು. ಆದರೆ ಯಾವುದೂ ಮೊದಲಿದ್ದಂತೆ ಇರಲಿಲ್ಲ.ನಾನು  ಆ ಜಾಗಕ್ಕೆ ಅಪರಿಚಿತಳೇನೋ ಎನ್ನುವಷ್ಟು  ಬದಲಾವಣೆಗಳು ಆಗಿದ್ದವು. ಮನೆಯ ಮುಂದಿದ್ದ ಬಿದಿರನ ಮಟ್ಟಿ (ಬಿದಿರಿನ ಮರವನ್ನು ಹಾಗೆ ಕರೆಯುತ್ತಾರೆ) ಕಾಣೆಯಾಗಿತ್ತು. ಬಿದಿರು ಕಟ್ಟೆ ಬಂದು ಅದು ನಾಶವಾಗಿತ್ತು. (ಕಟ್ಟೆ ಬರುವುದು ಎಂದರೆ ಭತ್ತದಂತೆಯೇ ಇರುವ ಬಿದಿರಿನ ಬೀಜಗಳು ಹುಟ್ಟುತ್ತವೆ.ಬಿದಿರಕ್ಕಿ ಎಂದು ಕರೆಯುತ್ತಾರೆ. ಅದು ಬಂದಾಗ ಬಿದಿರು ತಾನು ಸತ್ತು ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುತ್ತದೆ.) ತೋಟದಲ್ಲಿ ಯಾವಾಗಲೂ ಹರಡಿರುತ್ತಿದ್ದ ಮದ್ಯಾಹ್ನ ಮಲ್ಲಿಗೆಯ ಗಿಡಗಳು ಅಲ್ಲಿ ಇರಲೇ ಇಲ್ಲವೇನೋ ಎಂಬಂತೆ ನಾಮವಶೇಷ ಆಗಿದ್ದವು. ಬೇಲಿಯಲ್ಲಿ ಆಗ ತಾನೇ ಅರಳಿ ನಿಂತಿರುತಿದ್ದ ಶ್ವೇತ ವರ್ಣದ ಕಣಗಿಲೆ ಹೂವುಗಳನ್ನು ಕಿವಿಯೋಲೆಯಾಗಿ ಬಳಸಿ ಆಡಿಕೊಳ್ಳುತ್ತಿದ್ದುದು ನೆನಪಾಯಿತು. ಬೇಲಿಯ ಕಡೆ ನೋಡಿದೆ. ಎಲೆಯೇ ಇಲ್ಲದೆ ಒಣಗಿ ಕುಳಿತ ಗಿಡಗಳು.!!ಮನೆಯ ಮುಂದೆ ಧರೆಯೊಂದಿತ್ತು.ಅಲ್ಲಿಂದ  ಕೆಳಗೆ ಹಾರುವುದು ನಾವು ಆಡುತ್ತಿದ್ದ ಆಟಗಳಲ್ಲೊಂದು. ಅದರ ತುದಿಯಲ್ಲೊಂದು ಪಾರಿಜಾತದ  ಮರ. ದೊಡ್ಡಮ್ಮ ಕೃಷ್ಣ ಪಾರಿಜಾತ ತಂದ ಕಥೆ ಹೇಳುವಾಗೆಲ್ಲ ನಾನು ಈ ಗಿಡವೇನೇನೋ ಎಂದುಕೊಳ್ಳುತಿದ್ದೆ. ಮುಂಜಾನೆಯ ಮಂಜಿನಲ್ಲಿ ಎದ್ದು ದೇವರಿಗೆ ಪ್ರಿಯವೆಂದು ಕೆಳಗೆ ಬಿದ್ದ ಪಾರಿಜಾತದ ಹೂವುಗಳನ್ನು ಆಯ್ದು ತರುತ್ತಿದ್ದೆವು. ಒಂದು ದಿನ ಸುರಿದ ಭಾರೀ ಮಳೆಗೆ ಆ ಧರೆ ಕುಸಿದು ,ತುದಿಯ ಮರ ಕೆಳಗುರುಳಿತಂತೆ.ನಾವು ನೀರು ಸೇದಿ ತರುತ್ತಿದ್ದ ಬಾವಿಯ ಬಳಿಗೆ ಹೋದೆ. ರಾಟೆ ಹಗ್ಗ ಯಾವುದೂ ಇರಲಿಲ್ಲ.ಯಂತ್ರಗಳ ಆವಿಷ್ಕಾರಗಳ  ಪರಿಣಾಮ.!

ಬಾವಿ 
ನಾವು ಆಡುತ್ತಿದ್ದ ಪಗಡೆ,ಚನ್ನೆ ಮಣೆಗಳು ಕೇಳುವವರಿಲ್ಲದೆ ಮೂಲೆ ಹಿಡಿದಿದ್ದವು.ಯಾವಾಗಲೂ ಹಣ್ಣುಗಳಿಂದ ತುಂಬಿ ತೂಗುತ್ತಿರುತ್ತಿದ್ದ ಸಪೋಟ ಮರವಿರಲಿಲ್ಲ.ಬುಟ್ಟಿ ತುಂಬುವಷ್ಟು ಹಣ್ಣು ಕೊಡುತ್ತಿದ್ದ ಪೇರಳೆ ಮರವೂ ಇರಲಿಲ್ಲ. ಹಣ್ಣು ತಿನ್ನಲು ಬರುವ ಮಂಗಗಳು ಅಡಿಕೆ ತೋಟಕ್ಕೆ ನುಗ್ಗುತ್ತವೆಂದು ಮರಗಳನ್ನು ಕಡಿಸಿದ್ದರು. ಮಂಗಗಳನ್ನು ಓಡಿಸಲು ಅಜ್ಜ ಬಳಸುತ್ತಿದ್ದ ಕವಣೆ ಪಟ್ಟೆಯ ಕಾಲವೂ ಮುಗಿದಿತ್ತು. (ಕವಣೆ ಪಟ್ಟೆ ಎಂದರೆ ದಪ್ಪವಾದ ಬಟ್ಟೆಯ ಎರಡೂ ತುದಿಯಲ್ಲಿ ಹಗ್ಗಗಳನ್ನು ಕಟ್ಟಿರುತ್ತಾರೆ. ಮದ್ಯದಲ್ಲಿ ಕಲ್ಲು ಇಟ್ಟು  ಬೀಸಿ ಎಸೆಯುತ್ತಾರೆ.ಉತ್ತಮ ಗುರಿಕಾರರಾಗಿದ್ದರೆ ಕಲ್ಲು ತುಂಬಾ ದೂರದ ವರೆಗೂ ತಲುಪುತ್ತದೆ ). ನನ್ನೊಂದಿಗೆ ಕಾಡು ಸುತ್ತುವುದಕ್ಕೆ,ಪಕ್ಷಿವೀಕ್ಷಣೆಗೆ ಬರುತ್ತಿದ್ದ ಅಜ್ಜ ಹಾಸಿಗೆ ಹಿಡಿದು ಮಲಗಿದ್ದರು. ಗುಡ್ಡ ಹತ್ತುವುದಿರಲಿ ಮನೆಯಿಂದ ಹೊರಗೆ ಬರಲಾಗದಷ್ಟು ಶಕ್ತಿಹೀನರಾಗಿದ್ದರು. ಒಂದಾದ ಮೇಲೊಂದು ಕಥೆಗಳನ್ನು ಹೇಳುತ್ತಿದ್ದ  ದೊಡ್ಡಮ್ಮ ಕೂಡ ಮೊದಲಿನ ಉತ್ಸಾಹ ಕಳೆದು ಕೊಂಡಿದ್ದರು.ಜೊತೆಯಾಗಿದ್ದ ಗೆಳತಿ ಕೂಡ ಮದುವೆಯಾಗಿ ಬೇರೆ ಊರು ಸೇರಿದ್ದಳು.ಯಾಕೋ ಒಂಟಿ ಎಂಬ ಭಾವನೆ ಆವರಿಸಿತು.ನನ್ನನ್ನೊಮ್ಮೆ ಕೇಳಿಕೊಂಡೆ ನಾನೆಷ್ಟು ಬದಲಾಗಿರುವೆ ? ಎಂದು. ಹೌದು ನನ್ನಲ್ಲೇ ಎಷ್ಟೋ ಬದಲಾವಣೆ ಇದೆ. ಅಂತಹುದರಲ್ಲಿ ಇವೆಲ್ಲ ಬದಲಾಗದೆ ಹೇಗೆ ಉಳಿದಾವು ಎನಿಸಿತು. 

ಚನ್ನೆ ಮಣೆ 
ಮನೆಯ ಮುಂದಿದ್ದ ಸಪೋಟ ಗಿಡದೊಂದಿಗೆ ಒಂದು ಘಟನೆ ತಳುಕು ಹಾಕಿಕೊಂಡಿದೆ. ಯಾವಾಗಲೂ ಹಕ್ಕಿ ಗೂಡುಗಳನ್ನು ತಂದು ಮನೆಯ ಮುಂದಿನ ಗಿಡಗಳಲ್ಲಿ ಇಡುವುದು ನನ್ನ ಅಭ್ಯಾಸ. ಹಕ್ಕಿಗಳು ಬಂದು ಮೊಟ್ಟೆ ಇಡುತ್ತವೆ ಎಂಬ ಭರವಸೆಯಿಂದ ಕಾಯುತ್ತಿದ್ದೆ.ಯಾವುದಾದರೂ ಹಕ್ಕಿ ಮೊಟ್ಟೆ ಇಟ್ಟಿದೆಯೇ ಎಂದು ಪ್ರತಿ ದಿನವೂ ಒಂದು ಬಾರಿಯಾದರೂ ಪರಿಶೀಲಿಸುತ್ತಿದ್ದೆ. ಅವತ್ತೂ ಹಾಗೆ ಸಪೋಟ ಗಿಡದಲ್ಲಿ ತಂದಿಟ್ಟಿದ್ದ ಗೂಡಿನ  ಹತ್ತಿರ ಹೋಗಿ ನೋಡಿದೆ. ಹೊಸ ಅತಿಥಿಯೊಬ್ಬರು ಗೂಡೊಳಗೆ.!ಯಾರೆನ್ನುತ್ತೀರೋ .? ಕಂದು ಬಣ್ಣದ ಹಪ್ಪಟ್ಟೆ  ಹಾವು ಬೆಚ್ಚಗೆ ಮಲಗಿದೆ. ಗಿಡದ ಬುಡದಲ್ಲಿ ಇನ್ನೊಂದು ಹಾವು.!ಗೂಡಿಗೆ ಕೈ ಇಟ್ಟವಳು ಭಯದಿಂದ ಕಂಪಿಸಿದೆ.ಮನೆಗೆ ಓಡಿ ಬಂದವಳು ಇನ್ನೆಂದೂ ಮನೆಗೆ ಗೂಡು ತರುವ ಸಾಹಸಕ್ಕೆ ಹೋಗಲಿಲ್ಲ. 

ಕ್ಯಾಮೆರಾ ಕಣ್ಣಿನಲ್ಲಿ ಬೇಕೆನಿಸಿದ್ದನ್ನೆಲ್ಲ ಸೆರೆಹಿಡಿಯುತ್ತಿದ್ದಾಗ ಆಶ್ಚರ್ಯವೊಂದು ಕಾದಿತ್ತು.ಹಳೆಯದಾಗಿದ್ದರೂ ಹೊಸತನವನ್ನು ಉಳಿಸಿಕೊಂಡು ಬದಲಾಗದೆ, ನನ್ನೆಲ್ಲ ನೆನಪುಗಳಿಗೆ ಕುರುಹಾಗಿ ಉಳಿದಿತ್ತೊಂದು ಇರುವೆ ಗೂಡು. ಬಹಳ  ವರುಷಗಳಿಂದ ಇರುವ ಗೂಡು, ಎರಡು ಮೂರು ತಲೆಮಾರುಗಳು ಕಳೆದರೂ ಎಲ್ಲದಕ್ಕೂ ಸಾಕ್ಷಿ ಎಂಬಂತೆ ಅಲ್ಲಿತ್ತು. ಮನೆಯ ಸುತ್ತ ಮುತ್ತ ಸುಮಾರು ನಾಲ್ಕು ಅಂತಹ ಗೂಡುಗಳಿದ್ದವು.ಹುಡುಕಿದಾಗ  ನನಗೆ ದೊರಕಿದ್ದು ಎರಡು ಮಾತ್ರ. ನಾವು (ನಾನು,ನನ್ನ ಗೆಳತಿ) ಅಪರೂಪಕ್ಕೊಮ್ಮೆ ಅವುಗಳಿಗೆ ಸಕ್ಕರೆ ಹಾಕುತ್ತಿದ್ದೆವು. ಇರುವೆಗಳು ಸಾಲಾಗಿ ಬಂದು ಸಕ್ಕರೆಯನ್ನು ಹೊತ್ತೊಯ್ಯುವ ದೃಶ್ಯ ನೋಡುತ್ತಾ ಕುಳಿತಿರುತ್ತಿದ್ದ ನಮಗೆ ಸಮಯದ ಪರಿವೇ ಇರುತ್ತಿರಲಿಲ್ಲ.

ಇರುವೆ ಗೂಡು 
ಗುಬ್ಬಿ ಎನ್ನುವ ಚಿಕ್ಕ ಹುಳಗಳ ಜೊತೆ ಆಡುತ್ತಿದ್ದದ್ದು ಇನ್ನೂ ಮರೆತಿಲ್ಲ .ಮಣ್ಣಿನಲ್ಲಿ ಅವಿತು ಕುಳಿತಿರುತ್ತವೆ ಇವು. ಈ ಹುಳಗಳಿಗೆ ಬೇರೆ ಏನಾದರು ಹೆಸರು ಇದೆಯೇನೋ ನನಗೆ ತಿಳಿಯದು. ನಾವು ಗುಬ್ಬಿ ಎಂದೇ ಕರೆಯುತ್ತೇವೆ.ಅವುಗಳನ್ನು ಹುಡುಕಿ ಕೈ ಮೇಲೆ ಬಿಟ್ಟುಕೊಂಡಾಗ ಕಚಗುಳಿಯೆನಿಸುತ್ತದೆ.ಮುಂದೆ ನಡೆಯಲು  ದಾರಿ ತಿಳಿಯದಿದ್ದಾಗ ದಿಕ್ಸೂಚಿಗಳಾಗಿ ಉಪಯೋಗಿಸಿಕೊಳ್ಳುತ್ತಿದ್ದೆವು. ಕೈಮೇಲೆ ಬಿಟ್ಟಾಗ ಅದು ಚಲಿಸಿದ ದಿಕ್ಕೇ ನಮಗೆ ದಾರಿ. ನಾನು ಅವುಗಳಿಗೆ ಸಹಾಯ ಮಾಡಲು ತುಂಬಾ ಪ್ರಯತ್ನಿಸಿದ್ದೆ.! ಹಿಟ್ಟು ಸಾಣಿಸುವ ಪಾತ್ರೆಯ ಸಹಾಯದಿಂದ ಮಣ್ಣು ಸಾಣಿಸಿ ನುಣುಪಾದ ಮಣ್ಣು ಶೇಖರಿಸಿ ಗುಬ್ಬಿಗಳನ್ನೆಲ್ಲ ಹುಡುಕಿ ಅಲ್ಲಿಗೆ ತಂದು ಬಿಡುತ್ತಿದ್ದೆ.ಸ್ವಲ್ಪ ಹೊತ್ತಾದ ಮೇಲೆ ಹೋಗಿ ನೋಡಿದರೆ ಒಂದಾದರೂ ಇರಬೇಡವೇ .! ಪತ್ತೆಯೇ ಇರುತ್ತಿರಲಿಲ್ಲ.ಕೊನೆಗೆ ವ್ಯರ್ಥ ಪ್ರಯತ್ನವೆಂದು ಸುಮ್ಮನಾಗುತ್ತಿದ್ದೆ.ಇಂದೆಲ್ಲಾದರು  ನನ್ನ ಕ್ಯಾಮೆರಾಕ್ಕೆ ಕಾಣಸಿಗುತ್ತವೇನೋ ಎಂದು ಆತುರಾತುರವಾಗಿ ಹುಡುಕಿದೆ.ನೆಲದಲ್ಲಿ ಚಿಕ್ಕ ಚಿಕ್ಕ ಗುಬ್ಬಿ ಗೂಡುಗಳು. ಮತ್ತೆ ಹಳೆಯ ಆಟ ಆಡುತ್ತ ಕುಳಿತಿದ್ದೆ  ಅಮ್ಮನ ಕರೆ ಬರುವವರೆಗೂ.. "ಬಂದೆ ಅಮ್ಮಾ! ಎರಡ್ನಿಮ್ಶ" ಅಂತ ಹೇಳಿ ಒಂದೆರಡು ಛಾಯಾಚಿತ್ರ ತೆಗೆದುಕೊಂದು ಒಳಗೆ ಓಡಿದೆ. 

ಗುಬ್ಬಿಯ ಗೂಡು 

ಗುಬ್ಬಿ ಹುಳ 
ಅವತ್ತಿಂದ ಇವತ್ತಿಗೆ ಎಲ್ಲ ಬದಲಾಗಿತ್ತು.ಮನುಷ್ಯ,ಮನಸ್ಸು ಎರಡೂ ಕಾಲದ ಸೆಳೆತಕ್ಕೆ ಸಿಕ್ಕಿದ್ದವು. ಆದರೆ ಚಿಕ್ಕ ಇರುವೆಯ ಗೂಡು ಹಾಗೇ  ಇತ್ತು.ನಾನು  ನಾನೆಂಬ ಅಹಂಕಾರದಿಂದ ಮೆರೆಯುವ ಮನುಷ್ಯ, ಪ್ರಕೃತಿಯ ಮುಂದೆ ಎಷ್ಟು ಕುಬ್ಜನಲ್ಲವೇ.?
"ಕಾಲಾಯ ತಸ್ಮೈ ನಮಃ.. " 

4 comments:

  1. ಉತ್ತಮ ಪದಜೋಡನೆ, ನವಿರಾದ ವಾಕ್ಯಗಳಿಂದ ನಿಮ್ಮ ನೆನಪಿನ ಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತೀರಿ.
    ಜೊತೆಗೆ ಓದುಗರಿಗೆ ಸುಲಭವಾಗಲೆಂದು ಕೆಲವು ಕೇಳರಿಯದ ಪದಗಳ ಬಗ್ಗೆ ವಿಶ್ಲೇಷಣೆಯೂ ಇದೆ. ಇದು ಸಂತೋಷದಾಯಕ ಬೆಳವಣಿಗೆ. ನಿಮ್ಮ ಅಪೂರ್ವ ಬರವಣಿಗೆಯನ್ನು ಗೌರವಿಸಲು ನಾ ಸದಾ ಸಿದ್ದ. ನೆನಪಿನ ನೋಟಗಳು ಮುಂದುವರೆಯಲಿ.

    ReplyDelete
    Replies
    1. ನಿಮ್ಮ ಬೆಂಬಲ ಯಾವಾಗಲೂ ಹೀಗೆಯೇ
      ಇರಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು.

      Delete
  2. navu gubbi aata adthidvi kane.aginnu nininnu chikkolu. ninna article ninda nannurina haleya nenapugalella marukalisithu. chenagide.

    ReplyDelete
    Replies
    1. ellaru gubbi jothe aadikondavare..!! channagiratte alva akka?

      Delete