Friday 1 April 2016

ಶಿರಸಿಯನ್ನರಸಿ - ಭಾಗ ೩

ಸಾತೊಡ್ಡಿ, ಮಾಗೋಡು ಜಲಪಾತ

ಚಾರ್ಮಾಡಿ ಚಾರಣಕ್ಕೆ ಹೋಗಿದ್ದಾಗ ಹರ್ಷನ ಹತ್ತಿರ ಕೇಳಿದ್ದೆ ಈ ಸಲ ಒಂದೂ ಜಲಪಾತಕ್ಕೆ ಕರೆದುಕೊಂಡು ಹೋಗಿಲ್ಲ ನೀನು ಅಂತ. ಅದನ್ನ ನೆನಪಿಟ್ಟುಕೊಂಡವನಂತೆ ಶಿರಸಿಗೆ ಹೋದಾಗ ಸಾಲು ಸಾಲು ಜಲಪಾತಗಳಿಗೇ ಕರೆದೊಯ್ದಿದ್ದ. ಹಸೆಹಳ್ಳ, ವಿಭೂತಿ ಆದಮೇಲೆ ಮರುದಿನ ಹೋಗಿದ್ದು ಸಾತೊಡ್ಡಿ ಮತ್ತೆ ಮಾಗೋಡಿಗೆ. ಕೊನೆಯಲ್ಲಿ ಜೇನುಕಲ್ಲು ಗುಡ್ಡದ ಸೂರ್ಯಾಸ್ತ.

ಸಾತೊಡ್ಡಿ ಜಲಪಾತ ತುಂಬಾ ಎತ್ತರವಾದದ್ದೇನೂ ಅಲ್ಲ.ಆದರೂ ಅಷ್ಟೊಂದು ಜನ ಬರಲು ಕಾರಣ ಅದರ ಸೌಂದರ್ಯ ಎಂದರೆ ಅತಿಶಯೋಕ್ತಿ ಆಗಲಾರದೇನೋ. ಎಷ್ಟೊಂದು ಚಲನಚಿತ್ರಗಳಲ್ಲಿ ಸಹ ಇದನ್ನು ನೋಡಬಹುದು. ಮಳೆಗಾಲದಲ್ಲಿ ಹತ್ತಿರ ಹೋಗುವುದು ಕಷ್ಟ. ಬೇಸಿಗೆಯಲ್ಲಿ ಮಾತ್ರ ಕಲ್ಲು ಬಂಡೆಗಳ ಸಹಾಯದಿಂದ ಜಲಪಾತವನ್ನು ತೀರ ಸಮೀಪಿಸಬಹುದು.ನಾವು ಹೋದಾಗ ಜನ ತುಂಬಿಕೊಂಡಿದ್ದರು. ಹೆಚ್ಚಾಗಿ ಯಾರೂ ಇಲ್ಲದೆ ಇರುವಂತಹಲ್ಲಿ ಹೋಗುತ್ತಿದ್ದ ನಮಗೆ ಅಷ್ಟೊಂದು  ಜನರನ್ನು ನೋಡಿ ಇಲ್ಲಿಂದ ಬೇಗ ಹೋಗೋಣವೆನಿಸಿತ್ತು.ನಾನು ಒಂದು  ಬಂಡೆಯ ಮೇಲೆ ಕುಳಿತು ಏನೋ ಬರೆಯುತ್ತಿದ್ದಾಗ ನನ್ನ ಲೇಖನಿ ನೀರಿನಲ್ಲಿ ಬಿದ್ದು ಬಿಟ್ಟಿತು.ಆಗ ಅಲ್ಲಿಗೆ ಬಂದ ಹರ್ಷ  ನಾನು ಬರೆದದ್ದನ್ನು ದೊಡ್ಡ  ದನಿಯಲ್ಲಿ ಓದಲು ಪ್ರಾರಂಭಿಸಿದ. ಸುಮಾರು ಹೊತ್ತಿನ ಅದೇ ಅವರೆಲ್ಲರಿಗೆ  ನಗೆಯ ವಸ್ತುವಾಗಿತ್ತು.  ಬಂದ ನೆನಪಿಗೆಂದು ಒಂದಷ್ಟು ಫೋಟೋ  ತೆಗೆದುಕೊಂಡು ಅಲ್ಲಿಂದ ಹೊರಟೆವು. 

ಜಲಪಾತದ ಒಂದು ನೋಟ 
ಸ್ಫಟಿಕ ಶುಭ್ರ ನೀರು 
                         
ತೇಜಸ್ ಮತ್ತವನ tripod
ವಿನಾಯಕನ ಮನೆಯಿಂದ ಊಟ ಕಟ್ಟಿಕೊಂಡು  ಬಂದಿದ್ದೆವು. ಸಾತೊಡ್ಡಿಯಿಂದ ವಾಪಾಸು ಬರುವಾಗ ದಾರಿಯಲ್ಲೆಲ್ಲೋ ಒಂದು ಬಸ್ ನಿಲ್ದಾಣ. ಹೆಗ್ಗಡೆ ಮನೆ ಅಂತೇನೋ ಬರೆದಿದ್ದ ನೆನಪು. ಅಲ್ಲಿ ಕುಳಿತು ಚನ್ನಾಗಿ ತಿಂದೆವು. ಜೊತೆಯಲ್ಲಿ ಪುನರ್ಪುಳಿ ಹಣ್ಣಿನ ರಸ ಬೇರೆ ಇತ್ತು. ಎಲ್ಲ ಮುಗಿಸಿ ಹೊರಡುವಾಗ ತಿಂದಿದ್ದು ಹೆಚ್ಚಾಗಿ ಕಣ್ಣು ಎಳೆಯುತ್ತಿತ್ತು ನನಗೆ. ಹೆಚ್ಚು ಹೊತ್ತೇನೂ ಮಲಗುವ ಅವಕಾಶ ಇರಲಿಲ್ಲ. ಸ್ವಲ್ಪ ಹೊತ್ತಲ್ಲೇ ಮಾಗೋಡು ಜಲಪಾತ ಬಂದೇ ಬಿಟ್ಟಿತ್ತು. ಮೆಟ್ಟಿಲುಗಳನ್ನೇರಿ ಹೋದರೆ ಸಾಕು, ದೂರದಿಂದ ಮಾಗೋಡು ಜಲಪಾತ ವೀಕ್ಷಿಸಬಹುದು.ಎಲ್ಲ ಕಡೆಯಿಂದಲೂ ಸುತ್ತುವರಿದ ಅಭೇದ್ಯ ಬಂಡೆಗಳು. ಅವುಗಳ ಮಧ್ಯದಲ್ಲಿ ಮೇಲಿಂದ ಜಾರುತ್ತಿರುವ ನೀರು. ಹತ್ತಿರ ಹೋಗಬೇಕಾದರೆ ಒಂದೇ ದಾರಿ, ನದಿಯಲ್ಲೇ ಬರಬೇಕು. ನಮ್ಮ ಗೆಳೆಯರಿಗೆಲ್ಲ  ಉತ್ಸಾಹ ಬಂದು "ಇದೊಂದು ಮಾಡಲೇಬೇಕು ಕಣ್ರೋ. ನದೀಲ್ಲಿ ಬಂದ್ರೆ ಜಲಪಾತ ಕಾಣತ್ತೆ. ಈ ಸಲ ಬೇಸಿಗೆ ಬರ್ಲಿ" ಅಂತೆಲ್ಲ ಅಲ್ಲೇ ನಿಂತು ನದಿಯ ಆಳ ಅಗಲ ಲೆಕ್ಕ ಹಾಕಲು ಶುರು ಮಾಡಿದರು.ನಾನು ಅವರ ಮಾತಿಗೆ ಮೂಕ ಪ್ರೇಕ್ಷಕಿ. 

ಮಾಗೋಡು ಜಲಪಾತ 
ಅಲ್ಲಿಂದ ಜೇನುಕಲ್ಲು ಗುಡ್ಡದ ಸೂರ್ಯಾಸ್ತ. ಅಲ್ಲೊಂದು ಆರಾಮಾಗಿ ಕುಳಿತುಕೊಂಡು ಸೂರ್ಯಾಸ್ತ ವೀಕ್ಷಿಸಲು ಅನುವಾಗುವಂತೆ ಮಾಡಿರುವ ಗೋಪುರ.ಚಾರ್ಮಾಡಿ ಹತ್ತಿರ ಜೇನುಕಲ್ಲು ಗುಡ್ಡ ಅಂತ ಕೇಳಿದ್ದು ನೆನಪಿತ್ತು. ಎಷ್ಟೊಂದು ಜೇನುಕಲ್ಲು ಗುಡ್ಡಗಳಿವೆ ಅಂತ ಯೋಚನೆ ಮಾಡ್ತಾ ಇದ್ದೆ ನಾನು. ಇನ್ನೂ ಸೂರ್ಯ ಮುಳುಗಲು ಸಮಯವಿತ್ತಾದ್ದರಿಂದ ಹರಟೆಯಲ್ಲಿ ಮುಳುಗಿದೆವು.ಶಿವಗಂಗಾ ಜಲಪಾತಕ್ಕೆ ನದಿ ದಡದಲ್ಲಿ ನಡೆದು ಎರಡು ದಿನಗಳ ಚಾರಣ ಮಾಡಿದ್ದು ನೆನಪಿಸಿಕೊಳ್ಳುತ್ತಾ, ಇಲ್ಲಿಂದಲೇ ಪ್ರಾರಂಭಿಸಿದ್ದು ನಮ್ಮ ಪ್ರಯಾಣ ಎಂದ ವಿನಾಯಕ. 


ಸೂರ್ಯ ಅಸ್ತಮಿಸಲು ತೊಡಗಿದ. ಹಸಿರಾಗಿ ಕಾಣುತ್ತಿದ್ದ ಬೆಟ್ಟಗಳೆಲ್ಲ ಕಪ್ಪಾಗತೊಡಗಿದವು. ಹರಿಯುತ್ತಿದ್ದ ಬೇಡ್ತಿ ನದಿ ಸೂರ್ಯನ ಬೆಳಕನ್ನು ಪೃಥಃಕ್ಕರಿಸುತ್ತ  ಬೆಂಕಿಯ ಬಣ್ಣದಲ್ಲಿ ಹೊಳೆಯುತ್ತಿತ್ತು.ನೀಲಾಕಾಶದಲ್ಲಂತೂ ಬಣ್ಣಗಳ ಜಾತ್ರೆ. ಎರಡು ಬೆಟ್ಟಗಳ ಮದ್ಯಕ್ಕೆ ಇಳಿಯತೊಡಗಿದ ನೇಸರನನ್ನು ಕಣ್ಣು ಮತ್ತು ಕ್ಯಾಮೆರಾ ಎರಡು ತುಂಬಿಕೊಳ್ಳಲು ಪ್ರಯತ್ನಿಸುತ್ತಿದ್ದವು. ಚೆಂಡಿನಷ್ಟಿದ್ದ ಸೂರ್ಯ ಕಿತ್ತಳೆಯಷ್ಟಾಗಿ ಮತ್ತೆ ಅದರರ್ಧದಷ್ಟಾಗಿ, ಆಮೇಲೆ ಚುಕ್ಕೆಯಷ್ಟಾಗಿ ಕೊನೆಗೊಮ್ಮೆ ಕಣ್ಣಿಂದ ಮರೆಯಾಗಿ,ಆಕಾಶವೇ ಖಾಲಿಯಾಯಿತು. ಅಂದು ಮಾತನ್ನೂ ಮರೆತು ಅಭೂತಪೂರ್ವ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದೆವು ನಾವು. 



ಮಲೆಯ ಮಧ್ಯದಲಿ ಮರೆಯಾಗುವ ಮುನ್ನ
ಸಂದ್ಯಾರಾಗ
 ಇನ್ನೊಂದು ವಿಷಯ ಹೇಳಲು ಮರೆತಿದ್ದೆ ನಾನು. ಎರಡು ದಿನಗಳಿಗೆಂದು ಸಿರ್ಸಿ ಗೆ ಹೋಗಿದ್ದ ನಾವು ಇನ್ನೂ  ಒಂದು ದಿನ ಅಲ್ಲೇ ಉಳಿಯುವ ಯೋಚನೆ ಮಾಡಿದೆವು. ನನಗೆ ಹೇಗಿದ್ದರೂ ಕಾಲೇಜಿಗೆ ರಜ ಇತ್ತು. ಯಾವ ತೊಂದರೆಯೂ ಇರಲಿಲ್ಲ. ಹರ್ಷ ಸೋಮವಾರ ಬೆಳಿಗ್ಗೆ ಅವನ ಮ್ಯಾನೇಜರ್ ಗೆ ಕರೆಮಾಡಿ  ನಾನು ಊರಿಂದ ಬರುವಾಗ ಬಸ್ ಕೆಟ್ಟು ಹೋಗಿದೆ. ಏನು ಮಾಡಿದರೂ  ಬರುವುದು ಸಾಯಂಕಾಲ ಆಗುತ್ತದೆ ಎಂದ. ಅವರು ಉದಾರ  ಮನಸ್ಸಿನಿಂದ ಇವನ ರಜೆಯನ್ನು ಮಂಜೂರು ಮಾಡಿದರು. ವಿನಾಯಕ ಕರೆ ಮಾಡಲೇ ಇಲ್ಲ. ಆಮೇಲೆ ಏನು ಕಾರಣ ಕೊಟ್ಟ ಎಂದು ತಿಳಿಯಲಿಲ್ಲ. ತೇಜಸ್ ಮಾತ್ರ ನಾನು ಹೋಗ್ಬೇಕು, ನನ್ನ ಪ್ರಾಜೆಕ್ಟ್ ಮುಗಿದಿಲ್ಲ ಅಂತ ಗೋಳಾಡುತ್ತಿದ್ದ. ಆಮೇಲೆ ಒಂದು ಮೇಲ್ ಬರೆದು ಸುಮ್ಮನಾದ. ಅಂತೂ ಶಿರಸಿಯಲ್ಲಿ ಇನ್ನೂ ಒಂದು ದಿನ ಉಳಿಯಲು ಎಲ್ಲರಿಂದಲೂ  ಒಪ್ಪಿಗೆಯ ಮುದ್ರೆ ಬಿದ್ದಿತ್ತು. 

ಅವತ್ತು ಮಂಚಿಕೇರಿಯಲ್ಲಿರುವ ವಿನಾಯಕನ ಅಕ್ಕನ ಮನೆಗೆ ಹೋಗಿದ್ದೆವು.ಅಲ್ಲಿಂದ ಮನೆಗೆ ಬರುವಾಗ ರಾತ್ರಿ ೧೦ ದಾಟಿತ್ತು. ಊಟ ಮಾಡಿ ಹೊರಗೆ ಬಂದರೆ ಆಕಾಶದ ತುಂಬಾ ಕಿಕ್ಕಿರಿದ ಚಿಕ್ಕೆಗಳು. ಚಂದ್ರನಿರದ ರಾತ್ರಿ.ಎಷ್ಟೋ ನಕ್ಷತ್ರ ಪುಂಜಗಳ ಹೆಸರುಗಳನ್ನು ತಿಳಿಸಿದ ತೇಜಸ್.ಆಕಾಶ ಗಂಗೆಯು ಹರಿದ ದಾರಿಯನ್ನೂ ತೋರಿಸಿದ.ಮಧ್ಯರಾತ್ರಿಯ ವರೆಗೂ ನಕ್ಷತ್ರಗಳನ್ನು ನೋಡುತ್ತಾ ಕಳೆದೆವು.ಅಂದು ಎಷ್ಟೇ ಪ್ರಯತ್ನಿಸಿದರೂ ಒರಿಯನ್ ಪುಂಜ ಬಿಟ್ಟು ಬೇರೆ ಯಾವ ನಕ್ಷತ್ರಗಳೂ ಕ್ಯಾಮರಾಕ್ಕೆ ಸೆರೆಸಿಗಲಿಲ್ಲ. 

No comments:

Post a Comment