Tuesday 31 December 2013

ಡಿಸೆಂಬರ್ ೩೧...

                                        

ಇವತ್ತು ವರ್ಷದ ಕೊನೆಯ ದಿನ. ಏನಾದ್ರು ಬರೆಯೋಣವೆಂದುಕೊಂಡೆ. ನಿನ್ನೆ ನನ್ನ ಸ್ನೇಹಿತರೊಬ್ಬರು ದೆವ್ವದ ಕಥೆಗಳನ್ನು ಹೆಚ್ಚಾಗಿ ಬರೆಯಲು ಹೇಳಿದ್ದರು. ಅಯ್ಯೋ!!ನನಗೇನು ಗೊತ್ತು ದೆವ್ವಗಳ ಬಗ್ಗೆ ಅಂತ ನಾನು ಕೇಳಿದ್ದಕ್ಕೆ, ಕಲ್ಪನೆ ಮಾಡಿ ಬರೆಯುವಂತೆ ಪ್ರೇರೇಪಿಸಿದರು. ಅಂತಹ ಕಲ್ಪನಾಶಕ್ತಿ ಇಲ್ಲವೆಂದೆ. ಆದರೂ ನೆನಪಿನ ಗೂಡಿನಲ್ಲಿ ಮತ್ತೊಮ್ಮೆ ಹುಡುಕಿದರೆ ಅಲ್ಲೆಲ್ಲೋ ಕಳೆದುಹೋಗಿದ್ದ ನೆನಪು ಮಸುಕಾಗಿ ಕಾಣಿಸಿತು..

ಡಿಸೆಂಬರ್ ೩೧..ಏನಂತಹ  ಮಹತ್ವವಿದೆ ಈ ದಿನಾಂಕಕ್ಕೆ ಎಂದು ಆಲೋಚಿಸಿದ್ದಿದೆ.ಕನ್ನಡದಲ್ಲಿ ಈ ಹೆಸರಿನ ಒಂದು ಚಲನಚಿತ್ರವೂ ಇದೆ.ನನಗೆ ಇದೊಂದು ಘಟನೆ ನೆನಪಾಗುತ್ತಿದೆ.ಅದನ್ನು ಹೇಳುವುದಕ್ಕಿಂತ ಮೊದಲು ನನಗೆ ದೆವ್ವಗಳ ಅಸ್ತಿತ್ವದ ಬಗ್ಗೆ ಇದ್ದ ಅಪಾರ ನಂಬಿಕೆಯ ಬಗ್ಗೆ ಹೇಳಲೇಬೇಕು. ಇವತ್ತಿಗೂ ನಾನು ಭಯಾನಕ ಚಿತ್ರಗಳನ್ನು ನೋಡುವುದಿಲ್ಲ.ವಿಪರೀತ ಭಯವೆನಿಸುತ್ತದೆ.ಮಲಗಿರುವ  ಮಂಚದ ಕೆಳಗೂ ಯಾರೋ ಅವಿತು ಕುಳಿತಿರುವಂತೆ ಭಾಸವಾಗುತ್ತದೆ.!!ನಮ್ಮ ತೀರ್ಥಹಳ್ಳಿಯಲ್ಲಿ ಚರ್ಚ್ ಒಂದಿದೆ. ಅದರ ಬೆನ್ನಿಗೇ ಕೋಳಿಕಾಲು ಗುಡ್ಡ. ಚರ್ಚ್ ಹಿಂದೆ ಖಾಲಿ ಜಾಗವಿದ್ದ ನೆನಪು. ಆ  ಜಾಗದಲ್ಲಿ ದೆವ್ವದ ಉಗುರು ಸಿಕ್ಕಿದೆ ಎಂಬ ವದಂತಿ ಹಬ್ಬಿತ್ತು..ನಾನು ಇಂತಹ ವಿಷಯಗಳನ್ನು ಪ್ರಶ್ನಿಸುವ ಗೋಜಿಗೇ ಹೋಗುತ್ತಿರಲಿಲ್ಲ.ಮುಗ್ಧವಾಗಿ ನಂಬಿದ್ದೆ. ದೆವ್ವದ ಉಗುರು ಹೇಗಿರುತ್ತದೆ .?ಸಿಕ್ಕಿದ್ದು ದೆವ್ವದ ಉಗುರೇ ಎನ್ನುವುದಕ್ಕೆ ಪುರಾವೆಯಾದರು ಏನು.? ಎಂದೆಲ್ಲ ಆಲೋಚಿಸಲು ಸಮಯವೆಲ್ಲಿರುತ್ತಿತ್ತು  ಬಿಡಿ..

ನಾನು ಎರಡನೇ ತರಗತಿಯಲ್ಲಿ ಇದ್ದಾಗ ನಡೆದದ್ದದಿದು.ನನಗೆ ಒಬ್ಬಳು ಗೆಳತಿ.ದೆವ್ವಗಳ ಬಗ್ಗೆ ಅದ್ಭುತವಾಗಿ ವರ್ಣಿಸುತ್ತಿದ್ದಳವಳು.ಬೆಳಿಗ್ಗೆ ನಾನು ಬೇಗ ಶಾಲೆಗೆ ಹೋಗುತ್ತಿದ್ದೆ. ಅವಳು ಬರುತ್ತಿದ್ದಳಾದ್ದರಿಂದ ನಮ್ಮ ಗಹನವಾದ ಚರ್ಚೆಗೆ ಸಮಯ ದೊರಕುತ್ತಿತ್ತು.ಅದು ೧೯೯೭ ರ ಕೊನೆಯ ದಿನ. ಎಂದಿನಂತೆ ಬೇಗ ಹೋಗಿದ್ದ ನನಗೆ ಅವಳ ಕಥೆಯೊಂದು ಕಾದಿತ್ತು. ಆದರೆ ಅದು ನನ್ನ ರಾತ್ರಿಯ ನಿದ್ರೆಯನ್ನೇ ಕೆಡಿಸುವುದೆಂಬ ಸಣ್ಣ ಸುಳಿವೂ ಇರಲಿಲ್ಲ ನನಗೆ..ಡಿಸೆಂಬರ್ ೩೧ ರಾತ್ರಿ ಒಂದು ರಾಕ್ಷಸ ಮಗುವಿನ ಜನನವಾಗುತ್ತದೆ. ಅದು ವಿಪರೀತವಾಗಿ ಬೆಳೆದಿರುವುದರಿಂದ ಅದನ್ನು ಯಾರೂ ಹಿಡಿಯಲಾರರು.ಅದು ಈ ದಿನಾಂಕದಂದು ಜನಿಸಲು ಕಾಯುತ್ತಿದೆ.ಸ್ವಾರಸ್ಯವೇನೆಂದರೆ ಅದು ಹುಟ್ಟಿದ ತಕ್ಷಣ ದೊಡ್ಡ ಶಬ್ದವೊಂದು ಕೇಳುತ್ತದೆ.ಅದು ದೆವ್ವದ ಕೂಗು. ಅದನ್ನು ಕೇಳಿದವರೆಲ್ಲ ಕಿವುಡಾಗುತ್ತಾರೆ.ಇದು ಕಥೆ. ಇದು ಅವಳು ಹೇಳಿದ ಕಟ್ಟು ಕಥೆಯೋ ಏನೋ ನಾನಂತೂ ಗಾಬರಿಯಾಗಿದ್ದೆ.

ನನಗೆ ಭಯವಾದಾಗೆಲ್ಲ ತೀರ್ಥಹಳ್ಳಿಯ ಮಾರಿಕಾಂಬ ದೇವಸ್ಥಾನಕ್ಕೆ ಹೋಗಿಬರುವುದು ವಾಡಿಕೆ."ಸಂಕಟ ಬಂದಾಗ ವೆಂಕಟರಮಣನಲ್ಲವೇ".ಅವತ್ತೂ ಹೋಗಿ ದೇವರಿಗೆ ನಮಸ್ಕರಿಸಿ,ಯಾರಿಗೂ ಆ ಕೂಗು ಕೇಳದೆ ಇರಲಿ ಎಂದು ಪ್ರಾರ್ಥಿಸಿದೆ. ದೇವರ ಆಶೀರ್ವಾದದ ಮೇಲೆ ಹೆಚ್ಚಿನ ನಂಬಿಕೆ ಇತ್ತು. ಮನೆಗೆ ಬಂದೊಡನೆ ಅಮ್ಮನಿಗೆ ವರದಿ ಒಪ್ಪಿಸಿದೆ. ಭಯಭೀತರಾಗುತ್ತಾರೆಂದುಕೊಂಡರೆ, ಆಶ್ಚರ್ಯ!!ನಿರೀಕ್ಷಿಸಿದ್ದದ್ದೇನು ನಡೆಯದೆ ಅಮ್ಮ ಸುಮ್ಮನೆ ನಕ್ಕು ಒಳಗೆ ಹೋಗಬೇಕೆ.? ನನಗೆ ಕೋಪ ಬಂದಿತು. ಇವರಿಗೆ ಪರಿಸ್ಥಿತಿಯ ಅರಿವಿಲ್ಲ, ನಾನೇ ಏನಾದರೂ ಮಾಡಬೇಕೆಂದು ಕಿಟಕಿ ಗಾಜುಗಳನ್ನು ಭದ್ರವಾಗಿ ಹಾಕಿದೆ. ಪರದೆಗಳನ್ನು ಬಲವಾಗಿ ಕಟ್ಟಿದೆ.ಕಿವಿಯಲ್ಲಿ ಹತ್ತಿಯ ಉಂಡೆಗಳನ್ನು ಇಟ್ಟುಕೊಂಡು ರಾಮ ನಾಮ ಸ್ಮರಣೆ ಮಾಡುತ್ತಾ ಮಲಗಿದೆ.

ಒಮ್ಮೆಲೆ ಎಚ್ಚರಾಯಿತು. ಪಕ್ಕದಲ್ಲಿ ಅಪ್ಪ ,ಅಮ್ಮ ಇಬ್ಬರೂ ನಿದ್ರಿಸುತ್ತಿದ್ದಾರೆ. ದುರದೃಷ್ಟವಶಾತ್ ಕೇಳಿದ ಕಥೆಯೆಲ್ಲ ಮತ್ತೆ ಸ್ಮೃತಿಗೆ ಬಂತು. ಯಾಕಾದರೂ ಕೇಳಿದೆನೋ ಹಾಳು  ಕಥೆಯನ್ನ ಎಂದು ಹಲುಬಿದೆ. ಆದರು ನಿದ್ರಾದೇವಿಯ ಸುಳಿವಿಲ್ಲ. ಎದ್ದು ಗಂಟೆ ನೋಡೋಣವೆಂದರೆ ಆ ಸಮಯದಲ್ಲಿ ನನಗೇನಾದರೂ ಆ ಕೂಗು ಕೇಳಿಸಿದರೆ ಎಂಬ ಭಯ.ಬೆರಳುಗಳಿಂದ ಕಿವಿಯನ್ನು ಬಲವಾಗಿ ಮುಚ್ಚಿಕೊಂಡು ಮಲಗಿದೆ. ಎಷ್ಟು ಒದ್ದಾಡಿದರೂ ನಿದ್ರೆ ಬರಲೊಲ್ಲದು. ಯಾವ ದೇವರಿಗೆ ಬೇಡಿಕೊಂಡೆನೋ ಕೊನೆಗೂ ನಿದ್ರೆ ಆವರಿಸಿತು.

ಬೆಳಿಗ್ಗೆ ಎದ್ದು ನೋಡಿದರೆ ಎನೂ ಆಗಿಯೇ ಇಲ್ಲ.!!ಆದರೆ ನಾನದನ್ನು ಕಟ್ಟು ಕಥೆ ಎಂದು ಅಲ್ಲಗಳೆಯಲು ತಯಾರಿರಲಿಲ್ಲ. ದೇವಸ್ಥಾನಕ್ಕೆ ಹೋಗಿ ಬಂದಿದ್ದರಿಂದ ದೇವರ ಶ್ರೀರಕ್ಷೆ ಇತ್ತು. ಹಾಗಾಗಿ ಯಾವ ಅನಾಹುತವೂ ಸಂಭವಿಸಲಿಲ್ಲ ಎಂದು ನನ್ನನ್ನು ನಾನೇ ಸಮರ್ಥಿಸಿಕೊಂಡೆ. ಅಮ್ಮ ಕೇಳಿದರೂ ನನ್ನ ವಾದವನ್ನು ಬಿಟ್ಟುಕೊಡಲು ಒಪ್ಪಲಿಲ್ಲ.ನನ್ನ ವಿತಂಡ ವಾದಕ್ಕೆ ಎದುರು ಹೇಳಲಾಗದೆ ಅಮ್ಮ  ಸುಮ್ಮನಾಗಿದ್ದರು.ಇವತ್ತಿಗೂ ಇದನ್ನು ನೆನೆಸಿಕೊಂಡಾಗ ಅರಿವಿಲ್ಲದೆಯೇ ಮುಗುಳ್ನಗೆಯೊಂದು ಹರಿಯುತ್ತದೆ.


No comments:

Post a Comment