Tuesday 5 April 2016

ಮರೆತ ದಾರಿಯ ಹುಡುಕುತ್ತಾ ...

ಮುಂಜಾನೆಯ ಸೂರ್ಯೋದಯವನ್ನು ನಿಂತು ಆಸ್ವಾದಿಸುವಷ್ಟೂ ಸಮಯದ ಅಭಾವ ನಮಗೆ. ಬೇಗ ಕೆಲಸಕ್ಕೆ ಹೊರಟರೆ ಆಯಿತು. ತಡವಾದಷ್ಟೂ ವಾಹನಗಳ ಸಂದಣಿ ಹೆಚ್ಚಾಗುತ್ತದೆ.ಹದಿನೈದು ನಿಮಿಷದಲ್ಲಿ ತಲುಪಬಹುದಾದ ದಾರಿಯನ್ನು ಕ್ರಮಿಸಲು ಎರಡು ಗಂಟೆಯಾದರೂ ಆದೀತು. ಹೀಗೆಂದುಕೊಂಡೇ ಪ್ರತಿದಿನವೂ ಗಡಿಬಿಡಿಯಲ್ಲಿ ಹೊರಡುವುದು ಅಭ್ಯಾಸವಾಗಿದೆ.ನಾನು ಆದಷ್ಟು ಬೇಗ ಹೊರಟು, ಒಂದು ಕಿಟಕಿ ಪಕ್ಕದ ಜಾಗ ಹಿಡಿದು ಕೂತರೆ ಸಾಕೆಂದುಕೊಂಡೇ ದಿನವೂ ಬಸ್ ಹತ್ತಿರುತ್ತೇನೆ.ಹಾಗೆ ಕೂತ ಮರುಕ್ಷಣವೇ ನೆನಪುಗಳು ಧಾಳಿ ಇಡಲು ಪ್ರಾರಂಭಿಸುತ್ತವೆ. ಕಿಟಕಿಗೆ ಆನಿಸಿ ಕುಳಿತು ರಸ್ತೆಯಲ್ಲಿನ ಕಾರುಗಳು, ಬಸ್ ,ಹೊಗೆ ,ಧೂಳು, ರಸ್ತೆ ದಾಟಲು ಪರದಾಡುವ ಜನರು ಇವೆಲ್ಲವುಗಳನ್ನು ನೋಡುವಾಗ  ನಡುವೆ ನನಗೆ ನೆನಪಾಗುವುದು ನನ್ನೂರು. 

ನನ್ನೂರು ಮಲೆನಾಡು.ತೀರ್ಥಹಳ್ಳಿಯ ಸಮೀಪದ ಒಂದು ಹಳ್ಳಿ. ವಿದ್ಯಾಭ್ಯಾಸಕ್ಕಾಗಿ ತೀರ್ಥಹಳ್ಳಿಗೆ ಹೋಗಬೇಕಿತ್ತು.ಬಸ್ಸಿನ ವ್ಯವಸ್ಥೆ ಸರಿಯಾಗಿ ಇರಲಿಲ್ಲದ ಕಾರಣ ಒಂದು ಆಟೋ ದಲ್ಲಿ ನಮ್ಮನ್ನು ಶಾಲೆಗೆ ಕಳಿಸುವ ಏರ್ಪಾಡು ಮಾಡಿದ್ದರು. ಆದರೂ ನಮಗೆ ನಡೆಯುವುದು ತಪ್ಪಿರಲಿಲ್ಲ. ಮೊದಲು ಸಾಲು ಸಾಲು ಅಡಿಕೆ ತೋಟಗಳು, ಚಿಕ್ಕ ಹಳ್ಳಗಳು ,ಅದನ್ನು ದಾಟಲು ಸಾರ.ಅಲ್ಲಲ್ಲಿ ಕಾಣುವ ಏಡಿಗಳನ್ನು,ಚಿಕ್ಕ ಹಾವುಗಳನ್ನು ನೋಡುತ್ತಾ  , ಹೆದರಿದರೂ ಪಕ್ಕದಲ್ಲಿದ್ದವರಿಗೆ ನಾವು ಕಂಡ ಅದ್ಭುತವನ್ನು ತೋರಿಸುತ್ತಾ ಮೆಲ್ಲಮೆಲ್ಲಗೆ ಅಡ್ಡಡ್ಡವಾಗಿ ಸಾರದ ಮೇಲೆ ಹೆಜ್ಜೆ ಇಡುತ್ತಾ,ಅಪರೂಪಕ್ಕೊಮ್ಮೆ ಕಾಣುವ ನವಿಲು,ಮೊಲಗಳ ನೋಡಿ ಖುಷಿ ಪಡುತ್ತಾ ತೋಟ ದಾಟುತ್ತಿದ್ದೆವು. ಬೇಸಿಗೆಯ ಕಥೆ ಇದಾದರೆ ಮಳೆಗಾಲದಲ್ಲಿ, ಮೇಲಿಂದ ದಬ ದಬ ಬೀಳುವ ಮಳೆಯಿಂದ ತಪ್ಪಿಸಿಕೊಂಡು ಹೋಗುವುದರೊಳಗೆ ಸಾಕೆನಿಸಿರುತ್ತಿತ್ತು. ಒದ್ದೆಯಾದ ಬಟ್ಟೆ, ಹೊರಲಾಗದಷ್ಟು ಭಾರದ ಶಾಲೆಯ ಚೀಲ, ಹಾವಸೆಗಳಿಂದ ಹಸುರಾದ ನೆಲ,ಅಲ್ಲೆಲ್ಲೋ ಜಾರಿ ಬಿದ್ದು ಯಾರಾದರು ನೋಡಿದರೆ ಅತ್ತು ಕಣ್ಣೀರು ತಂದುಕೊಂಡು ಸಮಾಧಾನ ಮಾಡಿಸಿಕೊಂಡು, ಯಾರೂ ಇರದಿದ್ದರೆ ಲಂಗ ಜಾಡಿಸಿಕೊಂಡು ಎನೂ ಆಗಿಲ್ಲವೆಂದು ನಮಗೆ ನಾವೇ ಸಾಂತ್ವನ ಹೇಳಿಕೊಂಡು ಮುನ್ನಡೆದಿದ್ದ ದಿನಗಳವು.ತೋಟ ದಾಟಿದರೆ ಗೇರು ಗುಡ್ಡ. ಗೇರು ಗುಡ್ಡದಲ್ಲಿ ಇನ್ನೊಂದಷ್ಟು ಕಾರುಭಾರು.ಹಾರಿದ ಹಕ್ಕಿಯ ಹಿಂದೆ ಗೂಡು ಹುಡುಕುತ್ತಾ ಹಿಂಬಾಲಿಸುತ್ತಿದ್ದೆವು.ಮರದ ತುಂಬೆಲ್ಲ ನೀಲಿ ಮಣಿಗಳಂತೆ ಜೊಂಪಾಗಿ ಬೆಳೆದ ನೇರಳೆ ಹಣ್ಣಿನ ಭಾರಕ್ಕೆ ತೂಗಿ ತೊನೆಯುತ್ತಿರುವ ರೆಂಬೆಗಳನ್ನು ಎಳೆದು ಹಣ್ಣು ಉದುರಿಸಿ ಬಾಯಿ ನೀಲಿ  ಮಾಡಿಕೊಳ್ಳುತ್ತಿದ್ದೆವು.ಗುಡ್ಡ ಹತ್ತಿಳಿದರೆ ಮತ್ತೆ ಸಿಗುವ ಅಡಿಕೆ ತೋಟ, ದೂರದಲ್ಲೊಂದು ಒಂಟಿ ಮನೆ ಇವೆಲ್ಲವನ್ನು  ದಾಟಿ ಸಾಗುವಷ್ಟರಲ್ಲಿ ತಡವಾಗಿ ಆಟೋದಲ್ಲಿ ನಮಗಾಗಿ ಕಾಯುತ್ತಿದ್ದ ಎಲ್ಲರೂ ನಮ್ಮನ್ನು ಬೈಯ್ಯುವಂತಾಗುತ್ತಿತ್ತು. ಬಸ್ ನಿಲ್ದಾಣಕ್ಕೆ ಹೋಗಲು ಸಹ ಅದೇ ದಾರಿಯಾಗಿತ್ತು. ಎಲ್ಲರೂ ಅದೇ ದಾರಿಯನ್ನು ಬಳಸುತ್ತಿದ್ದರು ಕೂಡ.




ವರ್ಷಗಳು ಕಳೆದಂತೆ ನಗರೀಕರಣದ ಪ್ರಭಾವ ಎಲ್ಲ ಕಡೆಯೂ ಪಸರಿಸತೊಡಗಿತು.ನಾವೆಲ್ಲ ಊರು ಬಿಟ್ಟು ಹೊರಗೆ ಬಂದು ಬೆಂಗಳೂರು ಸೇರಿಕೊಂಡೆವು. ಹಳ್ಳಿಗಳಲ್ಲಿ ಚಿಮಣಿ ದೀಪದ ಬದಲು ವಿದ್ಯುತ್ ದೀಪ ಬಂತು.ಹಿಂದೆ ಬರುತ್ತಿದ್ದ ಪತ್ರಗಳು ಮಾಯವಾದವು. ನಾವು ಕ್ಷೇಮ,ನೀವು ಕ್ಷೇಮವೇ ಎಂಬ ಮೊದಲ ಸಾಲುಗಳಿಗೆ ಬದಲಾಗಿ ದೂರವಾಣಿಯಲ್ಲಿ ಹಲೋ ಹೇಗಿದ್ದೀರ ಎನ್ನುವ ಮೊದಲ ಮಾತೇ ಅಪ್ಯಾಯವೆನಿಸತೊಡಗಿತು.ಎತ್ತಿನ ಗಾಡಿ ,ಸೈಕಲ್ ಗಳೆಲ್ಲ ಮಾಯವಾಗಿ ಮೋಟಾರ್ ಬೈಕ್  ಗಳು ಬಂದವು. ಊರಿಗೆ ಕಾಲು ದಾರಿ ಇರುವಂತೆಯೇ ಅಗಲವಾದ ಮತ್ತೊಂದು ರಸ್ತೆಯೂ ಆಯಿತು.ದೊಡ್ಡ ರಾಜಮಾರ್ಗವಿರುವಾಗ ಈ ಕಾಲುದಾರಿಯಲ್ಲಿ ನಡೆಯುವುದೆಂತು ಎಂದುಕೊಂಡರು ಎಲ್ಲರೂ. ಅಡಿಕೆ ಬೆಲೆ ಜಾಸ್ತಿ ಆದದ್ದೇ ಹೆಳೆ ಎಲ್ಲರ ಮನೆಗೊಂದು ದ್ವಿಚಕ್ರ ವಾಹನ ಬಂದೇ ಬಿಟ್ಟಿತು.ಆಗ ಗುಡು ಗುಡು ಸದ್ದು ಮಾಡುತ್ತಾ ಹೊಗೆಯುಗುಳುತ್ತಾ ಓಡುತ್ತಿದ್ದ ವಾಹನಗಳನ್ನು ನೋಡುವುದೇ ಮೋಜೆನಿಸಿತ್ತು.


ಈಗ ಎಲ್ಲರ ಮನೆಯಲ್ಲೂ ಸ್ವಂತ ವಾಹನವಿರುವವುದರಿಂದ ಯಾರೂ ಬಸ್ ನಿಲ್ದಾಣದವರೆಗೆ ನಡೆಯುವುದಿಲ್ಲ. ಬರುವ ಒಂದೇ ಬಸ್ಸಿಗಾಗಿ ಕಾಯುತ್ತಾ ಅದು ಬಾರದಿದ್ದಾಗ ದಾರಿಯಲ್ಲಿ ಸುಳಿದವರ ಬಳಿ "ಬಸ್ ಹೋಯ್ತಾ ಅವಾಗಿಂದ ಕಾಯ್ತಾ ಇದೀನಿ" ಅಂತ ಕೇಳುವ ಪ್ರಮೇಯವೂ  ಇಲ್ಲ. ಅಷ್ಟೊಂದು ವ್ಯವಧಾನವೂ ಇಲ್ಲ. ನಾವು ಶಾಲೆಗೆ ಹೋಗುತ್ತಿದ್ದ ಆ ದಾರಿಯಲ್ಲಿ ಗಿಡಗಳು,ಮುಳ್ಳುಪೊದೆಗಳು ಬೆಳೆದಿವೆ.ಮನುಷ್ಯರ ಸುಳಿವಿಲ್ಲದೇ ಕಾಲುದಾರಿಯಲ್ಲಿ ಹುಲ್ಲು ಚಿಗುರಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ನಿಂದ ತಪ್ಪಿಸಿಕೊಳ್ಳಲು ಸಿಗ್ನಲ್ ಇರುವ ದಾರಿಯನ್ನು ಬಿಟ್ಟು ಬೇರೆಡೆಯಿಂದ ಸಾಗುವಾಗ ಮನಸ್ಸು ಹೋಲಿಕೆಯನ್ನು ಹುಡುಕುತ್ತದೆ.ತೋಟಗಳಿಗೆ ನೀರು ಬಿಟ್ಟಾಗ ಚಿಲುಮೆಯಂತೆ ಹಾರುವ ನೀರಿನ ಹನಿಗಳಿಂದ ತಪ್ಪಿಸಿಕೊಳ್ಳಲು ನಾವು ಬೇರೆ ದಾರಿ ಹುಡುಕಿದ್ದು ನೆನಪಾಗುತ್ತಿದೆ.ಅಲ್ಲೀಗ ಗೊಂಚಲು ಗೊಂಚಲಾಗಿ ತುಂಬಿ ನಿಂತ ನೇರಳೆ ಹಣ್ಣು ಕೆಳಗೆ ಬಿದ್ದು ನೆಲವೆಲ್ಲಾ ನೀಲಿಯಾಗಿರಬಹುದೇನೋ.!ಯಾವುದೋ ಚಿಕ್ಕ ಪೊದೆಯಲ್ಲಿ ಸೂರಕ್ಕಿಯ ಗೂಡು ತೂಗುತ್ತಿರಬಹುದೆನೋ.!ಕುಣಿದ ನವಿಲ ಗರಿಯುದುರಿ ಆ ದಾರಿಯಲ್ಲೇ ಹೆಕ್ಕುವರಿಲ್ಲದೆ ಬಿದ್ದಿರಬಹುದೇನೋ.!ಇವತ್ತು ಮತ್ತೆ ಕಿಟಕಿಯ ಬದಿಗೆ ಜಾಗ ಸಿಕ್ಕಿದೆ.ಸಿಗ್ನಲ್ ಕೆಂಪು ದೀಪ ತೋರಿಸುತ್ತಿದೆ. ನೆನಪುಗಳು ನವಿರಾಗಿ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಿವೆ. ಮತ್ತೀಗ ನಾನು ಕಳೆದುಹೋದ ನೆನಪುಗಳೊಳಗಿಳಿದು ಆ ಮರೆತ ದಾರಿಯನ್ನು ಹುಡುಕುತ್ತಿದ್ದೇನೆ... 

No comments:

Post a Comment